ಸೌ ಪ್ರಿಯಾ ಪ್ರಾಣೇಶ ಹರಿದಾಸ. ವಿಜಯಪುರ.
ಕಳೆದ ಏಳೆಂಟು ವರ್ಷಗಳಿಂದ ಆದರ್ಶನಗರದ ವಿಪ್ರಕಲ್ಯಾಣ ಸಂಘದ ಕಾರ್ಯಕ್ರಮಗಳಿಗೆ ತಪ್ಪದೇ ಹಾಜರ ಇರುತ್ತಿದ್ದ ಸೌ ಪ್ರಿಯಾ ಪ್ರಾಣೇಶ ಹರಿದಾಸ ಇವರನ್ನು ನಾನು ಅಷ್ಟೇನು ಗಮನಿಸಿರಲಿಲ್ಲ. ಆದರೆ 2021ರ ಯುಗಾದಿಯ ಹಬ್ಬದ ಕಾರ್ಯಕ್ರಮದಲ್ಲಿ ನನ್ನ ಒಂದೆರಡು ಧಾರ್ಮಿಕ ವಿಷಯದ ಲೇಖನಗಳನ್ನು ಕೊಟ್ಟ ನೆನಪು. ಅವರಿಗೆ ನಾನು ಯಾಕೆ ಮತ್ತು ಹೇಗೆ ಕೊಟ್ಟೆನೆಂಬುದು ಇನ್ನೂ ನನಗೆ ನಿಗೂಢವಾದ ವಿಚಾರವಾಗಿದೆ. ಮರುದಿನವೇ ಅವರಿಂದ ನನ್ನ ಲೇಖನಗಳ ಕುರಿತು ಸಕಾರಾತ್ಮಕವಾಗಿ ಸ್ಪಂದಿಸಿ , ನನ್ನ ಲೇಖನಗಳು ಉತ್ತಮವಾಗಿವೆ ಹಾಗೂ ನೀವು ಬರೆಯುವ ಶೈಲಿಯೂ ಉತ್ತಮವಾಗಿದೆ ಎಂದು ಹೇಳಿ ಬರೆಯಲು ಪ್ರೇರೆಪಿಸಿದರು. ಅವರ ಈ ಪ್ರೇರಣೆಯು ಸ್ಪೂರ್ತಿದಾಯಕವಾಗಿತ್ತು ಮತ್ತು ನನಗೆ ಮುದವಾಗಿ , ಹಿತವಾಗಿ ಪರಿಣಮಿಸಿತು. ಹೀಗೆ ಪರಿಚಯದ ಮಜಲು ಮಜಲುಗಳಲ್ಲಿ ಅವರು ಸಾಹಿತ್ಯ ಕೃಷಿಯಲ್ಲಿ ಅಗಾಧವಾದ ಪಾಂಡಿತ್ಯ ಪಡೆದಿರುವದು ನನ್ನ ಗಮನಕ್ಕೆ ಬಂದಿತು. ಪ್ರತಿ ಭೇಟಿಯಲ್ಲಿ ಅವರ ಸಾಹಿತ್ಯದ ಅರಿವಾಗಿ ನಮ್ಮ ನಮ್ಮ ನಮ್ಮಲ್ಲಿ ಗಾಢವಾದ ಸಾಹಿತ್ಯಿಕ ವಿಷಯದ ಕರಿತು ಚರ್ಚಿಸುವ ಹಂತಕ್ಕೆ ಬಂದು ಮುಟ್ಟಿದೆವು. ಅವರಲ್ಲಿ ಹುದುಗಿದ ಸಾಹಿತ್ಯದ ಅಭಿರುಚಿಯನ್ನು ಕಂಡು ಇನ್ನೂ ಈ ವಿಷಯದಲ್ಲಿ ಅಂಬೆಗಾಲಿಡುತ್ತಿರುವ ನಾನು ದಂಗಾಗಿ ಹೋದೆ. ವಿಧ ವಿಧದ ಎಲ್ಲ ವಿಷಯಗಳಲ್ಲಿರುವ ಅವರ ಪ್ರಾವೀಣ್ಯತೆ ಮೆಚ್ಚುವಂತಹದ್ದು.
