ಡಾ. ಬಿ.ಎಫ್. ದಂಡಿನ ಅವರ ಬದುಕಿನ ಅಪರೂಪದ ದಾಖಲೆ- ದಣಿವರಿಯದ ದಾರಿ
ಗದುಗಿನ ಕನಕದಾಸ ಶಿಕ್ಷಣ ಸಮಿತಿಯ ರೂವಾರಿ, ಹಿರಿಯ ಚೇತನ ಡಾ.ಬಿ.ಎಫ್. ದಂಡಿನ ಈ ನಾಡು ಕಂಡ ಅಪರೂಪದ ವ್ಯಕ್ತಿತ್ವ.
ಲಕ್ಷಾಂತರ ವಿದ್ಯಾರ್ಥಿಗಳ, ಸಾವಿರಾರು ಪ್ರತಿಭಾವಂತ ಪ್ರಾಧ್ಯಾಪಕರ ತವರು ಮನೆಯಾದ ಕನಕದಾಸ ಶಿಕ್ಷಣ ಸಮಿತಿ ಅರವತ್ತಕ್ಕೂ ಹೆಚ್ಚು ಸಂಸ್ಥೆಗಳ ಹೊಂದಿದೆ.
ರೋಣ ತಾಲೂಕಿನ ಹಿಂದುಳಿದ ಗ್ರಾಮ ದ್ಯಾಮಣಸಿ ಗ್ರಾಮದ ಪ್ರೊ.ದಂಡಿನ ಸ್ವಾತಂತ್ರ್ಯ ಪೂರ್ವದಲ್ಲಿ ಜನಿಸಿ, ಉನ್ನತ ವ್ಯಾಸಂಗ ಪಡೆದ ಮೊದಲಿಗರು. ಹಾಲುಮತ ಸಮಾಜದ ಯುವಕರಾದ ಪ್ರೊ.ದಂಡಿನ ಅವರು ಕೆ.ಎಲ್.ಇ. ಸಂಸ್ಥೆಯ ಜೆ.ಟಿ.ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಸೇವೆ ಆರಂಭಿಸಿದರು.
ಬೆಳಗಾವಿಗೆ ವರ್ಗಾವಣೆ ಆದಾಗ ಅವರಿಗೆ ಬೇಸರವಾಯಿತು, ಅದಕ್ಕೆ ಕಾರಣ ಆಗ ಅವರು ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಒಳಿತಿಗಾಗಿ ಹಾಸ್ಟೆಲ್ ಪ್ರಾರಂಭ ಮಾಡಿದ್ದರು. ಇದರಿಂದ ಬೇಸತ್ತ ಅವರು ಯಾರೂ ಊಹಿಸದ ಗಟ್ಟಿ ನಿರ್ಣಯ ತೆಗೆದುಕೊಂಡು, ಹುದ್ದೆಗೆ ರಾಜೀನಾಮೆ ನೀಡಿ, ಗದುಗಿಗೆ ಮರಳಿದರು. ನಂತರದ ಇತಿಹಾಸ ಎಲ್ಲರಿಗೂ ಗೊತ್ತಿದೆ.
ಹೈಸ್ಕೂಲು, ಕಾಲೇಜು ಹಾಗೂ ಸ್ನಾತಕೋತ್ತರ ಕೇಂದ್ರಗಳ ಮೂಲಕ ಈಗ ಕನಕದಾಸ ಶಿಕ್ಷಣ ಸಮಿತಿ ಹೆಮ್ಮರವಾಗಿ ಬೆಳೆದಿದೆ.
ನಾನು ಕೂಡ ಆ ಸಂಸ್ಥೆಯ ವಿದ್ಯಾರ್ಥಿ ಎಂಬ ಅಭಿಮಾನವಿದೆ. ನನ್ನ ವಿದ್ಯಾ ಗುರುಗಳು, ಹೆಸರಾಂತ ಚಿಂತಕರು ಹಾಗೂ ಸಾಹಿತಿಗಳಾದ ಪ್ರೊ.ಸಿದ್ದು ಯಾಪಲಪರವಿ ಅವರು, ದಂಡಿನ ಅವರ ಬದುಕಿನ ಮಹತ್ವದ ಘಟನೆಗಳನ್ನು ಕಟ್ಟಿ ಕೊಡುವ ಪುಸ್ತಕ ‘ದಣಿವರಿಯದ ದಾರಿ’ ಯನ್ನು ಲೇಖನಿಸಿದ್ದಾರೆ.
