ಬಸವ ಶಕ್ತಿಯ ಅಂಗಳದಲ್ಲಿ ಆರದ ದೀಪ
ಸ್ತ್ರೀ ಶೋಷಿತ ಸಮಾಜಾದಲ್ಲಿ ಸ್ತ್ರೀವಾದ ಎನ್ನುವುದು ನಮ್ನ ಬದುಕಿನ ಭಾಗವೇ ಎಂದು ನಾವು ಪ್ರಶ್ನಿಸಿಕೊಳ್ಳಬೇಕಾಗಿದೆ. ನಮ್ಮ ಸ್ವ-ಆತ್ಮ ವಿಮರ್ಶೆಯಲ್ಲಿ ಕುಟುಂಬ ಮತ್ತು ಆಧ್ಯಾತ್ಮ ಈ ಎರಡರ ಸಮೀಕರಣದಲ್ಲಿ ಧಾರ್ಮಿಕ ಸ್ವಾತಂತ್ರ್ಯ, ಕುಟುಂಬದ ಕಾಳಜಿ ನಮ್ಮನ್ನು ಬೌದ್ದಿಕವಾಗಿಯೇ ಪ್ರೇರೇಪಿಸುತ್ತದೆ.
12 ನೇ ಶತಮಾನದ ಶರಣೆಯರ ಅನೇಕ ವಚನಗಳು ಬಂಡಾಯದ ಧೋರಣೆಗಳಾಗಿ ಮುಕ್ತವಾಗಿ ಚರ್ಚಿಸುತ್ತವೆ. ಸ್ತ್ರೀ ಮನಸ್ಸಿನ ಆಶಯಗಳು ಅಂದಿನ ಸಾಮಾಜಿಕ ಅವ್ಯವಸ್ಥೆಯನ್ನು ವಿರೋಧಿಸುವ ಸ್ವಾಭಿಮಾನ ಮತ್ತು ಸ್ವಾವಲಂಬಿ ಬದುಕನ್ನು ಸ್ವೀಕರಿಸುವ ಸವಾಲುಗಳು. ಇದನ್ನು ಅವರ ಅನೇಕ ವಚನಗಳಲ್ಲಿ ನಾವು ಕಾಣಲು ಸಾಧ್ಯವಾಗುತ್ತದೆ. ಶರಣೆಯರು ಸ್ತ್ರೀ ಪುರುಷ ಸಮಾನತೆಯನ್ನು ಅವರು ದಿಟ್ಟವಾಗಿ ಎದುರಿಸಿದ ಪರಿ ಅಚ್ಚರಿ ಮತ್ತು ಅನನ್ಯ.
ವಚನ ಸಾಹಿತ್ಯದಲ್ಲಿ ಸ್ತ್ರೀವಾದಿಯಾಗಿ ನೀಲಮ್ಮ ತಾಯಿಯವರ ಸ್ಥಾನವನ್ನು ವೈಚಾರಿಕ ಮತ್ತು ಚಾರಿತ್ರಿಕ ಚರ್ಚೆಯ ಮೂಲಕ ವಚನಗಳ ಆಧಾರದ ಮೂಲಕ ವಿವೇಚಿಸಲು ಸಾಧ್ಯವಾಗುತ್ತದೆ. ಶರಣೆ ನೀಲಮ್ಮನವರ ಈ ವಚನವು ಸತಿ-ಪತಿಭಾವದ ಆತ್ಮಗೌರವದ ಜೊತೆಗೆ ಸ್ತ್ರೀಪರ ಕಾಳಜಿಯ ಸ್ಪಷ್ಟತೆಯನ್ನು ಬಿಂಬಿಸುತ್ತದೆ.
ಬಣ್ಣದ ಪುತ್ತಳಿಯ ಮಾಡಿ | ಸಲಹಿದರೆನ್ನ ನಮ್ಮಯ್ಯನವರು ||
ಕಾಯವನಳಿದವಳೆಂದು ಹೆಸರಿಟ್ಟರೆನಗೆ | ಎಮ್ಮಯ್ಯನವರು ||
ವ್ರತವಳಿದ ಪ್ರಪಂಚಿ | ಎಂದರೆನ್ನ ಎಮ್ಮಯ್ಯನವರು ||
ಸಂಸಾರ ಬಂಧನವ ಹರಿದು | ನಿಃಸಂಸಾರಿಯಾದೆನಯ್ಯಾ ||
ಸಂಗಯ್ಯ ಎಮ್ಮಯ್ಯನವರ | ಕರುಣದಿಂದ ||
ಆನು ಪರಮ | ಪ್ರಸಾದಿಯಾದೆನಯ್ಯಾ ||
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-892 / ವಚನ ಸಂಖ್ಯೆ-1002)
ಒಳಗೊಂದು ಭಾವ ಹೊರಗೊಂದು ನಟನೆಯ ಲೋಕದಲ್ಲಿ ಬದುಕನ್ನು ಹಂಚಿಕೊಳ್ಳಬೇಕಾದ ಅನಿವಾರ್ಯತೆ ಈ ಬಣ್ಣದ ಜಗತ್ತಿಗಿದೆ. ಶ್ರೀಮಂತಿಕೆಯ ಪ್ರದರ್ಶನದ ಜೊತೆಗೆ ಸುಂದರವಾದ ಸ್ತ್ರೀ ಕುಲವಧುವಾಗಿ ಪ್ರದರ್ಶನದ ಚೆಲುವಿನ ಬೊಂಬೆಯಾಗಿ ಮಿಂಚುವ ಅಂತಃಪುರದ ಪ್ರದರ್ಶನದ ಬೊಂಬೆ ನಾನು ಎನ್ನುವ ಮನೋವೇದನೆ ನೀಲಮ್ಮಳದು.
