ಜ್ಞಾನಸುಧೆಯಂತಿರುವ ಸುಧಾ ಹುಚ್ಚಣ್ಣವರ

ಜ್ಞಾನಸುಧೆಯಂತಿರುವ ಸುಧಾ ಹುಚ್ಚಣ್ಣವರ

‘ಹೆಣ್ಣು ಸಂಸಾರದ ಕಣ್ಣು’ ಈ ಮಾತನ್ನು ಜಗತ್ತು ಇಂದಿಗೂ ಹೇಳುತ್ತಲೇ ಬಂದಿದೆ. ಆದರೆ ಆಧುನಿಕ ಜೀವನ ಶೈಲಿಯ ಸಂದರ್ಭದಲ್ಲಿ ಹೆಣ್ಣು ಒಂದಲ್ಲ, ಎರಡಲ್ಲ, ಏನೇನೆಲ್ಲಾ ಆಗಿರುವ, ಆಗುತ್ತಿರುವ, ನಿಭಾಯಿಸುತ್ತಿರುವ ಈ ಸಮಯದಲ್ಲಿ, ಮೇಲಿನ ಮೂರು ಪದಗಳು ಕ್ಲೀಶೆ ಎನಿಸುತ್ತವೆ. ಹೆಣ್ಣು ಸಂಸಾರಕ್ಕಷ್ಟೇ ಮೀಸಲಲ್ಲ. ಸಮಾಜಕ್ಕೆ ಅವಳು ತನ್ನದೇ ಆದ ಕೊಡುಗೆ ನೀಡಬಲ್ಲ ಸಾಮರ್ಥ್ಯ ಹೊಂದಿದವಳು. ಹಾಗೆಂದು ನಿರೂಪಿಸಿದವಳು ಪ್ರಸ್ತುತದ ಮಹಿಳೆ.

ಇಷ್ಟೆಲ್ಲಾ ಪೀಠಿಕೆ ಹಾಕಲು ಪ್ರಮುಖ ಕಾರಣ ಸುಧಾ! ಶಿರಹಟ್ಟಿಯಲ್ಲಿ ಉಪನ್ಯಾಸಕಿಯಾಗಿ, ಅಭಿರುಚಿಯಿಂದ ಬರಹಗಾರ್ತಿಯಾಗಿ, ಸದಾ ಚಟುವಟಿಕೆಯಿಂದ ಕೂಡಿರುವ ಸುಧಾ ಹುಚ್ಚಣ್ಣವರ ಗದುಗಿನಲ್ಲಿ ಚಿರಪರಿಚಿತರು. ಅವರೊಂದಿಗೆ ಎರಡು ದಿನ ಕಳೆಯುವ ಸಂದರ್ಭ ಒದಗಿತು. ಆ ಅನುಭವ ಹಂಚಿಕೊಳ್ಳುವ ಇರಾದೆ ಮನದಲ್ಲಿ ಮೂಡಿತು…

ಸುಧಾ ಅವರು ಸಾಹಿತ್ಯ ಬಳಗ ಮತ್ತು ಫೇಸ್‌ಬುಕ್‌ ಮೂಲಕ ಸಂಪರ್ಕಕ್ಕೆ ಬಂದವರು. ಒಂದು ದಿನವೂ ಮುಖಾಮುಖಿಯಾಗಿ ಭೇಟಿಯಾಗದಿದ್ದರೂ, ಬಹಳ ಗಟ್ಟಿಯಾಗಿ ಬಾಂಧವ್ಯ ಬೆಸೆದುಕೊಂಡಿತ್ತು. ಗದಗ ಕಾರ್ಯಕ್ರಮಕ್ಕೆ ಹೋಗುವ ದಿನಕ್ಕಾಗಿ ನಾವಿಬ್ಬರೂ ಕಾಯುತ್ತಿದ್ದೆವು. ಸುಧಾಗೆ ನನ್ನನ್ನು ನೋಡಬೇಕು, ನನಗೆ ಸುಧಾನ ನೋಡಬೇಕು ಎನ್ನುವ ತೀವ್ರತೆ. ಅಂತೂ ಆ ಸಮಯ ಬಂದೇ ಬಿಟ್ಟಿತು. ಯಲ್ಲಪ್ಪ ಹಂಚಿನಾಳ ಅವರ ಕೃತಿ ‘ಬೆವರ ಹನಿಯ ಪಯಣ’ ನಮ್ಮ ಭೇಟಿಗೆ ಕಾರಣವಾಯಿತು.

