ಅಕ್ಕನ ಭಕ್ತಿ – ಪ್ರೀತಿ

 

ಅಕ್ಕನೆಡೆಗೆ

ವಚನ – 2

ಅಕ್ಕನ ಭಕ್ತಿ – ಪ್ರೀತಿ

ಬಂಜೆ ಬೇನೆಯನರಿವಳೆ?
ಬಲದಾಯಿ ಮುದ್ದ ಬಲ್ಲಳೆ?
ನೊಂದವರ ನೋವ ನೋಯದವರೆತ್ತ ಬಲ್ಲರೊ?
ಚೆನ್ನಮಲ್ಲಿಕಾರ್ಜುನಯ್ಯನಿರಿದಲಗು
ಒಡಲಲ್ಲಿ ಮುರಿದು ಹೊರಳುವೆನ್ನಳಲನು
ನೀವೆತ್ತ ಬಲ್ಲಿರೆ ಎಲೆ ತಾಯಿಗಳಿರಾ?

ಹನ್ನೆರಡನೇ ಶತಮಾನ ಅಷ್ಟೇ ಅಲ್ಲ, ಕಾಲ ಕಾಲಕ್ಕೆ ಇಡೀ ಜಗತ್ತು ಕಂಡ ಅಭೂತಪೂರ್ವ ಕವಿ ಅಕ್ಕಮಹಾದೇವಿ. ರಂ.ಶ್ರೀ.ಮುಳಿಯವರ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಉಲ್ಲೇಖಿಸಿದಂತೆ ಅಕ್ಕನೇ ಕನ್ನಡ ಕಾವ್ಯಲೋಕದ ಪ್ರಥಮ ಮಹಿಳೆ. ಆಧ್ಯಾತ್ಮಲೋಕದ ದಿವ್ಯ ಪ್ರಭೆ. ವಚನಾಂಕಿತ ‘ಚೆನ್ನಮಲ್ಲಿಕಾರ್ಜುನ’ ಎಂದು ಹೇಳುತ್ತ… ಹೇಳುತ್ತ… ಅವನಲ್ಲೇ ಸಮಾಗಮಗೊಂಡ ಚೇತನ. ಜಗತ್ತಿಗೆ ವೈರಾಗ್ಯವನ್ನು ಸಾಧಿಸಿ ತೋರಿದ ಅಪ್ರತಿಮ ಚೆಲುವೆ.

ಈ ಮೇಲಿನ ವಚನದಲ್ಲಿ ಅಕ್ಕ ಬಳಸಿದ ಉಪಮೆಗಳು ಹೃದಯಸ್ಪರ್ಶಿ. ತನ್ನ ಕಾವ್ಯ ಶಕ್ತಿಗೆ ತನ್ನ ಮನದ ಭಾವನೆಗಳೇ ಜೀವಾಳವಾಗಿಸಿದ ವಾಸ್ತವ ಅನುಭವಗಳ ಖಜಾನೆ. ಎಲ್ಲಾ ಶರಣರಂತೆ ಅಕ್ಕನೂ ತನಗಾದ ಅನುಭವದ ಅನುಭೂತಿಯನ್ನು ಹಂಚಿಕೊಂಡಿದ್ದಾಳೆ.

ಶೂನ್ಯ ಸಂಪಾದನೆಯನ್ನು ಆಧಾರವಾಗಿಟ್ಟುಕೊಂಡು, ಸಂಶೋಧಕರು ಅಭಿಪ್ರಾಯಪಡುವುದನ್ನು, ಪರಿಗಣಿಸಿದಾಗ, ಅಕ್ಕನ ಈ ವಚನದ ಸಂದರ್ಭ ಬಹಳ ಸಂದಿಗ್ಧವಾದುದು ಎನಿಸುತ್ತದೆ. ಅಂಥ ಸಮಯವನ್ನು ಅಕ್ಕ ಹೇಗೆ ನಿಭಾಯಿಸಿದಳು? ಎನ್ನುವುದೇ ಅವಳ ಆತ್ಮವಿಶ್ವಾಸ, ನಮಗೆ ಆದರ್ಶ.

