ನಿಜ ಶರಣ ಅನುಭಾವಿ ಸಕಳೇಶ ಮಾದರಸ

ನಿಜ ಶರಣ ಅನುಭಾವಿ ಸಕಳೇಶ ಮಾದರಸ

ಸಕಳೇಶ ಮಾದರಸರು ಕಲ್ಯಾಣ ನಾಡಿನ ಶರಣ ಸಂಕುಲದ ಶ್ರೇಷ್ಠ ವಚನಕಾರರು ಅನುಭಾವಿಗಳು. ಆಂಧ್ರ ಮೂಲದ ಇವರು ರಾಜಮನೆತನದವರು.ರಾಜಕುಮಾರನಾದ ಸಕಲೇಶ ಮದರಸನು ಒಬ್ಬ ಸಂಗೀತ ತಜ್ಞನಾಗಿದ್ದನು ತಾವು ಮತ್ತು ಶರಣರು ರಚಿಸಿದ ವಚನಗಳನ್ನು ಸುಶ್ರಾವ್ಯವಾಗಿ ಹಾಡುತ್ತಿದ್ದನು .ಮಾದರಸ ಶ್ರೇಷ್ಠ ಸಂಗೀತಜ್ಞಾನಿ ಆಗಿದ್ದ. ವೀಣಾದಿ ಅನೇಕ ವಾದ್ಯಗಳನ್ನು ನುಡಿಸುವುದರಲ್ಲಿ ಪರಿಣಿತನೆನಿಸಿದ್ದ. ‘ಸಕಳೇಶ್ವರದೇವ’ ಎಂಬ ಅಂಕಿತದಲ್ಲಿ ೧೩೩ ವಚನಗಳು ದೊರೆತಿವೆ. ಆತ್ಮನಿರೀಕ್ಷಣೆ, ಶಿವಭಕ್ತಿಯ ತೀವ್ರತೆ, ಪ್ರಸಾದ ಮಹತ್ವ, ನೀತಿಭೋದೆ, ಆಚಾರ, ನಿಷ್ಠೆ, ಸಮಾಜವಿಮರ್ಶೆ ಇವುಗಳಲ್ಲಿ ಒಡೆದು ತೋರುತ್ತವೆ. ಅನೇಕ ವಚನಗಳಲ್ಲಿ ವೈಯುಕ್ತಿಕ ಬದುಕಿನ ಅಂಶಗಳು, ಸಂಗೀತ ಸಂಬಂಧಿ ಉಲ್ಲೇಖಗಳು ಅಳವಟ್ಟಿರುವುದರಿಂದ ಚಾರಿತ್ರಿಕ ಮಹತ್ವ ಪ್ರಾಪ್ತವಾಗಿದೆ.

ಸಕಳೇಶ ಮಾದರಸರ ಸಂಕ್ಷಿಪ್ತ ಪರಿಚಯ ( ಹಿನ್ನೆಲೆ )
ಸಕಳೇಶ ಮಾದರಸರು ಬಸವಣ್ಣನವರ ಹಿರಿಯ ಸಮಕಾಲೀನರು. ಕಲ್ಲುಕುರಿಕೆ ಎಂಬ ಊರಿನ ಅರಸರಾಗಿದ್ದವರು. ತಂದೆ ಮಲ್ಲಿಕಾರ್ಜುನ ಎಂಬ ಹೆಸರಿನವರು . ಮುಂದೆ ಕಾಲಾನಂತರದಲ್ಲಿ ಬಂದ ಕೆರೆಯ ಪದ್ಮರಸ, ಕುಮಾರ ಪದ್ಮರಸ, ಪದ್ಮಣಾಂಕ ಎಂಬ ಕವಿಗಳು ಇವರ ವಂಶದವರು ಎಂಬುದನ್ನು ಸಂಶೋಧನೆಗಳು ಸೂಚಿಸುತ್ತವೆ. ‘ಸಕಳೇಶ್ವರದೇವಾ’ ಎಂಬ ಅಂಕಿತದಲ್ಲಿ ಮಾದರಸರು ಬರೆದಿರುವ 133 ವಚನಗಳು ದೊರೆತಿವೆ.

( “ಕರ್ನಾಟಕ ಶರಣ ಕಥಾಮೃತ” ಎಂಬ ತಮ್ಮ ಕೃತಿ ಯಲ್ಲಿ -ಡಾ. ಎಚ್ ತಿಪ್ಪೆರುದ್ರಸ್ವಾಮಿಯವರು ಈ ಸಕಲೇಶ ಮಾದರಸರ ಕುರಿತು ಒಂದು ಕಥೆಯನ್ನು ಈ ಕೆಳಗಿನಂತೆ ನಿರೂಪಿಸುತ್ತಾರೆ).

ಸಕಲೇಶ ಮಾದರಸರ ತಂದೆ ಮಲ್ಲಿಕಾರ್ಜುನರು ಕಲ್ಲುಕುರಿಕೆಯ ರಾಜರಾಗಿದ್ದವರು. ಅವರಿಗೆ ಮುಂದೆ ವೈರಾಗ್ಯ ಬಂದು ರಾಜ್ಯವನ್ನು ಮಗ ಮಾದರಸರಿಗೆ ವಹಿಸಿ ಕೊಟ್ಟು ತಾವು ಶ್ರೀಶೈಲಕ್ಕೆ ಹೊರಡುತ್ತಾರೆ .

