ಪ್ರತಿಗಂಧರ್ವ: ಇದು ದಾವಣಗೆರೆ ರಂಗಾಯಣದ ವಿನೂತನ ನಾಟಕ

ಪ್ರತಿಗಂಧರ್ವ: ಇದು ದಾವಣಗೆರೆ ರಂಗಾಯಣದ ವಿನೂತನ ನಾಟಕ

ಅಂದಹಾಗೆ ದೇಶಾದ್ಯಂತ ಅನೇಕ ಗಂಧರ್ವರು ಸಾಂಸ್ಕೃತಿಕ ಲೋಕದ ಮಹತ್ವ ಮೆರೆದಿದ್ದಾರೆ. ಅದರಲ್ಲೂ ಮುಖ್ಯವಾಗಿ ಕರ್ನಾಟಕದಲ್ಲಿ ಕುಂದಗೋಳದ ನಾಡಗೇರ ವಾಡೆಯ ಸವಾಯಿ ಗಂಧರ್ವ, ಸೂಳೇಬಾವಿಯ ಕುಮಾರ ಗಂಧರ್ವರು ಮುಖ್ಯರು. ಹಾಗೆಯೇ ಇತರೆ ಭಾಗದ ಭಾವಗಂಧರ್ವ, ಛೋಟಾಗಂಧರ್ವ, ಬಾಲಗಂಧರ್ವ ಪ್ರಮುಖ ಸಾಲಿನಲ್ಲಿ ನಿಲ್ಲಬಲ್ಲರು. ಮರಾಠಿ ಮೂಲದ ಸಾಂಗಲಿ ಜಿಲ್ಲೆ ನಾಗಠಾಣದ ಬಾಲಗಂಧರ್ವ (೧೮೮೮ – ೧೯೬೭) ಅವರದು ರಂಗಭೂಮಿ ಮತ್ತು ಸಂಗೀತ ಲೋಕದಲ್ಲಿ ಅಚ್ಚಳಿಯದ ಹೆಸರು. ಲೋಕಮಾನ್ಯ ಬಾಲ ಗಂಗಾಧರನಾಥ ಟಿಳಕರು ಅಂದು ಈ ಬಾಲಕ ನಾರಾಯಣರಾವ್ ರಾಜಹಂಸನನ್ನು ‘ಬಾಲಗಂಧರ್ವ’ನೆಂದು ಹೆಸರಿಸಿ ಮನದುಂಬಿ ಹರಸಿದ ಹೆಗ್ಗಳಿಕೆ.

ನಮ್ಮ ಕಸ್ತೂರಿ ಕನ್ನಡವು, ಮರಾಠಿಗರ ಬಾಯಲ್ಲಿ ಅದು ಕಾನಡಿ. ಕನ್ನಡ ಮತ್ತು ಮರಾಠಿಯ ಭಾಷಾ ಬಾಂಧವ್ಯ ಬಂಧುರಗೊಳಿಸಿದ ಬಹುದೊಡ್ಡ ಬಹುಳ ಪ್ರಜ್ಞೆಯ ಕೀರ್ತಿಯು ಅಂದಿನ ನಾಟಕ ಕಂಪನಿಗಳ ನಾಟ್ಯ ಸಂಗೀತ ಮಂಡಳಿಗಳಿಗೆ ಸಲ್ಲುತ್ತದೆ. ನಾಟಕ ಕಂಪನಿಗಳು ಆಗ ಲೋಕಮೀಮಾಂಸೆಯ ಜನತಾ ವಿಶ್ವವಿದ್ಯಾಲಯಗಳೇ ಆಗಿದ್ದವು. ಅಂದು ಅಂತಹದ್ದೊಂದು ರಂಗಸಂಗೀತ ಸಂಸ್ಕೃತಿಯ ‘ಆದಾನ ಪ್ರದಾನ’ ರಂಗಪರಂಪರೆಯೇ ಇತ್ತು. ಅದನ್ನು ಮೀರಿದ್ದು ಕೋಮು ಸೌಹಾರ್ದ ಸಂಸ್ಕೃತಿಯ ಪ್ರತೀಕದಂತೆ ಅಪರೂಪದ ಹಿಂದು ಮುಸ್ಲಿಮ್ ಪ್ರೀತಿಯ ಗಂಧರ್ವ ವಿವಾಹ.