ಪ್ರತಿ ಭೇಟಿಯಲ್ಲಿ ಅವರ ಜತೆ ಕಳೆದ ಮಧುರ ಮಧುರ ಕ್ಷಣಗಳು , ಅವರ ಕುರಿತು ಏನಾದರೂ ಬರೆಯಬೇಕೆಂಬ ಉತ್ಕಟ ಇಚ್ಛೆಯಿಂದ ನನ್ನನ್ನು ಬರೆಯಲು ಪ್ರೇರೆಪಿಸಿ , ಅವರು ಸಾಗಿ ಬಂದ ದಾರಿಯ ಕುರಿತು ಬರೆಯಲು ಉಪಕ್ರಮಿಸಿದೆ.
ಹುಟ್ಟಿದ ಮನೆ ಮತ್ತು ಮೆಟ್ಟಿದ “ಹರಿದಾಸ”ರ ಮನೆಗಳನ್ನು ಸಂಪನ್ನಗೊಳಿಸುವ ಅಪರಿಮಿತ ಶಕ್ತಿ ಅವರಲ್ಲಿದ್ದುದನ್ನು ನಾನು ಕಂಡುಕೊಂಡೆ.
ಅವರ ಧಾರ್ಮಿಕ ಸಂದರ್ಭಗಳ ಕುರಿತ ಲೇಖನಗಳು , ವ್ಯಕ್ತಿ ಪರಿಚಯಿಸುವ ಕಲೆ, ಸಾಮಾಜಿಕ ಲೇಖನಗಳು, ಹರಿದಾಸ, ಹರಿದಾಸಿಣಿಯರ ಕುರಿತ ಲೇಖನಗಳು , ಚುಟುಕು ಧಾರ್ಮಿಕ ಕವನಗಳು , ವಿಮರ್ಶೆ ಮಾಡುವ ಶೈಲಿಗಳು ಎಲ್ಲರೂ ಮೆಚ್ಚುವಂತಹದ್ದು.
ಕುಟುಂಬದ ಹಿನ್ನೆಲೆ ಮತ್ತು ಇತರ.
ಬಾಗಲಕೋಟೆ ಜಿಲ್ಲೆಯ ಕೆಲವಡಿ ಗ್ರಾಮದ ಕುಲಕರ್ಣಿ ಮನೆತನದ ಹೆಮ್ಮೆಯ ಹೆಣ್ಣುಮಗಳು ಇವರು. ತವರು ಮನೆಯ ಹೆಸರು “ಕೀರ್ತಿ” ಎಂದು. ಸೃಷ್ಟಿಯ ನಿಯಮದ ಪ್ರಕಾರ ಕಾಖಂಡಕಿ ದಾಸರ ಮನೆತನಕ್ಕೆ ಸೊಸೆಯಾಗಿ ಬಂದವರು. ವಾಣಿಜ್ಯ ವಿಷಯದಲ್ಲಿ ಸ್ನಾತಕೋತ್ತರ (ಎಂ. ಕಾಂ) ಪದವೀಧರರು. ಹುಟ್ಟಿನಿಂದಲೂ ಧಾರ್ಮಿಕ ಆಚರಣೆಯಲ್ಲಿ ಬೆಳೆದು ಬಂದವರು ಇವರು. ಹರಿದಾಸ ಪಂಥದ ಹರಿಕಾರರೂ ಯೋಗಸಾಧನೆಯಲ್ಲಿ ಪರಿಣಿತರಾದ ಕಾಖಂಡಕಿದಾಸರ ಮನೆತನದ ಹರಿದಾಸರ ಕುಟುಂಬಕ್ಕೆ ಸೊಸೆಯಾಗಿ ಬಂದನಂತರ ಇವರ ವಿದ್ವತ್ತು ಇಮ್ಮಡಿಯಾಯಿತು.
ಧಾರ್ಮಿಕ, ಸಾಹಿತ್ಯ, ಸಾಮಾಜಿಕ ಮತ್ತು ಹರಿದಾಸ ಸಾಹಿತ್ಯ ಇತರ ಸಾಹಿತ್ಯ ಚಟುವಟಿಕೆಗಳಲ್ಲಿ ತಮ್ಮನ್ನು ತಾವೇ ಪೂರ್ಣವಾಗಿ ತೊಡಗಿಸಿಕೊಂಡರು. ಇವರಲ್ಲಿ ಹುದುಗಿದ್ದ ವಿದ್ವತ್ತು ಪ್ರತಿಭೆಯನ್ನು ಗಮನಿಸಿದ ಇವರ ಪತಿ ಪ್ರಾಣೇಶ ಅವರು ಇವರಿಗೆ ಪೂರ್ಣ ಪ್ರಮಾಣದ ಪ್ರೋತ್ಸಾಹ ನೀಡಿದರು. ಇವರ ಎಲ್ಲ ಸಾಧನೆಗಳಲ್ಲಿ ಪತಿ ಪ್ರಾಣೇಶ ಇವರ ಪಾಲೂ ಇದೆಯೆಂದರೆ ಅತಿಶಯೋಕ್ತಿಯಾಗಲಾರದು.
