ದೀಪದ ಬತ್ತಿಗಳು

ದೀಪದ ಬತ್ತಿಗಳು”

ಪ್ರೊ.ಚಂದ್ರಶೇಖರ ವಸ್ತ್ರದ, ನಮ್ಮ ಕನ್ನಡದ ಜಾನಪದ,ಹಳಗನ್ನಡ,ನಡುಗನ್ನಡ ಹಾಗೂ ಹೊಸಗನ್ನಡ ಸಾಹಿತ್ಯದ ಅಪರೂಪದ ವಿದ್ವಾಂಸರು; ಕಾವ್ಯ, ಕತೆ ಹಾಗೂ ಜೀವನ ಚರಿತ್ರೆಗಳಂಥ ಸೃಜನಶೀಲ ಕೃತಿಗಳನ್ನು ಜೀವತುಂಬಿ ಸೃಜಿಸುವ ಅಕ್ಷರ ಮಾಂತ್ರಿಕರು.ಎಂಥ ಅರಸಿಕರಾದರೂ ಅವರ ಎದೆಯನ್ನು ಕರಗಿಸುವ, ಅರಳಿಸುವ ಶಬ್ದ ಗಾರುಡಿಗರು. ಎಲ್ಲರನ್ನೂ ಇವ ನಮ್ಮವ, ಇವ ನಮ್ಮವ ಎನುವ ಹೆಂಗರುಳಿನವರು. ಇಂಥ ಅಪರೂಪದ ಅಕ್ಷರ ಬ್ರಹ್ಮ ಪ್ರೊ. ಚಂದ್ರಶೇಖರ ವಸ್ತ್ರದ ಅವರ ಜೀವನ ನಿಜಕ್ಕೂ ಒಂದು ಬೆರಗು.
ಪ್ರೊ. ಚಂದ್ರಶೇಖರ ವಸ್ತ್ರದ ಗುರುಗಳವರು ನಮ್ಮ ನೆಲದ ಪುಣ್ಯವೇ ಆಗಿದ್ದ ಕನ್ನಡದ ಕುಲಗುರು,ಕನ್ನಡದ ಜಗದ್ಗುರು,ಪುಸ್ತಕದ ಸ್ವಾಮೀಜಿ,ಸಾಮಾನ್ಯರ ಸ್ವಾಮೀಜಿ ಎಂದೇ ಕರೆಯಲಾಗುತ್ತಿದ್ದ ಗದುಗಿನ ಲಿಂಗೈಕ್ಯ ಜಗದ್ಗುರು ಡಾ.ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳವರ ಕರಸಂಜಾತರು.

