ಹೆಸರು ಹುಟ್ಟಿನ ಹಾದಿಯಲಿ

ಹೆಸರು ಹುಟ್ಟಿನ ಹಾದಿಯಲಿ

ಹಿಂದಿನ ಕಾಲದಲ್ಲಿ ಮನುಷ್ಯನ ಹುಟ್ಟು ಮತ್ತು ಸಾವು ಇವೆರಡರ ಲೆಕ್ಕ ಇಡುವ ಕೆಲಸ ಅಷ್ಟೊಂದು ಮಹತ್ವದ್ದಾಗಿರಲಿಲ್ಲ. ಆದರೆ ಇಂದು ಜನಗಣತಿ, ಆಧಾರ ಕಾರ್ಡ್, ಪ್ಯಾನ್ ಕಾರ್ಡ್, ಲೈಸೆನ್ಸ್, ಎಟಿಎಮ್ ಕಾರ್ಡ್, ಸೀನಿಯರ್ ಸಿಟಿಜನ್ ಕಾರ್ಡ್, ಲೈಫ್ ಸರ್ಟಿಫಿಕೇಟ್ ಮುಂತಾದ ಮಾಹಿತಿಗಳು ವ್ಯಕ್ತಿಯ ಇರುವಿಕೆ ಮತ್ತು ಸಮಗ್ರ ಪರಿಚಯ ನೀಡುತ್ತವೆ. ಸರಕಾರದಿಂದ ಹುಟ್ಟು ಮತ್ತು ಸಾವು ಎರಡನ್ನೂ ನೋಂದಣಿ ಮಾಡಿಕೊಳ್ಳಲು ಪ್ರತಿ ಊರಿನಲ್ಲಿ ಕಛೇರಿ ನಿರ್ಮಿಸಲಾಗಿದೆ. ಜನ ಸಾಮಾನ್ಯರಲ್ಲಿ ಇದರ ಕುರಿತು ಜಾಗೃತಿ ಮೂಡಿಸಲಾಗಿದೆ.

ಆದರೆ ಅಪ್ಪ ಹುಟ್ಟಿದ ಕಾಲ ೧೯೪೦. ಆಗ ಇದಾವುದೂ ಇರಲಿಲ್ಲ. ಕರ್ನಾಟಕದ ಕಿರೀಟದಂತಿರುವ ಬೀದರ ಜಿಲ್ಲೆಯ ತುತ್ತ ತುದಿಯ ಊರು ಔರಾದ ತಾಲೂಕಿನಲ್ಲಿ ಹುಟ್ಟಿದನು. ಈ ಭಾಗ ಶೈಕ್ಷಣಿಕವಾಗಿ ಹಿಂದುಳಿದುದರಿಂದ, ಕ್ರಮಬದ್ಧವಾದ ಶಿಕ್ಷಣ ಸಿಗಲಿಲ್ಲ. ವೈಯಕ್ತಿಕ ಮಹತ್ವಾಕಾಂಕ್ಷೆಯಿಂದ ಕಷ್ಟಪಟ್ಟು ಪಡೆದುಕೊಂಡ ಹೋರಾಟದ ವಿದ್ಯಾಭ್ಯಾಸ.

ನನಗೆ ತಿಳುವಳಿಕೆ ಬಂದಾಗಿನಿಂದ ಅವ್ವ ಬಸವ ಜಯಂತಿಯ ದಿನದಂದು ಅಪ್ಪನ ಹುಟ್ಟಿದ ಹಬ್ಬ ಆಚರಿಸುತ್ತಿದ್ದಳು. ಅಪ್ಪನಿಗೆ ಹೋಳಿಗೆ ಇಷ್ಟವಿಲ್ಲದಿದ್ದರೂ ಆ ದಿನ ಭರ್ಜರಿ ಹೋಳಿಗೆ, ಹಾಲು, ತುಪ್ಪ, ಅನ್ನ, ಸಾರು, ಹಪ್ಪಳ, ಸಂಡಿಗೆಯ ಸಡಗರ. ಅವ್ವನ ಮನಸಿಗೆ ನೋವಾಗದಿರಲೆಂದು ಒಂದು ಹೋಳಿಗೆ ಮಾತ್ರ ಊಟ ಮಾಡುತ್ತಿದ್ದ. ಅನ್ನ ಮತ್ತು ಹೋಳಿಗೆ ಸಾರು ಇಷ್ಟಪಟ್ಟು ಊಟ ಮಾಡುತ್ತಿದ್ದ.

