ಬಸವಾದಿ ಶರಣರು ಕಂಡ ಅಷ್ಟಾವರಣಗಳು

ಬಸವಾದಿ ಶರಣರು ಕಂಡ ಅಷ್ಟಾವರಣಗಳು

ಅದ್ಭುತ ಶಿಲ್ಪವನ್ನು ಕಂಡು ಶಿಲ್ಪಿಗೆ ಅಭಿನಂದಿಸಿದಾಗ ಆ ಶಿಲ್ಪಿ ಹೇಳತಾನಂತೆ. ಈ ಶಿಲ್ಪ ಕಲ್ಲಿನಲ್ಲಿ ಮೊದಲೇ ಇತ್ತು. ಅದರ ಸುತ್ತ ಇರುವ ಬೇಡವಾದ ಕಲ್ಲನ್ನು ಮಾತ್ರ ನಾನು ಸರಿಸಿದ್ದೇನೆ ಅಷ್ಟೇ. ಹಾಗೆಯೆ ಬಂಡೆಯೊಂದು ಶಿಲ್ಪಿಯ ಕೈಯಲ್ಲಿ ಸುಂದರವಾದ ಶಿಲ್ಪವಾಗಲೂ ಹಲವಾರು ಏಟಿಗೆ ಒಳಪಡಬೇಕು. ಭಕ್ತನು ಪಂಚಾಚಾರ, ಷಟ್ ಸ್ಥಳ ಮತ್ತು ಅಷ್ಟಾವರಣಗಳೆಂಬ ಉಳಿಯೇಟಿನಿಂದ ತನ್ನನ್ನು ತಾನು ಸಂಸ್ಕಾರಕ್ಕೆ ಒಳಪಡಿಸಿಕೊಂಡಾಗ ಮಾತ್ರ ಶರಣನಾಗಲು ಸಾಧ್ಯ.

ಹಾಗಾದರೆ ಅಷ್ಟಾವರಣಗಳು ಯಾವುವು? ಅವುಗಳ ಪರಿಕಲ್ಪನೆ ಏನು? ಮತ್ತು ಶರಣರು ಕಂಡ ಅಷ್ಟಾವರಣಗಳು ಸಿದ್ಧಾಂತ ತತ್ವವೇನು? ಎನ್ನುವುದರ ಮೂಲಭೂತ ವಿಸ್ತಾರವೇ ಈ ಲೇಖನ.

ಅಷ್ಟಾವರಣಗಳನ್ನು ಗಣಾಚಾರಿ ಚೌಡಯ್ಯನವರು ಒಂದು ವಚನದಲ್ಲಿ ಹೇಳತಾರೆ :

ಗುರುವೇ ಒಂದು ಮುಖ | ಲಿಂಗವೇ ಎರಡು ಮುಖ ||
ಜಂಗಮವೇ ಮೂರು ಮುಖ | ಪಾದೋದಕವೇ ನಾಲ್ಕು ಮುಖ ||
ಪ್ರಸಾದವೇ ಐದು ಮುಖ | ವಿಭೂತಿಯೇ ಆರು ಮುಖ ||
ರುದ್ರಾಕ್ಷಿಯೇ ಏಳು ಮುಖ | ಮಂತ್ರವೇ ಎಂಟು ಮುಖ ||
ಇಂತೀ ಅಷ್ಟಾವರಣಗಳು | ಇರುತಿರಲು ||
ಅನ್ಯ ದೈವಕ್ಕೆ | ಅಡ್ಡ ಬೀಳುವ ||
ಎಡ್ಡ ಸುಳೇಮಕ್ಕಳನ್ನು | ಹರಳಯ್ಯನ ಮನೆಯಲ್ಲಿನ ||
ಎಕ್ಕಡವ ತಂದು | ಒದೊದ್ದು ಬುದ್ಧಿ ಹೇಳೆಂದ ಚೌಡಯ್ಯ ||

ಇಲ್ಲಿ ಅಷ್ಟಾವರಣಗಳಲ್ಲಿ ಅವರಿಗಿರುವ ನಿಷ್ಠೆ ಹೆಪ್ಪುಗಟ್ಟಿದೆ. ಗುರು, ಲಿಂಗ, ಜಂಗಮ ತತ್ವವನ್ನು ತಮ್ಮ ಆಂತರ್ಯದಲ್ಲಿ ಕಂಡು ಇಂಥ ಉದಾತ್ತ ತತ್ವಗಳನ್ನು ಚೌಡಯ್ಯನವರು ಅಪ್ಪಿಕೊಂಡರು, ಒಪ್ಪಿಕೊಂಡರು. ಅಷ್ಟಾವರಣ ನಮ್ಮನ್ನು ಹಾದಿ ತಪ್ಪಿಸುವ ಮಾಯೆಯಿಂದ ಅಥವಾ ಅಜ್ಞಾನದಿಂದ ರಕ್ಷಿಸುವ ಕೆಲಸವನ್ನು ಮಾಡುತ್ತವೆ ಅಷ್ಟಾವರಣಗಳು :

1)ಗುರು
2)ಲಿಂಗ
3)ಜಂಗಮ
4)ವಿಭೂತಿ
5)ರುದ್ರಾಕ್ಷಿ
6)ಮಂತ್ರ
7)ಪಾದೋದಕ
8)ಪ್ರಸಾದ.

ಇವುಗಳು ಶರಣ ಸಿದ್ಧಾಂತದ ಬಹು ಮುಖ್ಯ ತತ್ವಗಳು. ಬಸವಾದಿ ಶರಣರ ದೃಷ್ಟಿಯಲ್ಲಿ ಈ ಒಂದೊಂದು ತತ್ವವೂ ಒಂದೊಂದು ಗುಣಧರ್ಮವನ್ನು ತಿಳಿಸುತ್ತಾ ಭಕ್ತನನ್ನು ಶರಣನನ್ನಾಗಿ ಮಾಡುವಲ್ಲಿ ಬಹು ಮುಖ್ಯ ಪಾತ್ರವನ್ನು ವಹಿಸುತ್ತವೆ. ಅರಿವೇ ಗುರುವಾಗಿ, ಆತ್ಮವೇ ಲಿಂಗವಾಗಿ, ಸಮಷ್ಠೀ ಸಮ್ಯಕ್ ಜ್ಞಾನ ಅಥವಾ ಸುಜ್ಞಾನವೆಂಬ ಸಮಾಜಮುಖಿ ಚಿಂತನೆಯೇ ಜಂಗಮವಾಗಿ, ದೈವೀ ಸಂಪತ್ತೇ ವಿಭೂತಿಯಾಗಿ, ಜ್ಞಾನ ನೇತ್ರವೇ ರುದ್ರಾಕ್ಷಿಯಾಗಿ, ಪ್ರಣವ ನಾದವೇ ಮಂತ್ರವಾಗಿ, ಅಂತಃಕರಣವೇ ಪಾದೋದಕವಾಗಿ, ಪ್ರಸನ್ನ ಚಿತ್ತವೇ ಪ್ರಸಾದವಾಗಿರುತ್ತದೆ.

