ಕನ್ನಡ ತೇರನೆಳೆವ ಕನ್ನಡದ ಕುಲಗುರು
“ಜನ ಮರುಳೋ, ಜಾತ್ರೆ ಮರುಳೋ….” ಎನ್ನೋದು ಜಾತ್ರೆಯಂಥ ಅಂಧಾನುಕರಣೆ ಯ ಜನ ಸಮೂಹವನ್ನು ಕುರಿತಾದ ನಮ್ಮಲ್ಲಿ ತಲೆಮಾರುಗಳಿಂದ ನಮ್ಮ ನಾಲಿಗೆಯ ಮೇಲೆ ಪದೇಪದೇ ಉಚ್ಛಾರಗೊಳ್ಳುತ್ತಿರುವ ಮಾತು.
ಈ ಮಾತು ಸುಮ್ಮನೆ ಧಾರ್ಮಿಕ ವ್ಯವಸ್ಥೆ ಯನ್ನು ಮತ್ತು ದೈವೀ ಭಾವನೆಯನ್ನು ಅಣಕಿಸುವಂಥದ್ದಲ್ಲ.
ಬದಲಿಗೆ ಜಾತ್ರೆ,ಉತ್ಸವಗಳಂಥ ಧರ್ಮ ಮತ್ತು ಆಧ್ಯಾತ್ಮಿಕ ಆಚರಣೆಯ ಉದ್ದೇಶವನ್ನು ಸರಿಯಾಗಿ ಅರಿಯದೇ ಮತ್ತು ಪಾಲಿಸದೇ ಯಾಂತ್ರಿಕವಾಗಿ,ತೋರಿಕೆಗಾಗಿ,ಮನರಂಜನೆಗಾಗಿ ಅವುಗಳಲ್ಲಿ ತೊಡಗಿಕೊಂಡು ನಿಷ್ಪ್ರಯೋಜಕತೆಯಿಂದ ಸಮಯ ಮತ್ತು ಹಣವನ್ನು ವ್ಯರ್ಥವಾಗಿಸುವ ರೀತಿಯನ್ನು ಈ ಮಾತಿನಲ್ಲಿ ವಿಡಂಬಿಸಲಾಗುತ್ತದೆ.ಇದು ಅಂದಿನ ಮುಗ್ಧ,ಅಮಾಯಕ ಮತ್ತು ಅನಕ್ಷರಸ್ಥ ಸಮುದಾಯದಿಂದ ಹಿಡಿದು ಇಂದಿನ ಮುಗ್ಧತನವನ್ನೇ ಕಳೆದುಕೊಂಡು, ಪ್ರತಿಯೊಂದನ್ನೂ ಪ್ರಶ್ನಿಸುವ ಮನೋಭಾವ ಬೆಳೆಸಿಕೊಂಡಿರುವ ವಿದ್ಯಾವಂತ ಮತ್ತು ಪ್ರಜ್ಞಾವಂತ ಸಮುದಾಯವಿರುವ ಸಂದರ್ಭದಲ್ಲೂ ಈ ಮಾತು ಇನ್ನೂ ಜೀವಂತವಾಗಿರುವುದನ್ನು ನಾವು ಅಲ್ಲಗಳೆಯಲಾಗದು.ಎಂದಿನಿಂದಲೂ ಹೀಗೆಯೇ ಉಳಿದು ಬಂದಿರುವ ಈ ಸ್ಥಿತಿಗೆ ನಮ್ಮ ಧಾರ್ಮಿಕ ಮತ್ತು ಆಧ್ಯಾತ್ಮಿಕ ಸಂಸ್ಥೆಗಳೇ ಮುಖ್ಯ ಕಾರಣ ಎಂಬುದೂ ಕೂಡ ಒಪ್ಪಲೇಬೇಕಾದ ಸಂಗತಿ.
