ಶಾಲೆಗಳಲ್ಲಿ ಯೊಗ-ಧ್ಯಾನ ಮಾಡಿಸುವುದು ಸರಿಯಾದ ಕ್ರಮ
ಪ್ರತಿಯೊಂದನ್ನು ಸಂದೇಹದ ತಕ್ಕಡಿಯಲ್ಲೇ ಇಟ್ಟು ತೂಗುವುದು, ಮತ-ಧರ್ಮಗಳ ಕನ್ನಡಕ ಹಾಕಿಕೊಂಡು ನೋಡುವುದು, ವಿರೋಧಕ್ಕಾಗಿಯೇ ವಿರೋಧಿಸುವುದು ಕಡಿಮೆಯಾಗಬೇಕು. ಶಿಕ್ಷಕರು ಶಿಕ್ಷಕರ ಸಂಘಗಳಿಗೆ ಶೈಕ್ಷಣಿಕ ವಿಚಾರಗಳ ಬಗ್ಗೆ ಶೈಕ್ಷಣಿಕ ಆಗು ಹೋಗುಗಳ ಬಗ್ಗೆ ಮಾತನಾಡುವ ಹಕ್ಕಿಲ್ಲ ಎಂದು ಹೇಳುವುದು ಬಾಲಿಶತನ.
ನಿರಂತರ ಮಕ್ಕಳೊಡನಾಟದಲ್ಲಿ ಪ್ರಯೋಗಶೀಲರಾಗಿ ಕಾರ್ಯ ಮಾಡುತ್ತಿರುವ ಶಿಕ್ಷಕರು ಮಾತನಾಡದೇ ಇನ್ನಾರು ಮಾತನಾಡಬೇಕು. ನಿಮಗೇ ಎಲ್ಲವೂ ಗೊತ್ತಾ?
ಶಿಕ್ಷಕರ ಸಂಘಗಳೆಂದರೆ ಕೇವಲ ತಮ್ಮ ಬೇಡಿಕೆಗಳ ಬಗ್ಗೆ ಯೋಚಿಸದೇ ಮಕ್ಕಳ ಶೈಕ್ಷಣಿಕ ವಿಚಾರವಾಗಿ ವರ್ತನೆಗಳ ವಿಚಾರವಾಗಿ ಅಕಾಡೆಮಿಕ್ ಆಗಿ ಚಿಂತಿಸುವುದು, ಇಲಾಖೆಗೆ ಸಲಹೆ, ಮಾರ್ಗದರ್ಶನ, ಬೇಡಿಕೆ ಇಡುವುದು ತಪ್ಪೆ. ಶಾಲಾ ಶಿಕ್ಷಣದಲ್ಲಿ ಶಿಕ್ಷಕರಾಗಿ ಮೂವತ್ತು ನಲವತ್ತು ವರ್ಷದಿಂದ ಕೆಲಸ ಮಾಡುತ್ತಿರುವ ನಮಗಿಂತ ಹೊರಗಿನವರ ಮಾತಿಗೆಂತ ಮಾನ್ಯತೆ ಸ್ವಾಮಿ.
ಮಕ್ಕಳ ಬದಲಾದ ವರ್ತನೆಗಳ ಬಗ್ಗೆ ದುರಭ್ಯಾಸಗಳಿಗೆ ದಾಸರಾಗುತ್ತಿರುವ ಬಗ್ಗೆ, ಕಿರಿವಯದಲ್ಲೇ ಹರಯದ ಭಾವ ತಾಳುತ್ತಿರುವ ಬಗ್ಗೆ, ಮೊಬೈಲ್ ಅಡಿಕ್ಸನ್ ಗೆ ಒಳಗಾಗುತ್ತಿರುವ ಬಗ್ಗೆ, ಖಿನ್ನತೆಗೆ ಒಳಗಾಗುತ್ತಿರುವ ಬಗ್ಗೆ, ವಿಶೇಷವಾಗಿ ಬಾಲಕರು ಕಲಿಕೆಯಲ್ಲಿ ತೊಡಗಿಸಿಕೊಳ್ಳದಿರುವುದರ ಬಗ್ಗೆ ಯೋಚಿಸಿದ್ದೀರಾ?
ಇನ್ನೊಂದು ವಿಷಯವೆಂದರೆ ಶಿಕ್ಷಕರ ಸಂಘಕ್ಕೇನು ಅಧಿಕಾರ, ಕಾನೂನು ‘ಯಾವುದೇ ಕಲಿಕೆ ಅಥವಾ ಕಲಿಕೇತರ ಚಟುವಟಿಕೆ ಗೊತ್ತುಪಡಿಸುವ ಪರಮಾಧಿಕಾರವನ್ನು ರಾಜ್ಯ ಶಿಕ್ಷಣ, ಸಂಶೋಧನೆ ಮತ್ತು ತರಬೇತಿ ಇಲಾಖೆಗೆ ವಹಿಸಿದೆ’ ಎಂದಿದ್ದಾರೆ. ಹೌದು ಬಂಧುಗಳೇ ಆದರೆ ಈ ಇಲಾಖೆ ಸಿದ್ಧಪಡಿಸಿದ ದೈಹಿಕ ಶಿಕ್ಷಣ ಪಠ್ಯಪುಸ್ತಕಗಳನ್ನು ತಾವು ಓದಿದ್ದೀರಾ.
