ಅವನಿ
ಅವಳುಅರ್ಥವಾಗದ ಅವನಿ
ಅಂತರಂಗದಿ ಅದುಮಿಟ್ಟ ಜ್ವಾಲೆ
ಅರಿಯದೆ ಭೂಗಿಲೇಳುವಳು
ಅದಿರಿನ ಅನವರತ ತವನಿಧಿ
ಆಗಾಗ ಕಂಪಿಸುವಳು ಸಂಪಿಗೆ ಕಂಪಿನವಳು||
ಅವಳು ಸೋಜುಗದಸೂಜಿಮೊಲ್ಲೆ
ಗುರುತ್ವದಿ ಗಿರಿಗಿಟ್ಲೆ ಹೊಡೆಯುವವಳು
ಮಳೆ ಗಾಳಿ ಬಿಸಿಲಿಗೆ ಮೈಯೊಡ್ಡಿದವಳು
ಋತು ಚಕ್ರದಲಿ ಚಲಿಸುವವಳ
ಹಗಲು ರಾತ್ರಿಗೆ ಹೊಂದಿಕೊಂಡವಳು||
ಮಳೆಯುಂಡು ಹಸಿರುಟ್ಟು
ಮರ ಗಿಡಕೆ ಹೂಹಣ್ಣು ಕೊಟ್ಟು
ಜೀವ ರಾಶಿಯ ಸಲಹುತಿಹಳು
ಪಂಚಭೂತದಿ ಪಲ್ಲವಿಸಿಹಳು||
ಅಂಕುಡೊಂಕಿನ ಜೀವ ಜಲಕೆ
ಝುಳು ಝುಳು ಕಲರವದಿ
ವೈಯ್ಯಾರದ ಬಿನ್ನಾನ ಕೊಟ್ಟವಳು
ಜಲಪಾತವಾಗಿ ಹರಿಸುವವಳು ||
ನೋವನುಂಡು ನಲಿವ ಕೊಟ್ಟ
ದಯಾಸಾಗರಿ ಧರಣಿ ನೀನು
ಸಕಲ ಜೀವಕೂ ಮಡಿಲು ಕೊಟ್ಟು
ಮಮತೆಯಿಂದ ಮಲಗಿಸುವವಳು
ನೀನಗಾರು ಸರಿ ಭೂತಾಯಿ ||
–ಸವಿತಾ ಮಾಟೂರು, ಇಲಕಲ್ಲ