ಸಾಹಿತಿ ಚಿಂತಕಿ ಏಕೀಕರಣ ಹೋರಾಟಗಾರ್ತಿ ಜಯದೇವಿ ತಾಯಿ ಲಿಗಾಡೆ

ಸಾಹಿತಿ ಚಿಂತಕಿ ಏಕೀಕರಣ ಹೋರಾಟಗಾರ್ತಿ ಜಯದೇವಿ ತಾಯಿ ಲಿಗಾಡೆ


ಶಾಲೆ ಓದು ಅತಿ ಕಡಿಮೆ ಪ್ರತಿಭೆ ಸಾಧನೆ ಅಗಾಧವಾದದ್ದು . ಕನ್ನಡ ಮರಾಠಿ ಸಂಸ್ಕೃತಿಯ ಕೊಂಡಿ ವಚನ ಚಳುವಳಿಯ ನೈಜ ವಾರಸುದಾರಳು ಜಯದೇವಿತಾಯಿ ಲಿಗಾಡೆ ಅವರ ಜೀವನ ಕರ್ನಾಟಕ ಏಕೀಕರಣಕ್ಕೆ ಅವರ ಕೊಡುಗೆ ಅವಿಸ್ಮರಣೀಯವಾಗಿದೆ.
ಕರ್ನಾಟಕದ ಏಕೀಕರಣಕ್ಕೆ ರಕ್ತ ನೀಡಿದ ಮಹಾರಾಷ್ಟ್ರದ ಹೆಣ್ಣು ಮಗಳು ಜಯದೇವಿ ತಾಯಿ ಲಿಗಾಡೆ

ನವೆಂಬರ್ ಒಂದು ಕರ್ನಾಟಕ ರಾಜ್ಯೋತ್ಸವ,ಹರಿದು ಹಂಚಿಹೊಗಿದ್ದ ಕನ್ನಡಿಗರನ್ನೆಲ್ಲ ಒಂದು ಗುಡಿಸಿದ ದಿನ (೧೯೫೬).
ಕರ್ನಾಟಕದ ಏಕೀಕರಣದ ಹಿಂದಿನ ರೋಚಕ ಕಥೆ, ಅದರ ಇತಿಹಾಸ,ಅದನ್ನು ಸಾಕಾರಗೊಳಿಸಿದ ಹಿರಿಯರ ತ್ಯಾಗ, ಬಲಿದಾನ ಇಂದು ನೆನೇಯಲೇ ಬೇಕು. ಅದು ನಮ್ಮ ಕರ್ತವ್ಯ.

೧೯೪೭ ಭಾರತ ಸ್ವಾತಂತ್ರ್ಯಗಳಿಸುವ ಉಮೇದಿನಲ್ಲಿತ್ತು. ಅದರೊಂದಿಗೆ ಭಾರತದಲ್ಲಿದ್ದ ೫೬೨ ರಾಜರ ರಾಜ್ಯಗಳನ್ನು ಸ್ವತಂತ್ರ ಭಾರತದಲ್ಲಿ ವೀಲಿನಗೊಳಿಸಿ, ಅವುಗಳ ಸ್ಥಳದಲ್ಲಿ ವಿಶಾಲ ಅಖಂಡ ಭಾರತವನ್ನು ಸ್ಥಾಪಿಸಿ, ಭಾಷಾವಾರು ಪ್ರಾಂತಗಳನ್ನಾಗಿ ವಿಂಗಡಿಸಿ ಸುಲಭ ಆಡಳಿತ ನಡೆಸಲು ನಿರ್ಧರಿಸಿದ್ದರು ನಮ್ಮ ಪುರ್ವಿಕರು ಹಾಗು ಅಂದಿನ ಉಸ್ತುವಾರಿ ಕೇಂದ್ರ ಸರಕಾರ.

ಭಾಷಾವಾರು ಪ್ರಾಂತಗಳ ರಚನೆ ಸುಲಭವಾಗಿರಲಿಲ್ಲ. ಬ್ರಿಟಿಷರು ಹೊರಟು ನಿಂತಿದ್ದರು ದೇಶವನ್ನು ಇಬ್ಬಾಗ ಮಾಡಿ. ಭಾರತದಲ್ಲಿದ್ದ ಕೆಲವು ರಾಜರು ತಮ್ಮ ರಾಜ್ಯಗಳ ಸ್ವಾಯತ್ತತೆ ಕಾಯ್ದು ಕೊಂಡು ಒತ್ತಡ ತಂದವು. ಕೇಂದ್ರ ಸರಕಾರದ ಮೇಲೆ. ಸಮಯದ ಅಭಾವ, ವಲಸೆ ಬಂದ ನಿರಾಶ್ರಿತರ ಕಾರಣ ಭಾಷಾವಾರು ಪ್ರಾಂತಗಳ ರಚನೆ ಮುಂದಕ್ಕೆ ಬಿತ್ತು,  ಆದರೆ ಈ ಆಶಯವನ್ನು ಒಳಗೊಂಡ ನಮ್ಮ ಸಂವಿಧಾನ ಅಸ್ತಿತ್ವಕ್ಕೆ ಬಂತು ೧೯೫೦ ರಲ್ಲಿ.

ಅನೇಕ ಭಾಷೆ,ಅನೇಕ ಧರ್ಮ,ಅನೇಕ ಸಂಸ್ಕೃತಿಯ ವಿಭಿನ್ನ ದೇಶ ಭಾರತ. ಒಂದು ಭಾಷೆಯನ್ನು ಮಾತಾಡುವ ನಾಗರಿಕರು ಹರಿದು ಹಂಚಿಹೋಗಿದ್ದರು ಬೇರೆ ಬೇರೆ ಪ್ರಾಂತಗಳಲ್ಲಿ. ನಮ್ಮ ಕನ್ನಡಿಗರು ಹರಿದುಹಂಚಿ ಹೋಗಿದ್ದರು ಐದಾರು ವಿಭಾಗಗಳಲ್ಲಿ. ಅಂದಿನ ಬೆಳಗಾವಿ, ವಿಜಾಪುರ, ಧಾರವಾಡ, ಮತ್ತು ಕಾರವಾರ ಜಿಲ್ಲೆಗಳು ಮುಂಬೈ ಸರಕಾರದಲ್ಲಿದ್ದರೆ, ಬಳ್ಳಾರಿ ಜಿಲ್ಲೆ ಮದ್ರಾಸ ಪ್ರೆಸಿಡೆನ್ಸಿಯಲ್ಲಿತ್ತು. ಮೈಸೂರು ರಾಜರು ಆಳುತ್ತಿದ್ದರು ದಕ್ಷಿಣ ಕರ್ನಾಟಕದ ಬೆಂಗಳೂರು, ಮೈಸೂರು, ಮಂಡ್ಯ, ಕೊಲಾರ, ತುಮಕೂರು, ಶಿವಮೊಗ್ಗ, ಹಾಸನ, ಚಿಕ್ಕಮಗಳೂರು ಮತ್ತಿತರ ಜಿಲ್ಲೆಗಳನ್ನು,ಕೊಡಗಿನ ಅರಸರಾಗಿದ್ದರು ಸ್ವತಂತ್ರ.

ಹರಿದು ಹಂಚಿಹೋದ ಕನ್ನಡಿಗರು ಇರುವು ಕ್ಷೇತ್ರಗಳಾದವು ಸಮಸ್ಯಾತ್ಮಕ ಪ್ರದೇಶಗಳು.ಗಡಿ ಪ್ರದೇಶದಲ್ಲಿ ಎರಡು ಮೂರು ಬಾಷೆಗಳು ಬಳಕೆಯಲ್ಲಿದ್ದವು. ಯಾವ ಭಾಷೆ ಯಾವ ಪ್ರದೇಶದಲ್ಲಿ ಅಧಿಕವಾಗಿ ಬಳಕೆಯಾಗುತ್ತಿದೆ ಎಂದು ವೈಜ್ಞಾನಿಕವಾಗಿ ಸಿದ್ದ ಮಾಡಬೇಕಾಗಿತ್ತು ಕೇಂದ್ರ ಸರಕಾರಕ್ಕೆ. ಅದಕ್ಕಾಗಿ ಕೇಂದ್ರ ಸರಕಾರ ಆಯೋಗಗಳನ್ನು ಮೊರೆಹೋಯಿತು. ಸರಕಾರ ರಚಿಸಿದ ಅಯೋಗಗಳ ಮುಂದೆ ತಮ್ಮ ತಮ್ಮ ಇರುವಿಕೆಯನ್ನು ಸಿದ್ದಪಡಿಸಬೇಕಾಗಿತ್ತು ಗಡಿನಾಡ ಕನ್ನಡಿಗರಿಗೆ. ಅಂಥಹ ಒಂದು ಗಡಿನಾಡ ಕನ್ನಡತಿಯ ಕಥೆ ಇದು. ಅದೆ ಸೊಲ್ಲಾಪುರದ ಜಯದೇವಿ ತಾಯಿ ಲಿಗಾಡೆಯ ಕಥೆ.