ಮನೆಯ ಹೆಣ್ಣುಮಗಳು ದಿನನಿತ್ಯದ ಸಂಸಾರದ ಕೆಲಸಕಾರ್ಯಗಳನ್ನು ನಿರ್ವಹಿಸಿ ಧಾರ್ಮಿಕ, ಸಾಹಿತ್ಯ , ದಾಸಸಾಹಿತ್ಯ ಮತ್ತು ಇತರ ಸಾಹಿತ್ತಿಕ ಸಾಧನೆಗಳಲ್ಲಿ ಅನುಪಮವಾಗಿ ದುಡಿದು ಹೆಸರು ಪಡೆದದ್ದು ಇವರ ಜಾಣತನವನ್ನು ಎತ್ತಿ ತೋರಿಸುತ್ತದೆ. ಇವುಗಳಲ್ಲದೇ ಇತರ ಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿದ್ದವರು. ಇವರ ಸಾಧನೆಗಳು ಅಪಾರ ಇರುವದರಿಂದ ಬರೆಯುವದು ಕಷ್ಟಕರ ಎನಿಸಿದರೂ ಈ ಲೇಖನದಲ್ಲಿ ಎಲ್ಲವನ್ನೂ ಮೂಡಿಸಲು ಪ್ರಯತ್ನಪಡುವೆ.
ಸಾಧನೆಗಳು : ಧಾರ್ಮಿಕ ಸಾಹಿತ್ತಿಕ ಕ್ಷೇತ್ರದಲ್ಲಿ.
ಧಾರ್ಮಿಕ ಸಾಹಿತ್ತಿಕ ಕೃಷಿಯಲ್ಲಿ ಇವರು ಅತ್ಯಂತ ಪಳಗಿದ ವ್ಯಕ್ತಿ. ಧಾರ್ಮಿಕ ಲೇಖನಗಳು , ಕವಿತೆಗಳು, ಹರಿದಾಸ ಹರಿದಾಸಿಣಿಯರ ಪರಿಚಯಗಳು ಇವೆ. ಪರಿಚಯ ಲೇಖನಗಳು ಬಹು ಮಾರ್ಮಿಕವಾಗಿದ್ದು ಓದುವ ಮುಂದೆ ಆಯಾ ವ್ಯಕ್ತಿಗಳ ಲೋಕಕ್ಕೆ ಕೊಂಡೊಯ್ಯುತ್ತವೆ. ಹರಿಕಥಾಮೃತಸಾರದ ವಿಷಯವನ್ನು ಪ್ರಮುಖವಾಗಿ ಇಟ್ಟುಕೊಂಡು “ಹರಿಕಥಾಮೃತಸಾರ ಮಹಿಮೆ ಅಪಾರ ” ಎಂಬ ಶೀರ್ಷಿಕೆಯಡಿಯಲ್ಲಿ ಸಪ್ತಗಿರಿ ಮಾಸಪತ್ರಿಕೆ ತಿರುಪತಿ ಮತ್ತು ಗದಗಿನ “ನಯನ” ಮಾಸಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಸಪ್ತಗಿರಿ ಮಾಸಪತ್ರಿಕೆಯಲ್ಲಿ ಇನ್ನೂ ಪ್ರಕಟವಾಗುತ್ತಲೇ ಇವೆ. ಸುಂದರವಾದ ಚಿತ್ರದೊಂದಿಗೆ ಮೂಡಿ ಬರುತ್ತಲಿವೆ. ಇದಲ್ಲದೇ ಕಾಲಕಾಲಕ್ಕೆ ಬರುವ ಹಬ್ಬಹರಿದಿನಗಳ ಲೇಖನಗಳಿಗಂತೂ ಲೆಕ್ಕವೇ ಇಲ್ಲ. ದೀಪಾವಳಿ, ಸಂಕ್ರಮಣ, ಶಿವರಾತ್ರಿ, ದಸರಾಹಬ್ಬದ ಮಹತ್ವ ಕುರಿತು ಉತ್ತಮ ಲೇಖನಗಳು ಇವರ ಲೇಖನಿಯಿಂದ ಬಂದಿವೆ. ಮತ್ತು ಬರುತ್ತಲೂ ಇವೆ. ಅಪಾರ ಪ್ರಶಂಸೆಗಳನ್ನು ಪಡೆದಂತಹವು ಇವು.