‘ಓದಿಸಿಕೊಂಡು ಹೋಗುವಂತೆ ಬರೆಯುವ, ಆಲಿಸುವಂತೆ ಮಾತನಾಡುವ’ ಕಲೆ ಹೊಂದಿರುವ ಪ್ರೊ. ಯಾಪಲಪರವಿ ಅವರು ಬರೆದ ಹದಿನೆಂಟು ಅಧ್ಯಾಯಗಳ ಈ ಪುಟ್ಟ ಪುಸ್ತಕ ದೊಡ್ಡ ದೊಡ್ಡ ಸಂಗತಿಗಳನ್ನು ದಾಖಲಿಸುವಲ್ಲಿ ಯಶಸ್ವಿಯಾಗಿದೆ. ಪುಸ್ತಕ ಪರಿಷ್ಕರಿಸುವ ಸಂದರ್ಭದಲ್ಲಿ ಓದುವ ಸೌಭಾಗ್ಯ ನನ್ಮ ಪಾಲಿಗೆ ಇತ್ತು ಎಂಬುದು ವಿಶೇಷ.
ಗುಣಮಟ್ಟದ ಪುಸ್ತಕಗಳನ್ನು ಪ್ರಕಟಿಸಲು ಹೆಸರುವಾಸಿಯಾಗಿರುವ ಕಾರಟಗಿಯ ಸಾಂಗತ್ಯ ಪ್ರಕಾಶನ ತುಂಬಾ ಸುಂದರವಾಗಿ ಪುಸ್ತಕ ಪ್ರಕಟಿಸಿದೆ.
ಬಾಲ್ಯದಿಂದ ಇಲ್ಲಿಯವರೆಗಿನ ಪ್ರತಿಯೊಂದು ಘಟನೆಗಳನ್ನು ಲೇಖಕರು ಸಂಕ್ಷಿಪ್ತವಾಗಿ ವಿವರಿಸಿದ್ದಾರೆ. ಮುನ್ನುಡಿ ಬರೆದ ಸು. ರಾಮಣ್ಣ ಅವರು ಕೃತಿಯ ಗಟ್ಟಿತನವನ್ನು ಅರ್ಥಪೂರ್ಣವಾಗಿ ವಿವರಿಸಿದ್ದಾರೆ. ಸ್ವಯಂ ನಿರ್ಮಿಯ ವ್ಯಕ್ತಿತ್ವದ ದಂಡಿನ ಅವರ ಬದುಕನ್ನು ಉತ್ಪೇಕ್ಷೆ ಇಲ್ಲದೆ ಬರೆದದ್ದನ್ನು ಗ್ರಹಿಸಿದ್ದಾರೆ.
ಬಾಲ್ಯದ ಬಡತನ, ತುತ್ತು ಅನ್ನಕ್ಕಾಗಿ ಪರದಾಡಿದ ದೃಶ್ಯಗಳನ್ನು ಓದುವಾಗ ಹೃದಯ ಹಿಂಡಿದ ಅನುಭವವಾಗುತ್ತದೆ. ಭೌತಿಕ ಮತ್ತು ಬೌದ್ಧಿಕ ಸಂಪತ್ತಿನ ಒಡೆಯರಾಗಿರುವ ಹಿರಿಯ ಚೇತನ ಡಾ. ದಂಡಿನ ಅವರು ತಮ್ಮ ಬದುಕಿನ ದಾರುಣ ಘಟನೆಗಳನ್ನು ಮುಕ್ತವಾಗಿ ಹಂಚಿಕೊಂಡಿದ್ದನ್ನು ಲೇಖಕರು ಹೇಳಿಕೊಂಡಿದ್ದಾರೆ.
