ದೀಪಾವಳಿ ಹಬ್ಬದ ಆಚರಣೆ ಮತ್ತು ಅದರ ಹಿನ್ನೆಲೆ

ದೀಪಾವಳಿಯ ಅರ್ಥ ಅಂತರಂಗದಲ್ಲಿಯ ಕತ್ತಲೆಯನ್ನು ಹೊಡೆದೊಡಿಸಿ ಅಂತರಂಗ ಹಾಗೂ ಬಹಿರಂಗದಲ್ಲಿಯೂ ಬೆಳಕನ್ನು ಹರಿಸುವ ಹಬ್ಬವಾಗಿದೆ. ದೇವರ ಮೊರೆ ಹೊಕ್ಕು, ಇಂದಿಗೆ ನಮ್ಮ ಹತಾಷೇಯ ದಿನಗಳೆಲ್ಲ ಅಳಿದು, ಹೊಸದಾದ ವಿಜಯದ ಭರವಸೆಯ ಸೂಚಿಸುವ, ಸಂತಸ ಹಂಚಿಕೊಳ್ಳುವ ದೀಪಾವಳಿ ಹಬ್ಬವಾಗಿದೆ. ಬೆಳಕಿನೆಡೆಗೆ ಬೆಳಗುತ ಬೆಳಗುವ ಸಂದೇಶವನ್ನು ಸಾರುವ ಹಬ್ಬವಾಗಿದೆ. ನಮ್ಮ ಹಿಂದು ಧರ್ಮವಲ್ಲದೆ ಜೈನ, ಬೌದ್ಧ ಮತ್ತು ಸಿಖ್ಖರು ಕೂಡ ದೀಪಾವಳಿ ಹಬ್ಬ ಆಚರಿಸುತ್ತಾರೆ. ದೀಪವಿಲ್ಲದೆ ಹಿಂದು ಧರ್ಮಗಳಲ್ಲಿ ಯಾವ ಹಬ್ಬಗಳು ಆಚರಣೆಯಲ್ಲಿಲ್ಲ. ದೀಪಗಳ ಬೆಳಕಿನಲ್ಲಿಯೇ ದೇವರ ಆರಾಧನೆ ನಡೆಯುವುದು. ಹದಿನಾಲ್ಕು ವರ್ಷಗಳ ಕಾಲ ವನವಾಸ ಮುಗಿಸಿ ಕೊಂಡು ಶ್ರೀ ರಾಮನು ಪತ್ನಿ ಮತ್ತು ಲಕ್ಷ್ಮಣನ ಸಮೇತ ಅಯೋಧ್ಯೆಗೆ ಮರಳಿ ಬಂದ ದಿನವು ಇದಾಗಿದೆ. ಅಯೋಧ್ಯೆಯ ಪ್ರಜೆಗಳೆಲ್ಲ ನಗರವನ್ನು ಸ್ವಚ್ಛಗೊಳಿಸಿ, ದೀಪಗಳಿಂದ ಅಲಂಕರಿಸಿ ತಮ್ಮ ಮಹಾರಾಜನನ್ನು ಸ್ವಾಗಿತಿಸಿ ಕೊಂಡ ದಿನವು ಹೌದು. ಭಗವಾನ್ ಮಹಾವೀರನು ಮೊಕ್ಷಕಂಡ ದಿನವೆಂದು ಜೈನರು ಆಚರಿಸುವ ದೀಪಾವಳಿಯ ಹಬ್ಬವಾಗಿದೆ. ಗೌತಮ್ ಬುದ್ಧನು ಹದಿನೆಂಟು ವರ್ಷಗಳ ನಂತರ ತನ್ನ ಅನುಯಾಯಿಗಳೊಂದಿಗೆ ಕಪಿಲವಸ್ತುವಿಗೆ ಮರಳಿ ಬಂದ ದಿನವೆಂದು ಬೌದ್ಧರು ದೀಪಾವಳಿಯನ್ನು ಆಚರಿಸುತ್ತಾರೆ. ಇನ್ನೂ ಸಿಖ್ಖರು, ಬಂದಿ ಚೋರ ದಿವಸವೆಂದು ದೀಪಾವಳಿಯಂತೆ ಆಚರಿಸುತ್ತಾರೆ.