ಅದನ್ನು ಆಗ ಆಗುಮಾಡಿದವರು ಮರಾಠಿಯ ಬ್ರಾಹ್ಮಣನಾದ ಬಾಲಗಂಧರ್ವ ಮತ್ತು ‘ಪ್ರತಿಗಂಧರ್ವ’ಳಂತೆ ಪ್ರಸಿದ್ಧಳಾದ ಕನ್ನಡದ ಗೋಹರ್ಜಾನ್(೧೯೧೦ – ೧೯೬೫)ಎಂಬ ಮುಸ್ಲಿಂ ಮಹಿಳೆ. ಎರಡು ಜೀವಗಳೊಂದಾದ ಮರೆಯಲಾಗದ ಸ್ವರಾಲಾಪ ಪರಿಯದು.

 

 

 

 

 

 

 

 

 

 

ಹೀಗೆ ಎರಡು ಭಿನ್ನ ಜಾತಿ, ಭಿನ್ನ ರಾಜ್ಯದ ಇಬ್ಬರು ಗಂಧರ್ವರು ಒಂದಾಗಿ ತೀವ್ರ ತೆರನಾದ ರಂಗಸಂಗೀತ ಮಹತಿಯುಳ್ಳ ‘ಗಂಧರ್ವ ಶೈಲಿ’ಯ ಹಾಡುಗಾರಿಕೆಯನ್ನು ದೇಶಕ್ಕೆ ಪರಿಚಯಿಸಿದವರು. ಜತೆಯಲಿ ಸೂಫಿ ಸಂಗೀತದ ‘ಮೆಹಫಿಲ್‘ ಕಛೇರಿಗಳಿಗೆ ಹೊಸ ಆಯಾಮ ಕಲ್ಪಿಸಿದವರು. ಭಜನ್, ಅಭಂಗ್, ಗಝಲ್, ರಂಗಗೀತೆ, ಲೋಕಸಂಗೀತದ ಅಮೋಘ ಅನುಸಂಧಾನ. ಇದೆಲ್ಲವು ‘ಗಂಧರ್ವ’ ಸೆಳೆತದ ಆನುಷಂಗಿಕ ಫಲಶ್ರುತಿ ಎಂದೇ ಹೇಳಬಹುದು. ತನ್ಮೂಲಕ ಹಾಡು ನಟನಟಿ ಜೋಡಿಯೊಂದು, ಭಾರತೀಯ ಸಂಗೀತ ಲೋಕದಲ್ಲಿ ಗುರುತರವಾದ ಹೆಜ್ಜೆ ಗುರುತುಗಳನ್ನು ಮೂಡಿಸಿದ್ದು ಸಾಂಸ್ಕೃತಿಕ ಪವಾಡ.

ಪ್ರೊ. ರಹಮತ್ ತರೀಕೆರೆ ಗುರುತಿಸಿರುವಂತೆ ಗೋಹರ್ಜಾನ್ ಎಂಬ ಹೆಣ್ಣುಮಗಳು ಬಾಲಗಂಧರ್ವರಿಗೆ ಪ್ರತಿಯಾದ ‘ಪ್ರತಿಗಂಧರ್ವ’ ಹೆಸರಿಗೆ ಭಾಜನಳು. ಯಾಕೆಂದರೆ ಮಹಿಳೆಯರು ಗಂಧರ್ವರೆಂದು ಕರೆಸಿಕೊಂಡ ನಿದರ್ಶನಗಳೇ ಇಲ್ಲದ ದಿನಮಾನಗಳವು. ಪ್ರಾಯಶಃ ಇದನ್ನೇ ಅನುಲಕ್ಷಿಸಿ ಡಾ. ರಾಜಪ್ಪ ದಳವಾಯಿ ಪ್ರತಿಗಂಧರ್ವ ಹೆಸರಿನ ನಾಟಕ ರಚಿಸಿದ್ದಾರೆ. ಇದು ಪ್ರಸಿದ್ಧ ನಾಟಕ ಸಂಸ್ಕೃತಿಯ ಲೋಕಸತ್ಯ ಪಾತ್ರಗಳ ಕತೆ. ಶತಮಾನದ ಹಿಂದೆ ನಾಟಕದೊಳಗೆ ನಡೆಯುವ ನಾಟಕದ ಕತೆ. ನಾಟ್ಯಸಂಗೀತದ ಹುಲುಸಾದ ದೃಶ್ಯಕಾವ್ಯ. ಗಂಧರ್ವ ಜಗತ್ತಿನ ಪ್ರೀತಿ, ವಿರಹಗಳ ದುರಂತ ಕತೆ. ಲೋಕ ಬದುಕಿನ ‘ಫಿಲಾಸಫಿ’ ಬಿಂಬಿಸುವ ಸೂಕ್ಷ್ಮತೆಯ ಕಥನ. ಎರಡು ವಿಭಿನ್ನ ಜಾತಿಯ ಅಮರ ಪ್ರೇಮಿಗಳ ಪ್ರಬುದ್ಧ ಪ್ರೇಮ್ ಕಹಾನಿ.