ಬಾಲ್ಯದಿಂದಲೂ ಅವರ ನೆರಳಂತೆ ಅವರ ಪ್ರೀತಿಯ ಆರೈಕೆಯಲ್ಲಿ ಬೆಳೆದು ಬಾಳಿದವರು; ಬಾಲ್ಯದಿಂದಲೂ ಹುಟ್ಟೂರು ಸಿಂದಗಿಯಲ್ಲೇ ಅಲ್ಲಿನ ಶ್ರೀ ಸಿದ್ಧರಾಮ ದೇವರ ಓದಿನ ಪ್ರಭಾವಕ್ಕೊಳಗಾಗಿ, ಮುಂದೆ ಅವರಿದ್ದಾರೆಂದೇ ಓದಲೆಂದು ಹುಬ್ಬಳ್ಳಿಗೆ ಬಂದು,ಮುಂದೆ ಅವರು ತೋಂಟದ ಜಗದ್ಗುರುಗಳಾಗಿ ಗದುಗಿಗೆ ಬಂದಾಗ ಅವರೊಂದಿಗೇ ಗದುಗಿಗೆ ಬಂದು ಅವರ ಮಠ ಮತ್ತು ತಮ್ಮ ಮನೆಗಳನ್ನು ಈ ಓದಿನ ಹುಚ್ಚಿಗಾಗಿ ನೆಲೆಯಾಗಿಸಿಕೊಂಡು ಅಕ್ಷರ ಮಾಂತ್ರಿಕತನದಲ್ಲಿ ಪಳಗಿದವರು.ಜಗದ್ಗುರುಗಳಿಗೂ ತಮಗೂ ವಿದ್ಯಾ ಗುರುಗಳಾದ ಮಹಾಗುರು ಲಿಂ.ಡಾ. ಎಂ. ಎಂ.ಕಲಬುರ್ಗಿಯವರ ಮಾರ್ಗದರ್ಶನದಲ್ಲಿ ಗದುಗಿನ ಶ್ರೀ ತೋಂಟದಾರ್ಯ ಮಠದಲ್ಲಿ ಅಸ್ತಿತ್ವಕ್ಕೆ ಬಂದ ಲಿಂಗಾಯತ ಅಧ್ಯಯನ ಸಂಸ್ಥೆಯ ಕ್ರಿಯಾಶಕ್ತಿಯಾಗಿ ಒಂದರ್ಥದಲ್ಲಿ ಬಾಳಿನ ಸರ್ವಸ್ವವೇ ಆದ ಪೂಜ್ಯ ಶ್ರೀ ಜಗದ್ಗುರು ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳವರ ಮಹಾ ಮಣಿಹವಾದ ತೋಂಟದ ಸಿದ್ಧಲಿಂಗ ಯತಿಗಳ ಶರಣ ತತ್ವ ಮತ್ತು ಸಾಹಿತ್ಯ ಪ್ರಸಾರ ಕಾಯಕವನ್ನು ಆಧುನಿಕ ನೆಲೆಯಲ್ಲಿ ವ್ಯಾಪಕಗೊಳಿಸುವ ಕಲ್ಯಾಣದ ಜಂಗಮ ಪರಂಪರೆಗೆ ಸಮರ್ಪಣೆಗೊಂಡವರು.
ಇಂಥ ಪ್ರೊ. ಚಂದ್ರಶೇಖರ ವಸ್ತ್ರದ ಅವರು ಗದುಗಿನ ಶ್ರೀ ತೋಂಟದಾರ್ಯ ಮಠದಲ್ಲಿ ಒಂದು ಉತ್ತಮವಾದ ಗ್ರಂಥಾಲಯ ಸ್ಥಾಪನೆಯಾಗಬೇಕೆಂಬ ತಮ್ಮ ಅಪೇಕ್ಷೆಯನ್ನು ಒಮ್ಮೆ ಪೂಜ್ಯ ಜಗದ್ಗುರುಗಳವರಲ್ಲಿ ನಿವೇದಿಸಿಕೊಂಡಿದ್ದರು. ಆದರೆ ಪೂಜ್ಯರ ಹಠಾತ್ ನಿರ್ಗಮನದಿಂದಾಗಿ ಆ ಅಪೇಕ್ಷೆ ಸಾಕಾರಗೊಳ್ಳದ ಕಾರಣವಾಗಿ ಜಗತ್ತನ್ನೇ ಗೃಹಬಂಧಿಯಾಗಿಸಿದ್ದ ಕೋವಿಡ್ ಸಾಂಕ್ರಾಮಿಕ ರೋಗದ ಮೊದಲ ಅಲೆಯ ಸಂದರ್ಭದಲ್ಲಿ ಪ್ರೊ.ಚಂದ್ರಶೇಖರ ವಸ್ತ್ರದ ಸರ್ ಅವರಲ್ಲಿ ಈ ಗ್ರಂಥಾಲಯ ಸ್ಥಾಪನೆಯ ವಿಚಾರ ಜಾಗೃತಗೊಂಡು ಪೂಜ್ಯರ ಸ್ಮರಣೆಯಲ್ಲಿ ತಮ್ಮ ಸ್ವಂತ ಮನೆಯ ಉಳಿದ ಜಾಗದಲ್ಲಿ ಕಟ್ಟಡವನ್ನು ನಿರ್ಮಿಸಿ ಅದಕ್ಕೆ “ಸಿದ್ಧಲಿಂಗ ಅರಿವಿನ ಮನೆ” ಎಂದು ಹೆಸರಿಟ್ಟು ಪೂಜ್ಯರ ಎರಡನೆಯ ಸ್ಮರಣೋತ್ಸವ ಸಂದರ್ಭದಲ್ಲಿ ದಿನಾಂಕ 20-10-2020 ರಂದು ಪೂಜ್ಯ ಶ್ರೀ ಜಗದ್ಗುರು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳವರ ಸನ್ನಿಧಾನದಲ್ಲಿ ಉದ್ಘಾಟಿಸಿದರು.

