ಗುರು ಲಿಂಗ ಜಂಗಮ – ಉಪಾದಿತವಲ್ಲ.

ಗುರು ಲಿಂಗ ಜಂಗಮ – ಉಪಾದಿತವಲ್ಲ

ಕಾಯದೊಳು ಗುರು ಲಿಂಗ ಜಂಗಮ
ದಾಯತವನರಿಯಲ್ಕೆ ಸುಲಭೋ
ಪಾಯದಿಂದಿದಿರಿಟ್ಟು ಬಾಹ್ಯಸ್ಥಲಕೆ ಕುರುಹಾಗಿ |
ದಾಯದೋರಿ ಸಮಸ್ತ ಭಕ್ತ ನಿ
ಕಾಯವನು ಪಾವನವ ಮಾಡಿದ
ರಾಯ ಪೂರ್ವಾಚಾರ್ಯ ಸಂಗನಬಸವ ಶರಣಾರ್ಥಿ|| ಚಾಮರಸ ( ಪ್ರಭು ಲಿಂಗ ಲೀಲೆ )
ಶರೀರದಲ್ಲಿಯೇ ಇರುವ ಗುರು ಲಿಂಗ ಜಂಗಮ ತತ್ವವವನ್ನು ವಿಸ್ತಾರಗೊಳಿಸಿ ಆಚರಿಸುವ ಸಲುವಾಗಿ, ಸುಲಭ ಸಾಧನವೆಂಬ ಇಷ್ಟಲಿಂಗ (ಕುರುಹು) ವನ್ನು ಪರಿಕಲ್ಪಿಸಿಕೊಟ್ಟು, ಸಮಸ್ತ ಜನವರ್ಗವನ್ನು ಪಾವನ ಮಾಡಿದವನು ಬಸವಣ್ಣ.
ಸನಾತನದಲ್ಲಿ ಗುರು ಸರ್ವ ಶ್ರೇಷ್ಠ ಅವನಿಂದಲೇ ಮುಕ್ತಿ ದಾರಿ ತೋರುವ ನಿಜ ಗುರು ಹರನಿಗಿಂತಲೂ ಶ್ರೇಷ್ಠ ಇಂತಹ ಅನೇಕ ಕಲ್ಪನೆಗಳು ಬಸವಣ್ಣನವರು ಕಿತ್ತೊಗೆದು ,ದೀಪದಿಂದ ದೀಪ ಹಚ್ಚುವ ಪರಿಕಲ್ಪನೆ ಅಥವಾ ಗುರು ತನ್ನ ಕಾರ್ಯ ನಿರ್ವಹಿಸಿ ತಾನು ಶಿಷ್ಯನಲ್ಲಿ ಒಂದಾಗಿ ತಾನು ಗುರು ಆತ ಶಿಷ್ಯ ಎಂಬ ಬೇರೆ ಭಾವವನ್ನು ಸಂಪೂರ್ಣ ಕಳೆದು ಕೊಳ್ಳುತ್ತಾನೆ
ಶರಣರು ತಾನು ಮತ್ತು ಶಿವ ಒಂದು ಎಂದು ಸಾಧಿಸಿದ ಮೊದಲ ಪುರುಷರು.ಉಭಯ ಭಾವವನ್ನು ಎಲ್ಲಿಯೂ ಪ್ರತಿಪಾದಿಸದೆ ಅಂತಹ ಸಂದೇಹ ಗೊಂದಲಗಳನ್ನು ಕಿತ್ತು ಹಾಕಿದರು. ಮನುಷ್ಯ ತಾನು ತನ್ನ ಸುತ್ತಲಿನ ಜೀವ ಜಾಲದ ಚೈತನ್ಯವನ್ನು ಚಿತ್ಕಳೆಯನ್ನು ನಿರಾಕಾರದ ಶಿವನ ಪರಿಕಲ್ಪನೆಯನ್ನು ಸಾಕಾರ ಗೊಳಿಸಿ ,ಮತ್ತೆ ನಿರಾಕಾರದ ನಿರುಪಾಧಿಕ ತತ್ವದ ಆಧ್ಯಾತ್ಮಿಕ ಪಯಣಕ್ಕೆ ಕರೆದೊಯ್ಯುವುದೇ ಶರಣ ಮಾರ್ಗ.
ಅರಿವೇ ಗುರು – ಅಷ್ಟಾವರಣದಲ್ಲಿ ಗುರು ಅತ್ಯಂತ ಮಹತ್ತರವಾದ ಪಾತ್ರವಿದೆ. ಸನಾತನ ಧರ್ಮದ ಗುರುವಿಗೂ ಶರಣ ತತ್ವದ ಗುರುವಿಗೂ ಅಜಗಜಾಂತರ ವ್ಯತ್ಯಾಸವಿದೆ. ಅಲ್ಲಿ ಗುರು ಒಬ್ಬ ವ್ಯಕ್ತಿ ತನ್ನ ಶ್ರೇಷ್ಠತೆಯನ್ನು ಸೂಚಿಸುವ ಉಚ್ಚ ಸ್ಥಾನದಲ್ಲಿ ನಿಂತು ತನ್ನ ಶಿಷ್ಯನನ್ನು ದಾಸ್ಯತ್ವದಲ್ಲಿಯೇ ಕೊಳೆಯಬೇಕಾದ ಅನಿವಾರ್ಯ ಪರಿಸ್ಥಿತಿ ಇತ್ತು. ಆದರೆ ಚಾಮರಸರು ಹೇಳಿದ ಹಾಗೆ ಶರೀರದಲ್ಲಿಯೇ ಇರುವ ಗುರು ಲಿಂಗ ಜಂಗಮ ತತ್ವವವನ್ನು ಅರಿತು ಕೊಂಡು ಬಸವಣ್ಣನವರು ನೀಡಿದ ಇಷ್ಟ ಲಿಂಗವನ್ನು ತನ್ನ ಬಾಹ್ಯ ಕರಸ್ಥಳಕ್ಕೆ ತಂದಿತ್ತು ನಿರುಪಾದಿತ ತತ್ವವವನ್ನು ನಿರಾಕಾರ ಸಿದ್ಧಾಂತವನ್ನು ಕಾಣುವ ಅಮೋಘ ಸಾಧನೆ.
ಕಾಣ ಬಾರದ ಲಿಂಗವ ತಂದು ತೋರಿದ ಸಂಗನಬಸವ ಶರಣಾರ್ಥಿ ಎಂದು ಶರಣರು ಹೇಳಿದ್ದಾರೆ. ಅರಿವ ನರಿಯಲೆಂದು ಗುರು ಕೊಟ್ಟ ಕುರುಹ ಕುರುಹ ಹಿಡಿದು ಅರಿವ ಮರೆತ ಹೆಡ್ಡ ನ ನೋಡಾ ಗುಹೇಶ್ವರ ಎಂದಿದ್ದಾರೆ ಅಲ್ಲಮರು .

