ಪನ್ನೇರಳೆ

 

 

ಪನ್ನೇರಳೆ”

 

“ಪನ್ನೇರಳೆ” ಲಲಿತ ಪ್ರಬಂಧ ಒಂದು ನವಿರಾದ ಹಾಸ್ಯಮಯ, ಹಿತಚಿಂತನೆಯುಳ್ಳ ಬಾಲ್ಯದ ಏರುಪೇರಿನ ಸ್ವ ಜೀವನಾನುಭವಗಳ ನಡುವೆ ಪ್ರೀತಿ, ವಿಶ್ವಾಸ,ನಗು ಮೇಳೈಸುವ ನಗುವಿನ ಟಾನಿಕ್….

“ಕರಿಯನೆಂಬ ಕುರಿಮರಿ” ಎಂಬ ಮೊದಲ ಪ್ರಬಂಧವೇ ನಮ್ಮ ಬಾಲ್ಯ ಮರುಕಳಿಸಿದ ಮುದವನ್ನು ನೀಡಿತು. ಬಾಲ್ಯದಲ್ಲಿ ನಾವು ಕೂಡ ಕಹಿಬೇವು, ಕರಿಬೇವಿನ ಸೊಪ್ಪಿನ ವ್ಯತ್ಯಾಸ ತಿಳಿಯದೇ ಪೇಚಿಗೆ ಸಿಲುಕಿದ್ದುಂಟು. ನಾನಂತೂ ಆ ಸಮಯದಲ್ಲಿ ಸಾಕಲು ಪ್ರಯತ್ನಿಸದ ಪ್ರಾಣಿಗಳೇ ಇಲ್ಲವೇನೋ ಎಂದೆನಿಸುತ್ತದೆ.! ಕಾಗೆ, ಗೂಬೆ, ಕೊಕ್ಕರೆ ,ಹಂದಿ ,ನಾಯಿ ಬೆಕ್ಕು ಗಿಳಿ ಕುರಿ-ಕೋಳಿ ಗುಬ್ಬಚ್ಚಿ ಹೀಗೆ ಹಲವಾರು ನನ್ನ ಸಾಕುವ ಬತ್ತಳಿಕೆಯೆಂಬ ಮೋಹಕ್ಕೆ ಬಲಿಯಾದ ಪಶುಗಳು.

ಹೌದು.. ಯುಗಾದಿಯೇ ನಮ್ಮ ಹೊಸವರ್ಷ. “ಊರಿಗೆಲ್ಲ ಉಗಾದಿ ಬಾಯ್ತುಂಬ ಒಬ್ಬಟ್ಟು, ಬಡೋನ ಮನಿಗೆ ಬೆಲ್ಲಿಲ್ಲ ಮಕ್ಕಳ ಬಾಯಿಗೆ ಹೆಬ್ಬೆಟ್ಟು” ಮತ್ತು “ಉಂಡದ್ದೇ ಉಗಾದಿ, ಮಿಂದದ್ದೇ ದೀವಳಿಗೆ” ಎಂಬ ಗಾದೆ ಮಾತುಗಳು ಅಕ್ಷರಸಹ ನನ್ನ ಬಾಲ್ಯದ ಕಡುಬಡತನದ ವಾಸ್ತವದ ವೇದವಾಕ್ಯಗಳಾಗಿತ್ತು. ಒಟ್ಟಿನಲ್ಲಿ ಪ್ರಬಂಧ ನನ್ನ ಬಾಲ್ಯದ ಸಿಹಿ-ಕಹಿಯ ನೆನಪುಗಳ ಬುತ್ತಿಯನ್ನು ತಿಳಿಹಾಸ್ಯದೊಂದಿಗೆ ಹೊತ್ತುತಂದು ಉಣಿಸಿದಂತಿತ್ತು.