ಈ ಹಿನ್ನೆಲೆಯಲ್ಲಿ ಅನೇಕ ಧರ್ಮ ಮತ್ತು ದೈವೀ ನೆಲೆಯ ನಮ್ಮ ಕೇಂದ್ರಗಳು ಭಕ್ತಿಯ ಮೂಲ ಉದ್ದೇಶವಾದ ಜಾಗೃತಿ ಮತ್ತು ತಿಳುವಳಿಕೆಗಳನ್ನು ಸಮುದಾಯದಲ್ಲಿ ಬೆಳೆಸುವ ಬದಲಿಗೆ ಇಂಥ ಜಾತ್ರೆ ಮತ್ತು ಉತ್ಸವಗಳನ್ನು ಮೂಢತೆ ಹಾಗೂ ಮುಗ್ಧತೆಗಳ ಉಳುವಿಗಾಗಿ ಬೆಳೆಸಿಕೊಂಡು ಬಂದಿರುವ ನಮ್ಮ ಸಂಪ್ರದಾಯಸ್ಥ ನೆಲೆಗಳಲ್ಲಿ ಪರಿವರ್ತನೆ,ಸುಧಾರಣೆ ಬಯಸುವುದು ತೀರಾ ಕಷ್ಟಕರ ಮತ್ತು ಅಸಹಜತನ ಎನ್ನುವಂಥ ತಿಳುವಳಿಕೆ ನಮ್ಮೆಲ್ಲರಲ್ಲಿ ಗಟ್ಟಿಯಾಗಿ ಬಿಟ್ಟಿದೆ.ಆದರೆ ಇಂಥ ಮಾನಸಿಕ ಸ್ಥಿತಿಯ ಸಮಾಜದಲ್ಲಿ ಇದಕ್ಕೆ ವಿಭಿನ್ನವಾಗಿ, ತಮ್ಮ ಮೂಲ ಮತ್ತು ಸಹಜ ನೀತಿಯಾದ ಧರ್ಮ ಮತ್ತು ಆಧ್ಯಾತ್ಮಿಕತೆಯ ಬದಲಿಗೆ ನಮ್ಮ ಭಾಷೆಯ ರಕ್ಷಣೆ ಮತ್ತು ಬೆಳವಣಿಗೆಗಾಗಿ ಮಠದಂಥ ಒಂದು ಧಾರ್ಮಿಕ ಸಂಸ್ಥೆ ಕಳೆದ ಇಪ್ಪತ್ತೇಳು ವರ್ಷಗಳಿಂದ ಧಾರ್ಮಿಕ ಪರಿಭಾಷೆಯ ಹಾಗೂ ಆಚರಣೆಯ ಉತ್ಸವವಾದ ಜಾತ್ರೆಯನ್ನು ಹಮ್ಮಿಕೊಳ್ಳುತ್ತಿರುವದು ನಿಜಕ್ಕೂ ಸೋಜಿಗದ ಸಂಗತಿಯಾಗಿದೆ.ಇಂಥ ವಿಶೇಷ ಮಠವೇ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಮಹಾರಾಷ್ಟ್ರ ಗಡಿಯ ಸಣ್ಣ ಹಳ್ಳಿ ಚಿಂಚಣಿಯಲ್ಲಿ ಇರುವ ಲಿಂಗಾಯತ ಶರಣ ಪರಂಪರೆಗೆ ಸೇರಿದ ಸಿದ್ಧಸಂಸ್ಥಾನ ವಿರಕ್ತ ಮಠ.!
