ಕನಸುಗಳು ಹಾಗೇ
( ಕಥೆ-)
ಕೆಲವು ಕನಸುಗಳೇ ಹಾಗೆ, ಸುಲಭಕ್ಕೆ ನನಸಾಗುವುದಿಲ್ಲ. ಈ ಕಿಶನ್ ನ ಕನಸೂ ಅಷ್ಡೇ ನನಸಾಗುವ ಯಾವ ಲಕ್ಷಣಗಳೂ ಇಲ್ಲ. ಅದು ಅವನಿಗೂ ಗೊತ್ತು. ಆದರೂ ಅವನು ಕನಸು ಕಾಣುವುದು ಬಿಡುವುದಿಲ್ಲ. ತನ್ನ ಕನಸು ಇಂದಲ್ಲ ನಾಳೆ ನನಸಾಗುತ್ತದೆ ಎಂದು ಸಂಭ್ರಮಿಸುವವನು. ಅವನ ಪಾಲಿಗೆ ಭ್ರಮೆಯ ಉತ್ಪ್ರೇಕ್ಷೆಯೇ ಸಂಭ್ರಮ !
ಆದರೂ ಅವನು ಕನಸಿಗೆ ಪೂರ್ಣ ವಿರಾಮ ನೀಡುವವನಲ್ಲ. ಸದಾ ಕನಸುತ್ತಲೇ ಇರುವ ಕನಸುಗಾರ. ಭ್ರಮಾ ಲೋಕದಲ್ಲಿ ಸಂಭ್ರಮಿಸುತ್ತಿರುವ ಸರದಾರ. ಅವನ ಕನಸು ಅವಳು……. ಅವಳು ಮಾತ್ರ. ಹೆಸರು ಜಾಹ್ನವಿ ಇವನ ಪ್ರೀತಿಯ ಜಾನು.
ಕಿಶನ್ ನ ಪ್ರತಿ ದಿನದ ಆರಂಭ ಅವಳ ನೆನಪಿನಿಂದಲೇ ಆಗುತ್ತಿತ್ತು, ಅಂತ್ಯವೂ ಕೂಡ. ಅರಂಭ ಮತ್ತು ಅಂತ್ಯದ ನಡುವಿನ ದಿನದ ಪ್ರತಿಕ್ಷಣಗಳೂ ಅವಳೊಂದಿಗೇ,ಅವಳ ಕನಸುಗಳೊಂದಿಗೆ, ಅವಳ ನೆನಪುಗಳೊಂದಿಗೇ…. ಅವಳೇ ಅವನ ಬದುಕಾಗಿದ್ದಳು. ಆದರೆ ಅವಳ ಬದುಕು ? ಬೇರೆಯೇ ಇತ್ತು. ಅವಳ ಪ್ರಪಂಚವೇ ಬೇರೆ. ಅವಳ ಆದ್ಯತೆಗಳೇ ಬೇರೆ. ಇವನೆಡೆಗೆ ಅವಳ ಭಾವನೆಗಳೂ ಬೇರೆ. ಅಸಲು ಈ ವಿಚಿತ್ರ ಸಾಮಾಜಿಕ ವ್ಯವಸ್ಥೆಯಲ್ಲಿ ಅವಳ ಜಾತಿ ಯೂ ಬೇರೆ ಇತ್ತು ! ಹದಿನೈದು ವರ್ಷಗಳಿಂದ ಕಿಶನ್ ಅವಳನ್ನು ಪ್ರೇಮಿಸುತ್ತಿದ್ದ.ಆದರೆ ಅವಳು ಮೌನವಾಗಿರುತ್ತಿದ್ದಳು. ಅಪರೂಪಕ್ಕೊಮ್ಮೆ ನಗುತ್ತಿದ್ದಳವಳು. ಅವಳು ನಕ್ಕ ದಿನ ಅವನು ಹುಚ್ಚನಂತಾಗಿರುತ್ತಿದ್ದ. ಅವಳ ನಗುವಿನಲ್ಲಿ ಮೋಹಕತೆ ಇದೆ ಎನ್ನುವುದಕ್ಕೆ ಇವನ ಹುಚ್ಚು ಸಾಕ್ಷಿಯಾಗಿರುತ್ತಿತ್ತು.
