ವ್ಹಾ ರಿಷಭ್ ವ್ಹಾ – ಕಾಂತಾರಕೆ ವ್ಹಾ ವ್ಹಾ
ಕನ್ನಡ ಸಿನಿಮಾಕ್ಕೆ ಈಗ ಸುವರ್ಣ ಯುಗ. ಕೆಜಿಎಫ್ ಗೆಲುವಿನ ನಶೆ ಮುಗಿಯುವುದರೊಳಗೆ ಸಾಲು ಸಾಲು ಗೆಲುವಿನ ವಿಜಯೋತ್ಸವ. ಈ ಹಿನ್ನೆಲೆಯಲ್ಲಿ
‘ಕಾಂತಾರ’ ಇದು ಬರೀ ಸಿನೆಮಾ ಅಲ್ಲ, ನಿಜವಾಗಿಯೂ ದಂತಕಥೆ. ನಟ, ನಿರ್ದೇಶಕ ರಿಷಭ್ ಶೆಟ್ಟಿ ಅವರದು ಅಬ್ಬರದ ಭಯಂಕರ ಗೆಲುವು.
ಪ್ರಾಂತೀಯ ಕತೆಯ ಜೊತೆಗೆ, ಸ್ಥಳೀಯ ಭಾಷೆ ಬಳಸಿ ಗೆಲ್ಲುತ್ತೇನೆ ಎಂಬ ಇವರ ವಿಶ್ವಾಸಕ್ಕೆ ಹ್ಯಾಟ್ಸ್ ಆಫ್! ದೈವಿ ನಂಬಿಕೆ ಮತ್ತು ದೇಸೀ ಸೊಗಡನ್ನು ಹೇಳಿಕೊಂಡು, ಎರಡೇ ಸಾಲಿನಲ್ಲಿ ಹೇಳಬಹುದಾದ ಕತೆಗೆ ವಿಸ್ತಾರದ ರೂಪ ಕೊಡಲು ಗೆದ್ದ ಬಗೆ ಬಹುದೊಡ್ಡ ನಶೆ. ಮೇಕಿಂಗ್ ಸರಿಯಾಗಿದ್ದರೆ ಯಾವ ತೊಡಕು ಇರಲ್ಲ, ಭಾಷೆ, ಪ್ರದೇಶ, ಸಂಗೀತ ಅಭಿನಯ ಊ ಹೂಂ… ಎಲ್ಲ ತಾನೇ ತಾನಾಗಿ ಮೈದೆರೆದುಕೊಳ್ಳುತ್ತದೆ. ಸಿನಿಮಾ ನಟನೆಯ ಸಣ್ಣ ಅನುಭವ ಮತ್ತು ತಾಂತ್ರಿಕ ಅರಿವು ಇಟ್ಟುಕೊಂಡು ನಾನು ಧ್ಯಾನಸ್ಥನಾಗಿ ಕಾಂತಾರವನ್ನು ಮೈ ತುಂಬಾ ಕಣ್ಣಾಗಿ ನೋಡಲಿಲ್ಲ, ವೀಕ್ಷಿಸಿದೆ.
ನಿರ್ದೇಶನದ ಜೊತೆಗೆ ನಾಯಕ ನಟನಾಗಿ ಅಭಿನಯಿಸಿದ ಇವರ ಧೈರ್ಯ, ಸಾಹಸ ಅನನ್ಯ, ಅಪರೂಪ ಅದ್ಭುತ!
ಹೆಣ್ಣು-ಹೊನ್ನು-ಮಣ್ಣು ಮನುಷ್ಯನ ಕೇವಲ ಅಗತ್ಯ ಅಲ್ಲ, ದುರಾಸೆ ಎಂಬ ಎಳೆ ಹಿಡಿದು, ಭೂಮಿ, ದೇವರು ಮತ್ತು ಪರಿಸರ ಆರಾಧನಾ ವಸ್ತುವಿಗೆ ಜೀವ ತುಂಬಿ ಪ್ರೇಕ್ಷಕರನ್ನು ಕಟ್ಟಿ ಹಾಕುವ ಆತ್ಮವಿಶ್ವಾಸಕೆ ರಿಷಭಗೆ ರಿಷಭ ಸಾಟಿ. ಕಾಡಿನ ಜನರಿಗೆ ನ್ಯಾಯ ಸಿಗಲಿ ಎಂಬ ಆಶಯ ಅಷ್ಟೇ ಅರ್ಥಪೂರ್ಣ.
