ಬಸವಣ್ಣನವರು ಮತ್ತು ಶಿಶುನಾಳ ಶರೀಫರು .– ಒಂದು ತುಲನಾತ್ಮಕ ಅಧ್ಯಯನ
ಜಗತ್ತಿನಲ್ಲಿ ಭಾರತ ಖಂಡವು ಒಂದು ವೈಶಿಷ್ಟ್ಯಪೂರ್ಣ ದೇಶ. ವಿವಿಧ ಧರ್ಮ, ಸಾಹಿತ್ಯ, ಸಂಸ್ಕೃತಿ, ಕಲೆಗಳ ಇತಿಹಾಸವುಳ್ಳ ಸಂಪದ್ಭರಿತ ದೇಶ. ಜಗತ್ತಿನ ಬಹುತೇಕ ಪ್ರವಾದಿಗಳು, ಚಿಂತಕರು ಇಲ್ಲಿ ಜನ್ಮ ತಾಳಿದ್ದಾರೆ. ಶಾಂತಿ ಮೂರ್ತಿ ಬುದ್ಧ, ಅಹಿ೦ಸಾ ಪ್ರತಿಪಾದಕ ಮಹಾವೀರ, ಸಮತೆಯ ಶಿಲ್ಪಿ ಬಸವಣ್ಣ, ಮಹಾತ್ಮ ಗಾಂಧೀ, ಫುಲೆ, ಅಂಬೇಡ್ಕರ್, ಸೂಫಿಗಳು ಹೀಗೆ ಜಗವ ಬೆಳಗಿದ ಪ್ರಭೆ ಭಾರತದ್ದು. ಇಂತಹ ಮಾಹಾನ್ ಪ್ರವರ್ತಕರನ್ನು ಪಡೆದ ದೇಶವು ಧನ್ಯ. ಇವರ ತತ್ವ ಸಿದ್ಧಾಂತ ಸಂದೇಶ ಮಾನವ ಕುಲಕ್ಕೆ ಕೊಡುಗೆಗಳು.
ಸನಾತನ ಧರ್ಮದ ಬಿಗಿ ಹಿಡಿತದಲ್ಲಿ ಸಮಾಜ ಸಿಕ್ಕು ರೋಗಗ್ರಸ್ಥವಾಗಿ ನರಳಿ ಸಾಯುವಂತಹ ಪರಿಸ್ಥಿತಿಯಲ್ಲಿ ಹನ್ನೆರಡನೆ ಶತಮಾನದಲ್ಲಿ ಬಿಜಾಪುರ ಜಿಲ್ಲೆಯ ಬಾಗೇವಾಡಿಯ ಅಗ್ರಹಾರದಲ್ಲಿ ಮಾದರಸ ಮಾದಲಾಂಬಿಕೆ ಬ್ರಾಹ್ಮಣ ದಂಪತಿಗಳ ಉದರದಲ್ಲಿ ಬಸವಣ್ಣ ಜನಿಸಿದರು. ಜನಸಾಮಾನ್ಯರೊಂದಿಗೆ ಬೆಳೆದ ಬಾಲಕ ಬಸವಣ್ಣ ಎಂಟನೆಯ ವಯಸ್ಸಿನಲ್ಲಿ ಉಪನಯನ ಧಿಕ್ಕರಿಸಿ ಕೂಡಲ ಸಂಗಮ ದೇವಸ್ಥಾನಕ್ಕೆ ನಡೆದನು. ಅದು ಅಂದಿನ ನಾಥ್ ಪರಂಪರೆಯ ಭವ್ಯ ದೇವಸ್ಥಾನ. ಆರಂಭದ ಶಿಕ್ಷಣವನ್ನು ಅಲ್ಲಿಯೇ ಪೂರೈಸಿ, ಮುಂದೆ ಸೋದರ ಮಾವ ಬಲದೇವರ ಸಹಾಯದಿಂದ ಮಂಗಳವೇಡೆಯಲ್ಲಿ ಕರಣಿಕನಾಗಿ, ಮುಂದೆ ಅವರ ಮಗಳು ಗಂಗಾಂಬಿಕೆ ಅವರನ್ನು ಮದುವೆಯಾಗಿ ಅರ್ಥಮಂತ್ರಿ ಆಗಿ ಮುಂದೆ ಬಿಜ್ಜಳನ ಪ್ರಧಾನಿಯ ಹುದ್ದೆ ಅಲಂಕರಿಸುತ್ತಾರೆ. ಬಿಜ್ಜಳನ ಸಾಕು ತಂಗಿ ನೀಲಾಂಬಿಕಾ ಅವರನ್ನು ಮದುವೆಯಾದರು. ಬಸವಣ್ಣನವರು ಸಮಗ್ರ ಪರಿವರ್ತನೆಗಾಗಿ ಹೆಣಗಿದ ಮಹಾಪುರುಷ. ವರ್ಗರಹಿತ, ವರ್ಣರಹಿತ ಸಮಾಜವನ್ನು ನಿರ್ಮಿಸುವ ಧ್ಯೇಯವನ್ನು ಕಾರ್ಯರೂಪಕ್ಕಿಳಿಸಿದವರು.
ಆಧ್ಯಾತ್ಮಿಕ ಅನುಭವವನ್ನು ಸಿರಿ ಕಂಠದಿಂದ ಹಾಡಿದ ಅಮರ ಕೋಗಿಲೆ ಶಿಶುನಾಳ ಶರೀಫರು. ಧಾರವಾಡ ಜಿಲ್ಲೆಯ ಶಿಗ್ಗಾಂವ ತಾಲೂಕಿನ ಶಿಶುವಿನಾಳ ಗ್ರಾಮದಲ್ಲಿ 03 -7-1819 ರ೦ದು ಇಮಾಮಸಾಹೇಬರು ಮತ್ತು ಹಜ್ಜುಮಾ ಎಂಬ ಪಿಂಜಾರ ಬಡ ಮುಸ್ಲಿಂ ದಂಪತಿಗಳ ಉದರದಲ್ಲಿ ಜನಿಸಿದರು. “ನಿನ್ನ ಮಗ ನಿನಗೆ ಮಗನಾಗಿರದೆ ಇಡೀ ಜಗತ್ತಿಗೆ ದಾರಿ ದೀಪವಾಗುತ್ತಾನೆ” ಎಂದು ಹಜ್ಜುಮಾಗೆ ಶ್ರೀ ಖಾದರ ಲಿಂಗ ಸೂಫಿಗಳು ಭವಿಷ್ಯ ನುಡಿದಿದ್ದರಂತೆ. ಶಿಗ್ಗಾ೦ವ ತಾಲ್ಲೂಕಿನ ಹುಲುಗೂರು ಖಾದರ ಲಿಂಗ ಅವರ ಸ್ಥಳ . ಖಾದರ ಲಿಂಗ ಅವರು ಬಸವಣ್ಣನವರ ಸಮಾನತೆಯ ಕ್ರಾಂತಿಗೆ ಬೆರಗಾಗಿ ಇಷ್ಟಲಿಂಗ ಆರಾಧಕರಾಗಿದ್ದರೆಂದು ಪ್ರತೀತಿ. ಹೀಗಾಗಿ ಅವರಿಗೆ ಶ್ರೀ ಖಾದರ ಲಿಂಗ ಬಾದಶಾ ಖಾದ್ರಿ ಎಂದು ಕರೆಯುತ್ತಿದ್ದರು.