ಒಮ್ಮೊಮ್ಮೆ ಅವಳ ಅಪರೂಪದ ನಗು ಇವನನ್ನು ಪ್ರೇರೇಪಿಸುತ್ತಿತ್ತು. ಹೀಗೆ ಅವಳು ನಕ್ಕ ಒಂದು ದಿನ ಕಿಶನ್ ತನ್ನ ಪ್ರೇಮ ನಿವೇದನೆಯನ್ನು ಮಾಡಿಕೊಳ್ಳಲೇಬೇಕು ಎಂದು ನಿರ್ಧರಿಸಿದ. ಆ ರಾತ್ರಿಯಿಡೀ ಚಡಪಡಿಸಿದ. ತನ್ನದಲ್ಲದ ಧೈರ್ಯವನ್ನು ತಂದುಕೊಂಡ ಮರುದಿನ ಎಂದಿನಂತೆ ಇವನ ಜಾನೂ ಕಂಡಳು. ಅಂದು ಎಂದಿಗಿಂತ ತುಸು ಹೆಚ್ಚೇ ಬೆವರಿದ. ಪ್ರೇಮ ನೀವೇದನೆ ಮಾಡಿಕೊಳ್ಳುವುದು ಒತ್ತಟ್ಟಿಗಿರಲಿ ಬ್ರೇಕ್ ಟೈಮಲ್ಲಿ ಕಾಫೀ ಕುಡಿದು ಬರೋಣ ಬನ್ನಿ ಅಂತ ಕೇಳೋಕೂ ಹೆದರಿದ, ನಡುಗಿದ, ಅವಳೆದುರು ಮಾತನಾಡದಾದ. ಅದು ಅವಳ ಮೌನಕ್ಕಿರುವ ತಾಕತ್ತಾಗಿತ್ತು. ಕಿಶನ್ ಅದೆಷ್ಟು ಹಿಂಜರಿಕೆಯ ಮನುಷ್ಯ ಅಂದ್ರೆ ತಾನು ಜಾನುವನ್ನು ಪ್ರೀತಿಸುತ್ತಿರುವುದನ್ನು ಅಟ್ ಲೀಷ್ಟ್ ತನ್ನ ಕ್ಲೋಸ್ ಫ್ರೆಂಡ್ ರವೀಶನಿಗೂ ಹೇಳಿಕೊಂಡವನಲ್ಲ. ತಾನವಳನ್ನು ಪ್ರೇಮಿಸುತ್ತಿರುವುದು ಮಹಾ ಅಪರಾಧವೇನೋ ಅಂದು ಕೊಂಡಿರುವ ಆಸಾಮಿ. ಇಂತಹ ಪುಕ್ಕಲ ಕಿಶನ್ ಗೆ ನೆನಪಾದದ್ದು ಅಕ್ಷರ ಜಗತ್ತು. ಅವಳೆಡಿಗಿನ ತನ್ನ ಭಾವನೆಗಳನ್ನು ಅಕ್ಷರಗಳ ರೂಪದಲ್ಲಿ ತೋಡಿಕೊಳ್ಳೋಣ ಎಂದು ನಿರ್ಧರಿಸಿದ. ಆದರೆ ಅವನು ಕವಿಯೂ ಅಲ್ಲ ಸಾಹಿತಿಯೂ ಅಲ್ಲ. ಆದರೆ ಭಾವನೆಗಳ ಮೂಟೆ ಹೊತ್ತ ಶುದ್ಧ ಪ್ರೇಮಿ. ಭಾವನೆಗಳಿದ್ದರೆ ಸಾಕು ಕವಿಯೇ ಆಗಬೇಕೆಂದಿಲ್ಲವಲ್ಲ ? ಹೀಗೆ ಸಿದ್ಧವಾಯಿತು ಅವನ ಪ್ರೇಮ ಪತ್ರ.