ಲೇಖಕ ಮತ್ತು ಡಾ.ದಂಡಿನ ಅವರ ಬದುಕಿನ ಅನೇಕ ವಿಸ್ಮಯ ಸಂಗತಿಗಳನ್ನು, ಹಿರಿಯ ಶಿಕ್ಷಣ ತಜ್ಞ ಡಾ. ರಂಗನಾಥ ಅವರು ಮನೋಜ್ಞವಾಗಿ ಬರೆದಿದ್ದಾರೆ.
ಆಸಕ್ತಿಯಿಂದ ಓದಿಸಿಕೊಂಡು ಹೋಗುವ ಪ್ರತಿ ಅಧ್ಯಾಯಗಳ ಬರಹ ಅಳೆದು ತೂಗಿದಂತಿದೆ. ಭಾಷೆಯ ಮೇಲಿನ ಪ್ರಭುತ್ವ ಮತ್ತು ಜೀವನ ಚರಿತ್ರೆಯನ್ನು ಕಟ್ಟಿ ಕೊಡುವ ಶೈಲಿ ಚಿತ್ತಾಕರ್ಷಕ. ತೋಂಟದಾರ್ಯ ಮಠದ ಪೂಜ್ಯರ ಕುರಿತು ಬರೆದ ‘ಹಗಲಿನಲ್ಲಿಯೆ ಸಂಜೆಯಾಯಿತು’ ಮಾದರಿಗಿಂತ ಭಿನ್ನವಾಗಿ ಈ ಕೃತಿ ರಚನೆಯಾಗಿದೆ. ಶಿಕ್ಷಣಕ್ಕೆ ಇರುವ ತಾಕತ್ತನ್ನು ಹಾಗೂ ಡಾ. ದಂಡಿನ ಅವರ ವ್ಯಕ್ತಿತ್ವವನ್ನು ಪರಿಚಯಸಲು ಪುಸ್ತಕ ಪೂರ್ಣ ಯಶಸ್ವಿಯಾಗಿದೆ.
ಹಗುರವಾದ ಹಾಳೆಗಳು, ಸುಂದರ ವಿನ್ಯಾಸ, ಆಕರ್ಷಕ ಮುಖಪುಟ ಈ ಕೃತಿಯ ಹೆಗ್ಗಳಿಕೆ.
ಓದುವ ಆಸಕ್ತಿ, ಸಮರ್ಪಕ ಮಾಹಿತಿ ಮತ್ತು ವ್ಯಕ್ತಿತ್ವ ರೂಪಿಸಿಕೊಳ್ಳಲು ಸ್ಪೂರ್ತಿ ನೀಡಲು ದಣಿವರಿಯದ ದಾರಿ ಸುಗಮ ಮಾರ್ಗ ರೂಪಿಸಿದೆ.
ತಮ್ಮ ಹುಟ್ಟೂರು ದ್ಯಾಮಣಸಿಯಲ್ಲಿ ರೈತರೊಂದಿಗೆ, ಶ್ರಮಿಕರೊಂದಿಗೆ ಸರಳವಾಗಿ ಎಂಬತ್ತೆಂಟನೆಯ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳಲು ನಿರ್ಧರಿಸಿರುವ ದಿನದಂದು ಪುಸ್ತಕ ಲೋಕಾರ್ಪಣೆ ಆಗುತ್ತಿರುವುದು ಯೋಗಾಯೋಗ.
ವಿಶೇಷ ಪ್ರೇರಣೆ ನೀಡುವ ಪುಸ್ತಕವಿದು. ಲಕ್ಷಾಂತರ ವಿದ್ಯಾರ್ಥಿಗಳು, ಸಾವಿರಾರು ಪ್ರಾಧ್ಯಾಪಕರು ಈ ಪುಸ್ತಕ ಓದುವುದರ ಮೂಲಕ ಚೈತನ್ಯ ಹೆಚ್ಚಿಸಿಕೊಳ್ಳಲಿ ಎಂಬ ಹೆಬ್ಬಯಕೆ ನನ್ನದು.
–-ಪ್ರೊ.ಸುಧಾ ಹುಚ್ಚಣ್ಣವರ
ಸಾಹಿತಿಗಳು ಶಿರಹಟ್ಟಿ.