ಅಂತರಂಗದ ಅರಿವಿಗೆ ಅಷ್ಟಾವರಣಗಳು ಅವಶ್ಯಕ, ಸಹಾಯಕ ಮತ್ತು ಪೂರಕ. ಭವಿಯಿಂದ ಭಕ್ತ, ಭಕ್ತನಿಂದ ಶರಣನಾಗಲು ಅಷ್ಟಾವರಣಗಳ ಸಂಸ್ಕಾರಗಳು ಅತ್ಯಗತ್ಯ. ನಾನ್ಯಾರು ಎಂಬ ಅರಿವು ಮೂಡಿದಾಗ ಅವನು ಆತ್ಮ ಚಿಂತನೆ ಮಾಡುವ ಅನುಭಾವಿ ಆಗುತ್ತಾನೆ. ಅಷ್ಠಾವರಣಗಳ ಆಚರಣೆಗಳು ಬಹಿರಂಗದ ಆಚರಣೆಗಳು ಅಲ್ಲ. ಸ್ಥಾವರಗಳು ಅಲ್ಲ. ಯಾವ ವ್ಯಕ್ತಿಯೂ ಅಲ್ಲ. ಅರಿವು ಮೂಡಿಸುವ ಮತ್ತು ತಾನು ಯಾರು ಎಂದು ತಿಳಿಸುವ ಅಂತರಂಗದ ಆಚರಣೆಗಳು. ಅಷ್ಟಾವರಣಗಳು ಬಾಹ್ಯ ಆಚರಣೆಗಳಾಗದೆ ಅಂತರಂಗದ ಆಚರಣೆ ಆದಾಗ ತಾನಾರೆಂಬ ಅರಿವು ಮೂಡಿ ಆತ್ಮಚಿಂತನೆ ಮಾಡುವವವನು ಅನುಭಾವಿಯಾಗುತ್ತಾನೆ.

ಗುರು
ಗುರು ಎಂದರೆ, ವಚನಗಳ ಪ್ರಕಾರ ಅರಿವನ್ನು ಪಡೆದವನು, ತನ್ನನ್ನು ತಾನು ಅರಿತವನು ಅಥವಾ ಅರಿವೇ ಗುರು. ಅವನು ಯಾವ ಜಾತಿಗೆ ಬೇಕಾದರೂ ಸೇರಿದವನಾಗಿರಬಹುದು. ಅವನಿಗೆ ಮಾತ್ರ ಇತರರಿಗೆ ಬೋಧಿಸುವ ಅಧಿಕಾರವಿದೆ.

ಗುರು ಎಂಬ ಪದದಲ್ಲಿನ “ಗು” ಎಂಬ ಅಕ್ಷರಕ್ಕೆ ಅಜ್ಞಾನವೆಂಬ ಅಂಧಕಾರವನ್ನು ಮತ್ತು “ರು” ಎಂದರೆ ಅಂಧಕಾರವನ್ನು ನಾಶ ಮಾಡುವುದು ಎಂದು ಅರ್ಥೈಸುತ್ತಾರೆ. ಬಸವಾದಿ ಶರಣರಲ್ಲಿನ ಗುರುವಿನ ಕಲ್ಪನೆ ಅದ್ಭುತವಾದ್ದು ಮತ್ತು ಅಮೋಘವಾದದ್ದು. ಅಲ್ಲಮ ಪ್ರಭುಗಳು ತಮ್ಮ ಒಂದು ವಚನದಲ್ಲಿ ಗುರುವಿನ ಕುರಿತು ಎಷ್ಟು ಛಂದ ನಿರೂಪಿಸುತ್ತಾರೆ ನೋಡಿ .

ಇಹವ ತೋರಿದನು ಶ್ರೀಗುರು | ಪರವ ತೋರಿದನು ಶ್ರೀಗುರು ||
ಎನ್ನ ತೋರಿದನು ಶ್ರೀಗುರು | ತನ್ನ ತೋರಿದನು ಶ್ರೀಗುರು ||
ಗುರು ತೋರಿದಡೆ ಕಂಡೆನು | ಸಕಲ ನಿಷ್ಕಲವೆಲ್ಲವ ||
ಗುರು ತೋರಿದಡೆ ಕಂಡೆನು | ಗುರು ಲಿಂಗ ಜಂಗಮ ಒಂದು ಎಂದು ||
ತೋರಿ ಕರಸ್ಥಲದಲ್ಲಿದ್ದನು | ಗುಹೇಶ್ವರಲಿಂಗನು ||

ಇಹ ಪರವೆಲ್ಲವನ್ನೂ ತೋರಿಸುವವನು ಗುರು. ಶಿಷ್ಯನಲ್ಲಿ ಅರಿವನ್ನು ಮೂಡಿಸುವಲ್ಲಿ ತನ್ನನ್ನು ತಾನೇ ಅರ್ಪಿಸಿಕೊಳ್ಳುತ್ತಾನೆ. ಗುರು ನಮಗೆ ಕಳಂಕರಹಿತ ಜ್ಞಾನವನ್ನು ನೀಡತಾನೆ. ಗುರು ಲಿಂಗ ಜಂಗಮದ ಸಾರವನ್ನು ನೀಡತಾನೆ. ಇಷ್ಟೆಲ್ಲವನ್ನೂ ನೀಡುವ ಗುರು ಅತ್ಯಂತ ಶ್ರೇಷ್ಠನೆನಿಸುತ್ತಾನೆ. ಶಿಷ್ಯನ ಬದುಕಿಗೆ ಮಾರ್ಗದರ್ಶಕನಾಗಿ, ಇಷ್ಟಲಿಂಗದ ಕುರುವಿನಲ್ಲಿ ಕರಸ್ಥಳದಲ್ಲಿಯೇ ಕಾಣುವುದು ಅತ್ಯಂತ ವಿಶಿಷ್ಠವಾದದ್ದು. ಗುರು ಕಾರುಣ್ಯ ಶಿಷ್ಯನ ಜೀವನವನ್ನು ಪರಿವರ್ತಿಸಿ, ಪರಿಶುದ್ಧಗೊಳಿಸುತ್ತದೆ. ಇದು ಅಲ್ಲಮ ಪ್ರಭುಗಳು ಗುರುವಿನ ವ್ಯಾಖ್ಯಾನ. ಇಂತಹ ಹಲವಾರು ವಚನಗಳಲ್ಲಿ ಶರಣರು ಗುರುವನ್ನು ವರ್ಣಿಸಿದ್ದಾರೆ.

ಲಿಂಗ

“ಲಿಂಗ” ಎಂಬ ಸಂಸ್ಕೃತ ಪದಕ್ಕೆ ಭಾಷಾ ವ್ಯಾಕರಣದ ಪ್ರಕಾರ “ಲೀನಂ ಅರ್ಥ ಗಮಯತಿ” ಎಂಬ ಉತ್ಪತ್ತಿಯನ್ನು ಹೇಳುತ್ತಾರೆ. ಹುದುಗಿಕೊಂಡಿರುವ ಅರ್ಥವನ್ನು ಹೇಳಲೇ ಬೇಕಾಗುವಂತೆ ಮಾಡುವುದೇ ಲಿಂಗ ಎನಿಸುತ್ತದೆ. ಅಂದರೆ ಹೇಳಬೇಕಾದುದನ್ನು ತಿಳಿಸುವ ಶಬ್ದವೇ ಲಿಂಗ. ಲಿಂಗ ಎಂಬುದಕ್ಕೆ ವ್ಯಾವಹಾರಿಕವಾಗಿ ಸ್ತ್ರೀ ಪುರುಷ ವ್ಯತ್ಯಾಸದ ಸಂಜ್ಞೆ ಎಂಬರ್ಥವೂ ಇದೆ.

