ಕನಸಿಗೆ ರೆಕ್ಕೆ ಹಚ್ಚುವ ‘ಫ್ರಾಗಿ ಮತ್ತು ಗೆಳೆಯರು’

ಕನಸಿಗೆ ರೆಕ್ಕೆ ಹಚ್ಚುವ ‘ಫ್ರಾಗಿ ಮತ್ತು ಗೆಳೆಯರು’

 

-ಗುಂಡುರಾವ್ ದೇಸಾಯಿ
ಫ್ರಾಗಿ ಮತ್ತು ಗೆಳೆಯರು(ಮಕ್ಕಳ ಕಾದಂಬರಿ)
ಲೇಖಕರು:ತಮ್ಮನ್ಣ ಬೀಗಾರ
ಪುಟಗಳು:84 ಬೆಲೆ:80
ಪ್ರಕಾಶಕರು :ಗೋಮಿನಿ ಪ್ರಕಾಶನ ತುಮಕೂರು
ದೂ.ಸಂ9986692342

ತುಮಕೂರಿನ ಗೋಮಿನಿ ಪ್ರಕಾಶನ ಪ್ರಕಟಿಸಿರುವ, ಪುಸ್ತಕ ಪ್ರಾಧಿಕಾರದಿಂದ ಪುಸ್ತಕ ಸೊಗಸು ಬಹುಮಾನವನ್ನು ಪಡೆದುಕೊಂಡಿರುವ ಮೆಚ್ಚಿನ ಮಕ್ಕಳ ಸಾಹಿತಿ ತಮ್ಮಣ್ಣ ಬೀಗಾರವರ ಫ್ರಾಗಿ ಮತ್ತು ಗೆಳೆಯರು ಮಕ್ಕಳ ಕಾದಂಬರಿ ಇಂದು ರವಿವಾರದ ದಿನವನ್ನು ಸಂಭ್ರಮಗೊಳಿಸಿತು….

ಕೆಲವು ತಿಂಗಳ ಹಿಂದೆ ಆನಂದ ಪಾಟೀಲರ ‘ಪುಟಾರಿ ಆನೆ ಪುಟ್ ಪುಟ್ ‘ ಕನ್ನಡದಲ್ಲಿಯ ಇದುವರೆಗೂ ಬಂದ ದೊಡ್ಡ ರಮ್ಯ ಕಾದಂಬರಿಯ ಹ್ಯಾಂಗ ಓವರ್‍ನಲ್ಲಿದ್ದ ನನಗೆ ಮತ್ತೊಂದು ರಮ್ಯ ಕಾದಂಬರಿ ಓದಿದ ಖುಷಿ ನೀಡಿತು. ‘ಮಗಳಿಗೂ ಓದಿ ನೋಡು ಚೆನ್ನಾಗಿದೆ ಎಂದಾಗ ಒಂದು ಗಂಟೆಯಲ್ಲೆ ಓದಿ ಮುಗಿಸಿ ‘ಎಚ್ಟು ಚಂದ ಬರೆದಿದ್ದಾರೆ ಅಪ್ಪಾ’ ಎಂದು ಸಂಭ್ರಮಿಸಿದಳು….

ಇಂಜಿನಿಯರಿಂಗ್ ಓದುವ ಮಗಳಿಗೆ ಎಷ್ಟೊ ಸಾರಿ ಪುಸ್ತಕದ ರುಚಿ ಹತ್ತಿಸಬೇಕೆಂದು ಪ್ರಯತ್ನ ಮಾಡಿ ಸೋತಿದ್ದೆ. ಓದುತ್ತಿದ್ದದು ಒಂದೆರಡು ಕತೆಗಳನ್ನೊ ಅಥವಾ ಐದಾರು ಪುಟವನ್ನೊ…73 ಪುಟವನ್ನು ಬೇಗ ಓದಿ ಮುಗಿಸಿ ರಿವಿವ್ಯೂ ಕೊಟ್ಟಿದ್ದು ಖುಷಿಯಾಯಿತು.

