ಅರಿವೆ ಜಂಗಮ
ಅಂಗದಲ್ಲಿ ಆಚಾರವ ತೋರಿದ
ಆ ಆಚಾರವೇ ಲಿಂಗವೆಂದರುಹಿದ.
ಪ್ರಾಣದಲ್ಲಿ ಅರಿವ ನೆಲೆಗೊಳಿಸಿದ;
ಅರಿವೆ ಜಂಗಮವೆಂದು ತೋರಿದ.
ಚೆನ್ನಮಲ್ಲಿಕಾರ್ಜುನನ ಹೆತ್ತ ತಂದೆ ಸಂಗನಬಸವಣ್ಣನು
ಎನಗೀ ಕ್ರಮವನರುಹಿದನಯ್ಯ ಪ್ರಭುವೆ.
–ಅಕ್ಕಮಹಾದೇವಿ
ಇದು ಅಕ್ಕ ಮಹಾದೇವಿಯವರ ವಚನ . ವೈರಾಗ್ಯ ಶ್ರೇಷ್ಠ ಮಹಾ ಶರಣೆ ಅಕ್ಕ ಮಹಾದೇವಿ ಅನುಭಾವದ ಭಾವ ಶಿಖರ .ಆಧ್ಯಾತ್ಮಿಕ ಅನುಭಾವದ ಅಪರೂಪದ ಕೊಂಡಿ. ತನ್ನ ತಾನರಿವ ಪರಿಯ ಕಾಣಲು ಉಡುತಡಿಯಿಂದ ಕಲ್ಯಾಣಕ್ಕೆ ಬರಿಗಾಲಿನಿಂದ ಯಾರ ಆಶ್ರಯವಿಲ್ಲದೆ ನಡೆದು ಬಂದ ಮಹಾತಾಯಿ .
ತಾನು ಚೆನ್ನಮಲ್ಲಿಕಾರ್ಜುನ ದೇವರಿಗೆ ಒಳಗಾದವಳು .ಚೆನ್ನ ಮಲ್ಲಿಕಾರ್ಜುನನೇ ದೈವ ದೇವರು ದೇವರು ಬೇರೆ ತಾನು ಬೇರೆ ದೇವರ ಆಶ್ರಯವಿಲ್ಲದೆ ಬದುಕುವುದು ದುರ್ಲಭವೆಂದು ತಿಳಿದಿದ್ದಳು.ದೇವರನ್ನು ಕಾಣುವ ಶೋಧನಾ ಕಾರ್ಯ ಮುಂದುವರೆದಿತ್ತು.
ದಾರಿಯುದ್ದಕ್ಕೂ ಗಿಳಿ ಮಾಮರ ಕೋಗಿಲೆ ಹಕ್ಕಿ ಪಕ್ಷಿಗಳೊಂದಿಗೆ ಸಂವಾದಿಸುತ್ತ ತನ್ನ ಚೆಲುವ ಗಂಡ ಚೆನ್ನ ಮಲ್ಲಿಕಾರ್ಜುನನ್ನು ಗುಡುಕಿಕೊಡಲು ಬಿನ್ನವಿಸುತ್ತಾಳೆ .
ಕಲ್ಯಾಣದ ಅಸಂಖ್ಯಾತ ಶರಣರ ಸಂಕುಲದಲ್ಲಿ ಅಕ್ಕ ಮಹಾದೇವಿ ಗುರುವ ಕಂಡಳು ಲಿಂಗವ ಕಂಡಳು ಜಂಗಮವ ಕಂಡಳು .ಅದು ಅಸ್ಮಿತೆಯ ಶೋಧನಾ ಕಾರ್ಯದ ಮುಂದುವರೆದ ದರ್ಶನ ಅವಳಿಗಾಗುತ್ತದೆ.
ಈ ಮೇಲಿನ ವಚನದಲ್ಲಿ ಅಕ್ಕನ ನಿಜ ಅರಿವಿಗೆ ಬಸವಣ್ಣನವರ ಸಮತೆ ಪ್ರೀತಿ ಕಾಯಕ ದಾಸೋಹ ತತ್ವಗಳು ಇಷ್ಟವಾಗುತ್ತವೆ.