ಈ ಮಠವೂ ಕೂಡ ಮೊದಲು ಅಂದರೆ ಈಗಿನ ಪೀಠಾಧಿಪತಿಗಳಾದ ಪೂಜ್ಯ ಶ್ರೀ ಮ.ನಿ.ಪ್ರ.ಅಲ್ಲಮಪ್ರಭು ಮಹಾಸ್ವಾಮಿಗಳವರು ಬರುವ ಮುಂಚೆ ತಮ್ಮ ಧಾರ್ಮಿಕ ಸಂಪ್ರದಾಯ ಆಚರಣಾ ಪರಂಪರೆಯಲ್ಲೇ ಇದ್ದು,ಇವರು ಬಂದ ನಂತರ ಪರಿವರ್ತನೆಯ ರೂಪವನ್ನು ಪಡೆದು ಕನ್ನಡ ಪೀಠವಾಗಿ ಧರ್ಮ ಪ್ರಸಾರಕ್ಕಿಂತ ಭಿನ್ನವಾಗಿ ಕನ್ನಡವನ್ನು ಕಾಯುವ,ಕಟ್ಟುವ ವಿಶೇಷ ನಾಡುನುಡಿಯ ಪೀಠವಾಗಿ ಆ ಭಾಗದಲ್ಲಿ ಸದ್ದುಗದ್ದಲವಿಲ್ಲದೆ ಕನ್ನಡ ಕಾಯಕದಲ್ಲಿ ತನ್ನನ್ನು ಅರ್ಪಿಸಿಕೊಂಡಿರುವದು ವಿಶೇಷವಾಗಿದೆ.
ಈಗಿನ ಪೀಠಾಧಿಪತಿಗಳಾದ ಪೂಜ್ಯ ಶ್ರೀ ಮ.ನಿ.ಪ್ರ.ಅಲ್ಲಮಪ್ರಭು ಮಹಾಸ್ವಾಮಿಗಳವರು ೧೯೯೭ರಲ್ಲಿ ಈ ಮಠದ ಅಧಿಕಾರ ವಹಿಸಿಕೊಳ್ಳುವಾಗ ಇವರ ಗುರುಗಳಾದ ಗದುಗಿನ ಲಿಂ.ಡಾ.ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳವರು “ಇದು ಮಹಾರಾಷ್ಟ್ರ ಗಡಿಯ ನೆಲ, ಇಲ್ಲಿ ನಮ್ಮ ಧರ್ಮ ಪ್ರಸಾರಕ್ಕಿಂತಲೂ ಮುಖ್ಯವಾಗಿ ಕನ್ನಡವನ್ನು ಕಾಪಾಡುವದು ಬಹಳ ಅವಶ್ಯಕವಾಗಿದೆ.ಹಾಗಾಗಿ ನಾನು ನಿಮಗೆ ಕನ್ನಡ ದೀಕ್ಷೆ ನೀಡುತ್ತಿದ್ದೇನೆ.ನೀವು ಈ ದೀಕ್ಷೆಯನ್ನು ತೊಟ್ಟು ಕನ್ನಡ ಸ್ವಾಮಿಗಳಾಗಬೇಕು” ಎಂದು ಹೇಳಿದ್ದರು.ಕಾವಿ ತೊಟ್ಟು,ಶರಣ ಪರಂಪರೆಯ ವಿರಕ್ತ ಮಠದ ಪಟ್ಟವೇರಿದರೂ ಸಹ ಗುರುಗಳ ಆದೇಶ ಆ ಸಂಪ್ರದಾಯಶೀಲತೆಯನ್ನು ಅಳಿಸಿ ಹಾಕಿತು.ಅಷ್ಟೇ ಅಲ್ಲ ಒಂದರ್ಥದಲ್ಲಿ ಕನ್ನಡವು ಶರಣ ಪರಂಪರೆಯ ವಾರಸುದಾರಿಕೆಯೂ ಹೌದು ಎಂಬ ತಿಳುವಳಿಕೆಯೂ ಇವರಲ್ಲಿ ಬಲವಾಯಿತು.ಅವರೇ ಹೇಳುವಂತೆ,ಶರಣ ಧರ್ಮ ಎಂದರೆ ಕನ್ನಡ ಧರ್ಮ; ಏಕೆಂದರೆ ಶರಣರು ಕನ್ನಡದಲ್ಲೇ ಧರ್ಮ ಕಟ್ಟಿದರು.ನಾವು ವಿರಕ್ತರು ಅವರು ಕಟ್ಟಿದ ಧರ್ಮದ ಪ್ರಸಾರಕರು.