ಗದಗ ಸಾಹಿತ್ಯ ಕಾರ್ಯಕ್ರಮಕ್ಕೆ ಹೋದಾಗ, ಶ್ರೀ ಜಗದ್ಗುರು ಫಕೀರೇಶ್ವರ ಸಂಸ್ಥಾನ ಮಠದ ಕಾರ್ಯಕ್ರಮ ಆಯೋಜನೆ ಮತ್ತು ನನ್ನ ವಾಸ್ತವ್ಯದ ಜವಾಬ್ದಾರಿ ಸುಧಾ ಅವರ ಮೇಲಿತ್ತು. ಎರಡು ದಿನ ಅವರೊಂದಿಗೆ, ಅವರ ಮನೆಯಲ್ಲೇ ಉಳಿದುಕೊಳ್ಳುವ ಸದವಕಾಶ.

ಸುಧಾ ಅವರು ಪತಿ ಅಶ್ವತ್ ರೆಡ್ಡಿ ಎನ್ ಟಿ, ಮಗ ಪುನೀತ, ಮಗಳು ಆರಾಧ್ಯರೊಂದಿಗೆ ಸುಂದರ ಮನೆಯಲ್ಲಿರುವ ಚಿಕ್ಕ ಸಂಸಾರ. ಅವರ ಮನೆಯೊಳಗೆ ಹೋಗುತ್ತಿದ್ದಂತೆಯೆ, ಎಲ್ಲವೂ ಓರಣವಾಗಿ ಜೋಡಿಸಿಟ್ಟಿದ್ದು ಗಮನ ಸೆಳೆಯಿತು. ಅದರಲ್ಲಿ ಪುಸ್ತಕಗಳ ಶೆಲ್ಫ್ ವಿಶೇಷ. ಸಂಸಾರ, ಓದು, ಬರಹ, ವೃತ್ತಿ, ಸಾಮಾಜಿಕ, ಸಾಹಿತ್ಯಿಕ ಕಾರ್ಯಗಳಲ್ಲಿ ಸದಾ ಉತ್ಸಾಹದಿಂದ ಪಾಲ್ಗೊಳ್ಳುವ ಸುಧಾ ಸಮಯವನ್ನು ಹೇಗೆ ಬಳಸಿಕೊಳ್ಳಬಹುದೆಂದು ಊಹೆ ಮಾಡಿದೆ.

ಉಪನ್ಯಾಸಕ ವೃತ್ತಿ ನಿಭಾಯಿಸುತ್ತ, ಮಕ್ಕಳನ್ನು ನೋಡಿಕೊಂಡು, ಸಾಹಿತ್ಯದಲ್ಲಿ ತೊಡಗಿಸಿಕೊಳ್ಳತ್ತ, ಈಗ ಕದಳಿ ಮಹಿಳಾ ವೇದಿಕೆಯ ಅಧ್ಯಕ್ಷ ಸ್ಥಾನ ಅಲಂಕರಿಸಿದ್ದಾರೆ. ಹೆಣ್ಣು ಬದುಕುವ ರೀತಿಯನ್ನು ಸವಾಲಾಗಿ ಸ್ವೀಕರಿಸಿದಾಗ ಮಾತ್ರ ಇಷ್ಟೆಲ್ಲಾ ಮಾಡಲು ಸಾಧ್ಯ. ಇಲ್ಲದಿದ್ದರೆ ಅದೇ ಅಡುಗೆ, ಊಟ, ತಿಂಡಿ ಎನ್ನುತ್ತ ಸಮಯ ಪೋಲಾಗಿ ಹೋಗುತ್ತದೆ. ಸುಧಾ ಸಮಯವನ್ನು ಅರ್ಥಪೂರ್ಣವಾಗಿ ಬಳಸಿಕೊಳ್ಳುತ್ತ ಚಿಕ್ಕ ವಯಸ್ಸಿನಲ್ಲೇ ಸಾಧನೆಯ ಮಾರ್ಗ ಹಿಡಿದು ಹೊರಟಿದ್ದಾರೆ. ಅವರಿಗೆ ಬೆನ್ನುತಟ್ಟಿ ಮುಂದಕ್ಕೆ ಕರೆದುಕೊಂಡು ಹೋಗುವ ಸಾಹಿತ್ಯ ಬಳಗ ಅವರ ಸುತ್ತಮುತ್ತ ಇರುವುದು ಸಮಾಧಾನಕರ.

