ಭಾವೈಕ್ಯತೆಯ ಹರಿಕಾರ ಶ್ರೀ ಶರೀಫ ಶಿವಯೋಗಿ
ಕೋಡಗನ್ನ ಕೋಳಿ ನುಂಗಿತ್ತು ಕೇಳವ್ವ ತಂಗೀ, ಕೋಡಗನ್ನ ಕೋಳಿ ನುಂಗಿತ್ತು ಎಂದು ಹಾಡಿದ ವರಕವಿ, ಅನುಭಾವಿ ಸಂತ,
ದಾರ್ಶನಿಕ, ಪವಾಡಪುರುಷ, ಎಲ್ಲಕ್ಕಿಂತ ಮೇಲಾಗಿ ಭಾವೈಕ್ಯತೆಯ ಹರಿಕಾರ ಶ್ರೀ ಶರೀಫ ಶಿವಯೋಗಿಯವರು.
ನೆಲದ ಮೇಲೆ ನಿಂತು ಪರಮಾತ್ಮನ ನೆಲೆಯನ್ನು, ಬೆಲೆಯನ್ನು ತೋರಿಸಿಕೊಟ್ಟ ಶರೀಫರು ದೇಹವನ್ನು ಭೋಗಕ್ಕೆ ಸಮರ್ಪಿಸದೆ ಯೋಗದ ಸಿರಿತನಕ್ಕೆ ಅರ್ಪಿಸಿಕೊಂಡರು. ಎತ್ತಣ ಮಾಮರ ಎತ್ತರ ಕೋಗಿಲೆ ಅನ್ನೋ ಹಾಗೆ ಶೀಲ, ಚಾರಿತ್ರ್ಯಿಕ ವೀರ ಮಡಿವಂತಿಕೆಗೆ ಹೆಸರಾದ ಬ್ರಾಹ್ಮಣ ಗುರು ಗೋವಿಂದ ಭಟ್ಟರು ಒಬ್ಬ ಮಹಮ್ಮದಿಯ ಬಾಲಕನ್ನು ಶಿಷ್ಯನನ್ನಾಗಿ ಸ್ವೀಕರಿಸೋದು ಅಂದಿನ ಕಾಲದಲ್ಲಿ ಅದು ಅಷ್ಟು ಸುಲಭದ ಮಾತಾಗಿರಲಿಲ್ಲ.
ಜಾತಿ ಕೋತಿಯ ಮಾತನ್ನೆ ಎತ್ತದ ಮಡಿ ಮೈಲಿಗೆಯನ್ನು ಕಿತ್ತು ಬಿಸಾಕಿದ ಗೋವಿಂದ ಭಟ್ಟರು ಬಡಕಲು ಮೈಯಲ್ಲಿ
ಎಂಥ ಧರ್ಮ ಸಾಮರಸ್ಯ ಪರಧರ್ಮ ಸಹಿಷ್ಣುತೆ ಜಾತ್ಯಾತೀತತೆಯ ನಿಲವು ಹೆಪ್ಪುಗಟ್ಟಿತ್ತು ಎನ್ನುವದನ್ನು ನಾವಿಂದು ಅರಿಯಬೇಕಾಗಿದೆ.
ಇವರಿಬ್ಬರು ಕರ್ನಾಟಕ ಆಧ್ಯಾತ್ಮ ಪ್ರಪಂಚಕ್ಕೆ ಹೊಸ ಭಾಷ್ಯೆಯನ್ನು ಬರೆದರು. ಭಾವವೆಲ್ಲ ಅನುಭಾವ ತತ್ವವೆಲ್ಲ ಶಿವತತ್ವವೆ ಆಗಿದ್ದ, ಶರೀಫರು ಶಿಶುನಾಳದಲ್ಲಿ ಜನಿಸುವದಕ್ಕೂ ಒಂದು ಪುಣ್ಯ ಭಾಗ್ಯವಿರಬೇಕು.
ಶಿಶುನಾಳ ಗ್ರಾಮದ ಈಗಿನ ಹಾವರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಒಂದು ಸಣ್ಣ ಹಳ್ಳಿ ‘ಶರೀಫನವರ’ ಎನ್ನುವದು ಅವರ ಮನೆತನದ ಹೆಸರು. ತಂದೆ ಇಮಾಮಸಾಹೇಬರು, ತಾಯಿ ಹಜ್ಜುಮಾ ಸಜ್ಜನ ಪ್ರೇಮಿಗಳಾಗಿದ್ದರು. ಶರೀಫರು ದಿ. ೦೩-೦೭-೧೮೧೯ ರಂದು ಜನಿಸಿದರು. ಆಗ ಸೂರ್ಯೋದಯದ ಸಮಯ ಪೂರ್ವ ದಿಕ್ಕಿನಲ್ಲಿ ಹೊರಗೆ ಸೂರ್ಯ ಜನಿಸಿದರೆ ಶಿಶುನಾಳದ ಇಮಾಮಸಾಹೇಬರ ಮನೆಯ ಒಳಗೆ
ಶಿಶುನಾಳದ ಸೂರ್ಯ ಅವತರಿಸಿದರು.
