ಪೂಜ್ಯ ಶ್ರೀ ಶ್ರೀ ಶ್ರೀ ಜಯ ಬಸವ ಮೃತ್ಯುಂಜಯ ಮಹಾಸ್ವಾಮಿಗಳವರಲ್ಲಿ ಬಹಿರಂಗ ಪ್ರಾರ್ಥನೆ
ಪರಮ ಪೂಜ್ಯರಿಗೆ ಶರಣು ಶರಣಾರ್ಥಿಗಳು
ಕಳೆದೆರಡು ದಶಕಗಳಿಂದ ಲಿಂಗಾಯತರನ್ನು ಬಸವ ತತ್ವ, ಹಾಗೂ ಬಸವ ಮಾರ್ಗದ ಕಡೆಗೆ ಕರೆದುಕೊಂಡು ಹೋಗುವ ಮಣಿಹದಲ್ಲಿ ನಿರತರಾಗಿ ಬಿಡುವಿಲ್ಲದ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ತಮ್ಮನ್ನು ನೋಡುವದೇ ನಮಗೊಂದು ಭಾಗ್ಯ ಮತ್ತು ಹೆಮ್ಮೆ.
ಮೀಸಲಾತಿಯಿಂದ ವಂಚಿತವಾದ ನಮ್ಮದೇ ಸಹೋದರ ಸಮಾಜದ ಜನಾಂಗಕ್ಕೆ ತಾವು ೨-ಎ ಮೀಸಲಾತಿಯನ್ನು ದೊರಕಿಸಿಕೊಡಲು ಕಳೆದ ಎರಡಮೂರು ವರ್ಷಗಳ ಹಿಂದೆ ತಮ್ಮ ನೇತೃತ್ವ ಹಾಗೂ ಸಾನಿಧ್ಯದಲ್ಲಿ ಕೂಡಲಸಂಗಮದಿಂದ ಬೆಂಗಳೂರಿನವರೆಗೆ (೭೧೨ ಕಿಲೋಮಿಟರ್) ಪಂಚಲಕ್ಷ ಪಾದಯಾತ್ರೆ ಮೂಲಕ ಸರ್ಕಾರದ ಮೇಲೆ ಒತ್ತಡ ಹೇರಲು ನಡೆಸಿದ ಹೋರಾಟ ಕರ್ನಾಟಕದ ಇತಿಹಾಸದಲ್ಲಿಯೇ ಒಂದು ದಾಖಲೆ.
ತಮ್ಮ ಪಾದಯಾತ್ರೆ ಕೊಪ್ಪಳಕ್ಕೆ ದಯಮಾಡಿಸಿದಾಗ ನಾವು ಸಹ ನಮ್ಮ ಸಮಾಜ ಬಂಧುಗಳ ಜೊತೆಗೆ ಬಂದು ತಮ್ಮನ್ನು ಗೌರವಿಸಿ ಆಶೀರ್ವಾದವನ್ನು ಪಡೆದುಕೊಂಡು ತಮ್ಮ ಜೊತೆಗೆ ಹೆಜ್ಜೆ ಹಾಕುತ್ತಾ ತಮ್ಮ ಹೋರಾಟ ಯಶಸ್ವಿಯಾಗಲಿ ಎಂದು ಹಾರೈಸಿ ಕೊಪ್ಪಳ ನಗರದಿಂದ ಬೀಳ್ಕೊಟ್ಟದ್ದು ನಮ್ಮೆಲ್ಲರ ನೆನಪಿನಂಗಳದಲ್ಲಿ ಅಚ್ಚಳಿಯದೆ ಉಳಿದಿದೆ.ಆದರೆ ಸುಮಾರು ೪-೫ ವರ್ಷಗಳಿಂದ ಎರಡು ಸಮಾಜಗಳ ನಡುವಿನ ಸೌಹಾರ್ದತೆಗೆ ಧಕ್ಕೆ ಉಂಟು ಮಾಡುತ್ತಿರುವ ಮಾತುಗಳು ಕೇಳಿ ಬರುತ್ತಿರುವುದು ಲಿಂಗಾಯತ ಧರ್ಮದ ಏಕತೆಗೆ ಧಕ್ಕೆ ತರುತ್ತಿದೆ. ಲಿಂಗಾಯತ ಧರ್ಮೀಯರ ಸೌಹಾರ್ದತೆ ಮತ್ತು ಏಕತೆಗೆ ಧಕ್ಕೆ ತರುವ ಈ ಕೆಳಗಿನ ಒಂದೆರಡು ಘಟನೆಗಳನ್ನು ತಮ್ಮ ಮುಂದೆ ಅರಿಕೆ ಮಾಡಿಕೊಳ್ಳುತ್ತಿದ್ದೇನೆ.
