ಗುರು ಮಹಾಂತರು.

ಗುರು ಮಹಾಂತರು

ಜೋಳಿಗೆ ಹಿಡಿದಾರ
ಮನ-ಮನೆಗೆ ನಡದಾರ
ಬಾಳನು ಸುಡುವ
ವ್ಯಸನದ ಬೆಂಕಿಯ
ಆರಿಸುತ ನಿಂತಾರ.

ಲಿಂಗವ ಹಿಡಿದ ಸಂತ
ಶಿವಯೋಗಿ ಶ್ರೀ ಮಹಾಂತ
ಶರಣರ ವಚನವ
ಸಾರುತ ಬಂದ
ಕಲ್ಯಾಣದ ಸೂರ್ಯನೀತ.

ಚಿತ್ತರಗಿಯ ಜ್ಯೋತಿ
ಇವರಿಗಿಲ್ಲ ಯಾವ ಸಾಟಿ
ಬಸವನ ಧರ್ಮವ
ಕಲಿಸುತ ನಡೆದರು
ನಾಡ ನಾಡಿ ಮೀಟಿ.

ಗುಡಿ-ದೇಗುಲ ಹೊಲ್ಲ
ಇಷ್ಟಲಿಂಗವೇ ನಮಗೆಲ್ಲ
ನೂರು ನೇಮದಿ
ದಿನಗಳ ಕಳೆದರೆ
ಜೊಳ್ಳಾಗುವದು ಬಾಳು ಎಲ್ಲ.

ಉರಿಯನೇ ಉಟ್ಟಾರ
ಮೈಮನಗಳ ದುರ್ಗುಣವನು
ಸುಟ್ಟಾರ
ಮನದಲಿ ತುಂಬಿದ
ಪರಿಪರಿ ಕಸವನು ಬೇಡಲು
ಬಾಗಿಲಿಗೆ ಬಂದಾರ.

ಅನ್ನ-ಹೊನ್ನು ಬೇಡ
ಯೋಗಿಗೆ ಕಾಯವೆಂಬುದಿಲ್ಲ
ಭಕ್ತರ ಬಾಳಿನ
ಕುಶಲವ ಕಾಯುವ
ಕಾಯಕವು ತನ್ನದೆಂದ.

ನೂರು ವ್ಯಸನ ಬೇಡ
ಶರಣ ಸಂಗವ ಬಿಡಬೇಡ
ಮೈ-ಮನಗಳ ಚಟಗಳ ನೀಡಿರಿ
ನಿಮ್ಮಯ ನಗುವಿನ
ಬಾಳಿಗೆಂದ.

ಎಲ್ಲೆಡೆ ಕರುಣೆಯು ತುಂಬಿರಲಿ
ಕೊಲ್ಲುವ ಗುಣವದು ದಹಿಸಿರಲಿ
ಜಗದ ಬಾಳಲಿ ನೆಮ್ಮದಿ ಕಾಣುವ
ಶಿವಗುಣವದು ಬೆಳಗಿರಲಿ.

ಧರ್ಮ ದಂಡ ಹಿಡಿದು
ಜೀವದ ಏಳಿಗೆಗೆ ದುಡಿದು
ವಿರಾಗಿ ಅಲ್ಲಮ,
ಕರುಣಿ ಬಸವರ
ರೂಪವನೇ ತಳೆದು,
ಶಿವಯೋಗದಿ ಬೆರೆದ
ಮಹಾಂತ ಮಹಿಮ
ಜಗಕೆ ಬಂದನಿಂದು.

-ಕೆ.ಶಶಿಕಾಂತ
ಲಿಂಗಸೂಗೂರ.

Don`t copy text!