ಆತ್ಮೀಯ ಓದುಗರಲ್ಲಿ ಶರಣು ಶರಣಾರ್ಥಿ ಗಳು 🙏
ಇನ್ನೂ ಮುಂದೆ ಪ್ರತಿ ಸೋಮವಾರ ಕನ್ನಡ ನಾಡಿಗೆ, ನಾಗರಿಕ ಸಮಾಜಕ್ಕಾಗಿ ಶಿಕ್ಷಣಕ್ಕಾಗಿ ದುಡಿದು ತಮ್ಮ ಜೀವನವನ್ನೇ ಮುಡುಪಾಗಿಟ್ಟ ಲಿಂಗಾಯತ ಮಹನೀಯರ ಕುರಿತು ಲಿಂಗಾಯತ ಪುಣ್ಯ ಪುರುಷರು ಮಾಲಿಕೆ ಪ್ರಕಟವಾಗಲಿದೆ. ನಮ್ಮ ಹಿರಿಯರ ತ್ಯಾಗ, ಸಮಾಜ ಸೇವೆ ಯುವಕರಿಗೆ ಮಾದರಿಯಾಗಲಿ. ಪ್ರೇರಣೆ ಆಗಲಿ ಎಂಬ ಸದುದ್ದೇಶದಿಂದ ಈ ಲೇಖನ ಸರಣಿ ಪ್ರಕಟವಾಗಲಿದೆ. ಓದುಗರ ಅಭಿಪ್ರಾಯ ಸಲಹೆ ಸೂಚನೆಗಳಿಗೆ ಸ್ವಾಗತ
-ಸಂಪಾದಕ
ಲಿಂಗಾಯತ ಪುಣ್ಯಪುರುಷರ ಮಾಲೆ-೧
ಅಪ್ರತಿಮ ಸ್ವಾತಂತ್ರ ಹೋರಾಟಗಾರ ವಾಲಿ ಚೆನ್ನಪ್ಪ
ದೇಶ ಕಂಡ ಅಪ್ರತಿಮ ಸ್ವಾತಂತ್ರ ಹೋರಾಟಗಾರ ವಾಲಿ ಚನ್ನಪ್ಪ ಉತ್ತರ ಕರ್ನಾಟಕದ ಲಿಂಗಾಯತ ಸಮಾಜಕ್ಕೆ ಸೇರಿದ ಧೀಮಂತ ವ್ಯಕ್ತಿ ಅವರ ಬದುಕು ಬವಣೆ ಸಂಘರ್ಷ ಚಿಂತನೆ ಪ್ರಾಮಾಣಿಕತೆ ರಾಷ್ಟ್ರ ಭಕ್ತಿ ನಮ್ಮ ಇಂದಿನ ಲೇಖನದ ಮುಖ್ಯ ಗುರಿ .
1942 ರಲ್ಲಿ ಭಾರತ ಬಿಟ್ಟು ತೊಲಗಿ ಚಳುವಳಿಯಲ್ಲಿ ರಾಷ್ಟ್ರಮಟ್ಟದಲ್ಲಿ ಜಯಪ್ರಕಾಶ್ ನಾರಾಯಣ್ ,ಅರುಣಾ ಅಸಫ್ ಅಲಿ ,ರಾಮ ಮನೋಹರ ಲೋಹಿಯಾ ಅವರ ಜೊತೆಗೆ ನಮ್ಮ ಕಿತ್ತೂರು ನಾಡಿನ ಚೆನ್ನಪ್ಪವಾಲಿಯವರು ಕೆಲಸ ಮಾಡಿದ್ದು ಕನ್ನಡಿಗರು ತಿಳಿಯದೇ ಇರುವುದು ದುರಂತದ ಸಂಗತಿ .