ನನ್ನ ಹಿಂದೆ ಮುಂದೆ ಇರುವರು ಈ ಗೊಂಬೆಯ ಕಂಡು ಹರ್ಷ ವ್ಯಕ್ತಪಡಿಸುವ ಆಡಂಬರ ಅಂತಸ್ತಿನ ಪ್ರತಿಷ್ಠೆಯ ಜನರು. ಅರಮನೆಯ ಅಲಂಕಾರದ ಬೊಂಬೆ ಸೌಂದರ್ಯದ ಬೊಂಬೆಯಾಗಿ ಎಲ್ಲರ ಮೆಚ್ಚುಗೆಗೆ ಪಾತ್ರಳಾದವಳು ನಾನು. ನೀಲಮ್ಮಳ ಪ್ರಕಾರ ಬೊಂಬೆ ಲೋಕಾನುಭಾವದ ಶೋಧನೆ. ಲೌಕಿಕ ಜಗತ್ತಿನ ಸಾಮಾನ್ಯ ಭಾವ. ಸಾಧರಣ ಸಂವೇದನೆಗಳು ಮುಕ್ತವಾದ ಸ್ವತಂತ್ರತೆಯನ್ನು ಬಿಂಬಿಸುತ್ತಾ ಸಾಗುತ್ತವೆ. ದುಃಖ, ಆತಂಕ, ಉತ್ಸಾಹ, ಕೋಪ, ಹತ್ತು ಹಲವಾರು ಭಾವಗಳು ಬಣ್ಣದ ಪುತ್ತಳಿಯ ಮನವನ್ನು ಚಿಂತಿಸುತ್ತದೆ. ವ್ಯಕ್ತಿ ಸ್ವಾತಂತ್ರ್ಯದ ಆಶಾವಾದಿತನವನ್ನು ನಿರೀಕ್ಷಿಸುವ ಮನಸ್ಥಿತಿ ಆಕೆಯದು. ಬಣ್ಣದ ಪುತ್ಥಳಿಗೆ ಹೇಳಿಕೊಳ್ಳಲು ಸಾದ್ಯವಾಗದ ಕತ್ತಲೆಯ ಬದುಕಿನ ಆನಂದದ ಮುಖವಾಡವಾಗಿದೆ.
ಮನಸ್ಸು ಸದಾ ಸಂಚಾರಿ. ಇಷ್ಟೆಲ್ಲಾ ಭೋಗ ಭಾಗ್ಯವಿದ್ದರೂ ಶರಣತ್ವ ಸ್ವೀಕಾರಕ್ಕೆ ಹಂಬಲಿಸಿದೆ ಮನ. ಆದರೆ ಕಾಯ ಅಳಿದರೂ ಆಧ್ಯಾತ್ಮದ ಹಂಬಲ ಸದಾ ಶಾಶ್ವತ. ಪ್ರಾಣಕ್ಕೆ ಮನಸ್ಸಿನ ಅವಶ್ಯಕತೆ ಇರುತ್ತದೆ. ಭೋಗದ ಕಾಯ ವಿಸ್ಮಯ. ಕಾಯದ ಆಮಿಷಗಳು ಹೆಚ್ಚಾದಂತೆಲ್ಲಾ ಮನದಲ್ಲಿಯ ವಿಷಯಂಗಳು ಬುಸುಗುಟ್ಟುತ್ತಿರುತ್ತವೆ. ಕಾಯ ನಿರಾಕರಣೆಯಲ್ಲಿ ಬಸವಣ್ಣನವರ ಸಾಮಿಪ್ಯದಲ್ಲಿ ಸಂತೋಷ ಕಂಡುಕೊಂಡ ಆಕೆ ಬಸವ ತತ್ವದ ಚಿಂತನೆಗೆ ಚೈತನ್ಯವನ್ನು ಅರ್ಪಿಸುತ್ತಾಳೆ. “ನಾನು ಬಸವನ ಶ್ರೀ ಪಾದದಲ್ಲಿ” ಎಂಬ ವಿನಯ ವಂತಿಕೆ ಆಕೆಯದು. “ವ್ರತವಳಿದ ಪ್ರಪಂಚಿ” ದೈವ ನಿಯಮದಲ್ಲಿ ಮನವನ್ನು ಅರ್ಪಿಸಿಕೊಳ್ಳುವ ಲೌಕಿಕ ಮತ್ತು ಆಧ್ಯಾತ್ಮಿಕ ಆಚರಣೆಯ ಶಪಥವನ್ನು ದೃಢವಾವಾಗಿಸುವ ಹಂತವಿದು.
ವ್ರತ ಮನುಷ್ಯನಿಗೆ ಕೆಲವು ಅರ್ಹತೆಯ ಜವಾಬ್ದಾರಿಗಳನ್ನು ರೂಪಿಸುತ್ತದೆ. ಶಪಥ ಮಾಡು ಅಥವಾ ವಚನ ಕೊಡು “ವ್ರತವಳಿಯುವುದು” ಎಂದಾಗ ಭೋಗ ಸಂಸಾರಕ್ಕೆ ಬದ್ಧಳಾದವಳಲ್ಲ ನೀಲಮ್ಮ. ಮೌನ ವ್ರತದ ಭಾಷೆಯಲ್ಲಿ ನಾನಾ ಅರ್ಥಗಳಿರುತ್ತವೆ. ವ್ರತ ಮತ್ತು ಮೌನದ ಅನುಸಂಧಾನದಲ್ಲಿ ಬಸವಣ್ಣನವರಿಗೆ ಮನ ಮತ್ತು ಕಾಯ ಅರ್ಪಿತವಾದವಳಿಗೆ ಸಂಸಾರದ ಆಶೆ ಅಳಿಯುವುದು, ಆಧ್ಯಾತ್ಮಿಕ ಸಂಸಾರವನ್ನು ಒಪ್ಪಿಕೊಳ್ಳುವುದು.