 

 

ಜಾತಿ, ಮತ, ಧರ್ಮಗಳನ್ನು ಮೀರಿದ ರಂಗಚರಿತೆ. ಅಭಿಜಾತ ಕಲಾವಿದೆಯೊಳಗಿನ ಹೆಣ್ಣೊಬ್ಬಳ ತಣ್ಣನೆಯ ತುಮಲ, ತಲ್ಲಣಗಳು. ಪ್ರಣಯೊಲ್ಲಾಸದ ರೋಮಾಂಚಕಾರಿ ಕ್ಷಣಗಳು. ಮತ್ತೊಂದೆಡೆ ಹಿಂದು ಮುಸ್ಲಿಮ್ ಕೋಮುದ್ವೇಷದ ದಳ್ಳುರಿ.‌ ಆದರೆ ಧರ್ಮ, ಮತೋನ್ಮಾದಗಳಿಗೆ ಮದ್ದಾಗಬಲ್ಲ ಮನುಷ್ಯ ಪ್ರೀತಿ ಇಲ್ಲಿದೆ. ನಾಟಕ ಕಂಪನಿ ಸುಟ್ಟು ಹೋಗುವುದು, ಕಂಪನಿ ಮತ್ತು ಕಲಾನಿಷ್ಠೆಯ ಮ್ಯಾನೇಜರ್ ಗಿರಿ, ನಟಿಯರನ್ನು ಹೈಜಾಕ್ ಮಾಡುವುದು, ಆರ್ಥಿಕ ದಿವಾಳಿತನ ಮುಂತಾದವು ಆ ಕಾಲದಲ್ಲೂ ಇತ್ತೆಂಬ ಕಥನವೂ ಇಲ್ಲದಿಲ್ಲ. ಅದೆಲ್ಲಕ್ಕೂ ಮಿಗಿಲಾಗಿ ಶತಮಾನದ ಹಿಂದೆ ಗತಿಸಿದ ಸಂವೇದನಾಶೀಲ ಮನುಷ್ಯ ಸಂಬಂಧಗಳ ಕಸುರಿಲ್ಲದ ಬದುಕಿನ ಚಾರಿತ್ರಿಕ ಸಂಕಥನ. ಹಾಗೆ ನೋಡಿದರೆ ಇದು ವರ್ತಮಾನಕ್ಕೂ ಸಲ್ಲುವ, ಜಿಂದಾ ಮಿಸಾಲ್ ಕಹಾನಿ.

ಏಕಚ್ ಪ್ಯಾಲಾ, ಮಾನಾಪಮಾನ, ಸಂಶಯ ಕಲ್ಲೋಳ, ಸಂಗೀತ ಸೌಭದ್ರ, ಸಂಗೀತ ಸ್ವಯಂವರ, ಶಾಕುಂತಳ ಇನ್ನೂ ಮೊದಲಾದವು ಮರಾಠಿಯ ಸುಪ್ರಸಿದ್ದ ನಾಟಕಗಳು. ಇವು ”ಗಂಧರ್ವ ನಾಟಕ ಮಂಡಳಿ”ಯ ಪೆಟೆಂಟ್ ನಾಟಕಗಳು. ಈ ನಾಟಕಗಳಲ್ಲಿ ಗೋಹರಬಾಯಿ ಕರ್ನಾಟಕಿ ಉರುಫ್ ಗೋಹರ್ಜಾನಗೆ ಹೀರೋಯಿನ್ ಪಾರ್ಟ್ ಖಾಯಂ. ರಂಗನಾಯಕಿಯಾದ ಆಕೆ ನಿರರ್ಗಳವಾಗಿ ಮರಾಠಿ ಮಾತಾಡುತ್ತಿದ್ದುದು ಮರಾಠಿಗರ ಮಾನಸ ಪ್ರೀತಿಗೆ ಪಾತ್ರವಾಗಿತ್ತು. “ಗೋಹರ್ ಗಂಧರ್ವ ಜೋಡಿ” ಕರ್ನಾಟಕ ಮತ್ತು ಮಹಾರಾಷ್ಟ್ರದ ಮನೆ ಮಾತಾಗಿತ್ತು. ಒಂದರ್ಥದಲ್ಲಿ ಅದು ವಾತ್ಸಲ್ಯದ ರಂಗಧರ್ಮವೇ ಆಗಿತ್ತು. ಆದರೆ ನೆನಪಿರಲಿ; ನಾಟಕದವರೆಂದರೆ, ಮತ್ತದರ ಪಾತ್ರದವರೆಂದರೆ ಅನಾರೋಗ್ಯ ಮತ್ತು ಅನಾದರ ಅಭಿಪ್ರಾಯದ ಕಾಲಮಾನವದು. ನಾಟಕದ ದೃಶ್ಯಗಳನ್ನು ಕಂಡು ನೀಡಿದ ಸಿಳ್ಳು ಚಪ್ಪಾಳೆಗಳಷ್ಟೇ ಸಾಮಾಜಿಕವಾಗಿ ಅವರಿಗೆ ಸಂಕಟ, ದುಃಖಗಳನ್ನು ನೀಡಿದ ನಿಂದನೆಯ ನೂರಾರು ನಿದರ್ಶನಗಳಿವೆ. ಅಂತೆಯೇ ರಂಗನಟಿಯರು ಕಂಡ ಸಂತಸ, ಸನ್ಮಾನಗಳಿಗಿಂತ ಉಂಡ ಸಂಕಟ, ಅವಮಾನಗಳೇ ದೊಡ್ಡವು.