ಬ್ರಿಟಿಷರ ವಿರುದ್ಧ ಕ್ರಾಂತಿಯನ್ನು ಎಬ್ಬಿಸಿ ಇಟಗಿಯ ಬಿ ಏನ್ ಸಾಣಿಕೊಪ್ಪ, ರಾಮದುರ್ಗದ ಮಹದೇವಪ್ಪ ಪಟ್ಟಣ, ಮುಗುಟಖಾನ್ ಹುಬ್ಬಳ್ಳಿಯ ಬೆಂಕಿ ಸ್ವಾಮಿ ಚಿನ್ಮಯಿ ಸ್ವಾಮಿ ,ಶಾಂತಿನಾಥ ಇಂಗಳೆ ಮುಂತಾದ ಯುವ ಮಿತ್ರರು ತೀವ್ರಗತಿಯಾದ ಉಗ್ರ ಹೋರಾಟವನ್ನು ಹುಟ್ಟುಹಾಕಿದರು .
ಇಂತಹ ಕಾಲಘಟ್ಟದಲ್ಲಿ ಗೆರಿಲ್ಲಾ ಹೋರಾಟದ ಮೂಲಕ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡ ಅಪರೂಪದ ನಾಯಕ ವಾಲಿ ಚನ್ನಪ್ಪ
ಅಗಸ್ಟ್_ಕ್ರಾಂತಿ ನಾಯಕ
ರಾಜ್ಯದ ಯಾವ ಹೋರಾಟಗಾರನಿಗೆ ಸಿಗದ ಜನಪ್ರೀಯತೆ ಅವರಿಗೆ ಸಿಕ್ಕಿತು. ಅಗಸ್ಟ್ ಚಳುವಳಿ. ಕರ್ನಾಟಕದಲ್ಲಿ ಸುಸಂಘಟಿತ ರೀತಿ ಯಲ್ಲಿ ನಡೆದುದು ಅಂದರೆ ಬೆಳಗಾವಿಯಲ್ಲಿ.. ಅದು ವಾಲಿ ಚೆನ್ನಪ್ಪನವರ ತಂಡದಿಂದ.
ಆಗಸ್ಟ್_ಕ್ರಾಂತಿಯ ಸಂದರ್ಭದಲ್ಲಿ ಚೆನ್ನಪ್ಪ ವಾಲಿಯವರ ವಯಸ್ಸು 35ರ ಆಸು ಪಾಸು. ತೇಳುವಾದ ಆಕೃತಿ.. ಸಂಪಗಾವಿ ಜನ್ಮಭೂಮಿ.. ಕನ್ನಡ ಮುಲ್ಕಿ ಪರೀಕ್ಷೆಯಲ್ಲಿ ತೇರ್ಗಡೆ.ವ್ಯಾಪರ ಮತ್ತು ಕೃಷಿ ಅವರ ಮನೆತನದ ಸಂಪ್ರದಾಯಗಳಾದರೂ ಅವು ಅವರಿಗೆ ಕೈಹಿಡಿಯಲಿಲ್ಲ..ಕೊನೆಗೆ ಚಳುವಳಿ (ಸ್ವಾತಂತ್ರ್ಯ ಹೋರಾಟ) ಧುಮಿಕಿದರು .1930, 1932, 1934ರಲ್ಲಿ ಒಟ್ಟು ಐದು_ವರ್ಷ ಜೈಲಿನ ಕಂಬಿ ಹಿಂದೆ ಕಾಲ ಕಳೆಯಬೇಕಾಯಿತು. ಕಾರಣ ಬ್ರಿಟಿಷರ ವಿರುದ್ದದ ಗೇರಿಲ್ಲಾ ಹೋರಾಟಗಳನ್ನು ನಡೆಸಿದ್ದಕ್ಕಾಗಿ.
ಮುಂದೆ 1943 ರಿಂದ 45 ರವರೆಗೆ ಸ್ಥಾನಬದ್ದತೆ.ಬ್ರಿಟಿಷರ ವಿರುದ್ಧದ ಹೋರಾಟಕ್ಕೆ ಆಯುಧಗಳು ಅವಶ್ಯವಾದಾಗ ನೇಗಿನಾಳದ ಮನೆಯೂಂದರಿಂದ ಪಡೆದುಕೂಂಡರು.
