ಎನ್ನ ನುಡಿ ಕನ್ನಡ ಎನ್ನ ನಡೆ ಕನ್ನಡ ಎನ್ನ ಮನ ಕನ್ನಡ

ಎನ್ನ ನುಡಿ ಕನ್ನಡ ಎನ್ನ ನಡೆ ಕನ್ನಡ ಎನ್ನ ಮನ ಕನ್ನಡ ಪ್ರತಿ ಕನ್ನಡಿಗನ, ಕರುನಾಡಿನ ಹೆಮ್ಮೆ ಯ ದಿನ ಕನ್ನಡ ರಾಜ್ಯೋತ್ಸವ. ಕನ್ನಡದ ಇತಿಹಾಸ, ಮಹತ್ವ, ಹೋರಾಟಗಳ ಬಗ್ಗೆ ಮುಂದಿನ ಪೀಳಿಗೆಗೆ ತಿಳಿಸುವ ಉದ್ದೇಶದಿಂದ ಹಾಗು ಕರ್ನಾಟಕದ ಏಕೀಕರಣಕ್ಕೆ ಹೋರಾಡಿದ ಮಹನೀಯರನ್ನು ಸ್ಮರಿಸುವ ಉದ್ದೇಶದಿಂದ ಕನ್ನಡ ರಾಜ್ಯೋತ್ಸವ ಅತ್ಯಂತ ಮಹತ್ವವನ್ನು ಪಡೆದುಕೊಂಡಿದೆ.

ಕರುನಾಡಿಗಾಗಿ, ಕನ್ನಡಕ್ಕಾಗಿ ದುಡಿದ ಮಹಾತ್ಮರಿಗೆ ಈ ತಿಂಗಳಲ್ಲಿ ರಾಜ್ಯ ಸರ್ಕಾರ ಸೇರಿದಂತೆ ಹಲವು ಕನ್ನಡ ಪರ ಸಂಘಟನೆಗಳು ಗೌರವಿಸುವ ಮೂಲಕ, ನಾಡಿನ ಸೇವೆಯನ್ನು ಇನ್ನಷ್ಟು ಮುಂದುವರೆಸಲು ಪ್ರೇರಣೆ ನೀಡಿದಂತಾಗುತ್ತದೆ. ಕನ್ನಡ ನಾಡಿನ ಮಹತ್ವವನ್ನು ಕನ್ನಡಿಗರು ಅರಿತಾಗ ಮಾತ್ರ ಕನ್ನಡ ರಾಜ್ಯೋತ್ಸವದ ಆಚರಣೆ ಸಾರ್ಥಕವಾಗುತ್ತದೆ. ಕರ್ನಾಟಕದ ಹುಟ್ಟಿಗೆ ಕಾರಣರಾದ ಕನ್ನಡದ ಕುಲಪುರೋಹಿತ ಎಂದೇ ಖ್ಯಾತರಾದ ಆಲೂರು ವೆಂಕಟರಾವ್ ಅವರು ಮೊದಲಿಗೆ ಕರ್ನಾಟಕ ಏಕೀಕರಣ ಚಳುವಳಿ ಸ್ವಾತಂತ್ರ್ಯ ಪೂರ್ವವೇ 1905 ರಲ್ಲಿ ಪ್ರಾರಂಭಿಸಿದರು.

ನಂತರ ಭಾರತಕ್ಕೆ ಸ್ವಾತಂತ್ರ್ಯ ದೊರೆತು ಗಣರಾಜ್ಯವಾದ ನಂತರ ಭಾಷೆಗಳ ಆಧಾರದ ಮೇಲೆ 1956 ನವೆಂಬರ್ 1 ರಂದು ರಾಜ್ಯಗಳನ್ನು ವಿಂಗಡಿಸಿದರು. ಅದರಂತೆ ಮದ್ರಾಸ್, ಮುಂಬೈ, ಮತ್ತು ಹೈದ್ರಾಬಾದ್ ಪ್ರಾಂತ್ಯದ ಕನ್ನಡ ಮಾತನಾಡುವ ಪ್ರದೇಶಗಳೆಲ್ಲವು ವಿಲೀನಗೊಂಡು ಮೈಸೂರು ರಾಜ್ಯ ಉದಯವಾಯಿತು.