ಸಂಸಾರ ಮತ್ತು ಆಧ್ಯಾತ್ಮಿಕ ಪಯಣದಲ್ಲಿ ಓಲಾಡುವ ಈ ಮನಸ್ಸು ಹತಾಶೆಗೆ ಒಳಪಟ್ಟಿರುತ್ತದೆ. ಶ್ರೀಮಂತಿಕೆಯಲ್ಲಿ ವಿದ್ಯೆ, ಪ್ರತಿಭೆ ಅವಕಾಶ ಏನೇ ಆಗಿದ್ದರೂ ಲೌಕಿಕ ಬದುಕಿನ ಆಶೋತ್ತರಗಳು ಗಟ್ಟಿಯಾದಾಗ ಆಧ್ಯಾತ್ಮದ ಮೂಲಕ ಪ್ರವೇಶಿಸಲು ಸಾಧ್ಯವಾಗದಿದ್ದಾಗ ಮಾನಸಿಕವಾಗಿ ದುರ್ಬಲಳಾಗಿರುವ ಸಾಧ್ಯತೆಯಾಗಿದ್ದರಿಂದ ನೀಲಮ್ಮಳಿಗೆ “ಸಂಸಾರ ಬಂಧನವ ಹರಿದು ನಿಃಸಂಸಾರಿಯಾದೆನಯ್ಯಾ ಸಂಗಯ್ಯ” ವಿವಾಹ ಬಂಧನದಲ್ಲಿ ಸತಿ ಪತಿಯ ಭಾವಗಳು ಆಧ್ಯಾತ್ಮಿಕ ಪಯಣದ ಉತ್ತುಂಗ ಶಿಖರವಾಗಿರಬೇಕು.
ನೀಲಮ್ಮ ಪತಿಯ ಬಗ್ಗೆ ಅಪಾರ ಒಲವಿನ ಪ್ರೀತಿಯನ್ನು ಕಂಡಿದ್ದರಿಂದ ಅನೇಕ ಶರಣ ಶರಣೆಯರು ನೀಲಮ್ಮನವರಿಗೆ ತಾಯಿಯೆಂದೇ ಗೌರವಿಸಿದ್ದಾರೆ. ಕಾವ್ಯ ಸ್ತೋತ್ರಗಳಲ್ಲಿ ಮಹಾ ಶರಣೆ ಅನುಭಾವಿ ಎಂದು ಬಣ್ಣಿಸಿದ್ದನ್ನು ಕಾಣಬಹುದು. “ಎಮ್ಮಯ್ಯನವರ ಕರುಣದಿಂದ ಆನು ಪರಮ ಪ್ರಸಾದಿ ಯಾದೆನಯ್ಯಾ” ಬಸವ ಭಕ್ತೆಯ ತರ್ಕ ಆಕೆಯ ಗಾಂಭೀರ್ಯ ಸತಿ ಪತಿ ಭಾವದ ಗಟ್ಟಿತನವನ್ನು ಕಟ್ಟಿಕೊಡುತ್ತದೆ.
ಸ್ತ್ರೀ ಮನಸ್ಸಿನ ಹೊಯ್ದಾಟವನ್ನು ಲೌಕಿಕ ಬದುಕಿನ ಮೂಲಕ ಮುಖಾಮುಖಿಯಾಗಿಸುವ ಉದ್ವಿಗ್ನತೆಯ ಮೂಲಕ ತನ್ನನ್ನು ಸಮರ್ಪಿಸಿಕೊಳ್ಳುವ ಪರಿ ಈ ತೆರನಾಗಿದೆ.
ಏಕೆನ್ನ ಪುಟ್ಟಿಸಿದೆಯಯ್ಯಾ | ಹೆಣ್ಣು ಜನ್ಮದಲ್ಲಿ ||
ಪುಣ್ಯವಿಲ್ಲದ ಪಾಪಿಯ? | ನಾನು ಇಹ ಪರಕ್ಕೆ ದೂರಳಯ್ಯಾ ||
ಎನ್ನ ನಾಮ ಹೆಣ್ಣು | ನಾಮವಲ್ಲಯ್ಯಾ ||
ನಾನು ಸಿರಿಯಿದ್ದ ವಸ್ತುವಿನ | ವಧುವಾದ ಕಾರಣ ||
ಸಂಗಯ್ಯನಲ್ಲಿ ಬಸವನ | ವಧುವಾದ ಕಾರಣ ||
ಎನಗೆ ಹೆಣ್ಣು | ನಾಮವಿಲ್ಲವಯ್ಯ
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-886 / ವಚನ ಸಂಖ್ಯೆ-919)
ಪ್ರಕೃತಿ ದತ್ತವಾಗಿ ಬಂದ ಸ್ತ್ರೀ ಪುರುಷ ವಿಂಗಡಣೆ ನಿಸರ್ಗ ಸಹಜ ಸ್ಥಿತಿಯದು. ಸ್ತ್ರೀ ಮತ್ತು ಪುರುಷರ ನಡುವೆ ಕಾಣುವ ಅಸಮಾನತೆ ನಮ್ಮ ಸಾಮಾಜಿಕ ಸಂಸ್ಕೃತಿಯ ಒಪ್ಪಂದದ ಆಚರಣೆಯದು. “ಏಕೆನ್ನ ಪುಟ್ಟಿಸಿದೆಯಯ್ಯಾ ಹೆಣ್ಣು ಜನ್ಮದಲ್ಲಿ” ಎಂಬ ಮಾನಸಿಕ ನೋವು ಹತಾಶೆಗಳು ಆಕೆಗೆ ಕಾಡಿರಬೇಕು. ಇಂತಹ ವರ್ತುಲದಲ್ಲಾದ ನೋವು ಸಹಿಸಲು ಸಾದ್ಯವಾಗದೆ ಇದ್ದಾಗ “ನಾನು ಇಹ ಪರಕ್ಕೆ ದೂರಳಯ್ಯಾ” ಇಲ್ಲಿಯ ತರ್ಕ ವ್ಯಾಖ್ಯಾನಗಳು ಇಹಪರ ಹಂಬಲದ ಬಿಡುಗಡೆಯ ಮನಸ್ಥಿತಿ. ಅಂದರೆ ಅವಳಲ್ಲಿ ಉಂಟಾಗುವ ದುಃಖ ಮನದ ಕಳವಳ ಎಲ್ಲವೂ ಮನದ ಬಾಹ್ಯಲೋಕದ ಸಂವೇದನೆಗಳನ್ನು ಎಚ್ಚರಿಸುತ್ತದೆ.