ದೇವರ ಹಾಡುಗಳು , ರಾಘವೇಂದ್ರ ಸ್ವಾಮಿಗಳ ಕುರಿತು ಬರೆದ ಹಾಡುಗಳು “ಪ್ರಿಯಕೃಷ್ಣ” ಎಂಬ ಅಂಕಿತದಡಿಯಲ್ಲಿ ಬರೆಯಲ್ಪಟ್ಟಿವೆ. ಇವರ ಬರಹಗಳು “ಕೀರ್ತಿ ಕುಲಕರ್ಣಿ” ಮತ್ತು “ಪ್ರಿಯಾ ಹರಿದಾಸ” ಎಂಬ ಎರಡೂ ಅಂಕಿತದಲ್ಲಿ ಪ್ರಕಟಣೆಗೊಂಡಿವೆ. “ಕೃಷ್ಣಸಿಂಧುವಿನ ಬಿಂದುಗಳು” ಎಂಬ ಶಿರ್ಷಿಕೆಯಡಿಯಲ್ಲಿ ಹನಿಗವನಗಳು, ಹನಿಬಿಂದುಗಳು ಬರೆಯಲ್ಪಟ್ಟಿವೆ. ಇವುಗಳಿಗೆ ಮಿತಿ ಇಲ್ಲವೇ ಇಲ್ಲ. ಲೆಕ್ಕಕ್ಕೆ ಸಿಗಲಾರದವು ಈ ಬಿಂದುಗಳು.
ಶ್ರೀಮಧ್ವಮಹಾಪರಿಷತ್ತಿನ ಅಂಗ ಸಂಸ್ಥೆಗಳಾದ “ಸೌರಭದಾಸಸಾಹಿತ್ಯದ “ “ದಾಸಶಿರೋಮಣಿ” ಪರೀಕ್ಷೆ ಬರೆಯುವವರಿದ್ದಾರೆ. ಶ್ರೀರಾಘವೇಂದ್ರಸ್ವಾಮಿಗಳ ಕುರಿತು ಬರೆದ ಹಾಡುಗಳನ್ನು ಖ್ಯಾತ ಗಾಯಕರಾದ ಜಯತೀರ್ಥ ನಾರಾಯಣ ತಾಸಗಾವಿ ಇವರಿಂದ ರಾಗ ಸಂಯೋಜಿಸಿ ಹಾಡಿಸಿದ್ದಾರೆ. ಇವು ಕೇಳುಗರ ಮನಸೊರೆಗೊಳ್ಳುತ್ತವೆ. ಧಾರ್ಮಿಕ ಪ್ರವಚನಗಳನ್ನು “ON LINE” ನಲ್ಲಿ ಪ್ರಚುರಪಡಿಸಿದ್ದಾರೆ. ಯೂಟ್ಯೂಬನಲ್ಲೂ ಇವರ ಪ್ರವಚನಗಳು ಪ್ರಸಾರವಾಗಿವೆ. ಧಾರ್ಮಿಕ ಮತ್ತು ಸಾಹಿತ್ತಿಕ ಗ್ರಂಥಗಳ ಪುಟ್ಟ ಗ್ರಂಥಾಲಯ ಹೊಂದಿದ್ದಾರೆ. ಇವು ನೋಡುಗರ ಮನವನ್ನು ಸೆಳೆಯುತ್ತವೆ. ಇನ್ನೂ ಅನೇಕ ಧಾರ್ಮಿಕ ಕಾರ್ಯಕ್ರಮ, ಕೀರ್ತನೆಗಳ ಕಾರ್ಯಕ್ರಮಗಳೂ ಬಹಳ ಇವೆ. ಇವರ ವಿದ್ವತ್ತಿಗೆ ಮಾನ ಸನ್ಮಾನಗಳು ಯಾವಾಗಲೂ ನಡೆದೇ ಇರುತ್ತವೆ. ಇವರು ಬರೆದ ಎರಡು ಪುಸ್ತಕಗಳು ಪ್ರಕಟನೆಯ ಹಾದಿಯಲ್ಲಿವೆ. ಅವೆಲ್ಲವುಗಳನ್ನು ಬರೆಯುತ್ತ ಹೋದರೆ ದೊಡ್ಡ ಗ್ರಂಥವಾಗಬಹುದೇನೋ.
