ಕಿತ್ತೂರು ಇತಿಹಾಸದ ಮೇಲೆ ಹೊಸ ಬೆಳಕು -ಭಾಗ -1

 

ಕಿತ್ತೂರು ಇತಿಹಾಸದ ಮೇಲೆ ಹೊಸ ಬೆಳಕು -ಭಾಗ -1

ಕರ್ನಾಟಕದಲ್ಲಿ ಅಷ್ಟೇ ಅಲ್ಲ ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕಿತ್ತೂರು ಸಂಸ್ಥಾನವು ದೇಶಕ್ಕಾಗಿ ಮೊಟ್ಟ ಮೊದಲು ಬ್ರಿಟಿಷರ ವಿರುದ್ಧ ರಣ ಕಹಳೆ ಊದಿ 1824 ರ ವೇಳೆಗೆ ಶಿಪಾಯಿ ದಂಗೆಗಿಂತ ಮುಂಚೆ 33 ವರುಷ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಬ್ರಿಟಿಷರನ್ನು ಬಗ್ಗು ಬಡೆದ ಕೀರ್ತಿ ಕಿತ್ತೂರಿನ ಅರಸು ಮನೆತನಕ್ಕೆ ಸಲ್ಲಬೇಕು.

ಕಿತ್ತೂರು ಸಂಸ್ಥಾನವು 1545 ರಿಂದ 1824 ರ ವರೆಗೆ ಸುಮಾರು 279 ವರುಷದಷ್ಟು ದೀರ್ಘವಾಗಿ ಆಳಿದ ಕರ್ನಾಟಕದ ಲಿಂಗಾಯತ ರಾಜಮನೆತನವಾಗಿದೆ . ಕಿತ್ತೂರು ಎಂದ ತಕ್ಷಣ ನಮಗೆ ನೆನಪಾಗುವುದು ಕಿತ್ತೂರು ರಾಣಿ ಚೆನ್ನಮ್ಮ .

ಕಿತ್ತೂರು ಇತಿಹಾಸದ ಮೇಲೆ ಹೊಸ ಬೆಳಕು ಎಂಬ ಶೀರ್ಷಿಕೆಯ ಅಡಿಯಲ್ಲಿ ಕಿತ್ತೂರಿನ ಇತಿಹಾಸದ ಸಮಗ್ರ ಅಧ್ಯಯನವನ್ನು ಮಾಡಿ ಅದನ್ನು ತಮ್ಮ ಬಣಜಿಗ ಬಂಧು ಮಾಸ ಪತ್ರಿಕೆಯಲ್ಲಿ ಧಾರಾವಾಹಿ ರೀತಿಯಲ್ಲಿ ಪ್ರಕಟಿಸಿಕೊಡಲು ಶ್ರೀ ರುದ್ರಣ್ಣ ಹೊಸಕೇರಿ ಕಳೆದ ಒಂದು ವರುಷದಿಂದ ನನ್ನನ್ನು ಒತ್ತಾಯಿಸುತ್ತಿದ್ದರು .

