ಅಡವಿಯೊಳಗರಸುವಡೆ ಸಿಡಿಗಂಟಿ ತಾನಲ್ಲ
ಅಡವಿಯೊಳಗರಸುವಡೆ ಸಿಡಿಗಂಟಿ ತಾನಲ್ಲ. ಮಡುವಿನೊಳಗರಸುವಡೆ ಮತ್ಸ್ಯಮಂಡೂಕನಲ್ಲ. ತಪಂಬಡುವಡೆ ವೇಷಕ್ಕೆ ವೇಳೆಯಲ್ಲ. ಒಡಲ ದಂಡಿಸುವಡೆ ಕೊಡುವ ಸಾಲಿಗನಲ್ಲ. ಅಷ್ಟತನುವಿನೊಳಗೆ ಹುದುಗಿದ್ದ ಲಿಂಗವ ನಿಲುಕಿ ನೋಡಿಯೆ ಕಂಡನಂಬಿಗ ಚೌಡಯ್ಯ.
-ಅಂಬಿಗರ ಚೌಡಯ್ಯ
ವಿಶ್ವಶ್ರೇಷ್ಠ ವಚನಕಾರ, ವೀರ ಗಣಾಚಾರಿ, ಬಂಡಾಯ ವಚನಕಾರ, ನೇರ ನಿಷ್ಠುರವಾದಿ ವಚನಕಾರ, ಅರಿವೇ ಗುರು ಆಚಾರವೇ ಲಿಂಗ ಅನುಭವವೇ ಜಂಗಮ ಎಂದು ಜಗತ್ತಿಗೆ ಸಾರಿದ ನಂಬಿಕೆಯ ಅಂಬಿಗ, ಲಿಂಗ ತತ್ವ ನಂಬಿಗ ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ ವಿಚಾರ ಧಾರೆಗಳು ಉಳಿದ ಶರಣರಿಗಿಂತ ತುಂಬಾ ಭಿನ್ನವಾಗಿವೆ .
ಸಾತ್ವಿಕ ಸಿಟ್ಟು ಆಕ್ಷೇಪ ಗುಣ ವಿಡಂಬನೆ ಕಠೋರ ಟೀಕೆಗೆ ಶರಣಗಣದಲ್ಲಿಯೇ ಅಗ್ರ ಗಣ್ಯ ಅಂಬಿಗರ ಚೌಡಯ್ಯ
ಅಂಕಿತ: ಅಂಬಿಗರ ಚೌಡಯ್ಯ
ಕಾಯಕ: ದೋಣಿ ನಡೆಸುವ ಅಂಬಿಗ ವೃತ್ತಿ ಜನರನ್ನು ಹೊಳೆ ಕೆರೆಯನ್ನು ತನ್ನ ದೋಣಿಯ ಮೂಲಕ ದಾಟಿಸುವ ವೃತ್ತಿ.
ಅಂಬಿಗರ ಚೌಡಯ್ಯ 12 ನೇ ಶತಮಾನದ ಬಸವಣ್ಣನವರ ಅನುಯಾಯಿ ಶರಣ. ಸಾವಿರಾರು ವರ್ಷಗಳಿಂದ ಧರ್ಮ-ದೇವರುಗಳ ಬಗೆಗೆ ಜನ ಸಮೂಹದಲ್ಲಿದ್ದ ಮೂಢನಂಬಿಕೆಗಳನ್ನೆಲ್ಲ ಗುರು ಬಸವಣ್ಣನವರೊಂದಿಗೆ ಅಂಬಿಗರ ಚೌಡಯ್ಯ ಹೊಡೆದೋಡಿಸುತ್ತಲೇ ವಿಚಾರ ಪರ ವಾದ, ವಾಸ್ತವವಾದ ಅಂಶಗಳನ್ನು ಜನಮನದಲ್ಲಿ ಮೂಡಿಸಿದರು. ಧರ್ಮ-ದೇವರು ಕೇವಲ ಶ್ರೀಮಂತರ ಸೋತ್ತಾಗಿದ್ದ ಅಂದಿನ ಸಂದರ್ಭದಲ್ಲಿ ಪೂಜೆ-ಮೋಕ್ಷ ಕೇವಲ ನೇಮವಂತರ, ಸಂಪ್ರದಾಯಿ ಬ್ರಾಹ್ಮಣರ ಹತೋಟಿಯಲ್ಲಿದ್ದ ಮತ್ತು ಭಾಷ್ಯಕಾರರು ಹೇಳಿದ್ದೇ ಸರಿಯೆನ್ನುವ ವ್ಯವಸ್ಥೆಯಲ್ಲಿ ಚೌಡಯ್ಯ ಈ ಮೂವರನ್ನು ಕ್ರೂರ ಕರ್ಮಿಗಳೆಂದು, ಸಂದೇಹಿಗಳೆಂದು ಕಟುವಾಗಿ ಟೀಕಿಸುವುದರ ಮೂಲಕ ಇವರು ಹೋದ ದಾರಿಯಲ್ಲಿ ಯಾರೂ ಹೋಗ ಬಾರದೆಂದು ಸ್ಪಷ್ಟಪಡಿಸುತ್ತಾನೆ. ಇವರ ವಚನಗಳು ತುಂಬಾ ಖಾರವಾಗಿರುವುದು ಅವರ ಆತ್ಮ ಬಲವನ್ನು ಹಾಗೂ ಸತ್ಯವನ್ನು ಪ್ರತಿಪಾದಿಸುವಲ್ಲಿ ಹೊಂದಿದ್ದ ಧೈರ್ಯವನ್ನು ತೋರಿಸುಈತನ ಜೀವನದ ವಿವರಗಳನ್ನು ಸಾಹಿತ್ಯ ಚರಿತ್ರಕಾರರು ಈ ಕೆಳಕಂಡಂತೆ ಗುರುತಿಸಿದ್ದಾರೆ:
ಹೆಸರು: ಚೌಡಯ್ಯ
ಊರು: ಚೌಡದಾನಪುರ, ರಾಣಿಬೆನ್ನೂರು ತಾಲ್ಲೂಕು , ಹಾವೇರಿ ಜಿಲ್ಲೆ.
ಕಸುಬು: ದೋಣಿಯನ್ನು ನದಿ/ಹೊಳೆ/ತೊರೆಯಲ್ಲಿ ನಡೆಸುವುದು.
ದೊರೆತಿರುವ ವಚನಗಳು: 273
ಅಡವಿಯೊಳಗರಸುವಡೆ ಸಿಡಿಗಂಟಿ ತಾನಲ್ಲ
ಅಡವಿಯಲ್ಲಿ ಹುಡುಕಾಡಿದಾಗ ಅಲ್ಲಿ ಆನೇಕ ತರಹದ ಮರಗಳು ಪ್ರಾಣಿಗಳು ದೊರೆಯುತ್ತವೆ . ನದಿ ಕೊಳ್ಳ ಕೆರೆ ಸುಂದರ ಅನುಭವ ದೊರೆಯುವುದು. ಅಂತಹ ಸುಂದರ ಗಾಢ ನೈಸರ್ಗಿಕ ಸಿರಿ ಸಂಪತ್ತು ಇರುವ ಸ್ಥಳದಲ್ಲಿ ತಾನು ಒಬ್ಬ ಸಿಡಿದ ಮುಳ್ಳು ಕಂಟಿ ಅಲ್ಲ. ಇಲ್ಲಿ ಅಂಬಿಗರ ಚೌಡಯ್ಯ ತಾನು ಸಮಷ್ಟಿಯ ಸಂಪೂರ್ಣ ಅಭಿವೃದ್ಧಿ ವಿಕಾಸ ಕಡೆಗೆ ಗಮನ ಹರಿಸುವೆ ಹೊರತು ಅದನ್ನು ಬಿಟ್ಟು ಸಿಡಿದು ಹೊರ ಬಂದ ಮುಳ್ಳಿನ ಕಂಟಿ ಅಲ್ಲ ಎಂದಿದ್ದಾರೆ.
ಮಡುವಿನೊಳಗರಸುವಡೆ ಮತ್ಸ್ಯಮಂಡೂಕನಲ್ಲ.
ಆಳವಾದ ನದಿ ಯಾನ ಮಾಡುವಲ್ಲಿ ಅಲ್ಲಿನ ಮಡುವುಗಳು ತಿರುವುಗಳು
ನೋಡಿದಾಗ ಅಲ್ಹಾದಕರ ವಾತಾವರಣ ನೋಡಿ ಆನಂದಿಸಬೇಕು. ಅಂತಹ ಸುಂದರ ಸೊಬಗಿನ ಜಾಲತಾಣದಲ್ಲಿ ಹರಿದಾಡುತ್ತಿರುವ ಮೀನು ಮತ್ತು ಕಪ್ಪೆ ತಾನಲ್ಲ. ಮಡುವಿನೊಳಗೆ ಕಾಣುವ ಜಲ ಸಸ್ಯ ತಿರುವಿನ ಅಲೆ ಚೆಂದದ ಚೆಲುವಿನ ಚಿತ್ತಾರದ ಸೊಬಗು ಸವಿಯಲು ಮನಸ್ಸು ಹೊಂದಿರಬೇಕು ಹೊರತು ಅಲ್ಲಿನ ಪುಟ್ಟ ಪುಟ್ಟ ಮೀನು ಮತ್ತು ಕಪ್ಪೆಗಳಿಗೆ ಲಕ್ಷ ನೀಡಬಾರದು.ತಾನು ಜಂಗಮ ಮಡುವಿನ ಆಳವಾದ ನದಿ ನೀರು ಹೊರತು ಅಲ್ಲಿರುವ ಕಪ್ಪೆ ಮೀನು ಅಲ್ಲ ಎಂದಿದ್ದಾನೆ.