ಮಕ್ಕಳ ಕತೆ,ಕಾವ್ಯ,ಕಾದಂಬರಿ ಸಾಹಿತ್ಯ ರಚನೆಯಲ್ಲಿ ಗುರುತರ ಹೆಜ್ಜೆ ಮೂಡಿಸಿರುವ ತಮ್ಮಣ್ಣ ಬೀಗಾರರು ನಿಜ ಅರ್ಥದಲ್ಲಿ ಮಕ್ಕಳ ಆಳಕ್ಕಿಳಿದು ಬರೆಯುವು ವಿಶಿಷ್ಟ ಬರಹಗಾರರು. ‘ಬಾವಲಿ ಗುಹೆ’ ಕಾದಂಬರಿ ಓದಿ ಸಂಭ್ರಮಿಸಿದ್ದ ನನಗೆ…. ಫ್ಯಾಂಟಸಿ ಕಥಾವಸ್ತು ಹೊಂದಿರುವ ‘ಫ್ರಾಗಿ ಮತ್ತು ಗೆಳೆಯರು’ ನಮ್ಮನ್ನು ಕಪ್ಪೆ ಫ್ರಾಗಿಯಾಗಿ, ಸೂಜಿಯಂತಹ ಕೊಕ್ಕಿನ ಹಕ್ಕಿ ಪೂವಿಯಾಗಿ, ಚಿಟ್ಟೆ ರಂಗಿಯಾಗಿ ಕಾಡಿನೊಳಗೆಲ್ಲ ಸುತ್ತಾಡುವಂತೆ ಮಾಡಿತು. ಮಗುವಾಗಿ ಬೀಗಾರವರು ಪುಟ್ಟಿ ಪುಂಡು, ಚಿನ್ನುವಿಗೆ ಕತೆಯ ಬಗ್ಗೆ ಕುತೂಹಲ ಹುಟ್ಟಿಸುತ್ತಾ ಕಾದಂಬರಿ ಕಟ್ಟುವ ಪರಿ ಓದುಗರ ಆಸಕ್ತಿಯನ್ನು ಕೆರಳಿಸುತ್ತದೆ.

‘ಮಗು ಕಪ್ಪೆಯನ್ನು ಇಂಗ್ಲೀಷನಲ್ಲಿ ಫ್ರಾಗ್ ಎನ್ನುತ್ತಾರೆ’ ಎಂದಿದನ್ನು ಕೇಳಿ ಖುಷಿಗೊಂಡ ಕಪ್ಪೆ ಫ್ರಾಗಿಯಾಗಿ ಸಂಭ್ರಮಿಸಿದ್ದು ಓದುವ ಮಕ್ಕಳಿಗೆ ಖುಷಿಕೊಡುವಂತಹದ್ದೆ. ಸರಾಗವಾಗಿ ಹಾರುವ ಪೂವಿ, ರಂಗಿಯ ಜೊತೆ ಜೊತೆ ಸಾಗುವ ಫ್ರಾಗಿಯ ಪ್ರಯತ್ನ, ಪಾಪ ನಡೆದುಕೊಂಡುವ ಬರುವ ಫ್ರಾಗಿಯ ಬಗೆಗೆ ಅವೆರಡು ತೋರುವ ಕಾಳಜಿ ಓದುಗನಿಗೆ ವಿಶೇಷ ಅನುಭೂತಿ ನೀಡುತ್ತದೆ. ಶಾಲೆಗೆ ಹುಡುಗನ ಪಾಟಿಚೀಲದ ಮೇಲೆ ಕುಳಿತು ಶಾಲೆಗೆ ಹೋಗಿ ಶಾಲೆಯಲ್ಲಿ ನಡೆಯುವ ವಿದ್ಯಮಾನಗಳನ್ನು ನೋಡುವ ಆಸೆಯಲ್ಲಿ ಹೊಳಹೊಕ್ಕು ಅಲ್ಲಿ ಕಂಡದ್ದನ್ನು ಪೂವಿ, ರಂಗಿನೂ ಕಾಣಲಿಲ್ಲವಲ್ಲ ಎಂದು ಚಡಪಡಿಸುವುದು ನಂತರ ಮಕ್ಕಳ ಕಣ್ಣಿಗೆ ಬಿದ್ದು ಗದ್ದಲು ಎಬ್ಬಿಸಿ ಗಳಬಿಲಿಗೊಳ್ಳುವ, ಮಕ್ಕಳ ಕೈಯಲ್ಲಿ ಸಿಕ್ಕರೆ ಅಪ್ಪಚ್ಚಿಯಾಗುತ್ತಿದ್ದ ಫ್ರಾಗಿ ಒಳ್ಳೆಯ ಹುಡಗನ ಮೂಲಕ ಹೊರಗೆ ಬಂದದ್ದು ಒಳಗೆ ಹೋಗಿದ್ದ ಫ್ರಾಗಿ ಸುರಕ್ಷಿತವಾಗಿ ಹೊರ ಬಂದ ಫ್ರಾಗಿಯನ್ನು ನೋಡಿ ಅವೆರಡು ನಿಟ್ಟುಸಿರು ಬಿಟ್ಟಿದ್ದು..ಎಲ್ಲವೂ ಮಕ್ಕಳಿಗೆ ಓದುಗರಿಗೆ ಮಜಾ ನೀಡುವ ಪ್ರಸಂಗಗಳೆ…