ಶಿಕಾರಿಪುರದ ಉಡುತಡಿಯಲ್ಲಿ ಜನಿಸಿದ ಮಹಾದೇವಿ ಅಕ್ಕ ಬಾಲ್ಯದಿಂದಲೇ ಲಿಂಗಪೂಜೆ ಮತ್ತು ಭಕ್ತಿಯನ್ನು ಮೈಗೂಡಿಸಿಕೊಂಡವಳು. ಯೌವನಕ್ಕೆ ಕಾಲಿಟ್ಟಾಗ ಒಂದು ದಿನ ರಾಜನ ಮೆರವಣಿಗೆ ಊರೊಳಗೆ ಬಂದಾಗ, ಜನರೆಲ್ಲಾ ಓಡೋಡಿ ಬಂದು ನೋಡುತ್ತಿರುವಾಗ ತಾನೂ ಅವರೊಂದಿಗೆ ಸೇರಿದಳು. ಆಗ ಮಹಾದೇವಿಯನ್ನು ನೋಡಿದ ರಾಜ ಒತ್ತಾಯದಿಂದ ತನ್ನ ಅರಮನೆಗೆ ಕರೆ ತರುತ್ತಾನೆ. ಮೂರು ಕರಾರುಗಳನ್ನು (ಶರತ್ತು) ಹಾಕಿ ಮುಂದುವರಿದ ಅಕ್ಕ, ಅರಮನೆಯಲ್ಲಿ ವಾಸ ಮಾಡುವ ಸಂದಿಗ್ಧ ಸ್ಥಿತಿಯಲ್ಲಿರುತ್ತಾಳೆ.

ಅರಮನೆಯಲ್ಲಿ ಅಕ್ಕ ಸದಾ ಗುರು ಲಿಂಗ ಜಂಗಮ ಸೇವೆಯಲ್ಲಿ ನಿರತಳಾಗಿರುವಳು. ತನ್ನ ದಿನನಿತ್ಯದ ರೂಢಿಗಳನ್ನು ಚಾಚೂ ತಪ್ಪದೆ ಮಾಡುತ್ತಿದ್ದಳು. ಮಹಾರಾಜ ಕೌಶಿಕ ಮಹಾದೇವಿಯನ್ನು ಕಂಡು ಬಯಸಿದಾಗಲೆಲ್ಲಾ ಸೇವೆಯಲ್ಲೇ ಇರುತ್ತಿದ್ದಳು. ಆಗ ರಾಜನು ಅವಳ ಸಖಿಯರನ್ನುದ್ದೇಶಿಸಿ ಮಹಾದೇವಿಯ ಮನವನ್ನು ತನ್ನತ್ತ ಒಲಿಯುವಂತೆ ಮಾಡಿರೆಂದು ಆಜ್ಞಾಪಿಸುವನು.

ರಾಜಾಚ್ಞೆಯಂತೆ ಸಖಿಯರು ಅಕ್ಕನ ಏಕಾಗ್ರತೆಯನ್ನು ವಿಚಲಿತಗೊಳಿಸುವ ಪ್ರಯತ್ನ ಮಾಡುವರು. ಆಗ ಮನನೊಂದು ಅಕ್ಕಮಹಾದೇವಿ ಹೇಳಿದ ಸಾಲುಗಳೇ ಈ ಮೇಲಿನ ವಚನ.

ಬಂಜೆ ಬೇನೆಯನರಿವಳೆ?