ತಪಂಬಡುವಡೆ ವೇಷಕ್ಕೆ ವೇಳೆಯಲ್ಲ.
ತಪಸ್ಸು ಮಾಡುತ್ತಿರುವ ವ್ಯಕ್ತಿಯನ್ನು ಅರಿಸುವಲ್ಲಿ ಅಲ್ಲಿನ ವೇಷದ ವೇಳೆ ತಾನಲ್ಲ. ಕೆಲವರು ಮುಕ್ತಿ ಮಾರ್ಗದ ಸಾಧನೆಗೆ ತಪಸ್ಸು ಮಾಡಿ ಎಲ್ಲಾ ಭವ ಬಂಧನದಿಂದ ಮುಕ್ತಿ ಹೊಂದುವ ಮೂಲಕ ತಾನು ಸ್ವರ್ಗ ಸೇರುವೆ ಎಂಬುವವರ ವೇಷ ಭೂಷಣ ಅವುಗಳನ್ನು ಸರಿಪಡಿಸುವ ಪ್ರಯತ್ನ ತನ್ನದಲ್ಲ ಎಂದಿದ್ದಾನೆ. ಪ್ರಪಂಚದಲ್ಲಿ ಪಾರಮಾರ್ಥಿಕ ಸರಳ ಸೂತ್ರ ನೀತಿಯನ್ನು ನಂಬಿದ ಅಂಬಿಗರ ಚೌಡಯ್ಯ ತನ್ನ ವೃತ್ತಿ ಜೀವನದ ಸಾಧನೆಯೇ ಸರಿಯಾದ ಮುಕ್ತಿ ಮಾರ್ಗ ಎಂದು ಹೇಳಿದ್ದಾನೆ
ಒಡಲ ದಂಡಿಸುವಡೆ ಕೊಡುವ ಸಾಲಿಗನಲ್ಲ.
ಯಾರಾದರೂ ಹಸಿವಿಗೆ ತನ್ನ ದೇಹವನ್ನು ದಂಡಿಸುವ ಕಾರ್ಯ ಮಾಡಲು ಮುಂದಾದರೆ ಮರುಕದಿಂದ ಅವರಿಗೆ ಸಾಲ ಕೊಡುವ ಸಾಲ ನೀಡುವ ಸಾಲಿಗನಲ್ಲ . ದುಡಿಯದೆ ಭಿಕ್ಷೆ ಬೇಡುವ ಆನೇಕ ದೇಹ ದಂಡನೆ ಮಾಡಿಕೊಂಡು ಜನರಲ್ಲಿ ಅನುಕಂಪ ಗಿಟ್ಟಿಸಿ ಅವರಿಂದ ಭಿಕ್ಷೆ ಎತ್ತುವ ಕಾರ್ಯ ನಡೆದಿದೆ.ಅಂತಹ ವಿಕೃತ ಮನಸ್ಸಿನ ದೇಹ ದಂಡನೆ ನೋಡಿ ಅವರಿಗೆ ಸಹಾಯ ಮಾಡಬೇಕೆಂಬ ಮನಸ್ಸು ತನ್ನದಲ್ಲ ಅದು ಒಂದು ರೀತಿಯ ಸಾಲ ಎಂದಿದ್ದಾನೆ ಅಂಬಿಗರ ಚೌಡಯ್ಯ. ಕಾರಣ ಭಿಕ್ಷೆ ಬೇಡುವ ಮತ್ತೂ ದಾನ ನೀಡುವ ಚಟುವಟಿಕೆಗಳು ಶರಣ ಸಂಸ್ಕೃತಿಯಲ್ಲಿ ನಿಷಿದ್ಧ. ಹೀಗಾಗಿ ಒಡಲ ದಂಡಿಸುವ ಕಾರ್ಯ ತಪ್ಪು ಎಂದಿದ್ದಾನೆ .
