ಪೂಜ್ಯ ತೋಂಟದಾರ್ಯ ಅಜ್ಜಾ ಅವರ ಅನುಪಸ್ಥಿತಿ ಸಹಿಸಲಾಗದು

ಇಂದು ಮಠಗಳ ಮತ್ತು ಮಠಾಧೀಶರ ನಿಲುವು ಒಲವುಗಳನ್ನು ನೋಡಿದಾಗ ಮತ್ತೆ ಮತ್ತೆ ನೆನಪಾಗುತ್ತಾರೆ ಪೂಜ್ಯ ತೋಂಟದಾರ್ಯ ಸಿದ್ಧಲಿಂಗ ಮಹಾಸ್ವಾಮಿಗಳು, ಎಲ್ಲ ಉಪಾದಿಗಳನ್ನು ಸ್ವಯಂ ದೂರ ಸರಿಸಿ, ಪೂರ್ಣ ಪ್ರಮಾಣದ ಮಾತೃ ಹೃದಯಿಗಳಾಗಿ, ಅಜ್ಜಾ ಅವರು ಎಂದು ಎನಿಸಿಕೊಂಡವರು. ಈಗ ನೊಂದವರ ನೋವನ್ನು ಆಲಿಸುವವರೇ ಇಲ್ಲ ಎಂಬ ಅನಾಥ ಭಾವ ಮಾತ್ರ ನಮ್ಮ ಪಾಲಿಗೆ.‌

ಲಿಂಗಾಯತ ಧರ್ಮದ ಮೌಲ್ಯಕ್ಕೆ ಪೆಟ್ಟು ಬೀಳುವ ಕೆಲಸ ಯಾರೇ ಮಾಡಿದರೂ ಸಿಂಹಘರ್ಜನೆ. ತಪ್ಪು ಮಾಡುವ ಸೋ ಕಾಲ್ಡ್ ಲಿಂಗಾಯತರ ಮೇಲೆ ನಿರಂತರ ಗದಾ ಪ್ರಹಾರ. ಸಮಕಾಲೀನ ಮಠಾಧೀಶರಿಗೂ ಅದೇ ಪ್ರಮಾಣದ ಎಚ್ಚರಿಕೆ ನೀಡುತ್ತಿದ್ದರು.
‘ಸ್ವಾಮಿಗಳಾದವರು ನಿಜಾರ್ಥದ ನಿರಂಜನ ವಿರಕ್ತರಾಗಿರಬೇಕು, ಕುಟುಂಬ ವ್ಯಾಮೋಹ, ಸ್ವಜನ ಪಕ್ಷಪಾತ, ವೈಯಕ್ತಿಕ ಬದುಕಿನ ಐಷಾರಾಮಿ ಜೀವನ, ಅನಗತ್ಯ ಆಚರಣೆಗಳು, ಮಾನ ಸನ್ಮಾನ ಮಾಡಿಸಿಕೊಳ್ಳುವುದು ಸ್ವಾಮಿಗಳ ಕೆಲಸವಲ್ಲ, ಅವರು ಇತರರಿಗೆ ಸಂಮಾನಿಸಿ ಹುರಿದುಂಬಿಸಬೇಕು…’ ಎಂಬ ದಿಟ್ಟ ನಿಲುವಿನ ಗಟ್ಟಿ ಮಾತುಗಳು ಈಗಲೂ ರಿಂಗಣವಾಡುತ್ತಿವೆ.

ಈಗ ರಾಜ್ಯದಲ್ಲಿ ಸಾವಿರಾರು ಸ್ವಾಮಿಗಳಿದ್ದಾರೆ. ಅವರು ಆಶೀರ್ವಚನ ನೀಡುವ ಸಂದರ್ಭದಲ್ಲಿ ಆಡುವ ಮಾತುಗಳ ಕೇಳಿದಾಗ ಎಲ್ಲಿಲ್ಲದ ನಿರಾಸೆ ಮೂಡುತ್ತದೆ.

