ಮರೆಯಲಾಗದ ಮಹಾನುಭಾವರು

ಹಲಸಂಗಿ ಗೆಳೆಯರ ಬಳಗದ ನಿರ್ಮಾತೃ
ಮಧುರ ಚೆನ್ನರು

ಉತ್ತರ ಕರ್ನಾಟಕ ಭಾಗದಲ್ಲಿ ಕಾವ್ಯಪ್ರೀತಿ ಬೆಳೆಸುವ ಕೆಲಸ ಮಾಡಿದ ಹಲಸಂಗಿ ಗೆಳೆಯರ ಬಳಗವನ್ನು ಕಟ್ಟಿದ ಮಧುರ ಚೆನ್ನ ಅವರ ಕೆಲಸ ಬಹಳ ದೊಡ್ಡದು. ಬೇಂದ್ರೆ , ಸಿಂಪಿಲಿಂಗಣ್ಣ, ಕಾಪಸೆ ರೇವಪ್ಪ ಇನ್ನೂ ಹಲವು ಕವಿಗಳಿಗೆ ಕಾವ್ಯ ರಚನೆಗೆ ಪ್ರೇರಣೆ ಒದಗಿಸಿದ ಕೀರ್ತಿ‌ ಈ ಗೆಳೆಯರ ಬಳಗದ್ದು. ಅಲ್ಲದೇ ಆ ಮೂಲಕ ಮಹರ್ಷಿ ಅರವಿಂದರ ಪ್ರಭಾವಕ್ಕೊಳಗಾದವರೂ ಹಲವರು.
ಮಧುರಚೆನ್ನ ಎಂಬ ಕಾವ್ಯನಾಮ ಹೊತ್ತ ಚೆನ್ನಮಲ್ಲಪ್ಪ ಗಲಗಲಿಯವರು ೧೯೦೭ ರ ಜುಲೈ ೩೧ ರಂದು ವಿಜಾಪುರದ ಇಂಡಿ ತಾಲೂಕಿನ ಹಲಸಂಗಿ ಎಂಬ ಗ್ರಾಮದಲ್ಲಿ ಜನಿಸಿದರು. ಮುಲ್ಕಿ ಪರೀಕ್ಷೆಯಲ್ಲಿ ಜಿಲ್ಲೆಗೇ ಪ್ರಥಮ ಸ್ಥಾನ ಪಡೆದು ಪಾಸಾದರು. ಶಾಲೆಯ ವಿದ್ಯಾಭ್ಯಾಸ ಹೆಚ್ಚಿಲ್ಲದಿದ್ದರೂ ಪಂಡಿತರಾದ ಕೊಣ್ಣೂರು ಹಣಮಂತರಾಯರಿಂದ ಹಳಗನ್ನಡ, ಸಂಸ್ಕೃತ ಇಂಗ್ಲಿಷ ಭಾಷೆಗಳನ್ನು ಕಲಿತ ಮಧುರಚೆನ್ನರು ತಮ್ಮ ಸ್ವಂತ ಅಧ್ಯಯನದ ಬಲದಿಂದಲೇ ಕಾವ್ಯ, ಜಾನಪದ, ಆಧ್ಯಾತ್ಮಿಕ ಅಧ್ಯಯನ, ಸಂಶೋಧನೆಗಳ ಕ್ಷೇತ್ರದಲ್ಲಿ ಸಾಕಷ್ಟು ಬರವಣಿಗೆ ಕಾರ್ಯ ನಡೆಸಿದರು.

ಅರವಿಂದರ ಸಾಹಿತ್ಯವನ್ನೂ ಅಭ್ಯಸಿಸಿದರು. ಸಿಂಪಿ ಲಿಂಗಣ್ಣನವರ ಜೊತೆ ಅರವಿಂದ ಮಾತಾ ಅವರ ಕೃತಿಗಳನ್ನು ಅನುವಾದಿಸಿದರು. ಅವರ ಗೆಳೆಯರ ಬಳಗದ ಚಟುವಟಿಕೆಗಳು ಬಹಳಷ್ಟು ಜನರನ್ನು ಕಾವ್ಯ ಸಾಹಿತ್ಯದ ಕಡೆಗೆ ಆಕರ್ಷಿಸುವ ಕೆಲಸ ಮಾಡಿತು.
ತಮ್ಮ ೧೯ ನೇ ವಯಸ್ಸಿನಲ್ಲೇ ಶಿಲಾಶಾಸನಗಳ ಸಂಶೋಧನೆ, ಜನಪದ ಅಧ್ಯಯನಕಾರ್ಯಗಳನ್ನು ಕೈಕೊಂಡ ಮಧುರಚೆನ್ನರು ವಿಜಾಪುರ ಶಾಸನ, ಪಂಪ ಬರೆದ ವಿಜಾಪುರ ಶಿಲಾಲಿಪಿ, ಪ್ರಾಚೀನ ಕಾಲದ ನಟ- ಕವಿ, ಅರ್ಜುನವಾಡದ ಶಾಸನ ಮೊದಲಾದ ಕೃತಿಗಳನ್ನು ರಚಿಸಿದರು. ವಿದ್ಯಾರಣ್ಯರ ಬಗ್ಗೆ ಸಿಂಪಿಯವರೊಡನೆ ಕನ್ನಡಿಗರ ಕುಲಗುರು, ಅರವಿಂದರ ಪೂರ್ಣಯೋಗ, ಮಾತೃ ವಾಣಿ, ಟಾಲಸ್ಟಾಯರ ಆತ್ಮಕಥನ , ಪೂರ್ಣಯೋಗದ ಪಥದಲ್ಲಿ ( ಅರವಿಂದರ ಯೋಗವಿಚಾರಗಳು) , ಧರ್ಮಕ್ಷೇತ್ರೇ ಕುರುಕ್ಷೇತ್ರೇ, ಪೂರ್ವ ರಂಗ ವೆಂಬ ಆಧ್ಯಾತ್ಮಿಕ ಆತ್ಮಕಥನ, ವಿಸರ್ಜನ ಎಂಬ ಟಾಗೋರರ ನಾಟಕ, , ಜಾನಪದ ಸಾಹಿತ್ಯ ಸಂಗ್ರಹಗಳು , ನೋಂಪಿ, ಕೆಸರೊಳಗಿನ ಕಮಲ, ರೋಹಿಣಿ, ನನ್ನ ನಲ್ಲ ಕವನ ಸಂಕಲನಗಳು ಹೀಗೆ ಸಾಕಷ್ಟು ಸಾಹಿತ್ಯ ಕೃತಿಗಳನ್ನು ನೀಡಿದರು.
೯ ನೇ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ , ಸೊಲ್ಲಾಪುರದಲ್ಲಿ ಜರುಗಿದ ೩೩ ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕವಿಗೋಷ್ಠಿ ಅಧ್ಯಕ್ಷತೆ ಗೌರವ ಅವರಿಗೆ ಲಭಿಸಿತು. ೧೯೫೩ ಅ. ೧೫ ರಂದು ನಿಧನರಾದ ಮಧುರಚೆನ್ನರು ತಮ್ಮ ಗೆಳೆಯರ ಬಳಗ ಮತ್ತು ತಮ್ಮ ಅಮೂಲ್ಯ ಕೃತಿಗಳ ಮೂಲಕ ಮಧುರವಾದ ನೆನಪುಗಳನ್ನು ಬಿಟ್ಟುಹೋಗಿದ್ದಾರೆ.

ಎಲ್. ಎಸ್. ಶಾಸ್ತ್ರಿ

Don`t copy text!