ಅವರ ಮನೆಯಲ್ಲಿ ಉಳಿದ ಎರಡು ದಿನಗಳನ್ನೂ ಸರಿಯಾಗಿ ಬಳಸಿಕೊಂಡರು. ತಮಗೆ ಹತ್ತಿರವಿರುವ ಐತಿಹಾಸಿಕ ಕ್ಷೇತ್ರಗಳಿಗೆ ಭೇಟಿ ನೀಡಿ ಸಮಯದ ಸದ್ಬಳಕೆ ಮಾಡಿಸಿದರು. ಸುಧಾ ಸ್ನೇಹಿತೆ ಶಾಂತಾ ಪಾಟೀಲ ಮತ್ತವರ ಮಗಳು ರೇಣುಕಾ ಜೊತೆ ಮೊದಲ ದಿನ ಕಪ್ಪತ್ತಗಿರಿಗೆ ಹೋದೆವು. ಹೊರ ದುರ್ಗಮ್ಮ ದೇವಸ್ಥಾನ ಛಬ್ಬಿ ಮತ್ತು ಹೊಳಲಮ್ಮದೇವಿಯ ದೇವಸ್ಥಾನ ನೋಡಿಕೊಂಡು ಕಪ್ಪತ್ತಗಿರಿಯತ್ತ ಸಾಗಿದೆವು.

‘ಎಪ್ಪತ್ತು ಗಿರಿಗಿಂತ ಕಪ್ಪತ್ತಗಿರಿ ಲೇಸು’ ಉದ್ಯಾನವನದ ಗೇಟಿನ ಬಳಿ ದೊಡ್ಡದಾಗಿ ಬರೆಯಲಾಗಿತ್ತು. ಅದೂ ನಿಜವೇ. ಅಲ್ಲಿಯ ಹಸಿರು ವನಸಿರಿಯ ಸುಂದರ ತಾಣ ಮಲೆನಾಡ ನೆನಪಿಸುವಂತಿದೆ. ಉದ್ಯಾನವನದ ಒಳಗೆ ಹೋಗಿ ಮಧ್ಯೆ ಕುಳಿತು, ಅಲ್ಲಿಯೇ ಮಧ್ಯಾನದ ಊಟ ಮಾಡಿದೆವು. ಸುಧಾ ಬೆಳಿಗ್ಗೆ ಬೇಗ ಎದ್ದು ತಯಾರಿಸಿದ ಅಡಿಗೆ ರುಚಿ ಆ ಹಸಿರಿನ ನೆರಳಲಿ ಇನ್ನೂ ರುಚಿ ಎನಿಸಿತು. ಕಪ್ಪತ್ತಗಿರಿ ಹತ್ತಿ ಮೇಲೆ ಹೋದ ಮೇಲೆ ಗುಡಿಯೊಳಗೆ ಲಿಂಗ ದರ್ಶನ.

ಕೆಳಗೆ ಇಳಿಯುತ್ತ, ಅಲ್ಲಿಯ ಆಮ್ಲಜನಕ, ಸಸ್ಯಗಳಲ್ಲಿರುವ ಔಷಧೀಯ ಗುಣಗಳ ಕುರಿತು ಚರ್ಚಿಸುತ್ತ ಹೋದೆವು. ಹಿಂದೆ ‘ಬ್ಯಾಸರಿಲ್ಲದ ಜೀವ’ ಕೃತಿ ರಚಿಸುವಾಗ ಈ ಸ್ಥಳವನ್ನು ನೋಡಲಿಕ್ಕಾಗದೆ, ಕೇಳಿ ತಿಳಿದುಕೊಂಡು ಬರೆದಿದ್ದೆ. ಈಗ ಪ್ರತ್ಯಕ್ಷ ವೀಕ್ಷಿಸುತ್ತಿರುವ ಸಮಾಧಾನ.

ಇನ್ನೊಂದು ಮಹತ್ವದ ಕಾರ್ಯಕ್ರಮ ಶಿರಹಟ್ಟಿಯ ಶ್ರೀ ಜಗದ್ಗುರು ಫಕಿರೇಶ್ವರ ಸಂಸ್ಥಾನ ಮಠದಲ್ಲಿ ಸುಧಾ ಅವರು ಆಯೋಜಿಸಿದರು. ಇತ್ತೀಚೆಗೆ ಕದಳಿ ಮಹಿಳಾ ವೇದಿಕೆಯ ಅಧ್ಯಕ್ಷ ಸ್ಥಾನವನ್ನು ಸುಧಾ ಸ್ವೀಕರಿಸಿದ್ದರು. ಅದರ ಚಾಲನೆಗೆ ಫೊ.ಸಿದ್ದು ಯಾಪಲಪರವಿಯವರನ್ನು ಕರೆಯಲಾಗಿತ್ತು. ಅಲ್ಲಿಯವರೆಗೂ ಹೋದ ನನಗೆ ಮಠದಲ್ಲಿ ವಾಸ್ತವ್ಯಕ್ಕಿರುವ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಲು ಹೇಳಿದರು.

