ಬಿಜ್ಜರಗಿ ಮಹಾನ್ ಗಣಿತಜ್ಞನ ಜನ್ಮಸ್ಥಳ

ಬಿಜ್ಜರಗಿ ಮಹಾನ್ ಗಣಿತಜ್ಞನ ಜನ್ಮಸ್ಥಳ

ಗಣಿತಜ್ಞ ಭಾಸ್ಕರಾಚಾರ್ಯ ಭಾರತದ ಹೆಮ್ಮೆಯ ಕುವರ

ಜಯಪುರದಿಂದ ಜತ್ತ ಗೆ ತಿಕೋಟಾ ಮಾರ್ಗವಾಗಿ ಹೋಗುವಾಗ ಇತಿಹಾಸ ಪ್ರಸಿದ್ಧ “ಮುಚ್ಚಂಡಿ”, “ಕನಮಡಿ” ಊರುಗಳನ್ನು ಬಹಳ ಜನ ನೋಡೆ ಇರ್ತೀರಿ. ಹಾಗೆ ಹೋಗುವಾಗ ತಿಕೋಟಾದಿಂದ ಕೇವಲ ಹತ್ತು-ಹನ್ನೆರಡು ಕಿಲೋ ಮೀಟರ್ ದೂರದಲ್ಲಿ ಒಂದು ಪುಟ್ಟ ಗ್ರಾಮ ಬರ್ತದೆ. ಹೆಸರು “ಬಿಜ್ಜರಗಿ”. 99.99 % ಕನ್ನಡಿಗರಿಗೆ ಗೊತ್ತಿಲ್ಲದ ಒಂದು ವಿಷಯ ಏನೆಂದರೆ ಈ ಇತಿಹಾಸ ಪ್ರಸಿದ್ಧ “ಬಿಜ್ಜರಗಿ” ಗ್ರಾಮ ಜಗತ್ತಿನ ಸರ್ವ ಶ್ರೇಷ್ಠ ಗಣಿತಜ್ಞರಲ್ಲಿ ಒಬ್ಬರಾದ ಭಾಸ್ಕರಾಚಾರ್ಯ 2 ಅವರ ಹುಟ್ಟೂರು.

ಇತಿಹಾಸ ಪ್ರಸಿದ್ಧ “ಬಿಜ್ಜರಗಿ” ಯಲ್ಲಿ ಜನ್ಮತಾಳಿ ಇತಿಹಾಸ ಪ್ರಸಿದ್ಧ “ಉಜ್ಜಯಿನಿ” ಯ ಖಗೋಳಶಾಸ್ತ್ರ ಕೇಂದ್ರದ ಮುಖ್ಯಸ್ಥರಾಗುವ ವರೆಗಿನ ಈ ಮಹಾನ್ ಗಣಿತಜ್ಞರ ಸಾಧನೆಯ ಹಾದಿಯ ಸ್ಥೂಲ ಪರಿಚಯ ಮಾಡಿಕೊಡುವುದು ಈ ಲೇಖನದ ಉದ್ದೇಶ.

ಗಣಿತಶಾಸ್ತ್ರ ಚರಿತ್ರೆ ಹಾಗೂ ಒಟ್ಟಾರೆ ಇತಿಹಾಸದ ಪುಟಗಳಲ್ಲಿ ಭಾಸ್ಕರಾಚಾರ್ಯ 2 ಎಂದೇ ಪ್ರಖ್ಯಾತರಾದ ಭಾಸ್ಕರಾಚಾರ್ಯ ಅವರು ಹುಟ್ಟಿದ್ದು ಈಗಿನ ವಿಜಯಪುರ ಜಿಲ್ಲೆಯ ಬಿಜ್ಜರಗಿ ಗ್ರಾಮದಲ್ಲಿ. ಸುಮಾರು ಹನ್ನೆರಡು ನೂರು ವರ್ಷಗಳು ಮಿಕ್ಕಿ ಇತಿಹಾಸ ಹೊಂದಿರುವ ಬಿಜ್ಜರಗಿ ಗ್ರಾಮ ಹನ್ನೆರಡನೆಯ ಶತಮಾನದಲ್ಲಿ ಒಂದು ಪ್ರಮುಖ ಅಗ್ರಹಾರವಾಗಿತ್ತು. ಭಕ್ತಿ ಭಂಡಾರಿ, ಜಗಜ್ಯೋತಿ ಬಸವಣ್ಣನವರ ಸಮಕಾಲೀನರಾದ ಭಾಸ್ಕರಾಚಾರ್ಯ ಅವರ ತಂದೆ ಮಹೇಶ್ವರೋಪಾಧ್ಯಾಯ ಕೂಡ ಒಬ್ಬ ಗಣಿತಜ್ಞ. ತಂದೆಯಿಂದ ಬಳುವಳಿಯಾಗಿ ಬಂದ ಗಣಿತಶಾಸ್ತ್ರದ ಸಸಿಯನ್ನು ತಮ್ಮ ಜೀವಿತಾವಧಿಯಲ್ಲಿ ಹೆಮ್ಮರವಾಗಿ ಬೆಳೆಸಿದ್ದು ಇದೇ ಭಾಸ್ಕರಾಚಾರ್ಯ ಅವರು.