ಇದೆಲ್ಲದರ ನಡುವೆ ಅಂದಿನ ವೃತ್ತಿ ರಂಗಭೂಮಿ ಹಲವು ರಂಗಬೆರಗು, ಬೆಡಗು, ಬಿನ್ನಾಣಗಳ ಆಡುಂಬೊಲವೇ ಆಗಿತ್ತು. ತಮ್ಮ ವಯಕ್ತಿಕ ನೋವುಗಳನ್ನು ಚಣಕಾಲ ಬದಿಗೊತ್ತಿ, ದೇಹಕ್ಕೆ ರಂಗದ ಜೀವಧ್ವನಿ ತುಂಬುವ ಇವರು ಖರೇವಂದ್ರ ಭೂಗಂಧರ್ವರೇ. ತನ್ಮೂಲಕ ಆ ಕಾಲದ ತಮ್ಮ ಪ್ರತಿಭೆ ಮತ್ತು ಪರಿಶ್ರಮದಿಂದ ರಾಷ್ಟ್ರಮಟ್ಟದ ಕೀರ್ತಿಗೆ ಭಾಜನರಾದವರು ಕನ್ನಡದ ಗೋಹರಬಾಯಿ ಕರ್ನಾಟಕಿ ಮತ್ತು ಅಮೀರಬಾಯಿ ಕರ್ನಾಟಕಿ ಸೋದರಿಯರು.
ಕರ್ನಾಟಕ ಎಂದು ಹೆಸರಾಗುವ ಹಲವು ದಶಕಗಳ ಮೊದಲೇ ತಮ್ಮ ಹೆಸರಿನ ಮುಂದೆ ಕರ್ನಾಟಕಿ ಎಂಬುದನ್ನು ಸೇರಿಸಿಕೊಂಡಿರುವ ಈ ಸೋದರಿಯರ ಕರುನಾಡ ಪ್ರೇಮ ಅನನ್ಯವಾದುದು.

 