ಆನಂತರ ಕೆಲವು ವರ್ಷಗಳವರೆಗೆ ಮಾದರಸರು ರಾಜ್ಯವಾಳುತ್ತಾರೆ. ಶಿವಭಕ್ತರಾದ ಇವರು ಚೆನ್ನಾಗಿ ರಾಜ್ಯಭಾರ ನಿರ್ವಹಿಸಿ,ಜನಾನುರಾಗಿಗಳಾಗಿ ಆಗ ‘ಸಕಲೇಶ ಮಾದರಸ’ ಎಂಬ ಹೆಸರು ಪಡೆಯುತ್ತಾರೆ. ಆದರೆ, ಕೆಲ ಸಮಯದ ನಂತರ ಅವರಿಗೂ ವೈರಾಗ್ಯ ಹುಟ್ಟುತ್ತದೆ. ಅವರೂ ಕೂಡ ರಾಜ್ಯವನ್ನು ತ್ಯಜಿಸಿ ಶ್ರೀಶೈಲದ ಕೆಡೆಗೆ ಹೊರಡುತ್ತಾರೆ.

ದಾರಿಯಲ್ಲಿ “ಅಂಬೆ” ಎಂಬ ಊರಿನಲ್ಲಿ ಉಳಿದು ಕೊಂಡಾಗ ಅಲ್ಲಿಯ ಜನರು ಇವರ ಪೂಜಾವಿಧಿ ಯಿಂದ ಆಕರ್ಷಿತರಾಗುತ್ತಾರೆ. ಮಾದರಸರು ಅತ್ಯಂತ ವೈಭವದಿಂದ ಪೂಜೆ ಮಾಡುತ್ತಿರುತ್ತಾರೆ. ಅನೇಕ ರೀತಿಯ ಪುಷ್ಪ ಪತ್ರೆಗಳಿಂದ, ಧೂಪ ದೀಪಗಳಿಂದ ಅವರ ಪೂಜೆ ಸಂಪನ್ನವಾಗುತ್ತಿರುತ್ತದೆ. ಇದರಿಂದ ಜನರು ಪೂಜೆ ಮಾಡಲು ಅವರನ್ನು ತಮ್ಮ ತಮ್ಮ ಮನೆಗಳಿಗೆ ಕರೆಯ ತೊಡಗುತ್ತಾರೆ. ಅವರೂ ಸಹ ಪೂಜೆಯ ಸಾಮಗ್ರಿಗಳಿಗಾಗಿ 12 ವರಹಗಳನ್ನು ತೆಗೆದುಕೊಳ್ಳುತ್ತಿರುತ್ತಾರೆ. 12 ವರಹಗಳನ್ನು ಕೊಡದವರ ಮನೆಗೆ ಅವರು ಪೂಜೆ ಮಾಡಲು ಹೋಗುತ್ತಿರಲು ಆಗುತ್ತಿರಲಿಲ್ಲ .ಹೀಗಿರುವಾಗ,ಒಮ್ಮೆ ಕಡು ಬಡವ ನಾದ ಮಾದಯ್ಯನೆಂಬುವನಿಗೆ ತನ್ನ ಮನೆಯಲ್ಲಿ ಪೂಜೆ ಮಾಡಿಸಬೇಕೆಂಬ ಆಸೆ ಉಂಟಾಗುತ್ತದೆ. ಆದರೆ, ಬಡತನದಿಂದ ಹಾಗೆ ಮಾಡಲಾಗದಿದ್ದುದಕ್ಕೆ ಆತ ಬಹಳ ದುಃಖಪಟ್ಟು ಕೊಳ್ಳುತ್ತಾನೆ. ಇದರ ಅರಿವಿದ್ದ ಆತನ ಮಗಳು ತಂದೆಯ ದುಃಖವನ್ನು ನೋಡಲಾರದೆ ಆಕೆ ಒಂದು ಉಪಾಯವನ್ನು ಮಾಡುತ್ತಾಳೆ. ಆಕೆ ‘ ತನ್ನನ್ನು ಒತ್ತೆ ಇಟ್ಟು ಹಣವನ್ನು ಪಡೆದು ಪೂಜೆ ನೆರವೇರಿಸು’ ಎಂದು ತನ್ನ ತಂದೆಗೆ ಹೇಳುತ್ತಾಳೆ.ಪೂಜೆಯ ಮೋಹಕ್ಕೆ ಒಳಗಾಗಿದ್ದ ಆ ತಂದೆ ವಿವೇಕವನ್ನು ಕಳೆದುಕೊಂಡಿರುತ್ತಾನೆ. ಹಾಗಾಗಿ ಆತನು ಆಕೆ ಹೇಳಿದಂತೆಯೇ ಮಾಡುತ್ತಾನೆ.