ಶರೀಫರು ಎಲ್ಲ ಮಕ್ಕಳಂತೆ ಬೆಳೆದರೂ, ಅವರು ಎಲ್ಲ ಮಕ್ಕಳಂತೆ ಇರಲಿಲ್ಲ. ಯಾವುದನ್ನು ಸರಳವಾಗಿ ಸುಲಭವಾಗಿ
ಒಪ್ಪಿಕೊಳ್ಳುತ್ತಿರಲಿಲ್ಲ. ಅವರ ಈ ಚಿಂತನಶೀಲ ಬುದ್ಧಿ, ಚಿಕಿತ್ಸಕ ದೃಷ್ಠಿಕೋನಗಳು ತಂದೆಯವರಿಗೆ ಕಾಡಿಸುತ್ತಿದ್ದವು. ಶರೀಫರಿಗೆ ಹಾಡುಗಳ ಕಡೆಗೆ ಒಲವು ಹೆಚ್ಚಾಗಿತ್ತು. ಭಜನೆ ಪ್ರಾರ್ಥನೆಗಳತ್ತ ಅವರ ಮನವು ಓಡುತ್ತಿತ್ತು. ಶಾಸ್ತç ಪುರಾಣಗಳನ್ನು ಅವರು ಆಸಕ್ತಿಯಿಂದ ಆಲಿಸುತ್ತಿದ್ದರು.
ಹೀಗಾಗಿ ಎಳೆತನದಿಂದಲೇ ಶರೀಫರಿಗೆ ವೀರ-ಶೈವ ಸಾಹಿತ್ಯ, ಸಂಸ್ಕೃತಿ, ಸಂಸ್ಕಾರಗಳ ಬಗ್ಗೆ ಅಪಾರ ಗೌರವವಿತ್ತು. ಶರೀಫರಿಗೆ
ಕಲ್ಯಾಣದ ಎಲ್ಲ ಶರಣರಲ್ಲಿ ಪ್ರಭುದೇವರೆ ಅವರ ಮನವನ್ನು ಸೂರೆಗೊಳಿಸಿದರು. “ಬಸವಣ್ಣನಂತ ಭಕ್ತರಿಲ್ಲ ಪ್ರಭುದೇವರಂಥ ಪರಮಾತ್ಮನಿಲ್ಲೋ” ಎಂದು ಹೇಳಿತ್ತಿದ್ದರಂತೆ.
“ಆರು ಶಾಸ್ತ್ರ ಹನ್ನೆರಡು ಪುರಾಣ ನನ್ನ ಬಗಲಾಗ ಪ್ರಭುಲಿಂಗ ಲೀಲಾ ನನ್ನ ತೆಲಿ ಮ್ಯಾಲ” ಅಂತ ಹೇಳುತ್ತಿದ್ದರಂತೆ.
ಕಳಸದ ಗೋವಿಂದ ಭಟ್ಟರು ಶರೀಫರಿಗೆ ಯೋಗ ಕ್ಷೇತ್ರದಲ್ಲಿನ ಗುರುಗಳಾದರೆ ಪ್ರಭುದೇವರು ಸಾಹಿತ್ಯ ಕ್ಷೇತ್ರದಲ್ಲಿನ ಅಪ್ರತ್ಯಕ್ಷ
ಗುರುವಾಗಿದ್ದಾರೆ. ಹೊರಗೆ ಗೋವಿಂದನಾದವನೇ ಶರೀಫರಿಗೆ ಒಳಗೆ ಪ್ರಭುದೇವನಾಗಿದ್ದಾನೆ.
“ನನ್ನೊಳಗೆ ನಾ ತಿಳಿಕೊಂಡೆ ನನಗೆ ಬೇಕಾದ ಗಂಡನ ಮಾಡಿಕೊಂಡೆ” ಎಂದು ಅವರು ಹಾಡಿದ ಹಾಡು ಅವರ ಅಂತರಂಗಕ್ಕೆ ಹಿಡಿದ ಕನ್ನಡಿಯಾಗಿದೆ.