ಈ ಕಾದಂಬರಿಯ ಫ್ರಾಗಿ ನಾವು ನೀವೆಲ್ಲ ಕೇಳಿದ ಓದಿದ ಭಾವಿಯ ಕಪ್ಪೆಯ ಕತೆಯಂತಲ್ಲ. ಹೊಸ ಗೆಳೆಯರೊಡನೆ ಒಡನಾಟ ಹೊಂದ ಬಯಸುವ, ಆ ಮೂಲ ಹೊಸ ಪ್ರದೇಶ ನೋಡುವ ಜೀವನೋತ್ಸಾಹದ ಕಪ್ಪೆ. ಶಾಲೆಯ ಪ್ರವಾಸ ಹೋದ ಮೇಲೆ ಎತ್ತರದ ಗುಡ್ಡದ ಮೇಲೆ ಹೋಗಿ ವಿಸ್ತಾರವಾದ ಆಕಾಶ ನೋಡುವ ಪ್ರಸ್ತಾಪ ಪೂವಿ ಇಟ್ಟಾಗ ರಂಗಿ ಸಮ್ಮತಿಸಿತು. ಹಾರಲೂ ತನಗೆ ಸಾಧ್ಯವಾಗದಿದ್ದರೂ ಅವೆರಡರ ನಿಗಾದಲ್ಲಿ ಹಲವು ಸಂಕಷ್ಟಗಳನ್ನು ಎದುರಿಸಿ ಗುಡ್ಡ ಏರಿ ಅಲ್ಲಿಯ ಎತ್ತರದ ಗಿಡದಿಂದ ಬಿದ್ದು…ನಿನಗೆ ಸಾಧ್ಯ ಇಲ್ಲ ಮರಳಿ ಹೋಗೊಣ ಎಂದು ಪೂವಿ ರಂಗಿ ಹೇಳಿದರೂ ನೀವು ನೋಡಿದ ಮೇಲೆ ನಾನು ನೋಡುವೆ ಎನ್ನುವ ಹಟದಲ್ಲಿ ‘ಮರಳಿ ಯತ್ನ ಮಾಡುವೆ’ ಎಂದು ಒಪ್ಪಿಸಿ ಆ ಆಕಾಶದ ಚಂದದ ಸೌಂದರ್ಯ ನೋಡಿ ಖುಷಿಗೊಳ್ಳುವ, ಬೀಸಿದ ಗಾಳಿ ಮಳೆಗೆ ಮತ್ತೆ ಮರಳಿ ತನ್ನ ಕೆರೆಗೆ ಸೇರುವ… ಕಪ್ಪೆಗಾಗಿ ಪ್ರತಿ ಸಂದರ್ಭದಲ್ಲೂ ಪರಿತಪಿಸುವ ರಂಗಿ,ಪೂವಿಯ ಅಂತಃಕರಣ ಕಲಕುವ ಸಂದರ್ಭಗಳು ಕಾದಂಬರಿಯ ಉದ್ದಕ್ಕೂ ಬಂದಿವೆ. ಹಾವು, ಓತಿ, ಇರುವೆ,ಜೇಡ, ಗಿಳಿ,ಹಾರುವ ಕಪ್ಪೆ, ಗೂಬೆ, ಅಳಿಲು ಅವುಗಳೊಂದಿಗೆ ಮಾತುಕತೆ, ಅವುಗಳ ಮೂಲಕ ಮಾತಾಡಿಸುವ ಮಾನವನ ಸೂಕ್ಷ್ಮತೆಗಳನ್ನು, ಪರಿಸರದ ಹಲವು ವಿಸ್ಮಯಗಳನ್ನು ಈ ಕಾದಂಬರಿಯನ್ನು ಓದಿಯೆ ಸವಿಯಬೇಕು. ಕಾದಂಬರಿ ಓದುತ್ತಾ ನಾವಾಗಿ ಗುಡ್ಡ ಹತ್ತಿ, ಮರ ಏರಿ,ಗಾಳಿಯಲ್ಲಿ ಹಾರಿದ ಅನುಭವ ನಮಗಾಗುತ್ತದೆ. ಒಟ್ಟಾರೆ ಲೇಖಕರೆ ಹೇಳುವಂತೆ ಇಲ್ಲಿಯ ಎಲ್ಲ ಸಂಗತಿಗಳು ಓದುವ ಖುಷಿಯನ್ನು ಇಮ್ಮಡಿಗೊಳಿಸುತ್ತದೆ. ಫ್ರಾಗಿ,ಪೂವಿ, ಸೂಜಿ ಮೂವರು ಜೀವದ ಗೆಳೆಯರಂತೆ ಪರಸ್ಪರ ಪ್ರತಿ ಸಂದರ್ಭದಲ್ಲೂ ತೋರುವ ಪ್ರೀತಿ, ಕಾಳಜಿ ನಿಜಕ್ಕೂ ಒಂದು ಹೊಸ ಬಾಂಧವ್ಯಕ್ಕೆ ನಿದರ್ಶನ. ಮನುಷ್ಯ ಮನುಷ್ಯನನ್ನೆ ಅನುಮಾನಿಸುತ್ತರುವ ಈ ಸಂದರ್ಭಕ್ಕೆ ಅವಶ್ಯವೂ ಎನಿಸುತ್ತದೆ.