ಸತಿ ಪತಿ ಭಾವ ಶರಣ ಧರ್ಮದ ಸಹಜೀವನ ಹೌದು. ಪ್ರಣಯ ಸರಸ ವಿರಸ ಕಾಮ ಭೋಗ ಒಳಿತು ಕೆಡುಕುಗಳ ವಿವರಗಳನ್ನು ಕಟ್ಟಿ ಕೊಡುತ್ತದೆ. ಇದನ್ನೆ ಇನ್ನೊಂದು ನೆಲೆಯಲ್ಲಿ “ಪ್ರಾಣವಿಲ್ಲದ ಹೆಣ್ಣು ನಾನಾಗಿರಲು ಆ ಪ್ರಾಣ ಪ್ರಸನ್ನ ರೂಪವಾಯಿತ್ತು”. ನೀಲಮ್ಮಳ ಈ ಮುಕ್ತತೆಯ ಸ್ವಾತಂತ್ರ್ಯವನ್ನು ಪಟ್ಟಭದ್ರ ಹಿತಾಸಕ್ತಿಯ ಮನಸ್ಸುಗಳು ಸಹಿಸದೆ ಇರಬಹುದು. “ನಾನು ಸಿರಿ ಇದ್ದ ವಸ್ತುವಿನ ವಧುವಾದ ಕಾರಣ” ಶ್ರೀಮಂತಿಕೆಯ ವಿನಯದ ಮುಖವಾಡದಲ್ಲಿ ಮನಸ್ಸು ಕಟ್ಟಿ ಹಾಕುತ್ತದೆ. ಸಿರಿತನದ ಆವರಣದ ಅಹಂನಲ್ಲಿ ಸೂಕ್ಷ್ಮ ಸಂವೇದನೆಗಳು ಸೋಲುತ್ತವೆ. ಹೀಗಾಗಿ ಬದುಕನ್ನು ಬಂದ ಹಾಗೆ ಸ್ವೀಕರಿಸುವ ಗೆಲ್ಲುವ ಎದೆಯ ನೋವುಗಳನ್ನು ನುಂಗುವ ಸಮರ್ಥನೆ ನೀಲಮ್ಮನವರದ್ದಾಗಿದೆ.
ಸಾಮಾಜಿಕ ಒಪ್ಪಂದದ ಸಂಕೋಲೆಗಳಲ್ಲಿಯೇ ಸ್ವತಂತ್ರವಾದ ಮುಕ್ತತೆಯನ್ನು ಕಂಡುಕೊಳ್ಳುತ್ತಾಳೆ ನೀಲಮ್ಮ. ಬಸವಣ್ಣನವರ ವಧು ನಾನು ಎಂಬ ಸತಿಪತಿ ಭಾವ ಅರ್ಥದಲ್ಲಿ ಅಲ್ಲ. ಅಭಿವ್ಯಕ್ತತೆಯ ತರ್ಕದ ವಾಸ್ತವಿಕ ಸಂಕಲ್ಪವದು. “ಬಸವನ ವಧು ಹೆಣ್ಣು ನಾಮವಲ್ಲವಯ್ಯ” ಮನದ ಸಂಕಲ್ಪದಲಿ ಗಟ್ಟಿಗೊಂಡ ಸಾಂಕೇತಿಕ ಮಾತುಗಳಾಗಿರಬೇಕು. ತನ್ನ ಹೆಣ್ಣುತನವನ್ನು ದೂಷಿಸಿಕೊಳ್ಳುವ ಸ್ತ್ರೀ ಮನಸ್ಸಿನ ಸಂವೇಧನೆಯಾಗಿದೆ .
ಚೆನ್ನವೀರ ಕಣವಿ ಯವರ ಈ ಕವನ ಬಸವ ಬೆಳಗಿನ ತೇಜದಲ್ಲಿ ಅರಿವೇ ಕುರುಹಾಗಿ ಬಿಂಬಿಸಿದೆ.
