*ವಾಸ್ತವದ ಒಡಲು*
ಕೃತಿ ಲೋಕಾರ್ಪಣೆ ಸೃಷ್ಟಿಸಿದ ಇತಿಹಾಸ
ಲೋಕಾರ್ಪಣೆಯಲಿ ಕಾರ್ಯಕ್ರಮದಲ್ಲಿ ಭಾಗಿಯಾಗಲು ಹೋದಾಗಿನ ಅನುಭವ…
ಇದೀಗ ‘ಬೆವರ ಹನಿಯ ಪಯಣ’ ಕೃತಿ ಓದುಗರ ಕೈ ಸೇರಿದೆ. ಒಂದು ಕೃತಿ ಪ್ರಕಟವಾಗಿ ಹೊರ ಬಂದು ಜನರನ್ನು ತಲುಪುವ ಪಯಣ ಹೀಗಿರುತ್ತದೆಯೆ?!!! ಎನಿಸುವಷ್ಟು ಆಶ್ಚರ್ಯ ಹುಟ್ಟಿಸಿದ ಕಾರ್ಯಕ್ರಮವದು. ಇದನ್ನು ಇಷ್ಟೊಂದು ಅದ್ದೂರಿಯಾಗಿ ಮಾಡಬಹುದು ಎಂದು ನಿರೂಪಿಸಿದ್ದು ೧೭ ಜೂನ್ ೨೦೨೨ ರಂದು ಗದುಗಿನ ಡಾ.ಅಂಬೇಡ್ಕರ್ ಸಭಾ ಭವನದಲ್ಲಿ ನಡೆದ ಕಾರ್ಯಕ್ರಮ.
ರೋಣ, ರಾಜೀವಗಾಂಧಿ ಶಿಕ್ಷಣ ಸಂಸ್ಥೆಯ ಆಯುರ್ವೇದ ಕಾಲೇಜು, ಆಸ್ಪತ್ರೆ ಹಾಗೂ ಸ್ನಾತಕೋತ್ತರ ಸಂಶೋಧನಾ ಕೇಂದ್ರದ ಪ್ರಾಚಾರ್ಯರಾದ ಡಾ.ಐ.ಬಿ.ಕೊಟ್ಟೂರಶೆಟ್ಟಿ ಅವರ ಬದುಕನ್ನಾಧರಿಸಿ, ಯಲ್ಲಪ್ಪ ಹಂಚಿನಾಳ ಹುಯಿಲಗೋಳ, ಅವರು ಬರೆದ ‘ಬೆವರ ಹನಿಯ ಪಯಣ’ ಹಾಗೂ ಐವತ್ತರ ಅಭಿನಂದನಾ ಸಮಾರಂಭ ಆಯೋಜಿಸಲಾಗಿತ್ತು. ಪುಸ್ತಕ ಲೋಕಾರ್ಪಣೆಯೇ ಮಹತ್ವದ್ದಾಗಿ, ಹುಟ್ಟುಹಬ್ಬ ಒಂದು ನೆಪವಾಗಿತ್ತು.
ಇಂದಿನ ಪುಸ್ತಕ ಸಂಸ್ಕೃತಿಯನ್ನು ಸೂಕ್ಷ್ಮವಾಗಿ ಗಮನಿಸಿದಾಗ, ಪರಿಸ್ಥಿತಿ ಏನೆಂದು ಎಲ್ಲರಿಗೂ ತಿಳಿದೇ ಇದೆ. ನೂತನ ತಂತ್ರಜ್ಞಾನದ ಪ್ರಭಾವ ಓದುವವರ, ಬರೆಯುವವರ ಆಸಕ್ತಿಗೆ ಸವಾಲು ಹಾಕಿದಂತಿದೆ. ಒಬ್ಬ ಬರಹಗಾರ ಕೃತಿ ಪ್ರಕಟಣೆಯಾದ ಬಳಿಕ ಯಾವುದಾದರೂ ಸಂಘ, ಸಂಸ್ಥೆಯ ಮೂಲಕ ಓದುಗರನ್ನು ತಲುಪಿಸಿ, ‘ಸಂದಿಯಲ್ಲಿ ಸಮಾರಾಧನೆ’ ಎನ್ನುವಂತೆ ಮುಗಿಸುತ್ತಾರೆ. ಆದರೆ ‘ಬೆವರ ಹನಿಯ ಪಯಣ’ ಕೃತಿ ಲೋಕಾರ್ಪಣೆ ಒಂದು ಸುಂದರ ಸವಿನೆನಪಾಗಿ ಉಳಿಯುವಂತೆ ಆಚರಿಸಲಾಯಿತು. ಡಾ.ಐ.ಬಿ.ಕೊಟ್ಟೂರಶೆಟ್ಟಿಯವರ ಪರಿವಾರ, ಸಂಬಂಧಿಕರು, ಸ್ನೇಹಿತರು, ಒಡನಾಡಿಗಳು ಮುಂತಾದವರೆಲ್ಲಾ, ಅಲ್ಲಿ ನಿಸ್ಪೃಹತೆಯಿಂದ ಸೇರಿ, ಅದೊಂದು ಉತ್ಸವದಂತೆ ಅನುಭವಿಸಲಾಯಿತು.