ಆರ್ಯಭಟ, ವಹಾರ ಮಿಹಿರ, ಬ್ರಹ್ಮಗುಪ್ತ, ಭಾಸ್ಕರಾಚಾರ್ಯ 1 ಅವರಂತ ಮಹಾನ್ ಗಣಿತಶಾಸ್ತ್ರಜ್ಞರ ಪರಂಪರೆಯನ್ನು ಮುಂದುವರೆಸಿದ ಭಾಸ್ಕರಾಚಾರ್ಯ ಅವರು ತಮ್ಮ 36 ನೆಯ ವಯಸ್ಸಿನಲ್ಲಿ “ಸಿದ್ಧಾಂತ ಶಿರೋಮಣಿ” ಎಂಬ ಗಣಿತಶಾಸ್ತ್ರದ ಮೇರು ಗ್ರಂಥವನ್ನು ರಚನೆ ಮಾಡಿದರು. ಈ ಸಮಯದಲ್ಲಿ ಒಂದು ಘಟನೆ ನಡೆಯುತ್ತದೆ. ಅವರ ಮಗಳು ಹೆಸರು ಲೀಲಾವತಿ. ಮಗಳ ಮದುವೆಗಾಗಿ ಅವಳ ಜಾತಕ ನೋಡುತ್ತಿದ್ದ ಖಗೋಳಶಾಸ್ತ್ರ, ಜ್ಯೋತಿಷ್ಯ ಶಾಸ್ತ್ರದ ಪರಿಣಿತರು ಆದ ಭಾಸ್ಕರಾಚಾರ್ಯ ಅವರಿಗೆ, ಮಗಳ ಜಾತಕದಲ್ಲಿ ವೈಧ್ಯವ್ಯದ ಲಕ್ಷಣ ಕಾಣಿಸುತ್ತದೆ. ಹಾಗಾಗಿ ತಮ್ಮ ಜ್ಞಾನವನ್ನು ಪಣಕ್ಕಿಟ್ಟು ಅತ್ಯಂತ ಅಮೋಘವಾದ ಒಂದು ಮುಹೂರ್ತವನ್ನು ಹುಡುಕಿ, ಅದರ ಕಾಲಗಣನೆಗೆ ಒಂದು ಯಂತ್ರವನ್ನು ತಯಾರಿಸುತ್ತಾರೆ. ಅಚಾತುರ್ಯದಿಂದ ಸ್ನೇಹಿತೆಯರ ಜೊತೆಗೆ ವಿರಹಿಸುತ್ತಿದ್ದ ಲೀಲಾವತಿಯ ಸರದ ಮುತ್ತೊಂದು ಯಂತ್ರದೊಳಗೆ ಸಿಕ್ಕು ಕಾಲಗಣನೆಯಲ್ಲಿ ವ್ಯತ್ಯಾಸ ಆಗಿ, ಮದುವೆ ಆದ ಹೊಸದರಲ್ಲಿಯೇ ಲೀಲಾವತಿ ವಿಧವೆ ಆಗುತ್ತಾಳೆ. ವಿಧಿಯ ಮಹಾನ್ ಶಕ್ತಿಯ ಮುಂದೆ ಶರಣಾದ ಭಾಸ್ಕರಾಚಾರ್ಯ ತಮ್ಮ ಮಗಳ ಹೆಸರನ್ನು ಚರಿತ್ರೆಯಲ್ಲಿ ಅಜರಾಮರ ಮಾಡಲು ಮಗಳ ಹೆಸರಲ್ಲಿ ಇನ್ನೊಂದು ಅಮೋಘವಾದ ಗಣಿತಶಾಸ್ತ್ರದ ಗ್ರಂಥ ರಚನೆ ಮಾಡ್ತಾರೆ. ಅದೇ ಜಗತ್ ಪ್ರಸಿದ್ದ “ಲೀಲಾವತಿ ಗಣಿತ”.