“ಶಿವಾನುಭವ ಸೂತ್ರ” ಎನ್ನುವ ಗ್ರಂಥದಲ್ಲಿ “ಮಗ್ಗೆಯ ಮಾಯಿದೇವರು” ಹೀಗೆ ಬರೆದಿದ್ದಾರೆ .

ಲೀಯತೆ ಗಮ್ಯತೇ ಯತ್ರ | ಯೇನ ಸರ್ವಂ ಚರಾಚರಂ ||
ತದೇ ತಲ್ಲಿಂಗ ಮಿತ್ಯುಕ್ತಂ | ಲಿಂಗತತ್ವ ಪರಾಯಣಿ: ||

ಎಲ್ಲ ಚರಾಚರ ಸಮಸ್ಠಿ ಎಲ್ಲವೂ ಪ್ರಾರಂಭವಾಗಿ, ಸಂಚಲನ ಸೃಷ್ಟಿಸಿ ಅಂತ್ಯವಾಗುವುದೋ ಅದು ಲಿಂಗ ಎನ್ನುವ ಕಲ್ಪನೆಯನ್ನು ಮಗ್ಗೆಯ ಮಾಯಿದೇವರು ಹೇಳುತ್ತಾರೆ. ಮೂಲತಃ ಸ್ಥಾವರ ಸ್ವರೂಪದ ಲಿಂಗ, ಗುಡಿ ಗುಂಡಾರಗಳಲ್ಲಿ ಮತ್ತು ದೇವಸ್ಥಾನಗಳಲ್ಲಿ ವೈದಿಕ ಶಾಹಿ ಪುರೋಹಿತರಿಂದ ಮಾತ್ರ ಪೂಜೆಗೊಳುತ್ತಿತ್ತು. ಶ್ರೇಣೀಕೃತ ಸಮಾಜದಲ್ಲಿ ಭೇದವನ್ನುಂಟು ಮಾಡಿ ಶೋಷಣೆ ಮಾಡುವ ಸಾಧನವಾಗಿದ್ದ ಸ್ಥಾವರ ಲಿಂಗಕ್ಕೆ ಇಷ್ಟಲಿಂಗದ ಪರಿಕಲ್ಪನೆ ಕೊಟ್ಟು ಅಷ್ಟಾವರಣಗಳಲ್ಲಿ ಅತ್ಯುನ್ನತ ಸ್ಥಾನ ನೀಡಿದವರು ಶರಣರು.

ಇಷ್ಟಲಿಂಗ | ಪ್ರಾಣಲಿಂಗವೆಂದು ||
ಬೇರೊಂದು ಕಟ್ಟಳೆಯ | ಮಾಡಬಹುದೇ ಅಯ್ಯಾ ||
ಬೀಜವೊಡೆದು | ಮೊಳೆ ತಲೆದೋರುವಂತೆ ||
ಬೀಜಕ್ಕೂ ಅಂಕುರಕ್ಕೂ | ಭಿನ್ನವುಂಟೆ ಅಯ್ಯಾ ||
ಇಷ್ಟದ ಕುರುಹಿನಲ್ಲಿ | ಚಿತ್ತ ನಿಂದು ||
ಮಿಕ್ಕ ಗುಣಂಗಳ | ನರಿಯಬೇಕು ||
ಇದೇ ನಿಶ್ಚಯ ಸದಾಶಿವ | ಮೂರ್ತಿಲಿಂಗವು ತಾನಾಗಿ ||

ತನು ಮನ ಲಿಂಗ ಮೂರನ್ನು ಮೇಳೈಸಿದಾಗ ಲಿಂಗಾಂಗ ಅಂದರೆ ಆತ್ಮ ಹೋಗಿ ಪರಮಾತ್ಮನಲ್ಲಿ ಬೆರೆತು ಒಂದಾಗಿ ಸರ್ವಾಂಗ ಲಿಂಗಿ ಆಗತಾನ ಶರಣ ಅಂತ ಅರಿವಿನ ಮಾರಿತಂದೆ ಉಪಮೆಗಳ ಮೂಲಕ ಈ ವಚನದಲ್ಲಿ ನಿರೂಪಿಸುತ್ತಾನೆ. ಬೀಜವೂಡೆದು ಮೊಳೆ ತಲೆದೋರುವಂತೆ, ಬೀಜಕ್ಕೂ ಅಂಕುರಕ್ಕೂ ಭಿನ್ನವುಂಟೆ ಅಯ್ಯಾ.? ಬೀಜದಲ್ಲಿ ಅಡಗಿದ ಅಂಕುರದಿಂದ ಜೈವಿಕ ಕ್ರಿಯೆಯ ಸಂಘರ್ಷ ಏರ್ಪಟ್ಟಾಗ ಮೊಳಕೆಯೊಡೆಯುವಂತೆ, ಲಿಂಗ ಮತ್ತು ಅಂಗದ ಸಂಘರ್ಷ ಏರ್ಪಟ್ಟಾಗ ಶರಣರ ಅಂತರಂಗದಲ್ಲಿ ಸಾಧನೆ ಎನ್ನುವ ಮೊಳಕೆಯೊಡೆಯುತ್ತದೆ ಎನ್ನುವುದನ್ನು ಅರಿವಿನ ಮಾರಿತಂದೆಯವರು ತಿಳಿಸಿದ್ದಾರೆ.

ಜಂಗಮ

ಅಷ್ಟಾವರಣದಲ್ಲಿ, ಗುರು ಮತ್ತು ಲಿಂಗದ ನಂತರ ಬರುವ ಜಂಗಮ ತತ್ವ ಒಂದು ಪ್ರಮುಖ ಘಟ್ಟ. ಹಾಗಾದರೆ ನಮಗೆ ಎದುರಾಗುವ ಮೊಟ್ಟ ಮೊದಲನೇಯ ಪ್ರಶ್ನೆ “ಜಂಗಮ” ಅಂದರೆ ಯಾರು?

ಯಾವುದಕ್ಕೆ ಚೈತನ್ಯ ಮತ್ತು ಚಲನೆ ಇದೆಯೋ ಅದೇ ಜಂಗಮ.