ಎಳೆಯ ವಯಸ್ಸಿನಲ್ಲಿ ಅಲಾವಿ, ಕರ್ಬಲ್ ಕುಣಿತ, ಪಾರಿವಾಳದಾಟವೆಂದರೆ ಶರೀಫರಿಗೆ ಎಲ್ಲಿಲ್ಲದ ಇಷ್ಟ. ಶರೀಫರ ತಂದೆ ಇಮಾಮ ಸಾಹೇಬ ವನೌಷಧಿ ಮಾಡಿ ಹಳ್ಳಿ ಜನರಿಗೆ ಚಿಕಿತ್ಸೆ ಕೊಡುತ್ತಿದ್ದರು. ಮುಂಜಾನೆ ಹಿರೇಮಠದಲ್ಲಿ ನಡೆಯುವ ಶ್ರೀ ಸಿದ್ಧರಾಮೇಶ್ವರ ಸ್ವಾಮಿಗಳ ಚಾಮರಸನ ಪ್ರಭುಲಿಂಗ ಲೀಲೆ ಪ್ರವಚನ ನಡೆಯುತ್ತಿದ್ದಂತೆ ಬಾಲಕ ಶರೀಫ್ ಮುಂದಿನ ಸಾಲಿನಲ್ಲಿಯೇ ಕುಳಿತುಕೊಳ್ಳುತ್ತಿದ್ದ. ಶರೀಫನಿಗೆ ಶರಣರ, ಅದರಲ್ಲೂ ಬಸವಣ್ಣ ಅಲ್ಲಮರ ಅನುಭಾವ ಮನಸ್ಸಿನ ಮೇಲೆ ಆಳ ಪರಿಣಾಮ ಬೀರುತ್ತಿತ್ತು. ವಚನಗಳು ಇಷ್ಟವಾಗ ತೊಡಗಿದವು. ಪ್ರಭುಲಿಂಗ ಲೀಲೆಯನ್ನು ತಲೆಯ ಮೇಲಿಟ್ಟು ಕುಣಿಯುತ್ತಿದ್ದರು. ಬಾಲಕ ಶರೀಫನ ಶಿಕ್ಷಣಕ್ಕೆ ಆಶ್ರಯವಾದವರು ಕಳಸದ ಶ್ರೀ ಗೋವಿಂದ ಭಟ್ಟರು. ಒಮ್ಮೆ ಪಾರಿವಾಳ ಹಾರಿ ಬಿಟ್ಟು ಅದರ ಬೆನ್ನ ಹಿಂದೆ ಓಡುವಾಗ, ಕಳಸದ ಗೋವಿಂದ ಭಟ್ಟರು ಈ ಓಡುವ ಹುಡುಗನನ್ನು ಹಿಡಿದು, “ಯಾರು ನಿನ್ನ ಅಪ್ಪ?” ಎಂದು ಕೇಳಿದರಂತೆ. ಆಗ ತುಂಟ ಬಾಲಕ ಶರೀಫ್, “ನಿಮ್ಮಪ್ಪನೆ ನನ್ನಪ್ಪಾ” ಎಂದು ತೀಕ್ಷ್ಣವಾಗಿ ಉತ್ತರಿಸಿದನಂತೆ. ಕಳಸದ ಗೋವಿಂದ ಭಟ್ಟರು ಈತನನ್ನು ತಮ್ಮ ಶಿಷ್ಯನನ್ನಾಗಿ ಮಾಡಿಕೊಳ್ಳುತ್ತಾರೆ. ಶರೀಫರನ್ನು ಮನೆಯಲ್ಲಿಯೇ ಇಟ್ಟುಕೊಂಡು ವೈದಿಕರ ವಿರೋಧದ ನಡುವೆ ಆಶ್ರಯ ಕೊಟ್ಟು ಶಿಕ್ಷಣ ವಿದ್ಯೆ ಕಲಿಸುತ್ತಾರೆ. ಮುಂದೆ ಕುಂದಗೋಳದ ಫಾತಿಮಾ ಅವರ ಜೊತೆ ಶರೀಫರು ಮದುವೆಯಾಗುತ್ತಾರೆ.
ಬಸವಣ್ಣನವರು ಮತ್ತು ಶಿಶುನಾಳ ಶರೀಫರ ಹೋಲಿಕೆ ಅಷ್ಟೊಂದು ಸಮಂಜಸವಲ್ಲ ಎಂದೆನಿಸಿದರೂ ಅವರ ನಡುವಿನ ತತ್ವ ಸಿದ್ಧಾಂತ, ವೈಚಾರಿಕತೆ, ಅನುಭಾವದ ಹೋಲಿಕೆ ಅರ್ಥಪೂರ್ಣವೆನಿಸುವುದು. ಅಲ್ಲದೆ ಶಿಶುನಾಳ ಶರೀಫರ ಮೇಲೆ ಬಸವಣ್ಣನವರು ಮತ್ತು ವಚನ ಸಾಹಿತ್ಯ ಎಷ್ಟೊ೦ದು ಪ್ರಭಾವ ಬೀರಿತ್ತು ಎಂದು ತಿಳಿಯಬಹುದು. ಇವರಿಬ್ಬರ ಚಿಂತನೆ, ವಚನಗಳ ಮತ್ತು ಪದಗಳ ಧಾಟಿ, ಉದ್ದೇಶಗಳು ಒಂದೇ ಆಗಿವೆ.
ಬಸವಣ್ಣನವರು ಸಮತೆ, ಆತ್ಮಾವಲೋಕನ, ಸತ್ಯಾನ್ವೇಷಣೆ, ವಸ್ತುನಿಷ್ಠತೆ ಮತ್ತು ಸಮಾಜ (ಜಂಗಮ) ವ್ಯವಸ್ಥೆಗೆ ಆದ್ಯತೆ ಕೊಟ್ಟರು. ಶಿಶುನಾಳ ಶರೀಫರು ತಮಗೆ ತಿಳಿದ ವಿಷಯವನ್ನು ನಿರ್ಭಿಡೆಯಾಗಿ ಹಾಡು ಕಟ್ಟಿ ತತ್ವದ ಪದ ಹಾಡಿ ಅನೇಕ ಸಲ ಜನರ ಹಲ್ಲೆಗೆ, ಕೋಪಕ್ಕೆ ತುತ್ತಾದರು.
ಶರೀಫರು, ಬ್ರಾಹ್ಮಣರಾದ ಗೋವಿಂದ ಭಟ್ಟರ ಮನೆಯಲ್ಲಿದ್ದು ವಿದ್ಯೆ ಕಲಿಯಬೇಕಾದರೆ ಮುಸ್ಲಿಂ ಮತ್ತು ಕಳಸ ಕುಂದಗೋಳದ ಸಂಪ್ರದಾಯಸ್ಥ ಬ್ರಾಹ್ಮಣರಿಂದ ತಮ್ಮ ಗುರುವಿನ ಜೊತೆಗೆ ಬಹಿಷ್ಕಾರಕ್ಕೆ ಒಳಗಾದರು.
ಬಸವಣ್ಣನವರು ಮತ್ತು ಶಿಶುನಾಳ ಶರೀಫರು ತಮ್ಮ ಆಧ್ಯಾತ್ಮಿಕ ತತ್ವ ವಿಚಾರದಲ್ಲಿ ಯಾವುದೇ ಕಂದಾಚಾರ ಒಪ್ಪಲಿಲ್ಲ, ಸರಳ ಸತ್ಯ ಶುದ್ಧ ಸೂತ್ರವನ್ನು ನಿರೂಪಿಸಿದರು. “ಬದುಕು ಮಾಯೆ, ಬ್ರಹ್ಮ ಮಾತ್ರ ಸತ್ಯ, ನಾವೆಲ್ಲರೂ ಅವನ ಇಷ್ಟದ೦ತೆ ನಡೆಯಬೇಕು” ಎನ್ನುವ ವಿಚಾರವನ್ನು ಈರ್ವರೂ ಅಲ್ಲಗಳೆದಿದ್ದಾರೆ. ಮಾನವ ಕುಲದಲ್ಲಿ ತುಂಬಿದ ಅಜ್ಞಾನದ ಅಂಧಕಾರವನ್ನು ಕಳೆದಿದ್ದಾರೆ.