ಹಿಂದು ಧರ್ಮದ ದೀಪಾವಳಿಯ ಹಬ್ಬದ ಆಚರಣೆಯ ಹಿನ್ನೆಲೆಯಲ್ಲಿ ಪೌರಾಣಿಕ ಕಥೆಗಳು ಹುಟ್ಟಿಕೊಂಡಿವೆ. ಒಟ್ಟು ಐದು ದಿನಗಳ ಕಾಲ ಆಚರಿಸುವ ಬೆಳಕಿನ ಹಬ್ಬವಾಗಿದೆ. ಈ ಐದು ದಿನ ಭ್ರಹ್ಮಿ ಮೂಹರ್ತದಲಿ ಎದ್ದು ಸ್ನಾನ, ಪೂಜೆಯ ವಿಧಿ ವಿಧಾನಗಳನ್ನು ಆಚರಿಸುವದಾಗಿದೆ. !
ಮೊದಲ ಹಬ್ಬ ನೀರು ತುಂಬುವ ಹಬ್ಬ. ಮುಂಜಾನೆ ಮನೆಯ ಮುಂದೆ ಸುಂದರವಾದ ರಂಗೋಲಿ ಪವಡಿಸಿ, ಮನೆಯ ಮುಂದೆ ಮಣ್ಣಿನ ಹಣತೆಗಳಲ್ಲಿ ದೀಪಗಳನ್ನು ಹಚ್ಚಿ, ಮನೆಯಲ್ಲಿ ನೀರು ತುಂಬುವ ಪಾತ್ರೆಪಗಡಿಗಳನ್ನೆಲ್ಲ ಸ್ವಚ್ಛವಾಗಿತೊಳೆದು ನೀರು ತುಂಬಿ ವಿಭೂತಿ ಕುಂಕುಮ ಹಚ್ಚಿ ಪೂಜಿಸುವ ದಿನ. ಸಮುದ್ರ ಮಂಧನವಾದಾಗ ಲಕ್ಷ್ಮಿದೇವಿ ಉದ್ಭವಿಸಿದ, ಪ್ರಕಟಗೊಂಡ ದಿನವಾಗಿದೆ ಮತ್ತು ಅವಳ ಜೊತೆ ಅವಳ ಸಹೋದರರು ಯಕ್ಷ, ಚಂದ್ರ, ಕಾಮಧೇನು, ಐರಾವತ ಮತ್ತು ಕಲ್ಪವೃಕ್ಷವೆಲ್ಲರು ಬಂದ ದಿನವು ಅದಾಗಿದೆ. ನೀರು ತುಂಬುವ ಹಬ್ಬಕ್ಕೆ ಧನತ್ರಯೋದಶಿಯೆಂದು ಕೂಡ ಕರೆಯುತ್ತಾರೆ.

ನರಕಚತುರ್ದಶಿ ಹಬ್ಬದಂದು ಅಭ್ಯಂಗದ ಸ್ನಾನಕ್ಕೂ ಒಂದು ವಿಶೇಷತೆಯಿದೆ. ಶ್ರೀ ವಿಷ್ಣುಪರಮಾತ್ಮಾ ವರಹ ಅವತಾರದಲ್ಲಿ ದ್ದಾಗ ಆತನ ದೇಹದಿಂದ ಬೆವರಿನ ತೊಟ್ಟು ಭೂಮಾತೆಯ ಗರ್ಭ ಸೇರಿದಾಗ ನರಕಾಸುರನು ಜನ್ಮ ತಾಳಿದನಂತೆ. ಈತನನ್ನು ಭೌಸಾಸುರನೆಂದು ಕರೆಯುತ್ತಾರೆ. ಭೂದೇವಿಯು ತನ್ನ ಮಗನಿಗಾಗಿ ವಿಷ್ಣುವಿನಿಂದ ವೈಷ್ಣವಾಸ್ತ್ರವನ್ನು ವರವಾಗಿ ಪಡೆದು ಕೊಳ್ಳುತ್ತಾಳೆ. ಇದರಿಂದ ನರಕಾಸುರ ತ್ರೀವಿಕ್ರಮನಾಗಿ ಬೆಳೆದು ಲೋಕ ಕಂಟಕನಾಗುತ್ತಾನೆ. ಇಂದ್ರ ಮತ್ತು ಆತನ ಮಾತೆ ಅದಿತಿ ಕೃಷ್ಣನ ಮೊರೆ ಹೊಗುತ್ತಾರೆ. ಇತ್ತ ಭೂದೇವಿಯ ಮಗನ ದುರ್ನಡತೆಗೆ ಹತಾಶಳಾಗಿ ಅವಳು ಶ್ರೀ ಕೃಷ್ಣನ ಮೊರೆ ಹೋಗುತ್ತಾಳೆ. ಆಗ ಶ್ರೀ ಕೃಷ್ಣ ಸತ್ಯಭಾಮೆಯ ಸಮೇತ ಗರುಡಾರೂಢನಾಗಿ ಬಂದು ನರಕಾಸುರನ ವಧೆ ಮಾಡುತ್ತಾನೆ. ಇದರಿಂದ ತ್ರೀ ಲೋಕದಲ್ಲಿ ನರಕನ ದಹನದ ವಿಷಯ ಕೇಳಿ ಮದ್ದು ಗುಂಡುಗಳನ್ನು ಹಾರಸಿ ನರಕಾಸುರನ ಅಂತ್ಯವಾಯಿತೆಂದು ಸಂತೋಷಪಡುತ್ತಾರೆ. ಅದುವೇ ದೀಪಾವಳಿಯ ಎರಡನೇಯ ದಿನದ ನರಕ ಚತುರ್ದಶಿಯ ಹಬ್ಬವಾಗಿದೆ.

ದೀಪಾವಳಿಯ ಅಮಾವಾಸ್ಯೆಯ ದಿನ ಕಮಲದ ಹೂವಿನ ಮೇಲೆ ಲಕ್ಷ್ಮಿ ವಿರಾಜಿತಳಾಗಿರುತ್ತಾಳೆ. ಬಾಳೆಯ ದಿಂಡುಗಳನಿಟ್ಟು ತಮ್ಮ ತಮ್ಮ ಅನುಕೂಲತೆಯ ಪ್ರಕಾರ ಮುತ್ತು ರತ್ನ, ಬೆಳ್ಳಿ ಬಂಗಾರದ ಆಭರಣಗಳಿಂದ ಅಲಂಕರಿಸಿ, ಪುಸ್ತಕಗಳನ್ನಿಟ್ಟು, ಸಿಹಿ ಅಡುಗೆಯ ನೈವೆದ್ಯದೊಂದಿಗೆ ಪೂಜೆ ಸಲ್ಲಿಸುತ್ತಾರೆ. ಮನೆಯ ಸುತ್ತಮುತ್ತಲು ದೀಪಗಳನ್ನು ಹಚ್ಚುತ್ತಾರೆ. ಅಂಗಡಿ, ಕಚೇರಿಗಳಲ್ಲೂ ಲಕ್ಷ್ಮಿ ಪೂಜೆ ಮಾಡಲಾಗುತ್ತದೆ. ಹಳೆಯ ಲೆಕ್ಕಪತ್ರ ಮುಗಿಸಿ ಹೊಸ ಲೆಕ್ಕಪತ್ರದ ಪುಸ್ತಕಗಳೊಂದಿಗೆ ವ್ಯಾಪಾರ ಪ್ರಾರಂಭಿಸುತ್ತಾರೆ. ಒಟ್ಟಾರೆ ಹೇಳಬೇಕೆಂದರೆ ಶ್ರೀ ಲಕ್ಷ್ಮಿ, ಐಶ್ವರ್ಯ ನೀಡುವವಳಾದರೆ, ಸರಸ್ವತಿ ಜ್ಞಾನ ಹಂಚುವಳು ಮತ್ತು ಪಾರ್ವತಿಯ ಆತ್ಮ ಸ್ಥೈರ್ಯ, ಬಲವನ್ನು ತುಂಬುವವಳಾಗಿದ್ದಾಳೆ. ಒಟ್ಟಾರೆ ಲಕ್ಷ್ಮೀ ಪೂಜೆಯಲ್ಲಿ ಸರಸ್ವತಿ, ಪಾರ್ವತೀಯ ಪೂಜೆಯು ಮಾಡಲಾಗುತ್ತದೆ. ಈ ಮೂವರು ದೇವತೆಗಳು ಧನ ಧಾನ್ಯ, ಫಲ ಪುಷ್ಪ, ಜ್ಞಾನ ಬುದ್ಧಿಮತ್ತ ಮತ್ತು ಯಶಸ್ಸು, ಸುಖ ಶಾಂತಿ, ಆಯುಷ್ಯ ಆರೋಗ್ಯ, ಸಮೃದ್ಧಿ ಅಭಿವೃದ್ಧಿಯನ್ನು ಕೊಟ್ಟು ದಯಪಾಲಿಸುತ್ತಾರೆ. ದೀಪಾವಳಿಯಲ್ಲಿ ಲಕ್ಷ್ಮಿ ಪೂಜೆಯ ವಿಶೇಷತೆ ಇದಾಗಿದೆ.

