ಬಸವ ಭಾಷೆ…….

ಭಾಷೆ ಎಂದರೆ ವಚನ, ಪ್ರತಿಜ್ಞೆ, ಕೊಟ್ಟಮಾತು, ಆಣೆ, ವ್ಯಷ್ಟಿ, ಸಮಷ್ಟಿಯ ಉನ್ನತಿಗಾಗಿ, ವ್ಯಕ್ತಿ ತನಗೆ ತಾನೆ ವಿಧಿಸಿಕೊಳ್ಳುವ ಕಟ್ಟಳೆ. ‘ ನೀ ಕಟ್ಟಿ ಕಡಯಿದ ಬಂಧನವೇ ನಿರ್ಬಂಧನವೆಂದಿಪ್ಪೆನಯ್ಯಾ ‘ ಎನ್ನುವ ಅಕ್ಕನ ನುಡಿಯಂತೆ ಇದೊಂದು ಸ್ವಯೀಚ್ಛೆ, ಸಂತೋಷದ ಬಂಧನ. “ಬಸವಭಾಷೆ ” ಬಸವಣ್ಣನವರು ದೇವ ಸಾಕ್ಷಿಯಾಗಿ ನುಡಿದು ಮನಃಸಾಕ್ಷಿಯಾಗಿ ನಡೆದು ಪೂರೈಸಿದ ಮಾತು. ಬಸವಣ್ಣನವರ ಪ್ರತಿಯೊಂದು ಮಾತು ಭಾಷೆಯ ಮೌಲ್ಯಯುಕ್ತವಾದುದು. ಅದಕ್ಕಾಗಿಯೇ ಮಾತು ಮಂತ್ರವಾಗಿ ಮನನೀಯವಾಗಿ, ಲೋಕ ನಡೆದು ಬರುವ ಸತ್ಪಥ ದರ್ಶಕ ಮಾರ್ಗವಾಯಿತು.

ಕೆಡೆ ನಡೆಯದ, ಕೆಡೆ ನುಡಿಯದ, ಸಕಲ ಜೀವತ್ಮರ ಲೇಸ ಬಯಸಿದ, ಲಿಂಗನಿವಾಸದ, ಬಸವ ಹೃದಯದಿಂದ ಬಂದ ನುಡಿಗಳೆಲ್ಲ ಲಿಂಗನುಡಿಗಳು. ಬಸವಣ್ಣನವರ ಜೀವನ ಭಾಷಾ ಬದ್ಧ. ನಡೆನುಡಿಗಳ ತ್ರಾಸು ಕಟ್ಟಳೆಯನ್ನು ದೇವರ ಕೈಯಲ್ಲಿತ್ತು, ಎರಡರ ನಡುವೆ ಕೊರತೆಯಾದಡೆ, ಎನ್ನನದ್ದಿ ನೀನೆದ್ದು ಹೋಗು ಎಂಬಂಥ ನ್ಯಾಯ ನಿಷ್ಠುರತೆಗೆ ತನ್ನನ್ನೇ ತಾನು ಒಳಪಡಿಸಿಕೊಂಡ ಶುದ್ಧ, ಸಿದ್ಧ , ಸ್ವವಿಮರ್ಶಕರು.