ಬೀಜಗಣಿತ, ಕ್ಯಾಲ್ಕುಲಸ್ (ಕಲನ ಶಾಸ್ತ್ರ), ಖಗೋಳಶಾಸ್ತ್ರ, ಅಂಕಗಣಿತ ಇತ್ಯಾದಿ ಗಣಿತದ ಶಾಖೆಗಳಲ್ಲಿ ಅಮೋಘ ಸಾಧನೆ ಮಾಡಿ, ಅಧ್ಬುತ ಗ್ರಂಥಗಳನ್ನು ರಚಿಸಿದ ಭಾಸ್ಕರಾಚಾರ್ಯ ಅವರಿಗೆ ಆಗಿನ ಜಗತ್ ಪ್ರಸಿದ್ದ ಖಗೋಳಶಾಸ್ತ್ರ, ಗಣಿತಶಾಸ್ತ್ರದ ಅಧ್ಯಯನ ಕೇಂದ್ರ ಉಜ್ಜಯಿನಿಯ ಖಗೋಳಶಾಸ್ತ್ರ ಕೇಂದ್ರದ ಮುಖ್ಯಸ್ಥರಾಗುವ ಅವಕಾಶ ದೊರಕುತ್ತದೆ. ಕ್ಯಾಲ್ಕುಲಸ್ (ಕಲನ ಶಾಸ್ತ್ರ) ದ ಎರಡು ಪ್ರಮುಖ ಶಾಖೆಗಳಾದ DIFFERENTIAL, INTEGRAL ಗಳ ಹರಿಕಾರರು ಎಂದು ನ್ಯೂಟನ್, ಲಾಗ್ರಾಂಜ್ ಮತ್ತು ಲಿಬ್ನಿಜ್ ಅವರನ್ನು ಪಾಶ್ಚಿಮಾತ್ಯರು ನಮ್ಮ ಮೇಲೆ ಹೇರಿದ್ದಾರೆ. ನಿಮಗೆಲ್ಲರಿಗೂ ಗೊತ್ತಿರದ ಸಂಗತಿ ಅಂದರೆ ಇವರಿಬ್ಬರೂ ಹುಟ್ಟುವ 500 ವರ್ಷಗಳ ಹಿಂದೆಯೇ ಭಾಸ್ಕರಾಚಾರ್ಯ ಅವರು ಇವೆರಡರ ಬಗ್ಗೆ ಘನ ಪ್ರಬಂಧಗಳನ್ನು ರಚಿಸಿದ್ದಾರೆ.

ಖಗೋಳಶಾಸ್ತ್ರದ ಒಂದು ವಿದ್ಯಮಾನವಾದ “PRECESSION OF EARTH’s EQUINOXES” ಬಗ್ಗೆ ಸುಮಾರು ಎಂಟು ನೂರು ವರ್ಷಗಳ ಹಿಂದೆಯೇ ಭಾಸ್ಕರಾಚಾರ್ಯ ಉಲ್ಲೇಖಿಸಿದ ಕಾಲಗಣನೆ, ಆ ವಿದ್ಯಮಾನ ಬಗ್ಗೆ ಇಲ್ಲಿಯವರೆಗಿನ ಅತ್ಯಂತ ಕರಾರುವಾಕ್ಕಾದ ಅಂದಾಜು ಎಂದು ದಾಖಲಾಗಿದೆ.

ಜಗದ್ವಿಖ್ಯಾತ PELL’s ಸಮೀಕರಣಕ್ಕೆ (?) ಮಾನವ ಇತಿಹಾಸದ ಅತ್ಯಂತ ಸರಳ, ಅತ್ಯಂತ ಕರಾರುವಾಕ್ಕಾದ ವಿಧಾನವನ್ನು ಕಂಡುಹಿಡಿದವರು ಇದೇ ಭಾಸ್ಕರಾಚಾರ್ಯ ಅವರು. ಮಜಾ ಅಂದರೆ PELL ‘s ಸಮೀಕರಣವನ್ನು ಸಾಧಿಸಲು ಪೂರ್ಣ ಯುರೋಪ್ ಗೆ 400 ವರ್ಷ (!) ಬೇಕಾಯಿತು.

ಇಂತಹ ಜಗತ್ ಪ್ರಸಿದ್ದ, ದಂತಕಥೆ ಅಂತಹ ಗಣಿತಜ್ಞ ನಮ್ಮ ಹೆಮ್ಮೆಯ ಕರ್ನಾಟಕದ, ವಿಜಯಪುರ ಜಿಲ್ಲೆಯ ಬಿಜ್ಜರಗಿಯವರು ಅನ್ನೋದು ನಮ್ಮ ನಾಡಿನ ಬಹುತೇಕ ಕನ್ನಡಿಗರಿಗೆ ಗೊತ್ತಿಲ್ಲ ಅನ್ನೋದು ಬಹಳ ದುಃಖದ ಸಂಗತಿ.

ಅಂದ ಹಾಗೆ ವಿಜಯಪುರದ ಜ್ಞಾನ ಯೋಗಾಶ್ರಮದ ಪೂಜ್ಯ ಸಿದ್ದೇಶ್ವರ ಸ್ವಾಮೀಜಿಯವರು ಕೂಡ ಇದೇ ಇತಿಹಾಸ ಪ್ರಸಿದ್ಧ ಬಿಜ್ಜರಗಿ ಗ್ರಾಮದವರು.

ರೇಖಾ ಲಕ್ಷ್ಮೇಶ್ವರ 

 

Don`t copy text!