*ಸರಕಾರಕ್ಕೆ ಸಾಲ ನೀಡಿದ್ದ ವಾರದ ಮಲ್ಲಪ್ಪನವರು ಅಂದಿನ ಬ್ರಿಟಿಷ್ ಸರಕಾರದ ಮುಂಬೈ ಪ್ರೆಸಿಡೆನ್ಸಿಯಲ್ಲಿ ದಂತಕತೆಯಾಗಿದ್ದರು. ಸೋಲಾಪುರದ ವಾರದ ಮಲ್ಲಪ್ಪನವರು,ಆಗರ್ಭ ಶ್ರಿಮಂತರು, ೮೦೦ ಜೋಡಿ ಎತ್ತುಗಳ ಒಕ್ಕಲುತನ. ಸಾವಿರಾರು ಎಕರೆ ಜಮೀನು,ಅನೇಕ ಅಂಗಡಿ ಮುಗ್ಗಟ್ಟುಗಳು, ಹತ್ತಾರು ಕಾರಕಾನೆಗಳು ಇವರ ಒಡೆತನದಲ್ಲಿ. ಸರಕಾರಕ್ಕೆ ಸಾಲ ನೀಡಿದ ಸಾವುಕಾರ. ಆದರೆ ಮಕ್ಕಳಿರದ ಬಡವ. ಹೆಂಡತಿಯ ತಮ್ಮ ಚನಬಸಪ್ಪ ಮನೆಯ ಮಗನಂತಿದ್ದ ವಾರದ ಮಲ್ಲಪ್ಪನವರಿಗೆ. ಚನಬಸಪ್ಪ ಮತ್ತು ಸಂಗವ್ವರ ಮಗಳು ಜಯದೇವಿ ತಾಯಿ ಲಿಗಾಡೆ.ನಮ್ಮ ಕಥಾ ನಾಯಕಿ. ಸೋಲಾಪುರದ ಇಂದ್ರ ಭವನದಲ್ಲಿ ಜನಿಸಿದ ರಾಜಕುಮಾರಿ.(ಇಂದ್ರ ಭವನ ಈಗಿನ ಸೋಲಾಪುರ ಮುನ್ಸಿಪಲ್ ಕಾರ್ಪೋರೇಶನದ ಮುಖ್ಯ ಕಚೇರಿ).ಬಂಗಾರ ಚಮಚೆ ಬಾಯಲ್ಲಿಟ್ಟ್ಕೊಂಡು ಹುಟ್ಟಿದ ಶ್ರೀಮಂತ ಮನೆಯ ನಂದಾದೀಪ.

ತಾಯಿ ಸಂಗವ್ವ ಶರಣ ಸಂಸ್ಕೃತಿಯ ಲಿಂಗಾಯತ ಹೆಣ್ಣು ಮಗಳು, ಮನೆಯ ಹೊಸಿಲು ದಾಟದ ಜೀವ. ತಾಯಿಯ ತದ್ರುಪ ಗುಣಗಳ ಜಯದೇವಿ, ಏಕೈಕ ಹೆಣ್ಣು ಮಗು ಮನೆಗೆ, ಮನೆಯ ಲಕ್ಷಿ. ಅಣ್ಣ ತಮ್ಮಂದಿರೊಂದಿಗೆ ಮರಾಠಿ ಶಾಲೆಯಲ್ಲಿ ವಿದ್ಯಾಭ್ಯಾಸ. ತಾಯಿ ಸಂಗಮ್ಮನವರು ಅ. ಆ. ಇ. ಈ. ಕಲಿಯದಿದ್ದರು ವ್ಯವಹಾರಿಕವಾಗಿ ಒಳ್ಳೆಯ ಶಿಕ್ಷಣವಂತೆ. ಮೂಢ ನಂಬಿಕೆ ಕಂದಾಚಾರಗಳಿಂದ ಬಲುದೂರ. ಮನೆಯಲ್ಲಿ ವಚನ ಪಠಣ ಹಿರಿಯರಿಂದ,ಇದು ಮಕ್ಕಳ ಮೇಲೆ ಬೀರಿತ್ತು ಪ್ರಭಾವ. ಬಾಲೆ ಜಯದೇವಿಗೆ ಹನ್ನೆರಡು ವರ್ಷ ತುಂಬುತ್ತ ಬಂದವು. ಮದುವೆಯ ಗಂಡುಗಳು ಬರಲು ಪ್ರಾರಂಭಿಸಿದರು ಸಾಹುಕಾರರ ಮನೆಯ ಸಂಬಂಧ ಮತ್ತು ಬೀಗತನಕ್ಕೆ

ಸೋಲಾಪುರದಲ್ಲಿತ್ತು ಇನ್ನೊಂದು ಶ್ರೀಮಂತ ಕುಟುಂಬ, ಅದೆ ಲಿಗಾಡೆಯವರ ಮನೆತನ. ಮೂರು ಸಾವಿರ ಏಕರೆಯ ಜಮಿನುದಾರರು ಲಿಗಾಡೆಯವರು, ದೊಡ್ಡ ವ್ಯಾಪಾರ ವಹಿವಾಟು ಅವರದು. ಜಯದೇವಿಯ ಚಲುವಿಕೆ, ಸಂಸ್ಕೃತಿಗೆ ಮನಸೋತ ಚನ್ನಮಲ್ಲಪ್ಪ. ತಾಯಿ ಪ್ರಯಾಗಭಾಯಿಗೆ ಬೇಕಾಗಿತ್ತು ಶ್ರೀಮಂತ ವಾರದ ಮಲ್ಲಪ್ಪನವರ ನೆಂಟಸ್ತಿಕೆ, ಜಯದೇವಿ ಕೈಹಿಡಿಯಲು ಮುಂದಾದ ಹದಿನಾಲ್ಕು ವರ್ಷದ ಚನ್ನಮಲ್ಲಪ್ಪ. ಜರುಗಿತು ಇಂದ್ರಭವ ನದಲ್ಲಿ ಸ್ವತಃ ದೇವರ ದೇವ ದೇವೆಂದ್ರನೆ ನಾಚಿಸುವಂತ ವಿಜ್ರಂಭದ ಮದುವೆ.