ಬಾಗೇವಾಡಿ ಬೆಳಗಾವಿಯ ಮಧ್ಯೆ ಹನ್ನೂಂದು ಮೈಲ್ ವರೆಗೆ ತಂತಿ ಕಂಬ, ವಿದ್ಯುತ್ಕಂಬ, ಟೆಲಿಫೋನ್ ಕಂಬ ಕತ್ತರಿಸಿದರು..ಮುಂದೆ ಸಂಪಗಾವಿಯಲ್ಲಿ ಪೋಸ್ಟ ಡಬ್ಬಿಗಳನ್ನು ಎತ್ತಿ ಭಾವಿಗೆ ಹಾಕಿದರು.ನಂತರ ಬೈಲಹೂಂಗಲ ಮತ್ತು ಸಂಪಗಾವಿ ಮಧ್ಯೆ ಇರುವ ಬ್ರೀಡ್ಜವೂಂದನ್ನು ಒಡೆದು ನಾಶಗೂಳಿಸಿದರು.
ನಂತರ ಇಡಿ ಕರ್ನಾಟಕದಲ್ಲಿ ಬ್ರೀಟಿಷರ ಅಂಚೆ ವಾಹನ ತಡೆದು ಟಪಾಲು ಮೊದಲು ಲೂಟಿ ಮಾಡಿದ್ದು ವಾಲಿ ಚನ್ನಪ್ಪನವರ ನೇತ್ರತ್ವದಲ್ಲಿ. ಗಾಡಿಯ ಡ್ರೈವರ ಕೈಮುಗಿದು ಪ್ರಾಣ ಉಳಿಸಿ ಎಂದು ಅಂಗಲಾಚಿದ..ಕೇವಲ ಟಪಾಲು ಲೂಟಿ ಮಾಡಿದರೇ ಹೋರತು ವಾಹನದಲ್ಲಿರುವವರಿಗೆ ಯಾರಿಗೂ ತೊಂದರೆ ನೀಡಲಿಲ್ಲ..ಇದು ವಾಲಿಯವರ ಹೋರಾಟದ ನೈತಿಕ ಮಾರ್ಗ ಮಾತು ಮಾನವೀಯತೆಯನ್ನು ತೋರಿಸುವುದು..
ಸವದತ್ತಿ ತಾಲೂಕಿನ ಹಲಕಿ ಕ್ರಾಸ್ ಬಂಗಲೆಯನ್ನು ಸುಟ್ಟು ಹಾಕಲು ರಾತ್ರಿ 12ಗಂಟೆಗೆ ಹೊರಟರು. ವಿಪರೀತ ಕತ್ತಲು. ಬಂಗಲೇ ಸಮೀಪ ಚೆನ್ನಪ್ಪನವರುನವರು ತೆರಳಿ ಬಂಗಲೆಗೆ ಟಾರ್ಚ ಬಿಟ್ಟು ನೋಡಿದರೆ ಒಳಗಡೆ ಹದಿನೆಂಟು ಜನ ಪೋಲಿಸ್ ಸಿಬ್ಬಂದಿ ನಿದ್ರಿಸುತ್ತಿದ್ದರು..ಅದರಲ್ಲಿನ ಫೌಜದಾರ ಯಾರದು ಎಂದು ಪ್ರಶ್ನಿಸಿದ ? ಆಗ ಚೆನ್ನಪ್ಪನವರು ಇಲ್ಲಿ ಚಳುವಳಿಗಾರರು ಬಂದಿದ್ದಾರೆ ನೀವೆಲ್ಲ ತಯಾರಿರಿ ಎಂದು ಹಿಂದಿಯಲ್ಲಿ ದರ್ಪದ ಧ್ವನಿಯಲ್ಲಿ ನುಡಿದರು.ಆಗ ಫೌಜದಾರ ಅಚ್ಚಾ ಸಾಬ್ ಎಂದು ಸಲಾಮ ಹೋಡೆದ. ಇದು ವಾಲಿ ಚನ್ನಪ್ಪನವರ ಗೆರಿಲ್ಲಾ ತಂತ್ರಗಾರಿಕೆ.