ಅಂದಿನ ಅವಿಭಜಿತ ಬಿಜಾಪುರ ಜಿಲ್ಲೆ ಬೀಳಗಿ ತಾಲೂಕಿನ ‘ತುಂಬರಮಟ್ಟಿ’ ಗ್ರಾಮದ ಇವರು ಬಡ ಮುಸಲ್ಮಾನ ಕುಟುಂಬಕ್ಕೆ ಸೇರಿದವರು. ದನ ಕಾಯುವ ಕಾಯಕ ಮಾಡಿಕೊಂಡಿದ್ದವರು. ಸಂಗೀತ ಶಾಸ್ತ್ರ ಪ್ರವೀಣನಾದ ಬೇವೂರು ಬಾದಶಾ ಮಾಸ್ತರನ ಸೊಸೆಯರು. ಶಾಸ್ತ್ರೀಯ ಮತ್ತು ರಂಗಸಂಗೀತದ ಸಲಿಲಧಾರೆ ಎರೆದು ತಂದೆಯಂತೆ ಸಲಹಿದವರು ಮಾವ ಬೇವೂರ ಮಾಸ್ತರರು. ಅಂತೆಯೇ ಬೀಳಗಿ ಸೋದರಿಯರು ಅದೆಷ್ಟು ಎತ್ತರಕ್ಕೆ ಬೆಳೆದರೆಂದರೆ ಮಹಾತ್ಮಾ ಗಾಂಧೀಜಿಯವರಿಗೆ ಪ್ರಿಯವಾದ “ವೈಷ್ಣವ ಜನತೋ” ಭಜನ್ ಮೊದಲಸಲ ಹಾಡಿ ಗಾಂಧೀಜಿ ಅವರಿಂದ ಮೆಚ್ಚುಗೆ ಪಡೆದ ಹಿರಿಮೆ. ಹಾಗೆ ಹಾಡಿದಾಕೆ ನಮ್ಮ ಕನ್ನಡದ ಹೆಮ್ಮೆಯ ಕುವರಿ ಅಮೀರಬಾಯಿ ಕರ್ನಾಟಕಿ. ನಾಟ್ಯಸಂಗೀತದ ಮೂಲಕ ಅಂತಹದೇ ರಾಷ್ಟ್ರಖ್ಯಾತಿಗೆ ಪಾತ್ರರಾದವಳು ಅಮೀರಬಾಯಿಯ ಅಕ್ಕ ಗೋಹರಬಾಯಿ ಎಂಬುದನ್ನು ನಾವು ಮರೆಯಬಾರದು. ಯಾಕಂದ್ರೆ ಅವು ಭಿನ್ನ ಕೌತುಕದ ರಂಗಸಂಗತಿಗಳು.

ಆ ಕಾಲದಲ್ಲಿ ಬಾಲಗಂಧರ್ವರದು ನಾಟ್ಯಸಂಗೀತದಲ್ಲಿ ದೊಡ್ಡಹೆಸರು. ‘ಸ್ತ್ರೀ’ ಪಾತ್ರ ಅಭಿನಯಿಸುವಲ್ಲಿ ಅವರನ್ನು ಸರಿಗಟ್ಟುವ ಹೆಣ್ಣುಗಳೇ ಇರದಷ್ಟು ಅಪ್ರತಿಮ ಅಭಿನೇತ್ರಿ ಅವರಾಗಿದ್ದರು. ಅಷ್ಟೇಯಾಕೆ ಅದೇ ಆಗ ಮದುವೆಯಾಗಿ ಗಂಡನ ಮನೆಗೆ ಬಂದ ಮರಾಠಿ ಯುವತಿಯರು ಬಾಲಗಂಧರ್ವರ ನಾಟಕದ ಸ್ತ್ರೀ ಪಾತ್ರ ಕಂಡು ಅವಾಕ್ಕಾಗುತ್ತಿದ್ದರು. ಗಂಧರ್ವರ ಹಾಗೆ ಸೀರೆಯುಟ್ಟು ನಿಲುಗನ್ನಡಿ ಮುಂದೆ ನಿಂತು “ಮೀ ಬಾಲಗಂಧರ್ವ ವಾಟೇ ಕಾಯ್” ಅಂದರೆ ತಾನು ಗಂಧರ್ವರ ಹಾಗೆ ಕಾಣಸ್ತೀನಾ ಅಂತ ವಯ್ಯಾರ ಮಾಡುತ್ತಾ ತಮ್ಮ ಗಂಡನನ್ನು ಮೆಚ್ಚಿಸುವುದು ಆ ಕಾಲದಲ್ಲಿ ಪದ್ಧತಿಯಾಗಿಯೇ ಹೋಗಿತ್ತು. ಮುಂದುವರೆದು ಹೇಳುವುದಾದರೆ ಕೊಲ್ಹಾಪುರದ ಮಹಾರಾಜರು ಇವರ ಸ್ತ್ರೀ ಪಾತ್ರ ಮೆಚ್ಚಿ ಅವತ್ತು ‘ರಾತ್ರಿ ತಮ್ಮ ಅರಮನೆಗೆ ಬರಬೇಕೆಂಬ’ ಆಹ್ವಾನ ಮಾಡಿದ್ದುಂಟು, ಎಂದರೆ ಯಾರೂ ಉತ್ಪ್ರೇಕ್ಷೆ ಎಂದು ಭಾವಿಸಬಾರದು. ಹೀಗಾಗಿ ಗಂಧರ್ವರು ಕೊಲ್ಹಾಪುರಕ್ಕೆ ಹೋಗುವುದನ್ನೇ ಕೈ ಬಿಟ್ಟಿದ್ದರಂತೆ.