ಅಜ್ಜಾ ಅವರು ಮಾತನಾಡುವ ಶೈಲಿ, ವಿಷಯ ಪ್ರತಿಪಾದನೆ, ಆಳವಾದ ಅಧ್ಯಯನ, ಖಚಿತ ನಿಲುವು ಹಾಗೂ ಎಲ್ಲಕ್ಕಿಂತ ಮುಖ್ಯವಾಗಿ ಕಂಚಿನ ಕಂಠದ ಆಕರ್ಷಣೆ ಮರೆಯಲಸಾಧ್ಯ.
ನುಡಿದರೆ ಮುತ್ತಿನ ಹಾರ, ಮಾಣಿಕ್ಯದ ದೀಪ್ತಿ, ಸ್ಫಟಿಕದ ಸಲಾಕೆ ಎಂಬ ಅಣ್ಣನ ವಚನ ಅಜ್ಜಾ ಅವರ ಮಾತಿಗೆ ಸೂಕ್ತ ಉಪಮೇಯ.

ಇತ್ತೀಚಿನ ದಿನಗಳಲ್ಲಿ ಮಠಾಧೀಶರ ನಡೆ, ನುಡಿ ಮತ್ತು ವಿಚಕ್ಷಣ ನಿರ್ಣಯಗಳನ್ನು ಕಂಡಾಗ ಬೈದು ಬುದ್ದಿ ಹೇಳುವವರೇ ಇಲ್ಲ ಎನಿಸಿದೆ. ಸಮಾಜಮುಖಿ ಚಿಂತನೆ ಮೂಲಕ ಹೊಸ ವಾತಾವರಣ ಸೃಷ್ಟಿಯಾಗುವ ಅವಕಾಶ ತಪ್ಪಿ ಹೋಗಿದೆ. ಬಹುಪಾಲು ಮಠಾಧೀಶರು ಆಮಂತ್ರಣ ಪತ್ರಿಕೆಯಲ್ಲಿ ಹೆಸರಿನಲ್ಲಿ ಹೆಚ್ಚು, ಕಮ್ಮಿ ಆದರೆ ಗುಡುಗಿ ಬಿಡುತ್ತಾರೆ. ‌ಬಿರುದು ಬಾವಲಿಗಳ ಸರಮಾಲೆ ಹೇರಿಕೊಂಡು ವಚನಗಳ ತಾತ್ಪರ್ಯ ಮರೆತಿದ್ದಾರೆ. ಬಾಯಲ್ಲಿ ಬಸವ ತತ್ವ ಹೇಳುತ್ತಲೇ, ಒಳಗೊಳಗೆ ವಿರೋಧಿ ನಿಲುವು ಹೊಂದಿದ ವ್ಯಕ್ತಿಗಳೊಂದಿಗೆ ಆಂತರಿಕ ಒಪ್ಪಂದ ಮಾಡಿಕೊಂಡು ಸಾಗಲು ತೋಂಟದಾರ್ಯ ಪೂಜ್ಯರ ಅನುಪಸ್ಥಿತಿಯೇ ಮುಖ್ಯ ಕಾರಣ.