ಸ್ವತಂತ್ರ ಬುದ್ದಿಯ ಜಯದೇವಿಯ ದಿನಗಳು ಸುಖಕರವಾಗಿರಲಿಲ್ಲ ಗಂಡನ ಮನೆಯಲ್ಲಿ. ಹೆಣ್ಣಿಗೆ ತಾಳ್ಮೆ ಮುಖ್ಯ, ಸಹಿಸಿದಳು ಕಷ್ಟ. ಭೂಮಿತೂಕದ ಹೆಣ್ಣಮಗಳು ತಾಯಿ ಜಯದೇವಿ. ಶರಣರ ಜೀವನ, ವಚನಾಧ್ಯಯನ ಬದಲಾಯಿಸಿತು ಜಯದೇವಿ ತಾಯಿಯ ಜೀವನವನ್ನು. ಕನ್ನಡ ಓದು ಬರಹ ಕಲಿತಳು ತನ್ನ ಮಧ್ಯ ವಯಸ್ಸಿನಲ್ಲಿ. ಶರಣ ಚರಿತ್ರೆಯ ಪ್ರಭಾವದಿಂದ ತೋರೆದಳು ಶ್ರೀಮಂತಕೆಯ ಕುರುಹಾದ ಇಂದ್ರಭವನ, ನಡೆದಳು ಅಂತರಂಗದ ಶ್ರೀಮಂತಕೆಯನ್ನರಸಿ. ಬಂಗಾರದ ಸರಗಳ ಬದಲಾಗಿ ಬಂತು ರುದ್ರಾಕ್ಷಿಮಾಲೆ, ರೇಷ್ಮೆ ಪಿತಾಂಬರಗಳ ಬದಲಾಗಿ ಬಂದವು ಹತ್ತಿಯ ನೂಲಿನ ಸೀರೆಗಳು. ಕೈ ಬೀಸಿ ಕರೆಯಿತು ಅಧ್ಯಾತ್ಮ ಶಕ್ತಿ ಅದರೊಂದಿಗೆ ಕೂಡಿದವು ದೈವಭಕ್ತಿ ಮತ್ತು ದೇಶಭಕ್ತಿ.

ಅಂದಿನ ದಿನಗಳಲ್ಲಿ ಶಿಕ್ಷಣ ಕೇವಲ ಬ್ರಾಹ್ಮಣರ ಸೊತ್ತು. ಕಠಿಣ ಸಾಮಾಜಿಕ ಸಂಕೋಲೆಯಿಂದ ಸಣ್ಣಗೆ ಹೊರ ಬರಲಾಂಬಿಸಿದ್ದರು ಲಿಂಗಾಯತರು. ೧೮೯೫ ಹಿಂದುಳಿದ ಸೋಲಾಪುರ ಜಿಲ್ಲೆಯಲ್ಲಿ ಶಿಕ್ಷಣದ ಬೀಜ ಚಿಗುರೊಡೆಯಲಾರಂಬಿಸಿತ್ತು. ಬ್ರಿಟಿಷರು ನಮ್ಮನ್ನು ಆಳಲು ಬಂದರೂ ಸಾಮಾಜಿಕ ಪಿಡುಗನ್ನು ದೂರ ಮಾಡುತ್ತಿದ್ದರು ನಮ್ಮಿಂದ. ಭಾರತಿಯರನ್ನು ಶಿಕ್ಷಿತರನ್ನಾಗಿ ಮಾಡಲು ಪ್ರಯತ್ನಿಸುತ್ತಿದ್ದರು ನೀರಂತರ. ಸೋಲಾಪುರದ ಕಲೇಕ್ಟರ ಮಲ್ಲಪ್ಪ ದೇಶಮುಖ, ತಾತ್ಯಾಸಾಬ ಕಾನಟ್ಕಕರ, ಶ್ರೀಮಂತ ವಾರದ ಮಲ್ಲಪ್ಪನವರು ಮೂವರು ಕೂಡಿದರು ಒಂದು ದಿನ, ಚರ್ಚಿಸಿದರು .ಬಾರತದ ಶಿಕ್ಷಣದ ಅವಶ್ಯಕತೆ, ನಿರ್ಧರಿಸಿದರು ಪುರುಷರೊಂದಿಗೆ ಸ್ತ್ರಿಯರಿಗೂ ಶಿಕ್ಷಣ ನೀಡಲು. ಸಂಪ್ರದಾಯಸ್ತ ಪುರುಷರು ಹುಬ್ಬೇರಿಸಿದರು .

ಮಲ್ಲಪ್ಪನವರು ಹೆಣ್ಣು ಮಕ್ಕಳಿಗಾಗಿ ಮೂರು ಶಾಲೆಗಳನ್ನು ಪ್ರಾರಂಭಿಸಿದರು. ಕನ್ನಡಿಗರಿಗಾಗಿ ವೀರಶೈವ ಮಹಿಳಾ ಮಂದಿರ, ಮರಾಠಿಗರಿಗೆ ಸರಸ್ವತಿ ಮಹಿಳಾ ಮಂದಿರ ಮತ್ತು ಗುಜರಾತಿಗಳಿಗೆ ಶ್ರಾವಿಕಾಶ್ರಮ. ಕನ್ನಡದ ಮಹಿಳಾ ಮಂದಿರದ ಹೋಣೆಗಾರಿಕೆ ಬಿತ್ತು ವಯಸ್ಕ ಜಯದೇವಿ ತಾಯಿಯ ಮೇಲೆ.

ಜಂಗಮ ಜಯದೇವಿ
“ಹೊಟ್ಟೆಗೆ ಬೇಕು ಅನ್ನ, ಮೆದುಳಿಗೆ ಬೇಕು ಶಿಕ್ಷಣ ” ಎಂದಳು ಜಯದೇವಿ ತಾಯಿ. ‘ಶಿಕ್ಷಣ ಎಲ್ಲರ ಸೊತ್ತು ಅದಕ್ಕಿಲ್ಲ ಲಿಂಗ ಭೆದ’, “ಹೆಣ್ಣಿಗೆ ಶಿಕ್ಷಣ ನೀಡಿದರೆ ಶಾಲೆಯನ್ನು ತೆರೆದಂತೆ” ಎಂದರು ಮೊದಲ ಭಾರಿ. ಬರಿ ಭಾಷಣ ಮಾಡಿ ಮನೆಗೆ ಬರಲಿಲ್ಲ ಇವರು, ನಾಲ್ಕು ನೂರು ಸೇವಾ ಶಿಕ್ಷಕರನ್ನು ನೇಮಿಸಿದರು ತಮ್ಮ ಸ್ವಂತ ಹಣದಿಂದ, ಅವರನ್ನು ಕಳಿಸಿದರು ಶಿಕ್ಷಣ ವಂಚಿತ ರಾಜ್ಯ ಹೈದಾರಾಬಾದ ಕರ್ನಾಟಕದಲ್ಲಿ, ಕನ್ನಡ ಶಾಲೆ ತೆರೆಯಲು ಹಳ್ಳಿ ಹಳ್ಳಿಗೆ. ಶಿಕ್ಷಣ ಕಾಶಿ ಧಾರವಾಡದಲ್ಲಿಯೂ ತೆರೆದರು ಮಾಧ್ಯಮಿಕ ಶಾಲೆ, ಹುಬ್ಬಳ್ಳಿಯಲ್ಲಿ ಪ್ರಾರಂಭಿಸಿದರು ಭಾರತಿ ಹೈಸ್ಕೂಲ.

ಸೋಲಾಪುರದ ನೂಲಿನ ಗಿರಣಿಗಳಲ್ಲಿ ದುಡಿಯುತ್ತಿದ್ದರು ಕನ್ನಡದ ಕಾರ್ಮಿಕರು. ಅವರ ಹೆಣ್ಣು ಮಕ್ಕಳಿಗಿರಲಿಲ್ಲ ಶಿಕ್ಷಣ. ಅದಕ್ಕಾಗಿ ಪ್ರಾರಂಭವಾದವು ೧೨೫ ಕಾರ್ಮಿಕ ಸೇವಾ ಕೇಂದ್ರಗಳು. ಕನ್ನಡ ಶಾಲೆಗಳಿಗೆ ವಂತಿಗೆ ನೀಡುವದು, ಬಡಮಕ್ಕಳಿಗೆ ಬೋರ್ಡಿಂಗ,ಓದಲು ವಾಚನಾಲಯ, ಮಕ್ಕಳಿಗೆ ಸ್ಕಾಲರಶಿಪ್ ನೀಡುವದು ನಿರಂತರವಾಗಿ ನಡೆಯಿತು ಜಯದೇವಿ ತಾಯಿಯ ಜೀವಮಾನವಿಡಿ.

