ವೇದ ಶಾಸ್ತ್ರ ಶ್ರುತಿ ಸ್ಮೃತಿಗಳು ಸ್ತುತಿಸಲರಿಯವು
ಅಂಬರದಲಾಡುವ ತುಂಬಿಯ ಬಿಂಬದ ಕಂಬನಿಯೊಳಗಣ
ರತ್ನದ ಬಯಕೆಯಾದ್ಯಂತವನೇನೆಂಬೆನಯ್ಯಾ?
ವೇದ ಶಾಸ್ತ್ರ ಶ್ರುತಿ ಸ್ಮೃತಿಗಳು ಸ್ತುತಿಸಲರಿಯವು
ನಾದವಲ್ಲ ಸುನಾದದ ನಿಲವಲ್ಲ ಭೇದಿಸುವಡೆ ಅಗಮ್ಯ ನೋಡಾ!
ಸೊಲ್ಲಿಲ್ಲದ ಸೊಮ್ಮಿಲ್ಲದ ಘನವನೇನೆಂಬೆನು?
ಎಂತು ಮರೆವೆನಯ್ಯಾ ಎನ್ನ ಅಜಗಣ್ಣ ತಂದೆಯನು? -ಮುಕ್ತಾಯಕ್ಕ
ಮುಕ್ತಾಯಕ್ಕ ಕಲ್ಯಾಣ ನಾಡಿನ ಬಹು ದೊಡ್ಡ ವಚನಕಾರ್ತಿ . ಅವಳು ಗದಗ ಜಿಲ್ಲೆಯ ಲಕ್ಕುಂಡಿ ಗ್ರಾಮದವಳು . ಮೌನ ಯೋಗಿ ನಿಜ ಶರಣ ಅಜಗಣ್ಣನ ತಂಗಿ .
ಮುಕ್ತಾಯಕ್ಕಳು ದೇವದುರ್ಗ ತಾಲೂಕಿನ ಮೊಸರಕಲ್ಲಿಗೆ ಮದುವೆಯಾಗಿ ಹೋಗುವ ಸಂದರ್ಭದಲ್ಲಿ ತಂಗಿ ತನ್ನ ಬಿಟ್ಟು ಹೋಗುವಳೆಂಬ ಭಾವದಿಂದ ಬಿಕ್ಕಿ ಬಿಕಿ ಮಗುವಿನಂತೆ ಅಳ ಹತ್ತಿದನು. ತಂಗಿ ಮುಕ್ತಾಯಕ್ಕ ತನ್ನೊನ್ದಿಗೆ ಅಣ್ಣ ಅಜಗಣ್ಣನನ್ನು ಕರೆದುಕೊಂಡು ಹೋದಳು.
ಅವರಿಬ್ಬರೂ ಅಲ್ಲಮರ ಮೂಲಕ ಕಲ್ಯಾಣ ನಾಡಿನ ಅನುಭವ ಮಂಟಪ ಎಂಬ ಆಧ್ಯಾತ್ಮಿಕ ಸಂಸತ್ತಿನಲ್ಲಿ ಪಾಲ್ಗೊಳ್ಳುತ್ತಾರೆ .
ಒಂದು ದಿನ ಅಣ್ಣ ಅಜಗಣ್ಣ ಐಕ್ಯವಾದಾಗ ತಂಗಿ ಮುಕ್ತಾಯಕ್ಕ ತನ್ನ ನೋವನ್ನು ಈ ವಚನದಲ್ಲಿ ಹೇಳಿಕೊಂಡಿದ್ದಾಳೆ.
ಅಂಬರದಲಾಡುವ ತುಂಬಿಯ ಬಿಂಬದ ಕಂಬನಿಯೊಳಗಣ ರತ್ನದ ಬಯಕೆಯಾದ್ಯಂತವನೇನೆಂಬೆನಯ್ಯಾ?