ಅಂದಾಗ ನಾವು ಈ ಭಾಷೆಯ ವಾರಸುದಾರರೂ ಆಗುತ್ತೇವೆ,ಶರಣರ ಸಿದ್ಧಾಂತಗಳನ್ನು ಪ್ರಸಾರ ಮಾಡುವುದು ಹೇಗೆ ನಮ್ಮ ಕಾಯಕವೋ,ಹಾಗೆಯೇ ಕನ್ನಡವನ್ನು ಪ್ರಸಾರ ಮಾಡುವ,ರಕ್ಷಿಸುವ ಕಾಯಕವೂ ಕೂಡ ನಮ್ಮದೇ ಆಗಿದೆ.ಇದಕ್ಕೆ ವಿರಕ್ತ ರಾದ ನಾವು ಹಕ್ಕುದಾರರಾಗಿದ್ದೇವೆ.ಆ ಕಾರಣಕ್ಕಾಗಿ ನಾವು ಕನ್ನಡ ಕಾಯಕದಲ್ಲಿ ತೊಡಗಿಕೊಂಡಿದ್ದೇವೆ.ನಮ್ಮ ಮಠದಲ್ಲಿ ಪೀಠಾಧಿಪತಿಗಳಾದ ನಾವು ಭಕ್ತರ ಭೇಟಿಗಾಗಿ ಆಸೀನರಾಗಲು ಧಾರ್ಮಿಕವಾಗಿ ಅಲ್ಲಮಪ್ರಭು ಪೀಠ ಮತ್ತು ಭಾಷಿಕವಾಗಿ ಕನ್ನಡ ಪೀಠ ಎಂದು ಎರಡು ಪೀಠಗಳನ್ನು ನಿರ್ಮಿಸಿಕೊಂಡಿದ್ದೇವೆ. ನಾವು ಬಹುವಾಗಿ ಕುಳಿತುಕೊಳ್ಳುವುದು ಕನ್ನಡ ಬಾವುಟ ಧರಿಸಿದ ಕನ್ನಡ ಪೀಠದ ಮೇಲೆಯೇ.ಈ ಪೀಠಕ್ಕೆ ಗುರುಗಳಾದ ಗದುಗಿನ ಲಿಂ.ಜಗದ್ಗುರು ತೋಂಟದಾರ್ಯ ರೇ ನಿರ್ದೇಶನದಂತೆ ಸಂಪ್ರದಾಯದಾಯಿಕವಾಗಿ ಕೈಗಳನ್ನಿಡುವ ಎರಡು ಕಡೆಗಳಲ್ಲಿ ಕ್ರೂರತನದ ಪ್ರತೀಕವಾದ ಸಿಂಹದ ಕೆತ್ತನೆಯ ಬದಲಿಗೆ ಶಾಂತಿ ಸೌಮ್ಯತೆಯ ಪ್ರತೀಕವಾದ ನಂದಿಯ ಮೂರ್ತಿಯನ್ನು ಅಳವಡಿಸಿದ್ದೇವೆ ಎಂದು ತಮ್ಮ ಕನ್ನಡ ಕುರಿತಾದ ದೃಷ್ಟಿ ಮತ್ತು ಉದ್ದೇಶಗಳನ್ನು ಸುದೀರ್ಘವಾಗಿ ವಿವರಿಸುತ್ತಾರೆ.ಈ ಇಪ್ಪತ್ಮೂರು ವರ್ಷಗಳ ತಮ್ಮ ಅವಧಿಯಲ್ಲಿ ೪೬ ಅಮೂಲ್ಯ ಕೃತಿಗಳು ಪ್ರಕಟಗೊಂಡಿವೆ.ಅವೆಲ್ಲವೂ ಕನ್ನಡ ನಾಡು,ಭಾಷೆ,ಗಡಿ ಮತ್ತು ಹೊರನಾಡಿನ ಕನ್ನಡ ಸ್ಥಿತಿ, ಭಾಷಾ ಬಾಂಧವ್ಯ,ಸಾಮರಸ್ಯದ ಅನಿವಾರ್ಯ ಮತ್ತು ಅವಶ್ಯಕತೆ, ಚರಿತ್ರೆ,ಪರಂಪರೆಗಳಿಗೆ ಸಂಬಂಧಿಸಿದ ಸಂಶೋಧನಾತ್ಮಕ ಕೃತಿ ಗಳಾಗಿವೆ.ನಮ್ಮ ಮಠದಿಂದ ಪ್ರಕಟಗೊಂಡ ಈ ಮಾಲಿಕೆಯ ನಾಲ್ಕು ಕೃತಿಗಳನ್ನು ನಮ್ಮ ಕರ್ನಾಟಕ ಸರ್ಕಾರ ವಿಧಾನ ಪರಿಷತ್ತಿನ ಸದಸ್ಯರು ಓದಲೇಬೇಕಾದವುಗಳೆಂದು ಭಾವಿಸಿ ಅವುಗಳನ್ನು ಖರೀದಿಸಿ ವಿಧಾನ ಪರಿಷತ್ತಿನ ಎಲ್ಲಾ ಸದಸ್ಯರಿಗೆ ವಿತರಿಸಿದೆ.