ಹೆಣ್ಣು ನಿರಂತರ ಒಂಬತ್ತು ತಿಂಗಳುಗಳ ಕಾಲ, ಒಡಲಲ್ಲಿ ಭ್ರೂಣವನ್ನು ಹೊತ್ತು ದಿನಗಳೆಯುವಳು. ಇದೊಂದು ಜೈವಿಕ ಕ್ರಿಯೆ. ಪ್ರಪಂಚದ ಯಾವ ನೋವಿಗೂ ಹೆರಿಗೆಯ ನೋವನ್ನು ಹೋಲಿಸಲು ಸಾಧ್ಯವಿಲ್ಲ. ಗಂಡಿಗಾಗಲಿ, ಮಕ್ಕಳನ್ನು ಹೆರದವಳಿಗಾಗಲಿ ಆ ಬೇನೆ ತಿಳಿಯದು. ಮಕ್ಕಳಾಗದ ಬಂಜೆಗೆ ಹೆರಿಗೆಯ ನೋವು ಹೇಗಿರುತ್ತದೆಂದು ಊಹಿಸಲಾಗುವುದಿಲ್ಲ. ಅನುಭವಿಸಿದ ಹೆಣ್ಣು ತಾಯಿಯಾದಾಗ ಮಾತ್ರ ತಿಳಿದುಕೊಳ್ಳಬಲ್ಲಳು. ಹಾಗಾಗಿ ಬಂಜೆ ಬೇನೆಯನ್ನು ಅರಿಯುವಳೆ? ಇಲ್ಲ.

ಬಲದಾಯಿ ಮುದ್ದ ಬಲ್ಲಳೆ?

ಹೆತ್ತ ಕರುಳು, ಹಡೆದ ಹೊಟ್ಟೆ, ತಾಯಿ ಕರುಳು, ಮಾತೃ ವಾತ್ಸಲ್ಯ, ಈ ಎಲ್ಲಾ ಶಬ್ದಗಳು ಕೈ ಮಾಡಿ ತೋರಿಸುವುದು ಅವ್ವನ ಕಡೆಗೆ. ತಾನು ಜನ್ಮ ಕೊಟ್ಟ ಮಕ್ಕಳನ್ನು ಕಂಡರೆ ಆವಳಿಗೆ ಎಲ್ಲಿಲ್ಲದ ಮುದ್ದು ಬರುವುದು. ಪ್ರೀತಿಯುಕ್ಕಿ ಹರಿಯುವುದು. ಅದೇ ಬಲದಾಯಿ, ಅಂದರೆ ಮಲತಾಯಿಯಾದರೆ ತನ್ನ ಉದರ ಬಗೆದು ಬಂದಿರದ ಮಲಮಕ್ಕಳನ್ನು ಕಂಡಾಗ ಪ್ರೀತಿ, ವಾತ್ಸಲ್ಯ, ಮುದ್ದು ಮಾಡುವ ಭಾವನೆಗಳು ಮೊಳೆಯುವುದಿಲ್ಲ. ತನ್ನದೇ ಆದ ಮಕ್ಕಳಿಲ್ಲದ, ಅನ್ಯರ ಮಕ್ಕಳನ್ನು ಮುದ್ದಿಸಲು ಬರುವುದಿಲ್ಲ. ಮುದ್ದು ಅಂದರೆ ಏನೆಂಬುದನ್ನು ಬಲ್ಲವಳಾಗಿರುವುದಿಲ್ಲ.

ನೊಂದವರ ನೋವ ನೋಯದವರೆತ್ತ ಬಲ್ಲರು?

