ಹಣತೆ ಹಚ್ಚೋಣ ಬನ್ನಿ
ನೊಂದವರ, ಬೆಂದವರ, ಬಾಡಿ ಬಸವಳಿದವರ ಬದುಕಿನಲ್ಲಿ
ಬೆಳಕಿನ ಕಿರಣ ಚಿಮ್ಮಿಸಲು ಸಂಬೆಳಕಿನ ಹಣತೆ ಹಚ್ಚೋಣ ಬನ್ನಿ!
ಹಗಲಿರುಳೂ ತಮ್ಮ ಬೆವರ ಹನಿಯಿಂದ ಅನ್ಯರಿಗೆ ಬೆಳಕು ನೀಡುತ್ತ, ಕಗ್ಗತ್ತಲೆಯ ಕೂಪದಲ್ಲಿರುವ ಮರ್ದಿತರಿಗಾಗಿ
ಬೆಳಕಿನ ಹಣತೆ ಹಚ್ಚೋಣ ಬನ್ನಿ!
ಆಳುವ ವರ್ಗದವರ ಅಸಡ್ಡೆಯಿಂದ ನೆಲೆಯಿಲ್ಲದೆ ಅಲೆ-ಅಲೆದು ನಡು ಬೀದಿಯಲಿ ಸಾವನಪ್ಪಿದ್ದ ವಲಸೆ ಕಾರ್ಮಿಕರ ನೆನಪಿನಲ್ಲಿ ಹಣತೆ ಹಚ್ಚೋಣ ಬನ್ನಿ!
ನೆರೆಯಿಂದ, ಬರದಿಂದ ಬದುಕು ಹೊರೆಯಾಗಿ, ಪರಿಹಾರಕ್ಕಾಗಿ ಪರಿತಪಿಸುತ್ತಿರುವ ಸಂತ್ರಸ್ತರ ಸೂರಲ್ಲಿ ಹೊಸ ಬೆಳಕು ಕಾಣಲು ಹಣತೆ ಹಚ್ಚೋಣ ಬನ್ನಿ!
ಹಸಿದೊಡಲ ದಾಹ ನೀಗಿಸಿಕೊಳ್ಳಲು ಸಂದಿ-ಗೊಂದಿಗಳಲ್ಲಿ ಚಿಂದಿ ಆಯುವ ಚಿಣ್ಣರ ಬದುಕಲ್ಲಿ
ಬಣ್ಣತುಂಬುವ
ಹೊಂಬೆಳಕಿನ ಹಣತೆ ಹಚ್ಚೋಣ ಬನ್ನಿ!
ಶೋಷಣೆಯ ಸಂಕೊಲೆ ಗಳಿಂದಾಗಿ ಅನುದಿನವೂ ಸಾವು ಬದುಕಿನಲ್ಲಿ ನರಳುತ್ತಿರುವ ಮಾನಿನಿಯರ ಮಾನ ರಕ್ಷಣೆಗಾಗಿ ಭರವಸೆಯ ಹಣತೆ ಹಚ್ಚೋಣ ಬನ್ನಿ!
ವಿಜ್ಞಾನ ಯುಗದಲ್ಲಿಯೂ ಅಜ್ಞಾನ ಹರಡುವ ಸುಳ್ಳರ ಸಂ ಚು ಭೇದಿಸಿ, ಹೊಸ ಸಂಚಯನ ಮೂಡಿಸಲು ಜ್ಞಾನದ ಹಣತೆ ಹಚ್ಚೋಣ ಬನ್ನಿ!!
–ವಿ.ಜಿ.ದೇಸಾಯಿ