“ಗತಿ” (ನಾಟಕ)
ಕರ್ತೃ : ಎಸ್ ಎನ್ ಸೇತುರಾಮ್
“ಗತಿ”
ಬದುಕಿನ ಬದಲಾವಣೆಗೆ ಏನೋ ಒಂದು ದಾರಿ ಇಲ್ಲೈತಿ.
“ಗತಿ” ಎಲ್ಲರೂ ನೋಡಲೇಬೇಕಾದ ನಾಟಕ. ಎಸ್ ಎನ್ ಸೇತುರಾಮ್ ಅವರ ರಚನೆ ಮತ್ತು ನಿರ್ದೇಶನದಲ್ಲಿ ಮೂಡಿಬಂದ ಉತ್ಕೃಷ್ಟ ಪದಗಳುಳ್ಳ ಅಷ್ಟೇ ಸುಸ್ಪಷ್ಟವಾಗಿ ಸರಾಗವಾದ ವಾಚನದೊಂದಿಗೆ ಒಂದು ಗಂಟೆಗೂ ಹೆಚ್ಚು ಕಾಲ ನಮ್ಮನ್ನು ಮಂತ್ರಮುಗ್ಧರನ್ನಾಗಿಸಿ ತನ್ನೊಳಗೆ ಕೂರಿಸಿಕೊಳ್ಳುವ ನಾಟಕ.
ಬದುಕಿನ ನಿರ್ದಯತೆಯನ್ನು ತೋರಿಸುವ ಸಾಹಿತ್ಯ ಇದ್ದು, ಜೀವ ಅರಸುವ ಆದರೆ ಸಿಗದ ನೆಮ್ಮದಿಯನ್ನು, ಸಿಕ್ಕರೂ ಅದನ್ನು ಅಮಾನವೀಯವಾಗಿ, ಅನೈತಿಕವಾಗಿ ಸಾವಿಗೆ ದೂಡವ ಕಲುಷಿತ ಮನಸಿನ ಅನಾವರಣ, ಬದುಕು ಬೇರೆ ಬರಹ ಬೇರೆ ಎನ್ನು ಸಾಹಿತಿ ಶಿಕ್ಷಕನ ನೀಚತನ, ಎಲ್ಲ ಸುಖಿಸಿ ಸಾವಿನ ಸೂಚನೆ ಇದ್ದೂ ಅನೈತಿಕ ಸಂಬಂಧಕ್ಕೆ ಸಂಯಮ ಕಳೆದುಕೊಂಡು ಬಸಿರಾದ ಹೆಂಡತಿಯ ಬೆತ್ತಲೆತನ, ನೌಕರಿಯ ಗೋಜಿನಲ್ಲಿ ಮನೆಯನ್ನು ಸ್ಮಶಾನ ಮೌನವಾಗಿಸಿದ ಮಗ, ಸೊಸೆ. ಮೊಮ್ಮಗಳು ಅದೆಷ್ಟೋ ಬಾರಿ ಸ್ವಂತ(ಅಲ್ಲದ) ಚಿಕ್ಕಪ್ಪನ ಕ್ರೌರ್ಯದ ತೆಕ್ಕೆಯಲ್ಲಿ ಒಲ್ಲದ ಮನದಿಂದ ಕರಗಿ, ಬೆಂಡಾಗಿ ಹೃದಯವನ್ನು ತುಂಡು ಮಾಡಿಕೊಂಡರೂ ಅದರ ಭಾವನಾತ್ಮಕ ನೆತ್ತರಿನ ಹರಿವು ತನ್ನವರಿಗೆ ತಾಗದೇ ಹೋದದ್ದಕ್ಕೆ ದುಃಖಿಸುವ ಪರಿಯ ಚಿತ್ರಣ. ಆಸ್ಪತ್ರೆ, ಮನೆ, ಅಪ್ಪನ ಅಹಂಕಾರದ ಹೊಡೆತ, ತಾಯಿಯ ಅಸಹಾಯಕತೆಯ ಮಿಡಿತ, ಅಕ್ಕಂದಿರ, ಮತ್ತು ತನ್ನ ಅಧೈರ್ಯದ ಹೃದಯ ಬಡಿತ… ಎಲ್ಲವೂ ನೋಡುಗನ ಮನಸಿಗೆ ಕೊರೆಯುತ್ತಲೇ ಸಾಗುತ್ತವೆ.