ಇದು ನಮಗೆ ನಿಜಕ್ಕೂ ನಮ್ಮ ಈ ಕನ್ನಡ ಕಾಯಕದ ಬಗ್ಗೆ ಸಾರ್ಥಕ್ಯ ಹಾಗೂ ಅಭಿಮಾನದ ಭಾವ ಮೂಡಿಸಿದೆ.
ನಮ್ಮ ಮಠದಲ್ಲಿ ಪ್ರತಿವರ್ಷ ಧಾರ್ಮಿಕ ಸಂಪ್ರದಾಯದಂತೆ ಪ್ರವಚನ ಜಾತ್ರೆ ಏರ್ಪಡಿಸುವ ಬದಲಿಗೆ ರಾಜ್ಯೋತ್ಸವ ಆಚರಣೆಯ ತಿಂಗಳಾದ ನವೆಂಬರ ೨ ಅಥವಾ ೩ ನೇರವಾಗಿ ತಾರೀಖಿನಂದು ಕನ್ನಡ ಜಾತ್ರೆಯನ್ನು ಏರ್ಪಡಿಸುತ್ತೇವೆ.ಅದಕ್ಕಾಗಿ ವಿಶೇಷವಾದ ಕನ್ನಡ ತೇರನ್ನು ನಿರ್ಮಿಸಲಾಗಿದೆ.ಇದರಲ್ಲಿ ಕನ್ನಡದ ಕವಿ ಪರಂಪರೆಯ ಪ್ರಮುಖರ ಭಾವಚಿತ್ರಗಳನ್ನು,೩೬ ಕನ್ನಡಪರ ಘೋಷವಾಕ್ಯಗಳನ್ನು ಕೆತ್ತಲಾಗಿದೆ.ತೇರಿನ ಮೇಲ್ಭಾಗದಲ್ಲಿ ಎಂಟು ಮಂಟಪಗಳನ್ನು ನಿರ್ಮಿಸಿ ಅವುಗಳಲ್ಲಿ ನಮ್ಮ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಎಂಟು ಜನ ಸಾಹಿತಿಗಳ ಭಾವಚಿತ್ರಗಳನ್ನು ಅಳವಡಿಸಿ , ಅದರಲ್ಲಿ ತಾಯಿ ಭುವನೇಶ್ವರಿಯ ಮೂರ್ತಿಯನ್ನು ಪ್ರತಿಷ್ಠಾಪಿಸಿ ರಥೋತ್ಸವ ಮಾಡಲಾಗುತ್ತದೆ.ಇನ್ನು ಪಲ್ಲಕ್ಕಿಯಲ್ಲಿ ಕನ್ನಡದ ಅಮೂಲ್ಯ ಕೃತಿಗಳನ್ನಿರಿಸಿ ಮೆರವಣಿಗೆ ಮಾಡಲಾಗುತ್ತದೆ.ಈ ಪಲ್ಲಕ್ಕಿಯನ್ನು ಈ ಜಿಲ್ಲೆಯ ಶಾಸಕರು ಹಾಗೂ ಸಚಿವರುಗಳೇ ಹೊರುತ್ತಾರೆ.