ಜಂಗಮ ಎಂದರೆ ವ್ಯಕ್ತಿಯೂ ಅಲ್ಲ, ಜಾತಿಯೂ ಅಲ್ಲ, ಸಮೂಹವೂ ಅಲ್ಲ, ಪಂಗಡವೂ ಅಲ್ಲ. ಅದೊಂದು ಅನಂತ ಮತ್ತು ನಿರಂತರ ಚಲನಶೀಲ ಚೈತನ್ಯ ಮತ್ತು ಅರಿವಿನ ತತ್ವ. ಚೈತನ್ಯವನ್ನು ಒಳಗೊಂಡ ಇಡೀ ಸಮಷ್ಠಿ. ಸಮಾಜಮುಖಿಯಾದ ಯಾವುದೇ ಚೈತನ್ಯ ಜಂಗಮ. ಮರ ಹಣ್ಣು ಕೊಡತದ, ಆಕಳ ಹಾಲು ಕೊಡತದ. ಇದರಲ್ಲಿ ನಿಸ್ವಾರ್ಥ ತುಂಬಿದ ದಾಸೋಹ ಇದೆ. ಶೇಷವನ್ನಿಟ್ಟುಕೊಂಡು ವಿಶೇಷವನ್ನು ಸಮಾಜಕ್ಕೆ ನೀಡುವುದೇ ಜಂಗಮ. ಅಂತರಂಗದಲ್ಲಿ ಬೆಳಕನ್ನು ಕಾಣಲು ಲಿಂಗ ಬೇಕು. ಹಾಗೆಯೇ ಬಹಿರಂಗದಲ್ಲಿ ಸಮಾಜದೊಂದಿಗೆ ಬೆರೆತು ಒಳಹೊರಗಿನ ಬದುಕನ್ನು ಕಾಣಲು ಜಂಗಮ ದಾಸೋಹ ಬೇಕು.
ಅದು ಗುರುವಿನ ರೂಪದಲ್ಲಿರಬಹುದು, ಗುರುವಿನ ಕೃಪೆ ಆಗಿರಬಹುದು, ಅಂತರಂಗದ ಅರಿವು ಇರಬಹುದು. ಅಂದರೆ ನಿರಂತರ ಪ್ರವಾಹದಂತೆ ಪ್ರತೀದಿನ ಹೊಸದನ್ನು ನೀಡುವ ಮತ್ತು ಅದರ ಮೂಲಕ ನಮ್ಮ ಅಜ್ಞಾನವನ್ನು ಕಳೆಯುವ ತತ್ವವೇ ಜಂಗಮ ತತ್ವ. ಜಂಗಮನು ಜ್ಞಾನಮೂರ್ತಿ. ಅನುಭವ ಜ್ಞಾನವನ್ನು ಪಡೆದವ. ಭಕ್ತನನ್ನು ಭವಸಾಗರದಿಂದ ದಾಟಿಸುವ, ಗಮ್ಯಸ್ಥಾನಕ್ಕೆ ಕೊಂಡೊಯ್ಯುವ ಮಹಾತ್ಮನೇ ಜಂಗಮನು. ಶ್ರೇಷ್ಠತೆಯಲ್ಲಿ, ಜೇಷ್ಠತೆಯಲ್ಲಿ ವಚನಕಾರರು ಜಂಗಮ ತತ್ವವನ್ನು ವಿವಿಧ ರೀತಿಯಲ್ಲಿ ಉಲ್ಲೇಖಿಸಿದ್ದನ್ನು ನಾವು ಕಾಣಬಹುದು. ಚೌಡಯ್ಯನವರ ಒಂದು ವಚನದಲ್ಲಿ ಜಂಗಮದ ನಿರೂಪಣೆ ಇದೆ, ನೋಡೋಣ ಬನ್ನಿ.

ಪೃಥ್ವಿ ಶುದ್ಧವೆಂಬೆನೆ | ಪೃಥ್ವಿ ಶುದ್ಧವಲ್ಲ ||
ಜಲ ಶುದ್ಧವೆಂಬೆನೆ | ಜಲ ಶುದ್ಧವಲ್ಲ ||
ಅಗ್ನಿ ಶುದ್ಧವೆಂಬೆನೆ | ಅಗ್ನಿ ಶುದ್ಧವಲ್ಲ ||
ವಾಯು ಶುದ್ಧವೆಂಬೆನೆ | ವಾಯು ಶುದ್ಧವಲ್ಲ ||
ಆಕಾಶ ಶುದ್ಧವೆಂಬೆನೆ | ಆಕಾಶ ಶುದ್ಧವಲ್ಲ ||
ಗುರುವೇ ನೀ | ಕೇಳಯ್ಯಾ ||
ಹುಸಿ ನುಸುಳ | ಕಳೆದು ||
ಜ್ಞಾನವೆಂಬ | ಬೆಳಗ ಸಾಧಿಸಬಲ್ಲಡೆ ||
ಇದೊಂದೆ ಶುದ್ಧವೆಂದ | ನಂಬಿಗ ಚೌಡಯ್ಯ ||

ಇಲ್ಲಿ ಜ್ಞಾನ ಪ್ರಕಾಶವನ್ನು ಬೆಳಗಿಸಬಲ್ಲ ಜಂಗಮನ ಮನಸ್ಸಿನ ಶುದ್ಧತೆಯ ಬಗ್ಗೆ ಚೌಡಯ್ಯನವರು ಹೇಳತಾರೆ ನೋಡಿ. ಎಲ್ಲ ಪಂಚ ತತ್ವಗಳಲ್ಲೂ ಅಶುದ್ಧತೆಯನ್ನು ಕಾಣಬಹುದು. ಎಂಥ ದೃಷ್ಟಾಂತವನ್ನು ನಮ್ಮೆದುರಿಗೆ ಬಿಚ್ಚಿಡತಾರೆ. ಹುಸಿ ನುಸುಳ ಕಳೆದು ಅಂದರೆ ಮನದಲ್ಲಿರುವ ಅಂಧಕಾರವನ್ನು ಕಳೆದು ಜ್ಞಾನ ದೀವಿಗೆಯನ್ನು ಬೆಳೆಸುವದು ಜಂಗಮರ ಸಾಧನೆಯಾಗಬೇಕು ಎಂಬುದನ್ನು ಎಷ್ಟು ಅಲಂಕಾರಿಕವಾಗಿ ವರ್ಣಿಸತಾರೆ.

ವಿಭೂತಿ

ಲಿಂಗಾಯತರ ಪೂಜಾ ಸಾಧನಗಳಲ್ಲಿ ವಿಭೂತಿಗೆ ಅಗ್ರ ಸ್ಥಾನವಿದೆ. ಅಂತರಂಗದ ಶುದ್ಧತೆಯ ಕುರುಹುವಿನ ಬಾಹ್ಯ ಸ್ವರೂಪವೇ ವಿಭೂತಿ. ವಿಭೂತಿ ಅಂದರೆ ತೇಜಸ್ಸು. ದೈವೀ ಗುಣಗಳನ್ನು ಹೆಚ್ಚಿಸಿಕೊಳ್ಳುವ ಸಾಧನವೇ ವಿಭೂತಿ. ಅರಿಷಡ್ವರ್ಗಗಳನ್ನು ಗೆದ್ದ ಸಂಕೇತವೇ ವಿಭೂತಿ ಎನಿಸಿಕೊಂಡಿದೆ. ಮಡಿವಾಳ ಮಾಚಿದೇವರ ವಚನವೊಂದರಲ್ಲಿ ವಿಭೂತಿಯ ಮಹಿಮೆಯನ್ನು ತಿಳಿಸುತ್ತಾರೆ.

ಧರಿಸಿ ಭೋ ಧರಿಸಿ ಭೋ | ಮರ್ತ್ಯರೆಲ್ಲರೂ ||
ಮರೆಯದೆ | ಶ್ರೀ ಮಹಾ ಭಸಿತವ ||
ಲೆಕ್ಕವಿಲ್ಲದ ತೀರ್ಥಂಗಳ | ಮಿಂದ ಫಲಕಿಂದದು ||
ಕೋಟಿಮಡಿ | ಮಿಗೆ ವೆಗ್ಗಳ ||
ಲೆಕ್ಕವಿಲ್ಲದ ಯಜ್ಞಂಗಳ | ಮಾಡಿದ ಫಲಕಿಂದದು ||
ಕೋಟಿಮಡಿ | ಮಿಗೆ ವೆಗ್ಗಳ ||
ಅದೆಂತೆಂದಡೆ | ಭೀಮಾಗಮದಲ್ಲಿ ||
ಸರ್ವತೀರ್ಥೇಷು ಯತ್ ಪುಣ್ಯಂ | ಸರ್ವಯಜ್ಞೇಷು ಯತ್ ಫಲಂ ||
ತತ್ಫಲಂ ಕೋಟಿಗುಣಿತಂ | ಭಸ್ಮಸ್ನಾನಂ ನ ಸಂಶಯಃ ||
ಇಂತೆಂದುದಾಗಿ | ಧರಿಸಿ ಭೋ ಧರಿಸಿ ಭೋ ಮರ್ತ್ಯರೆಲ್ಲರೂ ||
ಮರೆಯದೆ | ಶ್ರೀ ಮಹಾಭಸಿತವ ||
ನಮ್ಮ ಕಲಿದೇವರ | ನಿಜಚರಣವ ಕಾಣುದಕ್ಕೆ ||
ಶ್ರೀ ಮಹಾಭಸಿತವೇ | ವಶ್ಯ ಕಾಣಿ ಭೋ ||