೧) ೨೦೧೮ ನವಂಬರ್ ೧೨ ಅಥವಾ ೧೩ ನೇ ದಿನಾಂಕ ಸರಿಯಾಗಿ ನನಗೆ ನೆನಪಿಲ್ಲ ಅಂದು ಯಲಬುರ್ಗಾ ತಾಲೂಕಿನ ಹಿರೇಒಂಕಲಕುಂಟಿ ಗ್ರಾಮದಲ್ಲಿ ತಮ್ಮ ಸಾನಿಧ್ಯದಲ್ಲಿ ನಡೆದ ಸಮಾವೇಶದಲ್ಲಿ ಪ್ರಮುಖ ಮಹಿಳಾ ರಾಜ್ಯ ಪದಾಧಿಕಾರಿಗಳೊಬ್ಬರು “ಕಿತ್ತೂರು ಸಂಸ್ಥಾನವನ್ನು ಹಾಳು ಮಾಡಿದವರು ಶೆಟ್ಟರು ಅವರನ್ನು ನಂಬಬಾರದು” ಎನ್ನುವ ಅರ್ಥದಲ್ಲಿ ಮಾತನಾಡಿದ್ದು ಯಾವ ಕಾರಣಕ್ಕೆ ಎನ್ನುವುದು ನನಗೆ ಇಲ್ಲಿಯವರೆಗೂ ಅರ್ಥವಾಗಿಲ್ಲ.ನಮ್ಮ ಸಮಾಜದ ಬಗ್ಗೆ ಇಷ್ಟೊಂದು ಅಸಹನೆ ಏಕೆ ? ಎನ್ನುವುದು ಅರ್ಥವಾಗುತ್ತಿಲ್ಲ
೨) ೨-ಎ ಮೀಸಲಾತಿ ಹೋರಾಟದ ಭಾಗವಾಗಿ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ತಾವು ಧರಣಿ ನಿರತರಾಗಿದ್ದ ಸಂದರ್ಭದಲ್ಲಿ ತಮ್ಮ ಕಣ್ಣೆದುರಿನಲ್ಲಿ ಪ್ರಮುಖ ಗೌರವಾನ್ವಿತ ಶಾಸಕರೊಬ್ಬರು ನಮ್ಮ ಸಮಾಜದ ಬಗ್ಗೆ, ನಾಯಕರ ಬಗ್ಗೆ ಹಾಗೂ ಎರಡು ಸಮಾಜಗಳ ನಡುವೆ ನಡೆಯುತ್ತಿರುವ ವೈವಾಹಿಕ ಸಂಬಂಧಗಳನ್ನು ಕುರಿತು ಅಪಹಾಸ್ಯ ಮಾಡುತ್ತಾ ಅವಮಾನವಾಗುವ ರೀತಿಯಲ್ಲಿ ಮಾತನಾಡಿದ್ದು ಯಾವ ಕಾರಣಕ್ಕೆ ಎನ್ನುವುದು ಇನ್ನೂವರೆಗೂ ಅರ್ಥವಾಗುತ್ತಿಲ್ಲ.
