ಆಕಾಶದುರಿ ನೆಲದ ಮಡಕೆಯಲ್ಲಿ

ಆಕಾಶದುರಿ ನೆಲದ ಮಡಕೆಯಲ್ಲಿ

ಆಕಾಶದುರಿ, ನೆಲದ ಮಡಕೆಯಲ್ಲಿ ಬಯಲ ನೀರ ತುಂಬಿ, ಇಲ್ಲದ ಅಕ್ಕಿಯ ಹಾಕಿ ಮೂರು ನೆಲೆಯಲ್ಲಿ ಕುದಿವುತ್ತಿದ್ದಿತ್ತು. ಪಾವಕನರಿದು ನೀರ ಹೊಯಿದು, ಗಂಜಿ ಅಲ್ಲಿ ಇಂಗಿತ್ತು, ಏಣಾಂಕಧರ ಸೋಮೇಶ್ವರಲಿಂಗಕ್ಕೆ ಓಗರ ಬೇಕೆಂದು.
                                                          -ಬಿಬ್ಬಿ ಬಾಚಯ್ಯ

ಬಿಬ್ಬಿ ಬಾಚಯ್ಯ ಬಸವ ಸಮಕಾಲೀನ ಸಾಮಾಜಿಕ ಸಂಘರ್ಷದಲ್ಲಿ ಪಾಲ್ಗೊಂಡ ಶ್ರೇಷ್ಠ ವಚನಕಾರ . ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಗೊಬ್ಬೂರು ಈತನ ಸ್ಥಳ. ಇಲ್ಲಿ ‘ಅರ್ಪಣದ ಕಟ್ಟೆ’ ಎಂಬುದಿದ್ದು, ಇದು ಬಾಚಯ್ಯನ ಗದ್ದುಗೆಯಾಗಿರಬೇಕೆಂದು ಊಹಿಸಲಾಗಿದೆ. ಈತನ ಕಾಲ-೧೧೬೦. ಅಂಕಿತ ‘ಏಣಾಂಕಧರ ಸೋಮೇಶ್ವರ’. ೧೦೨ ವಚನಗಳು ದೊರೆತಿವೆ. ಬಾಚಯ್ಯ ಪ್ರಸಾದಿಸ್ಥಲದಲ್ಲಿ ನಿಂತ ಶರಣ. ಹೀಗಾಗಿ ಆತ ತನ್ನೆಲ್ಲ ವಚನಗಳಲ್ಲಿ ತಾನು ನಿಂತ ಸ್ಥಲದ ವಿಷಯವನ್ನು ವಿಶೇಷವಾಗಿ ಪ್ರತಿಪಾದಿಸುವುದು ಸಹಜವೆನಿಸಿದೆ. ಕೆಲವು ಬೆಡಗಿನ ವಚನಗಳೂ ಇವೆ. ಬೇರೆ ಬೇರೆ ಶೀರ್ಷಿಕೆಯ ಆರು ಸ್ಥಲಗಳ ಅಡಿಯಲ್ಲಿ ವಚನಗಳನ್ನು ವಿಭಜಿಸಲಾಗಿದೆ. ಬಾಚಯ್ಯ ಒಬ್ಬ ಪ್ರಸಾದ ಸ್ಥಲ ನಿಜೈಸಿಕೊಂಡ ಶರಣ. ಆತನ ಆನೇಕ ವಚನಗಳಲ್ಲಿ ಬೆಡಗಿನ ಮೂಲಕ ತಮ್ಮ ಅನುಭವ ಹಂಚಿಕೊಂಡ ಪ್ರಸಾದವಾದಿ .
ಈ ಮೇಲಿನ ವಚನವೂ ಸಹಿತ ಸುಂದರ ಬೆಡಗನ್ನು ಹೊಂದಿದೆ.
ಆಕಾಶದುರಿ, ನೆಲದ ಮಡಕೆಯಲ್ಲಿ ಬಯಲ ನೀರ ತುಂಬಿ,
ಸೌರ ಮಂಡಲದಲ್ಲಿ ಒಮ್ಮೆ ವಿಭಜನೆ ಹೊಂದಿ ಹಲವು ಉಪಗ್ರಹಗಳು ಹುಟ್ಟಿ ಕೊಂಡವು ಅಂತಹ ಒಂದು ಉಪಗ್ರಹದಲ್ಲಿ ಹುಟ್ಟಿ ಕೊಂಡ ಒಂದು ಉಪಗ್ರಹವು ಭೂಮಿ . ಅದಕ್ಕೆ ಆಕಾಶದ ಉರಿಯನ್ನು ನೆಲದ ಮಡಕೆಯಲ್ಲಿ ಭೂಮಿ ಎಂತಲೂ ಮತ್ತು ಭೂಮಿ ಮೇಲಿನ ಕಾಯ ಶರೀರ ಎಂತಲೂ ಅರ್ಥೈಸಿಕೊಳ್ಳಬೇಕು. ಬಯಲ ನೀರು ಎಂದರೆ ಪ್ರಕೃತಿ ಸೃಷ್ಟಿ ಜಾಗತಿಕ ಜಂಗಮ ಚೇತನವನ್ನು ಅರಿಯುವ ಮನಸ್ಸು ಅಂತ ಅರ್ಥ. ಭೂಮಿ ಮೇಲಿನ ಭಕ್ತನ ಶರೀರದ ಮಡಕೆಯಲ್ಲಿ ಬಯಲ ನೀರು ತುಂಬಿ ಇಂತಹ ಸುಂದರ ಪ್ರತಿಮೆಯನ್ನು ಬಿಬ್ಬೀ ಬಾಚಯ್ಯ ಬಳಸಿದ್ದಾರೆ.