ಅಂಗದಲ್ಲಿ ಆಚಾರವ ತೋರಿದ
ಕಾಯದಲ್ಲಿ ಕ್ರಿಯೆಯನ್ನು ಆಚಾರವನ್ನು ತೋರಿದನು ಬಸವಣ್ಣ. ಅಂಗದ ಸಾಫಲತೆ ಸಾರ್ಥಕತೆ ನಿತ್ಯ ಶ್ರಮದಿಂದ. ಅಂಗವು ಕಠಿಣ ಪರಿಶ್ರಮದಿಂದ ದುಡಿಯಬೇಕು
ಸತ್ಯ ಶುದ್ಧ ಕಾಯಕ ಮಾಡಬೇಕೆಂದು ಹೇಳಿದವನು ಬಸವಣ್ಣ. ಈ ಅಂಗದಲ್ಲಿ ಆಚಾರವ ತೋರಿ ಅಂಗದ ಮಹತ್ವವನ್ನು ತಿಳಿಸಿದನು ಬಸವಣ್ಣನು.ಶರೀರ ಬರಿ ಅನುಭೋಗಕ್ಕೆ ಸೀಮಿತವೆಂಬ ತತ್ವವನ್ನು ತಳ್ಳಿ ಹಾಕಿ ಅದು ಕ್ರಿಯೆಗೆ ಕಾಯಕಕ್ಕೆ ಆಚಾರಕ್ಕೆ ನಿಲ್ಲುವ ಜೈವಿಕ ಕೇಂದ್ರವೆಂದು ಅರುಹಿದನು ಬಸವಣ್ಣ.
ಆ ಆಚಾರವೇ ಲಿಂಗವೆಂದರುಹಿದ.
ಅಂಗದಲ್ಲಿನ ಆಚಾರವು ಸತ್ಯ ಶುದ್ಧ ಕಾಯಕ ತತ್ವವು. ಆಚಾರವು ಲಿಂಗವು . ಲಿಂಗ ಸ್ಥಾವರವಲ್ಲ ಅದು ಚೈತನ್ಯ ಲಿಂಗವು ಜ್ಞಾನವೆಂದಾದರೆ ಅದರ ಸದ್ಭಳಕೆ
ಕ್ರಿಯೆ.ಜ್ಞಾನಕ್ಕೆ ಮಾತ್ರ ಲಿಂಗವ ಹಿಡಿದು ವೃತಾಚರಣೆಯಲ್ಲಿ ಕುಳಿತುಕೊಳ್ಳುವುದು ಲಿಂಗ ತತ್ವಕ್ಕೆ ಅಪಮಾನ .ಕಾರಣ ಅಂಗಗುಣದ ನೈಜ ಕಾಯಕ ಆಚಾರವು ಲಿಂಗಜ್ಞಾನದ ಹುಟ್ಟು ಉಗಮ . ಅಂಗ ಲಿಂಗಗಳ ಸಂಬಂಧ. ಕಾರಣ ತತ್ವವನ್ನು ತಿಳಿದುಕೊಳ್ಳುವುದು ಎಷ್ಟು ಮುಖ್ಯವೋ ಅಷ್ಟೇ ಜವಾಬ್ದಾರಿಯುತ ಕರ್ತವ್ಯವೆಂದರೆ
ಅದರ ಪರಿಪಾಲನೆ . ಅಂಗದಲ್ಲಿನ ಆಚಾರವನ್ನೇ ಲಿಂಗವೆಂದರುಹಿದ ಬಸವಣ್ಣ ಎಂದಿದ್ದಾಳೆ ಅಕ್ಕ ಮಹಾದೇವಿ.
ಪ್ರಾಣದಲ್ಲಿ ಅರಿವ ನೆಲೆಗೊಳಿಸಿದ
ಆಚಾರವೇ ಅಂಗವಾದ ಬಳಿಕ .ಮನುಷ್ಯ ತನ್ನ ಶರೀರ ಜೊತೆಗೆ ತನ್ನ ಕಾಯಕ ದಾಸೋಹ ಮಾನಸಿಕ ನೈತಿಕ ವೈಚಾರಿಕ ಕ್ರಿಯೆಗಳನ್ನು ಸ್ಥಿತಿಗತಿಗಳನ್ನು ಹಸನಗೊಳಿಸುತ್ತಾನೆ .ಅಂಗ ಗುಣದಲ್ಲಿ ಗುರು ಲಿಂಗ ಸಂಬಂಧಗಳು ಗಟ್ಟಿಗೊಂಡಂತೆ ಇಂತಹ ಅಪೂರ್ವ ಅಮೂಲ್ಯ ಅರಿವನ್ನು ಪ್ರಾಣದಲ್ಲಿ ಕ್ರಿಯೆಯಲ್ಲಿ ದೈನಂದಿನ ಬದುಕಿನಲ್ಲಿ ಉಸಿರುಸುವ ಪ್ರಕ್ರಿಯೆಯಲ್ಲಿ ಸ್ಥಾಪಿಸಬೇಕು . ಅಂಗ ಲಿಂಗ ತತ್ವಗಳು ಪ್ರಾಣದಲ್ಲಿ ಪ್ರತಿಷ್ಠಾಪನೆ ಮಾಡಿದಾತ ನಮ್ಮ ಬಸವಣ್ಣನು ಎಂದು ಅಭಿಮಾನ ವ್ಯಕ್ತ ಪಡಿಸಿದ್ದಾಳೆ.ಪ್ರಾಣದಲ್ಲಿ ಅರಿವ ನೆಲೆಗೊಳಿಸಿದ ಇಂತಹ ಸುಂದರ ಅನುಭದ ಜೋಡಣೆ ಅಕ್ಕನದು.