ವಿಭೂತಿ ಧಾರಣೆಯಿಂದ ತೀರ್ಥಕ್ಷೇತ್ರಗಳಲ್ಲಿ ಪುಣ್ಯಸ್ನಾನ ಮಾಡಿದಕ್ಕಿಂತಲೂ ಹೆಚ್ಚು, ಯಜ್ಞಗಳನ್ನು ಮಾಡಿದಕ್ಕಿಂತಲೂ ಹೆಚ್ಚು ಫಲಗಳನ್ನು ಪಡೆಯಬಹುದು. ಈ ಎಲ್ಲ ಕಾರ್ಯಗಳಿಗಿಂತಲೂ ಕೋಟಿ ಕೋಟಿ ಫಲವನ್ನು ಕೇವಲ ಭಸ್ಮ ಧರಿಸುವುದರಿಂದಲೇ ಪಡೆಯಬಹುದು. ಆದ್ದರಿಂದ ಎಲ್ಲ ಶರಣರೂ ಭಸ್ಮವನ್ನು ಧರಿಸಬೇಕೆಂದು ಮಡಿವಾಳ ಮಾಚಿದೇವರು ಈ ವಚನದ ಮೂಲಕ ತಿಳಿಸಿದ್ದಾರೆ. ಇದರ ವಾಕ್ಯಾರ್ಥ ವಿಭೂತಿಗೆ ಕಾಯವನ್ನು ಶುದ್ಧ ಮಾಡುವ ಅಭೂತಪೂರ್ವ ಶಕ್ತಿಯಿದೆ. ವಿಭೂತಿಯನ್ನು ಧರಿಸಿದರೆ ಶರಣರ ಮನಃಪರಿವರ್ತನೆ ಯಾಗಿ ಶುದ್ಧನಾಗುತ್ತಾನೆ.

ರುದ್ರಾಕ್ಷಿ

ಸಸ್ಯ ಶಾಸ್ತ್ರದಲ್ಲಿ Elaeocarpus Ganitrus ಎನ್ನುವ ವೈಜ್ಞಾನಿಕ ಹೆಸರು ಇರುವ ಒಂದು ಸಸ್ಯದ ಬೀಜ. ಕನ್ನಡದಲ್ಲಿ ಇದಕ್ಕೆ ರುದ್ರಾಕ್ಷಿ ಎನ್ನುತ್ತಾರೆ. ಈ ಕಾಯಿಯಲ್ಲಿ ಮೂಡಿರುವ ಗೆರೆಗಳನ್ನು ಅದರ ಮುಖಗಳೆಂದು ಗುರುತಿಸಲಾಗುತ್ತದೆ. ಇದರಲ್ಲಿ ಒಂದರಿಂದ ಇಪ್ಪತೊಂದು ಮುಖದ ರುದ್ರಾಕ್ಷಿಗಳಿದ್ದು ಸಾಮಾನ್ಯವಾಗಿ ಐದರಿಂದ ಹದಿನಾಲ್ಕು ಮುಖದ ರುದ್ರಾಕ್ಷಿಗಳು ಹೆಚ್ಚಿನ ಪ್ರಮಾಣದಲ್ಲಿ ದೊರೆಯುತ್ತವೆ.

ರುದ್ರಾಕ್ಷಿ ಔಷಧೀಯ ಗುಣಗಳನ್ನು ಹೊಂದಿದ ಹಣ್ಣು. ರುದ್ರಾಕ್ಷಿ ಹಣ್ಣಿನಲ್ಲಿ Electromagnet ಮತ್ತು Paramagnet ಎಂಬ ವೈದ್ಯಕೀಯ ಗುಣಗಳಿವೆ. ಇದರಿಂದ ಹೊರಹೊಮ್ಮುವ Bio-Electric Signal ಗಳು ಮೆದುಳನ್ನು ಚುರುಕುಗೊಳಿಸುವ ಮತ್ತು ತಂಪಾಗಿರಿಸುವ ಗುಣ ಹೊಂದಿದೆ.
ಹೀಗೆ ರುದ್ರಾಕ್ಷಿಯಲ್ಲಿರುವ ವೈದ್ಯಕೀಯ ಗುಣಗಳು ವ್ಯಕ್ತಿಯನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ಸಧೃಢಗೊಳಿಸುವ ಶಕ್ತಿಯ ಮಹತ್ವವನ್ನು ನಮ್ಮ ಶರಣರು ಅರಿತಿದ್ದರು. ಆ ಕಾರಣಕ್ಕಾಗಿ ಅದನ್ನು ಅಷ್ಟಾವರಣಗಳಲ್ಲಿ ಒಂದಾಗಿ ಸೇರಿಸಿ ಶರಣರಾದವರು ರುದ್ರಾಕ್ಷಿ ಧಾರಣೆ ಮಾಡಬೇಕೆಂದು ತಿಳಿಸಿದರು. ವಚನ ಸಾಹಿತ್ಯದಲ್ಲಿ ರುದ್ರಾಕ್ಷಿಯ ಪ್ರಸ್ತಾಪ ಹೇರಳವಾಗಿದೆ. ಶರಣರು ತಮ್ಮ ವಚನಗಳಲ್ಲಿ ರುದ್ರಾಕ್ಷಿಯ ಸ್ವರೂಪ, ಧಾರಣೆ, ರುದ್ರಾಕ್ಷಿ ಮಹತ್ವ, ರುದ್ರಾಕ್ಷಿ ಧರಿಸಿದ ಶರಣ ಅನುಸರಿಸಬೇಕಾದ ಮೌಲ್ಯಗಳನ್ನು ಕುರಿತು ಪ್ರಸ್ತಾಪಿಸುತ್ತಾರೆ. ಉರಿಲಿಂಗಪೆದ್ದಿಯವರು ಒಂದು ವಚನದಲ್ಲಿ ರುದ್ರಾಕ್ಷಿ ಧಾರಣೆಯ ಬಗ್ಗೆ ತಿಳಿಸಿದ್ದಾರೆ.