2017 ನವೆಂಬರ್ 9 ವಿಜಯಪುರಕ್ಕೆ ಒಂದು ಕಾರ್ಯ ನಿಮಿತ್ತ ಹೋಗಿದ್ದೆನು . ನನ್ನನ್ನು ಭಾಟಿಯಾಗಿ ತಮ್ಮ ಮನೆಗೆ ಪ್ರೀತಿಯಿಂದ ಬರಮಾಡಿಕೊಳ್ಳಲು ಶ್ರೀ ಗಂಗಾಧರ ಸಾಲಕ್ಕಿ ಅಣ್ಣನವರು ವಿನಂತಿಸಿ ಶ್ರೀ ಶಿವಾನಂದ ಹತ್ತಿಕಾಳ ಅವರ ಜೊತೆಗೆ ಅವರ ಮನೆಗೆ ಬರಲು ತಿಳಿಸಿದರು . ಯುವ ಮಿತ್ರ ಉದ್ಯಮಿ ಶ್ರೀ ಶಿವಾನಂದ ಹತ್ತಿಕಾಳ ಇವರು ನನ್ನನ್ನು ತಮ್ಮ ಕಾರಿನಲ್ಲಿ ಕರೆದುಕೊಂಡು ಶ್ರೀ ಜಿ ಬಿ ಸಾಲಕ್ಕಿ ಅವರ ಮನೆಗೆ ಕರೆದುಕೊಂಡು ಹೋಗುವ ಸಂದರ್ಭದಲ್ಲಿ ,ಬೇರೆ ಬೇರೆ ವಿಷಯಗಳನ್ನು ಚರ್ಚಿಸುತ್ತಾ ಕಿತ್ತೂರಿನ ಇತಿಹಾಸದ ಬಗ್ಗೆ ಕೆಣಕುತ್ತ ಕಿತ್ತೂರಿನ ರಾಜಮನೆತನದವರು ಯಾವ ಮನೆತನದವರು ಎಂದು ಪ್ರಶ್ನಿಸಿದರು ಆಗ ನಾನು ಕಿತ್ತೂರಿನ ಸಂಸ್ಥಾನದವರು ಲಿಂಗಾಯತರೆಂದು ಹೇಳಿದೆ .ಅದಕ್ಕೆ ನಕ್ಕ ಶಿವಾನಂದ ಸರ್ ಲಿಂಗಾಯತರಲ್ಲಿನ ಒಳಪಂಗಡ ಯಾವುದು ಎಂದು ಮರು ಪ್ರಶ್ನಿಸಿದರು .

ಸಮಾಜವಾದಿ ಚಿಂತನೆಯಲ್ಲಿ ಸಾಗಿಬಂದ ನಾನು ಸ್ವಲ್ಪ ಮುಜುಗರಕ್ಕೆ ಒಳಪಟ್ಟರೂ ನಿಧಾನವಾಗಿ ಲಿಂಗಾಯತ ಬಣಜಿಗರು ಎಂದು ಹೇಳಿದೆ. ಶ್ರೀ ಶಿವಾನಂದ ಎಷ್ಟೊಂದು ಪುಳಕಿತರಾಗಿದ್ದರೆಂದರೆ ಸರ್ ಕಿತ್ತೂರಿನ ರಾಣಿ ಚೆನ್ನಮ್ಮಳು ಬಣಜಿಗರು ಎಂದು ಮರು ಪ್ರಶ್ನೆ ಮಾಡಿದರು ಆಗ ನಾನು ಹೌದು ಎಂದೇ .ಇಷ್ಟು ಸಾಕು ನಾನು ಶ್ರೀ ಸಾಲಕ್ಕಿಯವರ ಮನೆಗೆ ಹೋಗುವಷ್ಟರಲ್ಲಿ ಅನೇಕ ಹಿರಿಯ ಲಿಂಗಾಯತ ಸಮಾಜದವರನ್ನು ಅದರಲ್ಲೂ ಬಣಜಿಗ ಸಮಾಜದವರನ್ನು ಅಲ್ಲಿ ಇಬ್ಬರೂ ಸೇರಿಸಿದ್ದರು .

