ವಾಸ್ತವದ ಒಡಲು
ವಿಭೂತಿ ಮಾತನಾಡಿದ ಪರಿ
ಈ ಬದುಕಿನ ಓಟದಲ್ಲಿ ಬಿಡುವಿಲ್ಲದ ಜೀವನ ಸಾಗಿಸುವುದು ಇಂದಿನ ಅನಿವಾರ್ಯತೆ. ಕೆಲವು ಕೆಲಸಗಳ ಪಟ್ಟಿ ಮಾಡಿಕೊಂಡು, ಇವತ್ತಿನ ದಿನ ಇಷ್ಟು ಮುಗಿಸಲೇ ಬೇಕೆಂದು ನಿಯಮ ಹಾಕಿಕೊಂಡೇ ಹೊರಟೆ. ಅವ್ವನ ಭಾವಚಿತ್ರದ ಬಳಿ ಇದ್ದ ವಿಭೂತಿಯ ಭಸ್ಮ ಹಚ್ಚಿಕೊಂಡು ಮನೆಯಿಂದ ಹೊರ ಬಿದ್ದಾಗ ಬಿಸಿಲು ನಿಧಾನಕೆ ಚುರುಕಾಗುವುದರಲ್ಲಿತ್ತು.
ಸದಾ ಹಣೆಯ ಮೇಲೆ ವಿಭೂತಿ ಧರಿಸುವುದು ಅಭಿಮಾನದ ಸಂಗಾತಿಯಾದರೂ, ಸ್ವಾಭಿಮಾನ ಮೂಡಿಸುವ ಸಾಧನವೂ ಹೌದು. ಈ ಜಗತ್ತಿನಲ್ಲಿ ಎಲ್ಲರೂ ಹಚ್ಚಿಕೊಳ್ಳಬಹುದಾದ ಏಕೈಕ ಭಸ್ಮ. ಅದಕ್ಕೆ ಯಾವುದೇ ಅಡೆತಡೆ, ಬೇಧಭಾವವಿಲ್ಲ. ಮೇಲ್ವರ್ಗ-ಕೆಳವರ್ಗ, ಹೆಣ್ಣು-ಗಂಡು, ಒಳಗೆ-ಹೊರಗೆ, ಮಡಿ-ಮೈಲಿಗೆ, ದೊಡ್ಡವರು-ಚಿಕ್ಕವರು, ವಿಧವೆ-ವಿಧುರ, ಹೀಗೆ ಯಾವುದೇ ನಿರ್ಬಂಧವಿಲ್ಲದೆ ನಿರಾತಂಕವಾಗಿ ಬಳಸಬಹುದು. ವಿಭೂತಿ ಧರಿಸಿದಾಗ ಆಗುವ ಸ್ವಾತಿಕ ಭಾವ ನನ್ನೊಳಗೆ ಇಳಿದಂತೆ ಭಾವಿಸಿ ಸಂಭ್ರಮಿಸುತ್ತೇನೆ.
ಇದನ್ನು ಸಗಣಿಯಿಂದ ತಯಾರಿಸಿರುವುದರಿಂದ ಚರ್ಮದ ಕಾಂತಿಗೆ ಧಕ್ಕೆ ತರುವುದಿಲ್ಲ. ವೈಜ್ಞಾನಿಕವಾಗಿ ಸಾಬೀತು ಪಡಿಸಲಾಗಿದೆ. ಅದಕ್ಕಾಗಿಯೇ ಹನ್ನೆರಡನೇ ಶತಮಾನದ ಶರಣರು ಹಾಕಿ ಕೊಟ್ಟ ಸುಸಂಸ್ಕೃತ ಪರಂಪರೆ ಇನ್ನೂ ಮುಂದುವರಿದಿದೆ. ಅದೇ ಗುಂಗಿನಲ್ಲಿ ಹೋಗಬೇಕಾದ ಸ್ಥಳ ತಲುಪಿದೆ.
ಆಫೀಸಿನ ಮೆಟ್ಟಿಲು ಹತ್ತಿ ಒಳಗೆ ಪ್ರವೇಶಿಸಿದೆ. ಅಲ್ಲಿ ವಿಪರೀತ ಜನಜಂಗುಳಿ. ದೊಡ್ಡದಾದ ಸಾಲು ನೋಡಿ ಸುಸ್ತಾದ ಅನುಭವ. ಬೇರೆ ದಾರಿ ಇಲ್ಲದೆ, ಅದೇ ಸಾಲಿನಲ್ಲಿ ನಿಲ್ಲಬೇಕಾಯಿತು.