ಸದುವಿನಯದ ತುಂಬಿದ | ಕೊಡ ತಂದಳು ನೀಲಾಂಬಿಕೆ ||
ಕಲ್ಯಾಣದ ಅಂಗಳದಲ್ಲಿ | ತಳಿ ಹೊಡೆದರು ಚೆಂದಕೆ ||
ಸಮಚಿತ್ತದ ರಂಗೋಲಿಯು | ಒಳಹೊರಗೂ ಧೂಪವವು ||
ಹಾದಾಡುವ ಹೊಸ್ತಿಲಲಿ | ಹೊಯ್ದಾಡದ ದೀಪವು ||
ಕಲ್ಯಾಣದ ಅಂಗಳವೇ ನೀಲಮ್ಮನವರಿಗೆ ಕಾಯಾ ವಾಚಾ ಮನವಾಗಿದೆ. ಸದ್ವಿನಯ ಸಚ್ಚಾರಿತ್ರ್ಯ ನಡೆಯಿಂದ ಕಲ್ಯಾಣ ಶರಣರ ಮನವನ್ನು ಗೆದ್ದವಳಾಗಿದ್ದಳು. ಲೌಕಿಕ ಮತ್ತು ಆಧ್ಯಾತ್ಮಿಕ ಬದುಕಿನಲ್ಲಿ ಅಂತಃಕರಣದ ಮನಸ್ಸಿಗೆ ಅಗ್ನಿಯ ಧೂಪವ ಹಾಕಿ ಪರಿ ಶುಭ್ರಗೊಳಿಸಿದ್ದಳು. ಕಲ್ಯಾಣದ ಹೊಸ್ತಿಲಲ್ಲಿ ಆಧ್ಯಾತ್ಮಿಕ ಮತ್ತು ದಾಂಪತ್ಯ ಭಾವವು ಗಟ್ಟಿಯಾಗಿ ನಿಲ್ಲುವ ಜ್ಞಾನದ ದೀಪವಾಗಿದ್ದಳು. ಈ ದಾಂಪತ್ಯ ಜೋಡಿಯ ಸಮರ್ಥನೆಗೂ ನೀಲಮ್ಮನವರ ಹೇಳಿಕೆಗೂ ಸಾಮರಸ್ಯವನ್ನು ಸಂದೇಹದಿಂದ ನೋಡಲು ಸಾದ್ಯವಾಗುತ್ತದೆ.
ಈ ವಚನ….
ಮಾತಿಲ್ಲದವನ ಕೂಡೆ | ಮಾತನಾಡ ಹೋದಡೆ ||
ಎನ್ನ ಮಾತಿನ ಪ್ರಸಂಗವ | ನುಡಿಯಲೊಲ್ಲ ಬಸವಯ್ಯನು ||
ಮಾತಿನ ಹಂಗ ಹರಿದು | ಆ ಪ್ರಸಂಗದ ಸಂಗವ ಕೆಡಿಸಿ ||
ಪರವಶನಾಗಿ ನಿಲಲು | ಬಸವಯ್ಯನು ||
ಸಂಗಯ್ಯನಲ್ಲಿ ಹೆಸರಿಲ್ಲದ | ವೃಕ್ಷವನರಿದ ಬಸವಯ್ಯನು ||
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-895 / ವಚನ ಸಂಖ್ಯೆ-1036)
ನೀಲಮ್ಮ ರಾಜ ಮನೆತನದ ಸ್ತ್ರೀಯಾದರೂ ತಾನು ವಿವಾಹವಾದದ್ದು ಒಬ್ಬ ದಾರ್ಶನಿಕ ಬಸವಣ್ಣನವರನ್ನು. ಹೆಣ್ತನದ ಅಪೇಕ್ಷೆ ಆಕೆಯದು. ನೀಲವ್ವ ನೀಲಲೊಚನೆ ನಾಮದ ಹಿಂದೆ ಬಸವಣ್ಣನವರ ಪತ್ನಿ ನೀಲಾಂಬಿಕೆಯೇ ನನ್ನ ನಾಮವಯ್ಯಾ ಮನದ ಆಶಯದಲ್ಲಿ ಗಟ್ಟಿಗೊಂಡ ಮಾತುಗಳಾಗಿವೆ.
ನೆನೆಯಲಾಗದು ಎನ್ನ | ಹೆಣ್ಣೆಂದು ನೀವು ಭಕ್ತರು ||
ನೆನೆಯಲಾಗದು ಎನ್ನ | ಭಕ್ತೆಯೆಂದು ನೀವು ಶರಣರು ||
ನೆನೆಯಲಾಗದು ಎನ್ನ ಮುಕ್ತೆಯೆಂದು | ನೀವು ಶರಣರು ||
ನೆನೆಯಲಾಗದು ಎನ್ನ ರೂಪು | ನಿರೂಪಿಯಾದವಳೆಂದು ||
ನೀವು ನೆನೆದಹೆನೆಂಬ ನೆನಹು | ನೀವೆ ನೀವೇಯಾದ ಕಾರಣ ||
ಸಂಗಯ್ಯನಲ್ಲಿ ಪುಣ್ಯವಿಲ್ಲದ ಹೆಣ್ಣ | ನೀವೇತಕ್ಕೆ ನೆನೆವಿರಿ ||
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-891 / ವಚನ ಸಂಖ್ಯೆ-989)
ಅಂದಿನ ಮಡಿವಂತಿಕೆಯ ಸಮಾಜದ ವ್ಯವಸ್ಥೆಯ ಬಗ್ಗೆ ನೀಲಮ್ಮಳಿಗೆ ಅಪಾರವಾದ ಸಿಟ್ಟಿತ್ತು. ಮನದಲ್ಲಿ ಉಂಟಾಗುವ ಮಾನಸಿಕ ಸ್ವರೂಪವನ್ನು ಒಂಟಿತನದಲ್ಲಿ ಗಟ್ಟಿಯಾಗಿಸುವ ಸಶಕ್ತತೆ ಮನದಲ್ಲಿ ಉಂಟಾಗುವ ನಿಗೂಢತೆ ಆಕೆಯದು. ಸ್ತೀ ಮೌನಿಯಾಗಿರಬೇಕು. ತ್ಯಾಗಿಯಾಗಿರಬೇಕು. ಶಾಂತಳಾಗಿರಬೇಕು. ಇಂತಹ ವಿಚಿತ್ರ ವರ್ತನೆಗಳಿಂದ ಬೇಸತ್ತಿರಬೇಕು. ನಾನು ಸಂಗಯ್ಯನ ನಿಜ ಭಕ್ತೆ ನೀಲಮ್ಮ ಶರಣೆ ಎಂದು ಒತ್ತಿ ಹೇಳುವ ಮನದ ಹತಾಶೆ ಆಕೆಯದು. ತನ್ನ ಆತ್ಮಾಭಿಮಾನಕ್ಕೆ ಪೆಟ್ಟಾದಾಗ ತನ್ನ ರಕ್ಷಣೆಗೆ ಮುಂದಾಗುತ್ತಾಳೆ. ಸ್ತ್ರೀ ಪುರುಷ ಸಮಾನತೆ ಹೇಳಿಕೆಯಾಗಬಾರದು. ಅನುಭವ ಮಂಟಪದ ಶರಣೆಯರಿಗೆ ಧಾರ್ಮಿಕ ಸ್ವಾತಂತ್ರ್ಯವನ್ನು ವರ್ತಮಾನ ಕಾಲದಲ್ಲಿ ಉಳಿಸಿಕೊಳ್ಳಲು ಸಾಧ್ಯವಾಗದೆ ಹೋಗುವ ಮುನ್ಸೂಚನೆಯನ್ನು ಊಹಿಸಿರುವ ಸಾಧ್ಯತೆ ಇರಬೇಕು ನೀಲಮ್ಮನವರಿಗೆ.