ಸಕಲೇಶ ಮಾದರಸರು ಮಾದಯ್ಯನ ಮನೆಗೆ ಪೂಜೆಗೆಂದು ಬರುತ್ತಾರೆ. ಕಡುಬಡವನಾದ ಈತನು ಹಣವೆಲ್ಲಿಂದ ತಂದನು ಎಂದು ವಿಚಾರಿಸಿದಾಗ, ಮಾದರಸರಿಗೆ ಸತ್ಯ ತಿಳಿದು ಬರುತ್ತದೆ. ಆದರೂ ಪೂಜೆ ಕೈಗೊಳ್ಳುತ್ತಾರೆ. ಆದರೆ, ಮಾದರಸರಿಗೆ ತನ್ನ ಇಷ್ಟ ಲಿಂಗದಲ್ಲಿ ಮಾದಯ್ಯನ ಮಗಳ ದೀನವಾದ ಮುಖ ಗೋಚರಿಸುತ್ತದೆ! ಆಗ ಅವರಿಗೆ ಪೂಜೆಯಲ್ಲಿ ಮನ ನಿಲ್ಲುವುದಿಲ್ಲ ಮತ್ತು ತಾನು ಮಾಡುತ್ತಿರುವ ತಪ್ಪಿನ ಅರಿವೂ ಆಗುತ್ತದೆ. “ಭಕ್ತನ ಮಗಳನ್ನು ಮಾರಿಸುವಂತಾಯಿತೇ ನನ್ನ ಪೂಜೆ” ಎಂದು ಪಶ್ಚಾತಾಪಪಡುತ್ತಾರೆ. ಮಾದಯ್ಯನಲ್ಲಿ ಕ್ಷಮೆ ಕೇಳಿ ಆತನ ಮಗಳನ್ನು ಅವರಿಗೆ ಬಿಡಿಸಿ ಕೊಟ್ಟು ಆ ಊರನ್ನು ತೊರೆದು ಒಬ್ಬರೇ ಶ್ರೀಶೈಲದ ಕಡೆಗೆ ಹೊರಡುತ್ತಾರೆ.

ಅಲ್ಲಿ ಹೋಗಿ ತನ್ನ ತಂದೆಯಾದ ಮಲ್ಲಿಕಾರ್ಜುನರನ್ನು ಹುಡುಕಿ ಕಾಣುತ್ತಾರೆ. ಅಷ್ಟೊತ್ತಿಗೆ ಮಲ್ಲಿಕಾರ್ಜುನರು ಶಿವಯೋಗಿ ಮಲ್ಲಯ್ಯನಾಗಿ ಮಾರ್ಪಟ್ಟಿರುತ್ತಾರೆ.
ತಂದೆ ಶಿವಯೋಗಿ ಮಲ್ಲಯ್ಯನ ಆಶೀರ್ವಾದ ಪಡೆದು ಮಾದರಸರು ತಪಶ್ಚರ್ಯದಲ್ಲಿ ತೊಡಗುತ್ತಾರೆ.

ಇತ್ತ ಮಾದರಸರನ್ನು ನೋಡಿದ ಶ್ರೀಶೈಲ ಮಲ್ಲಯ್ಯ ನಿಗೆ ಮಾದರಸರ ಅಹಂಕಾರ ಇನ್ನೂ ಕಳೆಯದೆ ಇರುವುದು ತಿಳಿಯುತ್ತದೆ. ಅದನ್ನು ಪರೀಕ್ಷೆ ಮಾಡಲು ಒಮ್ಮೆ ಮಲ್ಲಯ್ಯನು ಕುರುಬನ ವೇಷದಿಂದ ಬಂದು ತಪಸ್ಸಿನಲ್ಲಿದ್ದ ಮಾದರಸರ ಮೈಮೇಲೆ ಗಿಡದ ಕೊಂಬೆ ಗಳನ್ನು ಎಸೆಯುತ್ತಾನೆ. ಇದರಿಂದ ಮಾದರಸರು ಅತ್ಯಂತ ಕೋಪಿಷ್ಠರಾಗಿ ಮಲ್ಲಯ್ಯನನ್ನು ಶಾಪದಿಂದ ಸುಟ್ಟು ಹಾಕಿಬಿಡುವೆನೆಂದು ಅಬ್ಬರಿಸುತ್ತಾರೆ. ಆಗ ಮಲ್ಲಯ್ಯನು ತನ್ನ ನಿಜರೂಪ ತೋರಿಸಿ, “ಕಾಡು ಸೊಪ್ಪನ್ನು ತಿಂದು ದೇಹವನ್ನು ದಂಡಿಸುವುದರಿಂದ ಯಾವ ಲಾಭವೂ ಇಲ್ಲ, ಶಿವಯೋಗವನ್ನು ಸಾಧಿಸಬೇಕು, ಅದಕ್ಕಾಗಿ ಕಲ್ಯಾಣಕ್ಕೆ ಹೋಗುವುದು ಸರಿಯಾದ ಮಾರ್ಗ” ವೆಂದು ತಿಳಿಸುತ್ತಾನೆ. ಹಾಗೂ “ಯಾವಾಗಲೂ ಇಂದ್ರಿಯಗಳನ್ನು ಕಾಯುತ್ತಿರುವುದು ಯೋಗವಲ್ಲ. ಅದು ದನ ಕಾಯುವ ಕೆಲಸ. ಇಂದ್ರಿಯ ನಿಗ್ರಹ ಸಹಜ ಸ್ಥಿತಿಯಾಗಿರಬೇಕು. ಆಗ ಮಾತ್ರ ಅದು ಶಿವಯೋಗ ಆಗುವುದು. ಶಿವಯೋಗವು ಎಲ್ಲ ಯೋಗಗಳ ಸಮ್ಮಿಶ್ರಣವಲ್ಲ. ಅದು ಎಲ್ಲವನ್ನೂ ಅರಗಿಸಿಕೊಂಡು ಮೂಡಿ ನಿಂತ ಹೊಸ ವಿಕಾಸ ಮಾರ್ಗ. ಪೂರ್ಣದೃಷ್ಟಿಯ ಪೂರ್ಣ ಯೋಗ.” ಎಂದು ತಿಳಿಸುತ್ತಾನೆ.ಇದು ಒಂದು ಕಥೆ ಪುರಾಣವೆನಿಸಿದರು ಸಹಿತ ಅದರ ಹಿಂದಿನ ಆಶಯವನ್ನು ಗುರುತಿಸುವುದು ಬಹು ಮುಖ್ಯ .