ಆಗ ಅಪರಿಚಿತರೊಬ್ಬರು ‘ಶರಣಾರ್ಥಿ ರೀ ಅವ್ವ’ ಅಂದರು. ಅವರ ದನಿಗೆ, ಕೂಡಲೆ ಹೊರಳಿ ನೋಡುತ್ತ, ‘ಶರಣು ಶರಣಾರ್ಥಿ ರೀ’ ಅಂದೆ.
ಹಾಗೆ ಹೇಳಿದವರು ಯಾರೆಂದು ಗೊತ್ತಿಲ್ಲ. ಪರಿಚಯ ಇದ್ದಾಗಲೇ ಇಷ್ಟು ವಿಶ್ವಾಸದಿಂದ ಶರಣು ಹೇಳಿದ್ದಾರೆನಿಸಿ ಒಂದು ಕ್ಷಣ ಮೌನವಾದೆ.
ಮನುಷ್ಯನಿಗೆ ಮಾತು ಬಹುದೊಡ್ಡ ಕೊಡುಗೆ. ಎಲ್ಲಾ ಜೀವಿಗಳಿಗಿಂತಲೂ ಬುದ್ಧಿಜೀವಿಯಾದ ನಾವು ನಮ್ಮ ಮಾತಿನ ಮೂಲಕ ಎಲ್ಲಾ ತರಹದ ಸಂವಹನ ನಡೆಸುತ್ತೇವೆ. ಅನೇಕ ಮಾಧ್ಯಮಗಳ ಮೂಲಕ ಇತರರನ್ನು ಸುಲಭವಾಗಿ ತಲುಪುವ ಇಂದಿನ ತಂತ್ರಜ್ಞಾನದ ಮಾಧ್ಯಮಗಳು ಅನೇಕರನ್ನು ಪರಿಚಯಿಸುತ್ತಿದೆ, ಹಾಗೆಯೇ ಹತ್ತಿರವಾಗಿಸುತ್ತಿದೆ. ಹೀಗೆ ಮಾತಿನ ಮಾಯಾಜಾಲದಲ್ಲಿ ಈ ಅಪರಿಚಿತರೊಂದಿಗೆ ಆಶ್ಚರ್ಯಕರ ಅನುಭವವಾಯಿತು.
ಶರಣಾರ್ಥಿ ಹೇಳಿದವರ ಪರಿಚಯವಿಲ್ಲ. ಆದರೆ ಅವರು ಮಾತ್ರ ಆತ್ಮೀಯತೆಯಿಂದ ಮಾತಿಗಾರಂಭಿಸಿದ್ದರು. ಅವರು ಕೇಳಿದ ಪ್ರಶ್ನೆಗಳಿಗೆಲ್ಲಾ ಉತ್ತರಿಸುತ್ತಾ ಹೋದೆ. ಒಬ್ಬ ಅಪರಿಚಿತ ಮಹಿಳೆಯನ್ನು ಎಷ್ಟು ಪರಿಚಿತರ ಹಾಗೆ ಮಾತನಾಡಿಸಿದರಲ್ಲ! ಎನ್ನುವುದೇ ಕುತೂಹಲ. ಸಾಹಿತ್ಯಿಕವಾಗಿ ತೊಡಗಿಸಿಕೊಂಡಿರುವುದರಿಂದ ಇಂತಹ ಸಂದರ್ಭಗಳು ಎದುರಾಗುವುದು ಸಹಜವೆಂದುಕೊಂಡು ಮನಸಿಗೆ ಸಾಮಾಧಾನಿಸಿದೆ.
ಆ ಅಪರಿಚಿತ ವ್ಯಕ್ತಿ ವಯಸ್ಸಿನಲ್ಲಿ ಹಿರಿಯರು. ಬಿಳಿ ಪೈಜಾಮ, ಬಿಳಿ ಅಂಗಿ ತೊಟ್ಟಿದ್ದರು. ಸುಮಾರು ಎಂಬತ್ತು ವರ್ಷದ ಆಸುಪಾಸಿನವರಂತೆ ಕಾಣುತ್ತಿದ್ದರು. ಕೈಯಲ್ಲಿ ಸ್ಮಾರ್ಟ್ ಫೋನ್ ಹಿಡಿದುಕೊಂಡಿದ್ದರು. ನನ್ನ ಬಗ್ಗೆ ಒಂದು ಹಂತದವರೆಗೆ ತಿಳಿದುಕೊಂಡ ಮೇಲೆ ನನ್ನ ನಂಬರ್ ಕೇಳಿದರು. ತಮ್ಮ ಮೊಬೈಲ್ನಲ್ಲಿ ಕಾಂಟ್ಯಾಂಕ್ಟ್ಸ್ ತೆಗೆದು ನನ್ನ ಮುಖ ನೋಡಿದರು. ಕೂಡಲೆ ನಂಬರ್ ಹೇಳಿದೆ. ಫೀಡ್ ಮಾಡಿಕೊಂಡರು. ಈ ವಯಸ್ಸಿನಲ್ಲಿ ಅವರ ಚುರುಕುತನ ನೋಡಿ ಸಂತೋಷವಾಯಿತು.