ಕರ್ನಾಟಕ ರಾಜ್ಯ ಏಕೀಕರಣವಾಗಲು ನಾಡಿನ ಹಲವು ಕವಿಗಳು, ಸಾಹಿತಿಗಳು, ನಟರು, ವಿಚಾರವಂತರು ಸೇರಿದಂತೆ ಹಲವು ಮಹನೀಯರ ಕೊಡುಗೆ ಅಪಾರವಾಗಿದೆ. ಕನ್ನಡದ ಕುಲಪುರೋಹಿತರಾದ ಆಲೂರು ವೆಂಕಟರಾವ್, ಕೆ. ಶಿವರಾಮ್ ಕಾರಂತ್, ಕುವೆಂಪು, ಮಾಸ್ತಿ ವೆಂಕಟೇಶ್ ಅಯ್ಯಂಗಾರ್, ಬಿ. ಎಂ. ಶ್ರೀಕಂಠಯ್ಯ, ಹುಯಿಲಗೋಳ್ ನಾರಾಯಣರಾವ್, ಕೆಂಗಲ್ ಹನುಮಂತಯ್ಯ, ಪಾಟೀಲ್ ಪುಟ್ಟಪ್ಪ ಸೇರಿದಂತೆ ನೂರಾರು ಮಹನೀಯರು, ಲಕ್ಷಾಂತರ ಪ್ರಜೆಗಳ ಹೋರಾಟದ ಫಲವಾಗಿ ನಾವಿಂದು ಏಕೀಕೃತ ರಾಜ್ಯವನ್ನು ಕಟ್ಟಿಕೊಂಡಿದ್ದೇವೆ. ಭಾಷೆ ಸಂವಾಹನದ ವಾಹಕ. ಅದು ಅಲ್ಲದೇ ಯಾವುದೇ ಒಂದು ಪ್ರಾಣಿ ಸಂವಾಹಿಸಲು ಸಾಧ್ಯವಿಲ್ಲ, ಮಾನವ ಇತರೆ ಪ್ರಾಣಿಗಳಿಗಿಂತ ಭಿನ್ನರೀತಿಯ ಸಂವಾಹನದ ಮೂಲಕ ಮತ್ತೊಬ್ಬ ವ್ಯಕ್ತಿಯೊಡನೆ ಸಂವಾಹಿಸಲು ವಿಶಿಷ್ಟವಾದ ಭಾಷೆಗಳನ್ನು ರೂಪಿಸಿಕೊಂಡಿದ್ದಾನೆ. ಪ್ರಪಂಚದಲ್ಲಿ ಅನೇಕ ಜನರು ನಿರ್ದಿಷ್ಟವಾದ ಪ್ರದೇಶದೊಳಗೆ ಒಂದು ನಿರ್ದಿಷ್ಟವಾದ ಭಾಷೆಯ ಮೂಲಕ ವ್ಯವಹರಿಸುತ್ತಿದ್ದಾರೆ. ಇಂತಹ ಭಾಷೆಗಳಲ್ಲಿ ಕನ್ನಡವೂ ಸಹ ಒಂದಾಗಿದೆ.

ನಮ್ಮ ಮಾತೃ ಭಾಷೆ ಯಾವುದೇ ಇರಲಿ ವಿದ್ಯಾರ್ಥಿಗಳು ಶಾಲೆ, ಕಾಲೇಜು ಆವರಣದಲ್ಲಿ ಪ್ರವೇಶಿಸುತ್ತಿದಂತೆ ಕನ್ನಡ ಭಾಷೆ ಬಳಸುವ ಮೂಲಕ ಭಾಷೆಯ ಉಳಿವಿಗಾಗಿ ಪ್ರೌಢಮಟ್ಟದಲ್ಲಿಯೇ ಪಣತೊಡಬೇಕು. ಸಾಹಿತಿಗಳು ನೀಡಿದ ಸಾಹಿತ್ಯ ಕೊಡುಗೆಗಳು ಭಾಷೆಯನ್ನು ಮತ್ತಷ್ಟು ಭದ್ರಗೊಳಿಸಿಸಿದೆ. ಅಲ್ಲದೆ ಎರಡು ಸಾವಿರ ವರ್ಷಕ್ಕಿಂತಲು ಹೆಚ್ಚು ಇತಿಹಾಸ ಹೊಂದಿರುವ ಕನ್ನಡದ ಹಿರಿಮೆಯನ್ನು ಇಂದಿಗೂ ಕಾಪಾಡಿಕೊಂಡು ಬಂದಿದೆ.