ಕನ್ನಡದ ಕವಿಯತ್ರಿ ಜಯದೇವಿ ತಾಯಿ
ಹುಟ್ಟಿ ಬೆಳೆದದ್ದು ಸೋಲಾಪುರ,ಆ ಊರಿನಲ್ಲಿದ್ದವು ಎರಡು ಭಾಷೆ ಮರಾಠಿ ಮತ್ತು ಕನ್ನಡ. ತಾಯಿಯ ಓದು ಮರಾಠಿ ಶಾಲೆಯ ಮರಾಠಿ ಮಾಧ್ಯಮದಲ್ಲಿ. ಮನೆಯಲ್ಲಿ ಮರಾಠಿಯೊಂದಿಗೆ ಕನ್ನಡ ಬಾಷೆ ಬಳಕೆಗೆ. ಚಿಕ್ಕ ವಯಸ್ಸಿನಲ್ಲಿ ಕನ್ನಡ ಭಾಷೆಯಿಂದ ವಂಚಿತಳಾದ ಜಯದೇವಿತಾಯಿ ಮಾಡಿಕೊಂಡಳು ಆ ಭರಪಾಯಿಯನ್ನು ಮಧ್ಯವಯಸ್ಸಿನಲ್ಲಿ. ಕನ್ನಡ ಓದು ಬರಹ ಭಾಷೆ ಕಲಿಯಲಿಲ್ಲ ಸಾಮಾಜಿಕ ಜ್ಞಾನಕ್ಕಾಗಿ ಮತ್ತು ವ್ಯಾಪಾರಕ್ಕಾಗಿ. ಅದನ್ನು ಕಲಿತು, ಪ್ರಾವಿಣ್ಯತೆ ಪಡೆದು, ರಚಿಸಿದರು ಗ್ರಂಥಗಳನ್ನು. ತ್ರಿಪದಿಗಳಲ್ಲಿ ಶ್ರೀ ಸಿದ್ದರಾಮೇಶ್ವರ ಪುರಾಣ ರಚಿಸುವಷ್ಟು ಕನ್ನಡ ಭಾಷಾ ಪ್ರವಿಣೆ ಜಯದೇವಿ ತಾಯಿ. ಅವರು ರಚಿಸಿದ ಶ್ರೀ ಸಿದ್ದರಾಮ ಪುರಾಣ ಒಂದು ಮಾಹಾಕಾವ್ಯ. ಆ ಕೃತಿಯ ಕುರಿತು ಬರೆಯುತ್ತಾರೆ ಜ್ಞಾನಪೀಠ ಪುರಸ್ಕ್ರತ ಶ್ರೀ ವಿ. ಕೃ ಗೋಕಾಕರು. ” ಮಹಿಳಾ ಹೃದಯದ ರಸಾನುಭವ ತನ್ನ ಸಂಪತ್ತನೆಲ್ಲಾ ಕೃತಿಯಲ್ಲಿ ಸೂರೆ ಮಾಡಿಕೊಂಡಿದೆ. ಹಿಂದೆ ಅನಾಮಧೇಯವಾಗಿ ತನ್ನ ಸುಖ ದುಃಖ ಭಕ್ತಿಗಳನ್ನು ಜಾನಪದ ತ್ರಿಪದಿಯಲ್ಲಿ ತೋಡಿಕೊಂಡ ತಾಯಿಯ ಹೃದಯ ಇಂದು ಪ್ರಜ್ಞಾಪೂರ್ವಕವಾಗಿ ಅದೆ ಸೊಗಸಿನ ಹಾಡನ್ನು ಹಾಡಿದೆ”

ಜಯದೇವಿ ತಾಯಿ ಲಿಗಾಡೆಯವರ ಸಮಗ್ರ ಲೇಖನಗಳನ್ನು, ಗ್ರಂಥಗಳನ್ನು ಅಧ್ಯಯನ ಮಾಡಿ ಅವರ ಮೇಲೋಂದು ಕೃತಿಯನ್ನು ರಚಿಸಿದ ಡಾ. ರತ್ನಶೀಲಾ ಗುರಡ್ಡಿಯವರು ಬರೆಯುತ್ತಾರೆ, “ಹಲವು ಮುಖಗಳಿಂದ ದೊರೆಯುವ ಜೀವನಾನುಭವವೇ ಸಾಹಿತ್ಯ ಅಭಿವ್ಯಕ್ತಿ ಯ ಪ್ರತಿಭೆಯನ್ನು ಅವಲಂಭಿಸಿರುತ್ತದೆ. ವೃಷ್ಟಿ ಜೀವನದಿಂದ ಸಮಷ್ಟಿ ಜೀವನದ ಸೂಕ್ಷ್ಮ ಅವಕಾಶಕೂಡ ಸಾಹಿತ್ಯಕ್ಕೆ ವಸ್ತು ಒದಗಿಸುತ್ತದೆ ಅದನ್ನು ಕಾಣತ್ತೆವೆ ಜಯದೇವಿ ತಾಯಿಯ ಸಾಹಿತ್ಯದಲ್ಲಿ” ಎನ್ನುತ್ತಾರೆ* ಇವರ ಸಮಗ್ರ ಸಾಹಿತ್ಯವನ್ನು ವಿಶ್ಲೇಷಣೆ ಮಾಡುತ್ತ.

ತಾಯಿ ಜಯದೇವಿಯವರು ಕನ್ನಡದಲ್ಲಿ ರಚಿಸಿದ್ದಾರೆ ಮೇರು ಕೃತಿಗಳನ್ನು. ತಾಯಿಯ ಪದಗಳು, ಜಯಗೀತೆ,ತಾರಕ ತಂಬೂರಿ,ಸಾವಿರದ ಪದಗಳು, ಅರಿವಿನಾಗರದಲ್ಲಿ.ಎಂಬ ಸುಂದರ ಗ್ರಂಥಗಳನ್ನು, ಶ್ರೀ ಸಿದ್ದರಾಮ ಪುರಾಣ ಇವುಗಳಲ್ಲಿ ಮೇರು ಕಳಶ ಇವರ ಪಾಂಡಿತ್ಯ ಪೂರ್ಣ ಲೇಖನಿಗೆ.

ಕನ್ನಡದಷ್ಟೆ ಪ್ರೀತಿ ಮಾಡಿದಳು ಅಮ್ಮ ತನ್ನ ನಾಡ ಭಾಷೆಯಾದ ಮರಾಠಿಯನ್ನು. ಮರಾಠಿಯಲ್ಲಿ ರಚಿಸಿದ್ದಾರೆ, ಸಿದ್ದವಾಣಿ, ಬಸವದರ್ಶನ, ಮಹಾಯೋಗಿನಿ, ಸಮೃದ್ದಿ ಕರ್ನಾಟಕಾಂಚಿ ರೂಪರೇಷಾ, ಸಿದ್ದರಾಮಾಂಚೆ ತ್ರಿವಿಧಿ, ಬಸವ
ವಚನಾ ಮೃತ,ಮತ್ತು ಶೂನ್ಯ ಸಂಪಾದನೆ.

ಹೋರಾಟಗಾರ್ತಿ
ಜಯದೇವಿತಾಯಿಮಹಿಳೆಯರ ಶಿಕ್ಷಣ, ಕಾವ್ಯರಚನೆ, ಪುರಾಣ ಪುಣ್ಯ ಕಥೆ ರಚನೆಯಲ್ಲಿ ಕಾಲ ಕಳೆಯಲಿಲ್ಲ ಅಮ್ಮ ಜಯದೇವಿತಾಯಿ. ಸಾಮಾಜಿಕ ನ್ಯಾಯ, ಮಹಿಳಾ ಸಬಲಿಕರಣ, ಜಾತಿ ವಿಮೋಚನೆ, ವರದಕ್ಷಿಣೆ ವಿರೋಧಿ ಹೋರಾಟಗಳಿಗೆ ಶಕ್ತಿಯಾಗಿ ನಿಂತರು ಜಯದೇವಿ ತಾಯಿ. ಜ್ವಾಲೆಯಂತೆ ಹಬ್ಬುತ್ತಿದ ಭಾಷಾವಾರು ಪ್ರಾಂತದ ಹೋರಾಟ ಅವರನ್ನು ಕೈ ಬಿಸಿ ಕರೆಯಿತು. ಅದಕ್ಕೆ ಕಾರಣ ತಾವು ಜನ್ಮ ತಳೆದ ಗಡಿನಾಡ ಸೊಲ್ಲಾಪುರದ ಸ್ತಿತಿಗಥಿ.