12 ನೇ ಶತಮಾನದ ಅರಸು ಮನೆತನಗಳಲ್ಲಿ ಮಹಿಳೆಯರಿಗೆ ವಿದ್ಯಾಭ್ಯಾಸಕ್ಕಿಂತಲೂ ಹೆಚ್ಚಾಗಿ ನೃತ್ಯ ಸಂಗೀತ ಲಲಿತ ಕಲೆಗಳನ್ನು ಹೆಚ್ಚಾಗಿ ಪೋಷಿಸಿದ್ದನ್ನು ಕಾಣುತ್ತೇವೆ. ಇಂತಹ ಸೃಜನಶೀಲತೆಯನ್ನು ಪೇರೇಪಿಸುತ್ತಾ ಭಾವನಾತ್ಮಕ ಸ್ವಾತಂತ್ರ್ಯವನ್ನು ಕಸಿದುಕೊಂಡಿರುವ ಸಾಧ್ಯತೆಯನ್ನು ಸ್ಪಷ್ಟಪಡಿಸಬಹುದು. ಬಸವರಸಿಯಾಗಿ ನಾನು ಆಜ್ಞೆಯನ್ನು ಮಾಡುತ್ತಿಲ್ಲ. ಸಾಮಾನ್ಯ ಮಹಿಳೆಯಂತೆ ನನ್ನನ್ನು ನೋಡಿ ಎಂಬ ಯಾಚನೆಯಾಗಿದೆ. ಬಸವಣ್ಣನವರ ಪತ್ನಿಯಾದರೂ ದಾಂಪತ್ಯ ಜೀವನದ ಮಧ್ಯದಲ್ಲಿ ಅಂತರ ಇರಬಹುದು. ಬಸವರಸಿಯಾಗಿಯೂ ನೀಲಮ್ಮಳಿಗೆ ಅದಾವ ರೀತಿಯ ತೊಳಲಾಟ ಆವೇಗ ಆಕೆಯದು. ಅತೃಪ್ತ ಪ್ರತಿಭಟನೆಯ ನುಡಿಗಳಿಗೆ ಕೊನೆಯೇ ಇಲ್ಲ. ಸಂದರ್ಭಕ್ಕೆ ತಕ್ಕಂತೆ ಸೃಷ್ಟಿಗೊಳ್ಳುವ ವಚನಗಳ ವ್ಯಾಖ್ಯಾನಗಳು ಸತ್ಯದ ಒಡಲಿನಲ್ಲಿ ಮಿಂದೆದ್ದ ಶಬ್ದಗಳಾಗಿವೆ.
ಅರಿವಡೆ ನಾನು | ಅರಿವುಳ್ಳ ಹೆಣ್ಣಲ್ಲ ||
ಮರೆವಡೆ ನಾನು | ಮರೆಯಿಲ್ಲದ ಕಾಮಿನಿಯಲ್ಲ ||
ಏನೂ | ರೂಪಿಲ್ಲವೆನಗೆ ||
ಏನೂ ನೆಲೆಯಿಲ್ಲವೆನಗಯ್ಯಾ | ಸಂಗಯ್ಯಾ ||
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-878 / ವಚನ ಸಂಖ್ಯೆ-826)
ಜೀವನದ ಸತ್ಯ ಸಂಬಂಧಗಳನ್ನು ಸಮರ್ಥಿಸುವ ಪ್ರಯತ್ನದಲ್ಲಿ ವಚನದ ಕವಿತ್ವದ ಮೂಲಕ ಹಂಚಿಕೊಳ್ಳುತ್ತಾಳೆ. ಅರಿವಿಲ್ಲದ ದಾಂಪತ್ಯ ಮೂಕವಾಗಿ ದುಃಖಿಸುತ್ತದೆ. ಜೀವನ ದಡ ಬಿಟ್ಟ ದೋಣಿಯಾಗಿದೆ ಎಂಬ ಹತಾಶೆ ಆಕೆಯದು. ಮೌನದ ಸಂಜ್ಞೆಯಲ್ಲಿ ಅರಿವು ಸಂವಾದನೆಗೈಯುತ್ತದೆ. ಮರೆವಡೆ ನಾನು ಮರೆಯಿಲ್ಲದ ಕಾಮಿನಿಯಲ್ಲ. ಈ ಮನಸ್ಥಿತಿ ಯಲ್ಲಿ ಸತಿ ಪತಿ ಭಾವ ಬಂಧನವೆನಿಸಿದರೂ ಮುಕ್ತಿಗೆ ದಾರಿ ಮಾಡಿಕೊಟ್ಟಿತ್ತು. ಹೀಗಾಗಿ ಸ್ತ್ರೀ ಮನಸ್ಸಿನ ರೋಧನವನ್ನು ಅಸಮರ್ಪಕವಾಗಿ ತರ್ಕಿಸುವ ಪುರುಷ ವಿಮರ್ಶಕರ ಬಗ್ಗೆ ಸಂದೇಹವಾಗುತ್ತದೆ. ಏಕೆಂದರೆ ಸ್ತ್ರೀಯರಲ್ಲಿರುವ ಸ್ತ್ರೀ ಮನಸ್ಸಿನ ತುಡಿತಗಳು ಸ್ತ್ರೀಗುಣದ ಪಕ್ವತೆ ಇವರಿಗಿರುವ ಕೊರತೆಯೂ ಕಾರಣವಿರಬೇಕು. ಸ್ತ್ರೀಯನ್ನು ವೈಭವೀಕರಿಸುವಲ್ಲಿ ಅವಳ ಅಂತಃಕರಣದ ಮನಸ್ಸನ್ನು ಕಡೆಗೆಣಿಸಿದ ಸೂಕ್ಷ್ಮತೆ ನೀಲಮ್ಮನವರ ವಚನಗಳಲ್ಲಿ ಸಾಕಷ್ಟಿವೆ.