೩) ಕೆಲವು ದಿನಗಳ ಹಿಂದೆ ಹುಕ್ಕೇರಿಯಲ್ಲಿ ತಮ್ಮ ಸಾನಿಧ್ಯದಲ್ಲಿ ನಡೆದ ಸಮಾವೇಶದಲ್ಲಿ ಗೌರವಾನ್ವಿತ ಶಾಸಕರೊಬ್ಬರು ನಮ್ಮ ಸಮಾಜ ಹಾಗೂ ವೃತ್ತಿಯ ಬಗ್ಗೆ ಪರೋಕ್ಷವಾಗಿ ವ್ಯಂಗ್ಯ ಹಾಗೂ ಅವಮಾನಕರ ರೀತಿಯಲ್ಲಿ ಮಾತನಾಡಿದ ಕ್ಷಣಗಳನ್ನು ಇಡೀ ರಾಜ್ಯದ ಜನತೆಯೇ ಸಾಮಾಜಿಕ ಜಾಲತಾಣಗಳ ಮೂಲಕ ನೋಡಿದ್ದಾರೆ. ಕೆಲವರಿಗೆ ನಮ್ಮ ಸಮಾಜದ ಬಗ್ಗೆ ಏಕಿಷ್ಟು ಅಸಹನೆ ಅನ್ನುವುದು ಅರ್ಥವಾಗುತ್ತಿಲ್ಲ ಪೂಜ್ಯರೇ
೪) ನಮ್ಮ ಸಮಾಜದ ಜನತೆ ಮತ್ತು ನಮ್ಮ ಸಮಾಜದ ಸಂಘಟನೆ ೨-ಎ ಮೀಸಲಾತಿ ಆಂದೋಲನ ಯಶಸ್ವಿಯಾಗಲಿ ಎಂದು ಬಹಿರಂಗವಾಗಿ ಬೆಂಬಲ ಸೂಚಿಸಿದ್ದೇವೆ.ನನಗೆ ತಿಳಿದಂತೆ ನಮ್ಮ ಸಮಾಜದ ಯಾವೊಬ್ಬ ವ್ಯಕ್ತಿಯು ೨-ಎ ಮೀಸಲಾತಿ ಚಳುವಳಿಯನ್ನು ವಿರೋಧಿಸಿದ ಒಂದೇ ಒಂದು ಉದಾಹರಣೆಯು ಕಂಡುಬಂದಿಲ್ಲ.ಒಂದು ವೇಳೆ ವಿರೋಧಿಸಿರುವ ಘಟನೆಗಳು ಕಂಡುಬಂದಿದ್ದರೆ ನಮಗೂ ತಿಳಿಸಲಿ, ಆಗ ನಮ್ಮ ದೈವದವರ ಜೊತೆ ಕೂಡಿಕೊಂಡು ಹೋಗಿ ಅವರಿಗೆ ತಿಳಿ ಹೇಳುತ್ತೇವೆ ಸುಮ್ಮನೆ ‘ಗಾಳಿಯಲ್ಲಿ ಕಲ್ಲು ತೂರುವುದು, ಏಕೆಂದು ಅರ್ಥವಾಗುತ್ತಿಲ್ಲ.
೫) ಅಸಹನೆ ಭರಿತ ಮಾತುಗಳನ್ನಾಡುವ ಮುಖಂಡರಿಗೆ ನಮ್ಮ ಸಮಾಜದ ಯಾವುದೇ ವ್ಯಕ್ತಿ ವೈಯಕ್ತಿಕವಾಗಿ ಅಥವಾ ಅವರ ಸಮಾಜಕ್ಕೆ ಅನ್ಯಾಯ ಮಾಡಿದ್ದರೆ ಅವರ ಜೊತೆ ನೇರವಾಗಿ ಜಗಳ ಕಾಯಲಿ ನಮ್ಮದೇನು ಅಭ್ಯಂತರವಿಲ್ಲ. ಯಾರೋ ನಮಗೆ ಅನ್ಯಾಯ ಮಾಡಿದ್ದಾರೆಂದು ಭ್ರಮಿಸಿಕೊಂಡು ನಮ್ಮ ಸಮಾಜವನ್ನು ಹಂಗಿಸಿ ಅಪಮಾನಕರ ರೀತಿಯಲ್ಲಿ ಮಾತನಾಡುವದೇಕೆಂದು ಅರ್ಥವಾಗುತ್ತಿಲ್ಲ.
೬) ಗೌರವಾನ್ವಿತ ಕೆಲವು ಮುಖಂಡರು ನಮ್ಮ ಸಮಾಜದ ಬಗ್ಗೆ ಹಲ್ಲಿ ನುಂಗಿರುವುದು ಏಕೆ ? ಎನ್ನುವುದೇ ಅರ್ಥವಾಗುತ್ತಿಲ್ಲ.
