ವಾಸ್ತವದ ಒಡಲು
ಭಾರತದೊಳು ಪುಟ್ಟ ಭಾರತಿ
ಇಂದು ಭಾರತಿ ಆಂಟಿ (ಶ್ರೀಮತಿ ಭಾರತಿ ವಸ್ತ್ರದ) ಮನೆಗೆ ಸಾಹಿತ್ಯಿಕ ಕೆಲಸ ಇಟ್ಟುಕೊಂಡು ಹೋಗಿದ್ದೆ. ಇದು ನೆಪ ಮಾತ್ರ, ಅಷ್ಟೆ. ಯಾವಾಗಲೂ ‘ನೀ ಬೀದರಿಗೆ ಬಂದಾಗ ಬಂದು ಹೋಗವ್ವ’ ಎಂದು ಹೇಳುತ್ತಿದ್ದುದು ಸದಾ ಕಾಡುತ್ತಲೇ ಇತ್ತು. ಈಗ ಕಾಲ ಕೂಡಿ ಬಂತು. ಅವರ ಮನೆಯಂಗಳಕೆ ಕಾಲಿಡುತ್ತಿದ್ದಂತೆಯೇ ಅದೇನೊ ಸಂತಸ! ಭಾರತಿ ಆಂಟಿ ಕಂಡ ಕೂಡಲೆ ಅವ್ವನ ನೆನಪು ತೀವ್ರವಾಗಿ ಬಂದು ಅಪ್ಪಳಿಸಿತು. ಅದೆಷ್ಟೊ ವರ್ಷಗಳ ಹಿಂದೆ ಅವ್ವನೊಂದಿಗೆ ಅವರ ಮನೆಗೆ ಹೋದ ನೆನಪು.
ಭಾರತಿ ಆಂಟಿ ಜೊತೆ ಮಾತುಕತೆ ಆರಂಭಿಸಿದೆ….
ಅವ್ವ ಮತ್ತು ಆಂಟಿ ಇಬ್ಬರೂ ಕೆಲ ಕಾಲ ಒಂದೇ ಕಡೆ ಕೆಲಸ ಮಾಡಿದ್ದರು. ಹಳೆಯ ಸವಿ ನೆನಪುಗಳನ್ನು ಮೆಲುಕು ಹಾಕುತ್ತ, ನಗುವ ಮಾತಿಗೆ ನಕ್ಕು ನಲಿದು, ವಿಷಾದದ ಮಾತುಗಳಿಗೆ ಬೇಸರವಿಲ್ಲದ ತಟಸ್ಥ ಭಾವ ತಳೆದು, ಈ ಜೀವನ ಸಿಹಿ ಕಹಿಗಳಿಂದಲೇ ಕೂಡಿದೆ ಎನ್ನುವ ಅಂತಿಮ ಸತ್ಯ ಅರಿತು, ಒಟ್ಟಾರೆ ಬದುಕನ್ನು ಸುಂದರಗೊಳಿಸುವುದು ನಮ್ಮ ಕೈಯಲ್ಲೇ ಇದೆ ಎನ್ನುವ ವಾಸ್ತವ ಸತ್ಯದ ದರ್ಶನ!
ಭಾರತಿ ಆಂಟಿಗೆ ಅವ್ವನ ಕುರಿತು ಬರೆಯಲು ಹೇಳಿದ್ದೆ. ‘ನಾ ಕಂಡಂತೆ ಯಶೋದಮ್ಮ ಸಿದ್ದಬಟ್ಟೆ’ ಎನ್ನುವ ಶೀರ್ಷಿಕೆ ಇಟ್ಟು, ರಾತ್ರಿ ಎಷ್ಟ್ಹೊತ್ತು ಕುಳಿತು, ಸ್ಮೃತಿ ಪಟಲ ಬಗೆದು, ೨೦೦೮ಕ್ಕಿಂತ ಮೊದಲಿನ ದಿನಗಳನ್ನು ನೆನೆದು, ನಾಲ್ಕು ಪುಟ ಬರೆದಿದ್ದರು. ‘ನನ್ ಅಕ್ಷರ ತಿಳಿತಾವೊ ಇಲ್ಲೊ ನೋಡವ್ವ’ ಅಂದರು. ಆದರೆ ಅದನ್ನು ಅರಾಮಾಗಿ, ಗಟ್ಟಿಯಾಗಿ ಓದಿದೆ. ಇಬ್ಬರೂ ಮಸುಕು ಮಸುಕಾದ ಹಳೆಯ ನೆನಪನ್ನು ತಾಜಾಗೊಳಿಸಿಕೊಂಡೆವು. ಅನೇಕ ವಿಷಯಗಳ ಸುತ್ತ ಸುತ್ತುತ್ತ, ನಗು, ತಮಾಷೆ, ಇದ್ದವು. ಕೆಲವೊಮ್ಮೆ ಗಂಟಲು ಉಬ್ಬಿಕೊಂಡರೂ, ಸುಧಾರಿಸಿಕೊಂಡು ನಗುವಿನಲಿ ತೇಲಿಸಿದೆವು. ನಾವು ಮಕ್ಕಳೇ ಗಟ್ಟಿಯಾದ ಮೇಲೆ ಅವ್ವ ಎಷ್ಟು ಗಟ್ಟಿಯಾಗಿರಲಿಕ್ಕಿಲ್ಲ! ??? ಅವರಿಂದಲೇ ಅಲ್ಲವೆ ನಾವು ಕಲಿತದ್ದು? ನಿಜ. ಇದು ಜೀವನ ಪಾಠ! ಬದುಕಿನ ಆಟ!