ನಾಲ್ಕನೇಯದಾಗಿ ಬಲಿಪಾಡ್ಯ . ತ್ರೀಲೋಕದ ಮೇಲೆ ವಿಜಯ ಸಾಧಿಸಿದ ದೈತ್ಯ ಅಸುರ ಬಲಿ ಮಹಾರಾಜನ ಆಳ್ವಿಕೆಯಲ್ಲಿ ಪ್ರಜೆಗಳೆಲ್ಲ ಬಹಳ ಸಂತಸದಿಂದ ಇದ್ದರು. ಆತ ಶೌರ್ಯ, ಪ್ರಾಮಾಣಿಕ, ಮತ್ತು ಪರೋಪಕಾರಿಯೂ ಆಗಿದ್ದನಲ್ಲದೆ ಅಜೆಯನು ಆಗಿದ್ದನು. ಮಹಾ ಬಲಿಯು ಒಂದು ದಿನ ಯಜ್ಞವೊಂದನ್ನು ಮಾಡಲಣಿಯಾಗುತ್ತಾನೆ. ಆ ಸಮಯದಲ್ಲಿ ಯಾರೆ ಬಂದು ಏನು ಕೇಳಿದರೂ ಕೊಡುವವನಾಗಿರುತ್ತಾನೆ. ಮಹಾದಾನಿಯೆಂಬ ಅಹಂಕಾರವು ಆತನಲ್ಲಿರುತ್ತದೆ. ಇದೇ ಸಮಯ ಸಾಧಿಸಿ ವಿಷ್ಣು ಕುಬ್ಜನ ಅವತಾರದಲ್ಲಿ ಬಂದು ತನಗೆ ಮೂರು ಅಡಿಯಿಡುವಷ್ಟು ಸ್ಥಾನಬೇಕೆಂದ. ಅದಕ್ಕೆ ಒಪ್ಪಿಗೆ ನೀಡಿದ ಬಲಿಮಹಾರಾಜನಿಗೆ ಆತನ ಗುರು ಶುಕ್ಲಾಚಾರ್ಯ ಎಚ್ಚರಿಸಿದರು. ಶ್ರೀ ವಿಷ್ಣುವೇ ವಾಮನ ಅವತಾರ ತಾಳಿ ಬಂದು ನಿನ್ನಿಂದ ದಾನ ಪಡೆದುಕೊಂಡಿದ್ದಾನೆ. ಆದರೆ ಸಮಯ ಮೀರಿಹೊಗಿತ್ತು. ಕೊಟ್ಟ ಮಾತಿಗೆ ಹಿಂಜರಿಯದ ನಿಷ್ಟಾವಂತ ರಾಜನಾಗಿದ್ದ ಬಲಿ. ವಾಮ ತನ್ನ ಅಗಾಧ ರೂಪವನ್ನು ತಾಳಿ ಮೂರು ಪಾದಗಳನ್ನು ಇಡಲು ಅಣಿಯಾದನು. ಎರಡು ಪಾದಗಳಲ್ಲಿ ಬಲಿಮಹಾರಾಜನ ಎಲ್ಲ ಪ್ರದೇಶವನ್ನು ಆವರಿಸಿದ, ಇದನ್ನು ಕಂಡ ಬಲಿಗೆ ತನ್ನ ಸಾವು ನಿಶ್ಚಿತವೆನಿಸಿ ವಿಷ್ಣುವನ್ನು ಮನದಲ್ಲಿ ನೆನೆಯುತ್ತಾನೆ. ನರಸಿಂಹನ ಭಕ್ತ ಪ್ರಲ್ಲಾದನ ಮೊಮ್ಮಗ ಬಲಿಯಾದ ಕಾರಣ ಆತನು ಭಕ್ತಿಸಂಭುತನಾಗಿದ್ದ. ವಾಮನ ಇನ್ನೊಂದು ಪಾದವನ್ನು ತನ್ನ ತೆಲೆಯ ಮೇಲಿಡಲು