ಸಂಜೆ 7 ಕ್ಕೆ ಸಾಲಕ್ಕಿ ಅವರ ಮನೆಗೆ ಹೋದೆವು ,ರಾತ್ರಿ ಹತ್ತಾದರೂ ಚರ್ಚೆಗಳು ಮುಗಿಯಲಿಲ್ಲ ಅನೇಕ ಪ್ರಾಧ್ಯಾಪಕರು ಸಾಹಿತಿಗಳು ಯುವಕರನ್ನು ಸೇರಿಸಿದ್ದರು . ಅಲ್ಲಿ ನನ್ನ ಪರೀಕ್ಷೆ ಎಲ್ಲರು ಒಂದೊಂದು ಪ್ರಶ್ನೆ ಕೇಳ ಹತ್ತಿದ್ದರು. ಕಿತ್ತೂರಿನ ಸಂಸ್ಥಾನಿಕರು ಬಣಜಿಗರು ಎಂದು ಓದಿದ ಸ್ಪಷ್ಟ ದಾಖಲೆ ಮತ್ತು ಅಭಿಪ್ರಾಯವು ನನ್ನಲ್ಲಿ ಗಟ್ಟಿಯಾಗಿತ್ತು . ಸಂತಸಗೊಂಡ ಶ್ರೀ ಗಂಗಾಧರ ಸಾಲಕ್ಕಿಯವರು ರಾತ್ರಿ ಹತ್ತಾಗಿದ್ದರು ಸಹಿತ ಬಣಜಿಗ ಬಂಧುವಿನ ಸಂಪಾದಕ ಶ್ರೀ ರುದ್ರಣ್ಣ ಹೊಸಕೇರಿ ಅವರಿಗೆ ಫೋನ್ ಮಾಡಿ ಕಿತ್ತೂರಿನ ಅರಸು ಮನೆತನದವರು ಎಂದು ಜಾಹೀರಗೊಳಿಸಿ ಒಂದು ರೀತಿಯಲ್ಲಿ ಅವರು ಖುಷಿ ಪಟ್ಟರು ,ಜೊತೆಗೆ ಅಂದಿನಿಂದ ನನಗೆ ನಿರಂತರವಾಗಿ ಬಣಜಿಗ ಬಂಧುವಿನ ಸಂಪಾದಕ ಶ್ರೀ ರುದ್ರಣ್ಣ ಹೊಸಕೇರಿ ಕಿತ್ತೂರಿನ ಇತಿಹಾಸದ ಸತ್ಯ ಸಂಗತಿಗಳನ್ನು ಬರೆಯಲು ವಿನಂತಿಸುತ್ತಲೇ ಬಂದಿದ್ದರು .

ಮುಂದಿನ ಒಂದು ತಿಂಗಳಿನಲ್ಲಿ ನಾನು “ಕಿತ್ತೂರು ಇತಿಹಾಸ” ಕರ್ನಾಟಕ ವಿಶ್ವ ವಿದ್ಯಾಲಯ ಪ್ರಕಟ ಪಡಿಸಿದ ಕಿರು ಹೊತ್ತಿಗೆ ,ಶ್ರೀ ವಿ ಜಿ ಮಾರಿಹಾಳ ಅವರ ಪುಸ್ತಕದ ಕೆಲ ಆಯ್ದ ಭಾಗಗಳು ,
ಪೇಶ್ವೇ ಅವರ ಕಾಲದ ಕಿತ್ತೂರಿನ ವಂಶಾವಳಿ ( ಮರಾಠಿಯಲ್ಲಿದೆ ). ಡಾ ಸಂತೋಷ ಹಾನಗಲ್,ಪ್ರಿ ಸಿ ವಿ ಮಠದ ,ಡಾ ಚೆನ್ನಕ್ಕ ಪಾವಟೆ ,ಡಾ ರತ್ನಶೀಲಾ ಗುರಡ್ಡಿ ,ಡಾ ಗ ಸ ಹಾಲಪ್ಪ ,ಸದಾಶಿವ ಒಡೆಯರ ,ಪ್ರೊ ಜ್ಯೋತಿ ಹೊಸೂರು ಅವರು ರಾಯಭಾಗ ಸಾಹಿತ್ಯ ಸಮ್ಮೇಳನದಲ್ಲಿ ಬರೆದ ಸಂಗೊಳ್ಳಿ ರಾಯಣ್ಣ ಚರಿತ್ರೆ ಸಂಶೋಧನೆ ,ಮುಂಬೈ ಸರಕಾರಕ್ಕೆ ಸೇರಿದ ಗಜೇಟಿಯರ್ ಡಾ ಸೂರ್ಯ ನಾಥ ಕಾಮತ ಅವರು ಸಂಪಾದಿಸಿದ ಸಂಗೊಳ್ಳಿ ರಾಯಣ್ಣ ಮುಂತಾದವುಗಳನ್ನು ಕಲೆ ಹಾಕುವದರಲಿ ಮುಂದಾದಾದೆನು . ಮಾಹಿತಿ ದಾಖಲೆ ಪುರಾವೆಗಳ ಸಂಗ್ರಹದಲ್ಲಿ ಅಥಣಿಯ
ಡಾ ಮಹಾಂತೇಶ ಉಕ್ಕಲಿ,ಶಿವಾನಂದ ಹತ್ತಿಕಾಳ , ಸ್ವತಃ ರುದ್ರಣ್ಣ ಅವರು ಶ್ರೀ ಶಂಕರ ಕುಂಬಿ ಅವರ ಸಂಪರ್ಕದಲ್ಲಿ ರುದ್ರಮ್ಮನ ಸೊಸೆಯ ತವರು ಮನೆತನದವರು ಧಾರವಾಡದಲ್ಲಿ ಇರುವುದಾಗಿ ಪತ್ತೆ ಹಚ್ಚಿದರು . ಈ ಮಧ್ಯೆ ಕರ್ನಾಟಕ ರಾಜ್ಯದ ಬಣಜಿಗರ ಸಂಘದ ಹಿಂದಿನ ರಾಜ್ಯಾಧ್ಯಕ್ಷರಾದ ಡಾ ಶಿವಬಸಪ್ಪ ಹೆಸರೂರು ಇವರು ಫೋನ್ ಮಾಡಿ ತಮ್ಮಲ್ಲಿ ಕಿತ್ತೂರಿನ ಇತಿಹಾಸದ ಬಗ್ಗೆ ಮಾಹಿತಿ ಸಂಗ್ರಹವಿದೆಯೆಂದು ಕೇಳಿದ್ದೇನೆ ಹಾಗಿದ್ದರೆ ಅವುಗಳನ್ನು ಬಣಜಿಗ ಬಂಧುವಿನಲ್ಲಿ ಬರೆಯಬಹುದಲ್ಲ ಎಂದು ಸಲಹೆ ನೀಡಿದರು .