ಮಾಧ್ಯಮದ ಮೇಲಾಟದ ಇಂದಿನ ದಿನಮಾನಗಳಲ್ಲಿ ಮಕ್ಕಳಿಗೆ ಏನೆಲ್ಲ ಕೊಡಿಸಿ ತೃಪ್ತಿಪಡಿಸುವ ಪಾಲಕರು ಇಂತಹ ಮಕ್ಕಳ ಪುಸ್ತಕಗಳನ್ನು ಓದಿಸಿ ಅವರ ಭವಿಷ್ಯವನ್ನು ಬಲಪಡಿಸಬೇಕಾದ ಅವಶ್ಯಕತೆಯನ್ನು ಮನಗಾಣಬೇಕಾಗಿದೆ. ಮೃದು ಮಾತಿನ, ಮಗು ಭಾವದ ತಮ್ಮಣ್ಣ ಬೀಗಾರರಿಂದ ಇನ್ನೂ ಇಂತಹ ಹಲವು ಕಾದಂಬರಿಗಳು ಬರಲಿ…ಮಕ್ಕಳ ಸಾಹಿತ್ಯವನ್ನು ತಂಪುಗೊಳಿಸಲಿ ಎನ್ನುವುದು ನನ್ನಯ ಆಶಯ

-ಗುಂಡುರಾವ್ ದೇಸಾಯಿ ಮಸ್ಕಿ

Don`t copy text!