ಬಂಜೆ ಮತ್ತು ಮಲತಾಯಿಯ ಹೋಲಿಕೆಯನ್ನು ಕೊಡುತ್ತ ಅಕ್ಕ ನೋವಿನ ತೀವ್ರತೆಯನ್ನು ವ್ಯಕ್ತ ಪಡಿಸುತ್ತಾಳೆ. ‘The wearer knows where the shoe pinch.’ ಇಂಗ್ಲಿಷಿನ ಈ ನಾಣ್ಣುಡಿಯೂ ಅಕ್ಕನ ಮಾತನ್ನೇ ಹೇಳುತ್ತದೆ. ಕಾಲಲ್ಲಿ ಬೂಟು ಹಾಕಿದವನಿಗಷ್ಟೇ, ಅದು ಎಲ್ಲಿ ಕಚ್ಚುತ್ತದೆ ಎಂದು ಅನುಭವಕ್ಕೆ ಬರುತ್ತದೆ. ಹಾಗೆಯೇ ಯಾರಿಗೆ ನೋವು ಆಗಿರುತ್ತದೊ ಅವರೇ ನೋವನ್ನು ಬಲ್ಲರು. ನೋವಿಲ್ಲದವರಿಗೆ ಆ ನೋವು ಹೇಗೆ ಅನುಭವವಾಗುತ್ತದೆ? ಇದು ಅಕ್ಕನ ಪ್ರಶ್ನೆ.

ಚೆನ್ನಮಲ್ಲಿಕಾರ್ಜುನಯ್ಯನಿರಿದಲಗು ಒಡಲಲ್ಲಿ ಮುರಿದು ಹೊರಳುವೆನ್ನಳಲನು ನೀವೆತ್ತ ಬಲ್ಲಿರೆ ಎಲೆ ತಾಯಿಗಳಿರಾ?

ಅಕ್ಕ ತನ್ನ ಪ್ರೀತಿ ಮತ್ತು ಭಕ್ತಿಯ ಆರಾಧ್ಯ ದೈವ ಚೆನ್ನಮಲ್ಲಿಕಾರ್ಜುನನನ್ನು ನೆನೆಯುತ್ತ ಹೇಳಿದ ಮಾತು. ಅಲಗು ಎಂದರೆ ಚೂಪಾದ ಚಾಕುವಿನಂಥ ವಸ್ತು. ಚೆನ್ನಮಲ್ಲಿಕಾರ್ಜುನ ಅಕ್ಕನ ಒಡಲಲ್ಲಿ ಇರಿದ ಅಲಗು ಅಲ್ಲೇ ಮುರಿದು ಹೋಗಿದೆ. ಒಳಗೆ ಮುರಿದ ಅಲಗನ್ನು ಇಟ್ಟುಕೊಂಡು ಹೊರಳುವಾಗ ಆಗುವ ನೋವನ್ನು ನೀವು ಅರಿಯಲು ಸಾಧ್ಯವಿಲ್ಲವೆಂದು, ಮನ ಒಲಿಸಲು ಬಂದ ಸಖಿಯರಿಗೆ ಹೇಳುತ್ತಾಳೆ, ಹಾಗೇ ಪ್ರಶ್ನೆಯನ್ನೂ ಮಾಡುತ್ತಾಳೆ.

ಈ ವಚನದಲ್ಲಿ ಅಕ್ಕನಿಗೆ ಚೆನ್ನಮಲ್ಲಿಕಾರ್ಜುನನೆಡೆಗೆ ಇರುವ ಸಮರ್ಪಣಾ ಮನೋಭಾವವನ್ನು ಎತ್ತಿ ತೋರಿಸುತ್ತದೆ. ಅವಳು ತನ್ನ ಭಕ್ತಿಯನ್ನು ಒಮ್ಮೊಮ್ಮೆ ಪ್ರೀತಿಯ ರೂಪದಲ್ಲಿ ಹೊರ ಹಾಕುತ್ತಾಳೆ. ಹಾಗೇ ಪ್ರೀತಿಯನ್ನು ಭಕ್ತಿಯ ರೂಪದಲ್ಲಿ. ತನ್ನ ಆರಾಧ್ಯ ದೈವವಾದ ಚೆನ್ನಮಲ್ಲಿಕಾರ್ಜುನನಲ್ಲದೆ ಬೇರೆ ಯಾರ ಕಡೆಯೂ ತನ್ನ ಮನ ಒಲಿಯಲು ಸಾಧ್ಯವಿಲ್ಲ ಎನ್ನುವ ನಿರಾಕರಣೆಯ ಭಾವ ಇಲ್ಲಿ ಕಾಣುತ್ತದೆ.