ಅವರ ಪುಸ್ತಕಗಳ ಸಂಗ್ರಹ ನೋಡಿದೆ. ಅನೇಕ ಕೃತಿಗಳನ್ನು ಆಸಕ್ತಿಯಿಂದ ತೆಗೆದು ತೆಗೆದು ತೋರಿಸಿದರು. ಪುಸ್ತಕ ಪ್ರೇಮಿಗಳು ಯಾವತ್ತೂ ಪಲಾಯನವಾದಿಗಳಲ್ಲ, ಬದುಕನ್ನು ಎದುರಿಸುವವರು. ಜೀವನದ ಕಷ್ಟ ಸುಖಗಳಿಗೆ ಹಣ್ಣಾಗಿ, ಪಕ್ಕಾಗಿ, ದಿಟ್ಟವಾಗಿ ಎದೆ ತಟ್ಟಿ ನಿಲ್ಲುವ ಛಾತಿ ಬೆಳೆಸಿಕೊಂಡಿರುತ್ತಾರೆ. ಆಂಟಿನ ನೋಡಿದಾಗ ಅದೂ ನಿಜ ಎನಿಸಿತು. ಅದಕ್ಕಾಗಿಯೇ ಅವರು ಜೀವನದ ಸಂಧ್ಯಾಕಾಲದಲ್ಲೂ ಜೀವನೋತ್ಸಾಹದಿಂದ ದಿನಗಳೆಯುತ್ತಿದ್ದಾರೆ.
ಅವರ ಸೊಸೆ ಜಯಾ ‘ಅಕ್ಕ ಅಕ್ಕ’ ಎನ್ನುತ್ತ, ನಗುನಗುತ್ತ ಊಟ ಮಾಡಿಸಿದ್ದು ಮರೆಯಲು ಸಾಧ್ಯವಿಲ್ಲ. ನಡುವೆ ಆಂಟಿ ‘ಇದು ತೊಗೊ ಅದು ತೊಗೊ’ ಪ್ರೀತಿಯ ಒತ್ತಾಯ. ಅಪ್ಪಟ ದೇಸೀ ಅಡುಗೆಯ ಎಕ್ಸ್‌ಪರ್ಟ್ ತಂಗಿ ಜಯಾ. ಬಿಸಿಬಿಸಿ ಚಪಾತಿ, ಸಜ್ಜೆ ರೊಟ್ಟಿ, ಸೇಂಗಾ ಚಟ್ನಿ, ಗುರೆಳ್ಳು ಚಟ್ನಿ, ಮೇಲೆ ಎಣ್ಣೆ, ಹುಣಿಸಿಕಾಯಿ ಖಾರ, ಮಾವಿನಕಾಯಿ ಉಪ್ಪಿನಕಾಯಿ, ಗಟ್ಟಿ ಬ್ಯಾಳಿ, ಉಳ್ಳಾಗಡ್ಡಿ, ಸೌತಿಕಾಯಿ, ಹುರಿದ ಸೇಂಗಾ ಮತ್ತು ನನಗಿಷ್ಟವಾದ ಚೌಳಿಕಾಯಿ ಪಲ್ಯ. ಸ್ವಾಮಿಗಳು ಉಂಡ್ಹಂಗೇ ಉಂಡೆ. ಸಂತೋಷಣ್ಣನ ಬರ್ತ್ ಡೇ ಕೇಕ್ ಕೂಡ ನನಗಾಗಿ ಕಾದು ಕುಳಿತಿತ್ತು. ಎಲ್ಲವೂ ಸುಂದರ. ಮಧ್ಯೆ ಮಧ್ಯೆ ಮೊಮ್ಮಗಳು ಧೃತಿಯ ಓಡಾಟ. ನಮ್ಮ ಫೋಟೊ ಕ್ಲಿಕ್ಕಿಸುವ ಜವಾಬ್ದಾರಿ ಅವಳಿಗೆ ಒಪ್ಪಿಸಿದೆವು. ಪರ್ಫೆಕ್ಟ್ ಆಗಿ ತೆಗೆದಳು.