ಆಕಾಶದಲ್ಲಿ ಹಾರಾಡುವ ದುಂಬಿಯ ಬಿಂಬವು ಚಿತ್ರಣವು ಕಣ್ಣೀರಿನ ರತ್ನದಂತಿರುವ ಹನಿಯೊಳಗಿನ ಬಯಕೆಯಂದಿತ್ತು. ಕಾರಣ ಮೌನ ಯೋಗಿ ಅಜಗಣ್ಣ ಒಳಗೊಳಗಿನ ಮಾತಿಗೆ ನುಡಿಗೆ ಸ್ಪಂದಿಸುವ ಬಹು ಎತ್ತರದ ವ್ಯಕ್ತಿತ್ವವಾಗಿತ್ತು.ದುಂಬಿಯ ಚಿತ್ರಣವು ಹೇಗೆ ಕಣ್ಣೀರಿನ ಹನಿ ಸೆರೆ ಹಿಡಿಯಬಲ್ಲದೋ ಹಾಗೆ ಮೌಲ್ಯಯುತವಾದ ದರ್ಶನವನ್ನು ಭಕ್ತ ತನ್ನೊಳಗೆ ಕಾಣಬೇಕು ,
ವೇದ ಶಾಸ್ತ್ರ ಶ್ರುತಿ ಸ್ಮೃತಿಗಳು ಸ್ತುತಿಸಲರಿಯವು
ಇಂತಹ ಉದಾತೀಕರಣದ ಪರಿಕಲ್ಪನೆಯನ್ನು ಹೊಂದಿದ ಶರಣ ಸಿದ್ಧಾಂತವು ಶ್ರೇಷ್ಠ ಹಾಗೂ ಸಾರ್ವಕಾಲಿಕ ಮೌಲ್ಯಯುತವಾದದ್ದು . ವಿಶಾಲವಾದ ಆಕಾಶದೊಳಗಿನ ಪುಟ್ಟ ಭ್ರಮರ ಮತ್ತು ಅದರ ಪುಟ್ಟ ಪ್ರತಿಬಿಂಬವನ್ನು ಕಣ್ಣಿನೊಳಗಿನ ಕಂಬನಿ ಹನಿಯಲ್ಲಿ ಕಾಣುವುದು ಎಂತಹ ಅಘಾಧ ಅನುಭವ ಅಮೂಲ್ಯವಾದದ್ದು.ಇಂತಹ ಸರಳ ಮತ್ತು ಸ್ಪಷ್ಟವಾದ ಸಂದೇಶವನ್ನು ಶರಣರು ಕೊಟ್ಟಿದ್ದಾರೆ . ಇಂತಹ ಮೌಲ್ಯಯುತವಾದ ಅನುಭಾವವನ್ನು ವೇದ ಶಾಸ್ತ್ರ ಶ್ರುತಿ ಸ್ಮೃತಿಗಳು ಸ್ತುತಿಸಲರಿಯವು . ವೇದ ಶಾಸ್ತ್ರ ಶ್ರುತಿ ಸ್ಮೃತಿಗಳು ಅರಿಯಲು ತಿಳಿಯಲು ಸಾಧ್ಯವಾಗುತ್ತಿಲ್ಲ. ಕಾರಣ ಸಂಸ್ಕೃತ ಭೂಯಿಷ್ಠವಾದ ಕ್ಲಿಷ್ಟಕರ ಉಕ್ತಿಗಳಲ್ಲಿ ವ್ಯಕ್ತವಾದ ವೇದ ಶಾಸ್ತ್ರ ಶ್ರುತಿಗಳು ಪರಿಸರ ಆಕಾಶ ನಿಸರ್ಗದತ್ತವಾದ ಕ್ರಿಯೆಗಳನ್ನು ದಾಖಲಿಸುವಲ್ಲಿ ಜನಮುಖಿ ಅಭಿಯಾನದಲ್ಲಿ ಪಾಲ್ಗೊಳ್ಳಲಾಗುತ್ತಿಲ್ಲ ಕೇವಲ ಪಂಡಿತ ಪಾಮರರ ಮಧ್ಯೆ ಚರ್ಚೆಗೆ ವಾದಕ್ಕೆ ಸೀಮಿತವಾದ ವೇದ ಶಾಸ್ತ್ರ ಶ್ರುತಿಗಳು ನಿಜವಾದ ಅನುಭವವನ್ನು ಅರಿಯುವಲ್ಲಿ ವಿಫಲವಾಗಿವೆ.
ನಾದವಲ್ಲ ಸುನಾದದ ನಿಲವಲ್ಲ ಭೇದಿಸುವಡೆ ಅಗಮ್ಯ ನೋಡಾ!