ನಾವು ಇಲ್ಲಿ ಕಲಿಯಬೇಕಾಗಿರುವುದು ಅಕ್ಕನಲ್ಲಿರುವ ಸ್ಥಿತ ಪ್ರಜ್ಞೆ ಮತ್ತು ಸ್ಪಷ್ಟವಾದ‌ ನಿರಾಕರಣೆಯ ನಿಲುವು.

ಅಕ್ಕನ ಮನ ಒಲಿಸಲು ಬಂದ ಸಖಿಯರು ಹೇಳುವ ಮಾತುಗಳು ಅವಳಿಂದ ಸಹಿಸಲಸಾಧ್ಯವಾದುದು. ಆದರೂ ಆಕ್ಕ ಶಾಂತವಾಗಿ, ತನ್ನನ್ನು ತಾನೇ ನೋವಿಗೆ ಒಡ್ಡಿಕೊಳ್ಳುವಳು. ಚೆನ್ನಮಲ್ಲಿಕಾರ್ಜುನ ತನ್ನನ್ನು ಇರಿದಂತೆ ಊಹಿಸಿ, ತನ್ನ ಚಿತ್ತ ಚಾಂಚಲ್ಯವನ್ನು ನಿಗ್ರಹಿಸಿದ ಅಕ್ಕನ ವೈರಾಗ್ಯದ ಎತ್ತರವನ್ನು ಗ್ರಹಿಸಬಹುದು.

ಜಗದ ಅಕ್ಕನಾದ ಮಹಾದೇವಿ ಅಕ್ಕನನ್ನು ಕೇವಲ ಹೆಣ್ಣು ಎಂದು ಭಾವಿಸುವುದು ತಪ್ಪು. ಆದರೂ ನಾವುಗಳು ಅವಳಲ್ಲಿರುವ ಆಧ್ಯಾತ್ಮ ಮತ್ತು ವೈರಾಗ್ಯವನ್ನು ವೈಭವೀಕರಿಸಿ ನೋಡುವಾಗ ಅಸಮಾನ್ಯವಾದುದನ್ನು ಅಕ್ಕ ಸಾಧಿಸಿದ್ದಾಳೆ ಎಂದು ತಿಳಿದು ಆ ಮಾರ್ಗ ನಮ್ಮದಲ್ಲ ನಮ್ಮಿಂದಾಗದು ಎಂದು ಹಿಂದೆ ಸರಿಯಲು ದಾರಿ ಮಾಡಿಕೊಳ್ಳುವ ಹೇಡಿತನವಿರುತ್ತದೆ. ಅದಕ್ಕಾಗಿ ಒಂದು ಕ್ಷಣಕ್ಕೆ ಅವಳೂ ಸಾಮಾನ್ಯ ಹೆಣ್ಣು ಎಂದು ಭಾವಿಸಿ ವಿವೇಚಿಸಿದಾಗ, ಭಿನ್ನವಾಗಿ ಆಲೋಚಿಸಲು ದಾರಿ ತೆರೆದುಕೊಳ್ಳುತ್ತದೆ. ಅವಳಲ್ಲಿ ಮೂಡಿದ ದೇಹ ವೈರಾಗ್ಯದ ಕಾರಣವನ್ನು ತಿಳಿಯಬಹುದು.