ಒಮ್ಮೆ ಔರಾದಿಗೆ ಹೋದಾಗ ಅಪ್ಪ ಬಸವ ಜಯಂತಿಗೆ ಹುಟ್ಟಿರುವುದನ್ನು ಖಾತ್ರಿಪಡಿಸಿಕೊಳ್ಳಲು ಅಜ್ಜಿಯನ್ನು ವಿಚಾರಿಸಿದೆವು.
‘ಅಜ್ಜಿ ಅಜ್ಜಿ, ಅಪ್ಪ ಯಾವಾಗ ಹುಟ್ದ ಹೇಳು?’
ಅಜ್ಜಿ ಉತ್ತರಿಸದೆ ತನ್ನ ಕೆಲಸದಲ್ಲಿ ತಾನು ಮಗ್ನ.
ಅಲ್ಲೇ ಇದ್ದ ಅತ್ತೆ, ‘ಏ ಪಾರ್ಗೊಳೆ ನೀವ್ ಬೆಂಗ್ಳೂರ್ ಮಂದಿ ಹಂಗ ಅಜ್ಜಿ ಅಜ್ಜಿ ಅಂದ್ರ ಅಕಿ ಓ ಕುಡಲ್ಲ. ಯವ್ವಾ! ಯವ್ವಾ! ಅಂತ ಕರೀರಿ. ಆಗ ಓ ಕುಡ್ತಾಳ.’
‘ಯವ್ವಾ! ಯವ್ವಾ!’ ಅಂತ ಕರೆದೆವು.
ಅಜ್ಜಿ ‘ಯಾನ್ ಮಗಾ?’ ಕೂಡಲೆ ಪ್ರತಿಕ್ರಿಯಿಸಿದಳು. ನನಗೂ ತಮ್ಮನಿಗೂ ಏನು ಕೇಳಬೇಕು ಅಂದಿದ್ದೆವೊ ಅದನ್ನು ಮರೆತೇ ಬಿಟ್ಟೆವು. ಎಲ್ಲರೂ ನಕ್ಕರು.

ನಮ್ಮ ಪ್ರಶ್ನೆಗೆ ಅಜ್ಜಿ ಹೇಳಿದ ಉತ್ತರ, ‘ನಿಮ್ಮೊಪ್ಪ ಬಸಣ್ಣನ ಹಬ್ಬಕ್ಕ ಹುಟ್ಯಾನ. ಅದ್ಕೆ ಬಶಣ್ಣಿ ಅಂತ ಹೆಸರಿಟ್ಟಿವ್ ಮಗಾ’. ಮುಂದೆ ಬಸವಣ್ಣಪ್ಪ ಸಿದ್ದಬಟ್ಟೆ ಅಥವಾ ಬಿ.ಜಿ.ಸಿದ್ದಬಟ್ಟೆ ಎಂದು ಅಪ್ಪ ಪ್ರಸಿದ್ದರಾದರು. ಮನೆಯಲ್ಲಿ ‘ಬಾಬು’ ಆಗಿ ಎಲ್ಲರ ಪ್ರೀತಿ ಪಾತ್ರನಾದನು.

ಆಗ ಹೆರಿಗೆಗಳು ಮನೆಯಲ್ಲೇ ಆಗುತ್ತಿದ್ದವು.‌ ಹಾಗೆಯೇ ಶಿಕ್ಷಣದ ಕೊರೆತೆಯೂ ಇನ್ನೊಂದು ಕಾರಣ. ಆದರೆ ಅಜ್ಜಿಯ ನೆನಪಿನ ಶಕ್ತಿಗೆ ಅವಾರ್ಡ್ ಕೊಟ್ಟರೂ ತಪ್ಪಿಲ್ಲ. ತನಗಿರುವ ಏಳು ಮಕ್ಕಳು, ಗರ್ಭಪಾತಗಳು, ಒಟ್ಟು ಮಕ್ಕಳ ಸಂಖ್ಯೆ ಎಲ್ಲವನ್ನೂ ಒಂದಾದ ಮೇಲೊಂದು ಹೇಳುತ್ತಿದ್ದಳು.
‘ನನ್ ಹಿರಿಮಗ ಬಸಣ್ಣನ ಅಮಾಸಿಗಿ ಹುಟ್ಟ್ಯಾನ’, ‘ನನ್ನ ಮಗಳು ಶ್ರಾಣವ ಮಾಸ್ದಾಗ ನಡುವಿನ ಶುಕ್ರಾರ್ ಹುಟ್ಟ್ಯಾಳ’, ಹೀಗೆ ಹುಣ್ಣಿಮೆ, ಅಮವಾಸೆ, ಹಬ್ಬ, ಹರಿದಿನಗಳ ಲೆಕ್ಕ ಇಟ್ಟು ಮಕ್ಕಳ ಜನ್ಮದ ದಿನ, ವಯಸ್ಸನ್ನು ಹೆಚ್ಚೂಕಡಿಮೆ ಮಾಡಿಕೊಂಡು ಅಂದಾಜಿನಿಂದ ಹೇಳುತ್ತಿದ್ದಳು. ಅಜ್ಜಿಯ ಲೆಕ್ಕಚಾರ ಕೇಳಿದರೆ ಆಶ್ಚರ್ಯ!