ಹೀಗೆ ಪೂಜ್ಯ ಶ್ರೀ ಮ.ನಿ.ಪ್ರ.ಅಲ್ಲಮಪ್ರಭು ಮಹಾಸ್ವಾಮಿಗಳವರು ತಮ್ಮ ಕನ್ನಡ ಕಾಯಕದ ಬಗ್ಗೆ ಮನದುಂಬಿ ಮಹಾಕವಿಯೋಪಾದಿಯಲ್ಲಿ ಹೇಳುತ್ತಲೇ ಇರುತ್ತಾರೆ.ಇವರ ಇಂಥ ಮಾತುಗಳಲ್ಲೊಂದು “ಗದುಗಿನ ಜಗದ್ಗುರುಗಳವರ ಶಿಷ್ಯರಾದವರಿಗೆ ಎರಡೇ ಎರಡು ಆದರ್ಶಗಳು ಮತ್ತು ಮೌಲ್ಯಗಳು; ಅವು ಯಾವುವೆಂದರೆ ಒಂದು ಬಸವಣ್ಣ ಇನ್ನೊಂದು ಕನ್ನಡ.ಹಾಗಾಗಿ ನಾವು ಅವರ ಶಿಷ್ಯರಾಗಿ ರುವುದರಿಂದ ನಮಗೆ ಅವೆರಡೇ ಸಿದ್ಧಾಂತವಾಗಿವೆ,ಕಾಯಕವಾಗಿದೆ;ಜೀವನದ ಉಸಿರು ಕೂಡ ಆಗಿವೆ” ಎಂದು ಹೇಳುವ ಮಾತುಗಳು ಅಕ್ಷರಶಃ ಸತ್ಯವಾಗಿವೆ.ಹಾಗಾಗಿ ಈ ಪೂಜ್ಯರನ್ನು ಅಲ್ಲಿನ ಹಾಗೂ ಹೊರನಾಡಿನ ಜನ ಕನ್ನಡ
ಸ್ವಾಮಿಗಳೆಂದು,ಇವರು ಮಠವನ್ನು ಕನ್ನಡ ಮಠವೆಂದೂ,ಇವರ ಜಾತ್ರೆಯ ತೇರನ್ನು ಕನ್ನಡ ತೇರು ಎಂದೂ, ಪಲ್ಲಕ್ಕಿಯನ್ನು ಕನ್ನಡ ಪಲ್ಲಕ್ಕಿ ಎಂದೂ ಕರೆಯುವುದು ಯತಾರ್ಥವಾಗಿದೆ.ಆದ್ದರಿಂದ ನಾವುಗಳೆಲ್ಲಾ ಅಪರೂಪದ ಈ ಪೂಜ್ಯರನ್ನು,ಅವರು ಮಠ,ತೇರು,ಪಲ್ಲಕ್ಕಿ ಮತ್ತು ಜಾತ್ರೆಗಳನ್ನು ಅವಶ್ಯವಾಗಿ ನೋಡಲೇಬೇಕಾಗಿದೆ.ಅವರ ಪ್ರಕಟಣೆಯ ಕೃತಿಗಳನ್ನು ಓದಲೇಬೇಕಾಗಿದೆ.ಆ ಮೂಲಕ ನಮ್ಮೊಳಗೂ ಕನ್ನಡವನ್ನು ತುಂಬಿಕೊಳ್ಳಬೇಕಾಗಿದೆ.
-ಕೆ.ಶಶಿಕಾಂತ
ಲಿಂಗಸೂಗೂರು.
ಕನ್ನಡವನ್ನೇ ಧರ್ಮ ಎನ್ನುವ ಈ ಮಠ ವಿಶೇಷವಾದುದು. ಇದರ ಬಗ್ಗೆ ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು.