ಅಧಿಕಾರಿಗಳ ಜವಾಬ್ದಾರಿ ಅರಿತು ಕೇಲಸ ಮಾಡಿ – ಶಾಸಕ ಹೂಲಗೇರಿ

 

ಅಧಿಕಾರಿಗಳ ಜವಾಬ್ದಾರಿ ಅರಿತು ಕೇಲಸ ಮಾಡಿ – ಶಾಸಕ ಹೂಲಗೇರಿ

e-ಸುದ್ದಿ ಲಿಂಗಸುಗೂರು

ಪಟ್ಟಣದ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ಶಾಸಕಡಿ.ಎಸ್‌.ಹೂಲಗೇರಿ ಅಧ್ಯಕ್ಷತೆಯಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ತಾಲೂಕಿನಾದ್ಯಂತ ಉತ್ತಮ ಮಳೆಯಾಗಿದ್ದು ರೈತರು ಬಿತ್ತನೆ ಕಾರ್ಯಕ್ಕೆ ಮುಂದಾಗಿದ್ದು ಕೃಷಿ ಇಲಾಖೆಯ ವತಿಯಿಂದ ಬಿತ್ತನೆ ಬೀಜಗಳನ್ನು ಸಮರ್ಪಕವಾಗಿ ವಿತರಣೆ ಮಾಡಬೇಕು ಎಂದು ಕೃಷಿ ಅಧಿಕಾರಿಗಳಿಗೆ ಸೂಚಿಸಿದರು.

ತಾಲೂಕಿನಲ್ಲಿ ಅಪೌಷ್ಟಿಕತೆ ನಿವಾರಣೆಗೆ ಹೆಚ್ಚಿನ ಅನುದಾನ ಖರ್ಚು ಮಾಡುತ್ತಿದೆ.ಆದರೆ ತಾಲೂಕಿನ ಅಂಗನವಾಡಿ ಕೇಂದ್ರಗಳಿಗೆ ಕಡಿಮೆ ಗುಣಮಟ್ಟದ ಮೊಟ್ಟೆಗಳನ್ನು ಮಾಡಲಾಗುತ್ತದೆ ಎಂಬ ಆರೋಪ ಕೇಳಿ ಬಂದಿದ್ದು ಇದಕ್ಕೆ ಕಡಿವಾಣ ಹಾಕಿ ಕಳಪೆ ಗುಣಮಟ್ಟದವುಗಳನ್ನು ಸರಬರಾಜು ಮಾಡುವವರ ಬಿಲ್ ತಡೆಹಿಡೆಯಬೇಕು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ಶರಣಮ್ಮ ಕಾರನೂರು ಅವರಿಗೆ ಸೂಚಿಸಿದರು.

ಲಿಂಗಸುಗೂರು ಪಟ್ಟಣದಲ್ಲಿ ಪ್ರಮುಖ ರಸ್ತೆಗಳು ,ಕೆಲ ವಾರ್ಡ್ ರಸ್ತೆಗಳು ಸರಿಯಾಗಿಲ್ಲ. ಮೇಲಿಂದ ಮೇಲೆ ಆಗಾಗ ವಿದ್ಯುತ್ ಅಡಚಣೆ ಉಂಟಾಗುತ್ತಿದ್ದು ಜನರಿಗೆ ತೊಂದರೆ ಆಗುತ್ತಿದೆ. ಕ್ಷೇತ್ರದ ಹಲವಾರು ಕಡೆಯಲ್ಲಿ ಸಂಪರ್ಕದ ಕೊರತೆಯನ್ನು ಸರಿಪಡಿಸಬೇಕು. ಸರ್ಕಾರದ ಅನುದಾನ ವಾಪಸ್ಸು ಹೋಗದಂತೆ ಎಲ್ಲಾ ಇಲಾಖೆಯ ಅಧಿಕಾರಿಗಳು ಸಮನ್ವಯದೊಂದಿಗೆ ಶ್ರಮವಹಿಸಿ ಕೇಲಸ ಮಾಡಬೇಕು ಎಂದು ಹೇಳಿದರು.