ಸೇತುರಾಮ್ ಅವರು ಸಾಹಿತ್ಯದಲ್ಲಿ ಪದಗಳನ್ನು ಹೇಗೆ ನಾಟುವಂತೆ ಬರೆದಿದ್ದಾರೆಯೋ ಅದನ್ನು ನಾಟಕದಲ್ಲಿ ಅಷ್ಟೇ ಪ್ರಬಲವಾಗಿ ಪ್ರಸ್ತುತ ಪಡಿಸಿದ್ದಾರೆ. ಎರಡೇ ಪಾತ್ರಗಳು ನಾಟಕದಲ್ಲಿ ಕಂಡರೂ ನಾಲ್ಕು ತಲೆಮಾರಿನ ಬದುಕನ್ನು ತೋರಿಸಿಬಿಡುತ್ತಾರೆ. ನಿಜಕ್ಕೂ ನಾಟಕ ನಮ್ಮನ್ನು, ನಮ್ಮ ಬದುಕನ್ನು ಅವಲೋಕನಕ್ಕೆ ದೂಡುತ್ತದೆ. ಸೇತುರಾಮ್ (ತಾತನ ಪಾತ್ರ) ಮತ್ತು ದೀಪಾ(ಮೊಮ್ಮಗಳ ಪಾತ್ರ)ಳ ಅಭಿನಯವಂತೂ ಬಹಳ ಅಮೋಘವಾಗಿ ಮೂಡಿಬಂದಿದೆ. ಮಕ್ಕಳು ಅನುಭವಿಸುವ ನೋವಿಗಿಂತ ಮೊಮ್ಮಕ್ಕಳು ಅನುಭವಿಸುವ ನೋವು ತಾತ, ಅಜ್ಜಿಗೆ ಬಹಳ ಕಾಡುತ್ತದೆ ಎಂದೂ ಸಹ ನಮಗೆ ತಿಳಿಯುತ್ತದೆ. ಬದುಕಿದ್ದಾಗ ಮಕ್ಕಳು ಬಿಡಿಗಾಸು ಖರ್ಚನ್ನು ತಂದೆ ತಾಯಿಗೆ ಮಾಡಲು ಯೋಚಿಸುತ್ತಾರೆ ಸತ್ತ ಮೇಲೆ ಬರವಿಲ್ಲದಂತೆ ಹಣ ವ್ಯಯಿಸುತ್ತಾರೆಂಬ ಮಾತು, ಮನೆಯಲ್ಲಿ ಮಾಡಿದ ಅಡುಗೆ ಮಿಕ್ಕಿದರೆ ಹಿರಿಯರಿಗೆ ಎಂಬ ಮಾತು, ಸತ್ತ ಮೇಲೆ ಮಡದಿಗೆ(ಹೆಣ್ಣಿಗೆ) ತಾಜಮಹಲ್ ಬದುಕಿದ್ದಾಗ ದೌರ್ಜನ್ಯ ಎಂಬ ಭಾವ ಬಹುವಾಗಿ ಕಾಡುತ್ತಲೇ ಹೋಗುತ್ತವೆ.
ಈ ನಾಟಕದ ಬಗ್ಗೆ ಎಷ್ಟು ಮಾತಾಡಿದರೂ ಕಡಿಮೆಯೇ ಎನಿಸುತ್ತದೆ. ಪ್ರತಿಯೊಬ್ಬರೂ ಈ ನಾಟಕವನ್ನು ನೋಡಿ ಅನುಭವಿಸಬೇಕು ಪ್ರಸ್ತುತದ ದುರ್ “ಗತಿ” ಬದಲಾಯಿಸಿಕೊಂಡು ಸದ್ಗತಿಯನ್ನು ಹೊಂದಬೇಕು.
– ವರದೇಂದ್ರ ಕೆ ಮಸ್ಕಿ
– 9945253030
ವರದೇಂದ್ರ ಅವರೇ
ಗತಿ ನಾಟಕದ ಬಗ್ಗೆ ಸಂಕ್ಷಿಪ್ತವಾದರೂ ಒಳ್ಳೆಯ ಒಳ ನೋಟ ಒದಗಿಸಿದ್ದೀರಿ ,
ಧನ್ಯವಾದಗಳು , ನಾಟಕ ಎಲ್ಲಿ ನೋಡಬಹುದು ?
ವಿಶ್ವನಾಥ್ ಶಾಸ್ತ್ರಿ
8197195027