“ಜ್ಞಾನದ ಬಲದಿಂದ ಅಜ್ಞಾನದ ಕೇಡು ನೋಡಯ್ಯಾ
ಸತ್ಯದ ಬಲದಿಂದ ಅಸತ್ಯದ ಕೇಡು ನೋಡಯ್ಯಾ .
ಜ್ಯೋತಿಯ ಬಲದಿಂದ ತಮ೦ಧದ ಕೇಡು ನೋಡಯ್ಯಾ
ಪರುಷದ ಬಲದಿಂದಾ ಅವಲೋಹದ ಕೇಡು ನೋಡಯ್ಯಾ .
ಕೂಡಲ ಸಂಗನ ಶರಣರ ಅನುಭಾವದ ಬಲದಿಂದ
ಎನ್ನ ಭಾವದ ಕೇಡ ನೋಡಯ್ಯಾ .
ಬಸವಣ್ಣನವರು ಸ.ವ .ಸ೦ 1-ಸಂಖ್ಯೆ 842
ಎನ್ನುವ ಬಸವಣ್ಣನವರು ಬದುಕಿನ ಒಳ್ಳೆಯ ಮೌಲ್ಯಗಳಿಂದ, ಅವಗುಣಗಳನ್ನು ನಿವಾರಿಸುವ ಪರಿಯನ್ನು ತೋರಿಸಿದ್ದಾರೆ.
ಇದನ್ನು ಶಿಶುನಾಳ ಶರೀಫರು ಇನ್ನೊಂದು ರೀತಿಯಲ್ಲಿ ಹೇಳಿದ್ದಾರೆ:
ಸೋರುತಿಹುದು ಮನೆಯ ಮಾಳಿಗೆ ಅಜ್ಞಾನದಿಂದ
ಸೋರುತಿಹುದು ಮನೆಯ ಮಾಳಿಗೆ,
ದಾರುಗಟ್ಟಿ ಮಾಳ್ಪರಿಲ್ಲ, ಕಾಲ ಕತ್ತಲೆಯೊಳಗೆ ನಾನು
ಮೇಲಕೇರಿ ಮೆತ್ತಲಾರೆ.
ಮುರುಕು ತೊಲೆಯು ಹುಳುಕು ಜಂತಿ
ಮುರಿದು ಸರಿದು ಕೀಲ ಸರಿದು
ಹರಕು ಚಪ್ಪರ, ಜೀರುಗುಂಡಿ
ಮೇಲಕೇರಿ ಮೆತ್ತಲಾರೆ .
ಕರ್ಕಿ ಹುಲ್ಲು ಕಸವು ಬಿತ್ತಿ
ದುರಿತ ಭವದಿ ಇರುಬೆ ಮುತ್ತಿ .
ಅಳಲಮಳಲ ತಿಳಿಯ ಮಣ್ಣು
ಕೆಳಗೆ ಮೇಲೆ ಹಾಕಲಾರದೆ
ಸೋರುತಿಹುದು ಮನೆಯ ಮಾಳಿಗೆ
ಕಾಂತೆ ಕೇಳೆ ಕರುಣದಿಂದ ಇಂತೂ ತಾನೇ ಹುಬ್ಬಿ ಮಳೆಯು
ಎಂತ ಶಿಶುವಿನಾಳಧೀಶ ಎಂತು ಪೊರೆವನು ಎಂದು ನಂಬಿರೆ
ಸೋರುತಿಹುದು ಮನೆಯ ಮಾಳಿಗೆ.
ದೇಹವೆಂಬ ಮನೆಯ ಮೇಲ್ಮಾಳಿಗೆಯ ಸ್ಥಿತಿ ಇದು. ಆಶೆ, ಆಮಿಷ, ದುರಾಚಾರ, ಅಂಧತೆ, ಅಜ್ಞಾನಗಳಿಂದ ಕೂಡಿದ ಮನೆಯ ಮೇಲೆ ಸೂರಿ ಮಳೆ ಹೊಯ್ಯುತ್ತಿದೆ. ವಿಷಯವೆಂಬ ಇರುವೆ ಮುತ್ತಿವೆ, ಶರೀರದ ತೊಲೆ ಜಂತಿ ಮುರುಕಾಗಿವೆ, ಹರುಕು ಚಪ್ಪರ ಜೀರುಗುಂಡೆ ಕೊಳೆತಿವೆ. ಇಂತಹ ಮನೆಯ ಮೇಲೆ ಹತ್ತಿ ನಾನು ಅಲ್ಲಿನ ಸೋರಿಕೆ ನಿಲ್ಲಿಸಲು ಅಸಹಾಯಕನಾಗಿದ್ದೇನೆ ಎಂದು ತಮ್ಮ ಅಳಲನ್ನು ತೋಡಿಕೊಳ್ಳುತ್ತಾರೆ.
ಬಸವಣ್ಣನವರು ಹಲವು ದೇವತೆಗಳ ಪೂಜೆಯನ್ನು ನಿರಾಕರಿಸಿ, ವಿರೋಧಿಸಿದರು. ವ್ಯಕ್ತಿಯು ತನ್ನ ಚಿತ್ಕಳೆಯನ್ನು ಪೂಜಿಸುವ ಸರಳ ಮಾರ್ಗವನ್ನು ಶರಣರು ಸೂಚಿಸಿದರು.
ಅದಕ್ಕೆ ಬಸವಣ್ಣನವರು,
” ದೇವನೊಬ್ಬ ನಾಮ ಹಲವು
ಪರಮ ಪತಿವ್ರತೆಗೆ ಗಂಡನೊಬ್ಬ” ಎಂದಿದ್ದಾರೆ.
ಇದನ್ನು ಶರೀಫರು ಹೀಗೆ ಹೇಳಿದ್ದಾರೆ:
” ರಾಮ ರಹೀಮ ಭೇದ ನ ಸಮಜೋ
ಅಲ್ಲ -ಅಲ್ಲಮ -ಏಕ -ಹಿ ಸಮಜೋ .
ರಾಮ ರಹೀಮರು ಬೇರೆಯೆಲ್ಲಾ ಮತ್ತು ಅಲ್ಲಾ ( ದೇವರು) ಅಲ್ಲಮ ಒಂದೇ ಎಂದು ತಿಳಿಯಬೇಕೆಂದು ವಿನಂತಿಸಿದ್ದಾರೆ. ಶರೀಫರಿಗೆ ಅಲ್ಲಮರು ದೇವರಷ್ಟೆ ಪವಿತ್ರರು ಎಂದು ಸೂಚ್ಯವಾಗಿ ಹೇಳಿದ್ದಾರೆ.
ಗುಡಿ ಗುಂಡಾರ ಮಂದಿರದಲ್ಲಿ ಪೂಜೆಗೊಳ್ಳುವ ಕಲ್ಲುದೇವರಿಗೆ ಬಸವಣ್ಣನವರು ಮತ್ತು ಶಿಶುನಾಳ ಶರೀಫರು ದೇವರೆನ್ನಲಿಲ್ಲ. ಮೂರ್ತಿ ಭಂಜಕರಾದ ಇಬ್ಬರಿಗೂ ಅಂತರಾಳದ ಚೈತನ್ಯವೇ ದೇವರು.. ಅರಿವೇ ಗುರು. ಸತ್ಯ ಶುದ್ಧವಾದ ಕಾಯದಲ್ಲಿ ದೇವತ್ವವನ್ನು ಕಂಡುಕೊಂಡಿದ್ದಾರೆ.