ಬರಗೂರು ರಾಮಚಂದ್ರಪ್ಪನವರು ಅಧ್ಯಕ್ಷರಾಗಿದ್ದಾಗಿನ ಪರಿಷ್ಕೃತ ದೈಹಿಕ ಶಿಕ್ಷಣ ಪಠ್ಯಪುಸ್ತಕಗಳಲ್ಲಿ ಯೋಗ ಪ್ರಾಣಾಯಾಮ, ಮುದ್ರೆಗಳು, ಸೂರ್ಯ ನಮಸ್ಕಾರ, ಧ್ಯಾನ ಮುಂತಾದವುಗಳಿವೆ ಎಂಬುದನ್ನು ಗಮನಿಸಿದಂತಿಲ್ಲ. ಯೋಗಾಸನ ಮಾಡುವುದುದೆಂದರೆ ಕೇವಲ ದೈಹಿಕ ಕಸರತ್ತಲ್ಲ. ದೇಹ, ಮನಸ್ಸು, ಉಸಿರಾಟ ಮೂರನ್ನೂ ಒಂದಾಗಿಸಿ ಮಾಡುವ ಕ್ರಿಯೆ. 6ನೇ ತರಗತಿ ದೈಹಿಕ ಶಿಕ್ಷಣ ಪಠ್ಯ ಪುಸ್ತಕದ 115ನೇ ಪುಟದಲ್ಲಿ “ಯೋಗಃ ಚಿತ್ತ ವೃತ್ತಿ ನಿರೋಧಃ” ಅಂದರೆ “ಮನಸ್ಸಿನ ಚಂಚಲತೆಯನ್ನು ನಿಯಂತ್ರಿಸುವುದೇ ಯೋಗ” ಎಂದು ವಿಶ್ಲೇಷಿಸಲಾಗಿದೆ. ಯೋಗ ಮಾಡಿ ರೋಗದಿಂದ ದೂರವಿರಿ ಎಂದೂ ಘೋಷಣೆ ಇದೆ. ಇದನ್ನೆಲ್ಲ ಗಮನಿಸಿರುವಿರಾ?
ಇನ್ನು ಎಂಟನೇ ತರಗತಿ ದೈಹಿಕ ಶಿಕ್ಷಣ ಪಠ್ಯ ಪುಸ್ತಕದ ಪುಟ ಸಂಖ್ಯೆ 60ರಲ್ಲಿ ಧ್ಯಾನದ ಬಗ್ಗೆ ವಿರಣೆಯಿದೆ. ಓದಿಕೊಳ್ಳಿ. “ ಧ್ಯಾನ ಒಂದು ಆದ್ಯಾತ್ಮದ ಆಯಾಮ. ಮನಸ್ಸನ್ನು ನಿಯಂತ್ರಣಗೊಳಿಸುವ ಪ್ರಕ್ರಿಯೆ.ದೌರ್ಬಲ್ಯಗಳನ್ನು ಕಿತ್ತೊಗೆದು, ಸಬಲತೆಯನ್ನು ಪೋಷಿಸಿ ಆತ್ಮಶ್ರದ್ಧೆ ಮತ್ತು ಭರವಸೆಗಳ ಪೋಷಕ ಶಕ್ತಿ ನೀಡುವ ಪ್ರಕ್ರಿಯೆಯಾಗಿದೆ. ಪರರನ್ನು ದೂಷಿಸದೇ ಪ್ರೀತಿಯಿಂದ ಸಾಗುವ ನಕಾರಾತ್ಮಕ ಭಾವನೆ ಹಾಗೂ ಹೊರಗಿನ ಪ್ರಭಾವಗಳಿಂದ ಮನಸ್ಸನ್ನು ಮುಕ್ತಗೊಳಿಸಿ ಆಂತರಿಕ ಸತ್ಯವನ್ನು ಬೆಳೆಸಲು ನಿರತರಾಗಲು ಧ್ಯಾನ ಅತಿ ಮುಖ್ಯ” ಎಂದು ವಿಶ್ಲೇಷಿಸಲಾಗಿದೆ.