ಆಗ ಅಲ್ಲಿಂದ ಸಕಲೇಶ ಮಾದರಸರು ಕಲ್ಯಾಣಕ್ಕೆ ಬರುತ್ತಾರೆ. ಅನುಭವ ಮಂಟಪದಲ್ಲಿ ಯಾವ ಆಡಂಬರಕ್ಕೂ ಎಡೆಯಿಲ್ಲದ ಅಂತರಂಗ ಶುದ್ಧಿಯನ್ನು ಮಾದರಸರು ಕಂಡುಕೊಳ್ಳುತ್ತಾರೆ. ಕಲ್ಯಾಣದ ಶರಣರು ಆತನಿಗಾಗಿ ಒಂದು ಮಠವನ್ನು ಕಟ್ಟಿಸಿ ಕೊಡುತ್ತಾರೆ. ನಿತ್ಯ ಅನುಭವ ಮಂಟಪದಲ್ಲಿ ಮಾದರಸರು ಸಕ್ರಿಯವಾಗಿ ಭಾಗವಹಿಸುತ್ತಾರೆ. ಹಾಗೂ ವಚನಗಳನ್ನು ರಚಿಸುತ್ತಾರೆ. ಬಸವಣ್ಣನವರ ಸಾಮಾಜಿಕ ಕ್ರಾಂತಿಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಶರಣರ ವಚನಗಳನ್ನು ಸಂಗೀತ ಲಯ ತಾಳಕ್ಕೆ ತಕ್ಕಂತೆ ಸುಶ್ರಾವ್ಯವಾಗಿ ಹಾಡಿ ಶರಣರನ್ನು ಸಂತೋಷಗೊಳಿಸುವ ಕಾಯಕವನ್ನು ಸಕಳೇಶ ಮಾದರಸರು ಮಾಡುತ್ತಿದ್ದರು.

ಸಕಳೇಶ ಮಾದರಸರ ಅನುಭಾವಿ ವಚನಕಾರರು

ಕಂಡುದ ನುಡಿದಡೆ ಕಡುಪಾಪಿಯೆಂಬರು
ಸುಮ್ಮನಿದ್ದಡೆ ಮುಸುಕುರ್ಮಿಯೆಂಬರು
ಎನಲುಬಾರದು ಎನದಿರಲುಬಾರದು
ಸಟೆ ಕುಹಕ ಪ್ರಪಂಚಿಗಲ್ಲದೆ ಭಜಿಸರು
ಸಕಲೇಶ್ವರದೇವಾ ನಿಮ್ಮಾಣೆ.

ನೇರವಾಗಿ ಕಂಡದ್ದನ್ನು ಕಂಡ ಹಾಗೆ ಹೇಳಿದರೆ ಕಾಡು ಪಾಪಿ ಕೋಪಿಷ್ಠ ಎಂದೆನ್ನುವರು ,ಸುಮ್ಮನಿದ್ದಡೆ ಮುಸುಕು ಹಾಕಿಕೊಂಡ ಕಾರ್ಮಿ ಎಂಬರು. ಏನು ಹೇಳುವ ಹಾಗಿಲ್ಲ ಮತ್ತು ಹೇಳದೆ ಇರುವ ಹಾಗಿಲ್ಲ .ಜಗತ್ತಿನಲ್ಲಿ ವಾಸ್ತವಿಕ ಸತ್ಯವನ್ನು ಹೇಳುವುದು ಕಠಿಣ .ಜನ ನಾಟಕ ಮಾಡುವ ಕೃತ್ರಿಮ ಬದುಕಿಗೆ ಮಾರು ಹೋಗುವ ಜನರು ವಿಷಯಾದಿಗೆ
ಭಜಿಸುವರು ಬದುಕುವರು ಆದರೆ ಸಮಷ್ಟಿಯಲ್ಲಿನ ಸತ್ಯಕ್ಕಾಗಿ ಬದುಕುವವರನ್ನು ಒಬ್ಬರನ್ನು ಕಾಣೆ ಸಕಲೇಶ್ವರದೇವಾ ನಿಮ್ಮಾಣೆ.ಎಂದಿದ್ದಾರೆ. ವಿಡಂಬನೆ ಟೀಕೆ ವಚನದ ಪ್ರಧಾನ ವಸ್ತು.