ಬಾಳ ಬೀದಿಯಲ್ಲಿ ನಡೆದ ಶರೀಫರು ಬದುಕು ಒಳಪದರುಗಳನ್ನು ನಿರೀಕ್ಷಿಸಿದರು ಅವರಿಗೆ ಕಂಡದ್ದೇನು? ಜೀವನವೊಂದು
ನಿರಂತರ ಜಾತ್ರೆ; ಸವೆಯದ ಹಾದಿ; ಜೀವ ಎಲ್ಲಿಂದಲ್ಲೋ ತನ್ನ ಪಾಪ ಪುಣ್ಯದ ಫಲವಾಗಿ ಹುಟ್ಟಿ ಇಲ್ಲಿಗೆ ಬರುತ್ತದೆ. ಬಂದುದು ಏತಕ್ಕಾಗಿ? ಎಲ್ಲಿಂದ? ಎಂಬುದು ತಿಳಿಯದು ಇಲ್ಲಿ ಒಂದಿಷ್ಟು ದಿನ ಇದ್ದು, ಅದು ಇದು ಮಾಡಿ ಸುಖವೋ, ದುಃಖವೋ ಎಂದು ಎಲ್ಲಾ ನನ್ನದು ನಾನು ಎಂದು ಬಡಬಡಿಸಿ ಬಾಳಿನಲ್ಲಿ ಸಂಜೆಯಾಯಿತೋ ಹಣ್ಣೆಲೆ ಉದುರಿ ಮತ್ತೆ ಮಣ್ಣಿನ ಮಡಿಲಿಗೆ ಬೀಳುವಂತೆ ಅವನು ಭೂಮಿಯಲ್ಲಿ ಒರಗುತ್ತಾನೆ. ಹೀಗೆ ಬಂದು ಹೋಗುವ ನಿರಂತರ ಯಾತ್ರೆಯ ಉದ್ದೇಶವೇನು? ಗುರಿ ಯಾವುದು ? ಎಂದು ಶರೀಫರ ಚಿಂತನ ಶೀಲ ಬುದ್ಧಿ ವಿಚಾರಿಸಿತು.
ವ್ಯಕ್ತಿಯಲ್ಲಿ ಉದ್ದಾರದ ಹಸಿವು ಹೆಚ್ಚಿದಾಗ ಆತನು ದೇವನೆಡೆಗೆ ಹೊರಳಬೇಕು ಎನ್ನುವುದನ್ನು ಶರೀಫರು ಹೀಗೆ ಹೇಳುತ್ತಾರೆ.
“ನಡಿಯೋ ದೇವರ ಚಾಕರಿಗೆ! ಮುಕ್ತಿ ಗೋಡೆಯ ಖಾದರಲಿಂಗ ನೆಲಸಿರ್ಪ ಗಿರಿಗೆ”
ಆತ್ಮಾನಂದ ಅಮೃತವನ್ನು ಹೃದಯದ ತುಂಬ ತುಂಬಿಕೊಂಡಿದ್ದ ಶರೀಫರ ವಾಣಿ ಪ್ರಾಸಾದಿಕವಾಣಿ. ಅವರು ತತ್ವಪದಗಳಿಗೆ
ವಸ್ತುಗಳನ್ನು ಹುಡುಕಲು ದೂರ ಹೋಗಲಿಲ್ಲ. ಜೀವನದ ಹಾದಿಯಲ್ಲಿ ಎಲ್ಲೆಂದರಲ್ಲಿ ಸುಲಭವಾಗಿ ಸಾಮಾನ್ಯವಾಗಿ ಕಣ್ಣಿಗೆ ಕಾಣುವ ಸಂಗತಿಗಳೇ ಅವರ ಕಾವ್ಯಕ್ಕೆ ವಸ್ತುಗಳಾದವು. ಕೋಳಿ, ಕುರಿ, ಪಾರಿವಾಳ, ಬೆಳವ ಸಂತೆಯ ಮುದಕಿಯರು ಕಾವ್ಯ ಕ್ಷೇತ್ರಕ್ಕೆ ಬಂದರು. ಲೌಕಿಕ ಕೊಳಕತನವನ್ನು ಕಳೆದುಕೊಂಡು ಶರೀಫರು ಅವುಗಳಲ್ಲಿ ಆತ್ಮಾನಂದದ ಅಮೃತವನ್ನು ತುಂಬಿದರು. ಅದರಿಂದಾಗಿ ಆ ಸಣ್ಣ ಕ್ಷುಲಕ ವಸ್ತುಗಳು ತಮ್ಮ ಅಲ್ಪತೆಯನ್ನು ಕಳೆದುಕೊಂಡು ಆಧ್ಯಾತ್ಮದ ಮೆರಗಿನಿಂದ ಕಂಗೊಳಿಸತೊಡಗಿದವು.