ಕನ್ನಡಿಗರ ಸೊಲ್ಲಾಪುರದಲ್ಲಿ ಮರಾಠಿಗರು

ಕನ್ನಡಿಗರ ಊರು ಸೋಲ್ಲಾಪುರ.ಇದು ಮೂರನೆಯ ಶತಮಾನದಿಂದ ಎಳನೆಯ ಶತಮಾನದ ವರೆಗೆ ಕಲ್ಯಾಣಿ ಚಾಲುಕ್ಯರ ಆಧಿನದಲ್ಲಿತ್ತು, ಮುಂದೆ ಇದನ್ನಾಳಿದ್ದರು ಮುಳಖೇಡದ ರಾಷ್ಟ್ರಕೂಟರು ಮತ್ತು ದೇವಗಿರಿ ಯಾದವರು. ಹನ್ನೆರಡನೆಯ ಶತಮಾನದ ಶರಣ ಸಿದ್ದರಾಮರ ಕರ್ಮಭೂಮಿಯೂ ಸೋಲ್ಲಾಪುರ. ವಿಜಾಪುರದ ಶಾಹಿ ಮನೆತನದ ಆಡಳಿತದಲ್ಲಿತ್ತು ಸೋಲ್ಲಾಪುರ ಮಧ್ಯ ಭಾರತದ ಶತಮಾನಗಳಲ್ಲಿ,ಇಂದಿನ ಬಾಗಲಕೋಟ ಜಿಲ್ಲೆಯ ಸಣ್ಣ ಹಳ್ಳಿ ಕಲಾದಗಿ ಜಿಲ್ಲಾ ಸ್ಥಾನ ಪಡೆದಿತ್ತು ಜತ್ತ ಸಂಸ್ಥಾನದಲ್ಲಿ, ಆ ಜಿಲ್ಲೆಯ ತಾಲೂಕ ಆಗಿತ್ತು ಸೋಲಾಪುರ ೧೮೬೮ ರವರೆಗೆ. ಐತಿಹಾಸಿಕವಾಗಿ,ಸಾಂಸ್ಕೃತಿಕವಾಗಿ ,ಔದ್ಯೋಗಿಕವಾಗಿ ಸೋಲಾಪುರ ನಗರ ಕನ್ನಡಿಗರದು. ಅಲ್ಲಿ ಕನ್ನಡದ ಸಂಸ್ಕೃತಿ ಆಚಾರ ವಿಚಾರಗಳು ಕನ್ನಡಮಯ. ಆದರೆ ಪೂಣೆಯ ಪೇಷ್ವೆಯವರ ಆಡಳಿತ ಕಬಳಿಸಿತ್ತು ಕನ್ನಡ ಭಾಷೆಯನ್ನು, ಅದಕ್ಕೆ ಕನ್ನಡಿಗರ ನಿರ್ಲಕ್ಷವು ಕಾರಣ. ಸೊಲ್ಲಾಪುರ ಇಂದು ಮಹಾರಾಷ್ಟ್ರ ರಾಜ್ಯದ ಪ್ರಮುಖ ಪಟ್ಟಣ.

ಭಾಷಾವಾರು ಪ್ರಾಂತಗಳ ರಚನೆ

ಬ್ರಿಟಿಷರು ತೊಲಗಿದ ನಂತರ ಆಡಳಿತ ವಿಶಾಲ ಭಾರತವನ್ನು ಮಾಡಬೇಕಾಗಿತ್ತು ಪ್ರಾಂತಿಯ ರಾಜ್ಯಗಳನ್ನಾಗಿ.ಇದಕ್ಕೆ ಮಾನದಂಡವಾಗಿ ಬಳಸಲು ನಿರ್ದರಿಸಿದರು ಭಾಷೆಯನ್ನು. ಬಹುಜನರು ಬಳಸುವ ಒಂದು ಭಾಷೆಯ ಜನರ ಒಂದು ಪ್ರದೇಶವಾಗುತ್ತಿತ್ತು ಒಂದು ರಾಜ್ಯ.ಅದಕ್ಕಾಗಿ ನಡೆಯಬೇಕಾಗಿತ್ತು ಭಾಷಾವಾರು ಪ್ರಾಂತಗಳ ರಚನೆ. ಇದರ ಕನಸು ಕಂಡವರು ಮಹಾತ್ಮಾ ಗಾಂಧಿಜಿ, ಅದನ್ನು ಪ್ರಸ್ತಾಪಿಸಿದರು ೧೯೨೦ ನಾಗಪುರ ಅಧಿವೇಶನದಲ್ಲಿ. ಅವರ ಬಿತ್ತಿದ ಬೀಜ ಮೊಳಕೆಯೊಡೆಯಲು ಪ್ರಾರಂಭಿಸಿತು ಫಲವತ್ತಾದ ರಾಜಕೀಯ ಭೂಮಿಯಲ್ಲಿ.

ಅದರ ಅಂಗವಾಗಿ ಭಾಷಾವಾರು ಪ್ರಾಂತಗಳ ಸಮಿತಿಗಳು ರಚನೆಯಾದವು ಈಡಿ ಭಾರತದಲ್ಲಿ. ಅದರ ಕರ್ನಾಟಕದ ಸಾರತ್ಯವನ್ನು ವಹಿಸಿದರು ಸಿದ್ದವ್ವನ ಹಳ್ಳಿಯ ನಿಜಲಿಂಗಪ್ಪನವರು. ೧೯೨೪ ರಲ್ಲಿ ಮತ್ತೊಂದು ಕರ್ನಾಟಕ ಏಕೀಕರಣ ಪರಿಷತ್ತು ಆರಂಭವಾಯಿತು. ಮತ್ತೊಬ್ಬ ಶ್ರೇಷ್ಠ ಕನ್ನಡಿಗ, ಮುತ್ಸದ್ದಿ ಸರ್ ಸಿದ್ದಪ್ಪ ಕಂಬಳಿಯವರ ಅಧ್ಯಕ್ಷತೆಯಲ್ಲಿ.

ಅಕ್ಟೋಬರ್ ೧೯೪೭ ರಲ್ಲಿ ಮೈಸೂರು ಸಂಸ್ಥಾನವು ಭಾರತದ ಪೂರ್ಣ ಪ್ರಮಾಣದ ಮೈಸೂರು ರಾಜ್ಯದ ಉದಯ ವಾಯಿತು. ಆದರೆ ಬಹುತೇಕ ಕನ್ನಡಿಗರು ಮೈಸೂರು ರಾಜ್ಯದಿಂದ ಹೊರಗುಳಿದರು. ಅದರಂತೆ ಮುಂಬೈ ಮತ್ತು ಮದ್ರಾಸ ಶಾಸನ ರಚನೆಗಳು ಆರಂಭಗೊಂಡವು. ಅಂದೆ ನಾಂದಿ ಹಾಡಿದವು ಭಾಷಾವಾರು ಪ್ರಾಂತದ ರಾಜಕೀಯ ಚಟುವಟಿಕೆಗಳು.

