ಸ್ವಯಂ ಸೇವಕರಿಂದ ದೇಶಭಕ್ತಿಯ ಪಥ ಸಂಚಲನ
e-ಸುದ್ದಿ ಮಸ್ಕಿ
ಮಸ್ಕಿ: ಆರ್ ಎಸ್ ಎಸ್ ವಿಜಯದಶಮಿ ಪಥ ಸಂಚಲನ ಸೋಮವಾರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ನಡೆಯಿತು.
ತೇರಿನ ಮನೆಯಿಂದ ಆರಂಭವಾದ ಸಂಘದ ಗಣವೇಷದಾರಿ ಸ್ವಯಂ ಸೇವಕರ ಪಥ ಸಂಚಲನ ಸಂಘದ ಘೋಷ್ ವಾದ್ಯದೊಂದಿಗೆ ವಾಲ್ಮೀಕಿ ನಗರ, ಜಮೀಯಾ ಮಸೀದಿ, ಡಾ. ಖಲೀಲ್ ವೃತ್ತ, ಅಶೋಕ ವೃತ್ತ, ಚೆನ್ನಮ್ಮ ವೃತ್ತ, ಶಾಸಕರ ಭವನ, ಮುಖ್ಯ ಬಜಾರ, ದೈವದಕಟ್ಟೆ ಮೂಲಕ ಸಾಗಿ ತೇರು ಬೀದಿಗೆ ಆಗಮಿಸಿತು.
ಪಥ ಸಂಚಲನ ಸಾಗುವ ರಸ್ತೆಗಳನ್ನು ಮಹಿಳೆಯರು ತೊಳೆದು ರಂಗೋಲಿ ಹಾಕಿ ಸಿಂಗಾರ ಮಾಡಿದ್ದರು. ದಾರಿಯುದ್ದಕ್ಕೂ ನಿಂತಿದ್ದ ಸಾರ್ವಜನಿಕರು ಭಗವಾಧ್ವಜಕ್ಕೆ ಹಾಗೂ ಸ್ವಯಂ ಸೇವಕರ ಮೇಲೆ ಪುಷ್ಪಾರ್ಪಣೆ ಮಾಡಿದರು.
ದೈವದಕಟ್ಟೆ ಮುಂಭಾಗದಲ್ಲಿ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್, ಸಂಘದ ರಾಜ್ಯ ಪ್ರಮುಖ ರಾಜಶೇಖರ ಸೇರಿದಂತೆ ಮುಖಂಡರು ನಿಂತು ಪಥ ಸಂಚಲನ ವೀಕ್ಷಿಸಿದರು.
ಅಶೋಕ ವೃತ್ತ. ದೈವದಕಟ್ಟೆ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಮಹಾನ್ ಪುರುಷರ ವೇಷಭೂಷಣ ತೊಟ್ಟ ಮಕ್ಕಳು ಗಮನ ಸೆಳೆದರು. ಪ್ರಮುಖ ವೃತ್ತ ಹಾಗೂ ರಸ್ತೆಗಳಲ್ಲಿ ಕೇಸರಿ ಬಾವುಟಗಳು ರಾರಾಜಿಸುತ್ತಿದ್ದವು.
ಸಂಜೆ ತೇರಿನ ಮುಂದೆ ನಡೆದ ಬಹಿರಂಗ ಸಭೆಯಲ್ಲಿ ಸಂಘದ ರಾಜ್ಯ ಪ್ರಮುಖ ರಾಜಶೇಖರ ಮಾತನಾಡಿದರು. ಪಂಪಣ್ಣ ಗುಂಡಳ್ಳಿ ಅಧ್ಯಕ್ಷತೆ ವಹಿಸಿದ್ದರು.
ಸ್ವಯಂ ಸೇವಕರಿಂದ ವಿವಿಧ ಕವಾಯತುಗಳು ನಡೆದವು, ಲಿಂಗಸುಗೂರು ಡಿವೈಎಸ್ ಪಿ ಮಂಜುನಾಥ ಎಸ್. ನಾಯಕ, ಸರ್ಕಲ್ ಇನ್ ಸ್ಪೆಕ್ಟರ್ಗಳಾದ ಸಂಜೀವಕುಮಾರ ಬಳಿಗಾರ, ಪ್ರಕಾಶ ಮಾಳಿ, ಸಬ್ ಇನ್ ಸ್ಪೆಕ್ಟರ್ ಗಳಾದ ಸಿದ್ದರಾಮ ಬಿದರಾಣಿ, ಪ್ರಕಾಶ ಡಂಬಳ, ಮಂಗಮ್ಮ ನೇತೃತ್ವದಲ್ಲಿ ಬೀಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.