ಬಸವಣ್ಣನವರದು ವಿಶ್ವಕಂಡ ಅಪ್ರತಿಮ, ಅನುಪಮ, ಅದ್ವಿತೀಯ, ಅಚ್ಚರಿದಾಯಕ ವ್ಯಕ್ತಿತ್ವ, ಅವರ ಆಯಸ್ಕಾಂತಿಯ, ವ್ಯಕ್ತಿತ್ವಕ್ಕೆ ಆಕರ್ಷಿತರಾಗಿ ಪುಷ್ಪದ ಪರಿಮಳಕ್ಕೆ ಹಾರಿ ಬರುವ ದುಂಬಿಗಳಂತೆ, ದೇಶ- ವಿದೇಶಗಳಿಂದ ಹರಿದು ಬಂತು ಶರಣ ಗಣ. ಎಲ್ಲರನ್ನೂ ಎಂಥವರನ್ನೂ ಅಪ್ಪಾ ಅಪ್ಪಾ ಎಂದು ಇಂಬಿಟ್ಟುಕೊಂಡಿತು ಅವರ ನಿಸ್ವಾರ್ಥ ಮನ. ತತ್ಪಲವಾಗಿ, ಲಕ್ಷದ ತೊಂಬಾತ್ತಾರು ಸಾವಿರದ ತತ್ವನಿಷ್ಠ ಅನುಯಾಯಿಗಳು,ಏಳು ನೂರ ಎಪ್ಪತ್ತು ಮುಕ್ತತಾತ್ಮರು, ಮುನ್ನೂರು ಅನುಭಾವಿ ವಚನಕಾರರು , ಮುವೆತ್ತೈದು ವಚನಕಾರ ಶರಣೆಯರು ಸಂಗಮಕ್ಕೆ ಸಾಕ್ಷಿಯಾಯಿತು ಬಸವಪದತಲ. ಹಿಗ್ಗಿ ಹಾಡಿತು ಜನಪದ.
ಸೋಸಿ ವಚನದ ತಿರುಳ , ಬೀಸಿದವು ಶಿವಗಾಳಿ
ಮೂಸಿ ಬಂದಂತೆ ಗುಂಗಿಗಳು, ಹೂಗಳಿಗೆ
ರಾಸಿ ಜನಬಂತು ಮಂಟಪಕೆ
ರಾಸಿ ರಾಸಿ ಜನ ಕಲ್ಯಾಣದತ್ತ ಮುಖಮಾಡಲು ಕಾರಣ ಬಸವ ವಚನ .
ಬಸವ ಸಾರಿದನಂದು ಕುಶಾಲದಲಿ ವಚನಗಳಮ