ನಂತರ ಅಲ್ಲಿಂದ ಮುರಗೋಡಕ್ಕೆ ತಲುಪಿದರು.1942ರ ಡಿಸೆಂಬರ್ ನಲ್ಲಿ ಖಾನಾಪೂರ ತಾಲೂಕಿನ ತೊಲಗಿ ತೆರಿಗೆ ಸಂಗ್ರಹ ಕೇಂದ್ರವಾಗಿತ್ತು..ಅಲ್ಲಿ 27ಹಳ್ಳಿಗಳ ತೆರಿಗೆ ವಸೂಲಿಯಾಗುತ್ತಿತ್ತು. ಪ್ರತಿದಿನ ಸಂಗ್ರಹಿಸಿದ ತೆರಿಗೆ ಒಯ್ಯಲು ಮಿಲಿಟರಿ ವಾಹನ ಬರುತ್ತಿತ್ತು 1943 ಜನೆವರಿಯಲ್ಲಿ ಸಾದಾ ರೈತರ ವೇಷದಲ್ಲಿ ತೆರಳಿ ಕೈಬಾಂಬ ಎಸೆದು ಅಲ್ಲಿದ್ದ ಪೋಲೀಸರ ಬಂದೂಕು ಕಿತ್ತಕೂಂಡು ಮೂರುಸಾವಿರ ತೆರಿಗೆ ಹಣ ಕೂಳ್ಳೆ ಹೊಡೆದು ಅದನ್ನು ತಮ್ಮ ಚಳುವಳಿಗೆ ವಿನಿಯೋಗಿಸಿದರು.
1943 ಫೆಬ್ರುವರಿಯಲ್ಲಿ ಸುಳೆಬಾವಿಯ ರೇಲ್ವೆ ಸ್ಟೇಶನ ಸುಟ್ಟರು ಈ ಸಮಯಕ್ಕೆ ವಾಲಿ ಚನ್ನಪ್ಪನವರು ರಾಷ್ಟ್ರಮಟ್ಟದ ನಾಯಕರಾಗಿದ್ದರು.
ಇದು ಮಡಿವಂತರ ಕಣ್ಣು ಕುಕ್ಕಿತು..1943 ರ ಪೆಬ್ರವರಿಯಲ್ಲಿ ಕೊಲ್ಹಾಪುರದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಸಭೆ ಸೆರೀತು.ಇದಕ್ಕೆ ವಾಲಿ ಚನ್ನಪ್ಪನವರು ಭಾಗವಹಿಸಿದ್ದರು ..ಇಲ್ಲಿ ಉದ್ದೇಶಪೂರ್ವಕವಾಗಿ ಚಳುವಳಿಗೆ ಕೂಡಿಸಿದ ಹಣದ ಲೆಕ್ಕ ಕೂಡಬೆಕೆಂದು ಅವಮಾನ ಮಾಡಿದರು..ಮರಳಿ ವಾಲಿ ಚನ್ನಪ್ಪನವರು ಗುಡುಗಿದಾಗ ಕೆಲವರು ಸುಮ್ಮನಾದರು . ಮುಂದೆ ಕೆಲವರು ವಾಲಿ ಚನ್ನಪ್ಪನವರನ್ನು ಸಮಾಧಾನ ಮಾಡಿದರು. ಸಭೆ ಕೊನೆಗೆ ವಾಲಿ ಚನ್ನಪ್ಪನವರೇ ಅಗಸ್ಟ ಕ್ರಾಂತಿಯ ಪರಮೋಚ್ಚನಾಯಕ ಎಂಬ ತೀರ್ಮಾನಕ್ಕೆ ಬಂದಿತು.