ಹೇಳಿದ. ವಾಮನು ತನ್ನ ಶಕ್ತಿಬಲಯಿಂದ ಬಲಿಚಕ್ರವರ್ತಿಯನ್ನು ಪಾತಳಕ್ಕದುಮಿದ. ಬಲಿಯ ಸಮರ್ಪಣೆಯ ಭಾವನೆಗೆ ಮೆಚ್ಚಿದ ವಿಷ್ಣು, ವರ್ಷಕ್ಕೊಮ್ಮೆ ಬಲಿಪಾಡ್ಯಮಿಯಂದು ಬಲಿಯನ್ನು ಎಲ್ಲಾ ಭಕ್ತರು ಆರಾಧಿಸುವಂತೆ ಮಾಡುತ್ತಾನೆ. ಈ ಮಹತ್ವದ ದಿನವನ್ನು ದೀಪಾವಳಿಯ ಬಲಿಪಾಡ್ಯಮಿಯೆಂದು ಆಚರಿಸಲಾಗುತ್ತದೆ. ಶಿವ ಪಾರ್ವತಿ ಎದುರು ಬದಿರು ಕುಳಿತು ದಾಳಗಳನ್ನು ಆಡಿದ ದಿನವು ಆಗಿದೆ. ಆದಕಾರಣ ಜೂಜೂ, ಪಗಡಿ, ಇಸ್ಪೇಟ ಇನ್ನಿತರ ಆಟಗಳನ್ನು ಕೂಡ ಪಂದ್ಯಕಟ್ಟಿ ಆಡುತ್ತಾರೆ.

ಕೊನೆಯ ದಿನ ಸಹೋದರ ಬಿದಿಗೆಯ ಹಬ್ಬವಾಗಿದೆ. ಯಮನು ನರಕದಲ್ಲಿಯ ಜೀವಿಗಳನ್ನು ಒಂದು ದಿನ ಮುಕ್ತರನ್ನಾಗಿ ಮಾಡಿ ತನ್ನ ಸಹೋದರಿ ಯಮಿಯ ಮನೆಗೆ ಹೋಗಿದ್ದನು. ಕೆಲವೊಂದು ಉಡುಗೊರೆಗಳನ್ನು ಕೊಟ್ಟು ಭೋಜನ ಮಾಡಿ, ಯಮಿಯ ಆಶಿರ್ವಾದ ಪಡೆದು ಮರಳಿದನು. ಯಮಿಯು ಕೂಡ ತನ್ನ ಸಹೋದರ ಯಮನಿಗೆ ಉಣಿಸಿ ತಿನ್ನಿಸಿ ಹಾರೈಸಿ ಆರತಿ ಬೆಳಗಿ ತನ್ನ ಸಹೋದರನ ಏಳಿಗೆಯ ಕುರಿತು ಲಕ್ಷ್ಮಿ ದೇವಿಯಲ್ಲಿ ಪ್ರಾರ್ಥಿಸಿ ಕಳುಹಿಸುತ್ತಾಳೆ. ಹುಣ್ಣಿಮೆಯ ಚಂದ್ರನು ಬೆಳಗುವಂತೆ ಸಹೋದರರಲ್ಲಿಯೂ ಪ್ರೀತಿ ಬೆಳೆಯಲಿ ಮತ್ತು ಮನಸ್ಸಿನಲ್ಲಿರುವ ದ್ವೇಶ ಅಸೂಯೆಗಳು ನಾಶವಾಗಿ ಬಂಧು ಭಗಿನಿಯರ ಬಾಂಧವ್ಯ ಮತ್ತಿಷ್ಟು ಗಟ್ಟಿಯಾಗಿ ಬೆಳೆಯಲಿ ಎನ್ನುವ ಉದ್ದೇಶವು ಒಳಗೊಂಡಿದೆ. ಸಹೋದರನ ಆಸರೆಯಲ್ಲಿ ಸಹೋದರಿಯರು ನಿರ್ಭಿತಿಯಿಂದ ಬದುಕಬೇಕು.