ಉಳ್ಳವರು ಶಿವಾಲಯವ ಮಾಡುವರಯ್ಯಾ
ನಾನೇನು ಮಾಡಲಿ ಬಡವನಯ್ಯಾ
ಎನ್ನ ಕಾಲೇ ಕಂಬ ದೇಹವೇ ದೇಗುಲ
ಶಿರವೇ ಹೊನ್ನ ಕಳಶವಯ್ಯಾ ,ಕೂಡಲ ಸಂಗಮದೇವ ಕೇಳಯ್ಯಾ
ಸ್ಥಾವರಿಕ್ಕಳಿವುಂಟು ಜಂಗಮಕ್ಕಳಿವಿಲ್ಲಾ.
ಬಸವಣ್ಣನವರು ಮಾನವ ದೇಹದಲ್ಲಿಯೇ ದೇವರನ್ನು ಕಂಡುಕೊಂಡಿದ್ದಾರೆ. ಮನುಷ್ಯ ತನ್ನ ಚೈತನ್ಯಕ್ಕೆ ಶರೀರವನ್ನೇ ದೇವಾಲಯವನ್ನಾಗಿ ಮಾಡಿಕೊಳ್ಳಬೇಕೆನ್ನುವುದು ಬಸವಣ್ಣನವರ ಆಶಯ. ಇದನ್ನು ಶಿಶುನಾಳ ಶರೀಫರು,
ಗುಡಿಯ ನೋಡಿರಣ್ಣಾ ದೇಹದ ಗುಡಿಯ ನೋಡಿರಣ್ಣಾ
ಗುಡಿಯ ನೋಡಿರಿದು ಪೊಡವಿಗೆ ಒಡೆಯನು,
ಅಡಗಿಕೊಂಡು ಕಡು ಬೆಳಗಿನೊಳಿರುತಿಹ ಗುಡಿಯ ನೋಡಿರಣ್ಣಾ
ಆರು ಮೂರು ಕಟ್ಟೆ ಮೇಲಕೆ ಏರಿದವನು ಗಟ್ಟಿ
ಏರಿಕಾಳಿ ಶಂಖ ಬಾರಿಸು ನಾದದಿ
ಮೀರಿದಾನಂದ ತೋರಿ ಹೊಳೆಯುತಿಹ ಗುಡಿ ನೋಡಿರಣ್ಣಾ .
ಮೂರು ಮೊನೆಯ ಕಲ್ಲು
ಅದರೊಳು ಜಾರುತಿರುವ ಕಲ್ಲು .
ಧೀರ ನಿರ್ಗುಣನು ಸಾರಸ ಗುಣದಲಿ
ತೋರಿ ಅಡಗಿ ತಾ ಬ್ಯಾರಾಗಿರುತಿಹ ಗುಡಿ ನೋಡಿರಣ್ಣ.
ಜೀವನದಲ್ಲಿ ಆರು ಅರಿಷಡ್ವರ್ಗಗಳು, ಮೂರು ಸ್ಥಿತಿಗಳು. ಇವನ್ನು ಮೀರಿ ನಿಲ್ಲುವ ಗಟ್ಟಿತನ ಇದ್ದವನೇ ಮೇಲೆ ಹೋಗಬಲ್ಲ ಎಂಬುದು ಶರೀಫರ ಅಭಿಪ್ರಾಯ. ಬದುಕಿನ ಸಾರ್ಥಕತೆಯ ಶಂಖ ಕಾಳಿ ನಾದವನ್ನು ಬಾರಿಸಿದಾಗ ಮೊಳಗುವ ಆನಂದದ ಧ್ವನಿಯನ್ನು, ತೋರಿ ಹೊಳೆಯುತಿಹ ಈ ಗುಡಿ ಸರ್ವ ಶ್ರೇಷ್ಠ ಎಂದೆನ್ನುತ್ತಾರೆ.
ಬಸವಣ್ಣನವರು ಅರಿವು, ಆಚಾರ, ಅನುಭಾವಕ್ಕೆ ಪ್ರಾಮುಖ್ಯತೆ ನೀಡಿದರು. “ಅರಿವೇ ಗುರು ಆಚಾರವೇ ಲಿಂಗ ಅನುಭಾವವೇ ಜಂಗಮ.” ನಡೆ ನುಡಿಗಳು ಪೂರಕವಾಗಿರಬೇಕು. ತಮ್ಮ ಚಿತ್ಕಳೆಯ ಸಂಕೇತವಾದ ಇಷ್ಟಲಿಂಗವು ಪರಮದೈವವು, ಅಂತಪ್ಪ ತತ್ವವೇ ಪತಿ. ಅದನ್ನು ಬಸವಣ್ಣನವರು, “ಶರಣ ಸತಿ ಲಿಂಗ ಪತಿ ” ಎಂದಿದ್ದಾರೆ.
ಶಿಶುನಾಳ ಶರೀಫರು ತಮ್ಮ ಆಧ್ಯಾತ್ಮ ಸಾಧನೆಗೆ ಅರಿವಿನ ಮೂಲ ಗುರು. ನಾವು ಅರಿವಿನ ಮೂಲದ ಗುರುವಿಗೆ ಗುಲಾಮರಾಗಬೇಕು. ಇಂತಪ್ಪ ಗುರುವೇ ತನ್ನ ಗಂಡ ಎಂದಿದ್ದಾರೆ.
” ನನ್ನೊಳಗೆ ನಾ ತಿಳಕೊಂಡೆ
ನನಗೆ ಬೇಕಾದ ಗಂಡನ ಮಾಡಿಕೊಂಡೆ
ಆರು ಮಂದಿನ ಅಡವಿಗೆ ಅಟ್ಟಿದೆ ನಾ
ಮೂರ ಮಂದಿನ್ನ ಬಿಟ್ಟುಕೊಟ್ಟೆ .
……. ಗುರು ಗೋವಿಂದನ ಪಾದವ ಹಿಡಕೊಂಡೇ” ಎಂದಿದ್ದಾರೆ.
ಅರಿಷಡ್ವರ್ಗಗಳ ಮಲೀನತೆ ಕಳೆದುಕೊಂಡು ಪವಿತ್ರನಾಗಿ ಗುರು ಗೊವಿಂದರ ಅರಿವಿನ ಹೆಂಡತಿಯಾಗುತ್ತೇನೆ ಎಂದಿದ್ದಾರೆ ಶರೀಫರು. ಅವರಿಗೆ ಗೋವಿಂದ ಭಟ್ಟರು ಸರ್ವಸ್ವವಾಗಿದ್ದರು.
ಶರೀರದ ಬೇರೆ ಬೇರೆ ಭಾಗದ ಅಂಗಗಳ ಉಪಯುಕ್ತತೆಯನ್ನು ಬಸವಣ್ಣನವರು ಈ ರೀತಿ ಬಳಸಲು ಸೂಚಿಸಿದ್ದಾರೆ.
ಎನ್ನ ಕಾಯವ ದಂಡಿಗೆಯ ಮಾಡಯ್ಯಾ
ಎನ್ನ ಶಿರವ ಸೋರೆಯ ಮಾಡಯ್ಯಾ
ಎನ್ನ ನರವ ತಂತಿಯ ಮಾಡಯ್ಯಾ
ಎನ್ನ ಬೆರಳ ಕಡ್ಡಿಯ ಮಾಡಯ್ಯಾ
ಬತ್ತೀಸ ರಾಗವ ಹಾಡಯ್ಯಾ .
ಉರದಲೊತ್ತಿ ಬಾರಿಸು ಕೂಡಲ ಸಂಗಮದೇವಾ.