ಆಂಧ್ರದಲ್ಲಿ ಪಟ್ಟಾಭಿ ಸೀತಾರಾಮ ಶಾಸ್ತ್ರೀಯವರು ಹೋರಾಟವನ್ನು ಪ್ರಾಂರಂಭಿಸಿದರು. ಆಂಧ್ರಪ್ರದೇಶದ ನಿರ್ಮಾಣಕ್ಕಾಗಿ. ಭಾಷಾವಾರು ಪ್ರಾಂತದ ಕೂಗು ದೇಹಲಿ ತಲುಪಿತು. ಕೇಂದ್ರ ಸರಕಾರ ಜೂನ ೧೯೪೮ ರಲ್ಲಿ ಜಸ್ಟಿಸ್ ಎಸ್. ಕೆ.ಧರಅಧ್ಯಕ್ಷತೆಯಲ್ಲಿ ಭಾಷಾವಾರು ಪ್ರಾಂತ ರಚನಾ ಆಯೋಗ ರಚಿಸಿತು. ಕರ್ನಾಟಕದಿಂದ ಮಾನ್ಯ ಆರ್.ಆರ್.ದೀವಾಕರರವರು ಮತ್ತು ಬಳ್ಳಾರಿಯ ಮಾನ್ಯ ಟಿ. ಸುಬ್ರಹ್ಮಣ್ಯ ರವರು ಇವರಿಬ್ಬರು ಒಂಬತ್ತು ಜನರ ಆಯೋಗದಲ್ಲಿ ಇದ್ದರು . ಇದೊಂದು ಜನರ ಕಣ್ಣೊರೆಸುವ ತಂತ್ರವೆಂದ ತಿಳಿಯಲು ಹೆಚ್ಚು ದಿನ ಹಿಡಿಯಲಿಲ್ಲ ನಾಗರಿಕರಿಗೆ. ಬೃಹತ್ ಸಮಸ್ಯೆಯನ್ನು ಕೇವಲ ೨೪ ದಿನದಲ್ಲಿ ಬಗೆಹರಿಸಲು ಕೇಳಿಕೊಂಡಿತು ದೆಲ್ಲಿ ಸರಕಾರ. ಅಸಾದ್ಯವನ್ನು ಸಾಧ್ಯ ಮಾಡಲು ಧರ ಅಯೋಗ ಪ್ರಾರಂಭಿಸಿತು ತನಗೆ ಕೊಟ್ಟ ಕೆಲಸವನ್ನು. ಜನರ ಆಸೆಯಂತೆ ಹುಬ್ಬಳ್ಳಿಗೆ ಭೇಟಿ ಇತ್ತಿತು ಈ ಆಯೋಗ. ವಾದ ಮಂಡಿಸಲು ಗಡಿನಾಡ ಮಹಿಳೆ ಜಯದೇವಿ ತಾಯಿಗಿಂತ ಸೂಕ್ತ ವ್ಯಕ್ತಿ ಯಾರಿರಲಿಲ್ಲ. ತಮ್ಮ ವಾದವನ್ನು ಸಮರ್ಥವಾಗಿ ಮಂಡಿಸಿದರು. ಎಳೆ ಎಳೆಯಾಗಿ ಬಿಡಿಸಿಟ್ಟರು ಗಡಿನಾಡ ಕನ್ನಡಿಗರ ಬಾಂಧವ್ಯದ ಸಂಗತಿಗಳನ್ನು ಕನ್ನಡನಾಡಿನೊಂದಿಗೆ. ಸೋಲಾಪುರ, ಬೀದರ, ಬೆಳಗಾವಿ, ಬಳ್ಳಾರಿ, ಕೊಳ್ಳೇಗಾಲ,ಕಾಸರಗೋಡು,ಕಾರವಾರ ಜಿಲ್ಲೆಗಳಲ್ಲಿರುವ ಕನ್ನಡಿಗರ ಸಂಖ್ಯೆಯನ್ನಲ್ಲದೆ ಐತಿಹಾಸಿಕ, ಸಾಂಸ್ಕೃತಿಕ , ಸಾಮಾಜಿಕ ,ಔದ್ಯೋಗಿಕ ಕಾರಣಗಳನ್ನು ಸಹ ಗಮನಕ್ಕೆ ತಗೆದುಕೊಳ್ಳಬೇಕೆಂದು ಒತ್ತಾಯಿಸಿದರು ಜಯದೇವಿತಾಯಿ ಲಿಗಾಡೆಯವರು.

ಕರ್ನಾಟಕದವರೆ ಆದ ಶ್ರೀ ಆರ್. ಆರ್. ದಿವಾಕರ ಮತ್ತು ಶ್ರೀ ಟಿ . ಸುಬ್ರಹ್ಮಣ್ಯರವರು ಕರ್ನಾಟಕಕ್ಕೆ ನ್ಯಾಯ ಒದಗಿಸುತ್ತಾರೆಂಬ ಭರವಸೆ ಎಲ್ಲ ಕನ್ನಡಿಗರಲ್ಲಿ. ಆದರೆ ಜನರಂದು ಕೊಂಡ ಹಾಗೆ
ಆಗಲಿಲ್ಲ ಆಯೋಗದಿಂದ. ಅಮ್ಮ ಅಷ್ಟಕ್ಕೆ ಸುಮ್ಮನಾಗಲಿಲ್ಲ, ಕೇಂದ್ರ ಮಂತ್ರಿ ದಿವಾಕರವರ ಮನವಲಿಸಲು ತಮ್ಮ ಸ್ವಂತ ಖರ್ಚಿನಿಂದ ನಾಲ್ವತ್ತು ಜನರ ನೀಯೋಗ ದೆಹಲಿಗೆ ಕಳಿಸಿದರು . ಇತ್ತ ತಾವು ಸ್ವತಃ ಬೆನ್ನುಬಿದ್ದರು ಕರ್ನಾಟಕದ ಪ್ರಭಾವಿ ನಾಯಕ ನಿಜಲಿಂಗಪ್ಪನವರಿಗೆ. ಪದೆ ಪದೆ ಕಂಡು ಅವರನ್ನು ಒತ್ತಾಯ ಮಾಡಿದರು. ಅವರ ಮೇಲೆ ಸಮಗ್ರ ಕನ್ನಡಿಗರ ಅಸ್ಮಿತೆಗಾಗಿ ಹಗಳಿರಲು ದುಡಿದರು .

ಮಂತ್ರಿ ಪದವಿ ತಿರಸ್ಕಾರ

ಜಯದೇವಿ ತಾಯಿ ಲಿಗಾಡೆಯವರ ಕರ್ನಾಟಕದ ಪ್ರೇಮ ಮಹಾರಾಷ್ಟ್ರ ನಾಯಕರಿಗೆ ತಲೆನೋವಾಯಿತು. ಜಯದೇವಿ ತಾಯಿಯನ್ನು ಮಹಾರಾಷ್ಟ್ರದ ಪರವಾಗಿ ವಾಲಿಸಲು ಅನೇಕ ಪ್ರಲೋಭನೆಗಳನ್ನು ಒಡ್ಡಲು ನಿರ್ಧರಿಸಿದರು, ಸೋಲಾಪುರ ಭಾಗದಿಂದ ಶಾಸಕಿಯನ್ನಾಗಿ ಅವರನ್ನು ಚುನಾಯಿಸಿ ಮಂತ್ರಿ ಪದವಿ ಕೊಡುವ ಆಶ್ವಾಸನೆ ಇತ್ತರು, ಆಗ ತಾಯಿ ಒಂದು ಷರತ್ತನ್ನು ಹಾಕಿದರು. ‘ ಮಹಾರಾಷ್ಟ್ರ ರಾಜ್ಯ ವಿಧಾನ ಸಭೆಯಲ್ಲಿ ಸೋಲಾಪುರವನ್ನು ಕರ್ನಾಟಕಕ್ಕೆ ಸೇರಿಸುವ ವಿಚಾರವನ್ನು ತಾವು ಬಹಿರಂಗ ಪಡಿಸಲು ಅವರ ಒಪ್ಪಿಗೆ ಇದ್ದರೆ ಮಾತ್ರ ತಾವು ಮಹಾರಾಷ್ಟ್ರದ ಶಾಸನ ಸಭೆಗೆ ಹೋಗಲು ಸಿದ್ದರೆಂದರು‘. ಕಠಿಣ ಸವಾಲು ಸ್ವಿಕರಿಸದೆ,ದಾರಿಕಾಣದ ಮರಾಠಿಗರು ಸುಮ್ಮನಾದರು .