ಇಂದಿಗೂ ಗ್ರಾಮೀಣ ಪ್ರದೇಶಗಳಲ್ಲಿ ಆಚಾರ, ವಿಚಾರ, ಕನ್ನಡದ ಉಚ್ಚಾ ರಣೆ, ಉಡುಗೆ, ತೊಡುಗೆ, ಸಂಸ್ಕೃತಿ ಕರ್ನಾಟಕದಲ್ಲಿ ಇಂದಿಗೂ ಜೀವಂತವಾಗಿ ಕಾಣಬಹುದಾಗಿದೆ. ಸರಿ ಸುಮಾರು ಎರಡು ಸಾವಿರ ವರ್ಷಗಳ ಸಾಂಸ್ಕೃತಿಕ ಇತಿಹಾಸವನ್ನು ಹೊಂದಿದ ಈ ಕನ್ನಡ ನಾಡನ್ನು ಶಾತವಾಹನರು, ಗಂಗರು,ಕದಂಬರು, ಚಾಲುಕ್ಯರು, ರಾಷ್ಟ್ರಕೂಟರು, ಹೊಯ್ಸಳರು, ಮುಂತಾದ ರಾಜವಂಶದವರು ಆಳುವುದಲ್ಲದೆ ರಾಷ್ಟದ ಇತಿಹಾಸದಲ್ಲಿ ತಮ್ಮ ಕೀರ್ತಿಗಾಥೆ ಯನ್ನು ಸುವರ್ಣಾಕ್ಷರಗಳಿಂದ ದಾಖಲಿಸಿದ್ದಾರೆ.

ಬೇಲೂರು, ಹಳೇಬೀಡು, ಬಾದಾಮಿ, ಹೈಹೊಳೆ, ಪಟ್ಟದಕಲ್ಲು, ಹಂಪಿ ಮುಂತಾದ ಸ್ಥಳಗಳು ನಮ್ಮ ಕರುನಾಡ ಭವ್ಯ ಇತಿಹಾಸ ಮತ್ತು ಪರಂಪರೆಗೆ ಸಾಕ್ಷಿಯಾಗಿವೆ. ಪ್ರಾಚೀನ ಕಾಲದಿಂದಲೂ ನಮ್ಮ ನಾಡು ಧರ್ಮ, ಸಾಹಿತ್ಯ, ಸಂಗೀತ, ನೃತ್ಯ, ಕಲೆ, ಕ್ರೀಡೆ, ಶಿಲ್ಪಕಲೆ ಮತ್ತು ವಾಸ್ತು ಶಿಲ್ಪಗಳಿಗೆ ಹೆಸರಾಗಿದೆ.