ಎಂದೆನ್ನುವ ಬಸವಣ್ಣನವರು ದೇಹದ ಪ್ರತಿ ಭಾಗವು ಸದ್ಭಳಕೆಯಾಗಬೇಕು. ಅಂಗಗಳ ಬಳಕೆಯಿಂದ ಸದ್ವಿಚಾರ ಸದ್ಗುಣಗಳ ನಾದವನ್ನು ನುಡಿಸಿ ಆನಂದಿಸಲು ಆಹ್ವಾನಿಸುತ್ತಾರೆ. ಬದುಕಿನ ಸಾರ್ಥಕತೆಯ ಹಾಡನ್ನು ಹಾಡಲು ಕೇಳಿಕೊಳ್ಳುತ್ತಾರೆ.
ಬದುಕಿನ ಮಧ್ಯೆ ನಿತ್ಯ ನೂರು ಸಲ ಹೊರಡುವ ನಾದದ ತಂಬೂರಿಯನ್ನು ಬರೀ ವ್ಯರ್ಥವಾಗಿ ನುಡಿಸದೆ, ಹದವಾಗಿ ಮೀಟಿ ಇಂಪನ್ನು ಹೆಚ್ಚಿಸಿ ಕುಶಲೋಪರಿಗೊಪ್ಪುವ ಸಂಗೀತ ಕೇಳಿ ಆನಂದಿಸಬೇಕೆನ್ನುವುದು ಶರೀಫರ ಅಭಿಪ್ರಾಯ.
ತರವಲ್ಲ ತಗಿ ನಿನ್ನ ತಂಬೂರಿ ಸ್ವರ
ಬರಿದೆ ಬಾರಿಸದಿರೋ ತಂಬೂರಿ
ಸರಸ ಸಂಗೀತದ ಕುರುಹುಗಳರಿಯದೆ
ಬರಿದೆ ಬಾರಿಸದಿರೋ ತಂಬೂರಿ
ಮದ್ದಾಲಿ ಧ್ವನಿಯೊಳು ತಂಬೂರಿ
ಅದಾ ತಿದ್ದಿ ನುಡಿಸಬೇಕೋ ತಂಬೂರಿ
ದಿಟ್ಟತನದ ನಿತ್ಯಕೆ ಜರಗುವ
ಬುದ್ಧಿವಂತಿಕೆಯಾ ತಂಬೂರಿ
ಹಸನಾದ ಮೇಲಕ್ಕೆ ತಂಬೂರಿ ದೇವಾ
ಕುಶಲರಿಗೊಪ್ಪುವಾ ತಂಬೂರಿ
ಜೀವನ ಸಂಗೀತ, ರಾಗ, ಲಯ, ತಾಳದ ಗತ್ತು ಗುರುತಿಸಿ ಶರೀರದ ಮೂಲಕ ಸರ್ವರಿಗೂ ಒಪ್ಪುವ ಯೋಗ್ಯ ಇಂಪಾದ ಸ್ವರ ಹೊರಡಿಸಲು ತಂಬೂರಿ ಬಳಸಲು ಶರೀಫರು ಹೇಳಿದ್ದಾರೆ. ಆಧ್ಯಾತ್ಮದ ಸ್ವರ ಧ್ವನಿ ತಿದ್ದಿ ತೀಡಿ ಕಂಪು ಬೀರಬೇಕೆನ್ನುವುದು ಶರೀಫರ ಆಶಯ.
ಬದುಕಿನಲ್ಲಿ ಅನೇಕ ವಿಷಯಗಳು ಬರುತ್ತವೆ. ಅವುಗಳಿಂದ ಮನುಷ್ಯ ಚಂಚಲವಾಗುತ್ತಾನೆ. ಇಂತಹ ವಿಷಯಗಳನ್ನು ಹೇಗೆ ನಿಗ್ರಹಿಸಬೇಕೆನ್ನುವುದನ್ನು ಬಸವಣ್ಣನವರು ಸುಂದರವಾಗಿ ಹೇಳಿದ್ದಾರೆ.
ವಿಷಯವೆಂಬ ಹಸುರೆನ್ನ ಮುಂದೆ ತಂದು ಪಸರಿಸದಿರಯ್ಯಾ
ಪಶುವೇನು ಬಲ್ಲದು? ಹಸುರೆ೦ದೆಳೆಸುವುದು
ವಿಷಯರಹಿತನ ಮಾಡಿ, ಭಕ್ತಿ ರಸವ ದಣಿಯ ಮೇಯಿಸಿ
ಸುಬುದ್ಧಿಯೆಂಬ ಉದಕವನೆರೆದು,
ನೋಡಿ ಸಲಹಯ್ಯಾ ಕೂಡಲ ಸಂಗಮದೇವಾ
ಇದನ್ನೇ ಶರೀಫರು ಮನದಲ್ಲಿ ಹುಟ್ಟುವ ನೂರೆಂಟು ಭಾವನೆಗಳ ಕಸವ ಕಿತ್ತೆಸೆದು ಉತ್ತಮ ಪೈರನ್ನು ಬೆಳೆಯಲು ದುರಾಸೆ ದುರಾಚಾರಗಳ ಕಸವನ್ನು ಕಿತ್ತೊಗೆಯಬೇಕೆಂದು ಗೆಳತಿಗೆ ಕರೆ ನೀಡುತ್ತಾರೆ.
ಸುಗ್ಗಿ ಮಾಡೋಣ ಬಾರವ್ವಾ, ಗೆಳತಿ ಸುಮ್ಮನ್ಯಾಕ ಕುಳತಿ.
ಗೆಳತಿ ಸುಮ್ಮನ್ಯಾಕ ಕುಳತಿ.
ಏಳೆಂಟು ಅಕ್ಕಡಿಯ ಎಣಿಸಿ ,
ಗಂಟಿನ ಸೋಲಿಗವೆಲ್ಲವ ದಣಿಸಿ
ಬಾಳಿನ ರಾಣಿ ನವಣೆ ಸಜ್ಜೆಯ
ಓಲಾಡುತ, ಬಹು ಮಾಡಾಡಿ ಕೊಯ್ಯುತ
ಸುಗ್ಗಿ ಮಾಡೋಣ ಬಾರವ್ವಾ, ಗೆಳತಿ ಸುಮ್ಮನ್ಯಾಕ ಕುಳತಿ.
ಶಿಶುನಾಳಧೀಶನೆ ಗುರುವು ಅಂವಾ ಕರೆದಲ್ಲಿ ಹೋಗೋದು ತರವು
ಕಸವ ಕಳೆದು ಕೈ ಕುಡುಗೋಲು ಹಿಡಿಯುತ
ಹಸನಾಗಿ ಹೊಲವನು ಹರಿಸಾ ಮಾನವ ಸುಟ್ಟು
ಸುಗ್ಗಿ ಮಾಡೋಣ ಬಾರವ್ವಾ, ಗೆಳತಿ ಸುಮ್ಮನ್ಯಾಕ ಕುಳತಿ.
ಇನ್ನೊಬ್ಬರ ವಿಷಯಗಳ ಚಿಂತೆ, ವಿಚಾರ ನಮಗೇತಕೆ ಎಂದಿದ್ದಾರೆ ಬಸವಣ್ಣ. ಮೊದಲು ನಮ್ಮನ್ನು ಸರಿಪಡಿಸಿಕೊಂಡು ಇನ್ನೊಬ್ಬರನ್ನು ತಿದ್ದುವುದು ಸೂಕ್ತ ಎನ್ನುವುದು ಅವರ ಅಭಿಪ್ರಾಯ.
ಪರಚಿಂತೆ ನಮಗೇತಕಯ್ಯಾ?
ನಮ್ಮ ಚಿಂತೆ ನಮಗೆ ಸಾಲದೇ?
ಕೂಡಲ ಸಂಗಯ್ಯಾ ಒಲಿದಾನೋ ಒಲಿಯನೋ
ಎಂಬ ಚಿಂತೆ ಹಾಸಲುಂಟು ಹೊದೆಯಲುಂಟು.