ವಾಲಿ ಚನ್ನಪ್ಪನವರಿಂದಾದ ಕೆಲಸಗಳು ನಮ್ಮಿಂದ ಆಗುತ್ತಿಲ್ಲವಲ್ಲಾ ಎಂಬ ಹೂಟ್ಟೆ ಕಿಚ್ಚು ಕೆಲವರಿಗೆ ತೀವ್ರ ವಾಗಿತ್ತು. ಕೊಲ್ಹಾಪುರ ಸಭೆ ಮೇಲೆ ಪೋಲಿಸ ದಾಳಿ.ಅಲ್ಲಿಂದ ತಪ್ಪಿಸಿಕೊಂಡು ರೇಲ್ವೆ ಟಿಕೇಟ್ ಇಲ್ಲದೆ ಬೆಳಗಾವಿ ಸೇರಿದರು.ಅಲ್ಲಿಂದ ಸಂಪಗಾವಿ ಸೇರಿದರು..ಪೋಲಿಸ್ ಇನ್ಸ್ಪೆಕ್ಟರ್ ಮನೆ ಕಾಯಿತ್ತಿದ್ದರು. ಆದರೆ ವಾಲಿಯವರನ್ನು ಬಂಧಿಸಲಿಲ್ಲ .ಪೋಲಿಸ್ ಅಧಿಕಾರಿ ನಯವಾಗಿ ವಾಲಿಯವರಲ್ಲಿ ವಿನಂತಿಸಿ ನಿಮ್ಮ ಹೋರಾಟ ನಿಲ್ಲಿಸಿ ಎಂದು ಅಂಗಲಾಚಿದ .ಕಾರಣ ವಾಲಿಯವರನ್ನು ಬಂಧಿಸಿದರೆ ಇಡಿ ಸಂಪಗಾವಿ ದಂಗೆ ಎಳುವುದು ಎಂಬ ಅನುಮಾನ ಸರಕಾರಕ್ಕೆ ಗೊತ್ತಿತ್ತು .
ಪೋಲಿಸ್ ನೀವು ಬಂಧನಕ್ಕೆ ಒಳಪಟ್ಟರೆ ನಿಮಗೆ ಐದು ಸಾವಿರ ಬಹುಮಾನ ಕೋಡಿಸುತ್ತೆನೆ ಎಂಬ ಭರವಸೆ ನೀಡಿದ .ಆಗ ವಾಲಿಯವರು ನಾನು ಮತ್ತು ನನ್ನ ಮನೆಯವರು ಉಪವಾಸ ಬಿದ್ದರೂ ಕ್ರಾಂತಿಗೆ ಮೋಸ ಮಾಡುವುದಿಲ್ಲ ಎಂದರು. ಅಧಿಕಾರಿ ನಿರಾಶೆಯಿಂದ ಮರಳಿದ.
ನಲವತ್ತೆರಡರ ಚಳುವಳಿಗಿಂತ ಮೊದಲಿನ ಚಳುವಳಿಗಳು ಅಷ್ಟೊಂದು ಉಗ್ರ ಸ್ವರೂಪ ಪಡೆದವುಗಳಾಗಿರಲಿಲ್ಲ. ಮಾಡು ಇಲ್ಲವೆ ಮಡಿ ಚಳುವಳಿಯ ಹಾಗೂ ಆ ನಂತರದ ಹೋರಾಟಗಾರರಿಗೆ ಧೈರ್ಯ, ಶೌರ್ಯ, ಸಾಹಸ, ಕಿಚ್ಚು-ರೊಚ್ಚು, ಸಮರ್ಪಣಾಭಾವ ಅನಿವಾರ್ಯವಾಗಿದ್ದವು. ಗೆರಿಲ್ಲಾ ಯುದ್ಧ, ಬುಡಮೇಲು ಕೃತ್ಯಗಳಿಗೆ ಹಲವಾರು ಜನ ಹೆಸರುವಾಸಿಯಾಗಿದ್ದರು.