ಭವ್ಯವಾದ ಪುರಾತನ ಭಾವೈಕ್ಯತೆಯ ಶಿರಹಟ್ಟಿ ಶ್ರೀ ಜಗದ್ಗುರು ಫಕಿರೇಶ್ವರ ಸಂಸ್ಥಾನ ಮಠದಲ್ಲಿ, ಪೂಜ್ಯರ ಸಮ್ಮುಖದಲ್ಲಿ ಯಶಸ್ವಿ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮದಲ್ಲಿ ಐವತ್ತು ಮಕ್ಕಳು ಬಿಳಿ ಲುಂಗಿ, ಬಿಳಿ ಅಂಗಿ, ಶಲ್ಯ ಧರಿಸಿಕೊಂಡು ಶಿಸ್ತುಬದ್ಧರಾಗಿ ಕುಳಿತಿದ್ದರು. ಪ್ರತಿ ಭಾಷಣದ ನಂತರವೂ ವಿಶೇಷವಾದ ರೀತಿಯಲ್ಲಿ ಚಪ್ಪಾಳೆ ತಟ್ಟಿದರು. ಮಠದ ಪೂಜ್ಯರು, ಹಿರಿಯರು, ಮಕ್ಕಳು ಎಲ್ಲರಲ್ಲೂ ಚೈತನ್ಯ ಮೂಡಿಸಿದಂತಾಯಿತು. ನಾವೆಲ್ಲರೂ ಉತ್ಸಾಹದಿಂದ ಹೊರ ಬಂದೆವು. ಬಹಳ ಕಡಿಮೆ ಸಮಯದಲ್ಲಿ ಒಳ್ಳೆಯ ಕಾರ್ಯಕ್ರಮದ ತಯಾರಿ ಮಾಡಿಕೊಂಡಿದ್ದು ಸುಧಾ ಅವರ ಚಾಕಚಕ್ಯತೆ.

ಸುಧಾ ಬರೆದ ‘ಆಸೆಗೊಂದು ಆಸರೆ’ ಕೃತಿ ನೀಡಿದರು. ಜೀವನ ಪಯಣಕೆ ಅಗತ್ಯವಿರುವ, ವ್ಯಕ್ತಿತ್ವ ವಿಕಾಸಗೊಳಿಸಲು ಸಹಾಯಕವಾಗುವ ಪುಸ್ತಕ ಬರೆದಿದ್ದಾರೆ. ಪ್ರತಿದಿನ ಹೆಚ್ಚಿನ ಸಮಯ ವಿದ್ಯಾರ್ಥಿಗಳೊಂದಿಗೆ ಕಳೆಯುವ ಸುಧಾ ನಿಜಕ್ಕೂ ಜ್ಞಾನಸುಧೆ. ಅವರ ಮಕ್ಕಳು ಮತ್ತು ವಿದ್ಯಾರ್ಥಿ ಮಕ್ಕಳು, ಇಬ್ಬರಿಗೂ ಒಳಿತಾಗಲೆಂದು ಶುಭ ಹಾರೈಸುವೆ.

ಹೀಗೆ ಎರಡು ದಿನ ಸುಧಾ ಜೊತೆಯಲ್ಲಿ ಕಳೆದು, ಅವರ ಮನೆಯಿಂದ ಹೊರಟಾಗ ಉಡಿಯಕ್ಕಿಯ ಜೊತೆ ಸೀರೆಯ ಉಡುಗೊರೆ ನೋಡಿ ಮೂಕಳಾದೆ. ‘ಎತ್ತಣ ಮಾಮರ
ಎತ್ತಣ ಕೋಗಿಲೆ, ಎತ್ತಣದಿಂದೆತ್ತಣ ಸಂಬಂಧವಯ್ಯ’ ಅಲ್ಲಮನ ವಚನ ಗುಂಯ್‌ಗುಟ್ಟಿತು. ತಂಗಿಯ ಮನೆಯಲ್ಲಿ ತಂಗಿದ್ದು ಹೊರಟ ಭಾವ ಮೂಡಿತು. ‘ಹೆಣ್ಣು ಸಂಸಾರದ ಕಣ್ಣು’ ಅಷ್ಟೇ ಅಲ್ಲ ‘ಹೆಣ್ಣು ಜಗದ ಕಣ್ಣು’ ಎನಿಸಿತು.

ಸಿಕಾ ಕಲಬುರ್ಗಿ

Don`t copy text!