ಇಲ್ಲದ ಅಕ್ಕಿಯ ಹಾಕಿ ಮೂರು ನೆಲೆಯಲ್ಲಿ ಕುದಿವುತ್ತಿದ್ದಿತ್ತು.

ಇಲ್ಲದ ಅಕ್ಕಿ ಅಂದರೆ ಕಾಣಬಾರದ ಅನುಭಾವ ಆಧ್ಯಾತ್ಮಿಕ ಸತ್ಯ ಭವಿಯ ಪದಾರ್ಥ ಬಿಟ್ಟು ಭಕ್ತನ ಪ್ರಸಾದ ಪ್ರಜ್ಞೆಯ ಅಕ್ಕಿಯನ್ನು ತಂದು ಕುಡಿಯುವ ಮನವೆಂಬ ಬಯಲು ಜಲದಲ್ಲಿ ಮೂರು ನೆಲೆಯಲ್ಲಿ ಕುದಿವುತ್ತಿತ್ತು. ಕಾಯ ಪ್ರಾಣ ಮತ್ತು ಆತ್ಮ ಎಂಬ ಮೂರು ಹಂತದಲ್ಲಿ ಭಕ್ತನ ಅನುಭಾವದ ಅಕ್ಕಿ ಕುದಿಯುತ್ತಿತ್ತು. ಅಪ್ರತಿಮ ಸುಂದರ ಬೆಡಗನ್ನು ನಾವಿಲ್ಲಿ ಕಾಣುತ್ತೇವೆ.

ಪಾವಕನರಿದು ನೀರ ಹೊಯಿದು, ಗಂಜಿ ಅಲ್ಲಿ ಇಂಗಿತ್ತು, ಏಣಾಂಕಧರ ಸೋಮೇಶ್ವರಲಿಂಗಕ್ಕೆ ಓಗರ ಬೇಕೆಂದು.

ಆತ್ಮ ಶೋಧನೆ ಆಧ್ಯಾತ್ಮಿಕ ಸಾಧನೆ ಹುಡುಕಾಟ ಎಂಬ ತೀವ್ರತೆಯ ಬೆಂಕಿಯನ್ನರಿತು ಮಡಿಕೆಯಲ್ಲಿನ ನೀರು ಹೋಗಿ ಆವೆ ಆಯಿತು . ನಿರ್ಗುಣ ನಿರಾಕರದ ಮನಸ್ಸು ಸ್ವಚ್ಚ ಸುಂದರ ಆವೆಯಾಗಿ ಮಾಯವಾಗಿತ್ತು. ಅಲ್ಲಿ ಸತ್ಯವೆಂಬ ಗಂಜಿ ಕಾಯದಲ್ಲಿಯೆ ಇಂಗಿತ್ತು. ಏಣಾಂಕಧರ ಸೋಮೇಶ್ವರಲಿಂಗಕ್ಕೆ ಓಗರ ಬೇಕೆಂದು.. ಜಂಗಮದ ಬೇಡಿಕೆ ಒಗರದ ರುಚಿ ಭಕ್ತ ಮಾಡಿದ ಇಂತಹ ಅನುಭಾವದ ಅಡುಗೆಯಲ್ಲಿನ ನೀರು ಹೋಯಿತ್ತು ಗಂಜಿ ಇಂಗಿ ಹೋಯಿತ್ತು ದೈವಕ್ಕೆ ಜಂಗಮಕ್ಕೆ ಏಣಾಂಕಧರ ಸೋಮೇಶ್ವರಲಿಂಗಕ್ಕೆ ಓಗರ ಬೇಕೆಂದು. ಬಯಕೆಯಾಗಿತ್ತು. ದೇವರನ್ನು ಒಲಿಸಿಕೊಳ್ಳುವ ಯತ್ನ ವ್ಯರ್ಥವಾಯಿತು. ಸತ್ಯ ಶುದ್ಧ ಮನಸ್ಸಿನಿಂದ ಮಾಡಿದ ಅನುಭಾವದ ಅಡುಗೆ ಪ್ರಸಾದ ಅಕ್ಷರಗಳ ಶಬ್ದಗಳ ಸಂಭ್ರಮದಲ್ಲಿ ಸಿಲುಕದೆ ಕಾಯ ಪ್ರಾಣ ಮತ್ತು ಆತ್ಮ ಎಂಬ ಮೂರು ಹಂತದಲ್ಲಿ ಶುದ್ಧಗೊಂಡು ಸಮಾಜಕ್ಕೆ ಇಷ್ಟವಾಗಬೇಕು ಬಯಕೆಯ ಬಚ್ಚಿಟ್ಟ ಸತ್ಯದಂತುರಬೇಕು ಎಂತಹ ಅದ್ಭುತ ಹೋಲಿಕೆ ಎಂಬುದನ್ನು ಕಾಣುತ್ತೇವೆ.

ಡಾ ಶಶಿಕಾಂತ ಪಟ್ಟಣ ರಾಮದುರ್ಗ

Don`t copy text!