ಅಷ್ಟಾಗಿಯೂ ಧ್ಯಾನದಲ್ಲಿ ಯಾವ ಮಂತ್ರ ತಂತ್ರಗಳಿಲ್ಲ. ಏನನ್ನೂ ಯೋಚಿಸದೇ ದೇಹ ಮನಸ್ಸು ಉಸಿರನ್ನು ಗಮನಿಸುತ್ತ ನಿರಾಯಾಸವಾಗಿ ಕೂಡುವುದು ಅಷ್ಟೇ. ಯಾಕೆ ವಿರೋಧಿಸುತ್ತಿರುವುದು. ಅರಿಯದೇ ಮಾತನಾಡುವುದು ಸರಿಯಲ್ಲ.
ಧ್ಯಾನದ ಅಭ್ಯಾಸದಿಂದ ವಿದ್ಯಾರ್ಥಿಗಳ ಏಕಾಗ್ರತೆ ಉತ್ತಮಗೊಂಡು; ಹೆಚ್ಚು ಜಾಗರೂಕತೆ ಮತ್ತು ಉನ್ನತಿಯನ್ನು, ಸುಧಾರಿತ ಶೈಕ್ಷಣಿಕ ಕಾರ್ಯಕ್ಷಮತೆಯನ್ನು ತೋರಿಸುತ್ತಾರೆ. ಧ್ಯಾನಿಕ ಶಿಸ್ತು ಮೆದುಳಿನ ಕಾರ್ಯವನ್ನು ಸುಧಾರಿಸುತ್ತದೆ. ಆಶಾವಾದವನ್ನು ಹೆಚ್ಚಿಸುತ್ತದೆ ಮತ್ತು ಜಾಗರೂಕತೆಯನ್ನು ಹೆಚ್ಚಿಸುತ್ತದೆ. ಪ್ರತಿದಿನ ಧ್ಯಾನ ಮಾಡಿದ ನಂತರ ವಿದ್ಯಾರ್ಥಿಗಳ ಸೃಜನಶೀಲತೆ ಮತ್ತು ಬುದ್ಧಿವಂತಿಕೆ ಸುಧಾರಿಸುತ್ತದೆ. ಎಂಬುದು ಯೋಗತಜ್ಞರ ಅಭಿಪ್ರಾಯವಾಗಿದೆ.
ಇದು ಸ್ವಯಂ ಮೌಲ್ಯದ ಪ್ರಜ್ಞೆಯನ್ನು ಸುಧಾರಿಸುತ್ತದೆ ಮತ್ತು ಹೆಚ್ಚು ಸಕಾರಾತ್ಮಕ ಸ್ಪಂದನೆಗೆ ಕಾರಣವಾಗುತ್ತದೆ. ಧ್ಯಾನದಿಂದ ವಿದ್ಯಾರ್ಥಿಗಳು ಆತಂಕ, ಒತ್ತಡ, ದುಗುಡಗಳನ್ನು ನಿರಾಳವಾಗಿ ನಿಭಾಯಿಸುವ ಶಕ್ತಿ ಪಡೆಯುತ್ತಾರೆ ಮತ್ತು ಹೆಚ್ಚು ಸಕಾರಾತ್ಮಕ ಭಾವನೆಗಳನ್ನು ಅನುಭವಿಸುತ್ತಾರೆ. ಮಕ್ಕಳು ಮಾನಸಿಕವಾಗಿ ಸದೃಢರಾಗುತ್ತಾರೆ. ಆರೋಗ್ಯಕರ ನಡೆವಳಿಕೆಯನ್ನು ಉತ್ತೇಜಿಸುತ್ತದೆ. ನಿದ್ರಾ ಸಮಸ್ಯೆ ತಿನ್ನುವ ಅಸ್ವಸ್ಥತೆಗಳಿಗೆ ಸರಿದಾರಿ ತೋರುತ್ತವೆ.
ಈ ಎಲ್ಲ ಕಾರಣಗಳಿಂದ ಶಿಕ್ಷಣ ತಜ್ಞರೆನಿಸಿಕೊಂಡ ಪ್ರೊ.ವ್ಹಿ.ಪಿ. ನಿರಂಜನಾರಾಧ್ಯ, ಸಾಹಿತಿಗಳಾದ ಎಸ್.ಜಿ. ಸಿದ್ಧರಾಮಯ್ಯ, ಕಾಲೇಗೌಡ ನಾಗವಾರ, ಹಿ.ಸಿ. ರಾಮಚಂದ್ರೇಗೌಡ ಮೊದಲಾದ ಸಾಹಿತಿಗಳು ಈ ಬಗ್ಗೆ ಯೋಚಿಸಬೇಕು. ಶಾಲೆಯಲ್ಲಿ ಯೋಗ, ಧ್ಯಾನ, ಪ್ರಾಣಾಯಾಮಗಳು ನಿತ್ಯ ಕಲಿಕಾ ಚಟುವಟಿಕೆಯ ಭಾಗವಾಗಬೇಕು.
-ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ-ಸಾಹಿತಿ ಡಾ. ನಿಂಗು ಸೊಲಗಿ