ಧರ ಅಯೋಗದ ವರದಿಯನ್ನು ಪರಿಶೀಲಿಸಿ ಅನುಷ್ಠಾನಗೊಳಿಸಲು ಕೇಂದ್ರ ಸರಕಾರವು ಮತ್ತೊಂದು ಸಮಿತಿ ನೇಮಕಮಾಡಿತು. ಅದರಲ್ಲಿದ್ದರು ಅಖಂಡ ಭಾರತದ ಘಟಾನುಗಟಿ ನಾಯಕರು, ಜವಾಹರಲಾಲ ನೆಹರು, ಸರದಾರ ಪಟೇಲ ಮತ್ತು ಪಟ್ಟಾಭಿಸೀತಾರಾಮಯ್ಯ ನವರು. ಧರ ಅಯೋಗದ ವರದಿಯನ್ನು ಒಪ್ಪಿದರು ಈ ಮೂವರು, ಅದರೆ ವರದಿಯನ್ನು ಅನುಷ್ಠಾನ ಗೋಳಿಸಲು ಆಗದೆಂದರು. ಕಾರಣ ಮೈಸೂರು ಕೇರಳಗಳ ಭಿನ್ನಾಭಿಪ್ರಾಯದ ಕಥೆ ಹೇಳಿ. ಸಮಸ್ಯೆಗೆ ಪರಿಹಾರ ಹುಡುಕಲು ಸಮಯ ಬೇಕೆಂದು ವರದಿಯನ್ನು ಮೂಲೆಗೆತಳ್ಳಿದರು .

ಜಯದೇವಿ ತಾಯಿ ಲಿಗಾಡೆಯವರು ಕೈ ಕಟ್ಟಿಕೊಂಡು ಕೂಡಲಿಲ್ಲ. ಸೊಲ್ಲಾಪುರದಲ್ಲಿ ಒಂದು ಸಭೆ ಕರೆದರು, ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಕೇಂದ್ರ ಮತ್ತು ರಾಜ್ಯ ಶಾಸನ ಸಭೆಗಳಿಗೆ ಚುನಾಯಿತರಾದ ಸದಸ್ಯರಿಗೆ ರಾಜೀನಾಮೆ ಸಲ್ಲಿಸಲು ಹೇಳಿದರು.ಅದೆ ಸಮಯದಲ್ಲಿ ಬಂತು ರಾಷ್ಟ್ರೀಯ ಜನಗಣತಿ. ಅದರಲ್ಲಿ ಗಡಿನಾಡಲ್ಲಿರುವ ಕನ್ನಡಿಗರು ಕನ್ನಡ ಭಾಷಿಗರೆಂದು ನಮೂದಿಸಬೇಕು ಜನರಲ್ಲಿ ಅರಿವು ಮೂಡಿಸಿದರು , ಪರಿಣಾಮ ಕನ್ನಡಿಗರ ಸಂಖ್ಯಾ ಬಲ ವೃದ್ದಿಸುವದೆಂಬ ಸತ್ಯ ಅರಿತ ಅವರು ಕನ್ನಡಿಗರೆಂದು ಬರೆಸಲು ಹೈದರಾಬಾದ ಕರ್ನಾಟಕ, ಮುಂಬೈ ಕರ್ನಾಟಕದ ಹಳ್ಳಿ ಹಳ್ಳಿಗಳಿಗೆ ತೆರಳಿ ಜನ ಜಾಗ್ರತಿ ಮುಡಿಸಿಲು ಪ್ರಾರಂಭಿಸಿದರು. ಶ್ರೀಮಂತ ವಾರದ ಮಲ್ಲಪ್ಪನವರ ಕುಟುಂಬದವರು ತಮ್ಮನ್ನು ಕಾಣಲು ಹಳ್ಳಿಗೆ ಬರುತ್ತಾರೆಂದು ಜನರು ತಮ್ಮ ತಮ್ಮ ಊರುಗಳನ್ನು ತಳಿರು ತೋರಣಗಳಿಂದ ಶ್ರಿಂಗರಿಸಿ ಆರತಿ ಎತ್ತಿ ಅಮ್ಮನನ್ನು ಸ್ವಾಗತಿಸುತ್ತಿದ್ದರು. ಮುಖ್ಯಮಂತ್ರಿಗಳಿಗೂ ಕಡಿಮೆ ಇಲ್ಲದ ಸ್ವಾಗತ ಸಿಗುತ್ತಿತ್ತು ಅಮ್ಮನಿಗೆ.

ಒಂದ ಬದಿಯಲ್ಲಿ ಕ್ರಿಯೆ ಪ್ರಾರಂಭವಾದರೆ ಎದುರು ಬದಿಯಲ್ಲಿ ಪ್ರತಿರೋಧ ಪ್ರಾರಂಭವಾಗುವದು. ಮರಾಠಿಗರು ಒಂದುಗೂಡಿ ತಮ್ಮ ಹಕ್ಕನ್ನು ಮಂಡಿಸಲು ಪ್ರಾರಂಭಿಸಿದರು .ಸೊಲ್ಲಾಪುರ, ಕಾರವಾರ, ಬೆಳಗಾವಿ ತಮ್ಮದೆಂದರು. ಬೀದರ ರಾಯಚೂರು, ಗುಲ್ಬುರ್ಗಾ ಜಿಲ್ಲೆಗಳು ತಮ್ಮವೆಂದರು ಆಂಧ್ರದವರು. ಕನ್ನಡದ ಕಾಸರಗೋಡು ಬೇಕೆಂದರು ಕೇರಳಿಗರು. ಈ ಭಾಗದ ಜನರನ್ನು ಜಾಗ್ರತೆಗೊಳಿಸಲು ಅಮ್ಮಜನಸಂಪರ್ಕ ಸಭೆ ಹಾಕಿಕೊಳ್ಳಲಾರಂಬಿಸಿದರು .

ರಕ್ತಪತ್ರ
ಗಾಂಧಿಜಿಯ ಹೊರಟು ಹೋದರೂ ಭಾರತಿಯರ ಕೈಗೆ ನೀಡಿದ್ದರು ಉಪವಾಸ ಸತ್ಯಾಗ್ರಹದ ಅಸ್ತ್ರ. ಭಾಷಾವಾರು ಪ್ರಾಂತಗಳ ಬೇಡಿಕೆಗಾಗಿ ಆ ಅಸ್ತ್ರ ಪ್ರಯೋಯೋಗಿಸಲು ಪ್ರಾರಂಭಿಸಿದರು ಹೋರಾಟಗಾರರು. ಶ್ರೀ ರಾಮಲುಪೊಟ್ಟಿ ಉಪವಾಸ ಕುಳಿತರು ಆಂದ್ರದಲ್ಲಿ, ಅವರ ಸತ್ಯಾಗ್ರಹ ೫೮ ನೆ ದಿನಕ್ಕೆ ಕಾಲಿಟ್ಟಿತು. ಆಂದ್ರದ ಪ್ರಭಾವವಾಗರಂಬಿಸಿತು ಕರ್ನಾಟಕದ ಮೇಲೆ, ಧಾರವಾಡ ಜಿಲ್ಲೆಯ ಅದರ ಗುಂಚಿ ಶಂಕರಗೌಡರು ಕುಳಿತರು ಉಪವಾಸ. ಅವರ ಉಪವಾಸ ಸತ್ಯಾಗ್ರಹ ಕಾಲಿಟ್ಟಿತು ೨೩ನೆಯ ದಿವಸಕ್ಕೆ. ಆಗ ಸೊಲ್ಲಾಪುರದಲ್ಲಿ ಅಮ್ಮ ಸೇರಿದ್ದರು ಆಸ್ಪತ್ರೆ. ಅವರಿಗಾಗಲಿತ್ತು ಶಸ್ತ್ರಚಿಕಿತ್ಸೆ. ಚಡಪಡಿಸಿದಳು ಅಮ್ಮ. ತಡಮಾಡದೆ ಬರೆದರೊಂದು ಪತ್ರ ತಮ್ಮ ರಕ್ತದಲ್ಲಿ, ಬೆಂಬಲವಿತ್ತರು ಹೋರಾಟಕ್ಕೆ.