ಘನಕ್ಕೆ ಘನ ಮಹಿಮೆಯ | ಪಡೆವರೆಲ್ಲರು ||
ರುದ್ರಾಕ್ಷಿಯ | ಧರಿಸಿಪ್ಪರು ||
ಆ ಮನುಜರು | ಮರ್ತ್ಯರಲ್ಲ ನೋಡಿರೆ ||
ಮುನ್ನೊಬ್ಬ ವ್ಯಾಧನು | ಶ್ವಾನನ ಕೊರಳಲ್ಲಿ ||
ರುದ್ರಾಕ್ಷಿಯ ಕಟ್ಟಲು | ಆ ಶ್ವಾನವೂ ||
ರುದ್ರಲೋಕಕ್ಕೆ ಐದಿತೆಂಬುದು | ಪುರಾಣಿಸಿದ್ಧ ನೋಡಿರೆ ||
ಅದು | ಕಾರಣ ||
ಶಿಖೆಯಲ್ಲಿ ಒಂದು | ಶಿರದಲ್ಲಿ ಮೂವತ್ತಾರು ||
ಗಳದಲ್ಲಿ ಮೂವತ್ತೆರಡು | ಕರ್ಣದ್ವಯದಲ್ಲೆರಡು ||
ಹಾರದಲ್ಲಿ ನೂರೆಂಟು | ತೋಳಿನಲ್ಲಿ ಹದಿನಾರು ||
ಕರದಲ್ಲಿ ಹನ್ನೆರಡು | ಜಪದಲ್ಲಿ ಇಪ್ಪತ್ತೆಂಟು ||
ಈ ಕ್ರಮವರಿದು ರುದ್ರಾಕ್ಷಿಯ | ಧರಿಸಿದಾತನೇ ರುದ್ರನು ||
ಆತನೇ | ಸದ್ಯೋನ್ಮುಕ್ತನು ||
ಆತನೇ ಇಹಲೋಕ | ಪರಲೋಕ ಪೂಜ್ಯನು ||
ಅಯ್ಯಾ | ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ ||

ಶಿಖೆಯಲ್ಲಿ ಒಂದು ರುದ್ರಾಕ್ಷಿಯನ್ನು, ಶಿರ ಅಂದರೆ ತಲೆಯ ಮೇಲೆ ಮೂರು ರುದ್ರಾಕ್ಷಿಗಳನ್ನು, ಗಳ ಅಂದರೆ ಕೊರಳಿನ ಸುತ್ತಲೂ ೩೬ ರುದ್ರಾಕ್ಷಿಗಳನ್ನು, ಕರ್ಣ ಅಂದರೆ ಕಿವಿಗಳಲ್ಲಿ (ಒಂದೊಂದು ಕಿವಿಯಲ್ಲಿ ಎರಡು) ಎರಡು ರುದ್ರಾಕ್ಷಿಗಳನ್ನು, 108 ರುದ್ರಾಕ್ಷಿಗಳಿಂದ ಮಾಡಿದ ರುದ್ರಾಕ್ಷಿಯ ಹಾರವನ್ನು, ಎರಡೂ ತೋಳಿನಲ್ಲಿ ಹದಿನಾರು ರುದ್ರಾಕ್ಷಿಗಳನ್ನು, ಕೈಗಳೆರಡಕ್ಕೂ ಹನ್ನೆರಡು ರುದ್ರಾಕ್ಷಿಗಳನ್ನು ಮತ್ತು ಜಪ ಮಾಡಲು 28 ರುದ್ರಾಕ್ಷಿಗಳನ್ನು ಕ್ರಮವಾಗಿ ಧರಿಸಬೇಕೆಂದು ಉರಿಲಿಂಗಪೆದ್ದಿಯವರು ಈ ವಚನದಲ್ಲಿ ಸ್ಪಷ್ಟವಾಗಿ ನಿರೂಪಿಸಿದ್ದಾರೆ.

ಮಂತ್ರ

ಅಂತರಂಗದ ಅರಿವಿನ ಸಾಕ್ಷಾತ್ಕಾರದ ಧ್ವನಿ ಪ್ರಸ್ಥಾನ ಅಥವಾ ಮಾಧ್ಯಮವೇ ಮಂತ್ರ. ಅಷ್ಟಾವರಣಗಳಲ್ಲಿ ಭಕ್ತಿಯ ಕೊನೆಯ ಸೂತ್ರ ಮಂತ್ರವಾಗಿದೆ.

ಚೆನ್ನಬಸವಣ್ಣನವರು ತಮ್ಮ ವಚನದಲ್ಲಿ ಮಂತ್ರದ ವ್ಯಾಖ್ಯಾನವನ್ನು ನೀಡತಾರೆ.

ಪರಬ್ರಹ್ಮ ಮಂತ್ರವೆ | ಶಿವನ ದೇಹವೆಂದರಿಯುವದಯ್ಯ ||
ಶಿರವೆ ಈಶಾನ್ಯ | ಮುಖವೆ ತತ್ಪುರುಷ ||
ಹೃದಯವೆ | ಅಘೋರ ||
ಗುಹ್ಯವೆ | ವಾಮದೇವ ||
ಪಾದವೆ | ಸದ್ಯೊಜಾತ ಮಂತ್ರವಯ್ಯ ||
ಇಂತಿ ಪಂಚಮಂತ್ರ | ತನು ರೂಪದ ಬಳಿಕ ||
ನೀನೆ ಕೂಡಲ | [ಚೆನ್ನ] ಸಂಗಮದೇವ ||

ಚೆನ್ನಬಸವಣ್ಣನವರು “ನಮಃ ಶಿವಾಯ” ಎನ್ನುವ ಪಂಚಾಕ್ಷರಿ ಮಂತ್ರವೆ ಶಿವ ದೇಹವಾಗಿದೆ ಅಂತ ಹೇಳತಾರೆ. ಈ ಪಂಚಾಕ್ಷರಿ ಮಂತ್ರವನ್ನು ಗುರುವಿನ ವಾಸ ಸ್ಥಾನವಾದ ಈಶಾನ್ಯ, ಕಾಯಕ ಪ್ರಧಾನ ತತ್ಪುರುಷ, ನಿರಾಕಾರ ಶಿವ ರೂಪ ವಾಮದೇವ. ಸರಳ ಸಂಪನ್ನನಾದ ಅಘೊರಿ, ದಕ್ಷಿಣ ವಾಹಿನಿಯ ಸದ್ಯೊಜಾತ ಎಂದು ವರ್ಣನೆ ಮಾಡಾತಾ ಹೋಗತಾರೆ.

ಬಸವಣ್ಣನವರು ತಮ್ಮ ವಚನದಲ್ಲಿ ಮಂತ್ರದ ಉಪಯೋಗವನ್ನು ಟೀಕಿನ ವಚನದ ಮೂಲಕ ಪ್ರಸ್ತುತ ಮಾಡಿದ್ದಾರೆ.

ವಶ್ಯವ | ಬಲ್ಲೆವೆಂದೆಬಿರಯ್ಯಾ ||
ಬುದ್ದಿಯನರಿಯದ | ಮನುಜರು ಕೇಳಿರಯ್ಯಾ ||
ವಶ್ಯವಾವು | ದೆಂದರಿಯದೆ ||
ಮರಳುಗೊಂಬಿರೆಲೆ | ಗಾವಿಲ ಮನುಜರಿರಾ ||
ಓಂ ನಮಃ ಶಿವಾಯ | ಎಂಬ ಮಂತ್ರ ||
ಸರ್ವ ಜನವಶ್ಯ | ಕೂಡಲ ಸಂಗಮದೇವಾ ||

ಮಂತ್ರ ಹಾಕಿ ವಶ ಮಾಡಿಕೊಳ್ಳುತ್ತೇನೆ ಎಂದು ಹೇಳುವ ಜನರನ್ನು ಬಸವಣ್ಣನವರು ಮೂಢ ಜನರು ನೀವು ಎಂದು ಟೀಕಿಸುತ್ತಾರೆ. ಓಂ ನಮಃ ಶಿವಾಯ ಎನ್ನುವ ಮಂತ್ರ ಜಪಿಸುತ್ತ ಹೋದರೆ ಸಮಷ್ಠಿಯ ಕಲ್ಪನೆ ಆಗುತ್ತದೆ ಎನ್ನುವುದನ್ನು ಸೂಚ್ಯವಾಗಿ ನಿರೂಪಿಸಿದ್ದಾರೆ.
ಒಟ್ಟಾರೆಯಾಗಿ ಮಂತ್ರ ಎಂಬ ಧ್ವನಿ ಪ್ರಸ್ಥಾನ ಶರಣರ ಅಂತರಂಗದ ಅಭಿವ್ಯಕ್ತಿಯ ಸಾಧನದಿಂದ ಅರಿವಿನತ್ತ ಪಯಣಿಸುವ ತತ್ವ. ಇದು ಭಕ್ತನನ್ನು ಶರಣನನ್ನಾಗಿ ಮಾಡುವ ಅತ್ಯಮೂಲ್ಯ ಸಾಧನ ಅಥವಾ ತತ್ವ.