೭) ಎರಡು ಸಮಾಜಗಳ ನಡುವೆ ನೂರಾರು ವರ್ಷಗಳಿಂದ ವೈವಾಹಿಕ ಸಂಬಂಧಗಳು ಬೆಳೆದು ಬಂದಿವೆ. ಆದರೆ ಈ ಮುಖಂಡರ ಮಾತಿನಿಂದ ಕುಟುಂಬಗಳಲ್ಲಿ ಗಂಡ-ಹೆಂಡತಿ, ತಂದೆ-ಮಕ್ಕಳು,ಅಣ್ಣ-ತಮ್ಮ, ಅಣ್ಣ-ತಂಗಿ, ಅಕ್ಕ-ತಂಗಿಯರ ನಡುವೆ ಪರಸ್ಪರ ಅಪನಂಬಿಕೆ, ಸಂಶಯ ಭಾವನೆ ಉಂಟಾಗಿ ಕೌಟುಂಬಿಕ ಸಾಮರಸ್ಯ ಹಾಳಾಗಿ ಕುಟುಂಬಗಳು ಒಡೆದು ಹೋಗುವ ದಿನಗಳು ಭವಿಷ್ಯದ ದಿನಗಳಲ್ಲಿ ಬಂದರೆ ಆಶ್ಚರ್ಯಪಡಬೇಕಾಗಿಲ್ಲ ಅನಿಸುತ್ತದೆ.
೮) ನಮ್ಮ ಮನೆಯವರ ತಂಗಿ ಸಂಸ್ಕಾರಕ್ಕೆ ಹೆಸರಾದ ಪಂಚಮಸಾಲಿ ಮನೆತನದ ಸೊಸೆಯಾಗಿದ್ದಾಳೆ,ಅವರ ಮಕ್ಕಳು ಸಾಮಾಜಿಕ ಜಾಲತಾಣಗಳಲ್ಲಿ ನಮ್ಮ ಸಮಾಜವನ್ನು ಕುರಿತು ಬಿತ್ತರಗೊಳ್ಳುತ್ತಿರುವ ಅಸಹನೆ ಬರಿತ ಮಾತುಗಳನ್ನು ನೋಡಿ,ಕೇಳಿ ದೊಡ್ಡಪ್ಪ ನೀವು ಇಷ್ಟು ಕೆಟ್ಟವರಾ ? ಎಂದು ಪ್ರಶ್ನೆ ಮಾಡುತ್ತಾರೆ ಅದಕ್ಕೆ ನಾನೇನು ಉತ್ತರ ಹೇಳಲಿ ಎನ್ನುವ ಸಂಘರ್ಷದಲ್ಲಿ ಬಿದ್ದಿದ್ದೇನೆ.ನಮ್ಮ ಮಕ್ಕಳು ಹಾಗೂ ನಮ್ಮ ಅಣ್ಣ ತಮ್ಮಂದಿರು ನಮ್ಮನ್ನು ಸಂಶಯದಿಂದ ಕಾಣುವ ಸಂದರ್ಭಗಳು ಸೃಷ್ಟಿಯಾಗುತ್ತಿರುವ ಈ ದಿನಗಳನ್ನು ನೋಡಿ ಅಸಹಾಯಕ ಭಾವನೆ ಉಂಟಾಗುತ್ತಿದೆ.
೯) ಬಹುಶಃ ತಾವು ಪ್ರತ್ಯಕ್ಷವಾಗಿ ಆಗಲಿ ಪರೋಕ್ಷವಾಗಿ ಆಗಲಿ ಅನ್ಯ ಸಮಾಜದವರನ್ನು ಅಪಮಾನಿಸುವ ರೀತಿಯಲ್ಲಿ ಮಾತನಾಡಬಾರದೆಂದು ಮುಖಂಡರಿಗೆ ಅಪ್ಪಣೆ ಮಾಡಿರಬಹುದು ಅದರಲ್ಲಿ ನಮಗೆ ಅನುಮಾನವಿಲ್ಲ.ಆದರೆ ಈ ಮುಖಂಡರು ತಮ್ಮ ಅಪ್ಪಣೆಯನ್ನು ಪಾಲಿಸಿದ್ದರೆ ಇಂದು ಬಣಜಿಗರು ಊರೂರುಗಳಲ್ಲಿ ಬೀದಿಗಿಳಿದು ಪ್ರತಿಭಟಿಸುವ ಸಂದರ್ಭ ಬರುತ್ತಿರಲಿಲ್ಲ ಹಾಗೂ ಸಾಮಾಜಿಕ ಸ್ವಾಸ್ಥ್ಯಕ್ಕೂ ಧಕ್ಕೆ ಬರುತ್ತಿರಲಿಲ್ಲ. ಕಾರಣ ಎಲ್ಲ ಸಮಾಜಗಳನ್ನು ಸಮಾನತೆಯಿಂದ ಕಾಣುವ ತಾವು ಗೌರವಾನ್ವಿತ ಮುಖಂಡರನ್ನು ಕೂಡಿಸಿಕೊಂಡು ಮಾತನಾಡಿ ತಿಳಿ ಹೇಳಿ ಸರಿಪಡಿಸಲು ಈಗಲೂ ಕಾಲ ಮಿಂಚಿಲ್ಲವೆಂದು ತಮ್ಮಲ್ಲಿ ನಿವೇದನೆ.
