ಭಾವೈಕ್ಯ ದಿನ ಮತ್ತು ತೋಂಟದಾರ್ಯರು
ಗದುಗಿನ ಜಗದ್ಗುರು ತೋಂಟದಾರ್ಯ ಮಠದ ಹತ್ತೊಂಬತ್ತನೆಯ ಪೀಠಾಧಿಪತಿಗಳಾದ ಡಾ.ತೋಂಟದ ಸಿದ್ಧಲಿಂಗ ಸ್ವಾಮಿಗಳ ಜನ್ಮ ದಿನವನ್ನು ‘ಭಾವೈಕ್ಯ ದಿನ’ ಎಂದು ಮಾನ್ಯ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು ಘೋಷಣೆ ಮಾಡಿದಾಗ ಪ್ರಗತಿಪರ ಮನಸುಗಳು ಸಡಗರಿಸಿ, ಸಂಭ್ರಮಿಸಿವೆ.
ನಡೆ, ನುಡಿ, ಆಚಾರ, ವಿಚಾರಗಳ ಪ್ರತಿಪಾದನೆಯಲ್ಲಿ ಅಪ್ಪಟ ಭಾವೈಕ್ಯ ಸಂದೇಶಗಳನ್ನು ಬಿತ್ತಿ, ನಮ್ಮಂತಹ ಸಾವಿರಾರು ಯುವಕರ ಮನಸಿನಲಿ ಸೌಹಾರ್ದತೆ ಭಾವನೆಗಳನ್ನು ಹುಟ್ಟು ಹಾಕಿದ ಪೂಜ್ಯರ ವ್ಯಕ್ತಿತ್ವ ಅಜರಾಮರ; ಅದು ಸರಕಾರ ತೆಗೆದುಕೊಂಡ ನಿರ್ಣಯವನ್ನೂ ಮೀರಿದ್ದು. ಆದರೆ ತಡವಾಗಿಯಾದರೂ ಸರಕಾರ ತೆಗೆದುಕೊಂಡ ಈ ನಿರ್ಣಯವನ್ನು ಸ್ವಾಗತಿಸಿ ಗೌರವಿಸಬೇಕು.
ಶಿವಾನುಭವ ಮತ್ರು ಜಾತ್ರೆಯ ಮೂಲಕ ಸಾಮಾಜಿಕ ಸ್ವಾಸ್ಥ್ಯ ಕಾಪಾಡಿ, ಇಡೀ ನಾಡಿಗೆ ಗದಗ ಜಾತ್ರೆಯ ವಿಶೇಷತೆಯನ್ನು ಪರಿಚಯಿಸಿದ ಹಿರಿಮೆ ಪೂಜ್ಯರದು.
ಇತ್ತೀಚಿಗೆ ಮಾಧ್ಯಮ ಮಿತ್ರರೊಬ್ಬರು ಪೂಜ್ಯರ ಸೌಹಾರ್ದ ಮನೋಭಾವದ ಕುರಿತು ಲೇಖನ ಬರೆಯಲು ಕೇಳಿದ್ದರು, ಆದರೆ ಇತ್ತೀಚೆಗೆ ನಾನು ಅವರ ಕುರಿತು ಬರೆದ ‘ಹಗಲಿನಲ್ಲಿಯೆ ಸಂಜೆಯಾಯಿತು’ ಕೃತಿಯಲ್ಲಿ ಅನೇಕ ಘಟನೆಗಳನ್ನು ಪ್ರಸ್ತಾಪ ಮಾಡಿದ್ದೇನೆ. ಆದ್ದರಿಂದ ಮತ್ತೇನು ಬರೆಯಬೇಕು ಎಂದು ತೋಚದೇ ಮೌನವಾದೆ.