ನಿಜಲಿಂಗಪ್ಪನವರ ರಾಜೀನಾಮೆ

ಡಿಸೆಂಬರ್ ತಿಂಗಳಲ್ಲಿ ಜಯನಿಕೇತನ ಸಭೆಯಲ್ಲಿ ಶಾಸನ ಸಭೆಗೆ ರಾಜೀನಾಮೆ ಕೊಡಲು ಕೇಳಿಕೊಂಡಿದ್ದರು.ಆಗಲೆ ಕಾಡಾದಿಯವರು ರಾಜೀನಾಮೆ ಸಲ್ಲಿಸಿದ್ದರು.ಉಳಿದವರ ರಾಜೀನಾಮೆಗೆ ಮಹಿಳಾ ಪರಿಷತ್ತಿನವರಿಂದ ಒತ್ತಾಯ ಅಧಿಕವಾಯಿತು . ಸ್ವತಃ ನಿಜಲಿಂಗಪ್ಪನವರು ಮತ್ತು ಅನೇಕ ಕರ್ನಾಟಕದ ನಾಯಕರು ರಾಜೀನಾಮೆ ಸಲ್ಲಿಸಿದರು. ಅಮ್ಮನ ಅವಿರತ ದುಡಿಮೆ ನಿಜಲಿಂಗಪ್ಪನವರ ರಾಜೀನಾಮೆ ರಾಜ್ಯವನ್ನು ತತ್ತರಿಸುವಂತೆ ಮಾಡಿತು. ಇತ್ತ ಆಂದ್ರದಲ್ಲಿ ಶ್ರಿರಾಮಲು ಪೊಟ್ಟಿ ಹುತಾತ್ಮನಾದ ತನ್ನ ಉಪವಾಸ ಸತ್ಯಾಗ್ರಹದಿಂದ. ಇನ್ನು ಆ ಬೆಂಕಿ ಪಸರಿಸಿ ಕರ್ನಾಟಕಕ್ಕೆ ತಗುಲಿ ಉರಿಯುವದೊಂದು ಬಾಕಿ ಇತ್ತು. ಕೇಂದ್ರ ಸರಕಾರ ಆಂಧ್ರದ ಬೇಡಿಕೆಗೆ ಅಸ್ತು ಅಂದಿತು. ೧೯೫೩ರಲ್ಲಿ ಉದಯವಾಯಿತು ಆಂಧ್ರಪ್ರದೇಶ. ಆದರೆ ನಿರಂತರ ಹೋರಾಟದ ಫಲವಾಗಿ ಬಳ್ಳಾರಿ ಕರ್ನಾಟಕದಲ್ಲಿ ಉಳಿಯಿತು.

ಫಜಲ್ಅಲಿ ಆಯೋಗ.

ನೆಹರು ಸರಕಾರ ೧೯೫೩ರಲ್ಲಿ ಮತ್ತೊಂದು ಆಯೋಗ ರಚಿಸಿತು,ಆಗ ಅಧ್ಯಕ್ಷರಾದರು ಫಜಲ್ ಅಲಿ.ಈ ಭಾರಿ ನೀಡಿದರು ಪೂರ್ಣ ಸಮಯಾವಕಾಶ. ಹದಿನೆಂಟು ತಿಂಗಳಲ್ಲಿ ವರದಿ ನೀಡಬೇಕೆಂದು ಕೇಳಿಕೊಂಡಿತು ನೆಹರು ಸರಕಾರ. ಬಳ್ಳಾರಿಯ ಮೂರು ತಾಲೂಕಗಳು ಆಂದ್ರ ಸೇರಬೇಕು ಎಂಬ ಆಯೋಗದ ತಪ್ಪು ನಿರ್ಧಾರ ಜನರನ್ನು ರೊಚ್ಚಿಗೆಬ್ಬಿಸಿತು. ಅದರ ಬಿಸಿ ತಟ್ಟಿತು ನಿಜಲಿಂಗಪ್ಪ,ಎಸ ಆರ್ ಕಂಠಿ, ಹಳ್ಳಿಕೇರಿ ಗುದ್ಲಪ್ಪನಂತಹ ನಾಯಕರಿಗೂ ಸಹ. ಕರ್ನಾಟಕದ ಈ ನಾಯಕರನ್ನು ಜನರು ತಳ್ಳು ನುಕಾಟ್ಟಕ್ಕೆ ತಂದಿತು ಜನರ ಸಿಟ್ಟು ಆಕ್ರೋಶವು .

ಹೋರಾಟದ ಇನ್ನೊಂದು ಮುಖವೆ ಜಯದೇವಿತಾಯಿ ಎಂಬಂತಾಯಿತು ಜನಮನದಲ್ಲಿ. ಎಲ್ಲ ನಾಯಕರು ಅಮ್ಮನ ಅಣತಿಗಾಗಿ ಕಾಯುತ್ತಿರುವರೆಂಬ ಭಾವನೆ ಬರುತ್ತಿಲಿತ್ತು. ಎಲ್ಲರ ಆಸೆಯಂತೆ ೧೯೫೬ ನವೆಂಬರ ಒಂದರಂದು ಕನ್ನಡ ನುಡಿಯುವವರು ಒಂದಾದರು. ಆದರೆ ಜಯದೇವಿ ತಾಯಿ ಲಿಗಾಡೆಯವರ ಕನ್ನಡದ ಸೋಲಾಪುರ ಮಹಾರಾಷ್ಟ್ರಕ್ಕೆ ಹೋಯಿತು. ಮರಾಠಿ ಪ್ರಾಬಲ್ಯದ ಬೆಳಗಾವಿ ಕರ್ನಾಟಕಕ್ಕೆ ಬಂದಿತು. ಬಳ್ಳಾರಿ ಸಂಪೂರ್ಣವಾಗಿ ಕರ್ನಾಟಕದ್ದಾಗಿತ್ತು. ಕೊಡಗಿನ ಅರಸರು ಆಗಲೆ ಮೈಸೂರ ರಾಜ್ಯವನ್ನು ಸೇರಿದ್ದರು. ಕೇರಳಿಗರು ಕಾಸರಗೋಡನ್ನು ಕಬಳಿಸಿದರು. ಒಂದನ್ನು ಕಳೆದುಕೊಂಡು ಇನ್ನೊಂದು ಸಂಪಾದಿಸಿತ್ತು ಅಮ್ಮನ ಕನಸು.

ಭ್ರಮ ನಿರಸನವಾದ ಅಮ್ಮನ ಮನಸ್ಸು ನಿಲ್ಲಲಿಲ್ಲ ಹುಟ್ಟಿದೂರು ಸೋಲ್ಲಾಪುರದಲ್ಲಿ. ಕನ್ನಡದ ಮಣ್ಣಿನಲ್ಲಿ ಮಣ್ಣಾಗಲು ಬಯಸಿದಳು. ಆರಿಸಿದಳು ಬಸವಣ್ಣನ ಕರ್ಮಭೂಮಿ ಬಸವಕಲ್ಯಾಣವನ್ನು. ಅಲ್ಲಿ ತಮ್ಮ ಕೊನೆಗಾಲದ ದಿನಗಳನ್ನುಕಳೆಯಲು ನಿರ್ಧರಿಸಿದರು . ಸೊಲ್ಲಾಪುರ ತೊರೆದು ಬಸವಕಲ್ಯಾಣಕ್ಕೆ ಹೊರಟು ಬಿಟ್ಟರು ಮಾತೃ ಸ್ವರೂಪಿಣಿ ಜಯದೇವಿ ತಾಯಿ ಲಿಗಾಡೆ. ಅಮ್ಮನಿಗೆ ಬಸವಣ್ಣನ ಕರ್ಮಭೂಮಿಯಲ್ಲಿ ಮಣ್ಣಲ್ಲಿ ಮಣ್ಣಾಗುವ ದಿನ ಬಂದೆ ಬಿಟ್ಟಿತು. ೨೬.೦೭.೧೯೮೬ರಲ್ಲಿ ಲಿಂಗದಲ್ಲಿ ಲೀನವಾದಳು ಜಯದೇವಿ ತಾಯಿ ಲಿಗಾಡೆ. ಕನ್ನಡಕ್ಕಾಗಿ ಮಡಿದಳು ಮರಾಠಿ ಆಯೀ. ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಜೊತೆಗೆ ನೂರಾರು ಪ್ರಶಸ್ತಿ ಗೌರವವನ್ನು ಪಡೆದ ಒಂಟಿ ಸಲಗ ದಿವ್ಯ ಚೇತನ .

-ಡಾ.ಶಶಿಕಾಂತ ಪಟ್ಟಣ ರಾಮದುರ್ಗ 9552002338

Don`t copy text!