ಇಂಥ ಹೋರಾಟಗಳಲ್ಲಿಯೇ ಮಹಾದೇವ ಮೈಲಾರ, ತಿಮ್ಮನಗೌಡ ಮೆಣಸಿನಹಾಳ, ಸಾತಪ್ಪ ಟೋಪಣ್ಣವರ, ಶಂಕರೆಪ್ಪ ಮುಂತಾದವರು ಹುತಾತ್ಮರಾದರು. ಇಂಥವರಲ್ಲಿದ್ದೇ ಬ್ರಿಟಿಷರಿಗೆ ಚಳ್ಳೆ ಹಣ್ಣು ತಿನ್ನಿಸಿದ ವ್ಯಕ್ತಿ ಚೆನ್ನಪ್ಪ ವಾಲಿಯವರು. ಹೀಗಾಗಿ ಇವರನ್ನು ಜನ ಸಂಗೊಳ್ಳಿ ರಾಯಣ್ಣನ ಅವತಾರ, ಆಧುನಿಕ ರಾಯಣ್ಣ ಎಂದೇ ಗುರ್ತಿಸುತ್ತಿದ್ದರು. ಸ್ವಾತಂತ್ರ್ಯಕ್ಕಾಗಿ ನಡೆದ ಪ್ರತಿ ಚಳುವಳಿಯಲ್ಲೂ ಇವರು ಇದ್ದವರೇ.
ಸರಕಾರ ಇವರ ಹೋರಾಟ ಹತ್ತಿಕ್ಕಲು ತೀವ್ರವಾದ ಯತ್ನಕ್ಕೆ ನಿಂತಿತು .1943 ಏಪ್ರಿಲ್ ತಿಂಗಳಿನಲ್ಲಿ ಚನ್ನಪ್ಪ ವಾಲಿಯವರನ್ನು ಬಂಧಿಸಲು ಎಂಟನೂರು ಜನ ಪೋಲಿಸರು ಸಂಪಗಾವಿಗೆ ಬಂದರು.ವಾಲಿಯವರು ಸಿಗದೇ ಪರಾರಿಯಾದರು ಆಗ ಪೊಲೀಸ್ ಅಧಿಕಾರಿ ಜನ ಸಾಮಾನ್ಯರಿಗೆ ತೊಂದರೆ ನೀಡಿ ಚನ್ನಪ್ಪ ವಾಲಿಯವರ ಅಪ್ತರೆನಿಸಿದ ಮೂವತ್ತೆರಡು ಜನರನ್ನು ಹಿಡಿದುಕೂಂಡು ಹೋದರು. ಆಗ ವಾಲಿ ಚನ್ನಪ್ಪನವರು 1943ರಲ್ಲಿ ಭೂಗತರಾಗಿ ಕ್ರಾಂತಿಯನ್ನು ಮುಂದುವರೆಸಿಕೊಂಡು ಹೋಗಬೇಕೆಂಬ ಹಟದಿಂದ ಬೆಂಗಳೂರು ಸೇರಿದರು.
ಬೆಂಗಳೂರನಲ್ಲಿ ಡಾ!!ಚಂದುಕರ ಅವರ ಮನೆಯಲ್ಲಿ ಗುಪ್ತವಾಗಿ ಉಳಿದರು..ಇದೇ ಮನೆಯಲ್ಲಿ ಕೆಲ ದಿನ ಮೈಲಾರ ಮಹಾದೇವಪ್ಪನವರು ಉಳಿದ್ದಿದ್ದರು.ವಾಲಿಯವರಿಗೆ ಚಂದುಕರ ಮನೆಯ ವಿಳಾಸಕ್ಕೆ ಮನಿ ಆರ್ಡರ ಬಂತು.