ಅಂಗದ ಮೇಲಕ್ಕೆ ಶ್ರೀಗುರು ಲಿಂಗವಂ ಬಿಜಯಂಗೈಸಿದ ಬಳಿಕ,
ಅಷ್ಟವಿಧಾರ್ಚನೆ ಷೋಡಶೋಪಚಾರಂಗಳ
ಆಲಸ್ಯವಿಲ್ಲದೆ ಭಯಭಕ್ತಿಯಿಂದ ಮಾಡೂದು ಭಕ್ತಂಗೆ ಲಕ್ಷಣ.
ಇಂತಲ್ಲದೆ ಲಿಂಗಾರ್ಚನೆಯ ಬಿಟ್ಟು, ಕಾಯದಿಚ್ಛೆಗೆ ಹರಿದು,
ಅದ್ವೈತದಿಂದ ಉದರವ ಹೊರೆದಡೆ,
ಭವಭವದಲ್ಲಿ ನರಕ ತಪ್ಪದಯ್ಯ, ಸಕಳೇಶ್ವರಾ.

ಸಕಲೇಶ ಮಾದರಸರು ಗುರುವಿಟ್ಟ ಲಿಂಗದ ಕುರುಹು ಭಕ್ತನ ಆಧ್ಯಾತ್ಮಿಕ ಸಾಧನೆಗೆ ಸರ್ವಸ್ವವಾಗುತ್ತದೆ. ಹೀಗಿದ್ದಾಗಲೂ ಅಷ್ಟವಿಧಾರ್ಚನೆ ಷೋಡಶೋಪಚಾರಂಗಳ
ಆಲಸ್ಯವಿಲ್ಲದೆ ಭಯಭಕ್ತಿಯಿಂದ ಮಾಡೂದು ಭಕ್ತಂಗೆ ಲಕ್ಷಣವೇ ?. ಲಿಂಗವು ಅಂಗ ಲಿಂಗದ ಅರಿವಿನ ಯೋಗ ತ್ರಾಟಕ ದೃಷ್ಟಿಯೋಗದಿಂದ ಮನುಷ್ಯ ಪಾವನವಾಗುವ ಬಗೆಯನ್ನು ತೋರಿದ ಲಿಂಗವ ಮರೆತು ಅರ್ಥವಿಲ್ಲದ ಅಷ್ಟವಿಧ ಪೂಜೆ ಷೋಡಶೋಪಚಾರಂಗಳಮಾಡುವುದು ತರವೇ ? ಇಂತಹ adwaita andare devaru ಬೇರೆ ತಾನು ಬೇರೆ ಎಂಬ ಭಾವವನ್ನು ಹೊತ್ತು ಹೊಟ್ಟೆ ಉಪಜೀವನಕ್ಕೆ ಧರ್ಮವನ್ನು ಬದುಕುವ ಮಾರ್ಗವಾನಾಗಿ ಮಾಡಿಕೊಳ್ಳುವದರಿಂದ ಭಾವದಲ್ಲಿ ನರಕ ತಪ್ಪದು ಎಂದು ಎಚ್ಚರಿಸಿದ್ದಾರೆ ಸಕಳೇಶ ಮಾದರಸರು.

ಅಡವಿಗೆ ಹೋಗಿ ಏವೆನು ? ಮನದ ರಜತಮ ಬಿಡದು.
ಆಡ ಕಾವನ ತೋರಿ, ಗಿಡುವ ಕಡಿವನ ಬಡಿದೆ.
ಆಶ್ರಮವ ಕೆಡಿಸಿತ್ತಲ್ಲಾ.
ಸಕಳೇಶ್ವರದೇವಾ, ನಿನ್ನ ಮಾಯೆ ಎತ್ತಹೋದಡೂ ಬೆನ್ನಬಿಡದು.

ಭಕ್ತರು ಸಾಧಕರು ಕಾಡಿಗೆ ಹೋಗಿ ಏಕಾಂತದಲ್ಲಿ ತಪ್ಪಸ್ಸಿಗೆ ಕುಳಿತುಕೊಳ್ಳುತ್ತಾರೆ .ಆದರೆ ಮನದಲಿ ಇರುವ ರಜತಮ ಗುಣ ಬಿಡದು .ಆದರೆ ಗುರಿಕಾರ ಬೇಟೆಕಾರ ಗಿಡುಗ ಪಕ್ಷಿಯನ್ನು ಕೊಳ್ಳದೆ ಬಿಡುವನೇ? ಮನುಷ್ಯ ಮರವನ್ನು ಕಡಿಯದೆ ಬಿಡುವನೇ ? ಇಂತಹ ವಾನಪ್ರಸ್ಥ ಆಶ್ರಮಕ್ಕೆ ಹೋಗುವ ಜನರ ನೆಮ್ಮದಿ ಅಲ್ಲಿಯೂ ಹಳ್ಳಿಗುವದು ತಪ್ಪಿದ್ದಲ್ಲ
ನಿನ್ನ ಮಾಯೆ ಎತ್ತ ಹೋದರು ಬಿಡದು ಎಂದು ಆತ್ಮಾವಲೋಕನ ಮಾಡಿಕೊಂಡಿದ್ದಾರೆ ಸಕಲೇಶ ಮಾದರಸರು.