ಅದೇ ರೀತಿ, ಲೋಕದ ಡೊಂಕು ನೀವೇಕೆ ತಿದ್ದುವಿರಿ
ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿರಿ .
ನಿಮ್ಮ ನಿಮ್ಮ ಮಾನವ ಸಂತೈಸಿ ಕೊಳ್ಳಿರಿ .
ನೆರಯ ಮನೆಯ ದುಃಖಕ್ಕೆ ಅಳುವರ ಮೆಚ್ಚ ನಮ್ಮ ಕೂಡಲ ಸಂಗಮದೇವಾ.
ಬಸವಣ್ಣನವರು ಮೊದಲು ವ್ಯಕ್ತಿಯ ಅಂತರಂಗದ ಶುದ್ಧತೆಗೆ ಆದ್ಯತೆ ನೀಡಿದ್ದಾರೆ. ಉತ್ತಮ ಮಾರ್ಗದಲ್ಲಿ ನಡೆದು ತಮ್ಮ ಜೀವನವನ್ನು ಸಂಗಯ್ಯನ ಅನುಗ್ರಹಕ್ಕೆ ಪಾತ್ರನಾಗುವ ಚಿಂತೆ ಶರಣರಿಗಿರಬೇಕು. ಇತರ ಅನಗತ್ಯ ಚಿಂತೆ, ಲೌಕಿಕ ಸಮಸ್ಯೆಗಳಿಗೆ ಸ್ಪಂದಿಸಿ ಮನುಷ್ಯ ತನ್ನ ಜೀವನೋತ್ಕರ್ಷವನ್ನು ಕಳೆದುಕೊಳ್ಳಬಾರದು ಎಂದು ಹೇಳಿದ್ದಾರೆ.
ಇದನ್ನು ಶರೀಫರು ಅತ್ಯಂತ ತಾತ್ವಿಕವಾಗಿ ಹೀಗೆ ಹೇಳುತ್ತಾರೆ-
ನೀ ಲೋಕದ ಕಾಳಜಿ ಮಾಡಬೇಕಂತಿ
ಯಾರ ಬ್ಯಾಡ೦ತರಾ, ಮಾಡಪ್ಪಾ ಚಿಂತಿ
ವೇದ ಪುರಾಣವ ಓದಬೇಕಂತಿ
ಆನಿ ಅಂಬಾರಿ ಏರಬೇಕಂತಿ
ಎಂಟು ಬಣ್ಣದ ಕುಡಿಯ ಮರೆತಿ.
ಮನುಷ್ಯ ಸದಾ ವೈಭವಯುತವಾಗಿ ಜೀವನ ನಡೆಸಬೇಕೆಂದು ಕನಸು ಕಾಣುತ್ತಾನೆ. ಆದರೆ ಸತ್ತಾಗ ಆತನನ್ನು ಕೌದಿಯಲ್ಲಿ ಒಯ್ಯುತ್ತಾರೆ. ಇದು ವಾಸ್ತವಿಕ.
ಶತ ಶತಮಾನದಿಂದ ಪುರೋಹಿತ ವರ್ಗವು ಜನಸಾಮಾನ್ಯರನ್ನು ಅಜ್ಞಾನದ ಅಂಧಕಾರಕ್ಕೆ ನೂಕಿ, ವೇದ ಶಾಸ್ತ್ರ, ಪುರಾಣ, ತರ್ಕ, ಆಗಮಗಳೆಂಬ ಸಾಧನಗಳಿಂದ ಜನರನ್ನು ಮೌಢ್ಯ ಕೂಪಕ್ಕೆ ತಳ್ಳುತ್ತಿರುವುದರ ವಿರುದ್ಧ ಬಸವಣ್ಣ ಪ್ರತಿಭಟಿಸುತ್ತಾರೆ.
ವೇದಕ್ಕೆ ಒರೆಯ ಕಟ್ಟುವೆ
ಶಾಸ್ತ್ರಕ್ಕೆ ನಿಗಳನಿಕ್ಕುವೆ
ತರ್ಕದ ಬೆನ್ನ ಬಾರನ್ನೆತ್ತುವೆ
ಆಗಮದ ಮೂಗ ಕೊಯ್ಯುವೆ
ನೋಡಯ್ಯಾ ಮಹಾದಾನಿ ಕೂಡಲ ಸಂಗಮದೇವಾ
ಎಂತಹ ಸಾಹಸ ಬಸವಣ್ಣನವರದು. ಇಡೀ ಸನಾತನ ವ್ಯವಸ್ಥೆಗೆ ಸವಾಲು ಹಾಕಿದ ಧೈರ್ಯ ಅವರದು. ವೇದ ಶಾಸ್ತ್ರವ ಧಿಕ್ಕರಿಸಿ ಮಾನವಕುಲಕ್ಕೆ ಹೊಸ ಆಯಾಮ ಕೊಟ್ಟ ಪ್ರವಾದಿ ಅವರು.
ಶಿಶುನಾಳ ಶರೀಫರು ಗೋವಿಂದ ಭಟ್ಟರಲ್ಲಿ ಅಧ್ಯಯನ ಕೈಗೊಂಡರೂ ವೇದ ಶಾಸ್ತ್ರ ಆಗಮದಂತಹ ವಿದ್ಯೆಗೆ ಮಾರು ಹೋಗಲಿಲ್ಲಾ. ಬದಲಿಗೆ ವೇದ ಶಾಸ್ತ್ರಗಳನ್ನು ಖಂಡಿಸಿದ್ದಾರೆ .
ನಾನಾರೆಂಬುದು ನಾನಲ್ಲಾ , ಈ ಮಾನಸ ಜನ್ಮವು ನಾನಲ್ಲಾ .
ನಾರಾಯಣ ಹರ ಬ್ರಹ್ಮ ಸದಾ ಶಿವನನೊಲಿಸುವ ಸುತ ನಾನಲ್ಲಾ.
ವೇದ ಓದಿದವ ನಾನಲ್ಲ ಬರೀ ವಾದವ ಮಾಡುವವ ನಾನಲ್ಲಾ.
ಶರಣರಂತೆ, ಶರೀಫರು ಸಹ ವೇದ, ಪುರಾಣ ಇವು ಪುಂಡರ ಗೋಷ್ಠಿ ಎಂದು ಮನಗಂಡು ಇಂತಹ ವಿದ್ಯೆಗಳನ್ನು ತಾವು ಕಲಿಯಲಿಲ್ಲ ಎಂದು ಹೆಮ್ಮೆಯಿಂದಾ ಹೇಳುತ್ತಾರೆ. ಶರೀಫರಿಗೆ ಗುರುವೇ ತಂದೆ ತಾಯಿ ಸರ್ವಸ್ವ. ಎದ್ದರೆ ಕುಳಿತರೆ ಮಲಗಿದರೂ ಗುರುವಿನ ಧ್ಯಾನ. ಗೋವಿಂದ ಭಟ್ಟರ ನಾಮಸ್ಮರಣೆ ಅವರಿಗೆ ಉಸಿರಾಗಿತ್ತು.
ವೈದಿಕರು ಸಂಸ್ಕಾರವಿಲ್ಲದ ಮುಸ್ಲಿಂ ಬಾಲಕನಿಗೆ ವಿದ್ಯೆ ಕೊಡಲು ಮುಂದೆ ಬಾರದಿದ್ದಾಗ, ಗೋವಿಂದ ಭಟ್ಟರು ಶರೀಫರಿಗೆ ವೈದಿಕ ಸಂಪ್ರದಾಯದಂತೆ ಜನಿವಾರ ಹಾಕಿ ವೈದಿಕ ವ್ಯವಸ್ಥೆಗೆ ಒಂದು ಹೊಸ ಸವಾಲನ್ನು ಎಸಗಿದರು.