ಅಕ್ಕ ವೈರಾಗ್ಯ ಮತ್ತು ಆಧ್ಯಾತ್ಮಿಕ ಲೋಕವನ್ನು ತನ್ನದಾಗಿಸಿಕೊಂಡಾಗ, ಒತ್ತಾಯಪೂರ್ವಕವಾಗಿ ಕೌಶಿಕನ ದುರಾಸೆಗೆ ಬಲಿಯಾದಳು. ಅರಮನೆಯಲ್ಲಿ ಕೆಲಕಾಲ ಬಂಧನವನ್ನು ಅನುಭವಿದಳು. ಆದರೂ ತನ್ನ ಮನದ ಇಚ್ಛೆಯ ವಿರುದ್ಧ ಹೋಗದೆ, ತನಗೆ ಬೇಕಾಗಿದ್ದನ್ನೇ ಮಾಡಿದಳು. ಹಾಗೆಯೇ ಅಲ್ಲಿಂದ ತನ್ನನ್ನು ತಾನು ಮುಕ್ತಗೊಳಿಸಿಕೊಂಡಳು. ಹೆಣ್ಣಿಗೆ ಇರಬೇಕಾದ ಛಲವಿದು.

ಇಂದಿನ ಪ್ರಸ್ತುತ ಕಾಲದಲ್ಲಿ ಎರಡು ತರಹ ಆಲೋಚಿಸುವ ಜನ ಸಮೂಹಗಳಿವೆ.

‘ಕೊಟ್ಟ ಹೆಣ್ಣು ಕುಲಕ್ಕೆ ಹೊರತು’, ‘ಪತಿಯೇ ಪರದೈವ’, ‘ಡೋಲಿ ಮೆ ಆನಾ ಅರ್ತಿ ಮೆ ಜಾನಾ’(ಪಲಕ್ಕಿಯಲ್ಲಿ ಕುಳಿತು ಬರಬೇಕು ಚಟ್ಟದ ಮೇಲೆ ಹೋಗಬೇಕು) ಇಂಥ ಎಲ್ಲಾ ಸಾಲುಗಳು ಹೆಣ್ಣನ್ನು ಬಂಧಿಸಿ ಬಿಡುತ್ತವೆ. ಸ್ವತಂತ್ರ ಮನೋಭಾವವಿಲ್ಲದೆ ರೆಕ್ಕೆ ಮುರಿದ ಹಕ್ಕಿಯಂತೆ ಬದುಕುತ್ತಾಳೆ.

ಹೆಣ್ಣು ತನ್ನ ಬದುಕಿನಲ್ಲಿ ಯಾವುದನ್ನೂ ನಿರಾಕರಿಸುವಂತಿಲ್ಲ. ‘ಪಾಲಿಗೆ ಬಂದದ್ದು ಪಂಚಾಮೃತ.’ ಹೊಂದಾಣಿಕೆಯ ಬದುಕೇ ಅವಳಿಗೆ ಅಂತ್ಯದವರೆಗೆ. ಬಿಟ್ಟು ಬಂದರೆ ಬಜಾರಿ ಪಟ್ಟ ಕಟ್ಟುವ ಸಮಾಜ. ಗಂಡ ಎಂಥವನೇ ಇರಲಿ, ‘ಈಸಬೇಕು ಇದ್ದು ಜೈಸಬೇಕು.’ ಯಾವುದೇ ಕಾರಣಕ್ಕೂ ನಿರಾಕರಿಸುವಂತಿಲ್ಲ. ಅವಳೇನಾದರೂ ದಿಟ್ಟ ಹೆಜ್ಜೆ ಇಟ್ಟು, ಗಟ್ಟಿ ನಿರ್ಧಾರ ತೆಗೆದುಕೊಂಡರೆ, ನೈತಿಕ ಅನೈತಿಕದ ಜಗ್ಗಾಟದಲ್ಲಿ ಹಾದರದ ಪಟ್ಟ. ಏನೇ ಹೆಚ್ಚು ಕಡಿಮೆಯಾದರೂ ದೂಷಿಸುವುದು ಹೆಣ್ಣನ್ನೇ. ಪ್ರಸ್ತುತ ವ್ಯವಸ್ಥೆಯಲ್ಲಿ ಗಂಡು ಯಾವಾಗಲೂ ಸೇಫ್ ಆಗಿ ಬದುಕುತ್ತಾನೆ.

ವ್ಯವಸ್ಥೆಯನ್ನು ಬದಲಿಸುವುದು ಕೇವಲ ಹೆಣ್ಣಿನಿಂದ ಸಾಧ್ಯವಿಲ್ಲ. ಮನುಷ್ಯನ ದೃಷ್ಟಿಕೋನ ಬದಲಾಗಬೇಕಿದೆ.

ಇನ್ನೊಂದು ಕಡೆ ಅತಿ ಸ್ವಾತಂತ್ರ್ಯದ ಕಾರಣ ಸ್ವೇಚ್ಛಾಚಾರದ ಬದುಕಿನ ಅಡಿಯಾಳಾಗಿದ್ದಾಳೆ. ಆಧುನಿಕತೆಗೆ ಮಾರು ಹೋಗಿ ತನ್ನತನವನ್ನೇ ಮರೆತ ಹೆಣ್ಣುಗಳು ಅದೆಷ್ಟೊ? ಲೆಕ್ಕವಿಲ್ಲ. ಗಂಡ ಸರಿ ಇಲ್ಲ ಎಂದೆನಿಸಿದಾಗ ಹುಡುಕಾಟ ಆರಂಭವಾಗಬಾರದು. ನಿತ್ಯ ಡಿರ್ವೋಸ್ ಕೇಸ್ ಗಳು, ಫ್ಯಾಮಿಲಿ ಕೋರ್ಟ್ ಗೆ ಅಲೆದಾಟ. ‘ಇವನು ಸರಿ ಇಲ್ಲ. ಅವನು ಸರಿ ಇದ್ದಾನು.’ ಮೋಹದ, ಮಾಯೆಯ, ಮೋಜಿನ ಪ್ರಪಂಚಕ್ಕೆ ಮನಸೋಲದೆ ಗಟ್ಟಿಗೊಳ್ಳುವ ಸ್ಥೈರ್ಯ ಬೆಳೆಸಿಕೊಳ್ಳಬೇಕು. ಹೀಗೆ ಚಂಚಲಚಿತ್ತವಾಗಿ ಅಲೋಚಿಸಿದಾಗ ಬದುಕು ಮೂರಾಬಟ್ಟೆಯಾಗಿ ಅತಂತ್ರ ಸ್ಥಿತಿಯ ನಿರ್ಮಾಣವಾಗುತ್ತದೆ.

ಇದಕ್ಕಾಗಿಯೇ ಹೆಣ್ಣು ಸ್ಥಿತ ಪ್ರಜ್ಞೆ ಮತ್ತು ನಿರಾಕರಣೆಯನ್ನು ರೂಢಿಸಿಕೊಳ್ಳಬೇಕು. ಅಕ್ಕನ ಈ ವಚನದ ಆಳವನ್ನು ಅರಿತು ಬದುಕನ್ನು ಹಸನಾಗಿಸಿಕೊಳ್ಳಬಹುದು. ಹನ್ನೆರಡನೇ ಶತಮಾನದಲ್ಲಿ ಅಕ್ಕ ತೆಗೆದುಕೊಂಡ ನಿರ್ಧಾರ, ಇಡೀ ಸ್ತ್ರೀ ಕುಲಕ್ಕೇ ಮಾದರಿ. ಪ್ರತಿರೋಧ ವ್ಯಕ್ತಪಡಿಸಿ ಪ್ರತಿಭಟಿಸಿ ದನಿ ಎತ್ತಿದ ಆ ಕ್ಷಣವು ಅನುಕರಣೀಯ ಕೂಡ.