ಡಾ.ಅಂಬೇಡ್ಕರ್ ಸಭಾಭವನದ ಮುಖ್ಯದ್ವಾರದಲ್ಲಿ ಇರಿಸಲಾಗಿದ್ದ ಕಟೌಟ್ ಅಂದಿನ ಕಾರ್ಯಕ್ರಮದ ರೂಪುರೇಷೆಯ ಪ್ರತಿಬಿಂಬವಾಗಿತ್ತು. ಸುತ್ತಲಿನ ವರಾಂಡಾದಲ್ಲಿ ಡಾ.ಐ.ಬಿ.ಕೊಟ್ಟೂರಶೆಟ್ಟಿಯವರ ಭಾವಚಿತ್ರಗಳನ್ನು ಕಲೆ ಹಾಕಿ ಸುಂದರವಾಗಿ ಡಿಸ್‌ಪ್ಲೆ ಮಾಡಿದ್ದರು. ಅದು ಅವರ ವ್ಯಕ್ತಿತ್ವವನ್ನು ಪ್ರತಿಬಿಂಬಿಸುವಂತ್ತಿತ್ತು.
ಡಾ.ಕೊಟ್ಟೂರಶೆಟ್ಟಿ ದಂಪತಿಗಳು, ಅವರ ತಾಯಿ ಮತ್ತು ಚಿಕ್ಕಮ್ಮ, ಲೇಖಕ ಯಲ್ಲಪ್ಪ ಹಂಚಿನಾಳ ಮತ್ತವರ ಪರಿವಾರ, ಆ ದಿನದ ಅತಿಥಿಗಳು, ಅತಿಥಿಗಳಲ್ಲಿ ನಾನೂ ಒಬ್ಬಳಾದ್ದರಿಂದ ಅವರೆಲ್ಲರೊಂದಿಗಿದ್ದೆ. ಸಭಾ ಭವನದ ಮುಖ್ಯ ದ್ವಾರದಿಂದ ವೇದಿಕೆಯವರೆಗೂ ಸಂಭ್ರಮದಿಂದ ಅತಿಥಿಗಳನ್ನು ಕರೆದುಕೊಂಡು ಹೋದರು. ಭವ್ಯವಾದ ವೇದಿಕೆಯನ್ನು ಅಕಾಡೆಮಿಕ್ ಸೂಕ್ಷ್ಮತೆಗಳಿಂದ ಸಜ್ಜುಗೊಳಿಸಿದ್ದರು. ನಮ್ಮ ನಮ್ಮ ಹೆಸರುಗಳನ್ನು ನಮೂದಿಸಿದ ಆಸನಗಳಲ್ಲಿ ಆಸೀನರಾದೆವು.
ಪೊ.ಸಿದ್ದು ಯಾಪಲಪರವಿ ಅವರ ಸ್ವಾಗತ ಮತ್ತು ಪ್ರಾಸ್ತಾವಿಕ ಮಾತುಗಳಿಂದ ಸುಂದರ ಚಾಲನೆ. ನನ್ನನ್ನು ಸೇರಿದಂತೆ ಜಿ.ಎಸ್.ಪಾಟೀಲ, ಎಸ್.ವಿ.ಸುಂಕನೂರ, ಡಾ.ಕೆ.ಬಿ.ಧನ್ನೂರ, ಡಾ.ಜಿ.ಬಿ.ಪಾಟೀಲ, ಯಲ್ಲಪ್ಪ ಹಂಚಿನಾಳ ಅವರ ಮಾತುಗಳು ಕೇಳುವಂತಿದ್ದವು. ಎಲ್ಲರ ಮಾತು ಒಬ್ಬ ವ್ಯಕ್ತಿಯ ‘ವ್ಯಕ್ತಿತ್ವ’ವನ್ನು ಕಟ್ಟಿ ಕೊಡುವಂತಿದ್ದವು. ಡಾ.ಕೊಟ್ಟೂರಶೆಟ್ಟಿಯವರ ಕುರಿತೇ ಮಾತುಗಳಿದ್ದರೂ ವಿಭಿನ್ನ ಆಯಾಮಗಳಿದ್ದವು.