ಕುತೂಹಲ ದಿನದಿಂದ ದಿನಕ್ಕೆ ಬೆಳೆಯುತ್ತಲೇ ಹೋಯಿತು ,ಯಾವುದಾದರೊಂದು ನೆಪ ಮಾಡಿ ಶ್ರೀ ರುದ್ರಣ್ಣ ಹೊಸಕೇರಿ ಫೋನ್ ಮಾಡಿ ಕಿತ್ತೂರಿನ ಲೇಖನ ಏನಾಯಿತ್ರಿ ಎಂದು ಕೇಳುತ್ತಲೇ ಇದ್ದರು .ಶ್ರೀ ಶಿವಾನಂದ ಹತ್ತಿಕಾಳ ಇವರಿಂದ ವಿಷಯ ತಿಳಿದ ಡಾ ಮುರುಗೇಶ ಪಟ್ಟಣಶೆಟ್ಟಿ ,ಶ್ರೀ ರವೀಂದ್ರ ಪಟ್ಟಣ ಶ್ರೀ ಪ್ರಕಾಶ ಗುಣಾರಿ ಸುರುಪುರದ ಯುವ ಮಿತ್ರ ನಾಗಭೂಷಣ ಯಾಳಗಿ ಕೊಪ್ಪಳದ ಶ್ರೀ ಮಹೇಶ ಮಿಟ್ಟಲಕೋಡ ಬಸವರಾಜ ಬಳ್ಳೊಳ್ಳಿ, ಗವಿಸಿದ್ದಪ್ಪ ಕೊಪ್ಪಳ , ಪುಣೆಯ ಶ್ರೀ ಮಡಿವಾಳಪ್ಪ ಶೆಟ್ಟರ ,ಬಸವರಾಜ ಪಟ್ಟಣಶೆಟ್ಟಿ ಜಮಖಂಡಿಯ ಶ್ರೀ ಝಳಕಿ ಗುರುಗಳು ನನ್ನನ್ನು ಕಿತ್ತೂರಿನ ಇತಿಹಾಸದ ಬಗ್ಗೆ ಲೇಖನಗಳನ್ನು ಬರೆಯಲು ಒತ್ತಾಯಿಸುತ್ತಿದ್ದರು .ಏನಾದರೂ ಒಂದು ಕಾರಣ ಒಡ್ಡಿ ಅದನ್ನು ಮುಂದೆ ಹಾಕುತ್ತಲೇ ಬಂದಿದ್ದೇನು . ಈ ಸಲ ನಾನು ತಪ್ಪಿಸಿಕೊಳ್ಳಲು ಆಗಲಿಲ್ಲ ಕಾರಣ ಬಣಜಿಗ ಬಂಧುವಿನ ಸಂಪಾದಕರಾದ ಶ್ರೀ ರುದ್ರಣ್ಣ ಹೊಸಕೇರಿ ಅವರು ಫೋನ್ ಮಾಡಿ ಡಾ ಶಶಿಕಾಂತ ಪಟ್ಟಣ ಅವರೇ ಈ ಸಲ ನಾನು ಒಂದು ವಿಶೇಷ
ಸೂಚನೆ ಹಾಗೂ ಸಂಪಾದಕೀಯದಲ್ಲಿ ಕಿತ್ತೂರಿನ ಇತಿಹಾಸದ ಬಗ್ಗೆ ಆರು ತಿಂಗಳು ವರೆಗೆ ನಿರಂತರವಾಗಿ ಲೇಖನಗಳು ಮೂಡಿ ಬರಲಿವೆ ಎಂದು ಒಂದು ರೀತಿಯಲ್ಲಿ ಆದೇಶ ನೀಡಿ ಕಿತ್ತೂರಿನ ಇತಿಹಾಸದ ಮೇಲೆ ಹೊಸಬೆಳಕು ಚೆಲ್ಲುವ ಜವಾಬ್ದಾರಿ ನೀಡಿದರು.ಇವರೆಲ್ಲರ ಒತ್ತಾಯಕ್ಕೆ ಮಣಿದು ಮತ್ತು ಕಿತ್ತೂರಿನ ಇತಿಹಾಸದ ಸತ್ಯ ಸಂಗತಿಗಳ ಮೇಲೆ ಪ್ರಾಮಾಣಿಕವಾದ ಮತ್ತು ದಾಖಲೆ ಆಧಾರಿತ ವಿಷಯಗಳನ್ನು ಸಾದರ ಪಡಿಸುವ ಹೊಣೆಗಾರಿಕೆ ನನ್ನ ಮೇಲೆ ಬಂತು ಒಂದೂವರೆ ವರ್ಷದಿಂದ ಮುಂದೆ ಹಾಕುತ್ತ ಬಂದ ನಾನು ಅನಿವಾರ್ಯವಾಗಿ ಇವರ ಪ್ರೀತಿಗೆ ಕಟ್ಟಿ ಬಿದ್ದು ಲೇಖನವನ್ನು ಬರೆಯಲು ಒಪ್ಪಿಕೊಂಡೆನು.