ಶೀಲ ಶೀಲವೆಂದು ಗರ್ವಿಕೃತದಲ್ಲಿ ನುಡಿವ
ಉದ್ದೇಶ ಪ್ರಾಣಿಗಳೆಲ್ಲರೂ ಅನಂತಶೀಲರೆ ?
ಹೂ ಬಾವಿ ಮಠಕ್ಕೆ ಸೀಮೆಯ ಮಾಡೂದು ಶೀಲವೇ ?
ಮನಕ್ಕೆ ಸೀಮೆಯ ಮಾಡೂದು ಶೀಲವಲ್ಲದೆ,
ಹುಸಿಯ ಕಳೆವುದು ಶೀಲವಲ್ಲದೆ, ಭಕ್ತರ ಕಳೆವುದು ಶೀಲವೆ?
ಲಿಂಗಪ್ರಾಣವ ಮಾಡೂದು ಶೀಲವಲ್ಲದೆ,
ಪ್ರಾಣಲಿಂಗವ ಮಾಡೂದು ಶೀಲವೆ?
ಇಂತೆಲ್ಲ ಶೀಲರು ದುಶ್ಶೀಲರು.
ಸಕಳೇಶ್ವರದೇವಾ, ನಾನೇನೆಂದರಿಯೆ, ನೀನಿರಿಸಿದಂತಿರ್ಪೆ.

ಶೀಲ ಮಾಡಿ ಹುಡಿ ಆಚರಣೆಗೆ ಕಟ್ಟು ಬಿದ್ದು ಸೀಮೆ ಬಂಧನ ಸಂಕೋಲೆ ತೊಡಸುವ ನಾವುಗಳು ಪ್ರಾಣಿಗಳಲ್ಲಿ ಶೀಲವನ್ನು ಕಾಣುತ್ತೆವೆಯೇ.? ಹೂವುಗಳನ್ನು ಆಯ್ಕೆ ಮಾಡುವಾಗ ಬಾವಿಯ ನೀರು ಸೀಮಿತಗೊಳಿಸಿ ಅಲ್ಲಿ ಸ್ಪರ್ಶ ಆಸ್ಪರ್ಶ ಸಿಮಿ ಮಾಡೋದು ಸರಿಯೇ ?ಮನಕ್ಕೆ ಸೀಮೆ ಮಾಡಬೇಕಲ್ಲದೆ ಕಾಯಕ್ಕೆ ಶೀಲವನ್ನು ಅಳವಡಿಸುವುದು ಶೀಲವೇ ? ಹುಸಿಯನ್ನು ಕಳೆಯಬೇಕಾಗಿರುವುದು ಶೀಲವಲ್ಲದೆ? ಹುಸಿ ಮಾತನಾಡುತ್ತ ಆಷಾಢಭೂತಿಗಳ ಸಂಪ್ರದಾಯವಾದಿಗಳ ಮಾತುಗಳು ಶೀಲವೇ ?ಲಿಂಗವನ್ನು ಪ್ರಾಣಮಯ ಮಾಡಬೇಕಲ್ಲದೆ ಪ್ರಾಣಲಿಂಗವನ್ನು ಮಾಡೋದು ಶೀಲವೇ ? ಇಂತಹ ಶೀಲರು ದುಶೀಲರುಯಾರು ಎಂದು ಅರಿಯುವುದು ಬಹು ಕಷ್ಟ .
ನಾನು ನೀನು ಇರಿಸಿದ ಸ್ಥಿತಿಯಲ್ಲಿ ಸಹಜವಾಗಿರುವೆನು ಎಂದಿದ್ದಾರೆ ಶರಣರು.

ಬಸವಣ್ಣನ ಭಕ್ತಿಪ್ರಸಾದವ ಕೊಂಡೆನಯ್ಯಾ.
ಚೆನ್ನ ಬಸವಣ್ಣನ ಜ್ಞಾನಪ್ರಸಾದವ ಕೊಂಡೆನಯ್ಯಾ.
ಪ್ರಭುದೇವರ ಬಯಲಪ್ರಸಾದವ ಕೊಂಡೆನೆಯ್ಯಾ.
ಮಡಿವಾಳಯ್ಯನ ಕರುಣಪ್ರಸಾದವ ಕೊಂಡೆನಯ್ಯಾ.
ಸಿದ್ಧರಾಮಯ್ಯನ ನಿರ್ಮಲಪ್ರಸಾದವ ಕೊಂಡೆನಯ್ಯಾ.
ಮರುಳಶಂಕರದೇವರ ಪ್ರಸನ್ನ ಪ್ರಸಾದವ ಕೊಂಡೆನಯ್ಯಾ.
ಏಳ್ನೂರೆಪ್ಪತ್ತುಮರಗಣಂಗಳ ಪರಮಪ್ರಸಾದವ ಕೊಂಡು.
ಬದುಕಿದೆನಯ್ಯಾ, ಸಕಳೇಶ್ವರಾ.