ಮರಾಠಿಯ ಗಡಿ ದಾಟಿ ಕನ್ನಡ ನೆಲದ ಬೆಳಗಾವಿ, ಕಾರವಾರ, ಹುಬ್ಬಳ್ಳಿ, ಧಾರವಾಡ, ಗದಗ, ಬಾಗಲಕೋಟಿ, ಬಿಜಾಪುರ, ಗುಲಬರ್ಗಾ ಪ್ರದೇಶಗಳಲ್ಲಿ ಗಂಧರ್ವರ ಕಂಪನಿಯ ನಾಟಕಗಳಿಗೆ ಹರಿಗಡಿಯದ ಬೇಡಿಕೆ. ಬಿಜಾಪುರ, ಹುಬ್ಬಳ್ಳಿಯಂತಹ ಶಹರಗಳಲ್ಲಿ ತಿಂಗಳುಗಟ್ಟಲೇ ಗಂಧರ್ವರ ನಾಟಕಗಳು ಕಿಕ್ಕಿರಿದ ರಂಗಮಂದಿರದಲ್ಲಿ ಜರುಗುತ್ತಿದ್ದವು ಅಂದರೆ ಸುಮ್ಮನಲ್ಲ. ಅದರಲ್ಲೂ ಮಹಿಳೆಯರು, ಮತ್ತದರಲ್ಲೂ ಯುವತಿಯರೇ ಹೆಚ್ಚು ಸಂಖ್ಯೆಯ ಪ್ರೇಕ್ಷಕರು. ಭಲೇ ಭಲೇ ಹೆಣ್ಣುಗಳ ಹೃದಯ ಗೆದ್ದ ಬಾಲಗಂಧರ್ವರು ಗೋಹರಬಾಯಿಯ ಎದುರು ಕೋರ್ಟಿನಲ್ಲಿ ಸೋಲುತ್ತಾರೆ. ಆ ಸೋಲೇ ಅವರಿಬ್ಬರಲ್ಲಿ ಪರಸ್ಪರ ಅದಮ್ಯ ಪ್ರೀತಿಯ ಅನುರಾಗ ಸಿಂಧು ಮೈದುಂಬಿ ಹರಿಯುವಲ್ಲಿ ಅಧಿಕ ಕಾರಣವಾಗುತ್ತದೆ. ಅದು ಅಮರ ಮಧುರ ಪ್ರೇಮದಂತೆ ಬೆಳೆದು ಬಾಳುತ್ತದೆ. ತನ್ಮೂಲಕ ಹತ್ತಾರು ಅನುವು ಆಪತ್ತುಗಳನ್ನು ಸಹಿತ ದಾಟಿದ ರಂಗೇತಿಹಾಸ ನಿರ್ಮಾಣವಾಗುತ್ತದೆ.

 

 

 

 

 

 

 

 

 

 

ದಶಕಗಳ ಕಾಲ ಭಾರತದ ವೃತ್ತಿ ರಂಗವೈಭವವನ್ನು ಅರ್ಥಪೂರ್ಣವಾಗಿ ಮೆರೆದ ಹಿರಿಮೆ “ಗಂಧರ್ವ- ಗೋಹರ್ಜಾನ್” ರಂಗಜೋಡಿಯದು. ಗೋಹರಬಾಯಿಗೆ ನಲವತ್ತರ ಉಕ್ಕುವ ಹರೆಯ, ಗಂಧರ್ವರಿಗೆ ಅರವತ್ಮೂರರ ಏರುಪ್ರಾಯ. ಇಬ್ಬರೂ ಗಂಡ ಹೆಂಡತಿಯಂತೆ ಕೂಡಿ ಹತ್ತಾರು ವರ್ಷಗಳ ಕಾಲ ರಂಗಬದುಕಿನ ಬಂಡಿ ಎಳೆಯುತ್ತಾರೆ. ಹಾಗೆ ನೋಡಿದರೆ ಭಾರತೀಯ ವೃತ್ತಿರಂಗ ಚರಿತ್ರೆಯಲ್ಲಿ ಇಂತಹ ‘ಕೂಡುವಳಿ’ ರಂಗ ಬಾಳಿನ ಅನೇಕ ನಿದರ್ಶನಗಳನ್ನು ಕಾಣಬಹುದು. ಕನ್ನಡದ ವೃತ್ತಿರಂಗ ಅದಕ್ಕೆ ಹೊರತಲ್ಲ. ಪ್ರತಿಭಾಶಾಲಿ ಸುಂದರ ನಟಿಯರು ಕಂಪನಿ ಬಿಟ್ಟು ಹೋಗದಂತೆ ಇಂತಹ ಪ್ರಸಂಗಗಳು ಪ್ರಜ್ಞಾಪೂರ್ವಕವಾಗಿ ರೂಢಿಯಲ್ಲಿದ್ದವು. ಅವಳಿಗೂ ಕಂಪನಿ ಮಾಲೀಕರ‌ ತಾರಾಪತ್ನಿ ಎಂಬ ಸ್ಥಾನಮಾನದ ಈಡೇರಿಕೆ. ಆದರೆ ಈ ಎಲ್ಲದನ್ನು ಮೀರಿದ ಮೋಹ ಪರವಶತೆ ಈ ಇಬ್ಬರದು.