ಅಪ್ಪ ತೆರೆದ ಮನಸಿನ ಸೂಕ್ಷ್ಮ ಚಿಂತಕ. ಅಷ್ಟೇ ಭಾವನಾ ಜೀವಿಯೂ ಹೌದು. ಹೃದಯಕ್ಕೆ ತಟ್ಟುವ ಆರ್ದ್ರತೆಯ ಸಂಗತಿಗಳಿಗೆ ಬಹಳ ಬೇಗ ಕರಗಿ ನೀರಾಗಿ ಬಿಡುತ್ತಿದ್ದ. ಹಾಗೆಲ್ಲಾ ಸೂಕ್ಷ್ಮ ಸಂವೇದನೆ, ಸ್ಪಂದನೆ ಇದ್ದರೂ ಗಟ್ಟಿ ಮನಸು. ಮಾತುಗಳು ಕಠೋರವಾಗಿ ಇನ್ನೊಬ್ಬರನ್ನು ಚುಚ್ಚುತ್ತಿದ್ದವು. ಸತ್ಯದ ವಿಷಯಕ್ಕೆ ಸಿಟ್ಟು ಬಹಳ ಬೇಗ ಬರುತ್ತಿತ್ತು. ಕಾರಣ ಇಷ್ಟೇ ‘ವಾಸ್ತವವಾದ’. ಅಪ್ಪನ ಮಾತುಗಳು ಅನೇಕರಿಗೆ ಕಲ್ಲಿನಂತೆ, ಮುಳ್ಳಿನಂತೆ ಅನಿಸಿದ್ದೂ ಇದೆ. ಆದರೆ ಅದರ ಆಳದಲ್ಲಿ ವಾಸ್ತವ, ಜೀವನ ಸತ್ಯ, ಬದುಕಿನ ದರ್ಶನ ಅಡಗಿರುತ್ತಿತ್ತು.

‘ನಮ್ಮವ್ವ ನನಗ್ ಹಡದಾಳ್. ಅಕಿನ್ ಕಿಮ್ಮತ್ ತೋಲ್ ಅದ ಮಗಾ. ಈ ಜಗತ್ತ್ ತೋರ್ಸ್ಯಾಳ. ಅದೀಟೆ ಖರೆ ನೋಡ್. ಬಾಕಿ ಎಲ್ಲಾ ಸುಳ್ಳು’ ತಾಯಿಯ ಪ್ರೀತಿಯ ಗುಂಗಿನಲ್ಲಿ ಹೇಳುತ್ತಿದ್ದ. ಅಪ್ಪನಿಗೆ ಅವರವ್ವ ಬಸವಣ್ಣ ಅಂತ ಹೆಸರು ಇಟ್ಟಳು ನಿಜ. ಆದರೆ ಮುಂದೊಂದು ದಿನ ಬಸವಣ್ಣನಷ್ಟಲ್ಲದಿದ್ದರೂ, ಅದರೊಂದಂಶ ಕೆಲಸ ಮಾಡುತ್ತಾನೆಂದು ಆಕೆಗೆ ಗೊತ್ತಿರಲಿಲ್ಲ. ಮಗನೆಂಬ ವ್ಯಾಮೋಹ ಮಾತ್ರ ಆಗಾಧವಾಗಿತ್ತು.

ಬಾಲ್ಯದಲ್ಲಿ ಅಪ್ಪನಿಗೆ ತಿಳುವಳಿಕೆ ಬರುವ ಹೊತ್ತಿಗೆ ಅನೇಕ ಹೋರಾಟಗಾರರು, ಚಳುವಳಿಕಾರರು ಆದ ಗಾಂಧಿಜೀ, ಪಟೇಲರು ಅಗಲಿದ್ದರು. ದೇಶ ಸ್ವತಂತ್ರವಾದ ಸಂದರ್ಭದ ಅರಿವು ಇರಲಿಲ್ಲಿ. ಆದರೆ ಅಂಬೇಡ್ಕರ್ ಇನ್ನಿಲ್ಲ ಎನ್ನುವ ಸುದ್ದಿ ತಿಳಿದು ಬಂದಾಗ ಅಪ್ಪ ಹತ್ತನೇ ತರಗತಿಯಲ್ಲಿ ಓದುತ್ತಿದ್ದ.

ಆಗ ಅಪ್ಪನನ್ನು ಯಾರು ಶಾಲೆಗೆ ಸೇರಿಸಿದರೋ? ಯಾವ ದಿನಾಂಕದಂದು ಹುಟ್ಟಿದನೆಂದು ಬರೆಸಿದರೊ? ಒಂದೂ ಗೊತ್ತಿರಲಿಲ್ಲ. ಅದರ ಹಿಂದಿನ ಕತೆಯನ್ನೊಮ್ಮೆ ಹೇಳಿದ್ದ.