ಪಾದೋದಕ

ಅಷ್ಟಾವರಣದಲ್ಲಿ ಪಾದೋದಕ ಒಂದು ಅಮೂಲ್ಯವಾದ ತತ್ವ. ನಿರಾಕಾರ ಶಿವನ ಆನಂದದಾಯಕ ಸ್ವಭಾವ ಪಾದವೆಂದೂ ಮತ್ತು ಆನಂದದಾಯಕ ಜ್ಞಾನವನ್ನು ಉದಕವೆಂದು ಹೇಳಲಾಗುತ್ತದೆ. ಇವೆರಡರ ಸಂಗಮ ಪಾದೋದಕ.

ಹಡಪದ ಅಪ್ಪಣ್ಣನವರು ಎಷ್ಟು ಅದ್ಭುತವಾಗಿ ಪಾದೋದಕವನ್ನು ವಿಶ್ಲೇಷಣೆ ಮಾಡಿದ್ದಾರೆ :

ಪರಾಪರದಲ್ಲಿ ಹುಟ್ಟಿದ | ಪಾದೋದಕ ||
ಪರಬ್ರಹ್ಮದ ಪರಮ ಪ್ರಕಾಶವೇ | ಪಾದೋದಕ ||
ಪರಿಪೂರ್ಣವ ಪ್ರವೇಶಿಸಿ | ಕೊಂಡಿರ್ಪುದೇ ಪಾದೋದಕ ||
ಪರಮನಂಘ್ರಿ ಕಮಲದಲ್ಲಿ | ಹುಟ್ಟಿದುದೇ ಪಾದೋದಕ ||
ತರತರದ ಭಕ್ತ ಮಾಹೇಶ್ವರ | ಪ್ರಸಾದಿ ಪ್ರಾಣಲಿಂಗಿ ||
ಶರಣ ಐಕ್ಯದೊಳಡಗಿದ | ಪಾದೋದಕ ಅದಕ್ಕೆ ದೃಷ್ಟ ||
“ಪ” ಕಾರಂ ಪರಮ ಜ್ಞಾನಂ | “ದೋ” ಕಾರಮ್ ದೋಷ ನಾಶನಮ್ ||
“ದ” ಕಾರಂ ದಹತೇ ಜನ್ಮ | “ಕ” ಕಾರಮ್ ಕರ್ಮಛೇದನಮ್ ||
ಎಂದುದಾಗಿ ಇಂತಪ್ಪ | ಪಾದೋದಕವ ಕೊಂಡು ||
ಪರಿಣಾಮ ತೃಪ್ತಿಯನೆಯ್ದುವ | ಸದ್ಭಕ್ತಂಗೆ ನಮೋ ನಮೋ ಎಂಬೆ ||
ಬಸವಪ್ರಿಯ ಕೂಡಲಸಂಗಮದೇವಾ | ಮಾಮ್ ತ್ರಾಹಿ ತ್ರಾಹಿ ಕರುಣಾಕರನೆ ||

ಪರಮ ಪವಿತ್ರವಾಗಿ, ನಿರಾಕಾರ ಬ್ರಹ್ಮ ಸ್ವರೂಪದ ಬೆಳಕಾಗಿ ಹುಟ್ಟಿದುದು ಪಾದೋದಕ. ತನುವಿನಲ್ಲಿ ಪರಿಪೂರ್ಣವಾಗಿ ಪ್ರವೇಶವಾಗುವದೇ ಪಾದೋದಕ. ಪುಣ್ಯ ಪಾದ ಕಮಲದಲ್ಲಿ ಹುಟ್ಟಿರುವುದೇ ಪಾದೋದಕ. ಪವಿತ್ರ ಷಟ್ ಸ್ಥಲಗಳಲ್ಲಿ ಪ್ರತ್ಯಕ್ಷವಾಗುವುದೇ ಪಾದೋದಕ. ಅಂದರೆ ಮಸ್ತಿಷ್ಕದಲ್ಲಿ ಹುಟ್ಟುವ, ತನುವಿನೊಳಗೆ ತುಂಬಿ ಪಾದದವರೆಗೂ ಪವಿತ್ರವಾಗಿ ಹರಿಯುವ ಜ್ಞಾನಗಂಗೆಯೇ ಪಾದೋದಕ. “ಪಾ” ಅಂದರೆ ಅಂತರಂಗದ ಅರಿವಿನ ಜ್ಞಾನ, “ದೋ” ಅಂದರೆ ಎಲ್ಲ ಕಲ್ಮಶಗಳನ್ನೂ ಕಳೆಯುವ, “ದ” ಅಂದರೆ ಜನನ ಮರಣಾದಿ ಸೂತಕಗಳನ್ನು ಕಳೆಯುವ, “ಕ” ಎಂದರೆ ಎಲ್ಲ ಕರ್ಮಾದಿಗಳಿಂದ ಮುಕ್ತಗೊಳಿಸುವ ಒಂದು ಸಾಧನ. ಪಾದೋದಕವೆಂದರೆ ನಮ್ಮಲ್ಲಿರುವ ಅಜ್ಞಾನವನ್ನು ಹೊಡೆದೋಡಿಸುವ ಎಲ್ಲ ಕಲ್ಮಶಗಳನ್ನೂ ನಿರ್ಮೂಲನೆಗೊಳಿಸುವ, ಎಲ್ಲ ಸೂತಕಗಳಿಂದ ಮುಕ್ತಗೊಳಿಸಿ ಜ್ಞಾನ ಪ್ರಕಾಶವನ್ನು ನೀಡುವಲ್ಲಿ ಸಹಕಾರ ನೀಡುತ್ತದೆ. ಇಂತಹ ಪಾದೋದಕವನ್ನು ಕಂಡ ಭಕ್ತರನ್ನು ಕಂಡು ತೃಪ್ತಿಯಾಗಿ ನಮಸ್ಕರಿಸುವೆನು. ಎಂಥ ಅದ್ಭುತ ವಚನ. ಪಾದೋದಕದ ಎಲ್ಲ ವಿಸ್ತಾರಗಳೂ ಹರಡಿರುವದನ್ನು ಕಾಣಬಹುದು.