ಶರಣರ ಅನುಭಾವವು ಶಿಶು ಕಂಡ ಕನಸು, ಉರಿಯುಂಡ ಕರ್ಪುರ ನೀರೊಳಗೆ ಅಡಗಿದ ಪ್ರತಿ ಬಿಂಬ ಅಂಧಕನ ಕೈ ಅಂಧಕ ಹಿಡಿದಂತೆ .ಹೀಗೆ ಅನುಭಾವಿಯಿಂದ ಹೊರಡುವ ಅನುಭೂತಿಯ ಅಭಿವ್ಯಕ್ತಿ ವಚನಗಳಲ್ಲಿ ಕಾಣುತ್ತವೆ . ಅವು ಜಂಗಮ ಚೇತನದ ಅರಿವಿನ ಬೀಜಗಳು. ಇಂತಹ ಅನುಭಾವು ನಾದವನ್ನು ಮಾಡುವದಿಲ್ಲ ಸುನಾನಂದದ ನಿಲುವನ್ನು ಹೇಳುವದಿಲ್ಲ ,ಅಂಬರದ ದುಂಬಿಯ ಬಿಂಬವನ್ನು ಭೇದಿಸದೊಡೆ ಅದು ಅಗಮ್ಯ ಜ್ಞಾನವನ್ನು ನೀಡುತ್ತದೆ. ಆಕಾಶವು ವಿಶಾಲ ಸ್ಥಿರತೆಯ ಸಂಕೇತವಾಗಿ ಕಂಡರೆ ದುಂಬಿ ವಿಷಯಾದಿ ಚಂಚಲತೆಯ ಸಂಕೇತ ಇವುಗಳ ಕೃತಕ ಚಿತ್ರಣವನ್ನು ರತ್ನ ಕಣ್ಣೀರಿನ ಅಮೃತ ಹನಿಗಳಲ್ಲಿ ಕಾಣುವುದೇ ಅನುಭಾವ ಅರಿವು ಜ್ಞಾನ ಅರಿವಿನ ಅನುಸಂಧಾನ .ಈ ಭಾವ ಪ್ರಾಣ ಜಂಗಮಮಯವಾದ ಅಜಗಣ್ಣನ ನಿಲುವು ಅಗಮ್ಯ ,
ಸೊಲ್ಲಿಲ್ಲದ ಸೊಮ್ಮಿಲ್ಲದ ಘನವನೇನೆಂಬೆನು?
ಇಂತಹ ಅಪೂರ್ವವಾದ ಜ್ಞಾನವನು ಕರುಣಿಸಿದ ಅಣ್ಣ ಅಜಗಣ್ಣನ ನಿಲುವಿಗೆ ನಾನು ಸೊಲ್ಲಿಲ್ಲದ ಸೊಮ್ಮಿಲ್ಲದ ಘನವೆಂಬೆನು . ಮೌನವನ್ನೇ ಜಪ ತಪ ಮಾಡಿಕೊಂಡಿದ್ದ ಅಜಗಣ್ಣ ತಾನು ಕಂಡುಂಡ ಬದುಕಿನ ಮೌಲ್ಯ ಅನುಭಾವವನ್ನು ಒಂಟಿಯಾಗಿ ಅನುಭವಿಸಿದವನು . ತನ್ನ ವಚನಗಳ ಮೂಲಕ ಜಂಗಮ ಸಮಾಜಕ್ಕೆತತ್ವಗಳನ್ನು ಉಣ ಬಡಿಸಿದವನು.
ಇಂತಹ ಅಮೂಲ್ಯ ವ್ಯಕ್ತಿತ್ವದ ಅಣ್ಣನ ನಿಲುವಿಗೆ ಯಾವುದೇ ಪ್ರಶ್ನೆ ಮಾಡದೆ ಸೊಲ್ಲು ಸೊಮ್ಮಿಲ್ಲದೆ ಘನವೆಂದು ಒಪ್ಪಿಕೊಳ್ಳುವೆನು ಎಂದಿದ್ದಾಳೆ ಮುಕ್ತಾಯಕ್ಕ.
ಎಂತು ಮರೆವೆನಯ್ಯಾ ಎನ್ನ ಅಜಗಣ್ಣ ತಂದೆಯನು?
ಇಂತಹ ಅನುಭವ ಜ್ಞಾನ ಅರಿವಿನ ಮಹಾ ಮೊತ್ತವಾದ ಅಜಗಣ್ಣನ ಘನವನ್ನು ಹಾಗು ಅಜಗಣ್ಣನ ವ್ಯಕ್ತಿತ್ವವನ್ನು ಹೇಗೆ ಮರೆಯಲು ಸಾಧ್ಯ?
ಮುಕ್ತಾಯಕ್ಕ ಅಣ್ಣ ಅಜಗಣ್ಣನ ಅಗಲುವಿಕೆಯಿಂದ ಬಳಲಿದರೂ , ಜಡ ಸ್ಥಾವರ ಶರೀರಕ್ಕೆ ಪರಿತಪಿಸದೆ ಅಜಗಣ್ಣನೊಳಗಿನ ಮಹಾ ಘನ ಬೆಳಕಿನ ಅನುಭವಕ್ಕೆ ಮರುಗಿದ್ದಾಳೆ.