‘ನಮ್ ಮಠದ ಅಪ್ಪೋರಿಗೆ ನಿಮ್ಮಂಥವರನ್ನು ಕಂಡ್ರ ಬಹಳ ಅಪರೂಪರ್ರಿ’ ಎನ್ನುತ್ತ ನನ್ನನ್ನು ತಮ್ಮ ಮಠಕ್ಕೆ ಅತಿಥಿಯಾಗಿ ಆಹ್ವಾನಿಸುತ್ತೇನೆಂದು ಅಭಿಮಾನದಿಂದ ಹೇಳಿದರು.
ನಾನು ಇರುವುದು ಎಲ್ಲಿ? ಅವ್ವ, ಅಪ್ಪ, ಅಣ್ಣ, ತಮ್ಮ, ಅಕ್ಕ, ತಂಗಿ, ವೃತ್ತಿ, ಹವ್ಯಾಸ, ಪ್ರತಿಯೊಂದನ್ನು ಕೇಳಿ ಕೇಳಿ ತಿಳಿದುಕೊಂಡರು. ಎಳೆ ಎಳೆಯಾಗಿ ಬಿಡಿಸಿ ಹೇಳಿದೆ. ಮನುಷ್ಯನಿಗೆ ಕುತೂಹಲ ಸಹಜ. ಆದರೆ ಈ ಪರಿ ಕೇಳುತ್ತಾರಲ್ಲ! ಇದೇನು? ಪ್ರಶ್ನೆ ಏಳುತ್ತಲೇ ಇತ್ತು. ಆದರೂ ಸೌಜನ್ಯದಿಂದ ಉತ್ತರಿಸುತ್ತ ಮಾತು ಮುಂದುವರಿಸಿದೆ.
ಮಾತಿನ ಭರದಲ್ಲಿ ಸಾಗಿರುವಾಗ, ನನ್ನವ್ವ, ಅಪ್ಪನ ಪರಿಚಯ ಅವರಿಗಿತ್ತು ಎನ್ನುವುದು ತಿಳಿಯಿತು. ಅವ್ವ ಬದುಕಿದ್ದಾಗ ನಮ್ಮ ಮನೆಗೆ ಬಂದು ಹೋಗುತ್ತಿದ್ದರಂತೆ. ಅವರ ಒಡನಾಟದ ಅನುಭವ ಹೇಳಿಕೊಂಡು ಸಂಭ್ರಮಿಸಿದರು. ಅವ್ವನ ಕೈ ರುಚಿ, ಸೌಮ್ಯ ಸ್ವಭಾವ, ವೇದಿಕೆಯ ಮೇಲಿನ ದಿಟ್ಟತನ ನೆನಪಿಸಿಕೊಂಡರು. ಅಪ್ಪನ ಕಾಳಜಿ, ನಿಷ್ಟುರತೆ, ಖಡಾಖಂಡಿತವಾಗಿ ಮಾತನಾಡುವ ರೀತಿ ಎಲ್ಲವನ್ನೂ ಮೆಲುಕು ಹಾಕಿದರು. ನನಗದು ಪುಳಕ ಕೊಟ್ಟ ಸಮಯವಾಗಿ ಖುಶಿಪಟ್ಟೆ.
ಅಪ್ಪನ ಸ್ನೇಹಿತರೇ ಆದ್ದರಿಂದ ಈಗ ಮಾತು ಸಲುಗೆಯ ಕಡೆಗೆ ಹೊರಳಿತು. ಬೀದರಿನ ಭಾಷಾ ಸೊಗಡಿನಲ್ಲಿ ಹಂಗ್ ಬೆಟಾ, ಹಿಂಗ್ ಬೆಟಾ, ಖಂಗಾ, ಖಿಂಗಾ ಆತ್ಮೀಯ ದನಿಯಲ್ಲಿ ಹೇಳತೊಡಗಿದರು. ಈಗ ಅವ್ವ ಅಂತೂ ಇಲ್ಲ, ಅಪ್ಪನನ್ನು ಚೆನ್ನಾಗಿ ನೋಡಿಕೊಳ್ಳುವುದೊಂದೇ ನನ್ನ ಗುರಿಯಾಗಿರಬೇಕೆಂದು ಹೇಳುವಾಗ ಸ್ನೇಹದ ಕಕ್ಕುಲತೆ ಎದ್ದು ಕಾಣುತ್ತಿತ್ತು.