ಹಾಡು, ಫೈಟ್, ಪೊಳ್ಳು ವೈಭವೀಕರಣದ ಪೋಕರಿ ಫ್ಯಾನ್ ಫಾಲೋವರ್ ಹೊಂದಿದ ಸೋ ಕಾಲ್ಡ್ ಬಿಗ್ ಬಜೆಟ್ ಪ್ರಖ್ಯಾತ ಹೀರೋಗಳು ಮುಟ್ಟಿ ನೋಡಿಕೊಳ್ಳುವಂತೆ ಬಿಸಿ ಮುಟ್ಟಿಸಿದ್ದಾರೆ. ಸಿದ್ಧ ಮಾದರಿಯ ಹಳಸಲು ಕತೆ, ಹಾಡು, ಕುಣಿತ ಫಾರೆನ್ ಲೊಕೇಶನ್, ಪರಭಾಷಾ ಸುಂದರಿಯರು; ಸಿನೆಮಾ ಬಿಡುಗಡೆಗೆ ಮುನ್ನ ಹುಚ್ಚು ಹುಚ್ಚಾಗಿ ನಾಲಿಗೆ ಹರಿಬಿಡುವ ಅಂಧಾಭಿಮಾನಿಗಳ ಟ್ರೋಲುಗಳು, ಒಂದೇ ಎರಡೇ ಪೊಳ್ಳು ನಾಯಕರ ವರಸೆಯಿಂದ ಪ್ರೇಕ್ಷಕರು ಕೀಳು ಅಭಿರುಚಿಗೆ ಬಲಿಯಾಗಿ ಸಿನೆಮಾದಿಂದ ದೂರವಾಗಿದ್ದರು.
ಆದರೆ ಕತೆಯನ್ನೇ ನಾಯಕನನ್ನಾಗಿ ಮಾಡಿ, ಅದರಲ್ಲೂ ನಾಡಿನ ಬಹುಪಾಲು ಜನರಿಗೆ ಅರ್ಥವಾಗದ ಒಂದು ಪ್ರಾದೇಶಿಕ ಭಾಷೆ ಇಟ್ಟುಕೊಂಡು ಪ್ರೇಕ್ಷಕರ ಮನಗೆದ್ದ ಬಗೆ ಕೇವಲ ಆದರ್ಶವಲ್ಲ, ಅಭಿಮಾನ ಕೂಡ. ಕರಾವಳಿ ಕಲಾವಿದರು ಬರೀ ಜಾಣರಲ್ಲ ಮಹಾನ್ ಸಾಹಸಿಗರು ಎಂಬುದನ್ನು ತಂಡದ ಆತ್ಮವಿಶ್ವಾಸ ಸಾಬೀತು ಮಾಡಿದೆ.
ಸಿನೆಮಾ ಹಣ ಮಾಡಲು ಯಶ ಪಡೆದಂತೆ, ಅಂತರಾಷ್ಟ್ರೀಯ ಮನ್ನಣೆ ಪಡೆಯಲಿ ಎಂಬ ಆಸೆ ಒಡ ಮೂಡಿದೆ.
ಉತ್ತರ ಕರ್ನಾಟಕದ ಜನಪದೀಯ ಬಯಲಾಟ, ಕೋಲಾಟ, ಗ್ರಾಮದೇವತೆಗಳ ನಂಬಿಕೆ ಮತ್ತು ಆಚರಣೆಗಳು ಆಧುನಿಕತೆಯ ಸೋಗಿನಲಿ ಮಾಯವಾಗಿವೆ. ಈ ಎಲ್ಲ ಅಂಶಗಳನ್ನು ಇಟ್ಟುಕೊಂಡು ಸಿನೆಮಾ ತೆಗೆದರೆ ಜನ ಥಿಯೇಟರ್ ಕಡೆಗೆ ಧಾವಿಸುತ್ತಾರೆ ಎಂಬ ವಿಶ್ವಾಸ ಮತ್ತು ಪ್ರೇರಣೆ ಮೂಡಿಸಲು ಕಾಂತಾರ ಸಂಪೂರ್ಣ ಗೆದ್ದಿದೆ. ಅಭಿನಯ, ತಾಂತ್ರಿಕತೆ, ಲೊಕೇಶನ್ ಯಾವುದರಲ್ಲಿಯೂ ರಾಜಿ ಮಾಡಿಕೊಳ್ಳದೆ ತಂಡ ಹಗಲಿರುಳು ದುಡಿದ ಬಗೆ ಢಾಳಾಗಿ ಗೋಚರಿಸುತ್ತದೆ.
ಪ್ರೇಕ್ಷಕರ ಶಿಳ್ಳೆ, ಚಪ್ಪಾಳೆ, ಕೇಕೆ, ನಗು ಕೇಳಿ ಎಷ್ಟೋ ವರ್ಷಗಳಾಗಿತ್ತು. ಎಂಬತ್ತರ ದಶಕದಲ್ಲಿ ಇದ್ದ ಸಿನೆಮಾ ಹುಚ್ಚು ಖಂಡಿತವಾಗಿ ಮರುಕಳಿಸುವ ಎಲ್ಲಾ ಸೂಚನೆಗಳನ್ನು ತೋರಿಸಿಕೊಟ್ಟ ಕಾಂತಾರ ತಂಡಕ್ಕೆ ಮತ್ತೊಮ್ಮೆ ನಮೋ ನಮಃ.
ಸಿದ್ದು ಯಾಪಲಪರವಿ ಕಾರಟಗಿ
9448358040