ಬಸವಣ್ಣ ಕಲ್ಯಾಣ ಕ್ರಾಂತಿಯ ಕೇಂದ್ರ ಬಿಂದು.ಆತನ ಭಕ್ತಿಯೇ ಎಲ್ಲಾ ಶರಣರಿಗೂ ಪ್ರಸನ್ನತೆಗೆ ಕಾರಣ .ಅಂತಹ ಭಕ್ತಿಯೇನೆಂಬ ಮಹಾಪ್ರಸಾದವನ್ನು ಬಸವಣ್ಣನವರಿಂದ ಪಡೆದೆನು ಎಂದಿದ್ದಾರೆ. ಚೆನ್ನ ಬಸವಣ್ಣನವರಿಂದ ಜ್ಞಾನ ಪ್ರಸಾದವನ್ನು ಪಡೆದೆ ,ಪ್ರಭುದೇವರಿಂದ ಬಯಲ ಪ್ರಸಾದ ನಿಷ್ಪತ್ತಿ ಎಂಬ ಅರಿವಿನ ಪ್ರಸಾದವನ್ನು ಪಡೆದೆನು .ಮಡಿವಾಳ ಮಾಚಿದೇವರಿಂದ ಕರುಣಾ ಪ್ರಸಾದವನ್ನು ಪಡೆದುಕೊಂಡೆ ಸಿದ್ಧರಾಮಯ್ಯನವರಿಂದ ನಿರ್ಮಲ ಪ್ರಸಾದವನ್ನು ಪಡೆದುಕೊಂಡೆ .ಮರುಳ ಶಂಕರದೇವರಿಂದ ಪ್ರಸನ್ನ ಪ್ರಸಾದವನ್ನು ಪಡೆದುಕೊಂಡೆ ಸಂತೃಪ್ತಿಯ ಮಹಾ ಭಾವವನ್ನು ಮರುಳ ಶಂಕರದೇವರಿಂದ ಪಡೆದುಕೊಂಡೆ ಎಂದು ಹೇಳುತ್ತಾರೆ ಕಾರಣ ಮಹಾಮನೆಯಲ್ಲಿ ಅಳಿದುಳಿದ ಪ್ರಸಾದವನ್ನು ಹೆಕ್ಕಿ ಬಡವರಿಗೆ ಅಂಗವಿಕಲರಿಗೆ ವೃದ್ಧರಿಗೆ ಹಂಚುವ ಗೌಪ್ಯ ಕಾಯಕವನ್ನು ಮರುಳ ಶಂಕರದೇವರು ಮಾಡುತ್ತಿರುತ್ತಾರೆ.ಇಂತಹ ಮಹಾನುಭಾವಿ ಶರಣನು ಅಲ್ಲಮಪ್ರಭುಗಳು ಬರುವವರೆಗೂ ಬಸವಣ್ಣನವರ ಕಣ್ಣಿಗೆ ಬಿದ್ದಿರುವದಿಲ್ಲ ಎಂದು ಶೂನ್ಯ ಸಂಪಾದನಕಾರರು ಹೇಳುತ್ತಾರೆ.ಇಂತಹ ಏಳುನೂರಾ ಎಪ್ಪತ್ತು ಜನರ ಅಮರಗಣಂಗಳ ಪರಮ ಪ್ರಸಾದವನ್ನು ಕೊಂಡು ಬದುಕಿದೆನು ಎಂದು ಅತ್ಯಂತ ಧನ್ಯತಾ ಭಾವದಿಂದ ಹೇಳುತ್ತಾರೆ.

ಆತ್ಮ ಶೋಧನೆ, ವಿಡಂಬನೆ, ಪ್ರಸಾದ ಮಹತ್ವ, ನೀತಿ ಬೋಧೆ, ಆಚಾರ, ಭಕ್ತಿಯ ತೀವ್ರತೆ, ಅಹಂಕಾರ ನಿರಸನ – ಇವೇ ಮೊದಲಾದ ವಿಷಯಗಳ ಪ್ರತಿಪಾದನೆ ಸಕಳೇಶ ಮಾದರಸರ ವಚನಗಳಲ್ಲಿ ಕಾಣಬಹುದು. ಶರಣ ಸಂಕುಲದ ಮೇರು ಅನುಭಾವಿ ಕಲ್ಯಾಣ ಕ್ರಾಂತಿಯ ಸಾಮಾಜಿಕ ಕಾರ್ಯ ಸೈದ್ಧಾಂತಿಕ ಸಂಘರ್ಷದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದಾನೆ.

ಸಮಾಧಿಯ ಶೋಧ

ಸಮಾಧಿ ಎಂಬುದು ಮುಕ್ತಿ ಬದುಕಿನ ಒಂದು ಹಂತ ನಿರ್ಗಮನದ ಆದೇಶ .ಸಮಾಧಿ ಎನ್ನುವುದು ಒಂದು ಸ್ಥಲ.ಶರಣರು ಮೂರು ರೀತಿಯಲ್ಲಿ ಸಂಧಿ ಹೊಂದಿದ್ದಾರೆ.
ಭೂ ಸಮಾಧಿ ಜಲ ಸಮಾಧಿ ಹಾಗು ಬಯಲು ಸಮಾಧಿ. ಎಲ್ಲಿಯೂ ಅಗ್ನಿಗೆ ಅರ್ಪಿಸಿಕೊಂಡಿಲ್ಲ ಆಚರಣೆಯ ಬಂಧನದಲ್ಲಿ ಸಿಲುಕಿಲ್ಲ ಶರಣರು ಅಂತೆಯೇ ಶರಣರ ಬಾಳು ಕೊನೆಯಲ್ಲಿ ಕಾಣು ಎನ್ನುವಂತೆ ತಮ್ಮ ಸರಳ ಸಹಜವಾದ ಬದುಕನ್ನು ಪಂಚ ಮಹಾಭೂತಗಳಲ್ಲಿ ಅರ್ಪಿಸಿಕೊಂಡು ಸೃಷ್ಟಿ ಸ್ಥಿತಿ ಲಯವನ್ನು ಮೀರಿದ ಬಯಲ ಸಮಾಧಿ ಸಿದ್ಧಿ ಯೋಗಕ್ಕೆ ಅಣಿಯಾಗಿದ್ದಾರೆ ಶರಣರು.ಇದನ್ನು ಅಲ್ಲಮರು ತಮ್ಮ ಈ ಒಂದು ವಚನದಲ್ಲಿ ಹೀಗೆ ಹೇಳಿದ್ದಾರೆ.