ಮೊದಲ ಹೆಂಡತಿ, ಮಕ್ಕಳು ಇರುವಾಗಲೇ ಗೋಹರಬಾಯಿ ಜತೆ ಗಂಧರ್ವರ ಸಾಂಸಾರಿಕ ಜೀವನ ಸಾಗುತ್ತದೆ. ಮೊದಲ ಹೆಂಡತಿ ಲಕ್ಷ್ಮೀಬಾಯಿ ತೀರಿಹೋದಮೇಲೆ ವಿಧುರ ಗಂಧರ್ವರು ಹಲವು ಪ್ರತಿರೋಧಗಳ ನಡುವೆಯೂ ಗೋಹರಳನ್ನು ರಿಜಿಸ್ಟರ್ ಮದುವೆ ಆಗುತ್ತಾರೆ. ಹಿಂದು ಮುಸ್ಲಿಮ್ ಕೋಮುದಳ್ಳುರಿಯಲ್ಲಿ ಬೆಂದ ಮುಂಬಯಿ ಶಹರವು ಜಾತಿ, ವರ್ಣ ಸಂಕರದ ಸಾಂಸ್ಕೃತಿಕ ಸಂಘರ್ಷಕ್ಕೆ ಮುಖಾಮುಖಿ ಆಗುತ್ತದೆ. ಅಷ್ಟೊತ್ತಿಗಾಗಲೇ ಕನ್ನಡ ಮತ್ತು ಮರಾಠಿ ರಂಗಭೂಮಿಯಲ್ಲಿ ಸಣ್ಣಪುಟ್ಟ ಪಲ್ಲಟಗಳು ಘಟಿಸಿರುತ್ತವೆ. ಅದೇ ಆಗ ಬೆಳ್ಳಿತೆರೆಯ ಆಕರ್ಷಕ ಕಾಲ. ಗೋಹರ್ಜಾನ್ ತಾನು ರಾಸವಿಲಾಸ್, ರಂಭಾರಾಣಿ, ದರ್ದ್ ಏ ದಿಲ್, ಗರೀಬ ಕಾ ಪ್ಯಾರ್ ಸೇರಿದಂತೆ ಹದಿನೈದಕ್ಕೂ ಹೆಚ್ಚು ಸಿನೆಮಾಗಳಲ್ಲಿ ನಾಯಕಿ ನಟಿಯಾಗಿ ನಟಿಸಿ ಹೆಸರು ಮಾಡುತ್ತಾಳೆ. ‘ಸಂತ ಏಕನಾಥ್‘ ಸಿನೆಮಾ ಮಾಡಿ ಗಂಧರ್ವರು ಕೈ ಸುಟ್ಟುಕೊಳ್ಳುತ್ತಾರೆ. ಎಲ್ಲ ಕಾಲಕ್ಕೂ ಉದ್ಭವಿಸುವ ತೀವ್ರವಾದ ಆರ್ಥಿಕ ಏರುಪೇರು ಗಂಧರ್ವರ ನಾಟಕ ಕಂಪನಿಯನ್ನು ಕಾಡುತ್ತದೆ. ಇನ್ನೂ ಇಂತಹ ಅನೇಕ ಸಂಕಟಗಳು ಗುದುಮುರಗಿ ಹಾಕುತ್ತವೆ. ಆರ್ಥಿಕ ಬಿಕ್ಕಟ್ಟು ತಾರಕಕ್ಕೇರುತ್ತದೆ.