“ಸಾರಿಗೆ ಬರೆ ಹಾಕುತ್ತಿದ್ದ ಯಶೋದಕ್ಕ” ಪ್ರಬಂಧದಲ್ಲಿ ಯಶೋದಕ್ಕ ಮತ್ತು ಅವಳ ಗಂಡ ನಂಜುಂಡಪ್ಪನ ನಡುವಿನ ದಾಂಪತ್ಯದ ಕುರಿತಾದ ತಿಳಿಹಾಸ್ಯ ಮತ್ತು ಅವಳು ಅನುಭವಿಸಿದ ನೋವು ವೇದನೆಗಳ ಅಮಾಯಕತೆಯ ಸ್ಮರಣಿಕೆಯಾಗಿದೆ. “ಯಾಕೆ ಯಶೋದಕ್ಕ ಸಾರಿಗೆ ಬರೆ ಹಾಕ್ತೀರಾ..?”ಎಂದು ಕೇಳಿದರೆ “ಸಾರಿನಲ್ಲಿ ದೆವ್ವ ಪಿಶಾಚಿಗಳು ಸೇರಿಕೊಂಡಿರುತ್ತವೆ ಕಣ್ಮಗ ಅವನ್ನ ಓಡಿಸಕ್ಕೆ ಎನ್ನುವ ಅವಳ ಮುಗ್ಧತೆ , ಮೈಮೇಲೆ ದೇವರು ಬಂದಾಗಿನ ಆಕೆಯ ರೂಪಾಂತರ, ನಂಜುಂಡಪ್ಪನಿಗೆ ನಾಲ್ಕನೇ ಹೆಂಡತಿಯಾಗಿ ಪಟ್ಟ ಯಾತನೆಗಳು, ಆಕೆ ತೋರುತ್ತಿದ್ದ ಪ್ರೀತಿ, ಹಾಡುವ ಹಾಡು, ಅಲಂಕಾರ, ಹಾಲಿಗೆ ನೀರು ಬೆರೆಸಿದಾಗ ಪರೀಕ್ಷಿಸುವ ಸದ್ಗುಣಗಳು ನಮ್ಮ ಮನೆಯ ಪಕ್ಕದ ಯಶೋದಕ್ಕನನ್ನೊಮ್ಮೆ ನೆನಪಿಸಿದಂತಾಯ್ತು. ಆಕೆ ಎಲ್ಲಿಯೂ ಹೋಗಲಿಲ್ಲ..! ನಮ್ಮ ಸುತ್ತಮುತ್ತ ಕತೆಯಾಗಿ ನೆಲೆಯಾಗಿದ್ದಾಳೆ ಎಂದೆನಿಸುತ್ತದೆ.

“ಪನ್ನೇರಳೆ” ಪ್ರಸ್ತುತ ಸಮಾಜಿಕ ಸನ್ನಿವೇಶಕ್ಕೆ ಹಿಡಿದ ಕೈಗನ್ನಡಿಯಂತಿದೆ. ರಾಜಕೀಯ ಪಕ್ಷಗಳು ತಮ್ಮ ಲಾಭಕ್ಕಾಗಿ, ಸ್ವಾರ್ಥಕ್ಕಾಗಿ ಕೋಮುಗಲಭೆಯನ್ನು ಸೃಷ್ಟಿಸಿ ಸಮಾಜದ ಸ್ವಾಸ್ಥ್ಯ ಹಾಳುಗೆಡುವುತ್ತಿದ್ದಾರೆ. ಅಂತಹವರು ಒಮ್ಮೆ ಇದನ್ನು ಓದಿಯಾದರೂ ಬದಲಾಗಬೇಕು. ಇದರಲ್ಲಿ ಬರುವ ಹಿಂದೂ-ಮುಸ್ಲಿಂ-ಕ್ರಿಶ್ಚಿಯನ್ ಪಾತ್ರಗಳು ಸಾಮಾಜಿಕ ಕದಡುವಿಕೆಯ ಮಧ್ಯೆ ಧಾರ್ಮಿಕ ಕಟ್ಟಳೆಗಳಾಚೆಗಿನ ಸಾಮರಸ್ಯದ ಆವರಣವೊಂದನ್ನು ಮೂಡಿಸಿ ಧರ್ಮಾಂಧತೆ ಮೊಳೆಯದಂತೆ ಮಾಡುತ್ತವೆ. ಈ ನಿಟ್ಟಿನಲ್ಲಿ ಧರ್ಮಗುರುಗಳು ಒಟ್ಟಾಗಿ ಸಾಮರಸ್ಯದ ಭಾವ ಬಿತ್ತುವ ಕಾರ್ಯ ಮಾಡಬೇಕಾಗಿದೆ ಎನ್ನುತ್ತಾರೆ ಲೇಖಕರು.

“ಎಲ್ಲರ ಒಡನಾಡಿ ಹಂಸ” ಎಂಬ ಪ್ರಬಂಧವು ಅಂಚೆಯ ಪ್ರಾಮುಖ್ಯತೆ, ನಶಿಸಿಹೋಗುತ್ತಿರುವ ಇದರ ಸಂಪ್ರದಾಯಗಳು, ಒಂದು ಕಾಲದಲ್ಲಿ ಅದಕ್ಕಿದ್ದ ಗೌರವ ,ಉತ್ಸುಕತೆಯ ಕುರಿತು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಆದರೆ ನನಗೆ ಈಗಲೂ ಅಂಚೆ ಪತ್ರಗಳೊಂದಿಗೆ ಪೋಸ್ಟ್ ಮ್ಯಾನ್ ಮನೆಗೆ ಬಂದು ಕರೆದಾಗ ಒಂದು ತೆರನಾದ ಉತ್ಸಾಹ, ಕುತೂಹಲ ಮೂಡಿ ಮೈ ರೋಮಾಂಚನಗೊಳ್ಳುತ್ತದೆ. ಮೊಬೈಲ್ ,ಸಾಮಾಜಿಕ ಜಾಲತಾಣಗಳನ್ನೊಮ್ಮೆ ಹಿಡಿಶಾಪ ಹಾಕಬೇಕೆಂದೆನಿಸುತ್ತದೆ.

“ಪುಸ್ತಕಗಳೆಂಬ ಅಂತರಂಗದ ಅತಿಥಿ” ಯಲ್ಲಿ ಲೇಖಕರು ಬಾಲ್ಯದಿಂದ ಇಲ್ಲಿಯವರೆಗೂ ತಾವು ಕಂಡುಂಡ ಪ್ರತಿಯೊಂದು ಪುಸ್ತಕಗಳ ಸ್ವಾರಸ್ಯಕರ ಓದಿನ ಅನುಭವದ ಜಾತ್ರೆಯನ್ನೇ ತೆರೆದಿಟ್ಟಿದ್ದಾರೆ. ತಾನು ಮನಃಪೂರ್ವಕವಾಗಿ ಇಷ್ಟಪಟ್ಟು ಓದಿದ ಪುಸ್ತಕ ಲೇಖಕರು ,ಲೇಖಕಿಯರು ಎಲ್ಲವನ್ನೂ ನೆನಪಿಸುವ ಇವರು “ಪುಸ್ತಕಗಳ ರಾಶಿಯನ್ನು ನೋಡನೋಡುತ್ತಲೇ ಇವುಗಳ ನಡುವೆಯೇ ಬರಲಿ ನನಗೆ ಅನಾಯಾಸ ಮರಣ, ನಾನು ಪುಸ್ತಕ ಶರಣ” ಎಂದು ತಮ್ಮ ಪುಸ್ತಕ ಪ್ರೀತಿಯನ್ನು ಎಲ್ಲರೊಂದಿಗೆ ಹರವಿಕೊಂಡಿದ್ದಾರೆ.

“ನಾನಾರ್ಥದ ಪಜೀತಿಗಳು” ನಮ್ಮನ್ನೆಲ್ಲಾ ಒಮ್ಮೆ ನಗೆಗಡಲಿನಲ್ಲಿ ತೇಲಿಸುತ್ತದೆ. ಲೇಖಕರು ತಮ್ಮ ದಾಂಪತ್ಯ ಸಂಬಂಧಿಕರು, ಕಾಲೇಜು ವಿದ್ಯಾರ್ಥಿಗಳೊಂದಿಗೆ ಅನುಭವಿಸಿದ ನಾನಾರ್ಥದ ಪಜೀತಿಗಳ ನಿದರ್ಶನಗಳು ಪೇಚಾಟಕ್ಕೆ ಸಿಲುಕಿಸಿ ಹೊಟ್ಟೆ ಹುಣ್ಣಾಗುವಂತೆ ನಗಿಸುತ್ತವೆ.

“ಈ ಮಣ್ಣು ನಮ್ಮದು” ಪ್ರಬಂಧದಲ್ಲಿ ಮಣ್ಣಿನ ಮಹತ್ವದ ಕುರಿತು ತಿಳಿಸಿದ್ದಾರೆ. ಯುಗಾದಿ, ಮಣ್ಣೆತ್ತಿನ ಅಮಾವಾಸ್ಯೆ ,ನಾಗರಪಂಚಮಿ ಹಬ್ಬ , ಗೌರಿ-ಗಣೇಶ ಹಬ್ಬ, ಉತ್ತರ ಭಾರತದ ಗುಳ್ಳವ್ವನ ಪೂಜೆ, ದೀಪಾವಳಿ ಭೂಮಿಹುಣ್ಣಿಮೆ,ಜೋಕುಮಾರನ ಹಬ್ಬ, ಸೀಗೆ ಹುಣ್ಣಿಮೆ ಎಲ್ಲದಕ್ಕೂ ಮಣ್ಣೇ ಬೇಕು. ಹುಟ್ಟಿನಿಂದ ಸಾಯುವವರೆಗೂ ನಮ್ಮನ್ನು ನಾನಾ ರೀತಿಯಲ್ಲಿ ಪೊರೆಯುವ ಭೂಮಿತಾಯಿಯನ್ನು ನಿಷ್ಠೆಯಿಂದ ಪೂಜಿಸಿದರೆ ಯಾವುದೇ ಭೇದ ಮಾಡದೆ ನಮ್ಮೆಲ್ಲರನ್ನೂ ಮಡಿಲಲ್ಲಿಟ್ಟುಕೊಂಡು ಕಾಪಾಡುತ್ತದೆ ಎನ್ನುತ್ತಾರೆ ಲೇಖಕರು.