ಪ್ರಸಾದ

ಪ್ರಸಾದ ಅಷ್ಟಾವರಣದ ಪ್ರಮುಖ ತತ್ವ. ಗುರು-ಲಿಂಗ-ಜಂಗಮದ ಮೂಲಕ ಬಂದ ಆಶೀರ್ವಾದದ ಅನುಗ್ರಹ ಅಥವಾ ಅಂತರಂಗದ ಅರಿವು ಉಂಟಾದಾಗ ಆಗುವ ಅನುಭೂತಿಯ ಫಲವೇ ಪ್ರಸಾದ. ಇಂಥ ಪ್ರಸಾದದ ಅನುಗ್ರಹ ಆಗಬೇಕಾದರೆ ಭಕ್ತನ ಮೈಯೆಲ್ಲಾ ಕಣ್ಣಾಗಿ ನೋಡುವ ನೋಟ, ಮೈಯೆಲ್ಲಾ ಕಿವಿಯಾಗಿ ಕೇಳುವ ಮಾತುಗಳು, ಮೈಯೆಲ್ಲಾ ರಸನೇಂದ್ರಿಯಗಳಾಗಿ ಮಾಡುವ ಊಟಗಳೆಲ್ಲವೂ ನಿರಾಕಾರ ಲಿಂಗಮುಖಿಯಾಗಿ ಗುರು-ಲಿಂಗ-ಜಂಗಮಕ್ಕೆ ತಲುಪುವಂತಿರಬೇಕು. ಅವನಿಗೆ ಸಲ್ಲಿಸುವ ಎಲ್ಲ ಕ್ರಿಯೆಗಳಿಗೆ ಕೃತಜ್ಞನಾಗಿರಬೇಕು. ಅಂದರೆ ಶುದ್ಧ ಪ್ರಸಾದವೆಂದರೆ ಮನಸ್ಸು ಶುದ್ಧವಾಗಿರಬೇಕು ಮತ್ತು ಶಾಂತತೆಯಿಂದ ಕೂಡಿರಬೇಕು. ಆವಾಗಲೇ ಅಂತರಂಗ ಮತ್ತು ಬಹಿರಂಗ ಶುದ್ಧಿಯಿಂದ, ಮನಸ್ಸು ಮತ್ತು ಆತ್ಮ ಶುದ್ಧವಾದಾಗ, ಎಲ್ಲ ಮನಸ್ಸಿನ ಕೊಳೆ ಹೋದಾಗ ಪ್ರಸಾದ ಸಿಗುವುದು ಎಂದು. ಇದೇ ಪ್ರಸಾದದ ನಿಜವಾದ ಅರ್ಥ ಮತ್ತು ಮಹತ್ವ.

ಹಸಿವಾಯಿತ್ತೆಂದು | ಅರ್ಪಿತವ ಮಾಡುವರಯ್ಯಾ ||
ತೃಷೆಯಾಯಿತ್ತೆಂದು | ಮಜ್ಜನಕ್ಕೆರೆವರಯ್ಯಾ ||
ಹಸಿವು ತೃಷೆ | ವಿಷಯಕ್ಕೆ ಬಳಲುವರಯ್ಯಾ ||
ಹಸಿವಾಯಿತ್ತೆಂದು | ಅರ್ಪಿತವ ಮಾಡಲಿಲ್ಲ ||
ತೃಷೆಯಾಯಿತ್ತೆಂದು | ಮಜ್ಜನಕ್ಕೆರೆಯಲಿಲ್ಲ ||
ಇದು ಕಾರಣ | ಕೂಡಲಸಂಗಮದೇವನ ||
ಪೂಜಿಸಿ ಪ್ರಸಾದವ | ಹಡೆದವರೊಬ್ಬರೂ ಇಲ್ಲ ||

ತನ್ನನ್ನೇ ಸಂಪೂರ್ಣವಾಗಿ ಗುರು-ಲಿಂಗ-ಜಂಗಮಕ್ಕೆ ಅರ್ಪಣೆ ಮಾಡಿಕೊಳ್ಳುವುದು ಪ್ರಸಾದ ತತ್ವದ ಮಹತ್ವ. ಹಾಗಾದರೆ ಇಲ್ಲಿ ಬಸವಣ್ಣನವರು ಹೇಳಲಿಕ್ಕೆ ಹೊರಟಿರುವುದು ಏನನ್ನು? ಹಸಿವು, ತೃಷೆ, ವಿಷಯಂಗಳನ್ನು ಸಂಕೇತಗಳನ್ನಾಗಿ ಬಳಸಿಕೊಂಡು, ಈ ಭೌತಿಕವಾಗಿ ತನ್ನನ್ನು ತಾನು ಗುರು-ಲಿಂಗ-ಜಂಗಮಕ್ಕೆ ಅರ್ಪಿಸದೇ, ಅರಿವಿನ ಆಳದ ಮೂಲಕ ತನ್ನನ್ನು ತಾನು ಅರ್ಪಿಸಿಕೊಳ್ಳಬೇಕು. ಎಂಥ ಅದ್ಭುತ ಶಬ್ದಗಳ ಜೋಡಣೆ ನೋಡಿ. ಇಲ್ಲಿ ಅರ್ಪಿತ ಅನರ್ಪಿತ ಎಂಬ ತತ್ವದ ವಿಸ್ತಾರ ಹರಡಿದೆ. ಅಂಗದ ಹಸಿವು, ತೃಷೆ ವಿಷಯಂಗಳನ್ನು ಯಾರು ಬೇಕಾದರೂ ಅರ್ಪಿಸಬಹುದು ಮತ್ತು ಸ್ವೀಕರಿಸಬಹುದು. ಆದರೆ ಅಂತರಂಗದ ಅರಿವಿನ ಹಸಿವು ಮತ್ತು ತೃಷೆ ತೀರಿಸಬೇಕಾದರೆ ಪ್ರಸಾದ ರೂಪದಲ್ಲಿ ಅಂದರೆ ಬೆಳಕನ್ನು ಪಡೆಯಬೇಕಾದರೆ ತನು ಮನ ಶುದ್ಧವಾಗಿರಬೇಕು ಮತ್ತು ಅದನ್ನು ಪಡೆಯುವ ಅಂತರಂಗದ ಸಾಹಸ, ಸಹನಶೀಲತೆ ಮತ್ತು ದೃಷ್ಟೀನೂ ಬೇಕು.

ಇದು ಹನ್ನರಡನೇ ಶತಮಾನದ ಶರಣ ಸಿದ್ಧಾಂತ ಮತ್ತು ವಚನ ಸಾಹಿತ್ಯ. ಎಂಥವರನ್ನು ಚಕಿತಗೊಳಿಸುವ, ಜ್ಞಾನದ ದೀಪ್ತಿಯನ್ನು ಬೆಳಗಿಸಬಲ್ಲ ಒಂದು ತಾಕತ್ತು, ಒಂದು ಶಕ್ತಿ ಈ ಸಿದ್ಧಾಂತ ಮತ್ತು ಸಾಹಿತ್ಯ ಪ್ರಾಕಾರಕ್ಕಿದೆ. ಇಂತಹ ಒಂದು ಸಮಾಜೋಮುಖಿ ಚಿಂತನೆಯಿಂದ ಇನ್ನೂ ಜೀವಂತವಾಗಿದೆ. ಈ ಸಿದ್ಧಾಂತ ಮತ್ತು ಸಾಹಿತ್ಯ ಇಂದಿಗೂ ಮತ್ತು ಮುಂದೆಯೂ ಜೀವಂತವಾಗಿರಬಲ್ಲದು.


ಸಂಗ್ರಹ ಮತ್ತು ಲೇಖನ :
*ವಿಜಯಕುಮಾರ ಕಮ್ಮಾರ
ತುಮಕೂರು*
ಮೋಬೈಲ್ ನಂ : 9741 357 132
ಈ-ಮೇಲ್ : vijikammar@gmail.com

Don`t copy text!