“ನನ್ನೊಲವಿನ ಜಾನು ನಾನು ಕವಿಯಲ್ಲ, ಸಾಹಿತಿಯೂ ಅಲ್ಲ.ಅಸಲು ನಾನಾರೆಂದು ಹೆಳಲೂ ಧೈರ್ಯವಿಲ್ಲದ ಪುಕ್ಕಲ . ನಿನ್ನ ಮೌನಕ್ಕೆ ಹೆದರುವ, ನಿನ್ನ ನಗುವಿಗೆ ಕಾತರಿಸುವ ಹೃದಯವಂತ . ನಾನಾರೆಂದು ನೀನೇ ಕಂಡುಹಿಡಿಯಬೇಕು. ಜಾನು ಅಮ್ಮ ಒಂದು ಮಂತ್ರ ಕಲಿಸಿದ್ದಳು. ಬೆಳಿಗ್ಗೆ ಎದ್ದ ಕೂಡಲೇ ನನ್ನ ಅಂಗೈಯನ್ನು ನೋಡಿಕೊಳ್ಳುತ್ತಾ ಮಂತ್ರ ಜಪಿಸು ಎಂದು – “ಕರಾಗ್ರೇ ವಸತೇ ಲಕ್ಷ್ಮೀ, ಕರ ಮಧ್ಯೆ ಸರಸ್ವತಿ, ಕರ ಮೂಲೇ ಸ್ಥಿತಾ ಗೌರೇ ಪ್ರಭಾತೇ ಕರದರ್ಶನಂ” ಈ ಮಂತ್ರ ಮರೆತು ತುಂಬ ವರುಷಗಳೇ ಆಗಿದೆ. ಯಾಕೆಂದ್ರೆ ನನ್ನ ಪಾಲಿಗೆ ಕರಾಗ್ರದಲ್ಲಿರುವ ಲಕ್ಷ್ಮಿ ನೀನೆ, ಕರ ಮಧ್ಯದಲ್ಲಿರುವ ಸರಸ್ವತಿಯೂ ನೀನೆ, ಕರಮೂಲದಲ್ಲಿ ಸ್ಥಾಪಿತವಾಗಿರಬಹುದಾದ ಸ್ಥಿತಾ ಗೌರಿಯೂ ನೀನೆ. ನನ್ನ ಪಾಲಿಗೆ ಎಲ್ಲವೂ ನೀನೇ, ನೀನೇ, ನೀನೇ….. ಹೀಗಾಗಿ ಈಗಿನ ಜಮಾನಾದ ಬಹುತೇಕರ ಬೆಳಗಿನಂತೆ ನನ್ನ ಬೆಳಗೂ ಆರಂಭವಾಗುವುದು ಈ ಮೊಬೈಲ್ ನಿಂದಲೇ. ಹಾಸಿಗೆಯಲ್ಲೇ ಮೊಬೈಲ್ ತಗೆದು ನಿನ್ನ ಸುಂದರ ಮುಖವನ್ನೊಮ್ಮೆ ನೋಡುತ್ತೇನೆ. ನಿನ್ನ ಕಣ್ಣ ಹೊಳಪು ನನ್ನನ್ನು ಎಚ್ಚರಗೊಳಿಸುತ್ತೆ. ನಿನ್ನ ತುಟಿಗಳಲ್ಲಿನ ಮಂದಹಾಸ ನನ್ನಲ್ಲೊಂದು ಚೈತನ್ಯ ತುಂಬುತ್ತೆ. ಹಾಗೇ ಮೊಬೈಲ್ ಸ್ಕ್ರೀನಿಗೇ ಒಂದು ಮೃದು ಮಧುರ ಮುತ್ತನ್ನಿಡುತ್ತೇನೆ. ಅಷ್ಟೆ. ತೃಪ್ತವಾಗಿಬಿಡುತ್ತೆ ನನ್ನಾತ್ಮ. ಎಲ್ಲೆ ಮೀರಿ ಎಲ್ಲೂ ಹೋಗುವವನಲ್ಲ ನಾನು. ಅದಕ್ಕೇ ನಾ ಹೇಳೋದು ನಾನು ನಿನಗಾಗಿ ಪರಿತಪಿಸುತ್ತಿರುವ ಪರಿಶುದ್ಧ ಪ್ರೇಮಿ ಮಾತ್ರ ಕಾಮಿಯಲ್ಲ ಎಂದು.