“ಪಾಸು-ಫೇಲೆಂಬ ತ್ರಿಶಂಕು ಸ್ಥಿತಿ”ಯಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ಬರೆದು ಫಲಿತಾಂಶಕ್ಕಾಗಿ ಕಾದು ಕುಳಿತು, ದೇವರ ಮೊರೆ ಹೋಗಿ, ಒಂದು ವೇಳೆ ಫೇಲಾದರೆ ತಮ್ಮ ಪರಿಸ್ಥಿತಿಯನ್ನು ನೆನೆನೆನೆದು ಪಡುವ ಪೇಚಾಟವನ್ನು ಹಾಸ್ಯಮಯವಾಗಿ ಹೇಳುತ್ತಾ ಬದುಕನ್ನು ಕಟ್ಟಿಕೊಳ್ಳುವ ವಿವೇಕವನ್ನು ಅಕ್ಷರದೇವತೆ ಎಲ್ಲರಿಗೂ ಕೊಟ್ಟು ಕಾಪಾಡಲಿ ಎಂದು ಹರಸುತ್ತಾರೆ.

“ಪೆಪ್ಪರಮೆಂಟು” ಎಂದರೆ ನನಗೆ ಈಗಲೂ ಪಂಚಪ್ರಾಣ. ಐದು ಪೈಸೆಗಿದ್ದ ಅದನ್ನು ಪಡೆಯಲು ರಸ್ತೆ ದಾಟುವ ಸಲುವಾಗಿ ನನಗೆ ಅಪಘಾತವಾಗಿ ಬಲಗಾಲನ್ನು ಮುರಿದುಕೊಂಡಿದ್ದೆ. ಇದು ಶಶಿವಾರದಲ್ಲಿ ನಾವು ಕಳೆದ ಬಾಲ್ಯದ ದಿನಗಳನ್ನು ಮತ್ತೆ ಅನುರಣಿಸುವಂತೆ ಮಾಡಿತು.

ಇಲ್ಲಿ ಬರುವ ಹನ್ನೆರಡು ಪ್ರಬಂಧಗಳೂ ಹೆಚ್ಚಾಗಿ ಲೇಖಕರ ಬಾಲ್ಯದ ಸ್ವ ಅನುಭವಗಳ ಕಥನದಿಂದ ಮೊದಲ್ಗೊಂಡು ಪ್ರಸ್ತುತ ಸನ್ನಿವೇಶಕ್ಕೆ ತಕ್ಕುದಾಗಿ ಹೆಣೆಯಲ್ಪಟ್ಟಿದೆ. ಇದು ಪ್ರತಿಯೊಬ್ಬ ಓದುಗನ ಬಾಲ್ಯವನ್ನು ಒಮ್ಮೆ ಕಣ್ಮುಂದೆ ತರಿಸಿ ಮುಖದಲ್ಲಿ ಮಂದಹಾಸದ ನಗುವು ಮಿಂಚಿ ಹೋಗುವಂತೆ ಮಾಡುತ್ತದೆ.
ಒಟ್ಟಿನಲ್ಲಿ ಹಾಸ್ಯದ ಹೊನಲನ್ನು ಸವಿಯಲು ಕೊಂಡು ಓದಲೇಬೇಕಾದ ಪುಸ್ತಕ.
ಮುಂದೆ ಇಂತಹದೇ ಇನ್ನಷ್ಟು ಕೃತಿಗಳು ತಮ್ಮಿಂದ ಮೂಡಿಬರಲಿ. ಒಳ್ಳೆಯದಾಗಲಿ ಸರ್..

ಕೃತಿ : ಪನ್ನೇರಳೆ (ಲಲಿತ ಪ್ರಬಂಧಗಳು)
ಲೇಖಕರು: ಡಾ. ಹೆಚ್. ಎಸ್ ಸತ್ಯನಾರಾಯಣ
ಪ್ರಕಾಶನ: ಅಲಂಪು
ಮೊ: 9740655895

ಸುರೇಶ್ ಮಲ್ಲಿಗೆ ಮನೆ.

Don`t copy text!