ಗುಹೇಶ್ವರಲಿಂಗವ ಮೀರುವ ಒಡೆತನವುಂಟೆ ಸಂಗನಬಸವಣ್ಣಾ?
ಆಕಾಶವ ಮೀರುವ ತರುಗಿರಿಗಳುಂಟೆ ?
ನಿರಾಕಾರವ ಮೀರುವ ಸಾಕಾರವುಂಟೆ ?
ಗುಹೇಶ್ವರಲಿಂಗವ ಮೀರುವ
ಒಡೆತನವುಂಟೆ, ಸಂಗನಬಸವಣ್ಣಾ ?
-ಅಲ್ಲಮ ಪ್ರಭುದೇವರು
ಅಲ್ಲಮರ ವಚನಗಳು ಅತ್ಯಂತ ಅರ್ಥಪೂರ್ಣ ವೈಚಾರಿಕ ವೈಜ್ಞಾನಿಕ ಆಧ್ಯಾತ್ಮಿಕವಾದಗಳ ಹಿನ್ನೆಲೆಯಿಂದ ಕೂಡಿರುತ್ತವೆ
ಬಸವಣ್ಣನವರ ಇಷ್ಟ ಲಿಂಗದ ಸಾಕಾರತೆ ಎಂಬ ವಿಚಾರಕ್ಕೆ ಜಗತ್ತೆ ಜಂಗಮ ಚೇತನದ ಪ್ರತಿಕವೆಂದಾದ ಮೇಲೆ ಕೈಯಲ್ಲಿರುವ ಲಿಂಗವೆಂಬ ಕುರುಹು ನಿರಾಕಾರಕ್ಕಿಂತ ಹೇಗೆ ದೊಡ್ಡದು? ಎಂದು ಪ್ರಶ್ನಿಸುವ ಅಲ್ಲಮರ
ಉದಾತ್ತಿಕರಣ ಚಿಂತನೆ ಶ್ರೇಷ್ಟವಾದದ್ದು.
ಆಕಾಶವ ಮೀರುವ ತರುಗಿರಿಗಳುಂಟೆ ?
ತುದಿ ಮೊದಲು ಕಾಣದ ಘನವೆನಿಸಬಹುದಾದ ಆಕಾಶ ನಮ್ಮ ಮುಂದಿನ ಅತ್ಯಂತ ವಿಶಾಲ ಭೌಗೋಳಿಕ ವ್ಯಾಪ್ತಿ ಮತ್ತು ವಿಸ್ತಾರದ ಪ್ರತಿಕ.
ಭೂಮಿ ಮೇಲೆ ಇರುವ ತರು ಗುಲ್ಮ ಲತೆ ಮರ ಗಿಡ ಸಸ್ಯ ಗುಡ್ಡ ಗಿರಿ ಪರ್ವತಗಳು ಆಕಾಶಕ್ಕಿಂತ ಹಿರಿದ ಮತ್ತು ದೊಡ್ಡ ಮಟ್ಟದಲ್ಲಿ ಇರಲು ಸಾಧ್ಯವೇ?
ಆಕಾಶವನ್ನು ಮೀರಿಸುವ ತರು ಗಿರಿಗಳು ಇರಲು ಹೇಗೆ ಸಾಧ್ಯ ಎಂದಿದ್ದಾರೆ ಅಲ್ಲಮರು
ನಿರಾಕಾರವ ಮೀರುವ ಸಾಕಾರವುಂಟೆ ?
ನಿರಾಕರ ಮತ್ತು ಸಾಕಾರ ಚಿಂತನೆ ಒಳಗೊಂಡ ವಚನ. ಪಂಚ ಮಹಾಭೂತಗಳಿಂದ ಕೂಡಿದ ಜಗತ್ತು.ಇಲ್ಲಿಯ ಜೈವಿಕ ವಿಕಾಸ ಶಕ್ತಿಯ ಪ್ರಕಾರ ರೂಪಗಳನ್ನು ಹಿಡಿದಿಡುವ ಯತ್ನಗಳು ಬೇರೆ ಬೇರೆ ಧರ್ಮ ಶಾಸ್ತ್ರದಲ್ಲಿ ನೋಡುತ್ತೇವೆ.