ಇತ್ತೀಚಿನ ಸಾಮಾಜಿಕ ಗೊಂದಲ ಮತ್ತು ಸಾಮಾಜಿಕ ಸಾಮರಸ್ಯವನ್ನು ಕದಡುವ ವಾತಾವರಣ ಮತ್ತು ಅದಕ್ಕೆ ಪೂರಕವಾದ ಉದ್ಧಟತನದ ಹೇಳಿಕೆಗಳನ್ನು ಗಮನಿಸಿದಾಗ ತೋಂಟದಾರ್ಯ ಪೂಜ್ಯರ ನೆನಪು ಒತ್ತರಿಸಿ ಬರುತ್ತದೆ. ‘ಈಗ ಅವರಿದ್ದರೆ ಮೌನ ಮುರಿದು ಖಾರವಾಗಿ ಬೈದು ತಿಳಿ ಹೇಳುತ್ತಿದ್ದರು’ ಎಂಬ ಶೂನ್ಯ ಭಾವ ಕಾಡುವುದು ಸಹಜ. ದಿನಕ್ಕೊಂದು ವಿವಾದಾತ್ಮಕ ಹೇಳಿಕೆಗಳ ಮೂಲಕ ಸಾಮಾಜಿಕ ಸಾಮರಸ್ಯವನ್ನು ಹಾಳು ಮಾಡುವ ವ್ಯಕ್ತಿಗಳ ವಿರುದ್ಧ ಎತ್ತುವ ಧ್ವನಿ ಕುಗ್ಗಿ ಹೋಗಿದೆ. ಯಾರೋ ಕತ್ತು ಹಿಚುಕಿದ ನೋವು, ಯಮಯಾತನೆ. ಮೌನ ಮುರಿಯಲಾಗದ ಹೇಡಿತನ. ಆದರೆ ತೋಂಟದಾರ್ಯ ಮಹಾಸ್ವಾಮಿಗಳು ಜೀವಂತವಾಗಿದ್ದರೆ, ಎತ್ತುವ ದನಿಗೆ ಶಕ್ತಿ ಉಕ್ಕುತ್ತಿತ್ತು ಎಂಬ ಸಂಕಟ. ಪ್ರಗತಿಪರ ವಿಚಾರಧಾರೆಗಳಿಗೆ ಮಂಕು ಕವಿದಿದೆ, ಈಗ ಆವರಿಸಿರುವ ಬೌದ್ಧಿಕ ಕತ್ತಲೆಯನ್ನು ದೂರ ಮಾಡಲು ಮನಸಿರುವ ವ್ಯಕ್ತಿಗಳು ಕೂಡ ಅಸಹಾಯಕರಾಗಿದ್ದಾರೆ.
ಕೋಮು ಸೌಹಾರ್ದತೆಯ ಪ್ರತೀಕವಾಗಿರುವ ಗದುಗಿನ ಮಠದ ಜಾತ್ರೆ ಕರೋನ ಕಾರಣದಿಂದ ಆಚರಿಸಿರಲಿಲ್ಲ. ಈ ವರ್ಷ ಸಡಗರ, ಸಂಭ್ರಮದಿಂದ ಆಚರಿಸಿದ ಜಾತ್ರೆ ಸೌಹಾರ್ದತೆಗೆ ಮರುಹುಟ್ಟು ನೀಡಿದೆ. ಇದೇ ಸಂದರ್ಭದಲ್ಲಿ ಪೂಜ್ಯರ ಐಕ್ಯ ಮಂಟಪವನ್ನು ಲೋಕಾರ್ಪಣೆ ಮಾಡಿದ ಮುಖ್ಯಮಂತ್ರಿಗಳು ಪೂಜ್ಯರ ಜನ್ಮ ದಿನವಾದ ಫೆಬ್ರವರಿ 21ನ್ನು ‘ಭಾವೈಕ್ಯ ದಿನ’ ಎಂದು ಘೋಷಣೆ ಮಾಡಿದ್ದಾರೆ.
ಗದುಗಿನ ಜುಮ್ಮಾ ಮಸೀದಿ, ವೀರನಾರಾಯಣ ಮತ್ತು ತ್ರಿಕೂಟೇಶ್ವರ ದೇವಸ್ಥಾನದ ಪಂಚರ ಸಮಿತಿ ನಾಡಿಗೆ ಬಹಳ ದೊಡ್ಡ ಸಂದೇಶ ರವಾನಿಸಿದೆ. ಅದೇ ಸೌಹಾರ್ದ ಪರಂಪರೆಯನ್ನು ತೋಂಟದಾರ್ಯ ಮಠದ ಪೂಜ್ಯರು ಶಿವಾನುಭವ ಮತ್ತು ಜಾತ್ರೆಯ ಮೂಲಕ ಸ್ಥಾಯಿಗೊಳಿಸಿದ್ದಾರೆ. ಲಿಂಗಾಯತ ಧರ್ಮದ ಮಠ, ನಿಜಾರ್ಥದ ಸರ್ವ ಜನಾಂಗದ ಮಠವಾಗಿ ಪರಿವರ್ತನೆಯಾಯಿತು. ಕೋಮುಸೌಹಾರ್ದತಾ ಪರಂಪರೆ ಮಠಗಳು ಮಾಡದ ವಿಧಾಯಕ ಕಾರ್ಯಕ್ರಮಗಳನ್ನು ಪೂಜ್ಯರು ಜಾತ್ರೆಯ ಮೂಲಕ ನೆರವೇರಿಸಿದ್ದು ಈಗ ಇತಿಹಾಸ. ಅದೇ ಕಾರಣದಿಂದ ಪೂಜ್ಯರಿಗೆ ಕೇಂದ್ರ ಸರ್ಕಾರ ರಾಷ್ಟ್ರೀಯ ಕೋಮು ಸೌಹಾರ್ದತಾ ಪುರಸ್ಕಾರ ನೀಡಿ ಗೌರವಿಸಿತು. ಅಟಲ್ ಬಿಹಾರಿ ವಾಜಪೇಯಿ ಮತ್ತು ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಸಮ್ಮುಖದಲ್ಲಿ ಪೂಜ್ಯರು ಪ್ರಶಸ್ತಿ ಸ್ವೀಕರಿಸಿದರು.