ಇವರ ಪಥದಲ್ಲಿ ನಡೆದ ಮುಳಗುಂದ ಬಾಲ ಲೀಲಾ ಶ್ರೀ ಮಹಾಂತ ಶಿವಯೋಗಿಗಳು ತಮ್ಮ ಕೈವಲ್ಯ ದರ್ಪಣದಲ್ಲಿ ಗುರು ಲಿಂಗ ಜಂಗಮ ನಿರುಪಾಧಿಕ ವಸ್ತುಗಳು ಎಂದಿದ್ದಾರೆ. ಇದನ್ನು ನಿಜಗುಣ ಶಿವಯೋಗಿಗಳು ಜ್ಯೋತಿ ಬೆಳಗುತಿದೆ ನಿರ್ಮಲ ಪರಂಜ್ಯೋತಿ ಜ್ಯೋತಿ ಬೆಳಗುತಿದೆ ,ಮಾತು ಮನದಿಂದ ಅತ್ತತ್ತ ಮೀರಿದ ಸಾತಿಶಯ ನಿರುಪಾದಿತ ಲಿಂಗವೇ ಎಂದು ಹೇಳಿ ಲಿಂಗವು ಅಂಗದಲ್ಲಿ ಪ್ರಾಣದಲ್ಲಿ ಜಂಗಮದಲ್ಲಿ ಕಾಣುವ ಅನಘ್ಯ ರತ್ನ ಚೈತನ್ಯದ ಚಿತ್ಕಳೆ ಲಿಂಗವೆಂದು ಹೇಳಿ ಅದರ ಜಡದ ಕಳೆ ಕಿತ್ತೆಸಿದಿದ್ದಾರೆ. ಆಚಾರವೇ ಲಿಂಗ .

