ಸತ್ಯ ನಿಷ್ಠೆಯ ಶರಣೆ ಕಾಮಮ್ಮ

ಸತ್ಯ ನಿಷ್ಠೆಯ ಶರಣೆ ಕಾಮಮ್ಮ

ಬಸವಾದಿ ಶರಣರ ಕಾಲದಲ್ಲಿ ಇದ್ದ ಅನೇಕ ಶರಣೆಯರಲ್ಲಿ ಶರಣೆ ಕಾಮಮ್ಮ ಒಬ್ಬಳು. ಇವಳನ್ನು ಕಾಲಕಣ್ಣಿ ಕಾಮಮ್ಮ ಎಂದೂ ಕರೆಯುತ್ತಾರೆ. ದನಕರುಗಳನ್ನು ಕಟ್ಟುವ ಹಗ್ಗಕ್ಕೆ ಕಣ್ಣಿ ಎನ್ನುವರು. ಬಹುಶಃ ಕೊರವರ ಜಾತಿಗೆ ಸೇರಿರಬಹುದಾದ ಈಕೆ ಕಣ್ಣಿ ಹೊಸೆದು ಮಾರುವ ವೃತ್ತಿಯವಳೆಂದು ತಿಳಿದು ಬರುತ್ತದೆ. ಬಸವಣ್ಣನವರ ಭಕ್ತಿ ಮಾರ್ಗಕ್ಕೆ ಓಗೊಟ್ಟು ಬಂದು ಲಿಂಗದೀಕ್ಷೆ ಪಡೆದವಳು ಕಾಮಮ್ಮ. ಇವಳ ಒಂದೇ ವಚನ ಲಭ್ಯವಾಗಿದೆ. ಈಕೆಯ ಅಂಕಿತನಾಮ ನಿರ್ಭೀತ ನಿಜಲಿಂಗ.

ಎನ್ನ ಕರಣಂಗಳ ಲಿಂಗದಲ್ಲಿ ಕಟ್ಟುವೆ
ಗುರು ಲಿಂಗ ಜಂಗಮದ ಕಾಲ ಕಟ್ಟುವೆ 
ವ್ರತಭ್ರಷ್ಟರ ನಿಟ್ಟೊರಸುವೆ, ಸುಟ್ಟು ಸುರಸುರನೆ ತೂರುವೆ
ನಿರ್ಭೀತ ನಿಜಲಿಂಗದಲ್ಲಿ
ಅವಳ ಈ ವಚನದಲ್ಲಿ ಅವಳಿಗಿದ್ದ ಸಾತ್ವಿಕ ಸಿಟ್ಟು, ನಿಷ್ಠುರ ನಿಲುವು ಎದ್ದು ಕಾಣುತ್ತದೆ. ತನ್ನ ಪಂಚೇಂದ್ರಿಯಗಳನ್ನು ಲಿಂಗಧ್ಯಾನದಲ್ಲಿ ಕಟ್ಟಿ ಹಾಕುವ ಮನೋಸ್ಥೈರ್ಯ ಕಾಮಮ್ಮಳದು. ಆಚಾರದೊಳಗೆ ಗುರು ಲಿಂಗ ಜಂಗಮವನ್ನು ತನ್ನ ಅಂತರಂಗದಲ್ಲಿ ನೆಲೆಸುವಂತೆ ಮಾಡಿದವಳು. ಪೂಜೆ, ವ್ರತ ನಿಯಮಗಳನ್ನು ಪಾಲಿಸದವರನ್ನು ನಿಟ್ಟೊರಸುವದಾಗಿ, ತನ್ನ ಸಾತ್ವಿಕ ಸಿಟ್ಟಿನ ಬೆಂಕಿಯಲ್ಲಿ ಸುಟ್ಟು ಆ ಬೂದಿಯನ್ನು ಗಾಳಿಗೆ ತೂರುವ ಪಣ ತೊಟ್ಟ ಧೀರೆ ಶರಣೆ ಕಾಮಮ್ಮ..! ಇವಳ ಜೀವನದ ಸಂಗತಿಗಳ ಬಗ್ಗೆ ಅಷ್ಟಾಗಿ ದೊರಿತಿಲ್ಲ. ಆದರೆ ಬಸವಾದಿ ಶರಣರ ವಚನಗಳ ಜೊತೆಗೆ ಈಕೆಯ ವಚನ ಸೇರಿಕೊಂಡಿದ್ದು ದೊರೆತಿದೆ. ಬಹುಶಃ ಇನ್ನೂ ಅನೇಕ ವಚನಗಳನ್ನು ಅವಳು ರಚಿಸಿರಬಹುದು. ಆದರೆ ಸಿಗದೆ ಇರುವುದು ವಿಷಾದದ ಸಂಗತಿ. ಈ ಒಂದು ವಚನದಿಂದ ಅವಳ ಮೇರು ವ್ಯಕ್ತಿತ್ವ ಭಕ್ತಿ ಕಂಡುಬರುವುದು. ಅಲಕ್ಷಿತ ಶರಣರಲ್ಲಿ ಎದ್ದು ತೋರುವ ಶರಣೆ ಕಾಮಮ್ಮ..!

ಸಂಗ್ರಹ : ಹಮೀದಾ ಬೇಗಂ ದೇಸಾಯಿ ಸಂಕೇಶ್ವರ 

Don`t copy text!