‘ಬೆವರ ಹನಿಯ ಪಯಣ’ ಕೃತಿಯ ನಾಯಕ ಡಾ.ಐ.ಬಿ.ಕೊಟ್ಟೂರಶೆಟ್ಟಿಯವರು ಇದ್ದರೂ ಅಲ್ಲಿ ತಾಯಿಯ ಪಾತ್ರ ಮಹತ್ವದೆಂದು ಪ್ರತಿಯೊಬ್ಬರೂ ಹೇಳಿದರು. ಅದರಂತೆ ಮಗನೂ ಸಹ ವೈದ್ಯನಾಗಿ ಅಷ್ಟೇ ಶ್ರಮ ವಹಿಸಿರುವುದು ತಿಳಿದು ಬಂತು. ಹಾಗೆಯೇ ಅವರು ಒಂದು ಕೃತಿಯಾಗುವಷ್ಟು ಕಾರ್ಯ ಮಾಡಿರುವುದು ಸಾಬೀತಾಗಲು, ಅಂದು ಅಲ್ಲಿ ನೆರೆದ ಸಾವಿರಕ್ಕೂ ಹೆಚ್ಚು ಪ್ರೇಕ್ಷಕರು ಸಾಕ್ಷಿಯಾದರು. ಹುಯಿಲುಗೋಳ ಸಣ್ಣ ಊರಾದರೂ, ಅಲ್ಲಿಯ ಜನ ವಿಶಾಲ ಮನಸಿನವರು. ಇಡೀ ಸಭೆ ಯಾವುದೇ ಅಡಚಣೆ ಇಲ್ಲದೆ, ಬಹಳ ಗಂಭೀರವಾಗಿ, ಶಾಂತವಾಗಿ ನಡೆಯಿತು.
ಅತಿಥಿಗಳನ್ನು ಗೌರವಿಸುವಾಗ ಅತ್ಯಂತ ಮುತುವರ್ಜಿ ವಹಿಸಿದ್ದರು. ಮತ್ತೆ ಮತ್ತೆ ಬಳಸಬಹುದಾದಂತಹ ವಸ್ತುಗಳಿಂದ ಸಿದ್ಧಪಡಿಸಿದ್ದರು. ಹೂವಿನ ಬೊಕ್ಕೆ, ಶಾಲು, ಹಣ್ಣಿನ ಹಿತ್ತಾಳೆ ಬುಟ್ಟಿ, ಒಣ ಹಣ್ಣುಗಳು, ಕೃತಿಯ ಒಂದು ಪ್ರತಿಯನ್ನು ಗೌರವ ಸಮರ್ಪಣೆಯ ರೂಪದಲ್ಲಿ ನೀಡಿದರು. ಕಾರ್ಯಕ್ರಮ ಮುಗಿಸಿ ಹೊರಡುವಾಗ ಅವರವರ ಹೆಸರು ನಮೂದಿಸಿರುವ ಬ್ಯಾಗ್‌ಗಳಲ್ಲಿ ಹಾಕಿ ವೈಯಕ್ತಿಕವಾಗಿ ತಲುಪಿಸಿದರು.
ಪ್ರಸಾದ ಸ್ವೀಕರಿಸುವ ಸಮಯದಲ್ಲೂ ಅದೇ ಸಂಭ್ರಮ, ಸಡಗರವನ್ನು ಕಾಪಾಡಿಕೊಂಡಿದ್ದರು. ನಾಲ್ಕು ತರಹದ ಸಿಹಿ ತಿನಿಸುಗಳೊಂದಿಗೆ ದೇಸೀ ಶೈಲಿಯ ಸಾತ್ವಿಕ ಆಹಾರ. ಹೋಳಿಗೆ, ಕಡಕ್ ರೊಟ್ಟಿ, ಚಪಾತಿ, ಚಟ್ನಿ, ಪಲ್ಯಗಳು. ಐಸ್ ಕ್ರೀಮ್ ಕೂಡ ರಾತ್ರಿಯ ಸಮಯವನ್ನು ತನ್ನ ತಂಪು ಗುಣದಿಂದ ರಂಜಿಸುತ್ತ, ಎಲ್ಲರನ್ನೂ ಆರ್ಷಿಸಿತು. ಆ ಕಾರ್ಯಕ್ರಮದ ಪ್ರತಿ ಹಂತದ ಶಿಸ್ತನ್ನು ಇಲ್ಲಿ ಅಕ್ಷರಗಳಲ್ಲಿ ವಿವರಿಸುವುದು ಅಷ್ಟು ಸುಲಭವಲ್ಲ. ಅದನ್ನು ಅನುಭವಿಸಿಯೇ ಸವಿಯಬೇಕು.