ಇಂತಹ ಅದ್ಭುತ ಕಾರ್ಯಕ್ಕೆ ಶರೀಫರು ತಮ್ಮ ಗುರುವನ್ನು ಹೀಗೆ ನೆನೆಯುತ್ತಾರೆ-
ಹಾಕಿದ ಜನಿವಾರವ ಸದ್ಗುರುನಾಥ
ಹಾಕಿದ ಜನಿವಾರ ನೂಕಿದ ಭವಭರ
ಲೋಕಾನಂದವ ನೀ ಪಡೆಯಂದಾ.
ಸಂಧ್ಯಾ ವಂದನೆ ಮುಗಿಸಿ ….
ಅಬ್ರಾಹ್ಮಣನೊಬ್ಬ ಜನಿವಾರವನ್ನು, ಗುರು ಕಾರುಣ್ಯದಿಂದ ಬ್ರಾಹ್ಮಣರಿಗಿ೦ತಲೂ ಸರ್ವ ಶ್ರೇಷ್ಠ ಎಂದು ಸಾಧಿಸಿ,.ಸನಾತನಿಗಳೆದುರು ಜನಿವಾರ ಹಾಕಿಕೊಂಡು ಹೊಸ ದಾಖಲೆ ನಿರ್ಮಿಸಿದರು ಶರೀಫರು.
ಇದನ್ನೇ ತಮ್ಮ ಧನ್ಯತಾ ಭಾವ ವ್ಯಕ್ತಪಡಿಸಲು ಶರೀಫರು
ತಂದೆ ಗೋವಿಂದಾ ಗುರುವಿನ ಸೇವಕ
ಕುಂದುಗೋಳಕೆ ಬಂದು ನಿಂತಾನ್ಯಾಕೋ?
ಎಂದು ತಮ್ಮನ್ನು ಪ್ರಶ್ನಿಸಿಕೊಂಡಿದ್ದಾರೆ. ಶರೀಫರಿಗೆ ತಂದೆ ತಾಯಿಯ ಪ್ರೀತಿ ಮಮತೆ ಗುರುವಿನ ಅಂತಕರಣವನ್ನು ಗೋವಿಂದ ಭಟ್ಟರು ನೀಡಿದರು.
ಬಸವಣ್ಣನವರ ಗುರುವಿನ ಕಲ್ಪನೆಯೇ ಬೇರೆ. ಅರಿವೇ ಗುರು. ಅರಿವಿನ ಸಾಕ್ಷಾತ್ಕಾರ ಹರನ ಸಾಕ್ಷಾತ್ಕಾರಕ್ಕಿ೦ತ ಮಿಗಿಲು. ಹರ ಮುನಿದರೆ ಗುರು ಕಾಯುವನಲ್ಲದೆ
ಗುರು ಮುನಿದರೆ ಹರ ಕಾಯನು- ಇದು ಬಸವಣ್ಣನವರ ಸ್ಪಷ್ಟವಾದ ಮಾತು.
ಬಸವಣ್ಣನವರು ಮತ್ತು ಶಿಶುನಾಳ ಶರೀಫರು ತಾತ್ವಿಕ ನೆಲೆಗಟ್ಟಿನ ಮೇಲೆ ತಮ್ಮ ವೈಚಾರಿಕ ನುಡಿಗಳನ್ನು ಸಾರ್ವತ್ರಿಕ ಗೊಳಿಸಿದರು. ಹೆಣ್ಣನ್ನು ಅಕ್ಕ, ತಾಯಿ, ದೇವರೆಂದು ಪೂಜಿಸಿದ ಕೀರ್ತಿ ಶರಣರಿಗೆ ಸಲ್ಲುತ್ತದೆ. ಬಸವಣ್ಣನವರು ಮಹಿಳೆಗೆ ಸಮಾನ ಸ್ಥಾನಮಾನ ಕೊಟ್ಟು ಅವಳನ್ನು ಸಮಾಜದ ಪ್ರಮುಖ ವಾಹಿನಿಗೆ ತಂದರು. ಅಲ್ಲಿಯವರೆಗೆ ಹೆಣ್ಣಿಗಿದ್ದ ಮಲದ ಭಾಂಡ, ಭೋಗದ ವಸ್ತು, ಶೂದ್ರಳು, ಪಂಚಮಳು ಎನ್ನುವ ಭಾವಗಳನ್ನು ಕಿತ್ತೆಸೆದರು.
” ಕಾಮವ ತೊರೆದಾತ ಹೇಮವ ಜರೆದಾತ
ಭಾನುವಿನ ಉದಯಕ್ಕೆ ಒಳಗಾಗದ ಶರಣ” ಎಂದಿದ್ದಾರೆ ಬಸವಣ್ಣ. ನೈತಿಕ ಜಗತ್ತಿಗೆ ಗಟ್ಟಿ ಬುನಾದಿ ಹಾಕಿದವರಲ್ಲಿ ಬಸವಣ್ಣ ಅಗ್ರಗಣ್ಯರು.
ಹೆಣ್ಣೆಂಬ ಮಾಯೆ ,ಮಾನಿನಿಗೆ ಭಯಗೊಂಡ ಶಿಶುನಾಳ ಶರೀಫರು
ಹಾವು ತುಳಿದೇನ ಮಾನಿನಿ ಹಾವು ತುಳಿದೇನಿ
ಹಾವು ತುಳಿದು ಹಾರಿ ನಿಂತೇ ಜೀವ ಕಳವಳಿಸಿತೆ ಗೆಳತಿ “
ದೇಹ ತ್ರಯದ ಶೃತಿಯು ತಪ್ಪಿ
ದೇವಾ ನೀನೆ ಗತಿಯು ಎಂದು ಹಾವು ತುಳಿದೇನಿ.
ಹರಿಗೆ ಹಾಸಿಗೆಯಾದ ಹಾವು, ಹರನ ತೋಳಲಿ ಇರುವ ಹಾವು .
ಧರೆಯ ಹೊತ್ತು ಮೆರೆವ ಹಾವಿನ
ಶಿರವ ಮೆಟ್ಟಿ ಶಿವನ ದಯದಿ ಹಾವು ತುಳಿದೇನ.
ಇಲ್ಲಿ ಹಾವು ಜೀವನದ ಮಾಯೆ, ಅಸ್ಥಿರತೆ, ಭಯ ಹುಟ್ಟಿಸುವ ವಸ್ತು. ಹರ ಹರಿ ಎಂಬುವವರ ಜೀವನದಲ್ಲಿ ಮಾನಿನಿಯಾಗಿ ಕಾಡಿದ್ದಾಳೆ ಎಂದು ಶರೀಫರು ಹೇಳಿದ್ದಾರೆ. ಆದರೆ ತಾವು ಮಾತ್ರ ಶಿವನ ದಯೆಯಿಂದ, ಮಾನಿನಿಯಿಂದ ತಪ್ಪಿಸಿಕೊಂಡೆ ಎಂದು ಹೇಳಿದ್ದಾರೆ.
ಬಸವಣ್ಣನವರು ಮತ್ತು ಶಿಶುನಾಳ ಶರೀಫರು ಇವರಲ್ಲಿನ ಸಾಮ್ಯತೆ ಏನೆಂದರೆ, ಇಬ್ಬರೂ ದೇಸಿ ಮಾರ್ಗದಲ್ಲಿ ವಚನ ತತ್ವದ ಪದ ರಚಿಸಿ ಅದನ್ನು ಸಮಾಜಮುಖಿ ಸ೦ವಾದ ಮಾಡಿದರು. ಬಸವಣ್ಣನವರ ವಚನವು ಹಳ್ಳಿಗರಲ್ಲಿ ಭಜನೆ ಪ್ರಾರ್ಥನೆಯಲ್ಲಿ ಎಷ್ಟು ಪ್ರಮುಖವೋ, ಶಿಶುನಾಳರ ಕರ್ಬಲ್ ಮತ್ತು ತತ್ವದ ಪದಗಳು ಅಷ್ಟೇ ಆಕರ್ಷಣೀಯವಾಗಿವೆ. ಬಸವಣ್ಣ ತಮಗೆ ನಿತ್ಯ ಸ್ಮರಿಸುವ ವ್ಯಕ್ತಿ ಎಂದು ಶರೀಫರು ತಮ್ಮ ಪದದಲ್ಲಿ ಹೇಳಿದ್ದಾರೆ.