ತಾಲೂಕಿನಾದ್ಯಂತ ಶುದ್ಧ ಕುಡಿಯುವ ನೀರಿನ ಘಟಕಗಳು ಉಸ್ತುವಾರಿಯನ್ನು ಸರಿಯಾಗಿ ನಿರ್ವಹಿಸವಲ್ಲಿ ವಿಫಲರಾಗಿದ್ದಿರಿ. ಸಾಕಷ್ಟು ಘಟಕಗಳು ನಿರುಪಯುಕ್ತವಾಗಿವೆ. ಸರ್ಕಾರದ ಹಣ ವ್ಯಯವಾದರೂ ಜನತೆಗೆ ಶುದ್ಧ ಕುಡಿಯುವ ನೀರು ಕೊಡಲು ಇಲಾಖೆಯಿಂದ ಸಾಧ್ಯವಾಗುತ್ತಿಲ್ಲ . ಜನರು ನಮ್ಮನ್ನು ಕಂಡಲ್ಲಿ ತರಾಟೆಗೆ ತೆಗೆದುಕೊಳ್ಳುತ್ತಾರೆ ಸಂಬಂಧಪಟ್ಟ ಅಧಿಕಾರಿಗಳು ಈ ಸಮಸ್ಯೆಯನ್ನು ಪರಿಹರಿಸಲು ತಾಕೀತು ಮಾಡಿದರು.

ವಿಧಾನ ಪರಿಷತ್ ಸದಸ್ಯ ಶರಣಗೌಡ ಪಾಟೀಲ್ ಬಯ್ಯಾಪುರ ಮಾತನಾಡಿ ತಾಲೂಕಿನ ಅಮರೇಶ್ವರ ರಸ್ತೆಯು ಸಂಪೂರ್ಣವಾಗಿ ಕಳಪೆ ಗುಣಮಟ್ಟದ್ದಾಗಿದೆ. ಪಿ.ಡಬ್ಲ್ಯೂ.ಡಿ ಅಧಿಕಾರಿಗಳು ಕಮಿಷನ್ ಆಸೆಗೋಸ್ಕರ ಕಾಮಗಾರಿ ಗುಣಮಟ್ಟ ಕಾಪಾಡುವಲ್ಲಿ ವಿಫಲರಾಗಿದ್ದಿರಿ ಎಂದು ಜೆ ಇ.ಯಲಗೂರೆಶ ಅವರನ್ನು ತರಾಟೆಗೆ ತೆಗೆದುಕೊಂಡರು. ನಾಲ್ಕನೆಯ ಪಾರ್ಟಿಯ ತನಿಖೆ ಮಾಡಲು ಕ್ರಮ ಕೈಗೊಳ್ಳುವಂತೆ ಸಂಬಂದಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ನಾಮ ನಿರ್ದೇಶಿತ ಸದಸ್ಯ ಸ್ಮಿತಾ ಅಂಗಡಿ ಮಾತನಾಡಿ ಪಟ್ಟಣದಲ್ಲಿ ದಿನದಿಂದ ದಿನಕ್ಕೆ ಟ್ರಾಫಿಕ್ ಸಮಸ್ಯೆ ಹೆಚ್ಚಾಗುತ್ತಿದ್ದು ರಸ್ತೆಗಳು ಸಂಪೂರ್ಣ ಹಾಳಾಗಿವೆ. ಅಗಲೀಕರಣ ಕಾಮಗಾರಿಯನ್ನು ಆದಷ್ಟು ಬೇಗ ಪೂರ್ಣಗೊಳಿಸಬೇಕು ಎಂದರು.

ಈ ಸಂದರ್ಭದಲ್ಲಿ ತಾ.ಪಂ ಆಡಳಿತಾಧಿಕಾರಿ ಡಾ.ರೋಹಿಣಿ, ತಾ.ಪಂ ಇ.ಒ ಅಮರೇಶ ಯಾದವ,ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ಮಹಾಂತೇಶ ಪಾಟೀಲ್, ಸೇರಿದಂತೆ ನಾಮನಿರ್ದೇಶಿತ ಸದಸ್ಯರು,ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Don`t copy text!