ಈ ಗ್ರಂಥಾಲಯದಲ್ಲಿ ಸಾರ್ವಜನಿಕರು ಸ್ವತಃ ತಾವೇ ಬಂದು ಬೇಕಾದ ಪುಸ್ತಕವನ್ನು ತೆಗೆದು ಸ್ಥಳದಲ್ಲಾಗಲೀ ಇಲ್ಲವೇ ಮನೆಗೆ ತೆಗೆದುಕೊಂಡು ಹೋಗಿಯಾಗಲೀ ಓದುವ ವ್ಯೆವಸ್ಥೆ ಮಾಡಿದ್ದಾರೆ.ಇದಕ್ಕಾಗಿ ಯಾವದೇ ರೀತಿಯ ಠೇವಣಿಯಾಗಲೀ, ಶುಲ್ಕವಾಗಲೀ ವಿಧಿಸದೇ ಉಚಿತವಾಗಿ ದಾಸೋಹಂ ಭಾವದಿಂದ ಅರಿವನ್ನು ಹಂಚುತ್ತಿದ್ದಾರೆ.ಅಷ್ಟೇ ಅಲ್ಲ ಪ್ರತಿ ವರ್ಷ ಅಕ್ಟೋಬರ್ 20 ರಂದು ಲಿಂ.ಪೂಜ್ಯ ಜಗದ್ಗುರುಗಳವರ ಸ್ಮರಣೋತ್ಸವವನ್ನು ಈ “ಸಿದ್ಧಲಿಂಗ ಅರಿವಿನ ಮನೆ“ಯಲ್ಲಿ ವಿಶಿಷ್ಟ ರೀತಿಯಲ್ಲಿ ಲಿಂಗೈಕ್ಯ ಜಗದ್ಗುರುಗಳವರ ಅಪೇಕ್ಷೆಗಳಿಗೆ ಪೂರಕವಾದ ಕಾರ್ಯಕ್ರಮಗಳ ಮೂಲಕ ಆಚರಿಸುತ್ತಾರೆ.

ಇದರಂತೆ ಈ ವರ್ಷ ನಾಡಿನ ಖ್ಯಾತ ಜಾನಪದ ವಿದ್ವಾಂಸರಾದ ಡಾ. ಬಿ. ಆರ್. ಪೋಲೀಸ ಪಾಟೀಲ ಅವರು ಲಿಂಗೈಕ್ಯ ಡಾ.ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳವರ ಕುರಿತಾಗಿ ರಚಿಸಿರುವ ಲಾವಣಿ ಹಾಡುಗಳ ಗಾಯನ ಹಾಗೂ ಸಂಗೀತ ಕಾರ್ಯಕ್ರಮವನ್ನು ಏರ್ಪಡಿಸಿದ್ದಾರೆ.


ಇವರಂತೆಯೇ ಇನ್ನೋರ್ವರಾದ ಧಾರವಾಡದ ಪ್ರೊ.ಶಶಿಧರ ತೋಡಕರ ಅವರೂ ಕೂಡ ಧಾರವಾಡದಲ್ಲಿನ ಗದಗ ಶ್ರೀ ಜಗದ್ಗುರು ತೋಂಟದಾರ್ಯ ವಿದ್ಯಾಪೀಠ ಸಂಚಾಲಿತ ಶ್ರೀ ಹಿರೇಮಲ್ಲೂರ ಈಶ್ವರನ್ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಲಿಂಗೈಕ್ಯ ಜಗದ್ಗುರುಗಳವರ ಸ್ಮರಣೋತ್ವವನ್ನು ಇದೇ ದಿನ ಅಂದರೆ ದಿನಾಂಕ 20-10-2022 ರಂದು ಪ್ರತಿ ವರ್ಷದಂತೆ ವಿಧಾಯಕವಾಗಿ ಆಚರಿಸುತ್ತಿದ್ದಾರೆ. ಪ್ರೊ.ತೋಡಕರ ಅವರೂ ಕೂಡ ಲಿಂಗೈಕ್ಯ ಜಗದ್ಗುರುಗಳವರು ಹಾಗೂ ಪ್ರೊ. ಚಂದ್ರಶೇಖರ ವಸ್ತ್ರದ ಗುರುಗಳವರಂತೆ ಮಹಾಗುರು ಡಾ. ಎಂ.ಎಂ.ಎಂ.ಕಲಬುರ್ಗಿಯವರ ವಿದ್ಯಾರ್ಥಿಗಳು.ಪ್ರೊ.ಚಂದ್ರಶೇಖರ ವಸ್ತ್ರದ ಅವರಂತೆ ಪೂಜ್ಯ ಲಿಂಗೈಕ್ಯ ತೋಂಟದ ಜಗದ್ಗುರುಗಳವರ ಪ್ರೀತಿಯ ಶಿಷ್ಯರು. ನಾಡಿನ ಈ ಉಭಯ ಓಜರುಗಳ ಕನ್ನಡ ಮತ್ತು ಶರಣ ಧರ್ಮಗಳ ಸಾರವನ್ನು ಸವಿದು ಸತೃಪ್ತಗೊಂಡವರು.