ಅಪ್ಪ ಆರಂಭದಲ್ಲಿ ಉರ್ದು, ಮರಾಠಿ, ಕನ್ನಡ ಮಾಧ್ಯಮದಲ್ಲಿ ಓದಬೇಕಾಯಿತು. ತನಗೆ ಸರಿಯಾಗಿ ತಿಳುವಳಿಕೆ ಬಂದಾಗ, ಅಂದರೆ ಹತ್ತನೇ ತರಗತಿಯ ಅರ್ಜಿ ತುಂಬಿಸುವಾಗ, ತನ್ನ ಹುಟ್ಟಿದ ತಾರೀಖನ್ನು ತಾನೇ ನಿರ್ಧರಿಸಿದ್ದ. ಆಗಸ್ಟ್ ಹದಿನೈದನೇ ತಾರೀಖಿನ ಮೇಲೆ ಬಹಳ ಪ್ರೀತಿ ಇತ್ತು. ಆ ದಿನವನ್ನೇ ಹುಟ್ಟಿದ ದಿನ ಮಾಡಿಕೊಳ್ಳುವ ಮನಸಾಗುತ್ತದೆ. ಆದರೆ ಇಡೀ ದೇಶ ಸ್ವಾತಂತ್ರ್ಯೋತ್ಸವದ ಸಂಭ್ರಮದಲ್ಲಿದ್ದರೆ, ತನ್ನ ಜನ್ಮ ದಿನ ಗೌಣವಾಗುತ್ತದೆ ಎಂದು ಭಾವಿಸಿ, ಆಗಸ್ಟ್ ಹದಿನಾಲ್ಕನ್ನು ಆಯ್ಕೆ ಮಾಡಿಕೊಳ್ಳುತ್ತಾನೆ.

ಮನುಷ್ಯನ ಹೆಸರು ಏನೇ ಇರಲಿ, ಹುಟ್ಟಿದ ದಿನಾಂಕ ಯಾವುದೇ ಇರಲಿ, ಗಣನೆಗೆ ಬರುವುದು ಅವನು ಹೇಗೆ ಬದುಕಿದ? ಎನ್ನುವುದು. ಅಪ್ಪ ಹೆಸರಿಗಾಗಿ ಎಂದೂ ಯಾವ ಕೆಲಸವನ್ನೂ ಮಾಡಲಿಲ್ಲ. ಸಾಧಿಸಲು ಬೇರೆ ಬೇರೆ ಮಾರ್ಗಗಳ ಹುಡುಕಿಕೊಂಡು ಹೋಗಲಿಲ್ಲ. ಅದಕ್ಕೊಂದು ಅನುಭವದ ಉದಾಹರಣೆಯೂ ಇದೆ. ಬೀದರಿಗೆ ಆಗಾಗ ಹೋದಾಗ, ಅಪ್ಪನನ್ನು ಗೌರವದಿಂದ ನೆನೆಯುತ್ತಾರೆ, ನನ್ನನ್ನು ಸಿದ್ದಬಟ್ಟೆಯವರ ಮಗಳೆಂದು ಗುರುತಿಸುತ್ತಾರೆ, ಆತ್ಮೀಯತೆಯಿಂದ ಮಾತನಾಡಿಸುತ್ತಾರೆ, ಮಗಳೆಂದು ಭಾವಿಸಿ ತವರಿನ ಪ್ರೀತಿ ತೋರುತ್ತಾರೆ. ಆಗ ಅಪ್ಪ ಹೇಗೆ ಜೀವನ ಸಾಗಿಸಿರಬಹುದು! ಚಿತ್ರ ಕಣ್ಣ ಮುಂದೆ ಬರುತ್ತದೆ.

ಇಡೀ ಜೀವನದಲ್ಲಿ ಅಪ್ಪ ಮನೆಗೆ ಹಿರಿಯ ಮಗನಾಗಿ ಜವಾಬ್ದಾರಿಗಳ ನಿಭಾಯಿಸುತ್ತ, ಶಿಕ್ಷಕನಾಗಿ ತನ್ನ ಕ್ಷೇತ್ರದಲ್ಲಿ ಹೋರಾಟ-ಸೇವೆಗಳ ಮಾಡುತ್ತ, ಒಳ್ಳೆಯ ಹೆಸರು ಮಾಡಿದ್ದನ್ನು ಇಂದಿಗೂ ಬೀದರ ಜನತೆ ಜ್ಞಾಪಿಸಿಕೊಳ್ಳುತ್ತದೆ.

-ಸಿಕಾ ಕಲಬುರ್ಗಿ

Don`t copy text!