ಹಲವಾರು ಗ್ರಂಥ ಪುಸ್ತಕ ದಾಖಲೆಗಳನ್ನು ಪರಿಶೀಲಿಸಿದಾಗ ಕಿತ್ತೂರು ಅರಸು ಮನೆತನದವರು ಲಿಂಗಾಯತ ಬಣಜಿಗರು ಎಂದು ಸ್ಪಷ್ಟವಾಗಿ ಉಲ್ಲೇಖವಾಗುತ್ತದೆ . ಹಾಗಿದ್ದರೆ ಬಣಜಿಗರು ಯಾರೆಂದು ತಿಳಿದುಕೊಳ್ಳೋಣ . ಬಣಜಿಗ, ವಣಿಕ ,ವಾಣಿಕ ,ವಾಣಿ ,ತೆಲಗು ಲಿಂಗಾಯತ ಬಲಜಿಗ,ಬಳೆಗಾರ ಶೆಟ್ಟರು ,ಪೇಟೆ ಶೆಟ್ಟರು,ಶೀಲವಂತ, ಕುಲವಂತ. ದೀಕ್ಷವಂತ ಹೀಗೆ ವ್ಯವಹಾರ ವ್ಯಾಪಾರ ಮಾಡುವ ವೃತ್ತಿಯವರು. ಬಣಜಿಗರು ಬಸವ ಪೂರ್ವದಲ್ಲಿಯೂ ಇದ್ದರು ಅವರಲ್ಲಿನ ಬಹುತೇಕರು ಜೈನರು ಕಲ್ಯಾಣಕ್ಕೆ ಲಕ್ಷ್ಮೇಶ್ವರ ಮತ್ತು ಜೈನ ಮಹಾರಾಜರ ಆಸ್ಥಾನದಲ್ಲಿ ವ್ಯಾಪಾರ ಮಾಡಿಕೊಂಡಿದ್ದ ಜನರು . ಆದಯ್ಯನು ಲಕ್ಷ್ಮೇಶ್ವರದಲ್ಲಿ ಜೈನ ಕನ್ಯೆ ಪದ್ಮಾವತಿಯನ್ನು ಮದುವೆಯಾಗಿ ಜೈನ ಬಸದಿಯಲ್ಲಿ ಸೌರಾಷ್ಟ್ರ ಸೋಮೇಶ್ವರನನ್ನು ಸ್ಥಾಪಿಸಿ ಜೈನರನ್ನು ಲಿಂಗಾಯತ ಧರ್ಮಕ್ಕೆ ಮತಾಂತರಿಸಿದನು ಎಂದು ಪುರಾಣಗಳು ಇತಿಹಾಸಗಳು ಹೇಳುತ್ತವೆ ಹೀಗಾಗಿ ಇವರನ್ನು ಆದಿ ಬಣಜಿಗರೆಂದು ಹೇಳಲಾಗುತ್ತದೆ .

