ನುಡಿ ನಮನ

ನಟರಿಗೆ ಬೆಳಕು ನೀಡಿ,  ತಮ್ಮಲ್ಲಿರುವ ನಟನನ್ನು ಮಸುಕು ಮಾಡಿಕೊಂಡ ನಾಗಪ್ಪ ಬಳೆ

ರಾಯಚೂರು ಸಮುದಾಯದ ಹಿರಿಯ ರಂಗ ತಂತ್ರಜ್ಞ, ಕಲಾವಿದ ನಾಗಪ್ಪ ಬಳೆಯವರ ಅಕಾಲಿಕ ನಿಧನ ರಾಯಚೂರಿನ ಹವ್ಯಾಸಿ ರಂಗಭೂಮಿಗೆ ತುಂಬಲಾರದ ನಷ್ಟ. ಎಂಭತ್ತರ ದಶಕದಲ್ಲಿ ಸಿಜಿಕೆ, ಪ್ರಸನ್ನ, ಸಿ.ಬಸಲಿಂಗಯ್ಯ, ಜನ್ನಿ, ಎಸ್.ಮಾಲತಿ, ಗಂಗಾಧರ ಸ್ವಾಮಿ ಮುಂತಾದ ಹಿರಿಯ ನಿರ್ದೇಶಕರ ಜೊತೆ ಬೆಳಕಿನ ವಿನ್ಯಾಸಕರಾಗಿ, ನಟರಾಗಿ ಕೆಲಸಮಾಡಿದ್ದ ನಾಗಪ್ಪ ಬಳೆ ರಾಯಚೂರು ಹಾಗು ಶಕ್ತಿನಗರದಲ್ಲಿ ರಂಗ ಚಟುವಟಿಕೆಗಳು ಜೀವಂತವಾಗಿರುವಲ್ಲಿ ಅವರ ಶ್ರಮ ದೊಡ್ಡದು.

ಬೆಳಕಿನ ವಿನ್ಯಾಸಕರಾಗಿಯೇ ಹೆಚ್ಚು ಗುರುತಿಸಿಕೊಂಡಿದ್ದ ನಾಗಪ್ಪ ಬಳೆಯವರಲ್ಲಿ ಒಬ್ಬ ಅದ್ಭುತ ನಟನಿದ್ದ. ರಂಗದ ಮೇಲಿನ ನಟರಿಗೆ ಬೆಳಕು ನೀಡಿ ತಮ್ಮಲ್ಲಿರುವ ನಟನನ್ನು ಮಸುಕು ಮಾಡಿದ್ದರು. ಅವರು ಅಭಿನಯಿಸಿದ್ದ ಕತ್ತಲೆ ದಾರಿ ದೂರ ನಾಟಕದ ಪಾತ್ರವನ್ನು ರಾಯಚೂರಿನ ಹಿರಿಯರು ಈಗಲೂ ಮೆಲುಕು ಹಾಕುತ್ತಾರೆ. ಅಮರೇಶ ನುಗಡೋಣಿ ಅವರ ಕತೆಯಾಧಾರಿತ ಮುಳ್ಳಾವಿಗೆ ನಾಟಕದಲ್ಲಿ ಅದ್ಭುತವಾಗಿ ಅಭಿನಯಿಸಿದ್ದರು .

ಇತ್ತೀಚೆಗೆ ನಿವೃತ್ತಿಯ ನಂತರ ರಂಗಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ತುಂಬಾ ಆಸಕ್ತಿ ತೋರಿಸುತ್ತಿದ್ದರು. ‘ಏಯ್ ಪ್ರವೀಣ್, ನಾನೀಗ ರಿಟೈರ್ಡ್ ಆಗಿ ರಾಯಚೂರಿನಲ್ಲಿ ಸೆಟ್ಲ್ ಆಗಿದ್ದೀನಿ. ಏನಾದರೂ ಕೆಲಸ ಇದ್ರೆ ಹೇಳು ಎಲ್ರೂ ಜೊತೆಯಾಗಿ ಮಾಡೋಣ.’ ಅಂತ ಹೇಳಿದ್ದು ಇನ್ನೂ ಕಿವಿಯಲ್ಲಿ ಅನುರಣಿಸುತ್ತಲೇ ಇದೆ. ನಮ್ಮ ನಕ್ಷತ್ರದ ಧೂಳು ನಾಟಕಕ್ಕೆ ಬೆಳಕಿನ ವಿನ್ಯಾಸ ಮಾಡಿ ಇನ್ನೂ ಎರಡು ವರ್ಷ ಆಗಿಲ್ಲ. ಎನ್ಕೆ ಹನುಮಂತಯ್ಯ ಅವರ ಕವಿತೆಗಳನ್ನು ರಂಗಕ್ಕೆ ಅಳವಡಿಸುವ ಪ್ರಯತ್ನದಲ್ಲಿದ್ದಾಗ ಈ ನಾಟಕಕ್ಕೆ ನಾನೇ ಲೈಟಿಂಗ್ ಮಾಡ್ತೇನೆ ಅಂತ ಸ್ಕ್ರಿಪ್ಟ್ ತರಿಸಿಕೊಂಡಿದ್ದರು. ಅಷ್ಟರಲ್ಲೇ ಅವರ ಆರೋಗ್ಯ ಕ್ಷೀಣಿಸುತ್ತಾ ಸಾಗಿತ್ತು.

ನಿಮ್ಮನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇವೆ ನಾಗಪ್ಪ ಬಳೆ ಸರ್., ಹೋಗಿಬನ್ನಿ 🙏🙏🙏

ಪ್ರವೀಣ ಕುಮಾರ, ರಾಯಚೂರು

Don`t copy text!