ಸುಕಿರುಳು ಹರಿದು ನಸುಕಾತು! ಜಗದೊಳಗೆ

ಹೊಸ ಮತದ ಸೂರ್ಯ ಉದಯಿಸಿದನು.
ಯಾವುದೇ ಸಂಪರ್ಕ ಸಾಧನಗಳಿಲ್ಲದ ಆ ಕಾಲದಲ್ಲಿ ಜಗತ್ತಿನ ಮೂಲೆ ಮೂಲೆಯಿಂದ ಶರಣ ಚೇತನಗಳು ಬಂದುದೊಂದು ವಿಶ್ವವಿಸ್ಮಯ. ಬಸವಣ್ಣ ನಡೆದುದೇ ದಾರಿ, ನುಡಿದುದೇ ವೇದ ಅಖಿಲ ಗಣಂಗಳಿಗೆ, ಕಾರಣ ನಡೆನುಡಿ ಒಂದಾದ ಶರಣ ಬಸವಣ್ಣ. ಅವರ ನುಡಿಯೆಲ್ಲಾ ಭಕ್ತಿ ಸುಭಾಷೆ. ನಡೆಯೆಲ್ಲ ಲಿಂಗನಡೆ, ಅವರು ನುಡಿದಂತೆ ನಡೆದುದೇ “ಬಸವ ಭಾಷೆ”. ಇಂದು ಸಾವಿರಾರು ಜನರೆದುರು ಕೊಟ್ಟ ಭಾಷೆಯನ್ನು ಪೂರೈಸದ ಕೆಟ್ಟ ಜನಾಂಗ ನಿರ್ಮಾಣವಾಗುತ್ತಿದೆ. ಕೊಟ್ಟ ಮಾತನ್ನು ಪ್ರಾಣವಿತ್ತು ಪೂರೈಸಿದ ಶ್ರೇಷ್ಠ ಸಂಸ್ಕೃತಿಯ ಪರಂಪರೆಯವರಲ್ಲಿ ಮಾತು ಕೃತಿಗಳ ಅಂತರ ಹೆಚ್ಚಾಗಿ, ಅಂತು – ಇಂತು ಎಂತೆ ಆಗಲಿ ಸಿರಿವಂತರಗಲಿ ಎಂಬ ಭ್ರಷ್ಟ, ನೀತಿಗೆಟ್ಟ ನಡೆಯೇ ಆದರ್ಶವಾಗುತ್ತಿರುವುದು ಅಧಹಃ ಪತನದ ಸ್ಪಷ್ಟ ಸೂಚಾನೆಯಾಗಿದೆ. ಇಂಥ ದುರ್ಧರ ಪ್ರಸಂಗದಲ್ಲಿ ನುಡಿಯನ್ನು ನಡೆಯಲ್ಲಿ ಪೂರೈಸಿದ ಬಸವ ಭಾಷೆಯ ಅರಿವು ಮೂಡಿಸುವ ಅಗತ್ಯ ಮನಗಂಡು ಹೊರ ಬರುತ್ತಿದೆ ಈ ಬಸವ ಭಾಷೆ.
ಇಲ್ಲಿ ಬಸವಣ್ಣನವರ ವಚನಗಳಲ್ಲಿ ವ್ಯಕ್ತವಾದ, ಭೀಮಕವಿಯ ಬಸವಪುರಾಣದಲ್ಲಿ ಉಕ್ತವಾದ ಇಪ್ಪತ್ತೊಂದು ಭಾಷೆಗಳ ವ್ಯಾಖ್ಯಾನವಿದೆ.
ಬಸವ ಭಾಷೆ ಇಂದು ಗುರುವಾಜ್ಞೆಯಾಗಿ ಪಾಲಿಸಲ್ಪಡ ಬೇಕು. ಪರಮ ಸಿದ್ಧಿಗೆ ಜೀವನ ಶುದ್ಧಿ ಬೇಕು. ಶುದ್ಧ ಜೀವನಕ್ಕೆ ಭಾಷಾ ಬದ್ಧತೆ ಅಗತ್ಯ. ಭಾಷಾ ಬದ್ಧತೆ ದೇವನಲುಮೆಯ ಸಿದ್ಧತೆ. ಈ ಸಿದ್ಧತೆಯಲ್ಲಿ ನಮ್ಮ ಮೈಮನಗಳನ್ನು ಸಿದ್ಧಾಗೊಳಿಸುವ ಸಾಧಾನವಾಗಿ ಮೂಡಿ ಬಂದಿದೆ ಪ್ರಸ್ತುತ ಬಸವ ಭಾಷೆ.
” ಗುರು ಬಸವಣ್ಣನವರು ಮಾಡಿದ ಈ ಪ್ರತಿಜ್ಞೆಗಳು ಪ್ರತಿಯೊಬ್ಬರ ಜೀವನದ ಧ್ಯೇಯವಾಗಲಿ. ಸ್ವಾರ್ಥರಹಿತ ಪ್ರೇಮ ಸಹಿತ, ಎಲ್ಲರೂ ಎಲ್ಲರನ್ನು ಎನ್ನವರೆಂದು ಪ್ರೀತಿಸುವ ಕಲ್ಯಾಣ ರಾಜ್ಯ ನಿರ್ಮಾಣವಾಗಲಿ. ಸರ್ವರೂ ನಿಜಸುಖ ಸಂಪನ್ನರಾಗಲಿ “. ಈ ಎಲ್ಲ ಸದಾಶಯಗಳನ್ನು ಬಸವ ಭಾಷೆ ಪೂರೈಸಲೆಂದು ಬಯಸುವೆವು.

ಶ್ರೀಮತಿ ರೇಖಾ ಶಿ ವಡಕಣ್ಣವರ್
ಲಕ್ಷ್ಮೇಶ್ವರ

Don`t copy text!