ಆಗ ಸಂಶಯಗೂಂಡ ಪೋಲಿಸರು ಹಿರಿಯ ಪೊಲೀಸ್ ಅಧಿಕಾರಿ ನೇತ್ರತ್ವದಲ್ಲಿ ವಾಲಿ ಚನ್ನಪ್ಪನವರನ್ನು ಬಂಧಿಸಿ ಬೆಂಗಳೂರಿನ ಸೇಂಟ್ರಲ್ ಜೈಲಿನಲ್ಲಿ ಇಟ್ಟರು..ಆಗ ಎಸ್.ನಿಜಲಿಂಗಪ್ಪನವರ ಪರಿಚಯವಾಯಿತು. ನಂತರ ಬೆಳಗಾವಿಯ ಹಿಂಡಲಗ ಜೈಲಿಗೆ ವಾಲಿಯವರನ್ನು ಸಾಗಿಸಲಾಯಿತು. ಹಿಂಡಲಗಾದಲ್ಲಿ ಹದಿನಾರು ತಿಂಗಳ ಜೈಲು ವಾಸದ ನಂತರ1945 ನವೆಂಬರ್ ಹದಿನಾಲ್ಕರಂದು ವಾಲಿಯವರ ಬಿಡುಗಡೆಯಾಯಿತು.
ಹಿಂಡಲಗಾದಿಂದ ಬಿಡುಗಡೆಯಾದಗ ಅವರನ್ನು ವಿವಿಧ ಸ್ಥಳಗಳಲ್ಲಿ ಬಾರಿ ಮೆರವಣಿಗೆ ಮೂಲಕ ಸನ್ಮಾನಿಸಲಾಯಿತು. ಅವರಿಗೆ ದೊರೆತ ಅದ್ದೂರಿ ಸನ್ಮಾನ ಮೆರವಣಿಗೆ ಕರ್ನಾಟಕದಲ್ಲಿ ಬೇರಾವ ನಾಯಕನಿಗೆ ಸಿಕ್ಕಿಲ್ಲ ಎಂದರೆ ತಪ್ಪಾಗಲಾರದು .ಸ್ವಾತಂತ್ರ್ಯ ಹೋರಾಟಗಾರರ ಕುರಿತು ಬೆಳಗಾವಿಯ ಕೆಲ ಸಂಕುಚಿತ ಮನಸ್ಸಿನ ನಾಯಕರು ವಾಲಿಯವರ ಪಾತ್ರವನ್ನು ಉಲ್ಲೇಖಿಸದೇ ಬರೆದು ಅಪಹಾಸ್ಯಕ್ಕೆ ಇಡಾದರು.
ಸ್ವಾತಂತ್ರ್ಯ ನಂತರ ವಾಲಿಯವರು ಮತ್ತು ಮುಂತಾದ ನಾಯಕರು ಅಖಂಡ ಕರ್ನಾಟಕ ರಾಜ್ಯ ನಿರ್ಮಾಣ ಪರಿಷತ್ತು ಸ್ಥಾಪಿಸಿ ಕರ್ನಾಟಕದ ಏಕೀಕರಣದಲ್ಲಿ ನಿರ್ಣಾಯಕ ಪಾತ್ರವಹಿಸಿದರು ಚೆನ್ನಪ್ಪ ವಾಲಿಯವರು.