ಸಂಸಾರ ಒಂದೇ ಅಂತಿಮ ಮಾರ್ಗವಲ್ಲ. ಇಲ್ಲಿ ಸೋತಾಗ ನಿರಾಕರಿಸಿ, ತಮಗೆ ತಾವೇ ಮುಕ್ತಿಯ ಮಾರ್ಗವನ್ನು ಕಂಡುಕೊಳ್ಳಬಹುದು. ದೈಹಿಕ ವಾಂಛೆ ಗೌಣವಾದಾಗ ಮನಸಿನ ಭಕ್ತಿ ಮತ್ತು ವೈರಾಗ್ಯವೇ ಬದುಕಿನ ಮೂಲ ಮಂತ್ರವಾಗುತ್ತದೆ. ಅದಕ್ಕೆ ಅಕ್ಕಮಹಾದೇವಿ ಮತ್ತು ಭಕ್ತ ಮೀರಾ ಉದಾಹರಣೆಯಾಗಿ ನಿಲ್ಲುತ್ತಾರೆ.

ಈ ವಚನದ ಸೂಕ್ಷ್ಮತೆಯನ್ನು ಗಮನಿಸಿದಾಗ ಗೋಚರಿಸುವುದು ಅಕ್ಕನ ‘ಸಾತ್ವಿಕ ನಿರಾಕರಣೆ.’ ‘ಅನ್ನ ಹಳಸಿತ್ತು ನಾಯಿ ಹಸಿದಿತ್ತು’ ಎನ್ನುವಂತೆ ಬದುಕು ಆಗಬಾರದು ಎನ್ನುವ ಸಂದೇಶವೂ ಈ ವಚನದಲ್ಲಿ ಅಡಗಿದೆ. ಅಂದಿನ ಕಾಲದಲ್ಲಿ ಹೆಣ್ಣನ್ನು ಕುರಿತು ಮೂರು ಅಂಶಗಳು ಚಾಲ್ತಿಯಲ್ಲಿದ್ದವು. ಗಂಡಿಗೆ ಹೆಣ್ಣು ಅನಿವಾರ್ಯ, ಹೆಣ್ಣಿಗೆ ಗಂಡು ಅನಿವಾರ್ಯ. ಹೆಣ್ಣಿಗೆ ಮದುವೆಯಿಂದಲೇ ಮುಕ್ತಿ. ಹೆಣ್ಣು ಕಾಮುಕರಿಂದ ರಕ್ಷಿಸಿಕೊಳ್ಳಲು ಗಂಡ ಅನಿವಾರ್ಯ. ಆ ಕಾಲದಲ್ಲಿ ಅದನ್ನು ಸುಳ್ಳಾಗಿಸಿದ್ದು ಅಕ್ಕ.

ಅಕ್ಕ ಏರು ಯೌವನದ ಸುರಸುಂದರಿ ತೆಗೆದುಕೊಂಡ ನಿರ್ಧಾರ. ಸಾತ್ವಿಕಳಾದ ಅಕ್ಕನ ನಿರಾಕರಣೆಯೂ ಅಷ್ಟೇ ಸಾತ್ವಿಕ. ಕೌಶಿಕ ಮಹಾರಾಜನ ಅರಮನೆ, ಉಡುಗೆ, ತೊಡುಗೆ, ಅಷ್ಟೈಶ್ವರ್ಯಗಳು ಅವಳನ್ನು ಆಕರ್ಷಿಸುವುದಿಲ್ಲ. ಲೌಕಿಕದ ವಿಷಯಾಸಕ್ತಿಗೆ ಮರುಳಾಗಲಿಲ್ಲ. ತನ್ನತನವನ್ನು ಕಾಪಾಡಿಕೊಂಡು ನಿರಾಕರಿಸುವ ಮನಸ್ಥಿತಿಯನ್ನು ಬೆಳೆಸಿಕೊಂಡ ಅಕ್ಕನ ವೈರಾಗ್ಯದ ಹೆಜ್ಜೆಗಳ ಆರಂಭವನ್ನು ಈ ವಚನ ಬಿಂಬಿಸುತ್ತದೆ.

ಸಿಕಾ ಕಲಬುರ್ಗಿ

Don`t copy text!