ಪ್ರಾಣಿ ಪಕ್ಷಿ ದೇವರೆಂದು ಪೂಜಿಸುವ ಮತ್ತು ಕಲ್ಲು ಮಣ್ಣು ಭೌತಿಕ ವಸ್ತುಗಳೇ ಆರಾಧನೆಯ ಕುರುಹುಗಳಾಗಿವೆ.
ದೇವರನ್ನು ಹಿಡಿದಿಡುವ ವ್ಯರ್ಥ ಪ್ರಯತ್ನ ನಮ್ಮದು ಎಂದಿದ್ದಾರೆ ಅಲ್ಲಮರು.
ತನ್ನ ಅಸ್ತಿತ್ವವೇ ನಿರಾಕಾರ.
ತನ್ನ ಬಿಟ್ಟು ದೇವರಿಲ್ಲ ಮಣ್ಣು ಬಿಟ್ಟು ಮಡಿಕೆ ಇಲ್ಲ ಎಂದು ಜನಪದಿಗರು ಹೇಳುತ್ತಾರೆ.
ದೇವರು ಸರ್ವವ್ಯಾಪಿ. ಗಾಳಿ ಬೆಳಕು ಸೂರ್ಯ ಪ್ರಕಾಶ ಎಲ್ಲವೂ ನಿರಾಕರದ ಪ್ರತಿಕ.
ಇಂತಹ ಚೈತನ್ಯ ತುಂಬುವ ಶಕ್ತಿ ನಿರಾಕಾರ.ದೇವರೆಂಬ ಭ್ರಮೆ ಹುಟ್ಟು ಹಾಕುವ ಸಂಪ್ರದಾಯವಾದಿಗಳ ತಂತ್ರಕ್ಕೆ ಬಸವಣ್ಣನವರು ದೇಹವೇ ದೇವಾಲಯ. ಮುಕ್ತಿ ಮೋಕ್ಷ ಶರಣರ ತತ್ವಗಳಲ್ಲಿ ಇಲ್ಲ.
ಸತ್ಯವ ನುಡಿವುದು ದೇವ ಲೋಕ ಮಿಥ್ಯವ ನುಡಿವುದು
ಮರ್ತ್ಯಲೋಕ ಆಚಾರವೇ ಸ್ವರ್ಗ ಅನಾಚಾರವೇ ನರಕ ಎಂಬ ಅಪ್ಪ ಬಸವಣ್ಣನವರ ಆಶಯದಂತೆ.
ದೇವರ ಮೂರ್ತಿ ಎಂಬುದು ಸಾಕಾರವಲ್ಲದ ಜಡ.
ಇನ್ನು ನಿರಾಕರವನ್ನೇ ಸಾಕಾರಗೊಳಿಸಿದ ಬಸವಣ್ಣನವರ ಇಷ್ಟಲಿಂಗವೂ ಕೂಡ ಅರಿವಿನ ಕುರುಹು ಹೊರತು ಇಷ್ಟಲಿಂಗ ದೇವರಲ್ಲ.
ಇಷ್ಟಲಿಂಗ ಅರಿವಿನ ಅನುಸಂಧಾನದ ಪ್ರಮುಖ ಸಾಧನ ಅಷ್ಟೇ.
ಹೀಗಾಗಿ ನಿರಾಕಾರವನ್ನು ಸಾಕಾರ ರೂಪದಲ್ಲಿ ಕಾಣುವ ವಿಚಾರದಲ್ಲಿ ಅಲ್ಲಮರು ನಿರಾಕಾರವನ್ನು ಮೀರಿಸುವ
ಸಾಕಾರ ಇರಲು ಸಾಧ್ಯವೇ ಎಂದು ಅತ್ಯಂತ ಮೋನಚಾಗಿ ಪ್ರಶ್ನಿಸುವ ಮೂಲಕ ಇಷ್ಟಲಿಂಗ ಇದು ಅರಿವಿನ ಕುರುಹು ಮಾತ್ರ.
ನಮ್ಮ ಅಂತರಂಗದ ಚೈತನ್ಯ ಜಂಗಮ ಚಲನಶೀಲತೆ ಇದುವೇ ದೈವತ್ವದ ಸಾಕ್ಷಿ ಪ್ರಜ್ಞೆ ಎಂದಿದ್ದಾರೆ ಅಲ್ಲಮರು.
ಗುಹೇಶ್ವರಲಿಂಗವ ಮೀರುವ
ಒಡೆತನವುಂಟೆ, ಸಂಗನಬಸವಣ್ಣಾ?
ಗುಹೇಶ್ವರ ಲಿಂಗ ಎಂಬುದು ತೋರಬಾರದ ಘನ. ನಿರ್ಮಾಟ
ಅಪ್ರಮಾಣ ಅಗೋಚರ ಅಪ್ರತಿಮ ಪ್ರಜ್ಞೆ ಇದಕ್ಕಿಂತ ಮತ್ತೆ ಬೇರೆ ಒಡೆತನ ಉಂಟೆ?
ಇಂತಹ ಒಂದು ಆತ್ಮ ಸಾಕ್ಷಿಯ ಪ್ರಜ್ಞೆ ಅದನ್ನು ದೈವೀಕರಿಸುವ ಭರದಲ್ಲಿ ಬಾಹ್ಯ ಕುರುಹು ಸಾಕಾರ ರೂಪಗಳನ್ನು ದೇವರೆಂದು ನಂಬಿ ಲಿಂಗ ಪೂಜೆಯಲ್ಲಿ ಸಮಯ ವ್ಯರ್ಥ ಮಾಡುವ ಭೂ ಭಾರಿಗಳು ಬಸವ ಭಕ್ತರು ಆಗಬಾರದು.
ಶರಣರ ಆಶಯ ನಿರಾಳ ನಿರಾಕಾರದ ಕಡೆಗೆ ಇರಬೇಕೇ ಹೊರತು ಅವುಗಳನ್ನು ಮೀರಿಸುವ ಸ್ಥಾವರ ಸಾಕಾರ ರೂಪಗಳಿಗೆ ಸೀಮಿತ ವಾಗಬಾರದು ಇದು ಅಲ್ಲಮರು ಬಸವಣ್ಣನವರ ಅಂತಃಕರಣ ಅರಿವಿಗೆ ಮೆರಗು ಬರುವ ಹಾಗೆ ಹೇಳಿದ್ದಾರೆ.
ಇಂದು ಅನೇಕ ಮಠಗಳಲ್ಲಿ ಸ್ವಾಮಿಗಳ ಮಾತೆಯರ ಗದ್ದುಗೆ ಪೂಜೆ . ಬಸವಣ್ಣನವರ ಹೆಸರಿನಲ್ಲಿ ಮುನ್ನೂರು ಕೋಟಿ ಹಣದಲ್ಲಿ ಮಾಡುವ ಕಂಚಿನ ಮೂರ್ತಿ
ಇವೆಲ್ಲವುಗಳ ಒಟ್ಟು ಪೂರ್ವಲೋಚನೆ ಅಲ್ಲಮರದ್ದು
ಶರಣರ ಚಳವಳಿ ಎಲ್ಲಾ ಬಂಧನದಿಂದ ಮುಕ್ತಿಗೊಳಿಸಿ
ಸಮ ಸಮಾಜ ಕಟ್ಟುವ ಹೆಗ್ಗುರಿ ಹೊಂದಿದ್ದರು.
ನಾವು ಶರಣರ ಅಮಲಿನಲ್ಲಿ ಅವರ ಆಶಯ ಮರೆಯಬಾರದು.
ಡಾ ಶಶಿಕಾಂತ ಪಟ್ಟಣ ಬೆಳಗಾವಿ
9552002338