ಅಧಿಕಾರ ವಹಿಸಿಕೊಳ್ಳಲು ಹೊರಟಿದ್ದ ನೂತನ ಜಿಲ್ಲಾಧಿಕಾರಿ ಕಾರು ಪಲ್ಟಿ
e-ಸುದ್ದಿ ಧಾರವಾಡ
ನಿನ್ನೆಯಷ್ಟೇ ನಗರದ ನೂತನ ಜಿಲ್ಲಾಧಿಕಾರಿಯಾಗಿ ನೇಮಕಗೊಂಡಿದ್ದ ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನ್ನಮ್ಮನವರ ಅವರ ಕಾರು ಪಲ್ಟಿಯಾದ ಘಟನೆ ಧಾರವಾಡ ತಾಲೂಕಿನ ಯರಿಕೊಪ್ಪ ಗ್ರಾಮದ ಬಳಿ ನಡೆದಿದೆ.
ದಾವಣಗೆರೆ ಜಿಪಂ ಸಿಇಒ ಆಗಿದ್ದ ಅವರು ನಿನ್ನೆಯಷ್ಟೇ ಜಿಲ್ಲೆಯ ಜಿಲ್ಲಾಧಿಕಾರಿಯಾಗಿ ವರ್ಗಾವಣೆಯಾಗಿದ್ದರು. ಈ ಹಿನ್ನೆಲೆ ವಿಜಯಪುರಕ್ಕೆ ತೆರಳುತ್ತಿದ್ದ ಅವರ ಕಾರು ಪಲ್ಟಿಯಾಗಿದೆ. ಸದ್ಯ ಅವರನ್ನು ಎಸ್‍ಡಿಎಂ ಆಸ್ಪತ್ರೆಗೆ ದಾಖಲಿಸಲಾಗಿದೆ. ಪತ್ನಿ ಶ್ವೇತಾ, ಮಕ್ಕಳಾದ ತನ್ವಿ, ವಿಹಾನ್ ಹಾಗೂ ಪ್ರವೀಣ ಕೂಡಾ ಕಾರಿನಲ್ಲಿ ಇದ್ದರು. ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ರಾಜ್ಯ ಸರ್ಕಾರ 20 ಐಎಎಸ್ ಅಧಿಕಾರಿಗಳನ್ನ ವರ್ಗಾವಣೆ ಮಾಡಿದೆ. ಇದರಲ್ಲಿ ಜಿಲ್ಲೆಯ ಜಿಲ್ಲಾಧಿಕಾರಿ ಪಿ ಸುನೀಲ್‍ಕುಮಾರ್ ವರ್ಗಾವಣೆ ಆಗಿದ್ದಾರೆ. ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ವಿಜಯಮಹಾಂತೇಶ ದಾನ್ನಮ್ಮನವರ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಪಿ ಸುನೀಲಕುಮಾರ್ ಸ್ಥಳ ನಿಯೋಜನೆಗಾಗಿ ಕಾಯುತ್ತಿದ್ದು, ವಿಜಯ ಮಹಾಂತೇಶ ಅವರು ವಿಜಯಪುರ ನೂತನ ಜಿಲ್ಲಾಧಿಕಾರಿಯಾಗಿ ನಿಯುಕ್ತರಾಗಿದ್ದಾರೆ.
ಈ ಹಿಂದೆ ವಿಜಯಪುರ ಜಿಲ್ಲಾಧಿಕಾರಿಯಾಗಿದ್ದ ಪಿ. ಸುನೀಲ್‍ಕುಮಾರ್ ಅವರನ್ನು ವರ್ಗಾವಣೆ ಮಾಡಲಾಗಿದ್ದು, ಇನ್ನು ಯಾವುದೇ ಸ್ಥಳ ನಿಯುಕ್ತಿಗೊಳಿಸಿಲ್ಲ. ನೂತನ ಜಿಲ್ಲಾಧಿಕಾರಿಯಾಗಿ ನೇಮಕಗೊಂಡ ವಿಜಯ ಅವರು ನಾಳೆ ಅಧಿಕಾರ ಸ್ವೀಕರಿಸಲಿದ್ದಾರೆ ಎಂದು ಡಿಸಿ ಕಚೇರಿ ಮೂಲಗಳು ತಿಳಿಸಿವೆ.