ಜಂಗಮ ಪದ ಶರಣರು ಸಮಾಜವೆಂತಲೂ ತತ್ವ ನಿಷ್ಠ ಸಾಧಕರೆಂತಲೂ ಸಮಷ್ಟಿ ಎಂತಲೂ ಬಳಸಿ ಲಿಂಗವೇ ಜಂಗಮ ಎಂದೆನ್ನುತ್ತಾ ವ್ಯಕ್ತಿ ಸಮಷ್ಟಿಯ ಸಂಬಂಧಗಳನ್ನು ಗಟ್ಟಿಗೊಳಿಸಿದ್ದಾರೆ. ಬಸುರಿಗೆ ಮಾಡಿದ ಸುಖ ದುಃಖಗಳು ಶಿಶುವಿಗೆ ಮೂಲ ಎಂದು ಹೇಳಿ ಬಸುರಿ -ಇದು ಜಂಗಮ ಪರಿಕಲ್ಪನೆ ಶಿಶು ಭಕ್ತನಾಗುತ್ತಾನೆ .
ಇದೆ ರೀತಿ “ಮರಕ್ಕೆ ಬಾಯಿ ಬೇರೆಂದು ತಳೆಯಿಂಕೆ ನೀರೆರೆದಡೆ ಮೇಲೆ ಪಲ್ಲವಿಸಿತ್ತು ನೋಡಾ ,ಲಿಂಗದ ಬಾಯಿ ಜಂಗಮವೆಂದು ಪಡಿ ಪದಾರ್ಥವ ನೀಡಿದಡೆ ಮುಂದೆ ಸಕಳಾರ್ಥವನಿವನು .ಆ ಜಂಗಮ ಹರನೆಂದು ಕಂಡು ,ನರನೆಂದು ಭಾವಿಸಿದೊಡೆ ನರಕ ತಪ್ಪದು ಕಾಣಾ ,ಕೂಡಲ ಸಂಗಮದೇವ ಅತ್ಯಂತ ಸ್ಪಷ್ಟವಾಗಿ ನಿರೂಪಿಸಿದ ಲಿಂಗ ಜಂಗಮ ತತ್ವಗಳು ಇಲ್ಲಿ ಕಾಣುತ್ತೇವೆ. ಹೇಗೆ ಮರಕ್ಕೆ ಬಾಯಿ ಬೇರೋ ಹಾಗೆ ಲಿಂಗದ ಬಾಯಿ ಜಂಗಮ ಅಂದರೆ ಸಮಾಜ .ಸಮಾಜದ ವ್ಯಕ್ತಿಯನ್ನು ಹರನೆಂದು ನಂಬಿ ಪ್ರೀತಿಯಿಂದ ನೋಡಬೇಕಾದವರು ನರನೆಂದು ಕಡೆಗಣಿಸಿದರೆ ಸ್ವರ್ಗವೂ ಕೂಡಾ ನರಕವೇ ಎಂದು ಎಚ್ಚರಿಸಿದ್ದಾರೆ ಬಸವಣ್ಣನವರು. ಜಂಗಮ ಜಾತಿಯಲ್ಲ ಅದು ಸಮಾಜ .ಲಿಂಗ ತತ್ವವನ್ನು ಪ್ರಾಣದಲ್ಲಿ ಇತ್ತು ನಿರುಪಾದಿತವಾಗಿ ಗೌರವಿಸುವ ಸುಂದರ ಸಮತೆಯ ವ್ಯವಸ್ಥೆ- ಇಂತಹ ಸಮತೆಯ ಜಂಗಮ ವ್ಯವಸ್ಥೆಯನ್ನು ಬಸವಣ್ಣ ಮತ್ತು ಶರಣರು ಅರಿತು ಆಚರಿಸಿದಲ್ಲದೆ ಅವರು ತಾವು ಕಂಡ ಸತ್ಯವನ್ನು ಮುಕ್ತ ವಚನಗಳಲ್ಲಿ ವ್ಯಕ್ತಗೊಳಿಸಿದ್ದಾರೆ.
ಅನುಭಾವವೇ ಜಂಗಮ -ಜಂಗಮವೂ ಕೂಡಾ ಉಪಾದಿತ ವ್ಯವಸ್ಥೆಯಲ್ಲ.

-ಡಾ.ಶಶಿಕಾಂತ,ಪಟ್ಟಣ ಪೂನಾ ರಾಮದುರ್ಗ

Don`t copy text!