ಆತ್ಮ ಜ್ಞಾನಿಯ ಅಂತರಂಗದ ಅನುಭವಗಳೇ ರಮ್ಯ ಕವನಗಳಾಗಿ ಕವಿಯ ಎದೆಯಿಂದ ಚಿಮ್ಮಿ ಬಂದುದನ್ನು ನಾವು
ಅರಿಯುತ್ತೇವೆ. ಅವರ ಪದಗಳಲ್ಲಿಯ ಒಳಗುಟ್ಟು ಏನೆಂದರೆ ಲೌಕಿಕ ಅರ್ಥಕ್ಕಿಂತ ಪಾರಮಾರ್ಥಿಕ ಅರ್ಥವೇ ತುಂಬಿ ತುಳುಕುತ್ತಿರುವುದು.
ಶಿಶುನಾಳದ ಇಮಾಮ ಸಾಹೇಬರ ಮಗನಾಗಿದ್ದ ಶರೀಫರು ಗುರು ಕರುಣೆಯಿಂದ ‘ಗೋವಿಂದ ಕುಮಾರ’ ಎನಿಸಿದರು. ತಮ್ಮ ೭೦
ವರ್ಷದ ಆಯುಷ್ಯದುದ್ದಕ್ಕೂ ಪ್ರಾಪಂಚಿಕರಿಗೆ ಪಾರಮಾರ್ಥದ ಸವಿಸುಖವನ್ನು ಉಣಬಡಿಸಿದ ಶರೀಫರು ದಿ. ೦೩-೦೭-೧೮೮೯ ರಂದು ಸಂಜೆ ಎಲ್ಲರನ್ನು ಕರೆದು ಏಕದಾರಿ ತೆಗೆದುಕೊಂಡು “ಬಿಡತೀನಿ ದೇಹ ಬಿಡತೀನಿ” ಎಂದು ಕೊನೆಯ ಪದ ಹಾಡಿದರು. ಹಾಡುತ್ತ ಹಾಡುತ್ತ ಶಿಶುನಾಳದ ಸೂರ್ಯ ಅಸ್ತಂಗತರಾದರು.
ಸದ್ಭಕ್ತರು ಅವರ ಶರೀರವನ್ನು ಅವರ ಇಚ್ಛೆಯಂತೆ ತಂದೆ-ತಾಯಿಗಳ ಸಮಾಧಿ ಬಳಿಯಲ್ಲಿ ಮಲಗಿಸಿದರು. ಶರೀಫರ ಗದ್ದುಗೆಯ ಎಡಭಾಗದಲ್ಲಿ ಮಹಮ್ಮದಿಯರು ನಮಾಜು ಮಾಡುತ್ತಾರೆ. ಸಕ್ಕರೆ ಓದಿಕೆ ನಡೆಯುತ್ತದೆ. ಸಮಾಧಿಯ ಎಡಮಗ್ಗುಲಿಗೆ ಹಿಂದೂಗಳು ಕಾಯಿ ಒಡೆಯುತ್ತಾರೆ, ಕರ್ಪೂರ ಬೆಳಗುತ್ತಾರೆ, ಕೊಬ್ಬರಿ ಕೊಡುತ್ತಾರೆ. ಕೊಬ್ಬರಿ ಸಕ್ಕರೆ ಸವಿದು ಬಾಳಿನ ಕಹಿಯನ್ನು ಮರೆಯುತ್ತಾರೆ. ಅಲ್ಲಿ
ಹಿಂದು-ಮುಸಲ್ಮಾನರು ಸಹೋದರರಂತೆ ಬದುಕುತ್ತಾರೆ.
ಶರೀಫರ ತತ್ವಗಳಂತೆ ಜೀವನದಂತೆ ಅವರ ಸಮಾಧಿಯೂ ಧರ್ಮ ಸಮನ್ವಯಕ್ಕೆ ಪರಧರ್ಮ ಸಹಿಷ್ಣುತೆಗೆ ಜಾತ್ಯಾತೀತ ನಿಲುವಿಗೆ
ನಾಡಿನಲ್ಲಿ ಒಂದು ಜೀವಂತ ನಿದರ್ಶನವಾಗಿದೆ. ಇಂಥ ಅನುಭವ ಕವಿ, ಸಮನ್ವಯಕಾರ, ಮಾನವತೆಯ ಕೆನೆ ಎನಿಸುವ ಶರೀಫರು
ಉದಯಾಸ್ತಮಾನವಾದ ದಿನ ಇಂದು
ಶ್ರೀಮತಿ ಜಯಾ ಚುನಮರಿ