ಶೈವ, ವೈಷ್ಣವ, ಜೈನ, ಬೌದ್ಧ, ಲಿಂಗಾ ಯತ, ಇಸ್ಲಾಂ, ಕ್ರೈಸ್ತ ಮುಂತಾದ ಧರ್ಮಗಳಿಗೆ ಆಶ್ರಯ ನೀಡಿರುವುದಲ್ಲದೆ, ‘ಸರ್ವಧರ್ಮಧೇನು ನಿವಹಕ್ಕಾಡುಂಬೊಲಂ’ ಎಂಬ ಕವಿ ವಾಣಿಗೆ ಅನ್ವರ್ಥಕವಾದುದು ಈ ನಮ್ಮ ಕನ್ನಡ ನಾಡು. ‘ಎನಿತು ಇನಿದು ಈ ಕನ್ನಡ ನುಡಿಯು, ಮನವನು ತಣಿಸುವ ಮೋಹನ ಸುಧೆಯು’ ಎಂದು ಕವಿ ಬೆಟಗೇರಿ ಕೃಷ್ಣಶರ್ಮರು ಮನತುಂಬಿ ಹಾಡಿದ್ದಾರೆ. ಪಂಪ-ರನ್ನರು, ಬಸವಾದಿ ಶರಣರು, ದಾಸ ಶ್ರೇಷ್ಠರು, ಹರಿಹರ, ರಾಘವಾಂಕ, ಕುಮಾರವ್ಯಾಸ, ಇನ್ನು ಅನೇಕ ಪ್ರಾಚೀನ ಕವಿಗಳು, ಹಾಗು ಕುವೆಂಪು, ಬೇಂದ್ರೆ, ಚೆನ್ನವೀರ ಕಣವಿ, ಶಿವರುದ್ರಪ್ಪರಂತಹ ಆಧುನಿಕ ಕವಿ ಸಾಹಿತಿಗಳು ಕನ್ನಡವನ್ನು ಮತ್ತಷ್ಟು ಸಮೃದ್ಧ ಗೊಳಿಸಿದ್ದಾರೆ. ನೃಪತುಂಗನೆ ಚಕ್ರವರ್ತಿ, ಪಂಪನಿಲ್ಲಿ ಮುಖ್ಯ ಮಂತ್ರಿ, ರನ್ನ- ಜನ್ನ, ನಾಗವರ್ಮ, ರಾಘವಾಂಕ, ಹರಿಹರ, ಬಸವೇಶ್ವರ ನಾರಣಪ್ಪ, ಸರ್ವಜ್ಞ ಷಡಕ್ಷರ, ಸರಸ್ವತಿಯೆ ರಚಿಸಿದೊಂದು, ನಿತ್ಯ ಸಚಿವ ಮಂಡಲ, ತನಗೆ ರುಚಿರ ಕುಂಡಲ, ಎಂದು ಕುವೆಂಪು ಬಣ್ಣಿಸಿದ್ದಾರೆ, ಆದರೆ ಅದೇ ಕವಿಗಳು ಕನ್ನಡಕೆ ಹೋರಾಡು ಕನ್ನಡ ಕಂದ ಎಂದು ಕರೆ ಕೊಟ್ಟಿದ್ದರೂ ಇಂದು ‘ ಕನ್ನಡವ ಕಾಪಾಡು ಕನ್ನಡಿಗರಿಂದ ‘ ಎಂದು ಹೇಳುವಂತಹ ಸಂದರ್ಭ ಒದಗಿರುವುದು ವಿಪರ್ಯಾಸವಾಗಿರುತ್ತದೆ.

ಕವಿ ಕುವೆಂಪು ಅವರ ಬದುಕಿನಾ ದ್ಯಂತ ಕಾಡಿದ ಬಹುಮುಖ್ಯ ಭಾಗವೆಂದರೆ ಅದುವೆ ಕನ್ನಡ ಭಾಷೆ, ಅವರು ರಚಿಸಿದ ‘ನೇಗಿಲಾಯೋಗಿ’ ಕವಿತೆ ನಮ್ಮ ನಾಡು-ನುಡಿಯ, ನೆಲದ -ಜಲದ, ಜನ -ಸಮುದಾಯದ ವೈವಿಧ್ಯತೆಗಳನ್ನು ಆದರ್ಶದ ಬದಿಕಿನೆಡೆಗೆ ಕೊಂಡೋಯ್ಯುತ್ತದೆ.