ಅಪ್ಪನಿಗೆ ಮೊಬೈಲ್ ಕೊಡಿಸಿ, ಅವರಿಗೂ ಬಳಸುವುದನ್ನು ಹೇಳಿ ಕೊಟ್ಟ ಸಂಗತಿ ವಿವರಿಸಿದೆ. ಈಗ ಅಪ್ಪ ಕಳೆದು ಹೋಗುವುದು ಯೂಟ್ಯೂಬ್‌ನಲ್ಲಿ ಮತ್ತು ವಾಟ್ಸ್ ಆಪ್‌ನಲ್ಲಿ ಎಂದಾಗ ಮನಸೋ ಇಚ್ಛೆ ನಕ್ಕರು. ನನ್ನ ಬೆನ್ನು ಚಪ್ಪರಿಸುತ್ತ ‘ಪ್ರೌಡ್ ಆಫ್ ಯು ಬೆಟಾ’ ಅಂದರು. ಮಧ್ಯೆ ಮಧ್ಯೆ ಇಂಗ್ಲೀಷ್ ಬಳಸುತ್ತಿದ್ದರು. ಅಬ್ಬಾ! ಎನಿಸುವಷ್ಟು ಶಿಸ್ತು ಅವರಲ್ಲಿತ್ತು. ಅಷ್ಟೇ ಸರಳವೂ ಇದ್ದರು.
ನಾವು ಇಬ್ಬರೂ ಬಂದ ಕೆಲಸ ಮರೆತು ಆಳವಾಗಿ ಮಾತನಾಡುತ್ತಲೇ ಕುಳಿತಿದ್ದೆವು. ಕ್ಯೂ ದೊಡ್ಡದಾಗಿದ್ದರಿಂದ ನಮಗೆ ಸಮಯ ಕಳೆಯಲು ಅರ್ಥಪೂರ್ಣ ಎನಿಸಿತು. ಕೊನೆಗೆ ನನಗೊಂದು ಪ್ರಶ್ನೆ ಕಾಡಿತು. ಇಲ್ಲಿ ಎಷ್ಟೊಂದು ಜನ ಓಡಾಡುತ್ತಿದ್ದಾರೆ. ಆದರೆ ಯಾರೂ ಯಾರನ್ನೂ ಮಾತನಾಡಿಸುವುದಿಲ್ಲ. ಇವರು ಹೇಗೆ ಶರಣಾರ್ಥಿ ಹೇಳಿದರು? ಕೇಳೇ ಬಿಡುವ ಎಂದುಕೊಂಡು ಕೇಳಿದೆ. ಆಗ ಅವರು ಕೊಟ್ಟ ಉತ್ತರ ಕೇಳಿ ಮನಸು ತುಂಬಿ ಬಂತು.
‘ನಿನ್ನ ಹಣೆಯ ಮೇಲಿನ ವಿಭೂತಿ ನೋಡಿದೆ ಮಗಾ, ಅಪರಿಚಿತರು ಅಂತ ಗೊತ್ತಿದ್ದೂ ಮಾತಾಡಿಸಿದೆ. ಶರಣರ ಅನುಯಾಯಿಗಳು ಎನ್ನುವ ಅಭಿಮಾನಕ್ಕೆ ಪರಿಚಯ ಬ್ಯಾಡ ಮಗಾ’. ಅವರ ಮಾತಿಗೆ ಮನಸು ಮೂಕವಾಗಿ ಸಮಾಧಾನದ ನಿಟ್ಟುಸಿರು ಬಿಟ್ಟೆ.
ಈ ಜಗತ್ತಿನಲ್ಲಿ ಮನೆಯಿಂದ ಹೊರಗೆ ಹೊರಟರೆ, ಬರೀ ಕೆಟ್ಟದ್ದೇ ಎದುರಾಗುತ್ತದೆ ಎನ್ನುವುದನ್ನು ಸುಳಾಗಿಸಿದ ದಿನ ಇಂದು. ನೆಗೆಟಿವ್ ಭಾವನೆಗಳ ಸುಡುವ ಶಕ್ತಿ ಭಸ್ಮಕ್ಕಿರುವುದು ಸಾಬೀತಾಯಿತು. ನಿಜ! ಇದ್ದಾರೆ. ಇನ್ನೂ ಇದ್ದಾರೆ. ಸಜ್ಜನರು! ಮೊದಲು ನಮ್ಮನ್ನು ನಾವು ಸಜ್ಜನಿಕೆಯತ್ತ ಮುಖ ಮಾಡಿ ಹೆಜ್ಜೆ ಹಾಕೋಣ.
–ಸಿಕಾ ಕಲಬುರ್ಗಿ