ಅಗಾಧವಾದ ಓದುಗರು,ವಾಗ್ಮಿಗಳು, ವಿದ್ವಾಂಸರು,ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಸಕ್ರಿಯ ಸದಸ್ಯರು,ಶಿಕ್ಷಣ ಮತ್ತು ಕನ್ನಡದ ಚಿಂತಕರು,ಇವರ ಇಂಥ ವಿಶೇಷತೆಯಿಂದಲೇ ಇತ್ತೀಚೆಗೆ ಅಸ್ತಿತ್ವಕ್ಕೆ ಬಂದ ಸರ್.ಸಿದ್ದಪ್ಪ ಕಂಬಳಿ ಪ್ರತಿಷ್ಠಾನದ ಅಧ್ಯಕ್ಷ ರಾಗಿ ಆಯ್ಕೆಗೊಂಡು ಶಿಕ್ಷಣ ಮತ್ತು ಕನ್ನಡದ ಸೇವೆಗಳ ನೇತೃತ್ವವನ್ನು ವಹಿಸಿಕೊಂಡವರು.ಅಂತೆಯೇ ಲಿಂಗೈಕ್ಯ ಜಗದ್ಗುರುಗಳವರು ಅಂತರರಾಷ್ಟ್ರೀಯ ಖ್ಯಾತ ಸಮಾಜ ವಿಜ್ಞಾನಿಯಾಗಿದ್ದ ಲಿಂಗೈಕ್ಯ ಪ್ರೊ. ಹಿರೇಮಲ್ಲೂರ ಈಶ್ವರನ್ ಅವರ ಹೆಸರಿನಲ್ಲಿ ಡಾ. ಎಂ.ಎಂ.ಕಲಬುರ್ಗಿ ಹಾಗೂ ಲಿಂಗೈಕ್ಯ ಕವಿ ಚೆನ್ನವೀರ ಕಣವಿಯವರ ಮಾರ್ಗದರ್ಶನದಲ್ಲಿ ತಾವು ಆರಂಭಿಸಿದ ಹಿರೇಮಲ್ಲೂರ ಈಶ್ವರನ್ ಪದವಿಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯರನ್ನಾಗಿ ಡಾ.ಎಂ.ಎಂ.ಕಲಬುರ್ಗಿಯವರ ನಿರ್ದೇಶನದಂತೆ ಶ್ರೀ ಶಶಿಧರ ತೋಡಕರ ಅವರನ್ನು ನೇಮಿಸಿದರು.