ಜಾನೂ ನಾನು ನಿನ್ನನ್ನೇಕೆ ಇಷ್ಟು ಇಷ್ಟ ಪಡುತ್ತೇನೆ ಗೊತ್ತಾ ? ಎರಡು ಕಾರಣಗಳಿಗೆ. ಒಂದು ನಿನ್ನ ಕಣ್ಣುಗಳು. ಎರಡನೇದು ನಿನ್ನ ನಗು. ಹುಚ್ಚಿ ನಿನ್ನ ಕಣ್ಮಿಂಚ ಸೆಳೆತ ಎಷ್ಟೆಂದು ನಿನಗೇ ಗೊತ್ತಿಲ್ಲ.ಬಾನಂಗಳದಲ್ಲಿ ಬಸಿರು ಮೋಡಗಳು ಒಂದಕ್ಕೊಂದು ಗುದ್ದಾಡಿಕೊಂಡು, ಬಡಿದಾಡಿಕೊಂಡು ಕಿಚ್ಚು ಹಚ್ಚಿ ಮಿಂಚನ್ನು ಸ್ಪುರಿಸುತ್ತವೆಯಲ್ಲ ? ಅಂಥ ಮೋಡಗಳೇ ನಿನ್ನ ಕಣ್ಮಿಂಚು ಕಂಡು ನಾಚಿ ನೀರಾಗಿ ನಿನ್ನನ್ನೇ ನೋಡುತ್ತ ಕುಳಿತಿವೆ ದಂಗಾಗಿ. ಅರಳು ಗುಲಾಬಿಗಳೂ ಸೋತು ಶರಣಾಗಿವೆ ನಿನ್ನ ಹೂ ನಗುವ ಕಂಡು. ನಾನ್ಯಾವ ಲೆಕ್ಕ ? ನನ್ನಿರುವಿಕೆ ನಿನಗಾಗಿ ಅನ್ನುವುದಕ್ಕಿಂತ ನೀನೇ ಅನ್ನುವುದೇ ಲೇಸು. ನನ್ನ ಹೇರ್ ಸ್ಟೈಲ್ ನಿರ್ಧರಿಸುವವಳು ನೀನೇ, ನನ್ನ ಪ್ಯಾಂಟಿಗೆ ಶರ್ಟು ಮ್ಯಾಚ್ ಮಾಡುವವಳೂ ನೀನೇ. ನನ್ನದೆಲ್ಲವೂ ನಿನ್ನದೇ, ನಿನಗೋಸ್ಕರ ಮಾಡಿದ ಅಲಂಕಾರವಷ್ಟೇ. ಬಿಡು ಬರೀ ನನ್ನದೇ ಆಯ್ತು ರಾಮಾಯಣ. ಜಾನೂ ನಿನ್ನೆದೆಯಾಳದಲ್ಲಿ ನಾನಿರುವೆನಾ ? ನಿನ್ನ ತುಟಿಯಂಚ ಹೂ ನಗುವಿನಲಿ ನನಗೂ ಒಂದಷ್ಡು ಜಾಗವಿದೆಯಾ ? ಬಹುಶಃ ಇರಬಹುದು ಎಂದುಕೊಳ್ಳುತ್ತೇನೆ. ನಾನು ಏನೆಂದು ನಿನಗೂ ಗೊತ್ತು. ನನ್ನ ನಿಷ್ಕಲ್ಮಶ ಪ್ರೀತಿಯನ್ನು ನೀನು ಒಪ್ಪುವಿಯಾದರೆ ನಾನು ಧನ್ಯನಾಗುವೆ. ಜೀವನವಿಡಿ ನಿನ್ನನು ನನ್ನ ತೋಳುಗಳಲಿ ಹಗುರವಾಗಿ ಬಳಸುವೆ. ನಮ್ಮ ಪ್ರೇಮದಪ್ಪುಗೆಯಲಿ ಬಿಗಿತವೂ ಬೇಡ, ಬಿಸಿಯುಸಿರೂ ಬೇಡ. ಕಂಗಳಿಗೊಂದು ಮುತ್ತು ಹೂ ನಗುವ ಸೂಸುತಿಹ ನಿನ್ನ ಅಧರಗಳಿಗೊಂದು ನನ್ನಧರಗಳಿಂದ ಅಕ್ಕರೆಯ ಸಕ್ಕರೆಯಂತಹ ಮೃದು ಮಧುರ ಸ್ಪರ್ಶ. ಅಷ್ಟೇ ಸಾಕು ಜೀವನ ಪೂರ್ತಿ ಹೀಗೇ ಇರಲು ಬಯಸುವೆ. ಈ ಅಮೃತ ಗಳಿಗೆಗಾಗಿ ಏಳೇಳು ಜನ್ಮ ಕಾಯಲೂ ಸಿದ್ಧನಿರುವೆ. ಹೇಳು ನಿನಗೊಪ್ಪಿಗೆಯಾ ? ಕೋಮಲೆ ನೀನು ನನ್ನ ಒಂದೇ ಮಾತಿಗೆ ಒಪ್ಪುವಿಯಾದರೂ ಹೇಗೆ. ತಾಳು ಒಂದು ಐಡಿಯಾ. ನಾಳೆ ಸಂಜೆ ಆರು ಗಂಟೆಯಿಂದ ಆರು ಹದಿನೈದರವರೆಗೆ ನಾನು ನಿಮ್ಮ ಮನೆಗೆ ಹತ್ತಿರವಿರುವ ಕುವೆಂಪು ಸರ್ಕಲ್ ನಲ್ಲಿ ಇರತೇನೆ. ಅಲ್ಲಿ ರಾಘವೇಂದ್ರ ಪ್ರಾವಿಜನ್ ಸ್ಟೋರ್ಸ್ ನಲ್ಲಿ ಒಂದು ಕುಲ್ಫೀ ತಿನ್ನುತ್ತಾ ನಿಂತಿರತೇನೆ. ಆಗ ನಾನಾರೆಂಬುದು ನಿನಗೆ ಖಾತ್ರಿಯಾಗುತ್ತೆ. ನನ್ನ ಜೊತೆ ನೀನು ಮಾತನಾಡುವುದೂ ಬೇಡ, ನಾನು ನಿನಗಿಷ್ಟವಾ…. ಆ ಅಂಗಡೀಲಿ ಒಂದು ಕೇಜಿ ಸಕ್ರೆ ತಗೋ ನಾನು ಗಗನ ಚುಂಬಿಯಾಗುತ್ತೇನೆ. ಇಷ್ಟವಾಗಲಿಲ್ಲವೋ ಚಿಂತೆ ಬೇಡ ಒಂದು ಕೇಜಿ ಉಪ್ಪು ತಗೋ. ನಿನಗೆ ಕೈ ಮುಗಿದು ಮುನ್ನಡೆಯುತ್ತೇನೆ. ನಿನ್ನೆಡಿಗಿನ ಗೌರವ ಒಂದಿನಿತೂ ಕಡಿಮೆಯಾಗಲಾರದು. ಖಂಡಿತ ಬರತೀಯಾ ತಾನೆ ? ನೀನು ಬರದೇ ಹೋದರೆ ನಾನು ನಿನ್ನಲ್ಲಿ ಆಳವಾಗಿ ಬೇರೂರಿದ್ದೇನೆ ಎಂದು ತಿಳಿದು ಕೊಳ್ಳುವೆ. ಆಯ್ಕೆ ನಿನ್ನದು.
ನಿನಗಾಗಿ ಕಾಯುವ
………………………..
ಇಂತಿಪ್ಪ ಪತ್ರದಲಿ ಕಿಶನ್ ತನ್ನ ಹೆಸರು ಬರೆಯದೇ ಆ ಪತ್ರವನು ಹಾಗೂ ಹೀಗೂ ಅವಳ ವ್ಯಾನಿಟಿ ಬ್ಯಾಗ್ ಗೆ ಹಾಕಿದ.ಅವಳ ವ್ಯಾನಿಟಿ ಬ್ಯಾಗಿಗೆ ಆ ಪತ್ರ ಹಾಕಿದಾಗಿನಿಂದ ಇವನಿಗೆ ಮೈಯ್ಯಲ್ಲಾ ನಡುಕ. ವಾಪಸ್ ತಗೊಂಬಿಡ್ಲಾ ಅನ್ನುತ್ತಿದೆ ಇವನ ಪುಕ್ಕಲು ಮನಸ್ಸು. ಬೇಡ ಎನ್ನುತ್ತಿದೆ ಪ್ರೇಮದ ಕನಸು.