ಈ ರೀತಿಯಾಗಿ ದೀಪಾವಳಿಯಲ್ಲಿ ಐದು ದಿನಗಳ ಹಬ್ಬ ಬಹಳ ಸಂಭ್ರಮ ಸಡಗರದಿಂದ ಕೂಡಿರುತ್ತದೆ. ಪೂಜೆಯ ಮೊದಲು ಹೊಸ ಬಟ್ಟೆಗಳನ್ನು ಧರಿಸುವುದು. ಸಂಜೆಗೆ ಮುದ್ದು ಗುಂಡುಗಳನ್ನು(ಪಟಾಕ್ಷಿ) ಹಾರಿಸುವುದು. ಒಬ್ಬರಿಗೊಬ್ಬರು ಸಿಹಿಯನ್ನು ಹಂಚುತ್ತಾ ಸಿಹಿ ಮಾತುಗಳನ್ನು ಆಡುತ್ತಾ ಸಂತಸದಿಂದ ಆಚರಿಸುವ ದೀಪಾವಳಿ ಹಬ್ಬವಾಗಿದೆ.
ಈ ಆಧುನಿಕ ಯುಗದಲ್ಲಿ ದೀಪಾವಳಿ ಹಬ್ಬದ ಆಚರಣೆ ಸ್ವಲ್ಪ ಭಿನ್ನವಾಗಿ ಆಚರಿಸಿದರೆ ಹೇಗೆ? ಮೊದಲು ಹಿತಮಿತವಾದ ಆಚರಣೆಯಾಗಬೇಕು. ಒಂದು ವೇಳೆ ನಿಮಗೆ ಅಧ್ಧೂರಿಯಾಗಿ ಹಬ್ಬ ಆಚರಿಸುವ ಮನಸಾಗಿದ್ದರೆ, ಅದನ್ನು ಅನಾಥ ಮಕ್ಕಳಿಗೆ ಮತ್ತು ಅನಾಥ ವೃಧ್ಧರಿಗೆ ಹೊಸ ಬಟ್ಟೆಗಳು, ಸಿಹಿ ತಿಂಡಿಗಳು ಹಂಚಿ ಅವರು ಜೊತೆ ಸ್ವಲ್ಪ ಸಮಯ ಸಂತಸದ ಕ್ಷಣಗಳನ್ನು ಕಳೆದು ಹಬ್ಬ ಆಚರಿಸಬಹುದು. ಇನ್ನು ಬೇಕಾಬಿಟ್ಟಿ ಮುದ್ದು ಗುಂಡುಗಳ ಹಾರಿಸಿ ಪರಿಸರ ಮಲೀನ ಮಾಡುವ ಬದಲು, ಬಡವರ ಮನೆಯ ಮುಂದೆ ನಿಮ್ಮ ಮನೆಯ ಮುಂದೆ ದೀಪಗಳನ್ನು ಬೆಳಗಿಸಿ ಹಬ್ಬ ಆಚರಣೆ ಮಾಡಲುಬಹುದು. ಪ್ರತಿಯೊಂದು ವಸ್ತುಗಳ ಬೆಲೆ ಗಗನಕ್ಕೆರಿದೆ. ಅದಕ್ಕಾಗಿ ನಮ್ಮ ಅವಶ್ಯಕತೆಗಳಿಗೂ ಸ್ವಲ್ಪ ಕಡಿವಾಣ ಹಾಕಿ ಭಕ್ತಿಯಿಂದ ಪೂಜಾರಾಧನೆಯ ಮೂಲಕ ದೀಪಾವಳೀಯ ಹಬ್ಬ ಆಚರಿಸೋಣ. ದೀಪದ ಬೆಳಕಿನಲ್ಲಿ ಮೌಢ್ಯತೆ, ದುಂದುವೆಚ್ಚ, ಆಡಂಬರದ ಹಬ್ಬವಾಗದೆ, ಸ್ನೇಹ ಸೌಹಾರ್ದತೆಯ, ಪ್ರೀತಿ ವಿಶ್ವಾಸದಿಂದ ಕೂಡಿದ ಹಬ್ಬ ಆಚರಣೆಯಾಗಲಿ. ಬನ್ನಿ ಎಲ್ಲರೂ ಒಟ್ಟಿಗೆ ಸೇರಿ ಒಂದು ಒಳ್ಳೆಯ ನಿರ್ಧಾರದೊಂದಿಗೆ ದೀಪಾವಳಿ ಹಬ್ಬದ ದೀಪಗಳನ್ನು ಮನೆ ಮನಗಳಲ್ಲಿ ಬೆಳೆಗೋಣ ಮತ್ತು ಬೆಳಗಿಸೋಣ.

✍️ ಶ್ರೀಮತಿ ಸುಲೋಚನಾ ಮಾಲಿಪಾಟೀಲ ಧಾರವಾಡ.
6361310832

Don`t copy text!