ಭಾರತಕ್ಕೆ ಸ್ವಾತಂತ್ರ್ಯ ಬಂದರೂ ಗೋವಾ ವಿದೇಶಿಯರ ನಿಯಂತ್ರಣದಲ್ಲಿ ಇತ್ತು. ಗೋವಾ ವಿಮೋಚನೆ ಕುರಿತು ಕನ್ನಡಿಗರು ನಿರ್ಲಕ್ಷ್ಯ ವಹಿಸಿದಾಗ ಉತ್ತರ ಕರ್ನಾಟಕ ಜನರ ತಂಡ ಕಟ್ಟಿಕೂಂಡು ಗೋವಾದ ಕಾನಕೋನ ನಗರಕ್ಕೆ ಬಂದು ಅಲ್ಲಿ ಸರಕಾರಿ ಕಚೇರಿಯ ಮೇಲೆ ರಾಷ್ಟ್ರಧ್ವಜ ಹಾರಿಸಿದರು. ಗೋವಾ ಪೋಲಿಸ್ ಇವರನ್ನು ಗೌರವದಿಂದ ಕರ್ನಾಟಕದ ಗಡಿತಲುಪಿಸಿ ಭಾವಚಿತ್ರ ತೆಗೆಸಿಕೂಂಡು ಬಿಳ್ಕೂಟ್ಟರು.
ಪಣಜಿ, ಮಡಗಾವದಲ್ಲಿ ಜನ ವಾಲಿ ಚನ್ನಪ್ಪನವರನ್ನು ಬರಮಾಡಿಕೂಂಡರು..
ಸ್ವಾತಂತ್ರ್ಯ ನಂತರ ರೈತ ಸಂಘ ಸ್ಥಾಪಿಸಿದರು..ಇಷ್ಟೆಲ್ಲಾ ಹೋರಾಟ ಮಾಡಿದರೂ ಯಾವ ಅಧಿಕಾರಕ್ಕೆ ಆಶೆ ಪಡದ ವಾಲಿಯವರನ್ನು ಎಸ್. ನಿಜಲಿಂಗಪ್ಪನವರು ಬೆಳಗಾವಿಗೆ ಬಂದಾಗ ಕಿತ್ತೂರ ವಿಧಾನಸಭಾ ಕ್ಷೇತ್ರದ ಹುರಿಯಾಳಾಗಿ ಮಾಡಿದರು..ಆಗ ವಾಲಿಯವರ ಹತ್ತಿರ ಹಣವಿರಲಿಲ್ಲ.ಚುನಾವಣೆ ಬೇಡ ಎಂದು ಪರಿ ಪರಿಯಾಗಿ ಕೇಳಿಕೊಂಡರು . ಮಾನ್ಯ ಶ್ರೀ ನಿಜಲಿಂಗಪ್ಪನವರು ಐದುಸಾವಿರ ಹಣ ನೀಡಿದರು. ಶ್ರೀ ಹಳ್ಳಿಕೇರಿ ಗುದ್ಲೇಪ್ಪನವರು ಚುನಾವಣಾ ಖರ್ಚಿಗೆ ಒಂದು ಸಾವಿರ ನೀಡಿದರು.
ಚುನಾವಣೆ ಮುಗಿದ ನಂತರ ಉಳಿದ ಹದಿನಾಲ್ಕು ನೂರು ರೂಪಾಯಿಗಳನ್ನು ಸಂಪಗಾವಿಯ ಪ್ರೌಢಶಾಲೆ ನೀಡಿ ಉದಾರತೆ ಮೆರೆದರು.
ಇಂತಹ ದಿಟ್ಟ ಧೀಮಂತ ಹೋರಾಟಗಾರ ನಾಡು ನುಡಿ ದೇಶ ಭಕ್ತಿ ತನ್ನ ಉಸಿರಾಗಿಸಿಕೊಂಡವರು .
ಲಿಂಗೈಕ್ಯ ಚನ್ನಪ್ಪ ವಾಲಿಯವರ ಇವರ ಜೀವನ ಚರಿತ್ರೆ ಮುಂದಿನ ಯುವ ಪೀಳಿಗೆಗೆ ದಾರಿದೀಪವಾಗಲಿ .
-ಡಾ ಶಶಿಕಾಂತ ಪಟ್ಟಣ ರಾಮದುರ್ಗ -9552002338