೧೦) ಇದೇ ರೀತಿ ಮುಂದಿನ ದಿನಗಳಲ್ಲಿ ಒಬ್ಬರ ಮೇಲೊಬ್ಬರು ಅಸಹನೆ ಮಾತುಗಳನ್ನು ಕಾರುತ್ತಾ ಹೋದರೆ,ಭವಿಷ್ಯದ ದಿನಗಳಲ್ಲಿ ಎರಡು ಸಮಾಜಗಳ ಅಣ್ಣ-ತಮ್ಮಂದಿರು ಭಸ್ಮಾಸುರರಾಗಿ ಒಬ್ಬರ ಮೇಲೊಬ್ಬರ ತಲೆಯ ಮೇಲೆ ಕೈ ಇಡುತ್ತ ನಾಶವಾಗುವುದರಲ್ಲಿ ಅನುಮಾನವಿಲ್ಲವೆನಿಸುತ್ತದೆ.
ಇಂತಹ ಇನ್ನೂ ಅನೇಕ ಪ್ರಶ್ನೆಗಳು ನನ್ನಲ್ಲೂ ಹಾಗೂ ನಮ್ಮ ಸಮಾಜದವರಲ್ಲಿ ಇವೆ.ಅವೆಲ್ಲವನ್ನು ತಮ್ಮಲ್ಲಿ ಅರಿಕೆ ಮಾಡಿಕೊಳ್ಳಲು ಇದು ಸಂದರ್ಭವಲ್ಲ.ಮತ್ತೊಂದು ಸಮಾಜದವರ ಮನಸ್ಸನ್ನು ನೋಯಿಸುವ ಮಾತುಗಳನ್ನು ಆಡಬಾರದೆಂದು ಹಾಗೂ ಸಮಾಜದಲ್ಲಿ ಅಸಹಿಷ್ಣುತೆ ಉಂಟಾಗಲು ಯಾವುದೇ ಮುಖಂಡರ ಮಾತುಗಳು ಕಾರಣವಾಗಬಾರದೆಂದು ಅವರಿಗೆ ತಿಳಿ ಹೇಳುತ್ತೀರೆಂದು ನಂಬಿದ್ದೇವೆ.
ಮೇಲಿನ ನನ್ನ ಪ್ರಶ್ನೆಗಳಿಗೆ ತಮ್ಮಿಂದ ಉತ್ತರವನ್ನು ಬಯಸುವ ಉದ್ದಟತನತನವನ್ನು ನಾನು ತೋರುವುದಿಲ್ಲ ಬದಲಾಗಿ ನನ್ನಲ್ಲಿ ಮೂಡಿರುವ ಆತಂಕವನ್ನು ತಮ್ಮ ಮುಂದೆ ಅರಿಕೆ ಮಾಡಿಕೊಳ್ಳುತ್ತಿದ್ದೇನೆ. ದಯವಿಟ್ಟು ತಾವು ಅನ್ಯತಾ ಭಾವಿಸಬಾರದೆಂದು ತಮ್ಮ ಪಾದಾರವಿಂದಗಳಲ್ಲಿ ಶಿರಸಾಷ್ಟಾಂಗ ನಮಸ್ಕಾರಗಳನ್ನು ಸಲ್ಲಿಸುತ್ತಾ ತಮ್ಮ ಆಶೀರ್ವಾದ ಸದಾ ನಮ್ಮ ಸಮಾಜದ ಮೇಲಿರಲಿ ಎಂದು ಪ್ರಾರ್ಥಿಸಿಕೊಳ್ಳುತ್ತೇನೆ.
ಸದಾ ತಮ್ಮ ಆಶೀರ್ವಾದ ಬೇಡುವ
–ಗವಿಸಿದ್ದಪ್ಪ ಕೊಪ್ಪಳ