ಅಡಿಗಡಿಗೆ ಶಿವ ನಾಮವ ಸ್ಮರಿಸೋ
ದೃಢಭಕ್ತಿಯ ನಿಲ್ಲಿಸೋ
ಶಿಶುನಾಳಧೀಶ ಈಶ ಬಸವೇಶ
ಮಾಡೊ ಶಿವ ಭಜನೆಯ.- ಇದು ಶರೀಫರು ಸ್ವತಃ ರಚಿಸಿ ಗಾವಟಿ ಶಾಲೆಯ ಶಿಕ್ಷಕರಾಗಿ ಜನರಿಗೆ ಸಂಜೆ ಕಲಿಸುತ್ತಿದ್ದರು. ಶರೀಫರು ಶರಣ ಶ್ರೇಷ್ಠ ಅಲ್ಲಮರ ಬಗ್ಗೆ ಹತ್ತಾರು ಅಲಾವಿ ಪದ ತತ್ವದ ಪದ ಬರೆದಿದ್ದಾರೆ.
ಎಡೆಯ ಒಯ್ಯುನು ಬಾರೆ
ದೇವರಿಗೆ ಎಡೆಯ
ಎಡೆಯ ಒಯ್ಯುನು ಬಾರೆ
ಮಡಿ ಹುಡಿಯಿಂದಲೇ
ಪೊಡವಿಯೊಳಧಿಕೆನ್ನ ಒಡೆಯ ಅಲ್ಲಮನಿಗೆ
ಎಡೆಯ ಒಯ್ಯುನು ಬಾರೆ
ಶಿಶುನಾಳ ಶರೀಫರು ಅಲ್ಲಮನೆ ತಮ್ಮ ಅಧ್ಯಾತ್ಮದ ದೇವರು ಎಂದು ಹೇಳಿದ್ದಾರಲ್ಲದೆ ಅಲ್ಲಮರೆ ಅಲ್ಲಾ ಎಂದು ಹಾಡಿದ್ದಾರೆ. ಚಾಮರಸರ ಪ್ರಭುಲಿಂಗ ಲೀಲೆ ಅವರ ಅಚ್ಚುಮೆಚ್ಚಿನ ಕೃತಿ . ಅವರೇ ಹೇಳುವಂತೆ, “ಎಲ್ಲಾ ಗ್ರಂಥ ಬಗಲಾಗ ಪ್ರಭುಲಿಂಗ ಲೀಲೆ ತಲೆ ಮ್ಯಾಲ” ಎಂದು ಹೆಮ್ಮೆಯಿಂದ ಹೇಳುವ ಶರೀಫರಿಗೆ ಬಸವಣ್ಣ ಅಲ್ಲಮ ಪ್ರೇರಣೆಯಾಗಿದ್ದರು.
ಬಸವಣ್ಣನವರೂ ಇಂದು ವಿಶ್ವಸಂಸ್ಥೆ, ಅಮೆರಿಕ, ಫ್ರಾನ್ಸ್, ಜರ್ಮನಿ, ಇಂಗ್ಲೆಂಡ್ ಮುಂತಾದ ನಾಡಿನಲ್ಲಿ ತಮ್ಮ ತತ್ವ ಸಿದ್ಧಾಂತಗಳಿಂದ ವಿಶ್ವಮಾನ್ಯರಾಗಿದ್ದಾರೆ. ಅವರ-
” ಕಳಬೇಡಾ ಕೊಲಬೇಡ ಹುಸಿಯ ನುಡಿಯಲು ಬೇಡ
ಮುನಿಯ ಬೇಡ, ಇದಿರ ಹಳಿಯಲು ಬೇಡ, ಅನ್ಯರಿಗೆ ಅಸಹ್ಯ ಪಡಬೇಡ
ತನ್ನ ಬಣ್ಣಿಸಬೇಡ …” ಇದು ಇಂದು ಜಗತ್ತಿನ ಕಾಲಾತೀತ ಸೀಮಾತೀತ ಮೌಲ್ಯಗಳ ಮಹಾ ಸಂಪುಟ .
ಬಸವಣ್ಣ ಮತ್ತು ಶರೀಫರ ಸಾಹಿತ್ಯದಲ್ಲಿ ಸಾಮಾಜಿಕ ಕಾಳಜಿ ಇದೆ. ಸಮಷ್ಟಿಯ ಚಿಂತನೆ, ಆಧ್ಯಾತ್ಮಿಕ ಸಂದೇಶ, ತತ್ವ ನೀತಿ ಬೋಧೆಗಳಿವೆ.
ಬಸವಣ್ಣನವರು ಜನಿವಾರ ಕಿತ್ತೆಸೆದು ವೈದಿಕರ ಸಮುದಾಯವನ್ನು ಧಿಕ್ಕರಿಸಿದರೆ, ಬ್ರಾಹ್ಮಣರಿಗಿ೦ತಲೂ ಒಬ್ಬ ಅಬ್ರಾಹ್ಮಣ ಮುಸ್ಲಿಂ ಪಿಂಜಾರ ಸಾಧಕ ಶರೀಫರು ಜನಿವಾರ ಧರಿಸಬಹುದು ಎಂದು ಸಾಧಿಸಿದ್ದಾರೆ. ಕ್ರಿಯೆಗಳು ವಿರುದ್ಧವಾದರೂ ಅವರಿಬ್ಬರ ಉದ್ದೇಶವೊಂದೇ. ಜಾತ್ಯಾತೀತ ತತ್ವಗಳನ್ನು ಜಗತ್ತಿಗೆ ಸಾರಿದ ಈರ್ವರೂ
ಕನ್ನಡ ನಾಡಿನ ಕಣ್ಮಣಿಗಳು. ಕನ್ನಡ ಸಾರಸ್ವತ ಲೋಕಕ್ಕೆ ಇವರ ಕೊಡುಗೆ ಅಪಾರ. ಅಂತೆಯೇ ಹಳ್ಳಿಯಲ್ಲಿ ಹೊಲದಿ ದಣಿದು ಬಂದ ರೈತರು ಸಂಜೆ ಮನದ, ದೇಹದ ದಣಿವು ತಣಿಸಲು ಬಸವಣ್ಣನವರ ವಚನಗಳನ್ನು ಮತ್ತು ಶಿಶುನಾಳ ಶರೀಫರ ತತ್ವದ ಪದಗಳನ್ನು ಹಾಡಿ ಆನಂದ ಹೊಂದುತ್ತಾರೆ.
ಇಂದು ಜಗತ್ತಿನಲ್ಲಿ ತುಂಬಿದ ಕೋಮುಗಲಭೆ, ಜಾತಿ ಸಂಘರ್ಷ, ವರ್ಗ ವರ್ಣನೀತಿಯ ಸಮಸ್ಯೆಗಳಿಗೆ ಬಸವಣ್ಣ ಮತ್ತು ಶಿಶುನಾಳ ಶರೀಫರ ತತ್ವಗಳೇ ಉತ್ತರ.
–ಡಾ.ಶಶಿಕಾಂತ ಪಟ್ಟಣ ರಾಮದುರ್ಗ