ಕನ್ನಡಕ್ಕೆ ಪ್ರಪಂಚದಲ್ಲಿ ಎಲ್ಲಿಯಾದರು ಸ್ಥಾನ ದೊರೆಯಬೇಕಾದರೆ ಅದು ಇಲ್ಲೇ, ಕರ್ನಾಟಕದಲ್ಲೇ, ಇನ್ನೆಲ್ಲಿಯೂ ಇಲ್ಲ ಎಂಬ ಉದಾತ್ತ ನಿಲುವನ್ನು ಹೊಂದಿದ್ದರು. ಕನ್ನಡಕ್ಕಾಗಿ ಕೈಯೆತ್ತು, ನಿನ್ನ ಕೈ ಕಲ್ಪವೃಕ್ಷವಾಗುತ್ತದೆ, ಕನ್ನಡಕ್ಕಾಗಿ ಕೊರಳೆತ್ತು, ಅಲ್ಲಿ ಪಾಂಚಜನ್ಯ ಮೂಡುತ್ತದೆ, ಕನ್ನಡಕ್ಕಾಗಿ ಕಿರು ಬೆರಳೆತ್ತಿದರೂ ಸಾಕು, ಇಂದು ಅದೆ ಗೋವಾರ್ಧನ ಗಿರಿಯಾಗುತ್ತದೆ,ಎಂದಿದ್ದಾರೆ ನಮ್ಮ ರಾಷ್ಟ್ರಕವಿ ಕುವೆಂಪುರವರು ತಮ್ಮ ಕನ್ನಡದ ಬಗ್ಗೆ ಇರುವ ಅಭಿಮಾನವನ್ನು ಅಭಿವ್ಯಕ್ತಪಡಿಸಿರುತ್ತಾರೆ.

ಅದಕ್ಕಾಗಿ ನಾವೆಲ್ಲರು ಪ್ರತಿ ವರ್ಷ ನವೆಂಬರ್ 1 ರಂದು ಕರ್ನಾಟಕ ರಾಜ್ಯೋತ್ಸವ ಆಚರಣೆಯನ್ನು ಮಾತ್ರ ಮಾಡದೆ ಅದರ ಜೊತೆಗೆ ನಾವೆಲ್ಲರೂ ಕನ್ನಡ ಭಾಷೆಗೆ ಹೆಚ್ಚು ಪ್ರಾಧ್ಯನತೆಯನ್ನು ಕೊಟ್ಟು, ಅಲ್ಲದೆ ನಮ್ಮ ರಾಜ್ಯಭಿಮಾನವನ್ನು ಹೆಚ್ಚಿಸುವುದಕ್ಕೆ ಪ್ರತಿಯೊಬ್ಬರು ಶ್ರಮಿಸಿದಾಗ ಮಾತ್ರ ನಮ್ಮ ಕರುನಾಡ ಭಾವುಟ ಎಲ್ಲೆಡೆ ಕಾಣಲು ಸಾಧ್ಯವಾಗುತ್ತದೆ, ಆಗ ಮಾತ್ರ ನಮ್ಮ ನಡೆ ಕನ್ನಡ ಎನ್ನ ನುಡಿ ಕನ್ನಡ, ಎನ್ನ ಮನ ಕನ್ನಡ ವಾಗುತ್ತದೆ, ಅಂದಾಗ ನಮ್ಮೆಲ್ಲ ಕನ್ನಡಿಗರ ಮನಸ್ಸು ನಿರ್ಮಲ ಗೊಳ್ಳಲು ಸಾಧ್ಯವಾಗುವುದು, ಕರುನಾಡ ಪ್ರತಿಯೊಬ್ಬ ಪ್ರಜೆಯು ತಾಯಿ ಭುವನೇಶ್ವರಿಗೆ ಗೌರವ ಸಮರ್ಪಣೆಮಾಡಿದಂತಾಗುತ್ತದೆ. ನನ್ನ ಎಲ್ಲಾ ಕರುನಾಡ ಕನ್ನಡ ಮನಸ್ಸುಗಳಿಗೆ ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು ತಿಳಿಸುತ್ತೇನೆ.

ಶ್ರೀಮತಿ ರೇಖಾ ಶಿವಯೋಗಿ ವಡಕಣ್ಣವರ್, ಲಕ್ಷ್ಮೇಶ್ವರ

Don`t copy text!