ಪುಸ್ತಕ ಪರಿಚಯಿಸುವ ಜವಾಬ್ದಾರಿಯಿಂದಾಗಿ ದೂರದ ಕಲಬುರಗಿಯಿಂದ ಗದುಗಿಗೆ ಪಯಣ ಬೆಳಿಸಿದ್ದೆ. ಅಲ್ಲಿ ಕೊಟ್ಟೂರಶೆಟ್ಟಿ, ಯಾಪಲಪರವಿ, ಪಾಟೀಲ, ಕೋರಿ, ಮಾಲಿಪಾಟೀಲ, ಹಳ್ಳೂರು, ಹುಬ್ಬಳ್ಳಿ ಪರಿವಾರದವರು ಬಹಳ ಪ್ರೀತಿಯಿಂದ ಬರಮಾಡಿಕೊಂಡು, ತವರ ಪ್ರೀತಿ ನೀಡಿದರು. ಸುಂದರವಾದ ಇಳಕಲ್ಲ ಸೀರೆಯಿಂದ ಮಡಿಲು ತುಂಬಿ ಗ್ರೂಪ್ ಫೋಟೊ ತೆಗೆಸಿಕೊಂಡಾಗ ಆ ಪರಿವಾರದಲ್ಲಿ ನಾನೂ ಒಬ್ಬಳಾಗಿದ್ದೆ.
‘ಬೆವದ ಹನಿಯ ಪಯಣ’ ಇದೊಂದು ವೈಯಕ್ತಿಕ ವಿವರಣೆಯ ಕೃತಿ. ಹಾಗೆಯೇ ಇದೊಂದು ಪಾರಿವಾರಿಕ ಸಮ್ಮಿಲನ. ಅದೆಲ್ಲದರೊಂದಿಗೆ ಡಾ.ಕೊಟ್ಟೂರಶೆಟ್ಟಿಯವರ ವೈದ್ಯಕೀಯ ಸೇವೆ, ಸಿದ್ದು ಯಾಪಲಪರವಿಯವರ ಸಾಹಿತ್ಯ ಬಳಗ, ಲೇಖಕ ಹಂಚಿನಾಳ ಅವರ ಬಂಧು ಬಾಂಧವರು, ಎಲ್ಲರೂ ಸೇರಿ ಅದೊಂದು ಸ್ವಸ್ಥ ಸಮಾಜದ ಸುಂದರ ತಾಣವಾಯಿತು. ಮಾದರಿ ವ್ಯಕ್ತಿಗಳಿಂದ ಮಾದರಿ ಸಮಾಜ ಕಟ್ಟಬಹುದು ಎನ್ನುವುದಕ್ಕೆ ಸಾಕ್ಷಿ ಈ ಕಾರ್ಯಕ್ರಮ.
ಇನ್ನು ಅಕ್ಷರ ಲೋಕದ ಹಿನ್ನೆಲೆಯಲ್ಲಿ ಆಲೋಚಿಸಿದರೆ, ಪುಸ್ತಕ ಸಂಸ್ಕೃತಿಗೆ ಹೊಸ ಭಾಷ್ಯ ಬರೆದ ‘ಬೆವರ ಹನಿಯ ಪಯಣ’ ಕೃತಿ ಲೋಕಾರ್ಪಣೆ ಎನಿಸುತ್ತದೆ. ಒಂದು ಕೃತಿಯನ್ನು ಈ ರೀತಿ ಇತಿಹಾಸ ಸೃಷ್ಟಿಸುವಂತೆ ಜನರನ್ನು ತಲುಪಿಸಬಹುದು ಎನ್ನುವುದಕ್ಕೆ ಸಾಕ್ಷೀಕರಿಸಿದ ದಿನ.
–ಸಿಕಾ ಕಲಬುರ್ಗಿ