ಭಕ್ತಂಗೆ ಉತ್ಪತ್ಯ(ತ್ತಿ?) ವಿಲ್ಲಾಗಿ, ಸ್ಥಿತಿಯಿಲ್ಲ.
ಸ್ಥಿತಿಯಿಲ್ಲಾಗಿ ಲಯವಿಲ್ಲ._ಮುನ್ನ ಎಲ್ಲಿಂದ ಬಂದನಲ್ಲಿಗೆ ಹೋಗಿ,
ನಿತ್ಯನಾಗಿರ್ಪ ಗುಹೇಶ್ವರಾ ನಿಮ್ಮ ಶರಣ.

ಅಲ್ಲಮಪ್ರಭುದೇವರು ತಮ್ಮ ವಚನದಲ್ಲಿ ಶರಣರಿಗೆ ಸಾವಿಲ್ಲ ಶರಣರು ಸಾವನ್ನು ಅರಿಯರು ಶರಣರಿಗೆ ಉತ್ಪತ್ತಿವಿಲ್ಲವಾಗಿ ಸ್ಥಿತಿ ಎಂಬುದು ಇಲ್ಲ .ಕಾರಣ ಸೃಷ್ಟಿಸ್ಥಿತಿ ಲಯ ನಿತ್ಯ ಬದುಕಿನ ಉಪಕ್ರಮಗಳು ಬೆಳಿಗ್ಗೆ ಏಳುವುದು ನಿತ್ಯ ಕಾಯಕ ಮಾಡುವುದು ಮತ್ತೆ ಸಂಜೆ ಅನುಭವ ಮಾಡಿ ರಾತ್ರಿ ಶಿವಯೋಗ ನಿದ್ರೆಗೆ ಜಾರುವುದು ಸೃಷ್ಟಿ ಸ್ಥಿತಿ ಲಯದಲ್ಲಿ ಕಾಣುತ್ತಾರೆ. ಹೀಗಾಗಿ ಉತ್ಪತ್ತಿವಿಲ್ಲದೆ ಸ್ಥಿತಿಯಿಲ್ಲ ,ಸ್ಥಿತಿಯಿಲ್ಲವಾಗಿ ಲಯವೂ ಇಲ್ಲ ,ಈ ಭೂಮಿಗೆ ಎಲ್ಲಿಂದ ಬಂದೆನೋ ಅದೇ ನಿಸರ್ಗಕ್ಕೆ ಮತ್ತೆ ಶಕ್ತಿ ಸಂಚಯಕ್ಕೆ ಕಾರಣವಾಗುವ ನಿತ್ಯ ಪ್ರಕ್ರಿಯೆಗೆ ಸಾವು ಎಂದೆನ್ನುವದಿಲ್ಲ ಎಂದಿದ್ದಾರೆ. ಇಂತಹ ಅಭೂತಪೂರ್ವ ನಿಷ್ಪತ್ತಿಯ ಉದಾತ್ತೀಕರಣದ ಭಾವವನ್ನು ನಾವು ಕಾಣುತ್ತೇವೆ.
ಬಸವಣ್ಣನವರ ಸಮತೆಯ ಕ್ರಾಂತಿಗೆ ವಿಪತ್ತು ಕಾಡಿತ್ತು. ವರ್ಣ ಸಂಕರದ ಹೆಸರಿನಲ್ಲಿ ಶರಣರ ಕಗ್ಗೊಲೆ ನಡೆಯ ಹತ್ತಿತು. ಶರಣರು ಮೊದಲೆಯೇ ತೀರ್ಮಾನಿಸಿದಂತೆ ಹಲವು ತಂಡಗಳನ್ನು ರಚಿಸಿಕೊಂಡು ವಚನಗಳ ಕಟ್ಟನ್ನು ಹೊತ್ತು ಉಳವಿ ಸೊಲ್ಲಾಪುರ ಲಾತೂರ ಬನವಾಸಿ ಹಾಗೆ ಶ್ರೀಶೈಲಕ್ಕೂ ಹೋದರು.
ಶ್ರೀಶೈಲಕ್ಕೆ ಹೋದವರಲ್ಲಿ ಸಕಳೇಶ ಮಾದರಸರು ಅಗ್ರರು . ಸಕಳೇಶ ಮಾದರಸರು ಅಕ್ಕ ಮಹಾದೇವಿ ಅಲ್ಲಮರಂತೆ ಬಯಲ ಸಮಾಧಿಯನ್ನು ಶ್ರೀಶೈಲದಲ್ಲಿ ಹೊಂದಿದರು. ಇವರ ಜೀವನ ವಚನಗಳ ರಚನೆ ಅತ್ಯಂತ ಸರಳ ಸುಂದರ ಮತ್ತು ಅರ್ಥಪೂರ್ಣವಾಗಿವೆ. ಇವರ ಐಕ್ಯವು ನಮ್ಮ ಜಂಗಮ ಚೈತನ್ಯಕ್ಕೆ ಜ್ಞಾನ ದೀವಿಗೆಯಾಗಬೇಕು.

ಡಾ.ಶಶಿಕಾಂತ.ಪಟ್ಟಣ -ರಾಮದುರ್ಗ

Don`t copy text!