ಜೈನರಲ್ಲಿ ಈಗಲೂ ಚತುರ್ಥರು ಮತ್ತು ವಾಣಿ ಎಂಬ ಪಂಗಡಗಳು ಇದ್ದಾವೆ . ಇತಿಹಾಸಕಾರನ ಅಭಿಪ್ರಾಯದಂತೆ ಜೈನರ ಅತಿ ಹೆಚ್ಚಿನ ಜನರು ಲಿಂಗಾಯತ ಧರ್ಮಕ್ಕೆ ಸೇರಿದರು . ವರ್ಣ ವ್ಯವಸ್ಥೆಯಲ್ಲಿ ವೈಶ್ಯರೆಂದು ಎಣಿಸಿಕೊಳ್ಳುವವರು ನಗರ್ತಕರು ಸಹಿತ ಲಿಂಗಾಯತರಾದರು. ಬಣಜಿಗರಲ್ಲಿಯೂ ಮತ್ತೆ ಪಂಗಡಗಳಿವೆ ,ಬಣಜಿಗ ,ಆದಿ ಬಣಜಿಗ. ಶೀಲವಂತ ಬಣಜಿಗ ,ಕುಲವಂತ ಬಣಜಿಗ ,ದೀಕ್ಷವಂತ ಬಣಜಿಗ ,ಗುಣವಂತರು, ಪುರ್ರವಂತರು,ಧೂಳ ಪವಾಡ ಬಣಜಿಗರು ಹೀಗೆ ಬೇರೆ ಉಪಪಂಗಡಗಳನ್ನು ಲಿಂಗಾಯತ ಬಣಜಿಗ ಸಮಾಜವು ಹೊಂದಿದೆ .