ಅರಿವೆ ಜಂಗಮವೆಂದು ತೋರಿದ.ಚೆನ್ನಮಲ್ಲಿಕಾರ್ಜುನನ ಹೆತ್ತ ತಂದೆ ಸಂಗನಬಸವಣ್ಣನು ಎನಗೀ ಕ್ರಮವನರುಹಿದನಯ್ಯ ಪ್ರಭುವೆ
ಅಂಗದಲ್ಲಿ ಆಚಾರವನ್ನು ಆಚಾರವೇ ಲಿಂಗವೆಂದು ಈ ಅಂಗ ಲಿಂಗಗಳ ಸಂಬಂಧಗಳು ಪ್ರಾಣದಲ್ಲಿ ನೆಲೆಗೊಳ್ಳುವಂತೆ ಮಾಡಿ ಆ ಜ್ಞಾನವೇ ಅರಿವು ಎಂದು ಪ್ರತಿಪಾದಿಸಿದವರು ಬಸವಣ್ಣನವರು. ಇಂತಹ ಮೌಲಿಕ ಅರಿವೆ ಜಂಗಮವೆಂದು ತೋರಿದ ಚೆನ್ನಮಲ್ಲಿಕಾರ್ಜುನನ ಹೆತ್ತ ತಂದೆ ಸಂಗನಬಸವಣ್ಣನು ಎನಗೀ ಕ್ರಮವನರುಹಿದನಯ್ಯ ಪ್ರಭುವೆ. ದೈವತ್ವಕ್ಕೂ ರಕ್ಷಕ ತಂದೆ ಪಾಲಕ ಬಸವಣ್ಣ ಎಂದು ಕೊಂಡಾಡಿದ್ದಾಳೆ. ಅಕ್ಕ ಮಹಾದೇವಿ ಮತ್ತು ಅಲ್ಲಮರ ಸಂವಾದಗಳಲ್ಲಿ ತನಗೆ ಅರಿವೆ ಜಂಗಮ ಚಲನಶೀಲ ಚೈತನ್ಯವೆಂದು ಅರುಹಿದ ಬಸವಣ್ಣನು ತಾನು ನಂಬಿದ ದೈವ ಚೆನ್ನ ಮಲ್ಲಿಕಾರ್ಜುನದೇವರ ಹೆತ್ತಪ್ಪ ತಂದೆ ಎಂದು ಹೇಳುವಲ್ಲಿ ಅಕ್ಕ ಮಹಾದೇವಿಯು ನೈಜ ಜಂಗಮ ತತ್ವಗಳು ದೈವೀ ಶಕ್ತಿಗಿಂತ ಮಿಗಿಲು ಪ್ರಬಲವೆಂದು ತೋರಿದನು ಬಸವಣ್ಣನವರು ಎಂದು ವಿನಮ್ರವಾಗಿ ಹೇಳಿಕೊಳ್ಳುತ್ತಾಳೆ.
ಜಂಗಮ ಜಡವಾಳ ಜಾತಿಯಲ್ಲ ಅದು ಕ್ರಿಯೆ ಜ್ಞಾನಗಳ ಸಮನ್ವಯ ಅದ್ದುವೇ ಅರಿವೆಂದು ಸಂಗನ ಬಸವಣ್ಣನು ತನ್ನ ಆಧ್ಯಾತ್ಮಿಕ ಬದುಕಿಗೆ ದಾರಿಯಾದನು ಪ್ರಭುವೇ ಎಂದು ಹೇಳಿಕೊಂಡಿದ್ದಾಳೆ.ಅಕ್ಕ ಮಹಾದೇವಿಯ ವೈರಾಗ್ಯಾಕೆ ನಿಜ ಅರ್ಥ ಮತ್ತು ಹೊಸ ಸ್ವರೂಪವು ಸಿಕ್ಕಿದು ಬಸವಣ್ಣನವರಿಂದ .ಅಂತೆಯೇ ಅಕ್ಕ ಮಹಾದೇವಿ ದೇವಲೋಕ ಮರ್ತ್ಯಲೋಕ ಪಾತಾಳಲೋಕಕ್ಕೆ ಚೆನ್ನ ಮಲ್ಲಿಕಾರ್ಜುನದೇವರಿಗೂ ತನ್ನ ಬಸವಣ್ಣನೇ ದೇವರು ಎಂದು ಹೇಳುತ್ತಲೇ. ದೇವರು ಇಲ್ಲಿ ಮೌಲ್ಯಗಳ ಮೊತ್ತ ಅರಿವಿನ ದಾರಿ ಅಷ್ಟೇ. ಶರಣಾರ್ಥಿ
–ಡಾ.ಶಶಿಕಾಂತ.ಪಟ್ಟಣ ಪುಣೆ