‘ಆದರೆ ಆಗುತ್ತದೆ, ಇಲ್ಲ ಎಂದರೆ ಇಲ್ಲ’ ಎಂದು ಕಡ್ಡಿ ಮುರಿದಂತೆ ಹೇಳುವ ನೈತಿಕ ಎದೆಗಾರಿಕೆ ಇಂದಿನ ಮಠಾಧೀಶರಲ್ಲಿ ಮಾಯವಾಗಿದೆ.‌ ಇತ್ತೀಚಿನ ನಾನು ಬರೆದ ‘ಮಠೀಯ ವ್ಯವಸ್ಥೆ ಬದಲಾವಣೆ’ ಲೇಖನಕ್ಕೆ ಅಜ್ಜಾ ಅವರು ಇದ್ದರೆ ಸಮಾಧಾನಕರ ಚರ್ಚೆ ಮತ್ತು ಪ್ರತಿಕ್ರಿಯೆ ಲಭಿಸುತ್ತಿತ್ತು. ಇದಕ್ಕೆ ಬಹುಪಾಲು ಮಠಾಧೀಶರು ಆಂತರಿಕವಾಗಿ ತಮ್ಮ ಸಹಮತ ವ್ಯಕ್ತಪಡಿಸಿದ್ದಾರೆ. ಆದರೆ ಬಹಿರಂಗವಾಗಿ ಅಲ್ಲ.
ಕೆಲವರ ಮೌನ ತಡೆದುಕೊಳ್ಳಲಾಗದೇ ಮಾತನಾಡಿದಾಗ ಆಶಾದಾಯಕ ಪ್ರತಿಕ್ರಿಯೆ ಸಿಗಲಿಲ್ಲ. ಆದರೆ ತೋಂಟದಾರ್ಯ ಮಠದ ಇಂದಿನ ಪೀಠಾಧಿಪತಿಗಳಾದ ಡಾ.ಸಿದ್ಧರಾಮ ಮಹಾಸ್ವಾಮಿಗಳು ತಮ್ಮ ಮುಕ್ತವಾದ ಅಭಿಪ್ರಾಯ ಸೂಚಿಸಿದ್ದು ಕೊಂಚ ಸಮಾಧಾನ ತಂದಿದೆ.
ಅನೇಕ ಆದರ್ಶಗಳನ್ನು ಬಿತ್ತಿ ಹೋದ ತೋಂಟದಾರ್ಯ ಪೂಜ್ಯರ ಕುರಿತು ‘ಹಗಲಿನಲ್ಲಿಯೆ ಸಂಜೆಯಾಯಿತು’ ಕೃತಿಯಲ್ಲಿ ಅವರ ಒಡನಾಟದ ಸಂಗತಿಗಳನ್ನು ದಾಖಲಿಸಿ ಸಮಾಧಾನ ಪಟ್ಟುಕೊಂಡಿದ್ದೇನೆ. ಆದರೆ ಅವರ ಅನುಪಸ್ಥಿತಿಯ ಸಾಮಾಜಿಕ ಅಪಾಯ ಈಗ ಹೆಚ್ಚು ಕಾಡುತ್ತಲಿದೆ. ‘ಈಗ ಅವರಿದ್ದರೆ ಹೀಗಾಗುತ್ತಿರಲಿಲ್ಲ’ ಎಂದು ಅನೇಕ ಸಂದರ್ಭಗಳಲ್ಲಿ ಅನಿಸುತ್ತಲೇ ಇದೆ.‌

ಧಾರ್ಮಿಕ, ಸಾಮಾಜಿಕ, ಸಾಹಿತ್ಯಕ ಮತ್ತು ರಾಜಕೀಯ ಸ್ಥಿತಿಗಳ ಕುರಿತು ಮುಕ್ತವಾಗಿ ಮಾತಾಡಿ, ಸರಿದಾರಿಗೆ ತರುವ ಅವಕಾಶಗಳು ಮಾಯವಾಗಿವೆ. ವೈಚಾರಿಕ ಪ್ರಜ್ಞೆ ಬೆಳೆಸಿದ ಕುವೆಂಪು, ಸಮೂಹ ಪ್ರಜ್ಞೆ ಕಾಪಾಡಿದ ಲಂಕೇಶ್ ಮತ್ತು ಪರಮ ಪೂಜ್ಯ ತೋಂಟದಾರ್ಯರು ನಮ್ಮ ಪಾಲಿಗೆ ಮರೆಯಲಾಗದ, ಮರೆಯಾಗದ ಮಾಣಿಕ್ಯ ದೀಪ್ತಿಗಳು.
‘ಮರಣವೇ ಮಹಾನವಮಿ’ ಎಂಬ ಮಾತಿನಂತೆ, ವಿಜಯದಶಮಿ ಹಬ್ಬದಂದು ಬನ್ನಿ ವಿತರಿಸಿ, ಕೊನೆಯ ಆಶೀರ್ವಚನ ದಯಪಾಲಿಸಿ, ಹೇಳದೇ ಕೇಳದೇ ಹೋದ ನೋವು ಎಂದಿಗೂ ಮಾಸುವುದಿಲ್ಲ.

ಸಿದ್ದು ಯಾಪಲಪರವಿ ಕಾರಟಗಿ.
9448358040

Don`t copy text!