ಹೀಗಾಗಿ ಪ್ರೊ. ಶಶಿಧರ ತೋಡಕರ ಅವರು ಈ ಮೂಲಕ ಪೂಜ್ಯ ಜಗದ್ಗುರುಗಳವರ ಸೇವೆಗೆ ನೇರವಾಗಿ ಸೇರಿಕೊಂಡು ತ್ರಿಕರಣಪೂರ್ವಕವಾಗಿ ಮಹಾಗುರುಗಳ ಪ್ರೀತಿಯ ಮಾರ್ಗದರ್ಶನದಲ್ಲಿ ಶಿಕ್ಷಣದ ಮೂಲಕ ಬಸವಣ್ಣ ಮತ್ತು ಕನ್ನಡಕ್ಕಾಗಿ ಮುಡಿಪಾಗಿ ಪೂಜ್ಯರ ಸೇವೆಗೆ ಸಮರ್ಪಣೆಗೊಂಡವರು.ಪೂಜ್ಯರ ಲಿಂಗೈಕ್ಯ ನಂತರ ಅವರ ಸ್ಮರಣೆಯಲ್ಲಿ ಅವರ ಅಪರೂಪದ ಭಾವಚಿತ್ರಗಳುಳ್ಳ ದಿನವಹಿ(ಕ್ಯಾಲೆಂಡರ)ಯನ್ನು,ಕಳೆದ ವರ್ಷ ಪೂಜ್ಯರ ಒಡನಾಟದ ಅನುಭವಗಳುಳ್ಳ ಧಾರವಾಡ ಜಿಲ್ಲೆಯ ಪೂಜ್ಯರ ಒಡನಾಡಿಗಳ ಬರಹಗಳ ಸಂಗ್ರಹವಾದ “ಸಮಾಜ ಮುಖಿ” ಎಂಬ ವಿಶಿಷ್ಟ ಕೃತಿಯನ್ನು ತಮ್ಮ ಸ್ವಂತ ಖರ್ಚಿನಲ್ಲಿ ಪ್ರಕಟಿಸಿದ್ದಾರೆ.ಈ ಬಾರಿ ತಮ್ಮ ಕಾಲೇಜನಲ್ಲಿ ಅಸ್ತಿತ್ವಕ್ಕೆ ತಂದಿರುವ ಕರ್ನಾಟಕ ಸಂಘದಡಿಯಲ್ಲಿ ದಿನಾಂಕ 20-10-2022 ರಂದು ಬೆಳಿಗ್ಗೆ ಕನ್ನಡದ ಖ್ಯಾತ ಲೇಖಕಿ ಮತ್ತು ಚಿಂತಕಿಯರಾದ ಡಾ. ಹೇಮಾ ಪಟ್ಟಣಶೆಟ್ಟಿಯವರು ಸ್ಥಾಪಿಸಿದ ದತ್ತಿಯ ಉದ್ಘಾಟನೆ ಹಾಗೂ ಸಂಜೆ 5 ಗಂಟೆಗೆ ಪೂಜ್ಯ ಲಿಂಗೈಕ್ಯ ಜಗದ್ಗುರುಗಳವರ ಹಾಗೂ ಅವರ ಗುರುಗಳಲ್ಲೊಬ್ಬರಾದ ಸಿಂದಗಿಯ ಪೂಜ್ಯ ಶ್ರೀ ಲಿಂಗೈಕ್ಯ ಶಾಂತವೀರ ಸ್ವಾಮಿಗಳವರ ಸ್ಮರಣೋತ್ಸವವನ್ನು ಹಮ್ಮಿಕೊಂಡು ಲಿಂಗೈಕ್ಯ ಗುರುಗಳವರ ಸ್ಮರಣೆಯನ್ನು ಅವಿಸ್ಮರಣೀಯಗೊಳಿಸುವ ತವಕದಲ್ಲಿದ್ದಾರೆ.

ಹೀಗೆ ಈ ಇರ್ವರು ಜಗದ ಸಂತರಾಗಿದ್ದ ಪೂಜ್ಯ ಜಗದ್ಗುರುಗಳವರ ಸ್ಮರಣೋತ್ಸವವನ್ನು ಹಮ್ಮಿಕೊಳ್ಳುವ ಮೂಲಕ ಗುರುವೆಂಬ ಪರಂಜ್ಯೋತಿಯ ಬತ್ತಿಗಳಾಗಿ ಮುಂದಿನ ಪೀಳಿಗೆಗೆ ಈ ಪರಂಪರೆಯ ಸತ್ವ ಮತ್ತು ಮಹತ್ವವನ್ನು ಬಿತ್ತರಿಸುವ ದಾಸೋಹದ ಮಣಿಹಕ್ಕೆ ಅರ್ಪಿಸಿಕೊಂಡು ಆ ಬೆಳಕಿನ ಸತ್ಪರಂಪರೆಯ ವಾರಸುದಾರರಾಗಿದ್ದಾರೆ.

-ಕೆ.ಶಶಿಕಾಂತ
ಲಿಂಗಸೂಗೂರ

Don`t copy text!