ವ್ಯಾಪಾರವನ್ನು ಅವಲಂಭಿಸಿರುವ ಬಣಜಿಗರು ಅವರಲ್ಲಿ ಈ ಪ್ರಕಾರದ ವ್ಯಾಪಾರಸ್ಥರನ್ನು ಕಾಣುತ್ತೇವೆ
1 ) ಮಹಾರಾಜ ಪೇಟೆ ಶೆಟ್ಟರು – ರಾಜಮಹಾರಾಜರೊಂದಿಗೆ ಮುತ್ತು ರತ್ನ ವ್ಯಾಪಾರ ಮಾಡುವ ,ರಾಜರಿಗೆ ಹಣ ಸಹಾಯ ಮಾಡುವ ಧನಿಕರು ವ್ಯಾಪಾರಸ್ಥರು

2 ) ಮಹಾಲಿಂಗ ಶೆಟ್ಟರು ಬಂಗಾರ ಶೆಟ್ಟರು, ಯಾಲಕ್ಕಿ ಶೆಟ್ಟರು -ಬಂಗಾರದ ವ್ಯಾಪಾರವನ್ನು ಮಾಡುವವರು ,ಯಾಲಕ್ಕಿ ,ಲವಂಗ ಮೆಣಸಿನ ದೊಡ್ಡ ಮಟ್ಟದ ವ್ಯಾಪಾರ ಮಾಡುವವರು

3 ) ಮಹಾಜನ ಶೆಟ್ಟರು-ಊರಿನೊಳಗೆ ವ್ಯಾಜ್ಯವನ್ನು ಬಗೆ ಹರಿಸುವವರು ದಲಾಲಿ ವ್ಯಾಪಾರ, ಬಡ್ಡಿ ವ್ಯವಹಾರ ಮಾಡುವವರು

4 ) ಪಟ್ಟಣಶೆಟ್ಟರು ,ಪ್ಯಾಟಿ ಶೆಟ್ಟರು – ಮಾರುಕಟ್ಟೆಯಲ್ಲಿ ಕಿರುಕಳ ವ್ಯಾಪಾರ ದಿನಸಿ ಅಂಗಡಿ ನಡೆಸುವವರು.

5 ) ಪಂಚಮ ಶೆಟ್ಟರು – ಕೃಷಿ ತರಕಾರಿ ಬೆಳೆಗಳನ್ನು ವ್ಯಾಪಾರ ಮಾಡುವವರು.ಇವರನ್ನೇ ಮುಂದೆ ಪಂಚಮಸಾಲಿ ಎಂದು ಕರೆದರು ಎಂದು ವಾಡಿಕೆಯಿದೆ

ಇವುಗಳು ಕಾಯಕದ ವಿಂಗಡಣೆ ಹೊರತು ಬಣಜಿಗರ ಶ್ರೇಣೀಕೃತವಾದ ಜಾತಿ ಪದ್ಧತಿಗಳಲ್ಲ ಇವು ಒಟ್ಟಾರೆ ಬಣಜಿಗರ ಸಂಕ್ಷಿಪ್ತ ಪರಿಚಯವಾಗಿದೆ. ಡಾ ಎಸ ಕೆ ಕೊಪ್ಪ ಅವರು ಲಿಂಗಾಯತರ ಉಪಪಂಗಡಗಳ ಬಗ್ಗೆ ಡಾ ಎಂ ಎಂ ಕಲಬುರ್ಗಿ ಅವರ ಮಾರ್ಗದರ್ಶನದಲ್ಲಿ ಹೆಚ್ಚಿನ ಸಂಶೋಧನೆ ವ್ಯಾಸಂಗ ಮಾಡಿದ್ದಾರೆ .

