ಬೆಸುಗೆಯ ಬಂಡಿ

ಬೆಸುಗೆಯ ಬಂಡಿ

ನಾ ಕಂಡ ಬೆಸುಗೆಯ ಬಂಡಿ ಚಿಕ್ಕವರಿದ್ದಾಗ ರಜೆಗಳಲ್ಲಿ ಅಜ್ಜಿ ಊರಿಗೆ  ತಂದೆ ತಾಯಿಯ ಜೋತೆ ಹೊಗುತ್ತಿದ್ದೆವು. ಹಳ್ಳಿ ಊರು ಬಸ್ಸಿನ ಅನಕೂಲತೆವಿಲ್ಲದ ಕಾರಣ ಪಕ್ಕದ ಊರಿಗೆ ಬಸ್ ಬರುತ್ತಿತ್ತು, ನಂತರ ಎತ್ತಿನ ಬಂಡಿಯಲ್ಲಿ ಕುಳಿತು ನಮ್ಮೂರಿಗೆ ಹೊಗುತ್ತಿದ್ದೆವು. ಹೊರಡುವಾಗ ಸುತ್ತಮುತ್ತಲಿನ ತೋಟಗಳಲ್ಲಿನ ಬೇಳೆಗಳನ್ನು ನೋಡುತ್ತಾ, ಬರೀ ಹಸಿರು ಹಾಸಿಗೆ, ಕಣ್ಣು ಪಿಳಕಿಸುತ್ತ ನೊಡಿದ್ದೆ ನೊಡಿದ್ದು. ಸುತ್ತಮುತ್ತ ಗಿಡಗಳ ನೇರಳಲ್ಲಿ ನಮ್ಮ ಬಂಡಿ ಘಲ್ ಘಲ್ ಸಪ್ಪಳ ಮಾಡುತ್ತಾ ಹೋಗುವಾಗ ಸಂತೋಷದಿಂದ ಕುಣಿಯುತ್ತಿದ್ದೆವು. ನಮ್ಮಜ್ಜಿಯ ತೋಟ ಭೀಮಾನದಿ ದಂಡೆಯ ಮೇಲೆ . ಇನ್ನೆನು ಕೇಳ್ತಿರಿ ಮುಂಜಾನೆಯೆದ್ದು ಸೀದಾ ನದಿಯಲ್ಲಿ ಡುಮ್ಕಿ ಹೊಡೆಯೊದು ನಂತರ ತೊಟಕ್ಕೆ ಹೋಗಿ ದಣಿವಾಗುವವರೆಗೆ ತಿರಗಿದ್ದೆ ತಿರುಗಿದ್ದು. ಮುಂಜಾವಿನ ಸೌಂದರ್ಯ  ನೋಡಲು ಮನ ಸೂರೆಗೊಳ್ಳುವಂತಿರುತ್ತಿತ್ತು. ಕಬ್ಬಿನ ತೋಟದಲ್ಲಿ ನವಿಲುಗಳು ಸಂಭ್ರಮ ನೋಡುತ್ತಿದ್ದೆವು. ನಮ್ಮ ಮಾವ ತೋಟ ಬಹಳ ಸುಂದರವಾಗಿ ಮಾಡಿದ್ದರು. ಎಲ್ಲ ತರಹದ ಹಣ್ಣಿನ ಮರಗಳು, ಭತ್ತ, ಗೋಧಿ, ಜೋಳ, ಕಡ್ಲೆ , ತೊಗರಿ ಎಲ್ಲ ಧಾನ್ಯಗಳನ್ನು ಬೆಳೆಯುತ್ತಿದ್ದರು. ಚಿಕ್ಕ ಚಿಕ್ಕ ಮಡುವು ಮಾಡಿ ತರಕಾರಿಗಳನ್ನೆಲ್ಲ ಬೆಳೆಯುತ್ತಿದ್ದರು. ಆಗಿನ ಕಾಲದಲ್ಲಿ ಮನೆಗಳಲ್ಲಿ ಕುದುರೆಗಳಿರುತ್ತಿದ್ದವು. ಹಿರಿಯರೆಲ್ಲ ಕುದುರೆಯ ಮೇಲೆ ಓಡಾಡುತ್ತಿದ್ದರು. ತೋಟದಲ್ಲಿ ಎತ್ತುಗಳು ಮೂಲಕ ಮಟ್ಟಿ ಹೊಡೆದು ಬೆಳೆಗಳಿಗೆ ನೀರು ಉಣ್ಣಿಸುತ್ತಿದ್ದ ರು. ಆಳು ಮಗ ಜಾನಪದ ಹಾಡು ಹಾಡುತ್ತಾ ಮಡಿ ಮಾಡಿ ನೀರು ಬಿಡುತ್ತಿದ್ದ. ಮಧ್ಯಾಹ್ನ ಬಂಡಿಯಲ್ಲಿ ಬುತ್ತಿಯ ಜೋತೆ ಮಾವನ ಮಕ್ಕಳೆಲ್ಲ ಬರುತ್ತಿದ್ದರು. ಎಲ್ಲರೂ ಕೂಡಿ ಮರದ ಕೆಳಗೆ ಕುಳಿತು ಊಟ ಮಾಡುತ್ತಿದ್ದೆವು. ತೋಟದಲ್ಲಿ ಕುಳಿತು  ಡಬಲ್ ಡಬಲ್ ರೊಟ್ಟಿ, ಜಿದ್ದು ಕಟ್ಟಿ ತಿನ್ನುತ್ತಿದ್ದೆವು, ನಂತರ ಹುಲ್ಲಿನ ಮೇಲೆ ಹೊರಳಿಡಿ ಅಲ್ಲೆ ಸ್ವಲ್ಪ ಮಲಗುತ್ತಿದ್ದೆವು. ಇಳಿ ಹೊತ್ತಿಗೆ ಎಲ್ಲ ಪಕ್ಷಿಗಳು ತೋಟದ ಮರಗಳಲ್ಲಿಯ ಗೂಡಿಗೆ ಬಂದು ಸೇರುತ್ತಿದ್ದವು. ಚಿಕ್ಕ ಕರುಗಳ ಜೋತೆ ಚೆಲ್ಲಾಟವಾಡಿ ಮರಳಿ ಬಂಡಿಯಲ್ಲಿ ಕುಳಿತು ಮನೆಸೇರುತ್ತಿದ್ದೆವು. ನಾನಂತೂ ನಮ್ಮಜ್ಜನ ಕುದುರೆಯ ಮೇಲೆಯೇ ಕುಳಿತು ತೋಟದಲ್ಲಿ ತಿರಗಿದ್ದೆ ತಿರುಗಿದ್ದು. ನಿಜ ಕಬ್ಬಿನ ಘಾಣದಿಂದ ಬೆಲ್ಲ ತಯಾರಿಸುವುದು ನೋಡಲು ಬಹಳ ಆಕರ್ಷಣೆಯದ್ದು. ಕಬ್ಬಿನ ಹಾಲು ಕುಡಿಯುವುದು, ಪಾಕದ ರಸ ಸವಿಯುವುದು, ಜೋಳ, ಹಸಿಕಡ್ಲೆ  ಮೆಕ್ಕೆತೆನೆ ಬೆಂಕಿಯಲ್ಲಿ ಸುಟ್ಟು ತಿನ್ನುವುದು ಎಲ್ಲ ನೆನೆಸಿಕೊಂಡರೆ ಮೈ ರೊಮಾಂಚನಗೊಳ್ಳುತ್ತದೆ. ಇವತ್ತಿನ  ಮತ್ತು ಮೊದಲಿನ ಒಕ್ಕಲುತನ ಪದ್ಧತಿ ಭಿನ್ನವಾಗಿದೆ. ಮೊದಲಿನ ಜನ ಕಷ್ಟಾಳುಗಳು, ತಿಂದ ಆಹಾರ ಮೈಗೆ ಹತ್ತುತ್ತಿತ್ತು. ರೋಗ ರುಜಿನಗಳು ಇರುತ್ತಿರಲಿಲ್ಲ. ಈಗಿನ ವ್ಯವಸಾಯ ಪದ್ಧತಿ ಲಾಭವಿದೆ. ಆದರೆ ಎಲ್ಲ ಹ್ಯಾಬ್ರಿಡಿ. ನಾನಂತೂ ನನ್ನ ಮಕ್ಕಳಿಗೆ ಆಗಿನ ಕಾಲದ ವ್ಯವಸಾಯ ಪದ್ಧತಿ, ಪ್ರೀತಿ ವಾತ್ಸಲ್ಯದ ರಕ್ತಸಂಬಂಧದ ಕೊಂಡಿಗಳ ಬಗ್ಗೆ ಅಲ್ಲದೆ ನಾ ತೋಟದಲ್ಲಿ ಕಳೆದ ದಿನಗಳ ಬಗ್ಗೆ  ಆನಂದದಿಂದ ವರ್ಣಿಸುತ್ತಲಿರುತ್ತೆನೆ.
ನಿಜವಾಗಿಯೂ ಆ ಬೆಸುಗೆಯ ಕೊಂಡಿಗಳು ಮರೆಯಾದವು ಅಲ್ಲಾ! ವ್ಯಥೆಯಾಗುತ್ತದೆ. ಮತ್ತೆ ಮರಳಿ ಆ ದಿನಗಳನ್ನು ಕಾಣ ಬಲ್ಲೆವೆ?

✍️ ಶ್ರೀಮತಿ ಸುಲೋಚನಾ ಮಾಲಿಪಾಟೀಲ ಧಾರವಾಡ.

Don`t copy text!