ಇದೇ ಅಂತರಂಗ ಶುದ್ಧಿ, ಇದೇ ಬಹಿರಂಗ ಶುದ್ಧಿ “.

 

ಇದೇ ಅಂತರಂಗ ಶುದ್ಧಿ, ಇದೇ ಬಹಿರಂಗ ಶುದ್ಧಿ “.

 

ಮನುಷ್ಯನಾಗಿ ಹುಟ್ಟಿದ ಮೇಲೆ ಒಂದು ಸ್ಥಳದಲ್ಲಿ ಬಾಳಬೇಕಾಗುತ್ತದೆ. ಅದು ಬುಡಕಟ್ಟು ತಾಂಡಾ ಇರಬಹುದು, ಇಲ್ಲವೇ ಹಳ್ಳಿಯೇ ಇರಬಹುದು, ಇಲ್ಲವೇ ಪಟ್ಟಣವೇ ಇರಬಹುದು. ತನ್ನ ಸುತ್ತಲಿನ ಮನುಷ್ಯರ ಜೊತೆ ಒಡನಾಟ ಇರಬೇಕಾಗುತ್ತದೆ, ಕೂಡಿ ಬಾಳಬೇಕಾಗುತ್ತದೆ, ಇಲ್ಲದಿದ್ದರೆ ಮನುಷ್ಯನಿಗೂ ಪ್ರಾಣಿಗಳಿಗೂ ಏನೂ ಬೇರೆಯೇ ಇರುವುದಿಲ್ಲ. ಹೀಗೆ ಬಾಳಬೇಕಾಗಿ ಬಂದಾಗ ಎರಡು ತೆರನಾದ ಆಯ್ಕೆಗಳು ಅವನ ಮುಂದೆ ಬರುತ್ತದೆ.
ಒಂದು ತನ್ನ ಇಲ್ಲವೆ ಆತ್ಮದ ಏಳಿಗೆ, ಇನ್ನೊಂದು ತನ್ನ ಸುತ್ತಲಿನವರ ಏಳಿಗೆ. ಬಹಳ ಕಾಲದವರೆಗೂ ಇವೆರಡೂ ಬೇರೆ ಬೇರೆ. ಒಂದನ್ನು ಮಾಡಲು ಹೋದರೆ ಇನ್ನೊಂದನ್ನು ತೊರೆಯಬೇಕಾಗುತ್ತದೆ ಎಂಬ ಬಾವನೆ ಹಲವರಲ್ಲಿತ್ತು. ಈಗಲೂ ಇದೆ. ಇದಕ್ಕೆ ಕಾರಣಗಳೂ ಹಲವಿರಬಹುದು. ಅಂದರೆ ಮನುಷ್ಯ ತನ್ನೊಳಗೆ ತಾನು ಒಳಹೊಕ್ಕುತ್ತಾ ಹೋದರೆ ಅವನಿಗೆ ಹೊರಗಿನ ಪ್ರಪಂಚದ ವಸ್ತುಗಳು ಇಲ್ಲವೆ ಮಂದಿಯು ಬೇಕೆನಿಸುವುದಿಲ್ಲ. ಅವುಗಳ ಸಂಬಂಧವನ್ನು ಕಡಿದುಕೊಳ್ಳಬೇಕಾಗುತ್ತದೆ. ಹಾಗೆ ಕಡಿದುಕೊಳ್ಳದಿದ್ದರೆ ತನ್ನ ಏಳಿಗೆ ಸಾಧ್ಯವೇ ಇಲ್ಲ ಎಂದು ಕೆಲವರು ಹೇಳುತ್ತಾರೆ. ಈ ಹಿನ್ನಲೆಯೊಳಗೆ ಹನ್ನೆರಡನೇ ಶತಮಾನದ ಶರಣರ ಚಿಂತನೆಗಳನ್ನು ನಾವು ಒರಗೆ ಹಚ್ಚಿ ನೋಡಬಹುದು. ಅಂತಹ ಶರಣರಲ್ಲಿ ಒಬ್ಬರಾದ ಬಸವಣ್ಣನವರ ಹೆಸರುವಾಸಿಯಾದ ವಚನ ಹೀಗಿದೆ,

ಕಳಬೇಡ ಕೊಲಬೇಡ ಹುಸಿಯ ನುಡಿಯಲು ಬೇಡ
ಮುನಿಯಬೇಡ, ಅನ್ಯರಿಗೆ ಅಸಯ್ಯ ಪಡಬೇಡ
ತನ್ನ ಬಣ್ಣಿಸಬೇಡ ಇದಿರಾ ಹಳಿಯಲುಬೇಡ
ಇದೇ ಅಂತರಂಗ ಶುದ್ಧಿ, ಇದೇ ಬಹಿರಂಗ ಶುದ್ಧಿ
ಇದೇ ನಮ್ಮ ಕೂಡಲಸಂಗಮದೇವನ ಒಳಲಿಸುವ ಪರಿ
ಈ ವಚನದಲ್ಲಿ ಮನುಷ್ಯನಾದವನು ಯಾವ ಯಾವ ಕೆಟ್ಟ ಕೆಲಸಗಳನ್ನು ಮಾಡಬಾರದು ಎಂಬುದನ್ನು ಪಟ್ಟಿ ಮಾಡಲಾಗಿದೆ. ಈ ಪಟ್ಟಿಯಲ್ಲಿರುವ ಅಂದರೆ ಕೆಟ್ಟದವುಗಳನ್ನು ಮಾಡದಿದ್ದರೆ ‘ತನ್ನ’ವಲಯದಲ್ಲಿಯೇ ಬೇರೆ ವಲಯದಲ್ಲೂ ಏಳಿಗೆಯನ್ನು ಸಾಧಿಸಬಹುದು ಎಂಬುದನ್ನು ‘ಇದೇ ಅಂತರಂಗ ಶುದ್ಧಿ, ಇದೇ ಬಹಿರಂಗ ಶುದ್ಧಿ‘ಎಂಬ ಸೊಲ್ಲುಗಳ ಮೂಲಕ ಸ್ಪಷ್ಟವಾಗಿ ತೋರಿಸಲಾಗಿದೆ. ಇಲ್ಲಿ ‘ಅಂತರಂಗ ಶುದ್ಧಿ’ ಎಂಬುದು ಮನುಷ್ಯನ ಒಳಗಿನ ನಡತೆಯ ಶುದ್ಧಿಯನ್ನು ಗುರುತಿಸಿದರೆ,’ಬಹಿರಂಗ ಶುದ್ಧಿ’ ಎಂಬುದು ಮನುಷ್ಯನು ತನ್ನ ಸಮುದಾಯದೊಂದಿಗೆ ಇಟ್ಟುಕೊಂಡಿರುವ ನಡತೆಯ ಶುದ್ಧಿಯನ್ನು ಗುರುತಿಸುತ್ತದೆ. ತನ್ನ ಶುದ್ಧಿ ಮತ್ತು ತನ್ನ ತನ್ನ ಸುತ್ತಲಿನ ಸಮೂಹದ ಶುದ್ಧಿ ಎಂಬುದು ಎರಡು ಬೇರೆ ಬೇರೆಯಲ್ಲ ಮತ್ತು ಅಂತಹ ಶುದ್ಧಿಯನ್ನು ಹೊಂದಬೇಕಾದರೆ ಏನು ಮಾಡಬಾರದು ಎಂಬುದನ್ನು ಈ ವಚನದಲ್ಲಿ ಸೂಚ್ಯವಾಗಿ ಹೇಳಲಾಗಿದೆ. ಅಂತರಂಗ ಶುದ್ಧಿಗೋಸ್ಕರ ಮನೆ- ಮಠ ಬಿಟ್ಟು ಕಾಡಿಗೆ ಹೋಗಬೇಕಾಗಿಲ್ಲ, ಸಮಾಜದಲ್ಲಿದ್ದುಕೊಂಡೇ ಅಂತರಂಗ ಶುದ್ಧಿಯನ್ನು ಸಾಧಿಸಿಬಹುದು. ಜೊತೆ ಜೊತೆಗೆ ಬಹಿರಂಗ ಶುದ್ಧಿಯೂ ಆಗುತ್ತದೆ. ಸಮಾಜದ ನೆಲೆಯಲ್ಲಿ ಬಹಿರಂಗ ಶುದ್ಧಿಯು ಹೆಚ್ಚು ಹಿರಿಮೆಯನ್ನು ಪಡೆದುಕೊಳ್ಳುತ್ತದೆ, ಯಾಕೆಂದರೆ ಸಮಾಜದಲ್ಲಿ ಒಬ್ಬ ಬಹಿರಂಗ ಶುದ್ಧಿಯನ್ನು ಸಾಧಿಸಿದರೆ ಅದರ ಪ್ರಭಾವ ಇನ್ನೊಬ್ಬನ ಮೇಲಾಗಿ ಆತನು ಬಹಿರಂಗ ಶುದ್ಧಿಯನ್ನು ಸಾಧಿಸಬಹುದು. ಬಹಿರಂಗ ಶುದ್ಧಿಯಾಗುವಾಗ ಅಂತರಂಗ ಶುದ್ಧಿಯು ತಾನಾಗಿಯೇ ಆಗುತ್ತದೆ. ಅದೇ ಈ ವಚನದ ತಿರುಳಾಗಿರುತ್ತದೆ.
ಒಂದು ಕೂಡಣದ ಏಳಿಗೆ ಎಂದರೆ ಏನು? ಎಂದು ಪ್ರಶ್ನೆ ಹಾಕಿಕೊಂಡರೆ, ಪ್ರತಿಯೊಬ್ಬರು ತಮ್ಮ ಏಳಿಗೆಯೇ ಕೂಡಣದ ಏಳಿಗೆ ಎಂದು ಎನಿಸದಿರದು. ಹಾಗಾಗಿ, ಮನುಷ್ಯನು ತನ್ನ ಒಳಿತು ಸಮಾಜದ ಒಳಿತಿನಲ್ಲಿ ಅಡಕವಾಗಿದೆ ಎಂದು ತಿಳಿಯಬೇಕಾಗುತ್ತದೆ. ಹಾಗೆ, ತಿಳಿದಾಗ ಮಾತ್ರ ನಾವು ಈ ಕಾಲದಲ್ಲೂ ಎದುರಿಸುತ್ತಿರುವ ಹಲವು ತೊಂದರೆಗಳಾದ ಶೈಕ್ಷಣಿಕ, ಹಣಕಾಸಿನ, ಸಾಮಾಜಿಕ, ರಾಜಕೀಯ, ವಲಯಗಳಲ್ಲಿ ನಮಗೆ ಪರಿಯಾರೋಪಾಯಗಳು ದೊರೆಯುತ್ತದೆ. ಮಂಡದಿಯಾಳ್ವಿಕೆ ಇಲ್ಲವೆ ಮಂಡದಿಯಾಳ್ವಿಕೆಯ ಮೇಲೆ ನಿಂತ ಚಿಂತನೆಗಳು ಕೂಡ ಈ ವಿಚಾರವನ್ನು ಎತ್ತಿ ಹಿಡಿಯುತ್ತವೆ, ಯಾಕೆಂದರೆ ಮಂದಿ ದಿಯಾಳ್ವಿಕೆಯು ಒಟ್ಟಾರೆಯಾಗಿ ಸಮಾಜದ ಒಳಿತನ್ನೆ ಬಯಸುತ್ತದೆ.

 

ಶ್ರೀಮತಿ ರೇಖಾ ಶಿವಯೋಗಿ ವಡಕಣ್ಣವರ್.
ಲಕ್ಷ್ಮೇಶ್ವರ.

Don`t copy text!