ಅಷ್ಟತನುವಿನೊಳಗೆ ಹುದುಗಿದ್ದ ಲಿಂಗವ ನಿಲುಕಿ ನೋಡಿಯೆ ಕಂಡನಂಬಿಗ ಚೌಡಯ್ಯ.
ನಾವು ವಾಸ್ತವವಾಗಿ ಅಷ್ಟಮದವನ್ನು ಈ ರೀತಿ ಹೇಳುತ್ತೇವೆ ಕುಲಮದ, ಧನಮದ, ವಿಧ್ಯಾಮದ, ರೂಪಮದ, ಯೌವನಮದ, ಬಲಮದ, ಅಧಿಕಾರದಮದ ಮತ್ತು ಕುಟುಂಬಮದ. ಅಷ್ಟ ಮದಾಗಳನ್ನು ಅಷ್ಟ ಸಂತಸ ಸಂಭ್ರಮ ಬಾಳಿನ ಸುಖದ ಸೂತ್ರ ಎಂದು ನಂಬಿರುವ ಜನರಿಗೆ ನಿಜವಾದ ಅಷ್ಟತನು ಪರಿಚಯಿಸುವ ಕಾರ್ಯ ಮಾಡಲು ಅಂಬಿಗರ ಚೌಡಯ್ಯ ಮುಂದಾಗಿದ್ದಾನೆ.. ಅವು ಯಾವೆಂದರೆ ಪೃಥ್ವಿ, ಸಲಿಲ, ಅಗ್ನಿ, ವಾಯು, ಆಕಾಶ, ಸೂರ್ಯ, ಚಂದ್ರ ಮತ್ತು ಆತ್ಮ ಎನ್ನುವ ಈ ಎಂಟು ಘಟಕಗಳಿಂದ ಕೂಡಿದ ಸಂಪುಟವೆ ಈ ನಮ್ಮ ದೇಹವಾಗಿದೆ. ಅಷ್ಟತನುವಿನಿಂದ ಕೂಡಿದ ಈ ದೇಹದಲ್ಲಿ ಒಳಗೆ ಹುದುಗಿರುವ ಇಷ್ಟಲಿಂಗದ ನಿಜ ಸ್ವರೂಪ ಕಂಡು ನೋಡಿದರೆ ತಾನೇ ಲಿಂಗ ಜಂಗಮನಾಗುವನು ಅಂತವನು ನಾನು ಎಂದು ತನ್ನ ನಿಜ ಸ್ವರೂಪ ಲಿಂಗ ರೂಪದಲ್ಲಿ ಇದೆ ತಾನೆ ಲಿಂಗ ಅಷ್ಟ ತನುವಿನ ಪರಿಸರದಲ್ಲಿನ ಸಮತೋಲನದ ಸಂಕೇತ ಎಂದು ಕೊಂಡಿದ್ದಾನೆ.
ಅಂಬಿಗರ ಚೌಡಯ್ಯ ಒಬ್ಬ ಅತ್ಯಂತ ಪ್ರಾಮಾಣಿಕ ದಿಟ್ಟ ಬಂಡಾಯಕಾರ. ದಟ್ಟವಾದ ಕಾಡು ಅಲ್ಲಿನ ಸಮಗ್ರ ಅಭಿವೃದ್ಧಿ ಸುಂದರತೆ ತಾನು ಹೊರತು ಅದರಲ್ಲಿನ ಸಿಡಿ ಕಂಟಿ ಅಲ್ಲ ಎಂದೆನ್ನುತ್ತನೆ. ಅದೆ ರೀತಿ ಮಡುವಿನ ಆಳವಾದ ನದಿ ನೀರು ತಾನು ಹೊರತು ಅಲ್ಲಿನ ಮೀನ ಮತ್ತು ಕಪ್ಪೆ ಅಲ್ಲ.
ಒಡಲಿಗೆ ಕುದಿಯುವವರಿಗೆ ಮರುಕ ಹುಟ್ಟಿ ಅವರಿಗೆ ಸಹಾಯ ಮಾಡಲು ತಾನು ಸಾಲ ಕೊಡುವವನಲ್ಲ. ಹೀಗೆ ಇಡೀ ಪರಿಸರ ಸಮಷ್ಟಿಯ ಅಷ್ಟ ತನುವಿನ ಗುರುತಿಸಿ ಅದನ್ನು ಲಿಂಗವೆಂದು ನಂಬಿದವನು ಅಂಬಿಗರ ಚೌಡಯ್ಯ ಎಂದಿದ್ದಾನೆ.
–ಡಾ ಶಶಿಕಾಂತ ಪಟ್ಟಣ ರಾಮದುರ್ಗ