ಆಡಲಿಲ್ಲವಯ್ಯಾ ನಾನು | ಹೆಣ್ಣು ರೂಪ ಧರಿಸಿ ||
ನುಡಿಯಲಿಲ್ಲವಯ್ಯಾ ನಾನು | ಹೆಣ್ಣು ರೂಪ ಧರಿಸಿ ||
ನಾನು ಹೆಣ್ಣಲ್ಲದ ಕಾರಣ | ನಾನು ಇಹಪರ ನಾಸ್ತಿಯಾದವಳಯ್ಯಾ ||
ನಾನು ಉಭಯದ ಸಂಗವ | ಕಂಡು ಕಾಣದಂತಿದ್ದೆನಯ್ಯಾ ||
ಸಂಗಯ್ಯ ಬಸವ ಬಯಲ | ಕಂಡ ಕಾರಣ ||
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-879 / ವಚನ ಸಂಖ್ಯೆ-839)
ಸ್ತ್ರೀ ಮನಕ್ಕೆ ಮಾತ್ರ ವೇದ್ಯವಾಗುವ ಹೆಣ್ಣಿನ ಮನದಲ್ಲಿ ಹುದುಗಿರುವ ಪ್ರಾಣಸಖಿಯ ಎಚ್ಚರಿಕೆಯ ಮಾತುಗಳಾಗಿವೆ. ನೀಲಮ್ಮನವರ ಹತಾಶೆ ದುಃಖ ಬಂಜೆಯ ನೋವಿಗಿಂತಲೂ ಅಧಿಕವಾಗಿದೆ. ಚರಿತ್ರೆ ಮತ್ತು ಸಮಾಜದ ಆಗು-ಹೋಗುಗಳಿಗೆ ಕಾರಣವಾಗುವ ಯಾವ ಶಕ್ತಿಯ ಒತ್ತಡ ನನ್ನನ್ನು ಶೋಷಿಸುತ್ತಿದೆ. ಉತ್ತರ ಕಣ್ಣೆದುರು ಇದ್ದರೂ ಕೈ ಮಾಡಿ ಹೇಳಿಕೊಳ್ಳಲಾಗದ ಅಸಾಹಯಕತೆ? ಸ್ತ್ರೀ ಮನಕ್ಜೆ ಮಾತ್ರ ಮನದಟ್ಟಾಗುವ “ಆಡಲಿಲ್ಲವಯ್ಯ ನಾನು ಹೆಣ್ಣು ರೂಪ ಧರಿಸಿ” ಇಂತಹ ಎಚ್ಚರಿಕೆಯನ್ನು ನೀಲಮ್ಮನವರ ವಚನಗಳಲ್ಲಿ ಆತ್ಮವಿಶ್ವಾಸದ ಮೂಲಕ ಹೇಳಿದ್ದನ್ನು ಕಾಣಬಹುದು. ಸ್ತ್ರೀಯನ್ನು ಅಂದಿನ ಸಮಾಜದಲ್ಲಿ ಅಸ್ಪೃಶ್ಯಳಂತೆ ಪರಾವಲಂಬಿ ಎಂಬ ಅಧಿಕಾರಯುತ ಮಾತುಗಳನ್ನು ಗಮನಿಸಬೇಕು.
