e-ಸುದ್ದಿ, ಕುಷ್ಟಗಿ
ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ತಾಲೂಕಿನ ವಿವಿಧ ಗ್ರಾಮಗಳ ಅಂಗನವಾಡಿ ಕೇಂದ್ರಗಳ ನೌಕರರು ಪಟ್ಟಣದ ಶಿಶು ಅಭಿವೃದ್ಧಿ ಯೋಜನಾಧಿಕಾರಿ(ಸಿಡಿಪಿಒ)ಗಳ ಕಚೇರಿ ಎದುರು ಪ್ರತಿಭಟಿಸಿದರು.
ಕನಿಷ್ಠ ವೇತನವನ್ನು ೨೧ಸಾವಿರ ರೂ.ಗಳಿಗೆ ಹೆಚ್ಚಿಸಬೇಕು. ಅಲ್ಲದೆ ೧೦ಸಾವಿರ ರೂ.ಗಳನ್ನು ನಿವೃತ್ತಿ ವೇತನವನ್ನಾಗಿ ನೀಡಬೇಕು. ೨೦೨೦ರ ನೂತನ ಶಿಕ್ಷಣ ನೀತಿಯಿಂದ ಅಂಗನವಾಡಿ ಕೇಂದ್ರಗಳನ್ನು ರಕ್ಷಿಸಬೇಕು. ಅಂಗನವಾಡಿ ಕೇಂದ್ರಗಳಲ್ಲಿಯೇ ಶಾಲಾ ಪೂರ್ವ ಶಿಕ್ಷಣ ಕಡ್ಡಾಯಗೊಳಿಸಿ ಹೆಚ್ಚುವರಿ ಕೆಲಸ ನಿರ್ಬಂಧಿಸಬೇಕು. ನಿವೃತ್ತ ನೌಕರರಿಗೆ ನಿವೃತ್ತಿ ವೇತನ ಬಿಡುಗಡೆ ಮಾಡಬೇಕು. ಸೇವಾ ಜೇಷ್ಠತೆ ಆಧಾರದ ಮೇಲೆ ವೇತನ ನಿಗದಿ ಮಾಡಬೇಕು. ಕರೊನಾ ಸೋಂಕು ಹಾಗೂ ಕೆಲಸದ ಒತ್ತಡದಿಂದ ಮೃತರಾದ ನೌಕರರ ಮಕ್ಕಳಿಗೆ ಅನುಕಂಪ ಆಧಾರದ ಮೇಲೆ ಉದ್ಯೋಗ ನೀಡಬೇಕು. ಮೊಟ್ಟೆಗಳನ್ನು ನೇರ ಇಲಾಖೆಯಿಂದಲೇ ಪೂರೈಸಬೇಕು. ಈ ಎಲ್ಲ ಬೇಡಿಕೆ ಈಡೇರಿಸದಿದ್ದಲ್ಲಿ ನ.೨೬ರಂದು ಕೆಲಸದಿಂದ ಹೊರಗುಳಿದು ಪ್ರತಿಭಟಿಸಬೇಕಾಗುತ್ತದೆ ಎಂದು ಎಚ್ಚರಿಸಿದರು. ಅಂಗನವಾಡಿ ನೌಕರರ ಸಂಘದ ತಾಲೂಕು ಅಧ್ಯಕ್ಷೆ ಅಕ್ಕಮಹಾದೇವಿ ಪಟ್ಟಲಚಿಂತಿ, ಕಾರ್ಯದರ್ಶಿ ಕಲಾವತಿ ಮೇಣೆಧಾಳ, ಖಜಾಂಚಿ ಉಮಾ ಅಂಗಡಿ ಸೇರಿ ವಿವಿಧ ಅಂಗನವಾಡಿ ಕೇಂದ್ರಗಳ ನೌಕರರು ಪಾಲ್ಗೊಂಡಿದ್ದರು.