ಕಥೆ, ಗಜಲ್, ಕವನ, ಛಂದಸ್ಸಿನಲ್ಲಿ ಜಡೆಕವನ. ಇವುಗಳಲ್ಲಿಯೂ ಇವರ ಸಾಧನೆಗಳು ಬಹಳ ಇವೆ. ರಾಷ್ಟ್ರೀಯ ಮಹನೀಯರ ಲೇಖನಗಳು ತುಂಬಾ ಮೆಚ್ಚುವಂತೆ ಬರೆದು ಪ್ರಕಟಿಸಿದ್ದಾರೆ. ಕನ್ನಡ ಸಾಹಿತ್ಯದ ನಂಟು ಇವರಿಗೆ ಅಂಟಿಕೊಂಡಿದೆ. ಅಲ್ಲಿಯೂ ಸಹ ಪದಾಧಿಕಾರಿಗಳ ಹುದ್ದೆ ಅಲಂಕರಿಸಿದ್ದಾರೆ. ಶ್ರೀ ಸಿದ್ಧೇಶ್ವರ ಸಾಹಿತ್ಯ ವೇದಿಕೆಯ ಸಂಚಾಲಕಿಯಾಗಿಯೂ ಕಾರ್ಯ ನಿರ್ವಹಣೆ. ಜತೆಗೆ ಅಧ್ಯಕ್ಷರು ಮತ್ತು ಇತರ ಪದಾಧಿಕಾರಿಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ನಗುನಗುತ್ತಲೇ ಎಲ್ಲ ಕಾರ್ಯಕ್ರಮಗಳನ್ನು ಜರುಗಿಸಿ ಯಶಸ್ವಿಗೊಳಿಸಿದ ಕೀರ್ತಿ ಇವರದು. ಇದರ ಅಧ್ಯಕ್ಷೆ ಶ್ರೀಮತಿ ರಿರಿಜಾ ಮಾಲಿಪಾಟೀಲ ಪ್ರಿಯಾ ಅವರನ್ನು ಮುಂದಿಟ್ಟುಕೊಂಡೇ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾರೆ. ಎಲ್ಲ ಕವಿಗೋಷ್ಠಿಗಳಲ್ಲಿ ಭಾಗವಹಿಸಿ ತಮ್ಮ ಕವನ ಮತ್ತು ಗಜಲ್ ಗಳನ್ನು ಉಣಬಡಿಸಿದ್ದಾರೆ.
ಇವರ ಇತರ ಲೇಖನಗಳು ಮತ್ತು ಕವನಗಳು ಸಾವಿರಕ್ಕೂ ಮಿಕ್ಕಿವೆ. ಅಖಿಲಭಾರತೀಯ ಸಾಹಿತ್ಯ ಪರಿಷತ್ತಿನ ಉಪಸಂಚಾಲಕಿಯಾಗಿಯೂ ಕಾರ್ಯನಿರ್ವಹಣೆ. ಸಾಹಿತ್ತಿಕ ಕಾರ್ಯಕ್ರಮಗಳು ಎಲ್ಲಿಯೇ ಇರಲಿಅಲ್ಲಿ ಪ್ರಿಯಾ ಇವರ ಹಾಜರಾತಿ ಇದ್ದೇ ಇರುತ್ತದೆ. ಎಲ್ಲರೊಂದಿಗೆ ಮಧುರ ಬಾಂಧವ್ಯ ಹೊಂದಿ ಮೆಚ್ಚುಗೆ ಪಡೆಯುತ್ತಲಿದ್ದಾರೆ. ಅವಿಶ್ರಾಂತ ಕೆಲಸ. ಮಧ್ಯ ರಾತ್ರಿಯವರೆಗೂ ಇವರು ಲೇಖನಗಳನ್ನು ಬಿಡುವಿಲ್ಲದೇ ಬರೆಯುತ್ತಾರೆ. ಪತಿ ಶ್ರೀ ಪ್ರಾಣೇಶರ ಪ್ರೋತ್ಸಾಹನೆ ಮೆಚ್ಚುವಂತಹುದು.