ಅಕ್ಕಮಹಾದೇವಿಯ ನಂತರ ಇನ್ನೊಂದು ಭಿನ್ನ ಆಯಾಮದ ಮೂಲಕ ದ್ವನಿ ಎತ್ತುತ್ತಾಳೆ ನೀಲಮ್ಮ. ಜೈವಿಕವಾಗಿ ಗಂಡು ಹೆಣ್ಣು ವ್ಯತ್ಯಾಸ ಪ್ರಕೃತಿಯ ಧರ್ಮ. ಆದರೆ ಸ್ತ್ರೀ ಪುರುಷರ ಭಿನ್ನತೆಯನ್ನು ಒತ್ತಾಯಿಸಿದಂತೆಲ್ಲಾ ಅದು ಮನದ ಸೂತಕವೆಂದು ಶರಣೆಯರು ಬಂಡಾಯದ ದ್ವನಿಯನ್ನು ಗುರುತಿಸಬೇಕು. ಹೀಗಾಗಿ ಹೆಣ್ಣಿನ ದೇಹ ರೂಪಗಳಿಗೆ ಮಹತ್ವ ಕೊಟ್ಟ ಅಂದಿನ ಸಮಾಜ ಅವಳ ಮನ ವ್ಯಕ್ತಿತ್ವವನ್ನು ಗೌರವಿಸದೇ ಇದ್ದಾಗ “ನುಡಿಯಲಿಲ್ಲ ನಾನು ಹೆಣ್ಣು ರೂಪ ಧರಿಸಿ” ಇಂತಹ ಭಾವಗಳ ಹೊಯ್ದಾಟಗಳಲ್ಲಿ ದಿಗ್ಬ್ರಮೆ ಅಶಾಂತಿ ಅತೃಪ್ತಿ ಕಾಡಿರಬೇಕು.
ವೈದಿಕ ವ್ಯವಸ್ಥೆಯನ್ನು ಹತ್ತಿರದಿಂದ ಕಂಡಂಥವಳು ಭಯದ ನೆರಳಲ್ಲಿ ನರಳಿದ ಆಕೆ ವೈಚಾರಿಕತೆಯ ಆಶಯ ವಚನಗಳ ಮೂಲಕ ಮುಖಾಮುಖಿಯಾಗುತ್ತಾಳೆ. ಸಾಧಕತ್ವ ಜೀವನವನ್ನು ಸ್ವೀಕರಿಸಿ ಹೆಣ್ಣಾದರೂ ಗಂಭೀರ ಮನಸ್ಥಿತಿಯೊಂದಿಗೆ ಗೃಹಿಣಿಯಾಗಿದ್ದಳು. ಹೀಗಾಗಿ ಹೆಣ್ಣು ಎಂದು ದ್ವನಿ ಎತ್ತುವಲ್ಲಿ ಪ್ರಭುತ್ವ ಮತ್ತು ಚರಿತ್ರೆಯ ಅಭಿನ್ನ ಸಂಬಂಧವನ್ನು ವಿವರಿಸುತ್ತದೆ. ಹೆಣ್ಣೆಂದರೆ ತ್ಯಾಗಿ ಶರಣಾಗುವುದು, ಪ್ರಭುತ್ವದ ಒಪ್ಪಂದದಲ್ಲಿ ಧರ್ಮದಲ್ಲಿ ಮೀರಲಾಗದ ನಿಯಮಗಳು ಸೃಷ್ಟಿಯಾದಾಗ “ನಾನು ಇಹಪರಕ್ಕೂ ನಾಸ್ತಿಯಾದಳಯ್ಯಾ ನಾನು ಉಭಯವು ಕಂಡು ಕಾಣದಂತಿದ್ದೆನಯ್ಯಾ ಸಂಗಯ್ಯಾ” ನೀಲಮ್ಮನವರಿಗೆ ಒಂಟಿತನ ಅತಿಯಾಗಿ ಕಾಡಿದಾಗ ಮನಕ್ಕೆ ಬಂಧನವನ್ನು ನಿರ್ಮಿಸಿಕೊಳ್ಳುತ್ತಾಳೆ.
ವಿರಕ್ತರ ಶೋಧವೂ ಬಯಲ ಪರಿಕಲ್ಪನೆಯ ಮಾನಸಿಕ ಶೋಧ ರೂಪದ ಪರಿ ಬಸವ ಬಯಲ ಕಂಡ ಕಾರಣ. ಆದರೆ ನೀಲಮ್ಮ ಸಮಷ್ಟಿ ಬಯಲಲ್ಲಿ ಲಿಂಗ ಪ್ರಸಾದ ಮೂಲಕ ಬಸವ ಪಥವನ್ನು ನಿರ್ಮಲ ಮನಸ್ಸಿನಿಂದ ತನ್ನನ್ನು ಅರ್ಪಿಸಿಕೊಳ್ಳುವ ಅದ್ವೈತ ಮನಸ್ಥಿತಿಯದು. ನೆನಹು ಭಾವದಲ್ಲಿ ಬಸವಣ್ಣನೆಂಬ ಸಂಮೋಹನ ಶಕ್ತಿಗೆ ಬಸವನೆಂಬ ದೇವರೇ ಆಕೆಗೆ ನಿರಾಕಾರವಾಗಿದೆ. ಹಿಗಾಗಿ ನೀಲಮ್ಮನ ವಚನಗಳ ಮೌಲ್ಯಯುತ ಅನುಭಾವ ಪ್ರಜ್ಞೆಯ ನಿರೂಪಣೆಗಳಾಗಿವೆ. ನಾವು ಮುಕ್ತವಾಗಿ ಮರು ವ್ಯಾಖ್ಯಾನಿಸಬೇಕಾಗಿದೆ.
–ಡಾ. ಸರ್ವಮಂಗಳ ಸಕ್ರಿ
ಕನ್ನಡ ಉಪನ್ಯಾಸಕರು
ರಾಯಚೂರು.
ಈ ಲೇಖನ ಪತ್ರಿಕೆಗಳಲ್ಲಿ ಪ್ರಕಟವಾಗಿದೆ.
e-ಸುದ್ದಿ ನಿಮಗೆ ಇಷ್ಟವಾದರೆ ಈ ಕೆಳಗಿನ ಕೆಂಪು ಬಣ್ಣದ ಗಂಟೆ ಒತ್ತಿ. ನಿಮ್ಮ ಸ್ನೇಹಿತರು, ಬಂಧುಗಳಿಗೂ ಸದಸ್ಯರಾಗಲು ತಿಳಿಸಿ.
-ಸಂಪಾದಕ