ತಮ್ಮ ಬದುಕಿನುದ್ದಕ್ಕೂ ಅಹಿಂದ ಪರ ನಿಲುವನ್ನು ಸಾರ್ವಜನಿಕ ವೇದಿಕೆಗಳ ಮೇಲೆ ನಿರ್ಭಯವಾಗಿ ಪ್ರತಿಪಾದನೆ ಮಾಡಿದ ಪೂಜ್ಯರ ವ್ಯಕ್ತಿತ್ವದ ಘನತೆಯನ್ನು ಸರಕಾರ ಎತ್ತಿ ಹಿಡಿದಿದೆ. ನಡೆ, ನುಡಿ, ಆಚಾರ, ವಿಚಾರ, ಧೋರಣೆ… ಹೀಗೆ ಎಲ್ಲದರಲ್ಲೂ ಭಾವೈಕ್ಯ ಮತ್ತು ಮಾತೃ ಧೋರಣೆ ಪೂಜ್ಯರದು. ಅದರ ಸವಿ ಬಲ್ಲವರಿಗೆ ಮಾತ್ರ ಗೊತ್ತು. ತಳ ಸಮುದಾಯದ ಶೋಷಿತ ಜನರ ಗಟ್ಟಿ ದನಿಯಾಗಿ ಸದಾ ಹೋರಾಡಿದ ಶ್ರೀಗಳ ಮೇರು ವ್ಯಕ್ತಿತ್ವ ಅಜರಾಮರ.
ಅವರು ಜೀವಂತ ಇದ್ದಾಗ ಅವರನ್ನು ಪ್ರಶ್ನೆ ಮಾಡಿ, ಚರ್ಚಿಸಲಾಗದೆ ಮೌನವಾಗಿದ್ದ ಕೆಲವರು ಈಗ ಈ ಕುರಿತು ವಿಚಿತ್ರ ಹೇಳಿಕೆ ನೀಡುತ್ತಿರುವುದು ಹಾಸ್ಯಾಸ್ಪದ ಮತ್ತು ಖಂಡನೀಯ. ಇವತ್ತು ಲಿಂಗಾಯತ ಮಠಗಳ ಪರಂಪರೆಯ ಮೂಲ ಆಶಯಕ್ಕೆ ಮಂಕು ಕವಿದಿದೆ. ಕೆಲವೇ ಕೆಲವು ಮಠಾಧೀಶರು ಬಸವಾದಿ ಶರಣರ ಮೌಲ್ಯಗಳ ರಕ್ಷಣೆಯ ಮಾತನಾಡುತ್ತಾರೆ.
ಜನಪರವಾಗಿ ಮಾತನಾಡುವ ಆತ್ಮ ಸ್ಥೈರ್ಯ ಕುಗ್ಗಿ ಹೋಗಲು ಇರುವ ಕಾರಣ ಹುಡುಕುವ ತಲ್ಲಣದ ಕ್ಷಣದಲ್ಲಿ ನಾವಿದ್ದೇವೆ. ಇಂತಹ ವಿಚಿತ್ರ ಸಂದರ್ಭದಲ್ಲಿ ಸ್ವಾಮಿ ಎಂದು ಕರೆಸಿಕೊಳ್ಳುವ ವ್ಯಕ್ತಿಯೊಬ್ಬ ಆಕಾಶಕ್ಕೆ ಉಗುಳುವ ಕೆಲಸದಲ್ಲಿ ನಿರತರಾಗಿದ್ದಾರೆ. ಇಂತಹ ಮಾತುಗಳನ್ನು ‘ಕಾಲ’ ಕರಗಿಸಿಕೊಂಡು ಸೂಕ್ತ ಉತ್ತರ ಕೊಡುವುದರ ಜೊತೆಗೆ, ನಿಜ ವ್ಯಕ್ತಿತ್ವದ ‘ಅನಾವರಣ’ ಕೂಡ ಮಾಡುತ್ತದೆ.
ಆನೆಯ ನಡಿಗೆಯನ್ನು ಕಂಡು ಕರುಬುವ ವ್ಯಕ್ತಿಗಳ ಮಾತನ್ನು ಸಮಾಜ ಮತ್ತು ಸರಕಾರ ಉಪೇಕ್ಷೆ ಮಾಡುವುದು ಅನಿವಾರ್ಯ ಮತ್ತು ಅಗತ್ಯ.
–ಸಿದ್ದು ಯಾಪಲಪರವಿ ಕಾರಟಗಿ.