ಇತರ ವಿಷಯಗಳ(ಸಾಹಿತ್ತಿಕ) ಸಾದನೆಗಳು.
1. ಪುಸ್ತಕ ವಿಮರ್ಶೆಗಳು.
2. ವ್ಯಕ್ತಿ ಪರಿಚಯ ಲೇಖನ.
3. “ಚಂದನವನದ “ ಅಡ್ಮಿನ್ ಆಗಿ ಲೇಖನ ಹಾಗೂ ಕವನಗಳ ಸ್ಪರ್ಧೆ ನಡೆಸುವದು.
4. ಗಜಲ್ ಬರಹಗಳು.
5. ಹರಿದಾಸ ಮಿಲನ ಮತ್ತು ದಾಸೋಪಾಸನದ ಮಾಟರೇಟರಾಗಿ ಕಾರ್ಯ ನಿರ್ವಹಣೆ.
6. ಲೇಖನಗಳನ್ನು ನಯನ, ಸಂದರ್ಶನ , ಕರ್ಮವೀರ ,ಸಪ್ತಗಿರಿ ಪತ್ರಿಕೆಗಳಿಗೆ ಬರೆದು ಕಳಿಸುವದು.
7. ON LINE ಸ್ಟೋರಿಮಿರರ ಪ್ರಶಸ್ತಿ ವಿಜೇತೆ.
8. ON LINE ಲೈಬ್ರರಿ ಯಲ್ಲಿಯೂ ಬರಹಗಳು
9. ON LINE ಲೈಬ್ರರಿಯ ಪ್ರತಿ ಲಿಪಿಯಲ್ಲಿ 50000 ಮಿಕ್ಕಿ ಓದುಗರ ಸಂಖ್ಯೆ.
10. ವಿವಿಧ ದೇಶದ ನಾಣ್ಯಗಳ ಸಂಗ್ರಹ ಕಾರ್ಯ.
ಇವೆಲ್ಲ ಕಾರ್ಯಗಳಲ್ಲಿ ಮನ:ಪೂರ್ವವಾದ ದುಡಿಮೆ ಇವರದು. ಇವರ ಸಾಧನೆಗಳು ಇನ್ನೂ ಬಹಳ ಇವೆ. ನನಗೆ ತಿಳಿದ ಮಟ್ಟಿಗೆ ನಿರೂಪಿಸಿದ್ದೇನೆ. ಇವರು ವಯಸ್ಸಿನಲ್ಲಿ ನನಗಿಂತ ಮೂವತ್ತು ವರ್ಷ ಚಿಕ್ಕವರಿದ್ದರೂ ಸಾಹಿತ್ತಿಕ ವಿಷಯದಲ್ಲಿ ನನಗೆ ಒಳ್ಳೆಯ ಗುರು. ಇವರ ಪ್ರೇರಣೆಯಿಂದ ನಾನು ಸಾಹಿತ್ಯದ ಕೃಷಿಯಲ್ಲಿ ಪೂರ್ಣವಾಗಿ ತೊಡಗಿಸಿಕೊಂಡದ್ದು. ಇವರ ಜತೆಗಿನ ಉತ್ತಮ ಸಾಹಿತ್ತಿಕ ಸಂಬಂಧ ನಾಲ್ಕು ಅಕ್ಷರಗಳನ್ನು ಬರೆಯುವಂತೆ ಮಾಡಿವೆ.
ಇವರ ಜ್ಞಾನ ಸಹನಶೀಲತೆ ಮತ್ತು ಸಮಯೋಚಿತ ಸಾಹಿತ್ತಿಕ ನಿರ್ವಹಣೆಗಳು ಇವರನ್ನು ಇನ್ನೂ ಎತ್ತರಕ್ಕೆ ಬೆಳೆಸಲಿ ಎಂದು ಹಾರೈಸಿ ನನ್ನ ಈ ಲೇಖನಕ್ಕೆ ಮುಕ್ತಾಯ ಹಾಡುವೆ.
–ಕೃಷ್ಣ ನಾರಾಯಣ ಬೀಡಕರ
ನಿವೃತ್ತಬ್ಯಾಂಕ ವ್ಯವಸ್ಥಾಪಕರು
ಕೆಎಚ್ ಬಿ ಕಾಲನಿ
ವಿಜಯಪುರ -3
ದೂರವಾಣಿ- 9972087473