ಸಂಜೆ ಆಫಿಸು ಮುಗಿಸಿ ಹೊರಡುವ ಮುನ್ನ ಪರಸ್ಪರ ಟಾಟಾ ಹೇಳುವುದು ವಾಡಿಕೆಯಾಗಿತ್ತು. ಜಾಹ್ನವಿ ಎಂದಿನಂತೆ ನಿರಮ್ಮಳ ಮನಸ್ಸಿನಿಂದ ಬಾಯ್ ಹೇಳಿದಳು. ಅದೇ ನಗು. ಅದೇ ಮಿಂಚು. ಅವಳು ಪತ್ರ ಓದಿಲ್ಲ ಎನ್ನುವುದು ಇವನಿಗೆ ಖಾತ್ರಿಯಾಯಿತು. ಇವನ ಕೈ ಟಾಟಾ ಹೇಳುತ್ತಿತ್ತೋ…. ನಡುಗುತ್ತಿತ್ತೋ ದೇವರೇ ಬಲ್ಲ. ಮನೆಗೆ ಬಂದ ಚಡಪಡಿಸುತ್ತಿದ್ದ. ಬರೀ ತನ್ನ ಪತ್ರದ ಬಗ್ಗೆಯೇ ಚಿಂತೆ. ಅಕಸ್ಮಾತ್ ಅವಳು ಬಿರು ಗಣ್ಣಿನಿಂದ ನೋಡಿದರೆ ಹೇಗೂ ಪತ್ರದಲ್ಲಿ ಹೆಸರು ಬರೆದಿಲ್ಲ, ನನ್ನದಲ್ಲ ಎಂದು ಜಾರಿಕೊಂಡರಾಯಿತು ಎಂದು ಯೋಚಿಸುತ್ತಿದ್ದ. ಪುಕ್ಕಲುತನದ ಪರಮಾವಧಿ ! ಸಂಜೆ ಕಳೆದು ರಾತ್ರಿಯಾಯಿತು. ಇವನಿಗೆ ಏನೋ ಕಸಿವಿಸಿ. ಊಟ ಸೇರಲಿಲ್ಲ. ಜಾನೂ ಫೋನ್ ಮಾಡಿ ಬಯ್ಯಬಹುದೇ….. ಮತ್ತಷ್ಟು ಢವಢವ. ರಾತ್ರಿ ಹತ್ತಾಯಿತು ನಿದ್ದೆ ಹೇಗೆ ತಾನೇ ಸುಳಿದೀತು ? ಇವನ ರೂಮಿನ ಬಾಗಿಲನ್ನು ಯಾರೋ ಸಣ್ಣಗೆ ತಟ್ಟಿದ ಅನುಭವ. ಜೊತೆಗೆ ಆ ಕಡೆಯಿಂದ ಹೆಂಗಸಿನ ಧ್ವನಿ…., “ಸರ್……ಸರ್……” ಇದು ಜಾನೂನೇ. ಇವನ ಎದೆಬಡಿತ ಪಕ್ಕದ ಮನೆಯವರಿಗೆ ಕೇಳುವಷ್ಟು ಜೋರಾಯ್ತು. ಧೈರ್ಯ ತಂದು ಕೊಳ್ಳಲೇ ಬೇಕು. ನಡುಗುತ್ತಲೇ ಬಾಗಿಲು ತರೆದ. ಆ ಕಡೆಯ ಹೆಂಗಸು ಜಾನು ಆಗಿರಲಿಲ್ಲ. ಬದುಕಿತು ಬಡ ಜೀವ. ಆಯಮ್ಮ ಯಾರದ್ದೋ ಅಡ್ರೆಸ್ ಕೇಳಲು ಬಾಗಿಲು ತಟ್ಟಿತ್ತು. ಉಸಿರೆಳೆದುಕೊಂಡ ಸಾವರಿಸಿಕೊಂಡ. ಆಯಮ್ಮನಿಗೆ ಅವಳು ಕೇಳಿದ ಅಡ್ರೆಸ್ ತೋರಿಸಿ. ಒಳಕ್ಕೆ ಬಂದ. ಮಲಗಲು ಪ್ರಯತ್ನಿಸಿದ. ನಿದ್ದೆ ಸುಳಿಯಲಿಲ್ಲ. ರಾತ್ರಿಯಿಡೀ ಹೆದರಿಕೆಯ ಜಾಗರಣೆ ! ಮರುದಿನ ಆಫೀಸಿಗೆ ಹೋಗುವ ಧೈರ್ಯ ವಾಗಲಿಲ್ಲ. ರಜೆ ಕಳಿಸಿದ. ಜಾನುವಿನ ಫೋನ್ ಬರಬಹುದಾ ಎಂದು ಕಾದ. ಸಂಜೆಯಾಯಿತು. ಯಾವ ಫೋನೂ ಬರಲಿಲ್ಲ. ಇವನ ದುಗುಡ ಮತ್ತಷ್ಟು ಹೆಚ್ಚಾಯ್ತು. ಸಂಜೆ ಐದುವರೆಗೇ ಕುವೆಂಪು ಸರ್ಕಲ್ ಗೆ ಹೋದ. ಚಹ ಕುಡಿದ. ಸಮಯ ಆರು ಗಂಟೆ ಆಗುತ್ತಲೇ ಇಲ್ಲವಲ್ಲ ಅನಿಸುತ್ತಿತ್ತವನಿಗೆ. ಅತ್ತಿಂದಿತ್ತ ಓಡಾಡಿದ. ಆರಾಯಿತು. ಈಗ ಕುಲ್ಫೀ ಸಮಯ ! ಅದು ಮೂರೇ ನಿಮಿಷಕ್ಕೆ ಖಾಲಿ ಯಾಯಿತು. ಜಾನು ಬರಲಿಲ್ಲ. ಸಮಯ ಆರು ಗಂಟೆ ಹತ್ತು ನಿಮಿಷವಾಯ್ತು ಮತ್ತೊಂದು ಕುಲ್ಫೀ ಖಾಲಿಯಾಯಿತು. ಅವಳ ಸುಳಿವಿಲ್ಲ ! ಐದೇ ನಿಮಿಷ ಬಾಕಿ ! ಅದೂ ಜಾರಿ ಉಳಿದದ್ದು ಅರ್ಧ ನಿಮಿಷ ಮಾತ್ರ. ಮೆಲ್ಲಗೆ ಬಂದಳು ಜಾನು. ಇವನನ್ನು ನೋಡಿ ಹೂ ನಗೆ ನಕ್ಕಳು. ಅವಳು ಪತ್ರ ಓದಿಲ್ಲವಾ ಎನ್ನುವ ಅನುಮಾನ ಶುರುವಾಯಿತಿವನಿಗೆ. ಅವಳು ಮಾತನಾಡಲಿಲ್ಲ , ಸೀದಾ ಅಂಗಡಿಯವನ ಹತ್ರ ಹೋಗಿ “ಅಣ್ಣ ಐದು ಕೇಜಿ ಸಕ್ರೆ ಕೊಡಿ” ಅಂದ್ಲು. ಕೇಳಿಸಿಕೊಂಡ ಇವನಿಗೋ ಆಕಾಶ ಮೂರೇ ಗೇಣು. ತಾನು ಹೇಳಿದ್ದು, ನಾನು ಇಷ್ಟವಾದರೆ ಒಂದು ಕೇಜಿ ಸಕ್ಕರೆ ತಗೋ ಅಂತ. ಆದರೆ ಅವಳು ತಗೊಂಡಿದ್ದು ಐದು ಕೇಜಿ ಸಕ್ರೆ ! “ಅಂದ್ರೆ ನಾನವಳಿಗೆ ಅಷ್ಟು….. ಇಷ್ಟಾನಾ….” ಇವನ ಮನ ಕುಣಿಯುತ್ತಿತ್ತು. ಜಾನೂ ಮುಂದುವರೆದು, “ಅಣ್ಣ ಹಾಗೇ ಎರಡು ಕೇಜೀ ಉಪ್ಪು ಕೊಡಿ” ಅಂದ್ಲು !!!
ಕಿಶನ್….. ಕಂಗಾಲು !
✍️ ಆದಪ್ಪ ಹೆಂಬಾ ಮಸ್ಕಿ