ಆದರೆ; ಗಂಧರ್ವ ಗೋಹರ್ ಪ್ರೇಮಪ್ರಕರಣ ಮಾತ್ರ ಸಂಪ್ರದಾಯವಾದಿ ಮನಸುಗಳಿಗೆ ನುಂಗಲಾರದ ತುತ್ತಾಗುತ್ತದೆ.
ಪ್ರೀತಿ ಮಾಡಿದ ಮ್ಯಾಲ ಮಾನಪಮಾನ ಎಲ್ಯದ.? ಜಾತಿ ಪಾತಿ ಎಲ್ಯದ ? ಧರ್ಮ ಎಲ್ಯದ…?ಈ ತೆರದ ಹತ್ತಾರು ಪ್ರಶ್ನೋತ್ತರಗಳ ಸರಮಾಲೆ ಇಲ್ಯದ. ಮಧುಬನದಲಿ ಹುಡುಕಿ ಬಂದ
ಕೋಮಲಚಿತ್ತ ಇಲ್ಯದ. ಮಧುರಚಿತ್ತ ಕಲಕುವ ಹತ್ತು ಹಲವು ಅತ್ಯಾಕರ್ಷಕ ರಂಗಚಾರಿಷ್ಮಾ ತುಂಬಿ ತುಳುಕುವ ನಾಟಕ ಪ್ರತಿಗಂಧರ್ವ. ಇದನ್ನು ಡಾ. ರಾಜಪ್ಪ ದಳವಾಯಿ ದಾವಣಗೆರೆ ವೃತ್ತಿ ರಂಗಭೂಮಿಯ ಪ್ರದರ್ಶನಕ್ಕಾಗಿಯೇ ಬರೆದಂತಿದೆ. ಇದು ದಾವಣಗೆರೆ ರಂಗಾಯಣದ ಮೊದಲ ನಾಟಕ. ಅಂತೆಯೇ ಅದನ್ನು ಸವಾಲಿನಂತೆ ದಾವಣಗೆರೆ ರಂಗಾಯಣವು ಪ್ರದರ್ಶನಕ್ಕೆ ಸಿದ್ದಗೊಳಿಸಿದೆ. ನಮ್ಮ ನಡುವಿನ ಮಹತ್ವದ ರಂಗನಿರ್ದೇಶಕ ಮಾಲತೇಶ ಬಡಿಗೇರ ಅದಕ್ಕಾಗಿ ಅಹರ್ನಿಶಿ ಶ್ರಮಿಸಿದ್ದಾರೆ. ಆರ್ದ್ರಭಾವದ ತನ್ಮಯಲೋಕದಲಿ ತೇಲಿಸುವ ರವಿ ಮುರೂರು ಸಂಗೀತ ಕಳಶವಿಟ್ಟಂತೆ. ಯಾವುದೇ ರಂಗಶಾಲೆಯಲ್ಲಿ ತರಬೇತಿ ಹೊಂದಿರದ ವಿವಿಧ ಜಿಲ್ಲೆಗಳ ಹೊಸ ಕಲಾವಿದರನ್ನು ಆಯ್ಕೆ ಮಾಡಿಕೊಂಡು ನಾಟಕದ ಸಿದ್ಧತೆ ಭರದಿಂದ ಜರುಗಿದೆ.

 

 

ಇದೇ 2025 ರ ನವೆಂಬರ್15 ರಂದು ಮೊದಲ ಪ್ರದರ್ಶನ ನಡೆಯಲಿದೆ. ದಾವಣಗೆರೆ ಶಹರದ ದೃಶ್ಯಕಲಾ ಮಹಾವಿದ್ಯಾಲಯದ ಬಯಲು ರಂಗಮಂದಿರ ಜಾಗದಲ್ಲಿ ನಾವು ನಿರ್ಮಿಸಿದ ಝಗಮಗಿಸುವ ನವ ನವೀನ ರಂಗಸಜ್ಜಿಕೆಯ ಸೀನರಿಗಳಲ್ಲಿ ನಾಟಕ ನಡೆಯುವುದು. ವೃತ್ತಿ ರಂಗಭೂಮಿಯ ಕ್ಲಾಸಿಕ್ ನಾಟಕಗಳ ಪರಂಪರೆಯೇ ಕಣ್ಮರೆಯಾಗಿದೆ. ಶತಮಾನದ ಹಿಂದಿನ ಸಂಗೀತಮಯ ನಾಟಕದ ಅಭಿಜಾತ ಪರಂಪರೆಯ ಸೂಕ್ಷ್ಮತೆಗಳನ್ನು ವರ್ತಮಾನೀಕರಿಸಿರುವ ನಮ್ಮ ಮೊದಲ ನಾಟಕ ನೋಡಲು ಮರೆಯದೇ ಬರ್ರಿ. ಮರೆತು ಮರುಗದಿರಿ.

 

 

 

 

 

 

 

 

 

 

-ಮಲ್ಲಿಕಾರ್ಜುನ ಕಡಕೋಳ
9341010712

Don`t copy text!