ಅಪ್ಪಾಜಿಯವರ ಭೇಟಿ ಮಾಡಿಸಿದರು. ಹಿರಿಯ ಜೀವ, ಬದುಕಿನ ಸಂಧ್ಯಾ ಕಾಲ. ಮಾತು ಮಾತಿಗೆ ಭಾವನಾತ್ಮಕ ಪ್ರತ್ಯುತ್ತರ, ಪ್ರತಿಕ್ರಿಯೆ. ಮಕ್ಕಳನ್ನು ಕಂಡು ಮನಸು ಕರಗುವ ಭಾವುಕ ಜೀವಿ. ಒಂದೆರಡು ಮಾತನಾಡಿ ಅವರ ಆಶೀರ್ವಾದ ಪಡೆದು ಹೊರಟೆ.
ಕುಂಕುಮ ಹಚ್ಚಿ ಮಡಿಲು ತುಂಬಿದಾಗ ಹೃದಯ ಕರಗಿ ನೀರಾಯಿತು. ಅವ್ವ ಇದ್ದಿದ್ದರೆ ಹೀಗೇ ಮಾಡುತ್ತಿದ್ದಳೋ ಏನೊ? ಇಲ್ಲದಿದ್ದರೂ ಆ ಅಭಾವವಿಲ್ಲ ಎನಿಸಿತು.
ಭಾರತಿ ಆಂಟಿ, ಮಗಳು ರಶ್ಮಿಯ ನೆನೆದಾಗ, ಒಂದು ಕ್ಷಣ ನಾನೂ ಚಿಕ್ಕ ಮಗಳಾದಂತೆ ಭಾಸ! ನಾವಿಬ್ಬರೂ ಈಗ ಬೆಳೆದು ದೊಡ್ಡವರಾಗಿದ್ದೇವೆ. ‘ನೀವಿಬ್ಬರೂ ಅಕ್ಕ ತಂಗಿಯ ಸಾಹಿತ್ಯದ ಚಟುವಟಿಕೆ ನೋಡೋದೇ ಛಂದ’ ಎಂದರು. ಈಗ ಭಾರತಿ ಆಂಟಿ ಹೇಗೆ ಕಾಣುತ್ತಾರೆಂದರೆ, ‘ಭಾರತದೊಳು ಪುಟ್ಟ ಭಾರತಿ’. ಮೂರ್ತಿ ಚಿಕ್ಕದಾದರೂ ಹೃದಯ ವಿಶಾಲ. ಭಾರತೀಯ ಸಂಸ್ಕೃತಿಯ ಪ್ರತೀಕ. ‘ಥೇಟ್ ನನ್ನವ್ವನನ್ನು ನೋಡಿದಂತೆ!!!’ ನನ್ನ ಮಕ್ಕಳೂ ಹಾಗೇ ಹೇಳುತ್ತಾರೆ. ಅಗಲವಾದ ಕುಂಕುಮ, ಕನ್ನಡಕ, ಸೀರೆ, ಅದಕ್ಕೆ ತಕ್ಕ ಕುಪ್ಪಸ, ಎಲ್ಲಕ್ಕಿಂತ ಮುಖ್ಯವಾಗಿ ಆ ನಗುಮೊಗ ಮತ್ತು ಅನುಭವದಿಂದ ಕೂಡಿದ ಸಾಂತ್ವನ ಮಾತು! ಎಲ್ಲವನ್ನೂ ಮರೆಸುತ್ತದೆ.
ತನ್ನ ಕೆಲಸದಲ್ಲಿದ್ದ ಸಂತೋಷಣ್ಣನನ್ನು ನೋಡಿದಾಗ ನೆನಪಾಯಿತು. ಚಿಕ್ಕವಳಿದ್ದಾಗ ಅವನು ನನಗಾಗಿ ಬಿಸ್ಕೇಟ್ ಪ್ಯಾಕೆಟ್ ತಂದು ಕೊಡುತ್ತಿದ್ದ. ಅಷ್ಟರಲ್ಲಿ ಆಟೋ ತರಿಸಿದ. ಅಲ್ಲಿ ಅವರ ಮನೆಯಲ್ಲಿ ಎರಡು ಗಂಟೆಗಳ ಕಾಲ ಕಳೆದಿದ್ದೆವು. ಮಾತುಕತೆ, ಊಟ ತಿಂಡಿ, ಸಮಯ ಹೋದದ್ದೇ ತಿಳಿಯಲಿಲ್ಲ. ಏಕೆಂದರೆ ಅದು ಅವ್ವನಂಗಳದ ತಂಪಿನ ಅನುಭವ. ಮೆಲುವಾದ ಮನದ ಮಾತುಗಳ ಇಂಪಿನ ಸಂಭ್ರಮ. ಭಾರತಿ ಆಂಟಿ ಮತ್ತು ಜಯಾಳ ಮೊಗದಲ್ಲಿ ತವರ ಪ್ರೀತಿ ಕಂಡಿತು. ತವರೆಂದರೆ ಕೇವಲ ಅವ್ವ ಅಷ್ಟೇ ಅಲ್ಲ. ಇವರೆಲ್ಲರೂ!!!
ಸಿಕಾ, ಕಲಬುರ್ಗಿ