ವರ್ಗಿಕೃತವಾದ ವ್ಯಾಪಾರ ಪದ್ಧತಿಗಳಲ್ಲಿ
ಕಿತ್ತೂರು ಸಂಸ್ಥಾನದ ಮೂಲ ಪುರುಷರು ಮೆಣಸು ಯಾಲಕ್ಕಿ ಲವಂಗ ಮಾರಾಟ ಮಾಡುತ್ತಾ ತಮ್ಮ ಸದೃಢ ಕಾಯದಿಂದ ಊರೂರು ಅಲೆದು ತಮ್ಮ ವ್ಯಾಪಾರದ ಜೊತೆಗೆ ಶೌರ್ಯವನ್ನು ಪ್ರದರ್ಶಿಸುವ ಜಟ್ಟಿಗಳಾಗಿದ್ದರು , ಇವರು ಸಾಗರ ಅಥವಾ ಸಗರ ನಾಡಿನವರೆಂದು ತಿಳಿದು ಬರುತ್ತದೆ . ಶಿವಮೊಗ್ಗ ಜಿಲ್ಲೆಯ ಸಾಗರವೋ ಅಥವಾ ಇಂದಿನ ಕಲ್ಬುರ್ಗಿ ಯಾದಗಿರಿ ಜಿಲ್ಲೆಗೆ ಸೇರಿದ ಸುರಪುರ ,ಜೇವರ್ಗಿ ,ಶಹಾಪುರ ಮತ್ತು ವಿಜಯಪುರ ಜಿಲ್ಲೆಯ ಮುದ್ದೇಬಿಹಾಳದ ಕೆಲ ಹಳ್ಳಿಗಳ ಭೂಪ್ರದೇಶವನ್ನು ಸಗರ ನಾಡೆಂದು ಹೇಳಲಾಗುತ್ತದೆ .
ಮುಂದಿನ ಸಂಚಿಕೆಯಲ್ಲಿ ಕಿತ್ತೂರ ಅರಸರ ಮೂಲ ಸ್ಥಳ ನಿರ್ಧಾರ ಮತ್ತು ಕಿತ್ತೂರು ರಾಜರ ಅರಸುಮನೆತನದ ಲಿಂಗಾಯತ ಬಣಜಿಗ ವಂಶಾವಳಿಯ ಕಾಲ ಅವಧಿ ರಾಜ್ಯಭಾರಗಳ ವಿವರವಾದ ಇತಿಹಾಸವನ್ನು ನೋಡೋಣ

ಡಾ ಶಶಿಕಾಂತ .ಪಟ್ಟಣ ರಾಮದುರ್ಗ -ಪುಣೆ

——-+————————————————————-

ಮಾನ್ಯ ಓದುಗರಲ್ಲಿ ವಿನಂತಿ

ಪುಣೆಯ ಡಾ.ಶಶಿಕಾಂತ ಪಟ್ಟಣ ಅವರು ಕಿತ್ತೂರು ಇತಿಹಾಸದ ಮೇಲೆ ಹೊಸ ಬೆಳಕು ಎಂಬ ಸರಣಿ ಲೇಖನ ಇಂದಿನಿಂದ ಪ್ರಕಟವಾಗಲಿವೆ.

ಓದುಗರು ಪ್ರಾಂಜ್ವಲ ಮನಸ್ಸಿನಿಂದ ಓದಿ. ಈ ಲೇಖನ ಸರಣಿ ಮುಗಿದ ಮೇಲೆ ಓದುಗರಿಗೆ ಸಂಶಯ, ಅನುಮಾನ‌ಮತ್ತು ಹೆಚ್ಚಿನ ಚಿಂತನೆಯ ಚರ್ಚೆಯ ವಿಷಯಗಳಿದ್ದರೆ ಲೇಖಕರೊಂದಿಗೆ ಚರ್ಚಿಸಿ ಪರಿಹರಿಸಿಕೊಳ್ಳಿ.

ಸಂಪಾದಕ

ವಿಶೇಷ ಸೂಚನೆ
copy rights resrved(ಇಲ್ಲಿನ ಎಲ್ಲ ಬರಹಗಳೂ ಕೃತಿಸ್ವಾಮ್ಯಕ್ಕೆ ಒಳಪಟ್ಟಿರುತ್ತವೆ.) ಈಬರಹಗಳ ಎಲ್ಲಾ ಅಭಿಪ್ರಾಯಗಳೂ ಲೇಖಕರ ವೈಯುಕ್ತಿಕ ಅಭಿಪ್ರಾಯಗಳಾಗಿದ್ದು,e-ಸುದ್ದಿ ಬ್ಲಾಗ್ ಅದಕ್ಕೆ ಹೊಣೆಯಾಗಿರುವುದಿಲ್ಲ
-ಸಂಪಾದಕ

 

Don`t copy text!