ಮುಂದೆ ಅಲ್ಲಮರು ಮುಕ್ತಾಯಕ್ಕಳಿಗೆ ಸಮಾಧಾನ ಪಡಿಸಲು ಬಂದಾಗ . ಅಜಗ್ಗಣ್ಣ ತಂದೆ ತನಗೆ ತಾಯಿ ಕೂರ್ಮವಿದ್ದ ಹಾಗೆ. ಕೂರ್ಮದ ಶಿಶುವಿನ ಸ್ನೇಹದಂತಿರಬೇಕಲ್ಲವೇ ಆರೂಢಗೆಟ್ಟೆಯಲ್ಲೋ ಅಜಗಣ್ಣಾ ಎಂದಿದ್ದಾಳೆ . ಕೂರ್ಮ ಅಂದರೆ ಆಮೆ ( TURTLE ) ಸಂಕಲ್ಪ ಯೋಗದ ಪ್ರತಿರೂಪ . ಆಮೆಗೆ ಮೊಲೆಗಳಿಲ್ಲ ಹಕ್ಕಿಯ ಹಾಗೆ ಚುಂಚು ಇಲ್ಲ.ಅದೇ ಹುಟ್ಟಿದ ಮರಿ ಆಮೆಯನ್ನು ಕಣ್ಣು ತುಂಬಾ ನೋಡುತ್ತದೆ ಆಗ ಪ್ರೇರಿತಗೊಂಡ ಮರಿ ಆಮೆ ದೀರ್ಘ ಉಸಿರಿನ ಪ್ರಸನ್ನತೆಯೊಂದಿಗೆ ತನ್ನ ಹೊಟ್ಟೆ ತುಂಬಿಸಿಕೊಳ್ಳುತ್ತದೆ . ಆಮೆಗಳು ಇನ್ನೂರು ಮುನ್ನೂರು ವರ್ಷಗಳ ಅವರೆಗೆ ಬದುಕುತ್ತವೆ .ಕಾರಣ ಸಂಕಲ್ಪ ಯೋಗದ ದೀರ್ಘ ಪ್ರಾಣಾಯಾಮದ ಪ್ರಸನ್ನತೆಯೇ ಆಹಾರ .
ಇದು ಜಾಗತಿಕ ವೈಜ್ಞಾನಿಕ ಸತ್ಯ . ಅದೇ ಕಾರಣಕ್ಕೆ ಆಮೆಯನ್ನು ಪ್ರತಿ ಮಂದಿರದಲ್ಲಿ ಇಟ್ಟಿರುತ್ತಾರೆ. ಮುಕ್ತಾಯಕ್ಕಳಿಗೆ ಅಣ್ಣ ಅಜಗಣ್ಣಾ ತಂದೆ ತಾಯಿ ಆಮೆಯಾಗಿದ್ದನು. ಇಂತಹ ಮಹಾ ಮೇರು ವ್ಯಕ್ತಿಯ ಘನವನ್ನು ಹೇಗೆ ಮರೆಯಲು ಸಾಧ್ಯ ? ಎಂದು ಪ್ರಶ್ನಿಸಿದ್ದಾಳೆ ಮುಕ್ತಾಯಕ್ಕ.
ಶರಣರ ಉದಾತ್ತೀಕರಣದ ಪರಿಕಲ್ಪನೆಯಲ್ಲಿ ನಿಸರ್ಗದತ್ತವಾದ ಸಹಜ ಜೈವಿಕ ಭೌತಿಕ ಮಾನಸಿಕ ತೊಳಲಾಟವನ್ನೂ ಸಹಿತ ಅನುಭಾವದ ಒರೆಗಲ್ಲಿಗೆ ಹಚ್ಚುವ ವ್ಯವಧಾನ ಕಂಡುಕೊಂಡಿದ್ದಾರೆ. ಹುಟ್ಟು ಸಾವು ಅರಿವು ಮರೆವು ಕೂಡುವಿಕೆ ಅಗಲುವಿಕೆ ಸರಳ ಹಾಗು ಸಹಜ ಆದರೆ ಅವುಗಳ ಹಿಂದಿನ ಮೌಲ್ಯಯುತ ತತ್ವಗಳು ಆದರ್ಶ ಹಾಗು ಅನುಕರಣೀಯವಾಗಿವೆ.
–ಡಾ.ಶಶಿಕಾಂತ.ಪಟ್ಟಣ ರಾಮದುರ್ಗ